-ಡಾ ಲಕ್ಷ್ಮಿಕಾಂತ ಮಿರಜಕರ
ಜೋಗತಿ
ಕೊರಳಲ್ಲಿ ಕವಡೆ ಸರ,
ಕಾಲಿಗೆ ಗೆಜ್ಜೆ ,
ಹಣೆಗೆ ಅರಿಶಿನಕುಂಕುಮ
ತಲೆಯ ಮೇಲೆ ತಾಮ್ರದ ಕೊಡ
ಅದರ ಕಂಟಕ್ಕೆ ಯಲ್ಲಮ್ಮನ ಮೂರ್ತಿ
ಉಧೋ!ಉಧೋ! ಘೋಷ
ಜೊತೆಗೆ ಚೌಡಿಕೆ ಪದ
ಜಗವ ತಲೆ ಮೇಲೆ ಹೊತ್ತ
ಯಲ್ಲಮ್ಮತಾಯಿಯ
ಮಗಳು ನಾನು
ಕೆಂಪು ಮುತ್ತು ಧರಿಸಿರುವ ಜೋಗತಿ
ಗಂಡಾಗಿದ್ದೇನೆ ಲಿಂಗದ ಕಾರಣಕ್ಕೆ
ಮಾನಸಿಕವಾಗಿ ಹೆಣ್ಣೇ
ಹೆಣ್ತನವನ್ನು ಹೊತ್ತು ತುಡಿಯುತ್ತಿದ್ದೇನೆ
ಎಷ್ಟು ಮುಚ್ಚಿಟ್ಟರೂ ಕಾಣುವ ಗಡಸು ಮುಖ ತೋರಲೇಬೇಕು ಮರೆಮಾಚಲು
ಕೃತಕವಾಗಿಯಾದರೂ
ಹೆಣ್ಣಿನ ಕೊಂಕು, ಬೆಡಗು, ವೈಯ್ಯಾರ.
ಮುತ್ತು ಕಟ್ಟಿಸಿಕೊಂಡು
ಪಡ್ಲಿಗಿ ಹಿಡಿದು ಬಜಾರಿಗೆ ಬಂದರೆ
ಸುತ್ತಲೂ ತಿರಸ್ಕಾರದ ಕಣ್ಣುಗಳು
ಭಿಕ್ಷೆ ಬೇಡಿ ಬದುಕುತ್ತಿದ್ದರೂ
ಮೈ ಮಾರುವವಳು ಎಂಬ ಅನುಮಾನದಲ್ಲಿ
ಗಂಡಸರ ಕಾಮಚೇಷ್ಟೆಗಳು
ಲೈಂಗಿಕ ದೃಷ್ಟಿಯಲ್ಲಿ ಇರಿಯುವ ನೋಟಗಳು
ಸಿದ್ದವಾಗಿರುತ್ತವೆ ರಣಹದ್ದಿನಂತೆ ಎರಗಲು
ದುಃಖದುಮ್ಮಾನಗಳ ಕೇಳುವವರು
ಯಾರೂ ಇಲ್ಲದಿದ್ದರೂ
ಲೋಕನಿಂದನೆಯನ್ನು ಸಹಿಸಿ
ಸಾಮಾಜಿಕ ಬಹಿಷ್ಕಾರವೆಂಬ
ಕೆಂಡದ ಮಳೆಯಲ್ಲೂ ತೊಯ್ದು
ಘನತೆಯ ಬದುಕು ಕಟ್ಟಿಕೊಂಡ
ಗಟ್ಟಿಗಿತ್ತಿ ಜೋಗತಿ ನಾನು
ತುಸುಗೌರವವಿರಲಿ
ಹಿಡಿ ಪ್ರೀತಿ ಸಿಗಲಿ
ಅಷ್ಟೇ ಬಯಕೆ.






0 Comments