ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗಂಡಸಾಗಿ ಕವಿತೆ ಬರೆಯುವುದು ಸುಲಭ!

ಒಂದಿಷ್ಟು ಬದುಕಿನ ಕತೆಗಳ ಜೊತೆಗೆ
ಟಿ.ಪಿ. ಉಮೇಶ್
ಹಾಸಿಗೆಯಿಂದ ಎದ್ದೊಡನೆ ಮನೆದೇವರ ನೆನೆದು;
ಹೆಂಡತಿಯ ಪಾದಗಳ ಮುಟ್ಟಿ ನಮಸ್ಕರಿಸೋ ಭಯ-ಭಕ್ತಿಯ ಅಗತ್ಯವಿಲ್ಲ!
ಆ ತಕ್ಷಣವೇ ನೆರಿಗೆ ಬಿದ್ದ ಹೊದಿಕೆ ಸಮಗೊಳಿಸಿ;
ಜಾರಿದ ಪಂಚೆ ಹಿಡಿದು ಅಡಿಗೆ ಮನೆಗೆ ಹೋಗುವ ಧಾವಂತವಿಲ್ಲ!
ಮನೆಯ ಎಲ್ಲ ಮೂಲೆ ಮುಂಕಟ್ಟು ಧೂಳ ಕೊಡವಿ;
ಕಸ ಗುಡಿಸಿ ಸಾರಿಸಿ ಒಪ್ಪ ಓರಣಗೊಳಿಸುವ ಅವಸರವಿಲ್ಲ!
ಮನೆಯ ವರಾಂಡಕ್ಕೆಲ್ಲ ನೀರು ಚಿಮುಕಿಸಿ;
ಮಟ್ಟಸವಾಗಿ ರಂಗೋಲಿ ಬಿಡುವ ಚಾಕರಿಯಿಲ್ಲ!
ಮನೆಯಾಕೆ ವಾಕಿಂಗ್ ಹೋಗಿಬರುವ ವೇಳೆಗೆ ಸ್ನಾನದ ಶಾಸ್ತ್ರ ಮಾಡಿ;
ಶುದ್ಧ ಮಡಿಯಲ್ಲಿ ಹಬೆಯಾಡೋ ಕಾಫಿ ಕೊಡುವ ಗೋಜಿಲ್ಲ!
ಸುಲಭ…
ಗಂಡಸಾಗಿ ಕವಿತೆ ಬರೆಯುವುದು!!
ಮಕ್ಕಳು, ಅತ್ತೆ ಮಾವರ ಕೂಗು, ತಂಟೆ ತಟವಟ ಕರೆಕರೆಗಳಿಲ್ಲ;
ಹೂವು, ಹಾಲು, ಪೇಪರ್, ಸೊಪ್ಪು, ತರಕಾರಿಯವರ ಕಿರಿಕಿರಿಗಳಿಲ್ಲ;
ಹಿತ್ತಲಿನ ಹಸುಕರುಗಳ ಗಂಜಳ ಬಳಿದಾಕಿ ಮೇವು ಹೊತ್ತಾಕುವ ಕಸುಬಂತೂ ಇಲ್ಲ;

ಹೂ, ಗಿಡ-ಮರಗಳಿಗೆ ನೀರಾಕಿ ನೇರ್ಪುಗೊಳಿಸಿ ಬೆಳೆಸುವ ಅನಿವಾರ್ಯತೆಗಳಿಲ್ಲ;
ನಾದಿನಿ ಮೈದುನರ ಸಲಹಿ ಸಾಕುವ ಹೊಣೆಗಾರಿಕೆಗಳಿಲ್ಲ;
ಬಂಧು ಬಳಗದವರ ಹುಟ್ಟು ನಾಮಕರಣ ಆರತಿ ಮದುವೆ ಬಾಣಂತನ ಗೃಹಪ್ರವೇಶ ಜಾತ್ರೆ ತಾಪತ್ರೆ ಸುಖ-ದುಃಖಗಳ ಭಾಗಿದಾರರಾಗಬೇಕಿಲ್ಲ;
ದೂರು ದುಮ್ಮಾನ ಸಾವು ಸಮಾಧಿಗಳಿಗೆ ದಿನ ವಾರವಿಡೀ ತಲೆಹಿಡಿದು ಕೂರಬೇಕಿಲ್ಲ;
ಎಲ್ಲಕ್ಕಿಂತ ಹೆಚ್ಚಾಗಿ…
ತಿಂಗಳಿಗೆ ಆ ಮೂರುದಿನಗಳ ನೋವು ಮುಲುಕಾಟಗಳ ಗುದ್ದಾಟ ಹೊಯ್ದಾಟಗಳಿಲ್ಲ;
ಸುಲಭ…
ಗಂಡಸಾಗಿ ಕವಿತೆ ಬರೆಯುವುದು!!
ನಾ ಗಂಡಸು;
ಸದ್ಯ ಕವಿತೆ ಬರೆಯುತ್ತಿದ್ದೇನೆ!
ಒಂದಿಷ್ಟು ಬದುಕಿನ ಕತೆಗಳ ಜೊತೆಗೆ;
ಬರೆವ ಹೆಮ್ಮೆಯನ್ನೆಲ್ಲ ಮನೆಯಾಕೆಗೆ ಹೊರಿಸುತ್ತಿದ್ದೇನೆ!
ಅವರು ಬರೆವ ಪ್ರತಿಭೆ, ಸಾಮರ್ಥ್ಯ, ಕೌಶಲಗಳಿದ್ದರೂ…
ನಾ ಬರೆಯುತ್ತಿದ್ದೇನೆ;
ಅಲ್ಲಲ್ಲ….
ಅವರೇ ಬರೆಸುತ್ತಿದ್ದಾರೆ!
ನಾ ಗಂಡಸಾಗಿರುವುದಕ್ಕೆ!!
ಅವರು…
ಹೆಂಗರುಳಿನ ಹೆಂಗಸಾಗಿರುವುದಕ್ಕೆ!!!
ಗಂಡಸರ ಕವಿತೆಗಳೆಲ್ಲವು;
ಹೆಂಗಸರ ಅನವರತ ಶ್ರಮದ ಬೆವರ ಘಮಗಳು!
ಗಂಡಸರ ಕವಿತೆಗಳೆಲ್ಲವು;
ಹೆಂಗಸರ ಕನಸು ಕನವರಿಕೆ ಬಯಕೆ ನಿಟ್ಟುಸಿರುಗಳ ಪ್ರತಿಫಲನಗಳು!
ಗಂಡಸರ ಕವಿತೆಗಳೆಲ್ಲವು;
ಹೆಂಗಸರ ಸಮಯ ಸಾಮರ್ಥ್ಯ ಆರೋಗ್ಯ ಆಯಸ್ಸಿನ ಗುರುತುಗಳು!
ಗಂಡಸರ ಕವಿತೆಗಳೆಲ್ಲವು;
ಹೆಂಗಸರ ಸಹನೆ ಸಮಾಧಾನ ಸ್ವಾಭಿಮಾನ ಘನ ಕೀರ್ತಿಯ ಶ್ರೇಷ್ಠತೆಗಳು!!!
ಗಂಡಸಾಗಿ….
ಕವಿತೆ ಬರೆಯುವುದು ಭಾರಿ ಸುಲಭ!!

‍ಲೇಖಕರು avadhi

2 November, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading