
ಗುರು ಗಾಣಿಗೇರ
ಪ್ರಾದೇಶಿಕ ಗ್ರಾಮೀಣ ಬದುಕಿನ ಭಾಗವಾಗಿದ್ದುಕೊಂಡೆ ಅಲ್ಲಿ ನಡೆಯುವ ಸನ್ನಿವೇಶ ಹಾಗೂ ಸ್ಥಿತ್ಯಂತರಗಳ ಅಸ್ಮಿತೆಯನ್ನ ವಿವಿಧ ಮಜಲುಗಳಲ್ಲಿ ಕತೆಗಳ ಮೂಲಕ ಕಟ್ಟಿಕೊಡುವ ಸರಳ ದೃಷ್ಟಿಕೋನದಿಂದಾಗಿಯೇ ಕತೆಗಳು ಓದುಗರಿಗೆ ಆಪ್ತವೆನಿಸುತ್ತವೆ. ಕತೆಗಳು ಸ್ತ್ರೀಕೆಂದ್ರಿತವಾಗಿರುವುದರ ಜೊತೆಜೊತೆಗೆ ಸಮಾಜಮುಖಿಯಾದ ತಲ್ಲಣಗಳಿಗೆ ಕನ್ನಡಿಯಾಗಿ ನಿಲ್ಲುತ್ತವೆ. ಕತೆಗಳು ಸರಳವೆನಿಸಿದರೂ ಸಹ ಕತೆಗಳ ಆಶಯ ಸಂಪರ್ಣ ಸಂಯಮದ ಮೂಲಕ ಗುಪ್ತಗಾಮಿನಿಯಾಗಿ ಪ್ರವಹಿಸಿದೆ. ಹೆಣ್ಣನ್ನು ನಾವು ಸಹನಾಮಯಿ ಅಂತ ಕರೆಯುತ್ತೇವೆ. ಅದೇ ಕಾರಣಕ್ಕಾಗಿಯೆ ಇರಬೇಕು. ಕತೆಗರ್ತಿ ಅಮ್ಮ ಆಕ್ರೋಷದ ಬದಲಿಗೆ ಆಕೃತಿಗಳ ಮೂಲಕವೇ ಸಮಾಜಕ್ಕೆ ಸಂದೇಶಗಳನ್ನು ರವಾನಿಸಿದ್ದಾರೆ.
‘ಬೇಗೆ’ ಕತೆಯಲ್ಲಿ ಚಂದ್ರಣ್ಣ ಮಾಸ್ತರ ಮನೆಯ ಧಾರಾಳತನ, ಅಂತಃಕರಣ ಮತ್ತು ಸಿದ್ದಪ್ಪ ಸಾಹುಕಾರರ ಅಸ್ಪೃಶ್ಯತೆ, ಜಿಪುಣತನದ ಸ್ವಭಾವಗಳನ್ನು ದುಂಡವ್ವನ ಪಾತ್ರದ ಮೂಲಕ ಸಹಜವಾಗಿ ವ್ಯಕ್ತಪಡಿಸಿದ ರೀತಿ ಅನನ್ಯವಾಗಿದೆ. ʼಎಕ್ಕಲಗೆ ಜೋಗʼ ಕತೆಯಲ್ಲಿ ಹೆಣ್ಣು ಮಕ್ಕಳಿಗೆ ಮುತ್ತು ಕಟ್ಟುವ ಸಂಪ್ರದಾಯವನ್ನು, ಆ ಮೂಲಕ ಅನುಭವಿಸುವ ಸಂಕಟಗಳನ್ನು ಅಭಿವ್ಯಕ್ತಿಗೊಳಿಸುತ್ತಲೇ, ಭಯಾನಕ ರೋಗದ ಕುರಿತು ಎಚ್ಚರಿಕೆಯ ಸಂದೇಶವನ್ನು ಸಾರುವಲ್ಲಿ ಕತೆ ಸರ್ಥಕತೆ ಕಂಡಿದೆ. ಅನುಮಾನಗಳು ಸಂಸಾರಗಳನ್ನು ರ್ವನಾಶ ಮಾಡುತ್ತವೆ ಎನ್ನುವ ತೀಕ್ಷ್ಣತೆಯನ್ನು ʼಬಂಗಾರದಂತ ಸಂಸಾರ ಕತೆʼ ವ್ಯಕ್ತಪಡಿಸಿದೆ. ʼನಮ್ಮೂರ ಗೊಲ್ಲಾಳʼ ಕತೆಯಲ್ಲಿ ಜಾತ್ರೆಯ ದಿನ ತೇರಿನ ರಥಕ್ಕೆ ಸಿಲುಕಿ ಸತ್ತ ಗೊಲ್ಲಾಳನ ಸಾವನ್ನೂ ಸಹ, ನಂಬಿಕೆ, ಸಂಪ್ರದಾಯದ ಶಿಲುಬೆಗೆ ನೇತು ಹಾಕಿ ಮೇಲ್ರ್ಗದವರು ತೋರಿದ ಜಾಣ್ಮೆಗೆ ಗೊಲ್ಲಾಳಪ್ಪನ ಪೂಜೆ ಇಂದಿಗೂ ಪ್ರಶ್ನೆ ಮಾಡುವಂತಿದೆ.

ಕಥಾಸಂಕಲನದ ಶರ್ಷಿಕೆಯ ʼಭೂಮಿಯ ಋಣʼ ಕತೆಯಲ್ಲಿ ಮಧ್ಯಮ ರ್ಗದ ಕುಟುಂಬದ ತಾಕಲಾಟಗಳು, ಸೋಮಾರಿತನ ಒಂದಿಲ್ಲ ಒಂದು ದಿನ ಬದುಕಿಗೆ ಮುಳ್ಳಾಗಿ, ಹಳ್ಳಿಯನ್ನು ಬಿಟ್ಟು ಪಟ್ಟಣಕ್ಕೆ ದುಡಿಯಲು ಹೋಗಿ ಅನುಭವಿಸುವ ಯಾತನೆಗಳು ವ್ಯಕ್ತವಾಗುವುದರ ಜೊತೆಗೆ “ಮತ್ತೊಬ್ಬರ ಕೈಯಾಗ ಆಳಾಗುವುದಕ್ಕಿಂತ ನಮ್ಮ ಹೊಲದಾಗ ಮಾಲಿಕರಾಗಿ, ರೈತರಾಗಿ ಮೈಮುರಿದು ದುಡದ್ರ ಭೂಮಿತಾಯಿ ಅದಕ್ಕ ಪ್ರತಿಫಲ ಕೊಟ್ಟೇ ಕೊಡತಾಳ” ಎನ್ನುವ ಆಶಯದೊಂದಿಗೆ ತಮ್ಮ ಜಮೀನಿನಲ್ಲಿಯೇ ದುಡಿದು ಬದುಕನ್ನು ಕಟ್ಟಿಕೊಳ್ಳುವ ಮೂಲಕ ಭೂತಾಯಿ ದುಡಿದವರನ್ನು ಯಾವತ್ತು ಕೈ ಬಿಡುವುದಿಲ್ಲ ಎನ್ನುವ ಸಂದೇಶವಿದೆ. ʼಆಟ ಬೋಟ ಸಾಕ? ಬೇಕ?ʼ ಎಂಬ ಕತೆಯಲ್ಲಿ ಲಲಿತಾ ಹಾಗೂ ಯಶವಂತ ದಂಪತಿಗಳು ತಮಗೆ ಮಕ್ಕಳಿಲ್ಲವೆಂದು ದೇವರಿಗೆ ಹರಕೆ ಹೊರುವುದು, ಸಮಾಜದ ಚುಚ್ಚು ಮಾತುಗಳಿಗೆ ಬಲಿಯಾಗಿ ಸಂಕಟಪಡುತ್ತಲೇ, ಬದುಕಿನ ಲೌಕಿಕಕ್ಕೆ ಬೆನ್ನಾಗಿ ಕೊನೆಗೆ ಲಲಿತಾ ಆಧ್ಯಾತ್ಮಿಕ ಜೀವನಕ್ಕೆ ಶರಣಾಗಿ, ವಾಸ್ತವಕ್ಕೆ ತಟಸ್ಥವಾಗುವ ಕ್ರಿಯೆ ಅಷ್ಟು ಸುಲಭದ್ದಲ್ಲ. ʼಅಕ್ಕನ ಮಗುʼ ಕತೆಯಲ್ಲಿ ದ್ಯಾಮವ್ವ ಮಗುವಿಗೆ ಜನ್ಮ ನೀಡುವ ಸಮಯದಲ್ಲಿ ಅಸುನೀಗಿ ಪರಮೇಶಿಯನ್ನು ಒಂಟಿಯಾದಾಗ ಹಾಗೂ ಮಗು ಅನಾಥವಾದ ಸಮಯದಲ್ಲಿ ಊರ ಹಿರಿಯರು ದ್ಯಾಮವ್ವನ ತಂಗಿ ವೈಶಾಲಿಯನ್ನೆ ಪರಮೇಶಿಗೆ ಮರುಮದುವೆ ಮಾಡುವುದರೊಂದಿಗೆ ಕತೆಗೆ ಪರ್ಣವಿರಾಮ ಆಗಿದ್ದರೂ ಸಹ ಸ್ವಾಭಾವಿಕವಾಗಿ ಅಂತಃಕರಣದ ಓದುಗರ ಮನಸ್ಸಿನಲ್ಲಿ ದ್ಯಾಮವ್ವನ ಮಗುವನ್ನು ವೈಶಾಲಿ ಮಲತಾಯಿಯಾಗಿ ಹೇಗೆ ನೋಡಿಕೊಳ್ಳುತ್ತಾಳೆ ಎಂಬ ಚಿಂತೆ ಕಾಡದೇ ಇರಲಾರದು. ʼತಿರುವುʼ ಕತೆಯಲ್ಲಿ ಒಲ್ಲದ ಮನಸ್ಸಿನಿಂದ ಮನೆಯವರ ಒತ್ತಾಯಕ್ಕೆ ವಿಜಯ್ನನ್ನು ಮದುವೆಯಾದ ಸುಮಾ. ನಂತರ ಗಂಡನಿಂದ ಬೇರೆಯಾಗಿ ತಾನು ಮೊದಲು ಪ್ರೀತಿಸಿದ ಭಾಷಾನನ್ನು ಜೊತೆಗೂಡಿದ್ದು, ಕತೆ ಹೆಸರಿನಷ್ಟೇ ವೇಗವಾಗಿ ಸಾಕಷ್ಟು ತಿರುವು ಪಡೆದುಕೊಂಡರು ಸಹ ಸಂಕಟದ ಜೊತೆಗೆ ಸುಖಾಂತ್ಯ ಕಂಡಿರುವುದು ಖುಷಿ ತಂದಿದೆ.

ʼಏಳು ಮಕ್ಕಳ ತಾಯಿʼ ಕತೆ ವಿಶೇಷವಾಗಿ ಸಾಕಷ್ಟು ಕಾರಣಗಳಿಗಾಗಿ ಬಹು ಸಮಯದವರೆಗೆ ಕಾಡಬಲ್ಲದು. ಮಾಳವ್ವ ಹಾಗೂ ಬೀರಪ್ಪ ದಂಪತಿಗೆ ಜನಿಸಿದ ಮಗಳು ತಾಯವ್ವನ ಧರ್ಯ, ಬದಲಾದ ದೈಹಿಕ ಸ್ಥಿತ್ಯಂತರ, ಬದುಕನ್ನು ಸವಾಲಾಗಿ ಸ್ವೀಕರಿಸುವ ಹಾಗೂ ಸನ್ನಿವೇಶಗಳಿಗೆ ಪ್ರತಿರೋಧ ಒಡ್ಡುವ ಮತ್ತು ಶಿಕ್ಷಣಕ್ಕಾಗಿ ತೋರುವ ಪರೋಪಕಾರ ಗುಣಗಳಿಂದ ತಾಯವ್ವ ನಮಗೆ ನಾಯಕಿಯಾಗಿ ಕಾಣುತ್ತಾಳೆ. ಇಡೀ ಕಥಾಸಂಕಲನಕ್ಕೆ ಈ ʼಏಳು ಮಕ್ಕಳ ತಾಯಿʼ ಕತೆ ಮುಟುಕ ಮಣಿಯಂತಿದೆ.
ಚಮತ್ಕಾರಿಕ ಅಂಶಗಳಿಂದ ಓದುಗರನ್ನು ಬೆರಗುಗೊಳಿಸಬೇಕು ಎನ್ನುವ ಆಲೋಚನೆಗೆ ಜೋತು ಬೀಳದೆ ಅತ್ಯಂತ ಸರಳವಾಗಿ ಕತೆಗಳನ್ನು ಕಟ್ಟಿಕೊಟ್ಟಿದ್ದಾರೆ. ಬಹುತೇಕ ಕತೆಗಳನ್ನು ವಿಸ್ತರಿಸುವ ವಿಪುಲ ಅವಕಾಶಗಳು ಇದ್ದಾಗಲೂ ಸಹ ಕತೆಗರ್ತಿ ಅನಾವಶ್ಯಕವಾಗಿ ಯಾವುದೇ ಅಂಶಗಳನ್ನು ಕತೆಗೆ ಹೊರೆಯಾಗಿಸದೆ ಕತೆಯ ಮೂಲ ಆಶಯಗಳಿಗೆ ಅನುಗುಣವಾಗಿ ಬದ್ಧತೆ ತೋರಿರುವುದು ಅಮ್ಮನ ಗುಣವೇ ಆಗಿದೆ. ಮೊದಲ ಕಥಾಸಂಕಲನದಲ್ಲಿಯೇ ಸಾಕಷ್ಟು ಭರವಸೆಗಳನ್ನು ಮೂಡಿಸಿದ ಕತೆಗರ್ತಿ ಅಮ್ಮ ಶೋಭಾ ಗುನ್ನಾಪೂರ ಅವರಿಗೆ ಈ ಮೂಲಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.






0 Comments