ಗೋಡೆಗಳ ನಡುವೆ
ಜಿ ಪಿ ಬಸವ ರಾಜು
ನಾಲ್ಕು ಗೋಡೆಗಳು ಆಕಾಶಕ್ಕೆ
ಬೆಳೆದವು: ಬಯಲಿಗೆ ಬೇಲಿ
ನೆತ್ತಿಯ ಮೇಲಿನ ನೀಲಿಗೂ
ಬಂಧನ, ನಾಲ್ಕು ಮೂಲೆಗಳ ಚೌಕಟ್ಟು
ಗೋಡೆಯೊಳಗಿನ ಮಾತುಗಳು
ದಾಟುವುದಿಲ್ಲ ಹೊರಗೆ; ಮೇಲೆ
ತೇಲುವ ಹಕ್ಕಿಗೂ ಧ್ವನಿಯಿಲ್ಲ
ಗೋಡೆ- ಹೆಪ್ಪುಗಟ್ಟಿದ ಬಂಡೆ
ಅವನಾಡಿದ ಮಾತು ಅವನಿಗೇ
ಕೇಳಲಿಲ್ಲ, ಅವನಮ್ಮಿಯ ಎದೆ
ಬಿರಿದದ್ದು, ಅವನ ಮಾತುಗಳಿಗಲ್ಲ
ಎದೆಯಲ್ಲಿ ಸ್ಫೂಟಿಸಿದ ಲಾವಾರಸಕ್ಕೆ
ಎಳೆ ಕೂಡಿಸುವುದು ಕರುಳು, ಸುಟ್ಟು
ನೂರು ಜೀವಿಗಳ ಬೀಗಿದರೂ
ಬಂದೂಕದ ದಣಿವಾರುವುದು
ತಾಯೊಡಲ ಪ್ರೀತಿ ಮಡಿಲಲ್ಲಿ
ಕೊನೆಯಲ್ಲದ ಕೊನೆಯಲ್ಲಿ ಕಸಾಬ್
ಬಿಕ್ಕಿದನೆ, ನೆನೆದನೆ, ಅಮ್ಮಿಯನ್ನು
ಅಲ್ಲಾಹುವನ್ನು, ಉರಿದ ಬೆಂಕಿಯಲ್ಲಿ
ಉರಿದುರಿದು ಶುದ್ಧವಾದನೇ ಕರಗಿ
ಗೋಡೆಗಳಿಗೆ ಕಿವಿಯಿಲ್ಲ ಕೈಯಿಲ್ಲ
ಹೃದಯವೂ ಇಲ್ಲ, ನರಳಿಕೆಗೆ
ನೆರಳೂ ಇಲ್ಲ, ಕರುಣೆಗೆ ಕೊರಳೂ
ಸುಳಿಗಾಳಿಯೂ ಸುಳಿಯುವುದಿಲ್ಲ ಅಲ್ಲಿ
ಕೊಳೆಯಬೇಕು ಎಲ್ಲ ಅಲ್ಲೇ, ಗೋಡೆ
ನಡುವಲ್ಲೇ ಉಳಿಯಬೇಕು, ಗುಂಭ
ಗುಟ್ಟುಗಳೂ ಸಾಯಬೇಕು ಅಲ್ಲೇ
ಕಾಲಾಂತರದಲ್ಲಿ ಇತಿಹಾಸ ಗಲ್ಲಿಗೇರಿ.
(ಮುಂಬೈ ಘಟನೆಯ ಭಯೋತ್ಪಾದಕ ಕಸಾಬ್ ಗಲ್ಲಿಗೇರುವ ಮುನ್ನ ಆಡಿದ್ದು ಒಂದೇ ಮಾತಂತೆ: ‘ಅಮ್ಮಿಗೆ ತಿಳಿಸಿ.’)







uttam kavana…