ಗಂಡನೇ ಮಾಡಿದ ಈ ಅತ್ಯಾಚಾರಕ್ಕೆ ಕಾರಣರಾರು?!
ಮೋಹನ್ ವಿ ಕೊಳ್ಳೇಗಾಲ
ಬೆಂಗಳೂರಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ಓದುತ್ತಿರುವ ನಮ್ಮ ಸಂಬಂಧಿ ಹೆಣ್ಣು ಮಗಳೊಬ್ಬಳು ಆಗಾಗ ಊರಿಗೆ ಬರುತ್ತಾಳೆ. ಮನೆಗೆ ಬಂದೊಡನೆಯೇ ತೊಟ್ಟಿಯಲ್ಲಿರುವ ನೀರೆಲ್ಲ ಖಾಲಿಯಾಗುವವರೆವಿಗೂ ಸ್ನಾನ ಮಾಡುತ್ತಾಳೆ, ಮತ್ತೊಮ್ಮೆ ನಾನು ಬಸ್ಸಿನಲ್ಲಿ ಪ್ರಯಾಣಿಸುವುದಿಲ್ಲವೆಂದು ಹಠ ಹಿಡಿಯುತ್ತಾಳೆ. ತುಂಬಾ ಸೌಮ್ಯ ಸ್ವಭಾವದ, ಬೀದಿಯಲ್ಲಿ ತಲೆಯೆತ್ತಿ ನಡೆಯಲೂ ಹೆದರುವ ಆಕೆಗೆ ಅನೇಕ ಬಾರಿ ಬಸ್ಸಿನಲ್ಲಿ ಅವಳ ಪಕ್ಕ ಕುಳಿತುಕೊಳ್ಳುವ ಗಂಡಸರಿಂದ ತೊಂದರೆ ಇದ್ದದ್ದೆ. ಅವಳ ದುರದೃಷ್ಟಕ್ಕೆ ಅಕ್ಕ ತಂಗಿಯರ ಜೊತೆ ಹುಟ್ಟದಿದ್ದವರೇ ಅವಳ ಪಕ್ಕದಲ್ಲಿ ಕುಳಿತುಕೊಳ್ಳುವರೋ ಏನೋ? ಮೈ ಕೈ ತಾಗಿಸುವುದು, ತೋಳಿನಿಂದ ತೋಳನ್ನು ಉಜ್ಜುವುದು, ನಿದ್ದೆ ಮಾಡುವ ನೆಪದಲ್ಲಿ ಮೇಲೆ ಬೀಳುವುದು, ಕಿಟಕಿಯ ಮೂಲಕ ಏನನ್ನೋ ನೋಡುವಂತೆ ಮಾಡಿ ಆಕೆಯ ದೇಹದ ಮೇಲೆ ಕಣ್ಣಿಡುವುದು. ಚೆ! ಆ ಹೆಣ್ಣು ಮಗಳ ಆ ಸಮಯದ ಮಾನಸಿಕ ಕಿರಿಕಿರಿಯನ್ನು ವಿವರಿಸಲು ಸಾಧ್ಯವಾಗುವುದಿಲ್ಲ. ಈ ತೊಂದರೆ ಅನುಭವಿಸುವ ಅನೇಕ ಹೆಣ್ಣುಮಕ್ಕಳ ಪ್ರತಿನಿಧಿಯಾಗಿ ಈಕೆ ನಿಲ್ಲುತ್ತಾಳೆ. ಹೆಣ್ಣೆಂಬುವವಳು ಗಂಡಿನಷ್ಟೇ ಸಬಲಳು ಎಂಬ ಕಾಗದದ ಮೇಲಿನ ಮಾತನ್ನು ಯಾರೂ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ, ಬದಲಾಗಿ ಆಕೆ ಸಬಲಳಾಗಲು ಪ್ರಯತ್ನಿಸುತ್ತಿದ್ದಾಳೆ ಎಂದಷ್ಟೇ ಹೇಳಬಹುದು. ಸಾಮಾಜಿಕ ದಾರ್ಷ್ಯ ಆಕೆಯನ್ನು ಇನ್ನೂ ಕೂಡ ಬೆಳಕು ಮರೆಯಾದಂತೆ ಹೊಸ್ತಿಲಿನ ಹೊರಗೆ ಧೈರ್ಯವಾಗಿ ಹೆಜ್ಜೆ ಇಡಲು ಬಿಟ್ಟಿಲ್ಲ, ನಿರ್ಜನವಾದ ಪ್ರದೇಶದ ಮೂಲಕ ಆಕೆ ಹೊಟ್ಟೆ ಪಾಡಿಗೆ ಕಟ್ಟಿಗೆಯನ್ನು ಹೊತ್ತುಕೊಂಡು ಬರಲಾರಳು. ಗರ್ಭಿಣಿಯಾದರೂ ಆಕೆಯನ್ನು ಹೊತ್ತುಕೊಂಡು ಹೋಗಿ ಅತ್ಯಾಚಾರ ಮಾಡಿ ನಂತರ ಕೊಲೆ ಮಾಡುವಷ್ಟು ಅತಿ ತುಚ್ಛ ವಿಕೃತ ಮನಸ್ಥಿತಿಯವರು ಇಲ್ಲೆಲ್ಲಾ ತುಂಬಿಕೊಂಡಿದ್ದಾರೆ.
ಎಳೆ ವಯಸ್ಸಿನ ಮಕ್ಕಳಿನ ಮೇಲಿನ ಅತ್ಯಾಚಾರಗಳು, ದೆಹಲಿ ಗ್ಯಾಂಗ್ ರೇಪ್, ನಿನ್ನೆ ಗುಲ್ಬರ್ಗಾದಲ್ಲಿ ನಡೆದ 11 ವರ್ಷದ ಬಾಲಕಿ ಮೇಲಿನ ಅತ್ಯಾಚಾರ, ಗರ್ಭಿಣಿ ಮೇಲಿನ ಗ್ಯಾಂಗ್ ರೇಪ್, ಜೊತೆಗೆ ಹೇಳಿಕೊಳ್ಳಲಾಗದೇ ಇರುವ ಘಟನೆಗಳು, ಮರ್ಯಾದೆ, ಭಯಕ್ಕೆ ಹೆದರಿ ಸಮಾಧಿಯಾದ ಎಷ್ಟೋ ವಿಚಾರಗಳು, ಬೆಳಕಿಗೆ ಬರದೆ ಕತ್ತಲಿನಲ್ಲಿಯೇ ತೆವಳುತ್ತಿರುವ ಅನೇಕ ವ್ಯಭಿಚಾರಗಳಿಗೆ ಪುರುಷರೇ ಹೆಚ್ಚು ಕಾರಣವಾಗಿರಬಹುದು, ಆದರೆ ಎಲ್ಲಾ ಪುರುಷರೂ ಅತ್ಯಾಚಾರಿಗಳಲ್ಲವೆಂಬುದು ಎಲ್ಲರಿಗೂ ಗೊತ್ತಿರುವ, ಸಾಮಾನ್ಯವಾಗಿ ಎಲ್ಲಾ ಲೇಖನಗಳಲ್ಲಿಯೂ ಕಂಡು ಬರುವ, ಯಾರೂ ಅನ್ಯಥಾ ಭಾವಿಸದ ವಿಚಾರ. ‘ಅತ್ಯಾಚಾರ ಮಾಡಿದವನು ಪುರುಷ’ ಎನ್ನುವ ಮಾತು ‘ಪುರುಷ ಅತ್ಯಾಚಾರ ಮಾಡುತ್ತಾನೆ’ ಎಂಬುದಕ್ಕೆ ಎಂದೂ ಸಮವಾಗುವುದಿಲ್ಲ.
ಅಸಲಿಯಾಗಿ ಅತ್ಯಾಚಾರವೆಂದರೇನು? ‘ಹಿಂಸೆ, ಅನೀತಿ, ದುರಾಚಾರ’ ಎಂಬ ನಿಘಂಟಿನ ಅರ್ಥವನ್ನು ವಿಸ್ತರಿಸಿ ನೋಡಿದಾಗ, ಅತ್ಯಾಚಾರವೆಂದರೆ ‘ಒಂದು ಜೀವಿ ತನ್ನ ಕಾಮತೃಷೆಯನ್ನು ಮತ್ತೊಂದು ಜೀವಿಯ ಮೂಲಕ ಬಲವಂತವಾಗಿ ಅಥವಾ ಹಿಂಸೆಯ ಮಾರ್ಗದ ಮೂಲಕ ತೀರಿಸಿಕೊಳ್ಳುವುದು’ ಎಂದಷ್ಟೇ ಯೋಚಿಸಬೇಕೇ? ಅಥವಾ ಇನ್ನೂ ವಿಸ್ತರಿಸಿಕೊಳ್ಳಬೇಕೆ? ಒಂದು ಅತ್ಯಾಚಾರದ ಘಟನೆಯಲ್ಲಿ ‘ಅತ್ಯಾಚಾರಿ’ಗಳ ಪಾತ್ರ ಹೊರತು ಇತರರ ಭಾಗವಹಿಸುವಿಕೆ ಇರುವುದಿಲ್ಲವೇ? 2010 ರಲ್ಲಿ ನನ್ನ ಗೆಳತಿಯ ಮದುವೆಗೆ ಹೋಗಿದ್ದೆ. ನೂರು ಜಾತಿಗಳ ತವರಾಗಿರುವ ನಮ್ಮ ದೇಶದಲ್ಲಿ ಮದುವೆ ಎಂಬುದು ಒಂದು ಸಾಂಪ್ರದಾಯಿಕ ಆಚರಣೆ. ಆದರೆ ಮನಸ್ಸುಗಳು ಒಪ್ಪಿಕೊಂಡು ಅಪ್ಪಿಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ತೀರ ಅಪರೂಪ. ಎಲ್ಲಾ ಮದುವೆಯಂತೆ ಅಲ್ಲೂ ಕೂಡ ಅದೇ ಸಂಭ್ರಮವಿತ್ತು, ಒಳ ಬೇಗೆ, ಸಾಲ, ಕಷ್ಟ ಕಾರ್ಪಣ್ಯಗಳೆಷ್ಟೇ ಇರಲಿ ಮದುವೆ ನಡೆಸಿಕೊಡುವವರು ನಗುತ್ತಿದ್ದರು.
ಇಷ್ಟೆಲ್ಲಾ ಸಂಭ್ರಮಗಳ ನಡುವೆಯೂ ಹುಡುಗಿಯ ಸುಂದರ ಮೊಗವನ್ನು ಕುರೂಪಗೊಳಿಸಿದ, ಮದುವೆಯೆಂಬ ಅಪರೂಪದ ಕ್ಷಣವನ್ನು ತುಂಬಿಕೊಳ್ಳಲಾಗದ ಒಂದು ನೋವಿತ್ತು. ‘ದೊಡ್ಡವರೆನಿಸಿಕೊಂಡವರ’ ಏಕಮಾತ್ರದ ಬಲವಂತಕ್ಕೆ ಆಕೆ ಆ ಮದುವೆ ಮಂಟಪದವರೆವಿಗೂ ಕಾಲಿಟ್ಟಿದ್ದಳು. ಮೂರ್ನಾಲ್ಕು ಬಾರಿ ಆಕೆ ಆತ್ಮಹತ್ಯೆಗೆ ಪ್ರಯತ್ನಿಸಿದರೂ ಫಲಕಾರಿ(?)ಯಾಗದೆ ಸೋತಿದ್ದಳು ಕೂಡ. ಅವಳಿಷ್ಟ ಪಟ್ಟಿದ್ದ, ಆಕೆ ತುಂಬಾ ಹಚ್ಚಿಕೊಂಡಿದ್ದ, ಬಾಲ್ಯಕಾಲದಿಂದಲೂ ಒಟ್ಟಿಗೆ ಬೆಳೆದ ಹುಡುಗನೊಂದಿಗೆ ಮದುವೆ ನೆರವೇರಿಸಲು ಮನೆಯವರು ಒಪ್ಪಲಿಲ್ಲ. ಆಕೆ ಹಗ್ಗಕ್ಕೆ ಕೊರಳು ಒಡ್ಡಿದಾಗಲೂ ಅಲ್ಲಿ ಆಕೆಯ ಇಚ್ಛಾಶಕ್ತಿಗನುಸಾರವಾಗಿ ತಾಳಿಯ ಮುದ್ರೆ ಬೀಳಲಿಲ್ಲ. ಅಲ್ಲಿ ಕಾರಣವಾಗಿ ಉದ್ಭವಿಸಿದ್ದು ಅದೇ ಪರಮ ನೀಚ ಜಾತಿವ್ಯವಸ್ಥೆ. ಅನ್ಯ ಜಾತಿಯೆಂಬ ಕಾರಣವಲ್ಲದೇ, ಆ ಮನೆಯ ದೇವರಿಗೂ, ಈ ಮನೆಯ ದೇವರಿಗೂ ಯಾವುದೇ ಕಾರಣಕ್ಕೂ ಕೂಡಿಬರುವುದಿಲ್ಲವೆಂಬ ಮತ್ತೊಂದು ಬಾಲಿಶ ಕಾರಣದಿಂದ ಆ ಸಂಬಂಧದ ಬಗ್ಗೆ ಯೋಚಿಸಲಿಲ್ಲ, ಜೊತೆಗೆ ಪ್ರೀತಿ ಮಾಡುವುದು, ಜೀವನದ ಕೊನೆವರೆವಿಗೂ ತಮ್ಮ ಜೊತೆಯಿರಲು ಒಂದು ವ್ಯಕ್ತಿತ್ವವನ್ನು ಆಯ್ಕೆ ಮಾಡಿಕೊಳ್ಳುವುದು ಈ ಪ್ರಪಂಚದ ಮಹಾನ್ ಪಾಪವೆಂಬಂತೆ ಬಿಂಬಿಸಿ ಆ ಹುಡುಗನನ್ನು ಹುಡುಕಿ ಹುಡುಕಿ ಹೊಡೆದು ಬಂದಿದ್ದರು. ಏನೋ ಸಾಧಿಸಿದವರಂತೆ ಮದುವೆ ಮಂಟಪದಲ್ಲಿ ಓಡಾಡಿಕೊಂಡಿದ್ದ ಹುಡುಗಿಯ ಹೆತ್ತವರು ತಾಳಿ ಕಟ್ಟುವ ಹುಡುಗನಿಗೂ ಆ ಮನೆಯವರಿಗೂ ಈ ವಿಚಾರವನ್ನು ಮುಟ್ಟಿಸಿರಲಿಲ್ಲ. ಹುಡುಗನ ಮನೆಯವರ ವಾಸ್ತವ್ಯ ಹೊರರಾಜ್ಯವೆಂಬುದೊಂದು ಭಂಡ ಧೈರ್ಯವಿತ್ತು ಅವರಲ್ಲಿ.
ಈ ಮದುವೆ ಏನೋ ಮುಗಿಯಿತು. ತಾಳಿಯೊಂದನ್ನು ಕಟ್ಟಿಕೊಳ್ಳಲಿ ಎಂದು ಆಕೆಯೂ ಸುಮ್ಮನಿದ್ದಂತಾಯಿತು. ನಂತರದ ದಿನಗಳಲ್ಲಿ ಹುಡುಗಿ ಹುಡುಗನ ಹಾಸಿಗೆ ಸೇರಲಿಲ್ಲ. ಆತ ಈಕೆಯನ್ನು ಮುಟ್ಟಿದರೆ ಬೆಂಕಿ ಸುಟ್ಟುಕೊಳ್ಳುವಂತೆ ಆಡುತ್ತಿದ್ದಳು. ಏನೂ ಅರಿಯದ ಆತ ಪ್ರಾರಂಭದಲ್ಲಿ ಇದು ‘ಪ್ರಾರಂಭ ಸಹಜ ಭಯ’ ವೆಂದುಕೊಂಡರೂ ನಂತರದ ದಿನಗಳಲ್ಲಿ ಅವಳನ್ನು ಮನಶಾಸ್ತ್ರಜ್ಞರ ಬಳಿಗೆ ಕರೆದುಕೊಂಡುಹೋಗುವಂತೆ ಆಯಿತು. ಆದರೂ ಆಕೆ ಆತನ ಹಾಸಿಗೆ ಹತ್ತಲಿಲ್ಲ. ದೇವರು ದಿಂಡರು ಎಂದು ಸುತ್ತಾಡಿದ್ದಾಯಿತು. ಮದುವೆ ಮುಂಚಿನ ಸಂಬಂಧ, ಪ್ರೇಮ, ಆತನ ನೆನಪು, ಸುತ್ತಾಟ, ಮಾತುಕತೆ ಭರವಸೆಗಳು ಆಕೆಯನ್ನು ಕಟ್ಟಿಹಾಕಿರಬಹುದು. ಈ ಎಲ್ಲಾ ಘಟನೆಗಳಿಂದ ಬೇಸತ್ತ ಹುಡುಗ ಕೊನೆಗೊಂದು ದಿನ ಕಂಠಪೂರ್ತಿ ಕುಡಿದುಬಂದವನು ಅವಳನ್ನು ಬಲವಂತವಾಗಿ ಎಳೆದು ಅತ್ಯಾಚಾರ ಮಾಡಿಯೇಬಿಟ್ಟ. ಲೈಂಗಿಕ ಕ್ರಿಯೆಗೆ ಆಕೆಯ ಕಿಂಚಿತ್ತೂ ಒಪ್ಪಿಗೆಯಿಲ್ಲದಿದ್ದರಿಂದ ತಾತ್ವಿಕವಾಗಿ ಈ ಕ್ರಿಯೆಯನ್ನು ಅತ್ಯಾಚಾರವೆನ್ನಬೇಕಾಗುತ್ತದೆ. ಈ ಘಟನೆಯಾದ ನಾಳೆಯೇ ಆಕೆ ಎಲ್ಲವನ್ನೂ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಳು.
ಎಲ್ಲವನ್ನೂ ಸಹಿಸಿಕೊಂಡಿದ್ದ ಆಕೆ ಕೊನೆಗೆ ಆತ್ಮಹತ್ಯೆವರೆವಿಗೂ ತನ್ನನ್ನು ತಾನು ಕೊಂಡೊಯ್ಯಲು ಕಾರಣವಾದದ್ದು ಆ ಬಲವಂತದ ಕೂಡಿಕೆ, ಅಥವಾ ಬಲವಂತದ ಮದುವೆ. ಇಲ್ಲಿ, ಏನೂ ತಿಳಿಯದ ಹುಡಗನ ತಪ್ಪೇನಿತ್ತು? ಈ ಅತ್ಯಾಚಾರಕ್ಕೆ ಕಾರಣವಾದವರು ಯಾರು? ಮೊನ್ನೆ ಮೊನ್ನೆ ನನ್ನ ಗೆಳೆಯನೊಬ್ಬನಿಗೆ ತಾನು ಪ್ರೀತಿಸಿದವಳು ಒಂದೇ ಜಾತಿಯಾದರೂ ಬೇರೆ ಬೇರೆ ಮನೆಯ ದೇವರು ಎಂಬ ಕಾರಣಕ್ಕೆ ಆಕೆಯನ್ನು ಬಿಟ್ಟು ಬೇರೆಯವಳನ್ನು ಮದುವೆ ಮಾಡಿಕೊಟ್ಟರು. ಇಲ್ಲಿ ಜಾತಿಯ ತೊಂದರೆಯಿಲ್ಲ, ಬೇರೆ ಬೇರೆ ದೇವರೆಂಬ ತೊಡಕು, ಅದು ಕೂಡಿದರೆ ಜಾತಕ ಭವಿಷ್ಯ ಎಂಬ ಇನ್ನೊಂದೇನೋ ತೊಡಕು. ಬಂದ ‘ಬೇರೆಯವಳು’ ಹೊಂದಿಕೊಳ್ಳಲಾಗದೆ ಸೀಮೆಎಣ್ಣೆ ಸುರಿದುಕೊಂಡು ಅರ್ಧಬೆಂದು ಬದುಕುಳಿದಳು. ಮತ್ತೊಂದು ಘಟನೆಯಲ್ಲಿ ಒಂದು ಹುಡುಗಿ ತನ್ನ ಪ್ರಿಯಕರನೊಂದಿಗೆ ತಿಂಗಳುಗಟ್ಟಲೆ ಇದ್ದರೂ ಹುಡುಕಿ ಕರೆತಂದು ಅನ್ಯ ಹುಡುಗನಿಗೆ ಈ ವಿಚಾರ ಮುಟ್ಟಿಸದೇ ಮದುವೆ ಮಾಡಿಕೊಟ್ಟರು. ಮದುವೆಯಾದ ಮೂರು ತಿಂಗಳ ನಂತರ ಈ ವಿಚಾರ ತಿಳಿದುಕೊಂಡವರು ಹುಡುಗನ ಕಡೆಯವರು ಆಕೆಯನ್ನು ತವರಿಗೆ ಓಡಿಸಿದರು. ಹಿರಿಯರು ಮರ್ಯಾದೆ ಉಳಿಸಿಕೊಳ್ಳುವ ನೆಪದಲ್ಲಿ ಈ ಹುಡುಗಿಯನ್ನು ಎರಡು ಕಡೆ ಅತ್ಯಾಚಾರಕ್ಕೆ ಒಳಪಡಿಸಿ ಕೊನೆಗೆ ಗತಿಕೆಟ್ಟಂತೆ ಮಾಡಿದರು ಎಂದು ಹೇಳಿದರೆ ತಪ್ಪಾಗುವುದಿಲ್ಲ ಅಲ್ಲವೇ?
ಮೇಲಿನ ಘಟನೆಯಲ್ಲಿ ‘ಮದುವೆ’ ಎಂಬ ಒಂದೇ ಕಾರಣವನ್ನಿಟ್ಟುಕೊಂಡು ಈ ಘಟನೆಯನ್ನು ಮರೆಯಲು ಸಾಧ್ಯವಿಲ್ಲ, ಅಥವಾ ಸತ್ತವಳ ಜೊತೆ ಅವಳು ಬರೆದಿಟ್ಟ ಪತ್ರವನ್ನು ಸುಟ್ಟುಬಿಡಲಾಗುವುದಿಲ್ಲ. ಆದಿಯಿಂದಲೂ ಮನುಷ್ಯ ಮನುಷ್ಯನ ನಡುವೆ ಎಳೆದ ಗೆರೆಗಳನ್ನು ನೋಡಿಕೊಂಡು ಸುಮ್ಮನೆ ಕೂರಲೂ ಸಾಧ್ಯವಿಲ್ಲ. ಈ ರೀತಿಯ ನೂರಾರು ಘಟನೆಗಳು ಬೀದಿ ಬೀದಿಯಲ್ಲಿ ಹಾಸುಹೊಕ್ಕಾಗಿ ಮಲಗಿವೆ. ಮದುವೆ ಆದವರು, ಆಗದವರು ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ. ಭಯ ಭೀತಿ ಮರ್ಯಾದೆ ಈ ಎಲ್ಲಾ ಘಟನೆಗಳ ಅವಸಾನಕ್ಕೆ ಕಾರಣವಾಗುತ್ತದೆ. ದೆಹಲಿ, ಮುಂಬೈ, ಬೆಂಗಳೂರು, ಚೆನ್ನೈ ಮುಂತಾದ ಪಟ್ಟಣಗಳಲ್ಲಿ ನಡೆಯದ ಕಾರಣವೋ ಏನೋ ಗಾಳಿ ಬೀಸಿದಂತೆ ಬೀಸಿ ಮರೆಯಾಗಿಹೋಗುತ್ತವೆ!







ಮೇಲಿನ ಘಟನೆಯಲ್ಲಿ ‘ಮದುವೆ’ ಎಂಬ ಒಂದೇ ಕಾರಣವನ್ನಿಟ್ಟುಕೊಂಡು ಈ ಘಟನೆಯನ್ನು ಮರೆಯಲು ಸಾಧ್ಯವಿಲ್ಲ, ಅಥವಾ ಸತ್ತವಳ ಜೊತೆ ಅವಳು ಬರೆದಿಟ್ಟ ಪತ್ರವನ್ನು ಸುಟ್ಟುಬಿಡಲಾಗುವುದಿಲ್ಲ. ಆದಿಯಿಂದಲೂ ಮನುಷ್ಯ ಮನುಷ್ಯನ ನಡುವೆ ಎಳೆದ ಗೆರೆಗಳನ್ನು ನೋಡಿಕೊಂಡು ಸುಮ್ಮನೆ ಕೂರಲೂ ಸಾಧ್ಯವಿಲ್ಲ. ಈ ರೀತಿಯ ನೂರಾರು ಘಟನೆಗಳು ಬೀದಿ ಬೀದಿಯಲ್ಲಿ ಹಾಸುಹೊಕ್ಕಾಗಿ ಮಲಗಿವೆ. ಮದುವೆ ಆದವರು, ಆಗದವರು ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ. ಭಯ ಭೀತಿ ಮರ್ಯಾದೆ ಈ ಎಲ್ಲಾ ಘಟನೆಗಳ ಅವಸಾನಕ್ಕೆ ಕಾರಣವಾಗುತ್ತದೆ. ದೆಹಲಿ, ಮುಂಬೈ, ಬೆಂಗಳೂರು, ಚೆನ್ನೈ ಮುಂತಾದ ಪಟ್ಟಣಗಳಲ್ಲಿ ನಡೆಯದ ಕಾರಣವೋ ಏನೋ ಗಾಳಿ ಬೀಸಿದಂತೆ ಬೀಸಿ ಮರೆಯಾಗಿಹೋಗುತ್ತವೆ!
idu appata satya… nooraralli onderadu maatra bayalaaguttive…ulidante ologolage muchhi hoguttive.. avu aatmahatye,saavu,koleyaagi itihaasada patti seribiduttive….
Good Article. Rape is not only the physical threat. After mariage rape is common everywhere and many ladies being the victims are really suffering but unable to shout at it. Rape should not be restricted only to Delhi Gang rape
mmmm… Good article
ಹೆಂಡತಿಯೇ ಆಗಿರಲಿ ಅಥವಾ ಆಕೆ ಲೈಂಗಿಕ ಕಾರ್ಯಕರ್ತೆಯೇ ಆಗಿರಲಿ, ಆಕೆಯ ಮನಸ್ಸಿಗೆ ವಿರುದ್ಧವಾಗಿ ಅದು ನಡೆದರೆ ಅದೂ ಕೂಡ ಬಲಾತ್ಕಾರವೇ!!
mohan avare nimma writings chenaagide & arthagarbhithavaagide,neev helodu sathyaane….sadya nimmantha kelavu “gandasarigaadaru” hennina paristhithi arthaa aagatthalla,great…….