ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗಲ್ಲಕ್ಕಿಟ್ಟ ದೃಷ್ಟಿ ಬೊಟ್ಟು

ಅಂಜನಾ ಗಾಂವ್ಕರ್

ಹೊಸ ಕನಸುಗಳಿಗೆ
ಮುನ್ನುಡಿ ಬರೆದಿದೆ,
ಆಗಸದ ಹೊಂಬಣ್ಣವ
ಈ ಕದಪುಗಳಿಗೆ ಸಾಲವ
ಕೊಡಲು ಕೋರಿರುವೆ,
ನಿನ್ನೊಲವ ಜಾತ್ರೆಯಲ್ಲಿ
ವಿಹರಿಸಲು ನಾ
ಕಾತರಿಸಿರುವೆ ಗೆಳೆಯ,

ಚುಕ್ಕಿ ಚಂದ್ರಮ
ಬಾನಲಿ ಮೂಡಿ
ಮರೆಯಾದರೂ ಮನೆಗೆ
ಮರಳುವ ಇರಾದೆಯಿಲ್ಲ
ತಂಗಾಳಿ, ಬೆಳದಿಂಗಳಿಗೂ
ಅಸೂಯೆಯಾಗಬೇಕಲ್ಲ,
ಈ ಜೋಡಿಯ ನೋಡಿ
ಚಂದಿರನೂ ಮೋಡದಿ
ಮರೆಯಾಗಬೇಕಲ್ಲ,

ಕನ್ನಡಿಯಲಿನ ಬಿಂಬದಲಿ
ತುಟಿಗೆ ರಂಗ ಲೇಪಿಸಿದ್ದೆ,
ನಯನದಲಿನ ಕಡುಗಪ್ಪಿನಿಂದ
ದೃಷ್ಟಿ ಬೊಟ್ಟು ಗಲ್ಲಕ್ಕಿಟ್ಟೆ,
ಕೊಳಲ ಮಾಧವನಂತ
ನಿನ್ನ ಚೆಲುವ ನೆನೆನೆನೆದು
ಉಲ್ಲಸಿತಳಾದೆ,

ನೀ ಬಂದೆ,
ಬಿಸಿ ಧರೆಗಿಳಿದ
ತಂಪು ವರ್ಷದಂತೆ,
ಮೊಳೆತು ಅಂಕುರಿಸಲು
ಕಾದಿದ್ದ ನನ್ನ ಒಲವ ಆಸೆಗಳಿಗೆ
ಆಸರೆಯಾಗಲು…

ಮರೆತಿದ್ದೆ ನಾ
ವನಕುಸುಮವೆಂದು,
ಹೊಸಕಿ, ಹರಿದು ಹೋದಾಗಲೇ
ತಿಳಿದದ್ದು ಘಮವಿಲ್ಲದ ನಾ,
ದೂರದ ದೀಪವ ನೆನೆದು
ಮುದಗೊಳ್ಳುವ ಪತಂಗವೆಂದು…

‍ಲೇಖಕರು Avadhi

12 January, 2021

1 Comment

  1. Guru

    ಗಲ್ಲಕ್ಕಿಟ್ಟ ದೃಷ್ಟಿ ಬೊಟ್ಟು, ತುಂಬಾ ಸೊಗಸಾಗಿ ಮೂಡಿ ಬಂದಿದೆ. ನಯನದಲಿನ ಕಡುಗಪ್ಪಿನಿಂದ
    ದೃಷ್ಟಿ ಬೊಟ್ಟು ಗಲ್ಲಕ್ಕಿಟ್ಟೆ, ವಾವ್…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading