ಸಂಗಾತಿಗೆ….
ಹೊರಳಾಡುತ್ತಿರುವೆಯಲ್ಲೇ ಹೀಗೆ
ಬರಲಿಲ್ಲವೇನೇ ನಿದ್ದೆ ಇನ್ನೂ ನಿನಗೆ
ಬಾ ಸೊಗಸಾದ ಕಥೆ ಹೇಳುತ್ತೇನೆ
ಇಲ್ಲ, ಚಂದದ ಕವಿತೆ ಓದುತ್ತೇನೆ
ನಿಧಾನ ಜಾರುವೆಯಂತೆ ಕನಸಿಗೆ…
ನನ್ನ ನಿಡುಗಾಲದ ಸಂಗಾತಿಯೇ
ನಾವು ಹಂಚಿಕೊಂಡಿದ್ದೇನು ಕಮ್ಮಿಯೇ
ನೋವು ನಲಿವು ನಂಬಿಕೆ
ಹಾಸು ಹೊದಿಕೆ
ಮೈಮರೆವು ಮೈಥುನ
ಪ್ರೀತಿ ಕುಂಟು ನೆವನ
ತೆಕ್ಕೆ ಬಿದ್ದು ಹೊರಳಾಡಿಲ್ಲವೇನೇ..
ಕೊಂಕು ಕೆರೆತ ಭತ್ರ್ಸನೆ
ಬೈಗುಳ ಉಗುಳು ಜಗಳ
ಬಿಳಿ ಕರಿಮಾಡಿ
ಕರಿ ಬಿಳಿಮಾಡಿ
ಹೋರಾಡಿಲ್ಲವೇನೇ..

ಮಕ್ಕಳು ಹುಟ್ಟಿದ್ದು ಬೆಳೆದದ್ದು
ಸಂಕಲ್ಪ ಬಲ ಜಾಗರಣೆ ಮಾಡಿದ್ದು
ರೆಕ್ಕೆ ಪುಕ್ಕ ಬಲಿತು ಅವು ಹಾರಿ ಹೋಗುವಾಗ ಹೊರಗೆ
ಕಿಟಕಿ ಸರಳುಗಳ ಹಿಂದೆ ನಿಂತು ಬರಿದೇ ಆಗಸ ನೋಡಿದ್ದು
ನಿನಗಾದರೋ ಸೆರಗಿತ್ತು ಮರೆವಿಗೆ
ಕತ್ತಲ ಗೂಡೊಳಗೆ
ಹೆಗಲ ಮೇಲೆ ಶಲ್ಯವಿದ್ದರೂ
ಹಗುರಾಗುವ ಯೋಗವಿಲ್ಲ ನನಗೆ
ನಾನು ನೆಟ್ಟ ಗಂಡು ಗರ್ವದ ಬೀಜ
ನಿನ್ನೊಳಗೆ ನೋವಾಗಿ ಮೊಳಕೆಯೊಡೆದಿತ್ತು
ಅದೇ ನನ್ನ ಧಮನಿಗಳಲ್ಲೂ ಹರಿದಿತ್ತು
ನಿನ್ನ ಕೈ ಸುಕ್ಕುಗಳು
ಮುಖದ ಗೆರೆಗಳು
ಈಗ ಪುರಾಣ ಶ್ರವಣ ಮಾಡುತ್ತಿವೆ
ಅಂಗಾಂಗಗಳು
ಪದ ಹೇಳಲಾರಂಭಿಸಿವೆ
ಹೊದಿಕೆ ಎರಡಾಗಿದೆ ಈಗ
ಹಾಸಿಗೆಯೂ ತಗ್ಗು ಬಿದ್ದಿದೆ ಇಬ್ಬದಿಗೆ
ಬದುಕಿದ್ದೇವೆ ಇಲ್ಲಿಯವರೆಗೆ ಹೀಗೆ
ಸಾಯುವುದು ಸಾಧ್ಯವೇನೇ ಒಟ್ಟಿಗೆ
ಎಂದಾದರೊಂದು ದಿನ
ಇಬ್ಬರಲ್ಲೊಬ್ಬರು
ಮರಳಬೇಕಲ್ಲವೇನೇ
ಒಂಟಿ
ಮನೆಗೆ
ಖಾಲಿ ಖೋಲಿಗೆ
ಸ್ಮಶಾನದಲ್ಲಿ ಸುಡು ಚಿತೆಗೆ
ವಿದಾಯ ಹೇಳಿ ಕಡೆಗೆ……..
(ಪ್ರೇರಣೆ : ಗುಲ್ಜಾರ್ ಹಿಂದಿ ಕವಿತೆ ಬುಡಿಯಾ ರೇ)






ಚೆನ್ನಾಗಿದೆ.
ಭಾವಪೂರ್ಣವಾಗಿದೆ . ಅಭಿನಂದನೆಗಳು .
ಗಿರಿಜಾ ಅವರೆ, ಹೆಚ್ಚೂ ಕಡಿಮೆ ನಾವಿಬ್ಬರು ಈ ಕವಿತೆಯಂತೇ ಇದ್ದೇವೆ ನಮ್ಮನೆಯೊಳಗೆ. ನನ್ಗೆ ಇದು ನಮ್ಮನ್ನೆ ಕುರಿತು ಬರೆದಿದ್ದು ಅನ್ನಿಸಿತು ನೋಡಿ. ಅದ್ಭುತ ಅನುವಾದ. ನಿಮಗೆ ಧನ್ಯವಾದ.
thanq lalita
Dear Lalita Acually this not translation. A re creation inspired by Gulzar’s poem “Budiya Re”
ಗುಲ್ಜಾರರ ಕವನವನ್ನು ಚೆನ್ನಾಗಿ ಉಣಬಡಿಸಿದ್ದೀರಿ
thanq sir
ಹಾಗನ್ನಿ ಮತ್ತೆ,, ಈ ಪದ್ಯದಲ್ಲಿ ಅನುವಾದದ ವಾಸನೆಯೂ ಇಲ್ಲ.ಗಿರಿಜಾ, ನಿಮಗೆ ಬಿಡುವಾದಾಗ “ಬುಡಿಯಾ ರೇ” ಅನ್ನು ಮೇಲ್ ಮಾಡಿ ದಯವಿಟ್ಟು.
Madam! kavanadalli kannada sogadu! Idee samsaara chitrana chitrapatavaagide. Abhinandanegalu!
Madam Naanu Hema. Kavana thumba khushi kottitu.