ಗುತ್ತಿ-ತಿಮ್ಮಿ, ಆಹಾ ಎಂತಹ ಜೋಡಿ! 

ಗೀತಾ ಹೆಗ್ಡೆ ಕಲ್ಮನೆ 

“ಇಲ್ಲಿ ಯಾರು ಮುಖ್ಯರಲ್ಲ, ಇಲ್ಲಿ ಯಾರೂ ಅಮುಖ್ಯರಲ್ಲ…..” ಈ ಹಾಡು ಈಗೊಂದು ನಾಲ್ಕಾರು ದಿನಗಳಿಂದ ಗುನುಗನಿಸುತ್ತಿದ್ದೇನೆ.  ತಲೆಯಲ್ಲಿ ಚಕ್ರ ತಿರುಗಿದಂತೆ ಆ ದೃಶ್ಯಾವಳಿಗಳು ಹಾದು ಹೋಗುತ್ತಲೇ ಇವೆ.

ಹೌದು.  ರಾಷ್ಟ್ರಕವಿ ಕುವೆಂಪುರವರು 1967ರಲ್ಲಿ ಬರೆದ ಬೃಹತ್ ಕಾದಂಬರಿ “ಮಲೆಗಳಲ್ಲಿ ಮದುಮಗಳು” ಶ್ರೀ ಬಸವಲಿಂಗಯ್ಯನವರ ನಿರ್ದೇಶನದಲ್ಲಿ ನಾಟಕ ರೂಪ ತಳೆದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರ ಸಹಯೋಗದಲ್ಲಿ ಜನವರಿ 2020ರಿಂದ ಬೆಂಗಳೂರಿನ ಮಲ್ಲತ್ತಳ್ಳಿ ಕಲಾಗ್ರಾಮದಲ್ಲಿ ನಡೆಯುತ್ತಿದೆ. ನೂರಾರು ನುರಿತ ಕಲಾವಿದರನ್ನೊಳಗೊಂಡ ಅದ್ಭುತವಾದ ನಾಟಕವಿದು.

ಈ ನಾಟಕ ವೀಕ್ಷಣೆಗೆ ಒಂದು ವಾರದಿಂದಲೇ ನನ್ನ ತಯಾರಿ.  ಕಾರಣ ಭಯಂಕರ ಕುತೂಹಲ. ಒಂಬತ್ತು ತಾಸಿನ ನಾಟಕ ನಿದ್ದೆಗೆಟ್ಟು ಕೂತು ನೋಡ್ತೀನಾ? ನನ್ನ ಹತ್ತಿರ ಸಾಧ್ಯವಾ? ಏನಾದರೂ ತೊಂದರೆ ಆದರೆ ಮಧ್ಯರಾತ್ರಿ ವಾಪಸ್ ಬರೋದಕ್ಕೂ ಆಗೋದಿಲ್ಲ ಹೀಗೆ ಆತಂಕವೋ ಆತಂಕ.

ನನ್ನ ಊರು ಅಪ್ಪಟ ಮಲೆನಾಡಿನ ಚಿಕ್ಕ ಹಳ್ಳಿ.  ನಾನು ಚಿಕ್ಕವಳಿರುವಾಗ ಅಜ್ಜಿ ಜೊತೆಗೆ ಯಕ್ಷಗಾನ ವೀಕ್ಷಣೆಗೆ ಹಠ ಹೊತ್ತು ಹೋಗ್ತಿದ್ದೆ.  ಅಜ್ಜಿದೊಂದೇ ಕಂಡೀಷನ್ ;  ಬೆಳಗಾಗುವವರೆಗೂ ನಿದ್ದೆ ಮಾಡಬಾರದು.  ಆಗೆಲ್ಲ ನೆಲದ ಮೇಲೆ ಕೂತು ನೋಡಲು ಟಿಕೆಟ್ ಇರಲಿಲ್ಲ.  ಬೆಳಗಿನ ಜಾವ ನಿದ್ದೆ ಮಾಡಿ ಅಜ್ಜಿ ಕೆಂಗಣ್ಣಿಗೆ ಗುರಿಯಾಗುತ್ತಿದ್ದೆ.  ಆದರಿಲ್ಲಿ ನನಗೆ ನಾನೇ ಕಂಡೀಷನ್ ಹಾಕಿಕೊಂಡು ಹಲವು ದಿನಗಳ ತಯಾರಿಯಲ್ಲಿ ನಾಟಕ ವೀಕ್ಷಣೆಗೆ ಸರಿಯಾಗಿ ಇಂದಿಗೆ ಎಂಟು ದಿನಗಳ ಹಿಂದೆ 101ನೇ ಪ್ರದರ್ಶನಕ್ಕೆ  ಹೋಗಿ ಕೂತು ಕಣ್ಣು ಮಿಟುಕಿಸದೆ ನೋಡಿ ಯಶಸ್ವಿಯಾದೆ.

ಹೌದು.  ಇಲ್ಲಿ ನಿದ್ದೆಗೆ ಆಸ್ಪದ ಇಲ್ಲವೇ ಇಲ್ಲ.  ನಾಲ್ಕು ವೇದಿಕೆಯಲ್ಲಿ ಒಂಬತ್ತು ತಾಸಿನ ನಾಟಕ ರಾತ್ರಿ ಬೆಳಗಾಗುವವರೆಗೂ ನಡೆಯುತ್ತಿದ್ದರೂ ಒಂದು ಚೂರೂ ನಮ್ಮ ಕಡೆ ಗಮನ ಇರೋದಿಲ್ಲ, ನಿದ್ದೆ ಹತ್ತಿರವೂ ಸುಳಿಯೋದಿಲ್ಲ, ಸುಸ್ತು ಗಿಸ್ತು ಊಹೂಂ ಗಮನಕ್ಕೇ ಬರೋದಿಲ್ಲ.  ಅಷ್ಟು ಅದ್ಭುತವಾದ ನಿರ್ದೇಶನದಲ್ಲಿ ತಮ್ಮ ಅವರ್ಣನೀಯ ನಟನೆಯಲ್ಲಿ ನೋಡುಗರನ್ನು ತಲ್ಲೀನಗೊಳಿಸುವ ನಟರ ಚಾಕಚಕ್ಯತೆ ಈ ನಾಟಕ ನಮ್ಮ ಮೈಮರೆಸಿ ಬೆಳಕು ಹರಿಸುತ್ತದೆ.

ಗುತ್ತಿ,-ತಿಮ್ಮಿ, ಆಹಾ ಎಂತಹ ಜೋಡಿ!  ಐತ- ಪೀಂಚಲು ಹಾಸ್ಯ.  ಮುಕುಂದಯ್ಯ- ಚಿನ್ನಮ್ಮರ ಜೋಡಿಗಳಲ್ಲಿ ಪರಸ್ಪರ ಪ್ರಣಯದ ಬಗೆಗಳು ರಂಜಕವಾಗಿದ್ದಷ್ಟೇ ಕುತೂಹಲಕಾರಿಯೂ ಆಗಿವೆ. ಕಷ್ಟ ಪಡಲೆಂದೇ ಹುಟ್ಟಿಬಂದ ಕೆಳಜಾತಿಯವರೆಂದು ಭಾವಿಸಲಾದ ತಿಮ್ಮಿ, ಪಿಂಚಲು ಅವರಲ್ಲಿ ಒರಟುತನವೇ ಜೀವಾಳವಾದ, ಮೃದು-ಮಧುರ ಪ್ರಣಯ ಕಾಣುತ್ತೇವೆ.

ಜಮೀನುದಾರ ಮನೆತನದಲ್ಲಿ ಜನ್ಮವೆತ್ತಿ, ಸುಖಜೀವನವೇ ರೂಢಿಯಾದ ಚಿನ್ನಮ್ಮ, ತಾನು ಒಲಿದಾತನನ್ನು ಸೇರಲು, ಊಹಿಸಲಸಾಧ್ಯ ತೊಂದರೆಗಳನ್ನು ಎದುರಿಸುತ್ತ ಮೀರಿದ ಧೈರ್ಯ ಮೆರೆದಿದ್ದಾಳೆ.  ಸ್ನೇಹಿತೆಯ ನೆರವು , ಅಜ್ಜಿಯನ್ನು ಬಿಡಲಾಗದ ಒದ್ದಾಟ, ಅವಳಿಗೆ ಹೇಳಿ ಹೋಗಬೇಕು ತಾನು ಅನ್ನುವ ಕರ್ತವ್ಯ, ಹೇಳದೇ ಹೋಗುತ್ತಿರುವೆನೆಂಬ ತೊಳಲಾಟ ನಾಟಕ ನೋಡಲು ಕೂತ ನಾವು “ಬೇಗ ಬೇಗ ಹೋಗು.  ಉಳಿದವರಿಗೆ ಎಚ್ಚರಾದರೆ ಕಷ್ಟ”ಅಂತ ನಮ್ಮನ್ನೂ ಒದ್ದಾಡುವಂತೆ ಮಾಡುತ್ತದೆ.

ಈ ಮೂವರ ಕಥೆಗಳೇ ಇಡೀ ನಾಟಕದ ಜೀವಾಳ.  ಜೊತೆಗೆ ಗುತ್ತಿ ಸಾಕಿದ ನಾಯಿ ಹುಲಿಯಾ.  ಇದಕ್ಕೆ ತಕ್ಕಂತೆ ನಾದಬ್ರಹ್ಮ ಹಂಸಲೇಖ ಅವರ ಸಂಗೀತದಲ್ಲಿ ಮೂಡಿ ಬಂದು ನಾಟಕದುದ್ದಕ್ಕೂ ಆಗಾಗ ಸಂದರ್ಭಕ್ಕೆ ತಕ್ಕಂತೆ ಅಳವಡಿಸಿರುವ ಹಾಡುಗಳು ಮನಸ್ಸಿಗೆ ಮುದವನ್ನೂ ನೀಡುತ್ತವೆ ಎದೆ ಭಾರವೂ ಆಗಿಸುತ್ತವೆ.

ಪ್ರತೀ ಪಾತ್ರದಲ್ಲೂ  ಅವರ ವೈಚಾರಿಕತ್ವ , ನಂಬಿಕೆಗಳು, ಊಟ, ಉಡಿಗೆ, ಧೈರ್ಯ, ಅಪಾಯದ ಮುನ್ಸೂಚನೆ ಅರಿಯುವ ಸಾಮರ್ಥ್ಯ, ಇತ್ಯಾದಿಗಳನ್ನು ತೀರಾ ಅಚ್ಚುಕಟ್ಟಾಗಿ ಉತ್ತಮ ಬೆಳಕಿನ ಸಂಯೋಜನೆಯಲ್ಲಿ ಪ್ರೇಕ್ಷಕ ಕಳೆದು ಹೋಗುತ್ತಾನೆ.  ನಾಲ್ಕು ಹಂತಗಳಲ್ಲಿ ನಾಟಕ ಮುಂದುವರೆಯುವಾಗ ಸನ್ನಿವೇಶಕ್ಕೆ ತಕ್ಕಂತೆ ರಂಗಮಂಟಪ ಸಜ್ಜುಗೊಳಿಸಿದ್ದು ಸುತ್ತಮುತ್ತಲಿನ ವಿಶಾಲ ಜಾಗವನ್ನೂ ಆಕ್ರಮಿಸಿಕೊಂಡಿದೆ.   ಬರಿಗಾಲಲ್ಲಿ ಈ ಚಳಿಯಲ್ಲಿ ಹಲವು ಪಾತ್ರಧಾರಿಗಳ ವೇಶಭೂಷಣ ಅರೆಬಟ್ಟೆ.  ಹೀಗಿದ್ದೂ ಒಂದಿನಿತೂ ದಣಿವನ್ನೂ ತೋರಿಸದೇ ನಟಿಸುತ್ತಿದ್ದಾರಲ್ಲಾ ಒಂದೂವರೆ ತಿಂಗಳಿಂದ!!?? ಆಶ್ಚರ್ಯ ಆಗದೇ ಇರದು.

ಮದುಮಗಳಾಗಿ ಗಂಡನ ಮನೆ ಸೇರಬೇಕಾಗಿದ್ದ ತರುಣಿ ಅವಳನ್ನು ನೋಡಲು ಬಂದ ಹೆಳವ ತಾಯಿಯ ಒತ್ತಾಯ ಕಾವೇರಿಯ ಜೀವನದ ಪ್ರಸಂಗ ಒಂದು ದುರಂತ ಕಥೆ.   ದೇವಯ್ಯನು ದೇಹಸುಖ ಪಡೆದು ಬಹುಮಾನವಾಗಿತ್ತ ಕಾವೇರಿಯ ಉಂಗುರ ಕಳೆದುಕೊಂಡು ಶೇರುಗಾರ ಸಾಬಿಯ ಷಡ್ಯಂತ್ರಕ್ಕೆ ಬಲಿಯಾಗಿ ಸಾಮೂಹಿಕ ಅತ್ಯಾಚಾರದ ದೃಶ್ಯ ಮರೆಯಲ್ಲಿ ಕೇಳುವ ಅವಳ ಆಕ್ರಂದನ ಸಾವಿರಾರು ಜನ ಸೇರಿದ ಆ ರಾತ್ರಿಯ ನೀರವ ಮೌನದಲ್ಲಿ ಸಂಪೂರ್ಣ ಮೌನ ತಳೆದು ಮನುಷ್ಯನ ಕ್ರೂರತೆಯ ಇನ್ನೊಂದು ಮುಖ ಪ್ರತಿ ಹೃದಯ ಅಲುಗಾಡಿಸಿದ್ದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿತ್ತು.  ಎದೆ ತಲ್ಲಣದ ಗೂಡಾಗಿತ್ತು.

ಹತ್ತೆಂಟು ಕೈಗಳನ್ನು ದಾಟಿ ಹೋಗಿ ಕೊನೆಗೆ ಕಾವೇರಿಗೆ ಸಿಗುವಂತಾದದ್ದು, ನಾಟಕದ ಪ್ರಾರಂಭದಿಂದ ಜೋಗಪ್ಪ ಹೇಳುತ್ತ ಹೋಗುವ ಆ ಉಂಗುರ ನೋಡುತ್ತ ಹೇಳುವ ಕಥೆ ಕವಿಯ ಕಲ್ಪನೆ ಕಥೆ ಬರೆಯಲು ಎಂತಹಾ ಅದ್ಭುತವಾದ ಯೋಚನೆ!  ನಿಜಕ್ಕೂ ಊಹಾತೀತ.  ವರ್ಣನಾತೀತ.

ಸ್ತ್ರೀ ಶೋಷಣೆ ಅಂದಿನಿಂದ ಇಂದಿನವರೆಗೂ ಅವ್ಯಾಹತವಾಗಿ ನಡೆಯುತ್ತಲೇ ಇದೆ.  ಮೇಲ್ವರ್ಗದವರ ದರ್ಪ, ಅವರೊಳಗಿನ ಗುಟ್ಟು, ಹೆಣ್ಣಿಗೆ ಹೆಣ್ಣೇ ಹೇಗೆ ಶತ್ರು ಆಗಿದ್ದು, ಕ್ರಿಶ್ಚಿಯನ್ ಧರ್ಮದವರ ಧರ್ಮ ಪ್ರಚಾರ ಇತ್ಯಾದಿಗಳನ್ನೆಲ್ಲ ಈ ನಾಟಕದಲ್ಲಿ ಕಾಣಬಹುದು.  ಬರೆಯುತ್ತ ಹೋದರೆ ಮುಗಿಯದು.

ಇಡೀ ನಾಟಕವನ್ನು ನೋಡುತ್ತಿದ್ದಂತೆ ಗುತ್ತಿ ಮತ್ತು ಹುಲಿಯಾ ಪಾತ್ರ ಧಾರಿಗಳು ಹೆಚ್ಚಿನ ಚಪ್ಪಾಳೆ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.  ಹುಲಿಯಾ, ಗುತ್ತಿ ಸಾಕಿದ ನಾಯಿ ಅವನ ಜೀವಾಳ.  ನಾಟಕದುದ್ದಕ್ಕೂ ಹೆಚ್ಚಾಗಿ ಇರುವ ಈ ಪಾತ್ರಗಳು ನಗಿಸುತ್ತ ನಗಿಸುತ್ತ ನಮ್ಮನ್ನು ಅಳಿಸಿಬಿಡುತ್ತವೆ.  ಈ ಕೊನೆಯ ದೃಶ್ಯ ನಾನು ಹೇಳೋದಿಲ್ಲ ; ನಾಟಕ ನೋಡಿಯೇ ಅನುಭವಿಸಬೇಕು.

ನಿಜ.  ನನ್ನನ್ನು ಕೊನೆಯಲ್ಲಿ ತಂದು ನಿಲ್ಲಿಸಿರುವುದು ಹುಲಿಯ ಮತ್ತು ಗುತ್ತಿಯ ಪಾತ್ರಗಳಲ್ಲಿ.  ಅಲ್ಲಿ ನಾನೂ ಇದ್ದೇನೆ.  ಹಿಂದೆ ಹೀಗೆಯೇ ಕೂಗಿಕೊಂಡಿದ್ದೇನೆ, ಬಿಕ್ಕಳಿಸಿದ್ದೇನೆ, ಒದ್ದಾಡಿದ್ದೇನೆ. ಒಂಬತ್ತು ವರ್ಷ ಸಾಕಿ ಅಕಸ್ಮಾತ್ ಸಾವಿಗೀಡಾದ ನಾನು ಕಳಕೊಂಡ ನನ್ನ “ಶೋನೂ” ನೆನಪಾಗಿ!  ಎರಡು ವರ್ಷಗಳಾದರೂ ಇನ್ನೂ ಹಸಿ ಹಸಿಯಾಗಿವೆ ನೆನಪುಗಳು!

ಇನ್ನು ಕೇವಲ ಫೆಬ್ರವರಿ 29ರವರಿಗೆ ನಡೆಯುವ ಈ ನಾಟಕ ನೋಡಲೇ ಬೇಕಾದಂತಹ ನಾಟಕ.  ಖಂಡಿತಾ ಮಿಸ್ ಮಾಡ್ಕೋಬೇಡಿ.

‍ಲೇಖಕರು avadhi

February 24, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: