
ಚಿದಂಬರ ನರೇಂದ್ರ
ತಾಜಾ ಕವಿತೆಯೊಂದು
ಟ್ಯೂನಿಗೆ ಒಗ್ಗಿಕೊಳ್ಳಬೇಕೆಂದು
ತನ್ನ ರೆಕ್ಕೆ ಪುಕ್ಕಗಳನ್ನೆಲ್ಲ
ಟ್ರಿಮ್ ಮಾಡಿಸಿಕೊಳ್ಳಲು
ತಲೆ ತಗ್ಗಿಸಿಕೊಂಡು ಕೂತಿತ್ತು.

ಪ್ರಾಸ ಸರಿಹೊಂದುತ್ತಿಲ್ಲ ಎಂದು
ಒಂದಿಷ್ಟು ಶಬ್ದಗಳು
ಅರ್ಥ ಕಳೆದುಕೊಂಡವು.
ಹಾಡುವವರ ಮಿತಿಗಳನ್ನ
ಅರ್ಥ ಮಾಡಿಕೊಂಡು
ಕವಿತೆ, ತನ್ನ ಆವೇಶವನ್ನು ತಾನೇ
ಸ್ವಲ್ಪ ಕಡಿಮೆ ಮಾಡಿಕೊಂಡಿತು.
ಹಿನ್ನೆಲೆ ಸಂಗೀತಕ್ಕೆ
ಆಭಾಸವಾಗಬಾರದೆಂದು
ಕೆಲವು ಶಬ್ದಗಳನ್ನ ಒತ್ತಿದರು
ಕೆಲವನ್ನ ಹಾಗೇ ತೇಲಿಸಿಬಿಟ್ಟರು.
ಕವಿತೆ ಸುಮ್ಮನಾದಲ್ಲೆಲ್ಲ
ಸಿಳ್ಳೆ ಹೊಡೆದರು
ಚಿಟಕಿ ಹಾಕಿದರು
ಇದು ಪ್ರದರ್ಶನ ಕಲೆ
ಜನರ ಕಿವಿಗಳಿಗೆ
ಮೋಸ ಮಾಡಬಾರದೆಂದು
ಸಮಜಾಯಿಶಿ ನೀಡಿದರು.
ಸಂಗೀತಗಾರ ಮಹಾ ರಸಿಕ
ಗಮ್ಮತ್ತಿನ ಕೆಲವು ಆಲಾಪ್ ಗಳನ್ನ
ನಡು ನಡುವೆ ಫಿಟ್ ಮಾಡಿ
ಮತ್ತೆ ಮತ್ತೆ
ಅವುಗಳನ್ನೇ ಹಾಡುತ್ತಿದ್ದ.
ಆತ ನುರಿತ ಗಾಯಕನಂತೆ,
ಕೆಲವೊಮ್ಮೆ
ತುಂಬಾ ಭಾವುಕನಾಗಿಬಿಡುತ್ತಿದ್ದ,
ಒಮ್ಮೊಮ್ಮೆ ಅತಿಯಾಗಿ
ತಾರಕಕ್ಕೆ ಹೋಗಿ
ಅಲ್ಲೇ ಒಂದಿಷ್ಟು ಹೊತ್ತು
ಕಾಲ ಕಳೆದುಬಿಡುತ್ತಿದ್ದ
ಅದೇನೋ ಅವನ
ಸಿಗ್ನೆಚರ್ ಸ್ಟೈಲ್ ಅಂತೆ,
ಹೀಗೆ ಹಾಡಿದಾಗಲೆಲ್ಲ
ಜನ ಚಪ್ಪಾಳೆ ಹೊಡೆಯುತ್ತಾರಂತೆ.
ಕೊನೆಗೂ
ಹಾಡು ಹಿಟ್ ಆಗಿದೆ.
ಕವಿತೆಯ ಸಾಲುಗಳನ್ನ
ಕೆಲವರು
ಟಾಯ್ಲೆಟ್ ನ ಗೋಡೆಗಳ
ಮೇಲೆ ಬರೆದರೆ
ಇನ್ನೂ ಕೆಲವರು
ದೇವಸ್ಥಾನದ
ಕಂಬಗಳ ಮೇಲೆ ಕೆತ್ತಿದ್ದಾರೆ.






chennaagide