ಸವಿರಾಜ್ ಆನಂದೂರು
ಬಾಪು,
ನಾವು ಗಾಂಧಿಯನ್ನು ಪ್ರೇಮಿಸುವ
ಈ ಕಾಲದ ಹುಡುಗ ಹುಡುಗಿಯರು
ನಿನ್ನಂತೆ ವ್ಯಾಮೋಹಗಳ ಗೆದ್ದವರಲ್ಲ
ಲೌಕಿಕದ ಸುಳಿಯಿಂದ ಮೇಲೆದ್ದವರಲ್ಲ
ಖಾದಿ ತೊಟ್ಟವರಲ್ಲ, ಆಸೆ ಬಿಟ್ಟವರಲ್ಲ
ಹರಿದ ಸ್ಲಿಮ್ಫಿಟ್ ಜೀನ್ಸು, ಸ್ವೆಟ್ ಷರ್ಟು
ಟ್ಯಾಂಕ್ ಟಾಪು, ಸ್ಕರ್ಟು
ನಮ್ಮ ವೇಷವನ್ನೊಮ್ಮೆ ಕಾಣಬೇಕಿತ್ತು ನೀನು
“ಏನು ಹುಡುಗರಪ್ಪಾ ಈ ಕಾಲದವರು” ಎಂದು
ಬೊಚ್ಚು ಬಾಯಿಯ ತುಂಬಾ ನಗೆ ತುಳುಕಿಸುತ್ತಿದ್ದೆ
ಎಲ್ಲ ಮುದುಕರ ಹಾಗೆಯೇ.

ಬ್ರಹ್ಮಚರ್ಯ? ಪಾನ ನಿಷೇಧ?!
Not our cup of tea!
ವೀಕೆಂಡು
ಟಿಂಡರ್ನಲ್ಲಿ ಸಿಕ್ಕ ಸಂಗಾತಿಯ ಕೂಡೆ
ಪಬ್ಬು ಹೊಕ್ಕು ಸಮೃದ್ಧ ಬಿಯರ್ ಹೀರಿ
ತಬ್ಬುತ್ತ ತಣಿಯುವೆವು ಎಲ್ಲ ಮಿತಿಗಳ ಮೀರಿ.
ನಿನ್ನ ಪಾಲಿಗೆ ದೇಹ: ಹಿಂಡಿ ಕಳೆಯುವ ಕಬ್ಬು
ನಮಗೋ ಕೂಡಿ ಕಟ್ಟುವ ಮಧುರ ಜೇನುಗೂಡು
ನಾವು ಹಠ ಹಿಡಿದು ಕುಳಿತಿದ್ದು ಐಫೋನಿಗೆ ಮಾತ್ರ
ನಮಗೆ ಉಪವಾಸವೆಂದರೆ ಮಧ್ಯರಾತ್ರಿ ಪಿಜ್ಜಾ ತಿಂದು ಸಿನಿಮಾ ನೋಡುವುದಷ್ಟೇ
ನಾವು ಬದುಕಿದ್ದು ಕೇವಲ ನಮ್ಮ ಸುಖಕ್ಕಾಗಿ,
ಹೆಚ್ಚೆಂದರೆ ಉಳಿದವರೆಡೆಗೆ ಮರುಗಬಲ್ಲೆವು ಅಷ್ಟೇ;
ಆದರೆಂದೆಂದೂ ಕೇಡು ಬಯಸುವರಲ್ಲ
ಚಳುವಳಿಗಳ ಭಾರಕ್ಕೆ ಹೆಗಲು ಕೊಡುವವರೂ ಅಲ್ಲ
ಟ್ಟಿಟರ್ನೊಳಗೆ ಹ್ಯಾಷ್ಟ್ಯಾಗ್ ಹಾಕಿ ಹೊಣೆ ಕಳೆದುಕೊಳುವವರು
ನಿಜ, ನಾವು ನಿನ್ನಂತಲ್ಲ.
ನಾವು ಗೀತೆ ಓದುವುದಿಲ್ಲ, ಭಜನೆ ಮಾಡುವುದಿಲ್ಲ
ಕಟ್ಟ ಕಡೆಯ ಮನುಜನನು ಹುಡುಕಿ ದೇಶದುದ್ದಗಲ ನಡೆದವರಲ್ಲ
ಕುಳಿತು ಬರೆದವರಲ್ಲ ಅನಂತ ಹರಹಿನ ಸ್ವಾತಂತ್ರ್ಯ ಗಾಥೆಯನು
ಒಂದೂವರೆ ವೆಬ್ ಸಿರೀಸ್ ನೋಡುವಷ್ಟರಲಿ
ವೀಕೆಂಡು ಪುರ್ರನೆ ಹಾರಿಹೋಗುತ್ತದೆ
ನಿನಗದೆಲ್ಲಿ ಸಿಕ್ಕಿತೋ ಎಷ್ಟೆಲ್ಲ ಕೆಲಸ ಮಾಡಿಸುವ ಯಥೇಚ್ಛ ಕಾಲದ ಗಡಿಯಾರ
ನಾವು ನಿನ್ನಂತಲ್ಲವೇ ಅಲ್ಲ, ಆಗುವ ಬಯಕೆಯೂ ನಮಗಿಲ್ಲ
ಆದರೂ ನಮಗೆ ನೀನು ಬೇಕು
ಪಬ್ಜಿ ಆಡುವ ಮಗು ಅಜ್ಜಿ ಮನೆಯ ಜೋಕಾಲಿಗೆ ಎಣ್ಣುವಂತೆ
ನಾವೂ ಒಮ್ಮೊಮ್ಮೆ ನಿನ್ನ ಗಲ್ಲದ ಸುಕ್ಕುಗಳ ನೆನೆದು ತುಡಿಯುತ್ತೇವೆ
ನಮಗೆ ನೀನು ಬೇಕೇ ಬೇಕು

ಬಾಪು,
ನಿನ್ನೆದೆಗೆ ಗುಂಡಿಟ್ಟ ದಿನ ನೀನು ಸಾಯಲಿಲ್ಲ
ಗೋಡ್ಸೆಗಳು ಹುಟ್ಟಿದರು.
ನಿನಗೆ ದಾರಿ ತೋರುವ ಊರುಗೋಲಾಗಿದ್ದ ಹಳೆ ಕಾಲದ ಬಿದಿರೇ
ಅವರ ಕೈಯ ದೊಣ್ಣೆಗಳಾಗಿವೆ ಈಗ
ತತ್ತರಿಸಿದ್ದೇವೆ ಕಾಲದ ನದಿಗೆ ತಡೆಯೊಡ್ಡುವ ಹುಚ್ಚು ಕಾರ್ತವೀರ್ಯರ ಕಂಡು
ಒಮ್ಮೆ ಬಂದುಬಿಡು
ನಿನ್ನ ಸಾವಿಗೆ ಸಿಹಿ ಹಂಚಿದವರ ಹಣೆಯ ನೇವರಿಸು
ಅವರ ಹಿಡಿದಿರುವ “ಭೂತ” ಚೇಷ್ಟೆಯ ಬಿಡಿಸು
ನಮ್ಮ ಭವಿಷ್ಯತ್ತುಗಳ ಸರಾಗಗೊಳಿಸು
ನಮಗೆ ಸ್ವಾತಂತ್ರ್ಯ ಕೊಡಿಸು
ಇಷ್ಟು ಉಪಕಾರ ಮಾಡಿದರೆ ಸಾಕು
ನಿನ್ನ ಅರೆಬೆತ್ತಲೆ ಮೈಯ ಆಲಿಂಗಿಸಿ
ಸೆಲ್ಫಿ ತೆಗೆದು ಇನ್ಸ್ಟಾಗ್ರಾಂ ಸ್ಟೋರಿಗೆ ಹಾಕಿ
ಹ್ಯಾಷ್ಟ್ಯಾಗ್ಗಳಲ್ಲಿ ನಿನ್ನ ಸದಾ ಟ್ರೆಂಡಿಂಗ್ನಲ್ಲಿಡುತ್ತೇವೆ:
#BeLikeBaapu






ಚೆನ್ನಾಗಿದೆ!…ಕೆಲ ವರ್ಷದ ಹಿಂದೆ ನಾನು ಹೀಗೆ ಬರೆದಿದ್ದೆ!
ಗಾಂಧಿ,ನೀನು ಸಾಯುವುದಿಲ್ಲ
ಸಾಯುವುದಕ್ಕೆ ನಾವು ಬಿಡುವುದೂ ಇಲ್ಲ!
ನಿನ್ನ ಮಗ ಹರಿಲಾಲನನ್ನು ಬಿಡಲಿಲ್ಲ
ಕಟ್ಟಿಹಾಕಿದೆ ಅವನ ಜೀವನವೆಲ್ಲ!
“ಬಾ”ಳಿಗೂ ಬಲವಂತ ಕಡಿವಾಣ ಹಾಕಿದೆ
ಒಪ್ಪಿಕೊಂಡು ನಡೆದಳು ಬೇರೆ ದಾರಿ ಕಾಣದೆ!
ನೀನು ಜಿದ್ದಿನ ಮನುಷ್ಯ
ಅದು ನಮಗೆ ಬೇಕಿತ್ತು ಅವಶ್ಯ!
ಬಂದೆ ನೀ ಈ ದೇಶಕ್ಕೆ
ಸ್ವಾತಂತ್ರ್ಯ ಸಮರದ ಮುಂಚೂಣಿಗೆ!
ನೀನು ನಿಂತೆ ಮುಂದೆ
ನಾವೆಲ್ಲ ನಿನ್ನ ಹಿಂದೆ!
ಎಲ್ಲವೂ ನೀನು ಹೇಳಿದಂತೆ
ಇಲ್ಲದಿದ್ದರೆ ಅಸಹಕಾರ ಚಳುವಳಿಯಂತೆ!
ಕಾದಿದ್ದೆವು ನಾವು ನಲವತ್ತೇಳರ ಆಗಸ್ಟ್ ಹದಿನೈದಕ್ಕೆ
ನಂತರ ಎಲ್ಲವೂ ನಮ್ಮ ನಮ್ಮ ಇಷ್ಟಕ್ಕೆ!
ನಾವು ನಿರ್ಧರಿಸಿದೆವು ಇರಲಿ ನಿನ್ನ ಹೆಸರಲ್ಲಿ ಎಲ್ಲವೂ
ಇರಬಾರದು ನಿನಗೆ ಅಳಿವು ಇರಲೂಬೇಕು ನಮ್ಮ ಉಳಿವು!
ಹುಟ್ಟಿದವು ಸಾವಿರಾರು ನಿನ್ನ ಪ್ರತಿಮೆಗಳು ಎಲ್ಲೆಲ್ಲೂ
ಲೆಕ್ಕವಿಲ್ಲದಷ್ಟು ನಿನ್ನದೇ ಹೆಸರು ಹೊತ್ತ ಸಂಘಸಂಸ್ಥೆಗಳು!
ಇರಿಸಲು ನಿನ್ನ ನೆನಪು ಯಾವತ್ತೂ
ನಿನ್ನ ಕೊಂಡಾಟ ಅಕ್ಟೋಬರ್ ಎರಡು ಮತ್ತು ಜನವರಿ ಮೂವತ್ತು!
ಪ್ರಜೆಗಳ ಕಾರ್ಯ ಸುಗಮವಾಗಿ ನಡೆಯಲು
ಅಚ್ಚು ಹಾಕಿಸಿದೆವು ನಿನ್ನ ಎಲ್ಲ ನೋಟುಗಳಲ್ಲು!
ಸ್ವತಂತ್ರ ಭಾರತ ಸಾಗುತ್ತಿದೆ ಭರದಲ್ಲಿ
ಆಳುವವರ ಕೈಯಿಂದ ಕೈಗೆ ನಿನ್ನ ನೋಟಿನ ಸತತ ವಿನಿಮಯದಲ್ಲಿ!
ಆಳಿಸಿಕೊಳ್ಳುವವರ ನಿಶ್ಯಬ್ಧ ಸಂಕಟ ಅಸಹಾಯಕತೆಗಳಲ್ಲಿ!
ನಿರಂತರ ನೀನು ಇರಲೇಬೇಕು,
ಗಾಂಧಿ,ನೀನು ಸಾಯುವುದಿಲ್ಲ,
ಸಾಯುವುದಕ್ಕೆ ನಾವು ಬಿಡುವುದೂ ಇಲ್ಲ!
ಜೆ ವಿ ವಿ ಮೂರ್ತಿ
ಅಕ್ಟೋಬರ್ ೨,೨೦೧೫
nice