ಗಂಗಾಧರ ಕೊಳಗಿ
ಮಧ್ಯಾಹ್ನ ಮಾಡಿಕೊಂಡಿದ್ದ ಅನ್ನ, ಸಾಂಬಾರ್‌ಗಳನ್ನ ಊಟದ ಟೇಬಲ್ ಮೇಲಿಟ್ಟುಕೊಂಡು ಊಟಕ್ಕೆ ಅಣಿಯಾಗುತ್ತಿರುವಾಗ ವತ್ಸಲಾಳಿಗೆ ಮೊಬೈಲ್ ಕರೆಯೊಂದು ಬಂತು. ಒಂಟಿತನ ಉಂಟುಮಾಡುವ ಖೇದ, ತಳಮಳವನ್ನು ಅನುಭವಿಸುತ್ತ ಎಂದಿನಂತೆ ತುತ್ತು ನುಂಗುವ ಶಾಸ್ತ್ರಕ್ಕೆ ಆಕೆ ಅಣಿಯಾಗುತ್ತಿದ್ದಳು. ಬದುಕಿನ ಘಾಸಿಗಳಿಂದ ಬಹುಪಾಲು ಜೀವನೋತ್ಸಾಹವನ್ನು ಕಳೆದುಕೊಂಡAತಿದ್ದ ಅವಳಲ್ಲಿ ಬದುಕಿನಲ್ಲಿ ಬಂದದ್ದನ್ನ ಎದುರಿಸುವ ಗುರುತು ಮಾಡಲಾಗದ ಒಳ ಛಲವಿತ್ತು. ಗಡಿಬಿಡಿಯಲ್ಲಿ ಏನನ್ನೂ ಮಾಡದ ವತ್ಸಲಾ ಆ ಕರೆ ಯಾರದ್ದೆಂದು ಮೊಬೈಲ್ ಪಟ ನೋಡಿದಾಗ ರಾಮಚಂದ್ರ ನಾಯ್ಕ ಎನ್ನುವ ಕಂಡಿತು.
ಕರೆ ತೆಗೆದುಕೊಂಡದ್ದೇ ಆ ಕಡೆಯಿಂದ ‘ ಅಮ್ಮಾ, ನಾನು ರಾಮಚಂದ್ರ ನಾಯ್ಕರ ಮಗ. ನಿಮ್ಮ ಅಪ್ಪನವರಿಗೆ ಆರೋಗ್ಯ ಸರಿಯಿಲ್ದೆ ಆಸ್ಪತ್ರೆಗೆ ಸೇರಿಸಿದ್ದೇವೆ. ಅಪ್ಪ ನಿಮಗೆ ಪೋನ್ ಮಾಡಿ ಅಂತ ಹೇಳ್ದ. ಅವನೂ ಇಲ್ಲೆ ಆಸ್ಪತ್ರೆಯಲ್ಲೇ ಇದಾನೆ’ ಎಂದವನು ‘ ಅಪ್ಪ ಮಾತಾಡ್ತಾನಂತೆ, ಅವಂಗೆ ಕೊಡ್ತೆ’ ಎಂದ.
ಮರುಕ್ಷಣ ಉಡುಗಿದ ಧ್ವನಿಯಲ್ಲಿ ‘ಮಗಳೇ, ನಿನ್ನ ಅಪ್ಪಾಂಗೆ ಆರಾಮಿಲ್ಲ, ತಾಲೂಕು ಆಸ್ಪತ್ರೆಗೆ ಸೇರಿಸಿದೀವಿ. ಬದುಕೋದು ಕಷ್ಟ ಅಂತಾ ಡಾಕ್ಟರು ಹೇಳ್ತಾರೆ ಅಂತ ಮಗ ಹೇಳ್ದ.ಏನಾರೂ ಆಗ್ಲಿ, ನೀ ಬಾ’ ಎಂದ. ಅದರ ಜೊತೆಗೆ ಸಂಪರ್ಕವೂ ಕಡಿಯಿತು.
ವತ್ಸಲಾ ಊಟದ ಗೋಜನ್ನು ಬಿಟ್ಟು ಸುಮ್ಮನೆ ಕುಳಿತಳು. ದೂರದ ಊರಲ್ಲಿ ಇರುವ ಅಪ್ಪನ ವಿಶ್ವಾಸಿಕ ರಾಮಚಂದ್ರ ನಾಯ್ಕರ ಬಳಿ ಯಾವತ್ತೋ ಕೊಟ್ಟಿದ್ದ ಸಂಪರ್ಕ ಸಂಖ್ಯೆ ಇಂದು ಉಪಯೋಗಕ್ಕೆ ಬಂದಿತ್ತು. ವೃದ್ದಾಪ್ಯದಲ್ಲಿ ಒಂಟಿಯಾಗಿ ಕಾಡ ನಡುವಿನ ಮನೆಯಲ್ಲಿ ಬದುಕಿರುವ ಅಪ್ಪನಿಗೆ ಹತ್ತಿರದವರು ರಾಮಚಂದ್ರ ನಾಯ್ಕರ ಕುಟುಂಬದವರು; ಆಪತ್ಕಾಲಕ್ಕೆ ತಿಳಿಸಿ ಎಂದು ಸಂಪರ್ಕ ಸಂಖ್ಯೆ ಕೊಟ್ಟದ್ದು ಒಳ್ಳೆಯದಾಯಿತು ಅನಿಸಿತು ವತ್ಸಲಳಿಗೆ.
ತಟ್ಟನೇ ಮಗ ವಿಶ್ವಾಸನಿಗೆ ಫೋನ್ ಮಾಡಿ ಎಲ್ಲ ವಿಷಯ ವಿವರಿಸಿ ‘ಇನ್ನೂ ಒಂದು ಅಥವಾ ಎರಡು ತಾಸಿನ ಒಳಗೆ ನಂಬಿಕೆ ಇರುವ ಟಾಕ್ಸಿ ಬೇಕು, ನೀನೂ ಬರಬೇಕು, ತಡವಾಗಿ ಹೊರಟರೂ ಪರವಾಗಿಲ್ಲ’ ಎಂದವಳು ಅಗತ್ಯವಾದ ಬಟ್ಟೆ, ಇತ್ತಿತರ ವಸ್ತುಗಳನ್ನ ದೊಡ್ಡದಾದ ಬ್ಯಾಗ್‌ನಲ್ಲಿ ತುಂಬಿಕೊAಡು, ಅಲ್ಮೇರಾ ತೆಗೆದು ಹಣ ಎಣಿಸಿದಳು. ಸದ್ಯ ಸಾಕಾಗುವಷ್ಟು ಹಣ ಇತ್ತು. ಆ ಹಣವನ್ನ ಮತ್ತು ತನ್ನದಾದ ಡೆಬಿಟ್ ಕಾರ್ಡ, ಆಧಾರ ಕಾರ್ಡ ಮುಂತಾದ ಅಗತ್ಯಗಳನ್ನು ಹೆಗಲ ಚೀಲಕ್ಕೆ ತುಂಬಿಕೊAಡು ಮನೆಯ ವರಾಂಡದಲ್ಲಿ ಸುಮ್ಮನೆ ಕುಳಿತಳು.
ಅಷ್ಟರಲ್ಲಿ ಮತ್ತೆ ವಿಶ್ವಾಸನ ಕರೆ ಬಂತು. ‘ಅಮ್ಮಾ, ಇನ್ನೂ ಸ್ವಲ್ಪದರಲ್ಲೇ ಟಾಕ್ಸಿ ಬರುತ್ತದೆ. ನನಗೆ ಗೊತ್ತಿರುವ ನಂಬಿಕೆಯ ಹುಡುಗ. ವಿಷಯವೆಲ್ಲ ಹೇಳಿದ್ದೇನೆ. ಭಯ ಬೇಡ. ನೀನು ಹೊರಟು ಬಿಡು. ನಾನು ಕೈಗೆತ್ತಿಕೊಂಡ ಕೆಲಸ ಮುಗಿಸಿ ಇನ್ನೆರಡು ಗಂಟೆಯಲ್ಲಿ ಹೊರಡುತ್ತೇನೆ. ಬಾಸ್ ಜೊತೆ ಮಾತನಾಡಿ ರಜೆ ಹಾಕಿದ್ದೇನೆ’ ಎನ್ನುತ್ತಿದ್ದಂತೇ ಮನೆಯ ಮುಂದೆ ವಾಹನ ಬಂದು ನಿಂತು, ಡ್ರೆöÊವರ್ ಬಂದು ವತ್ಸಲಳೊಂದಿಗೆ ಮಾತನಾಡುತ್ತಲೇ ಲಗೇಜ್‌ಗಳನ್ನ ಡಿಕ್ಕಿಗೆ ತುಂಬಿದ.
ಸಾಕಷ್ಟು ವೇಗವಾಗಿಯೇ ಸಾಗುತ್ತಿದ್ದ ಟಾಕ್ಸಿ ಊರಿನ ಅಂತರವನ್ನು ಕ್ರಮಿಸಿ ಹತ್ತಿರವಾಗುತ್ತಿದ್ದರೂ ರಾತ್ರಿಯೂ ವಿಸ್ತರಿಸುತ್ತಿರುವಂತೆ ವತ್ಸಲಾಳಿಗೆ ಅನ್ನಿಸಿತು. ಮನಸ್ಸಿನಲ್ಲಿ ಹಳೆಯ ನೆನಪುಗಳ ಜ್ವಾಲೆ, ಎದೆಯಲ್ಲಿ ಆಂದೋಳನ, ಹೊಟ್ಟೆಯಲ್ಲಿ ಸಂಕಟ ಅವಳನ್ನು ಸುಸ್ತಾಗಿಸುತ್ತಿತ್ತು. ಅದರ ನಡುವೆ ಬಾಲ್ಯದ ನೆನಪುಗಳು, ಅಪ್ಪ,ಅಮ್ಮನ ಜೊತೆಗಿನ ಅಕ್ಕರೆಯ,ಪ್ರೀತಿಯ ದಿನಗಳ ನೆನಪು ಆ ಉರಿಯನ್ನು ತಂಪಾಗಿಸುತ್ತಿತ್ತು. ಕಣ್ಣು ಮುಚ್ಚಿ ಒರಗಿಕೂತವಳಲ್ಲಿ ಬುದ್ದಿ ತಿಳಿದಾಗಿನಿಂದ ಈವರೆಗಿನ ಸ್ವಂತ ಬದುಕಿನ ನೆನಪಿನ ಪುಟಗಳು ಬೇಡಬೇಡವೆಂದರೂ ಮಗುಚಿಕೊಳ್ಳುತ್ತಿದ್ದವು.
ಕಾಡ ನಡುವಿನ ಊರಿನ ಮಂಜಯ್ಯ ತಮ್ಮ ಅವಿಭಕ್ತ ಕುಟುಂಬದ ಹಿರಿಯನಿಂದ ಮೋಸಕ್ಕೆ ಒಳಗಾಗಿ ತನ್ನ ಪಾಲೆಂದು ನೀಡಿದ ಅರೆ ಬರೆ ಕೃಷಿ ಮಾಡಿದ ಜಮೀನಿಗೆ ನಾಲ್ಕಾರು ಪಾತ್ರೆ,ಪರಡಿ, ನಾಲ್ಕು ಕಂಬಳಿ, ಒಂದಿಷ್ಟು ಬಟ್ಟೆಬರೆ ಹೊತ್ತುಕೊಂಡು ಬಂದವರು. ಮಡದಿ ಗೌರಮ್ಮ ಕೂಡ ತಮಗಾದ ವಂಚನೆಗೆ ಒಳಗೊಳಗೆ ಮರಗುತ್ತ, ಹೊರಗೇನೂ ತೋರಿಸಿಕೊಳ್ಳದೇ ಗಂಡನ ಹಿಂದೆ ಹೆಜ್ಜೆ ಹಾಕಿದ್ದರು. ಕೂಲಿಯ ಆಳಿಗಿಂತ ಕಡೆಯಾಗಿ ಕಂಡರೂ ನಿಷ್ಠೆಯಿಂದ ಕುಟುಂಬದ ಜಮೀನಿನಲ್ಲಿ ದುಡಿದಿದ್ದ ಮಂಜಯ್ಯನವರಿಗೆ ಕಾಡು ಪ್ರಾಣಿಗಳು ಬಿಟ್ಟರೆ ಹತ್ತಾರು ಚೀಲ ಭತ್ತ ಬೆಳೆಯುವ ಕಾಡಿನ ಕಣಿವೆಯ ಜಮೀನು ಪ್ರಾಪ್ತವಾಗಿತ್ತು. ಸಂಕೋಚ ಸ್ವಭಾವದ, ಹಿರಿಯರಿಗೆ ಎದುರು ಹೇಳದ ಆದರ್ಶದ ಮಂಜಯ್ಯ ತನಗೆ ದೊರಕಿದ್ದು ಪಂಚಾಮೃತ ಎಂದುಕೊAಡೇ ಆ ಜಮೀನಿನಲ್ಲಿ ಬದುಕು ಕಟ್ಟಿಕೊಂಡಿದ್ದರು. ಪುಟ್ಟ ಗುಡಿಸಲಿನಂಥ ಮನೆಯಲ್ಲಿದ್ದು, ಜಮೀನಿನ ಕೃಷಿ ಮಾಡುತ್ತ, ಕಡಿದಷ್ಟೂ ಚಿಗುರುವ ಕಾಡಸಸ್ಯ,ಬಳ್ಳಿಗಳ ಜೊತೆ ಗುದ್ದಾಡುತ್ತ, ಆ ನೆಲವನ್ನು ಹಸನುಗೊಳಿಸುತ್ತ ಕಾಡ ನಡುವಿನ ಊರಿನಲ್ಲಿ ಓರ್ವ ಅಣ್ಣ ಹಾಗೂ ತಮ್ಮ, ನಡುವಿನವಳಾದ ತನ್ನನ್ನ ಪೋಷಿಸಿ, ಬೆಳೆಸಿದರು ಎನ್ನುವದನ್ನು ವತ್ಸಲಾ ನೆನಪಿಸಿಕೊಂಡಳು.
ತನಗಿಂತ ಸಾಕಷ್ಟು ದೊಡ್ಡವನಾದ ಅಣ್ಣ ನರಸಿಂಹನನ್ನು ಕೃಷಿಗೆ ತರಬೇತುಗೊಳಿಸಿದ ಅಪ್ಪ ತನ್ನನ್ನ, ತಮ್ಮ ಭಾರ್ಗವನನ್ನು ಅದೆಷ್ಟು ಕಷ್ಟವಾದರೂ ಊಟ,ವಸತಿಯ ಲೆಕ್ಕದಲ್ಲಿ ಅಡಕೆ, ಬಾಳೆ ಕೊಟ್ಟು ಹಂಗನ್ನ ಹೇರಿಕೊಳ್ಳದೇ ಶಾಲೆ,ಕಾಲೇಜು ಹತ್ತಿರವಿದ್ದ ನೆಂಟರ ಮನೆಯಲ್ಲಿಟ್ಟು ಓದಿಸಿದ. ಅಪ್ಪ ಶನಿವಾರ ಸಂಜೆ ಹಾಜರಾಗಿ ಇಬ್ಬರನ್ನೂ ಕರೆದುಕೊಂಡು ಕಾಲ್ನಡಿಗೆಯಲ್ಲಿ ಹತ್ತಾರು ಮೈಲಿ ದೂರದ ಮನೆಗೆ ಕರೆತಂದು ವಾಪಸ್ ಸೋಮವಾರ ನಸುಕಿನಲ್ಲೇ ಮತ್ತೆ ಕರೆತಂದು ನೆಂಟರಮನೆಯಲ್ಲಿ ಬಿಡುತ್ತಿದ್ದ. ವಾರದ ಪ್ರೀತಿಯನ್ನೆಲ್ಲ ಆ ಭಾನುವಾರ ಅಪ್ಪ,ಅಮ್ಮ ಧಾರೆಯೆರೆದುಬಿಡುತ್ತಿದ್ದರು. ನಡುವೆ ಹಬ್ಬ ಬಂದಾಗ ಅದನ್ನು ಮುಗಿಸಿ ವಾಪಸ್ ಬಿಡುವಾಗ ಅಪ್ಪ,ಅಮ್ಮ ಕಣ್ಣೀರಿಡುತ್ತಲೇ ಕಳಿಸುವದು. ಮನೆಯಲ್ಲಿದ್ದು ದಿನಾ ಪ್ರೀತಿ ಪಡೆಯುವ ನರಸಿಂಹ ವಾರಕ್ಕೊಮ್ಮೆ ತಂಗಿ,ತಮ್ಮನಿಗೆ ದೊರೆಯುವ ಆತಿಥ್ಯಕ್ಕೆ ಸಿಡುಕುತ್ತಿದ್ದ. ಅಪ್ಪ,ಅಮ್ಮನ ನಿತ್ಯದ ಬದುಕು ಕಟ್ಟಿಕೊಳ್ಳುವ ಕಷ್ಟ, ತೋಟ,ಗದ್ದೆಗಳಲ್ಲಿ ಸ್ವತ: ದುಡಿಯಬೇಕಾದ ಸ್ಥಿತಿ ಇವೆಲ್ಲ ವತ್ಸಲಾಳ ಹುಡುಗುಬುದ್ದಿಗೆ ಅರಿವಾಗುತ್ತಿತ್ತು. ಮನೆಗೆ ಬಂದಾಗೆಲ್ಲ ಹಗಲೀಡಿ ಅಪ್ಪನನ್ನ ಹೊಸೆಯುತ್ತ, ರಾತ್ರಿ ಅವನ ಹೊಚ್ಚಿಗೆಯೊಳಗೆ ಮಲಗಿಕೊಳ್ಳುತ್ತಿದ್ದ ವತ್ಸಲಾಳಿಗೆ ಆಗ ಅಪ್ಪನಿಂದ ದೊರೆಯುತ್ತಿದ್ದ ಭದ್ರತೆಯ, ವಿಶ್ವಾಸದ ಸ್ಪರ್ಶ ಈಗಲೂ ಆದಂತೆನ್ನಿಸಿ ಆ ಕ್ಷಣ ಹುರುಪುಗೊಂಡಳು.
ಮಂಜಯ್ಯ ತಮ್ಮ ಅವಿಭಕ್ತ ಕುಟುಂಬದ ಹಿರಿಯನಿಂದ ಮೋಸಕ್ಕೆ ಒಳಗಾಗಿ ಈ ನೆಲದಲ್ಲಿ ಹೊಸ ಬದುಕು ಕಟ್ಟಿದ ಕಥೆಯನ್ನು ಹೇಳುವಾಗೆಲ್ಲ ಮಡದಿ ಗೌರಮ್ಮ ‘ಆ ಹರಿಕಥೆಯೆಲ್ಲ ಯಾಕೆ ಮಕ್ಕಳ ಬಳಿ ಹೇಳೋದು? ಅವರ ಮನಸು ಹಾಳು ಮಾಡೋದಕ್ಕಾ?’ ಎಂದು ಸಣ್ಣದಾಗಿ ಗದರಿದರೂ ಕೆಲವೊಮ್ಮೆ ಮನಸ್ಸು ಭಾರವಾದಾಗ ಗೌರಮ್ಮನೂ ಮಕ್ಕಳಲ್ಲಿ ತೋಡಿಕೊಳ್ಳುತ್ತಿದ್ದರು. ತಮಗಾದ ವಂಚನೆಗೆ ಒಳಗೆ ಮರುಗುತ್ತ, ಹೊರಗೆ ನಿರ್ಲೀಪ್ತವಾಗಿ ಗಂಡನ ಹಿಂದೆ ಹೆಜ್ಜೆ ಹಾಕಿದ್ದ ಗೌರಮ್ಮನ ಒಳ ಅಳಲು ಮಂಜಯ್ಯನವರಿಗೆ ಗೊತ್ತಿತ್ತು.
ಅಷ್ಟರಲ್ಲಾಗಲೇ ಪದವಿ ಮುಗಿಸಿದ ವರ್ಷದಲ್ಲೇ ತಾವಾಗಿ ಕೇಳಿಬಂದ ನೆಂಟಸ್ತನಕ್ಕೆ ಒಪ್ಪಿ ವತ್ಸಲಾಳ ಮದುವೆಯಾಗಿತ್ತು. ಆ ಮೊದಲೇ ಅಣ್ಣ ನರಸಿಂಹ ಮದುವೆಯಾಗಿ ಎರಡು ಮಕ್ಕಳ ತಂದೆಯಾಗಿದ್ದ. ಆ ಹೊತ್ತಿಗಾಗಲೇ ಆಸ್ತಿಯೆಲ್ಲ ತಮ್ಮ ಹೆಸರಲ್ಲಿದ್ದರೂ ಯಜಮಾನಿಕೆಯನ್ನ ಅಪ್ಪ ನರಸಿಂಹನಿಗೆ ವರ್ಗಾಯಿಸಿದ್ದರು. ಬ್ಯಾಂಕೊಂದರಲ್ಲಿ ಅಕೌಂಟೆಂಟ್ ಆಗಿದ್ದ ಗಂಡನೊಟ್ಟಿಗೆ ಶಹರದಲ್ಲಿ ವತ್ಸಲಾಳ ಬದುಕು ಆರಂಭಗೊಂಡಿತ್ತು.
ಅದು ನೆನಪಿಗೆ ಬಂದದ್ದೇ ವತ್ಸಲಾ ದಡಕ್ಕನೇ ನೇರ ಕುಳಿತಳು. ಅವಳ ಚಲನೆಯನ್ನು ಗಮನಿಸಿದ ಡ್ರೈವರ್ ‘ ಅಮ್ಮ, ಗಾಡಿ ನಿಲ್ಲಿಸ್ಬೇಕಾ?’ ಅಂದ. ಸ್ವಪ್ನದಿಂದ ದುಸ್ವಪ್ನಕ್ಕೆ ಜಾರಿಕೊಂಡ ವಿಲಕ್ಷಣ ಅನುಭವ ಅವಳನ್ನು ನಿತ್ರಾಣಗೊಳಿಸಿತ್ತು. ‘ಹಂ, ಏನಿಲ್ಲ’ ಎಂದು ತಡಕಾಡಿ ಚೀಲದಲ್ಲಿದ್ದ ನೀರಿನ ಬಾಟಲ್ ತೆರೆದು ಕುಡಿದಳು.
ಸ್ವಲ್ಪ ಚೇತರಿಕೆ ಕಂಡ ನಂತರ ನಿರ್ಧರಿಸಿದಳು; ಮತ್ತೆ ಮನಸ್ಸಿನ ಕುದುರೆಯ ಹಿಂದಕ್ಕೆ ಓಡುವದು ಬೇಡ. ಭೂತ ಬೇಕು, ಬದುಕಿಗೆ ಭರವಸೆ ತರುವದಿದ್ದರೆ ಮಾತ್ರ. ಅದಿಲ್ಲದಿದ್ದರೆ ಯಾಕೆ ಅದರ ಸಹವಾಸ. ಅಪ್ಪ, ಅಮ್ಮ ಹೇಳದೆಯೇ ಕಲಿಸಿದ್ದು ಅದನ್ನೇ ಅಲ್ಲವೇ? ಗತ ಕಾಲ ನಮ್ಮ ಬದುಕಿಗೆ ಆಸರೆಯಾಗಬೇಕೇ ಹೊರತು ಶಾಪವಾಗಬಾರದು. ಪಡೆದ ಅನುಭವ,ಸುಖ,ಕಷ್ಟಗಳು ಸ್ಮರಣೆ ಮಾತ್ರ. ಹೊಸ ಬದುಕನ್ನು ಕಟ್ಟಿಕೊಳ್ಳಲು ಎಲ್ಲ ವಿಕಲ್ಪಗಳನ್ನು ಮರೆಯಬೇಕು ಎನ್ನುವ ಸಾರಾಂಶವನ್ನ ಅಪ್ಪ ಹೇಳುತ್ತಿದ್ದ; ಅವನದೇ ರೀತಿಯಲ್ಲಿ ಎನ್ನುವ ಅನಿಸಿಕೆ ಅವಳಲ್ಲಿ ಮತ್ತಷ್ಟು ಗೆಲುವು ಹುಟ್ಟಿಸಿತು.
ಮೊಬೈಲ್ ತೆರೆದು ನೋಡಿದರೆ ಆಗಲೇ ರಾತ್ರಿ ಕಳೆದು ಹೊಸದಿನ ಆರಂಭಗೊಂಡಿತ್ತು. ಸ್ವಲ್ಪ ದೂರದಲ್ಲಿ ರಸ್ತೆಪಕ್ಕದ ಕ್ಯಾಂಟೀನ್ ಕಾಣಿಸಿದ್ದೇ ಟಾಕ್ಸಿ ನಿಲ್ಲಿಸಲು ಸೂಚಿಸಿ,ತನಗೊಂದು ಕಾಫಿ ತರಲು ಡ್ರೈವರ್ ಗೆ ಸೂಚಿಸಿದಳು.
ಕಾಫಿ ಕುಡಿದು ಹೊರಟದ್ದೇ ಒಂದಿಷ್ಟು ನಿದ್ದೆ ಮಾಡಬೇಕೆಂದು ವತ್ಸಲಾ ಯೋಚಿಸಿದಳಾದರೂ ಎಲ್ಲಿಂದ ನಿದ್ದೆ ಬಂದೀತು? ತನ್ನ ಮದುವೆಯಾಗಿ, ಮಗ ಹುಟ್ಟಿದ ಎರಡು ವರ್ಷಗಳ ನಂತರ ತನ್ನ ಕುಟುಂಬದಲ್ಲಿ ಮತ್ತು ತವರಿನಲ್ಲಿ ಸಂಭವಿಸಿದ ವಿಘಟನೆಗಳು ಧುರಿತವನ್ನು ತಂದೊಡ್ಡಿದ್ದು ಕಡಿಮೆಯೇ? ಬ್ಯಾಂಕ್ ಮೆನೇಜರ್ ಆಗಿ ಬಡ್ತಿ ಪಡೆದ ಗಂಡ ಜೂಜು,ಹೆಂಡದ ದಾಸನಾಗಿ, ಕುಟುಂಬವನ್ನು ನಿರ್ಲಕ್ಷಿಸಿ, ಬ್ಯಾಂಕ್‌ನ ಹಣ ಪಟಾಯಿಸಿ, ಅದು ಪತ್ತೆಯಾಗಿ, ತನಿಖೆ, ಕೋರ್ಟ್ ಅಲೆದಾಟ ತಾಳಲಾಗದೇ ಒಂದೆಡೆ ನೇಣು ಬಿಗಿದುಕೊಂಡು ಸತ್ತು ಮುಕ್ತಿ ಪಡೆದ. ಕುಟುಂಬ ನಿರ್ವಹಣೆಗೆ ಹಣವಿಲ್ಲದೇ ಮಗ, ಗಂಡನನ್ನು ಸಾಕುವ ಅನಿವಾರ್ಯತೆಯಲ್ಲಿ ಹೊಲಿಗೆ ತರಬೇತಿ ಪಡೆದು, ಹೇಗೋ ಹೊಲಿಗೆ ಮೆಶೀನ್ ತಂದು ಬಟ್ಟೆ ಹೊಲಿದು ದುಡಿದು ಬದುಕುತ್ತಿದ್ದಳು. ಆಗ ವತ್ಸಲಳ ನೆರವಿಗೆ ತನ್ನ ಕೈಯಲ್ಲಾದಷ್ಟು ನೆರವಿಗೆ ಮಂಜಯ್ಯ ಬಂದಿದ್ದರು.
ಹುಟ್ಟಿಸಿದವರಷ್ಟೇ ಸ್ವಾಭಿಮಾನಿಯಾದ ವತ್ಸಲಾ ‘ನೆರವು ಬೇಡ, ಆಶೀರ್ವಾದ,ಅಭಯ ಇರಲಿ’ ಎಂದು ನೇರವಾಗಿಯೇ ಹೇಳಿದ್ದಳು. ಆದರೆ ತಂಗಿಯ ಸಾಂಸಾರಿಕ ಕಷ್ಟ ಗೊತ್ತಿದ್ದ ನರಸಿಂಹ ಅಪ್ಪ ಗುಟ್ಟಾಗಿ ಮಗಳಿಗೆ ಸಹಾಯ ಮಾಡುತ್ತಿದ್ದಾನೆ ಎಂದು ಸಂಶಯ ಪಡತೊಡಗಿದ್ದಕ್ಕೆ ಅವನ ಮಡದಿಯ ಪ್ರಚೋಧನೆಯೂ ಇತ್ತು.
‘ತಾನು ಬೇರೆ ಹೋಗುತ್ತೇನೆ, ಪಾಲು ಕೊಡು’ ಎಂದು ಅಪ್ಪನ ಬಳಿ ರಾದ್ಧಾಂತವೆಬ್ಬಿಸಿದ. ಅಷ್ಟರಲ್ಲೇ ಕಾಲೇಜೊಂದರ ಉಪನ್ಯಾಸಕನಾಗಿದ್ದ ಭಾರ್ಗವನನ್ನ ತನ್ನ ತೆಕ್ಕೆಗೆ ತೆಗೆದುಕೊಂಡು ಆಸ್ತಿ ಪಾಲು ಮಾಡಿಸಿಯೇ ಬಿಟ್ಟ. ‘ಋಣ ಇದ್ದ ಹಾಗೇ ಆಗುತ್ತದೆ’ ಎಂದ ಗೌರಮ್ಮನ ಮಾತಿನಂತೆ ಇಬ್ಬರು ಗಂಡುಮಕ್ಕಳು, ಮಗಳು ವತ್ಸಲಾಳಿಗೆ ಪಾಲು ಮಾಡಿ ಕಾನೂನುರೀತ್ಯಾ ನೋಂದಣಿ ಮಾಡಿಸಿಕೊಟ್ಟರು.
ಅಷ್ಟರ ನಂತರ ಗಂಡುಮಕ್ಕಳು ಅಪ್ಪ,ಅಮ್ಮನನ್ನೇ ಮರೆತುಬಿಟ್ಟರು. ದುರಂತ ಕಂಡ ಮಗಳ ಬದುಕು, ಗಂಡು ಮಕ್ಕಳ ಸ್ವಾರ್ಥ ಮನಸ್ಸು.. ಯಾವುದರ ಘಾಶಿಯೋ? ಗೌರಮ್ಮ ಒಂದೆರಡು ವರ್ಷಗಳಲ್ಲಿ ನವೆದು, ಹಾಸಿಗೆ ಹಿಡಿದ ಎರಡು ದಿನದಲ್ಲೇ ತೀರಿಕೊಂಡಿದ್ದರು. ಮಡದಿಯ ಅಪರಕರ್ಮ ಕ್ರಿಯಾವಿಧಿ ನೆರವೇರಿಸಲು ಕೋರಿ ಮಂಜಯ್ಯ ಮಗ ನರಸಿಂಹನ ಮನೆಯ ಬಾಗಿಲಿಗೆ ಹೋಗಿ ಬೇಡಿದ್ದರು. ನರಸಿಂಹ ‘ಎಲ್ಲ ಖರ್ಚು ನೀನೇ ಭರಿಸೋದಾದ್ರೆ ನಾನು ಮಾಡ್ತೇನೆ. ಅದಕ್ಕೆ ಜವಾಬ್ದಾರಿ ಜನರ ಭರವಸೆ ಬೇಕಾಗ್ತದೆ’ ಎಂದಿದ್ದ.
ಮಂಜಯ್ಯನವರ ಜೊತೆಗೆ ಬಂದಿದ್ದ ಅವರ ಅನಾದಿ ಕಾಲದ ಗೆಳೆಯ ರಾಮಚಂದ್ರ ನಾಯ್ಕ ನಿಂತಲ್ಲೇ ಹೂಂಕರಿಸಿದ್ದ. ‘ ಮಾಣಿ, ನಿನ್ನ ಮುಖಕ್ಕೆ ಬೆಂಕಿ ಸೂಡು ಹಿಡೀತೇನೆ. ಹುಟ್ಟಿಸಿದ ಅಪ್ಪನ ಹತ್ತಿರ ವ್ಯಾಪಾರ ಮಾಡೋ ಅನಿಷ್ಠ. ನಿಂಗೆ ಬೈಯ್ದರೆ ನಿನ್ನ ಅಪ್ಪ,ಅಮ್ಮನಿಗೆ ಬೈಯ್ದ ಹಾಗೇ; ಒಂದು ಪೈಸೆ ನಿಂದು ಬ್ಯಾಡಾ. ನಾನೇ ಜವಾಬ್ದಾರಿ. ಮುಕುಳಿ ಮುಚ್ಚಿಕೊಂಡು ಬಂದ್ರೆ ಸರಿ. ಇಲ್ಲಾಂದ್ರೆ.’ ಎಂದು ಗುಡುಗಿದ್ದ. ಅದೇ ನೆವ ತೆಗೆದು ನರಸಿಂಹ ಅಮ್ಮನ ಕ್ರಿಯೆಗೆ ಬರದೇ ತಪ್ಪಿಸಿಕೊಂಡಿದ್ದ.ಅನಿವಾರ್ಯವಾಗಿ ಮಂಜಯ್ಯನವರೇ ಅಂತ್ಯಕ್ರಿಯೆ, ಮುಂದಿನ ವಿಧಿ, ವಿಧಾನ ಮಾಡಿದ್ದರು.
ಆಗ ಬಂದುಹೋಗಿದ್ದ ವತ್ಸಲಾ ಗಂಡ ತೀರಿಕೊಂಡ ಯಾತನೆ, ಮಗನಿಗೆ ಶಿಕ್ಷಣ ಕೊಡಿಸಬೇಕಾದ ಅನಿವಾರ್ಯತೆಯ ನಡುವೆಯೂ ವಾರಕ್ಕೊಮ್ಮೆ ಒಬ್ಬಂಟಿ ಅಪ್ಪನಿಗೆ ಪತ್ರ ಬರೆಯುತ್ತಿದ್ದಳು. ಅವಳಿಗೆ ಗೊತ್ತು ; ಈ ಪತ್ರ ತಲುಪುವದು ವಾರದ ನಂತರ. ಆದರೂ ಒಂದು ಬಳ್ಳಿ ಹಬ್ಬಿಕೊಂಡಿರುತ್ತಲ್ಲ ಎನ್ನುವ ಕಾರಣಕ್ಕೆ ಬರೆಯುತ್ತಲೇ ಇರುತ್ತಿದ್ದಳು. ಹೊಲಿಗೆ, ಎಂಬ್ರಾಯ್ಡರಿ ಮುಂತಾಗಿ ಆ ಕ್ಷೇತ್ರದ ಕುಶಲತೆಗಳನ್ನ ಸಿದ್ಧಿಸಿಕೊಳ್ಳುತ್ತ, ತನ್ನ ಕಾಡುವ ನಿಕೃಷ್ಠ ಮನಸ್ಸುಗಳನ್ನು ಸಧೃಡ ಹೆಣ್ಣಾಗಿ ನಿವಾರಿಸಿಕೊಳ್ಳುತ್ತ ಈವರೆಗೆ ಸಾಗಿ ಬಂದಿದ್ದಳು.
ಮನಸ್ಸಿನ ತೊಳಲಾಟ ಮತ್ತು ಭಾವನೆಗಳ ಸುಷುಪ್ತಿಯನ್ನ ನಿಧಾನಕ್ಕೆ ನಿವಾರಿಸಿಕೊಳ್ಳುತ್ತ ವತ್ಸಲಾ ಹೊರಗಡೆ ನೋಡುವಾಗ ಕತ್ತಲೆ ಕಳೆದು ನಸುಬೆಳಕು ಹರಡಿಕೊಳ್ಳತೊಡಗಿತ್ತು. ಮೊಬೈಲ್ ನೋಡಿದರೆ ಆಗಲೇ ಮುಂಜಾವಿನ ಐದು ಗಂಟೆ ಸಮೀಪಿಸುತ್ತಿತ್ತು. ಎಲ್ಲಿದ್ದೇವೆ? ಎಂದು ಅರಿವಾಗದಿದ್ದರೂ ಆಪ್ತವಾದ ವಲಯದಲ್ಲಿದ್ದೇನೆ ಅನ್ನಿಸಿ ಡ್ರೈವರ್ ಬಳಿ ‘ಎಲ್ಲಿಗೆ ಬಂದ್ವಿ?’ ಎಂದಳು. ‘ಇನ್ನು ಐದೇ ಕಿಲೋಮೀಟರ್’ ಎಂದಾಗ ‘ಹುಟ್ಟಿನಿಂದ ಪ್ರಾಪ್ತವಾದದ್ದು ಯಾವತ್ತೂ ಕಳೆದುಹೋಗೋದಿಲ್ಲ’ ಅನ್ನಿಸಿ ಮತ್ತಷ್ಟು ಗೆಲುವಾದಳು.
ಹೊರಗೆ ಕಾದು ನಿಂತಿದ್ದ ರಾಮಚಂದ್ರ ನಾಯ್ಕ ಹಾಗೂ ಅವರ ಮಗ ವತ್ಸಲಾಳನ್ನು ಹಿಂದುಗಡೆಯ ಬಾಗಿಲಿಂದ ಆಸ್ಪತ್ರೆಯ ಒಳಕ್ಕೆ ಕರೆದುಕೊಂಡು ರೂಮೊಂದರ ಒಳಹೊಕ್ಕರು. ಇಡೀ ದೇಹಕ್ಕೆ ಹೊದೆಸಿದ್ದ ಬಿಳಿ ವಸ್ತç ಸರಿಸಿ ಮಂಜಯ್ಯನವರ ಮುಖ ನೋಡಿದಳು. ಉಸಿರಿಲ್ಲದಿದ್ದರೂ ಬಿಳಿಗಡ್ಡದ ಮುಖದಲ್ಲಿ ಮಂದಹಾಸವಿದ್ದಂತೆ ಕಂಡಿತು. ಮುಖದ ಮೇಲೆ ತನ್ನ ಮುಖವನ್ನೊಮ್ಮೆ ಇಟ್ಟು ನಿರ್ಜೀವ ಶರೀರದ ಎದೆಯ ಮೇಲೆ ಮುಖವಿಟ್ಟು ವತ್ಸಲಾ ಮೌನಿಯಾಗಿಬಿಟ್ಟಳು.
‘ಈ ದೇಹ ಮಕ್ಕಳಿಗಾಗಿ ಯಾವ ಫಲಾಪೇಕ್ಷೆಯಿಲ್ಲದೇ, ಮನುಷ್ಯನ ಕರ್ತವ್ಯ ಎನ್ನುವಂತೆ ಮಳೆ,ಚಳಿ, ಬಿಸಿಲು, ಹಸಿವು, ಬಡತನ ಎಲ್ಲವನ್ನೂ ಸಹಿಸಿಕೊಂಡು, ತಾವೇನೂ ಹೆಚ್ಚಿನದನ್ನು ಕೊಡಲಾಗಲಿಲ್ಲ ಎನ್ನುವ ತೊಳಲಾಟದಲ್ಲೇ ಒದ್ದಾಡಿತಲ್ಲ. ಬದುಕಿಗೆ ಒದಗಿ ಬಂದದ್ದು ದೇವ ಕೊಟ್ಟದ್ದು ಎನ್ನುವ ವಿಚಿತ್ರ ನಿರ್ಲಿಪ್ತತೆಯಲ್ಲಿ ಬದುಕಿತು. ಜೀವ ವಿಮುಖಿಯಾಗದ ಎಚ್ಚರವನ್ನು ಕಾಯ್ದುಕೊಂಡು, ಈಡೀ ಶರೀರ ಬೆವರಿನಲ್ಲಿ ಅದ್ದಿಹೋಗುವಂತೇ ದುಡಿದು ಕುಟುಂಬ ಕಟ್ಟಿದ ಜೀವ ಇದು. ಕಾಡ ನಡುವಿನಲ್ಲೇ ನಾಡಿನಲ್ಲಿರುವವರಿಗೆ ಮೌನವಾಗೇ ಆದರ್ಶದ ಪಾಠ ಹೇಳಿದ ಬದುಕಿದ ಜೀವ ಅಪ್ಪನದು’ ಎನ್ನುವ ಅನಿಸಿಕೆ ಉಕ್ಕಿ ಬರುವ ಬಿಕ್ಕಳಿಕೆಯಲ್ಲೂ ವತ್ಸಲಾಳಿಗೆ ಬಂತು.
ಸಾವನ್ನ ಕಂಡು ರೋಧಿಸುವ, ವಿಹ್ವಲಗೊಳ್ಳುವ ಮನಸ್ಥಿತಿಯನ್ನ ಯಾವಾಗಲೋ ಕಳೆದುಕೊಂಡ ವತ್ಸಲಾ ಮುಂದಿನ ಪ್ರಕ್ರಿಯೆಗೆ ಅನುವಾದಳು. ಅಪ್ಪನ ಹೆಣವನ್ನು ಊರಿಗೆ ಒಯ್ಯಬೇಕು, ಅದರ ದಹನ, ಅಪರಕ್ರಿಯೆಗಳಿಗೆ ಸಿದ್ಧತೆಗಳು ಆಗಬೇಕು ಎನ್ನುವದು ಮನಸ್ಸಿಗೆ ಬಂದಿದ್ದೇ ಅಪ್ಪನ ಮುಖಕ್ಕೆ ಬಟ್ಟೆ ಸರಿಸಿ ರಾಮಚಂದ್ರ ನಾಯ್ಕರ ಬಳಿ ಆ ಬಗ್ಗೆ ಮಾತನಾಡಿದಳು.
ಅಷ್ಟರಲ್ಲಾಗಲೇ ರಾಮಚಂದ್ರ ನಾಯ್ಕ ಮಂಜಯ್ಯನವರ ಪುರೋಹಿತರಾದ ತಿಮ್ಮಣ್ಣ ಭಟ್ಟರಿಗೆ ವಿಷಯ ತಿಳಿಸಿ ಮುಂದಿನ ಸಿದ್ಧತೆಯ ಬಗ್ಗೆ ಸೂಚಿಸಿದ್ದನ್ನ ಹೇಳಿದರೂ ಅವರ ಮಾತಿನ ಒಳದನಿಯಲ್ಲಿ ಏನೋ ಅನುಮಾನವಿರುವದು ವತ್ಸಲಾಳ ಗಮನಕ್ಕೆ ಬಂತು. ಹೆಣ ಒಯ್ಯಲು ಅಂಬುಲೆನ್ಸ ಸಿದ್ಧತೆ, ಆಸ್ಪತ್ರೆಯ ಬಿಲ್ ಇವೆಲ್ಲ ಮುಗಿಯುವಷ್ಟರಲ್ಲಿ ವಿಶ್ವಾಸ ಬಂದು ಸೇರಿಕೊಂಡ.
ಅಂಬುಲೆನ್ಸನಲ್ಲಿ ಕೂರಹೊರಟ ರಾಮಚಂದ್ರ ನಾಯ್ಕರನ್ನು ಕರೆದು ವತ್ಸಲಾ ತನ್ನ ಟಾಕ್ಸಿಯಲ್ಲಿ ಕೂರಿಸಿಕೊಂಡಳು. ಪರದೇಶಿಗಳಂತೇ ಕಾಡಮೂಲೆಗೆ ಬಂದ ಮಂಜಯ್ಯನವರ ಜೊತೆ ಆಗಿನಿಂದ ಈಗಿನವರೆಗೆ ಜೊತೆಗಾರನಾಗಿದ್ದ ಮನುಷ್ಯ ಅವರು. ಬುದ್ದಿ ಬಂದಾಗಿನಿAದ ನೋಡಿದಂತೆ ಅಪ್ಪನ ಜೊತೆ ಹೆಗಲಿಗೆ ಹೆಗಲು ಕೊಟ್ಟ ಜೀವ ಅವರದ್ದು. ಇಬ್ಬರೂ ಒಡಹುಟ್ಟಿದವರೆನೋ ಎನ್ನುವಷ್ಟು ಸಲಿಗೆ, ಆತ್ಮೀಯತೆ ಅವರದ್ದಾದರೂ ರಾಮಚಂದ್ರ ನಾಯ್ಕ ಯಾವತ್ತೂ ಗೌರವದ ಗಡಿ ದಾಟಿದ ಮನಸ್ಸಿನವರಲ್ಲ. ಅವರಿಬ್ಬರೂ ಒಟ್ಟೋಟ್ಟಿಗೇ ದುಡಿದು ತಮ್ಮ ಕುಟುಂಬಗಳನ್ನು ವೃದ್ಧಿಸಿಕೊಂಡದ್ದನ್ನ ವತ್ಸಲಾ ಕಂಡಿದ್ದಳು.
ಮನೆಯೆದುರು ಹೆಣ ಇಳಿಸುವಷ್ಟರಲ್ಲೇ ತಿಮ್ಮಣ್ಣ ಭಟ್ಟರು ಓಡೋಡುತ್ತ ಬಂದಿದ್ದರು. ಈ ಮನೆಯ ಅವಿಭಾಜ್ಯ ಅಂಗದAತಿದ್ದ ಅವರು ಮಂಜಯ್ಯನವರ ಅತ್ಯಂತ ಆಪ್ತರು. ಮಂಜಯ್ಯ ಸತ್ತ ಸುದ್ದಿ ತಿಳಿದದ್ದೇ ಅವರಿಗೆ ಪುರುಸೊತ್ತೇ ಇರಲಿಲ್ಲ. ಅಪರಕರ್ಮದ ಸಿದ್ಧತೆಯ ಜೊತೆಗೆ ಅದನ್ನು ಮಾಡಬೇಕಾದ ಮಂಜಯ್ಯನವರ ಗಂಡುಮಕ್ಕಳನ್ನು ಮನವೊಲಿಸುವದೇ ಅವರಿಗೆ ದೊಡ್ಡ ಸವಾಲಾಗಿತ್ತು. ನಾಲ್ಕು ವರ್ಷದ ಹಿಂದೆ ಗೌರಮ್ಮ ತೀರಿಕೊಂಡಾಗ ಎಷ್ಟೇ ಗೋಗರೆದರೂ ಹತ್ತಿರದಲ್ಲೇ ಇದ್ದ ಹಿರಿಯ ಮಗ ನರಸಿಂಹ ಅಂತ್ಯಕ್ರಿಯೆಗೆ ಬರಲಿಲ್ಲ. ಹದಿಮೂರನೇ ದಿನದ ಒಳಗೂ ಕಿರಿಯ ಮಗ ಭಾರ್ಗವ ಸುಳಿದಿರಲಿಲ್ಲ. ಏನೊಂದು ಮಾತನಾಡದೇ ಮಂಜಯ್ಯನವರೇ ಅಂತ್ಯಕ್ರಿಯೆ ಹಾಗೂ ಮುಂದಿನ ಕ್ರಿಯಾಚರಣೆಯನ್ನು ಮಾಡಿದ್ದರು. ಅದಕ್ಕೆ ಸುತ್ತಲಿನ ಸ್ವಸಮಾಜದಿಂದ ಆಕ್ಷೇಪ ವ್ಯಕ್ತವಾದರೂ ಮಂಜಯ್ಯ ಮಾನವಾಗಿದ್ದರು.
ಈಗ ಯಾರು ಆ ಎಲ್ಲ ಕ್ರಿಯಾವಿಧಿ ಮಾಡುವವರು ಎನ್ನುವದು? ತಿಮ್ಮಣ್ಣ ಭಟ್ಟರ ದೊಡ್ಡ ಸಮಸ್ಯೆಯಾಗಿತ್ತು. ಸುದ್ದಿ ತಿಳಿದಾಗಿನಿಂದ ನಾಲ್ಕಾರು ಬಾರಿ ನರಸಿಂಹನ ಮನೆಗೆ ಎಡತಾಕಿ, ಹಿತೋಪದೇಶ ಹೇಳಿದ್ದರು. ಕೊನೆಗೆ ರೇಗಿಕೊಂಡ ನರಸಿಂಹ ‘ ಭಟ್ಟರೇ ನಿಮ್ಮ ಹವಾಲತ್ತು ಬೇಡ. ಅಪ್ಪ ವತ್ಸಲಾಳ ಹೆಸರಿಗೆ ಬರೆಸಿಟ್ಟ ಜಮೀನು ನನ್ನ ಹೆಸರಿಗೆ ಮಾಡಿಸಿಕೊಡ್ತಿರೋ? ಆಗ್ತದೆ ಅಂತಾದ್ರೆ ಹೇಳಿ, ಎಲ್ಲವನ್ನೂ ಮಾಡ್ತೇನೆ’ ಎಂದು ಕಡ್ಡಿಮುರಿದಂತೆ ಹೇಳಿದ್ದ. ಕಿರಿಮಗ ಭಾರ್ಗವನಿಗೆ ಮಗನ ಮೂಲಕ ಫೋನ್ ಮಾಡಿಸಿದಾಗ ಆತ ‘ ಭಟ್ರೇ, ಅಣ್ಣ ಏನೂ ಹೇಳ್ತಾನೋ ಅದೂ ನನ್ನ ಮಾತು’ ಎಂದು ಮಾತು ನಿಲ್ಲಿಸಿದ್ದ.
ಈ ರಗಳೆಯನ್ನ ವತ್ಸಲಾಳಲ್ಲಿ ಹೇಗೆ ಹೇಳುವದು ಎನ್ನುವದು ತೋಚದೇ ತಿಮ್ಮಣ್ಣ ಭಟ್ಟರು ಪೇಚಾಡುತ್ತಿದ್ದರು. ಅಷ್ಟರಲ್ಲೇ ರಾಮಚಂದ್ರ ನಾಯ್ಕ ಸುತ್ತಲಿನ ಒಂದಿಷ್ಟು ಜನರನ್ನ ಸೇರಿಸಿ, ದಹನಕ್ಕೆ ಬೇಕಾದ ಒಣಕಟ್ಟಿಗೆಯ ದಿಂಡು, ಕೋಲು ಕಟ್ಟಿಗೆ, ಅಡಕೆಹಾಳೆ ಎಲ್ಲವನ್ನೂ ಮನೆಯಿಂದ ಆಚೆ ದೂರದ ಬೇಣದಲ್ಲಿ ಒಗ್ಗೂಡಿಸುತ್ತಿದ್ದರು. ತಿಮ್ಮಣ್ಣ ಭಟ್ಟರ ಮಡದಿ ಚಿಕ್ಕಬುಟ್ಟಿಯೊಂದರ ತುಂಬ ತುಳಸಿ ದಂಟು, ಗಂಧದ ಚಕ್ಕೆ, ನೆಲ್ಲಿ ದಂಟುಗಳನ್ನು ಆಯಾಸಪಡುತ್ತಲೇ ಹೊತ್ತು ತಂದಿದ್ದರು.
ವಿಷಯ ಹೇಳದೇ ಉಪಾಯವಿಲ್ಲದೇ ತಿಮ್ಮಣ್ಣ ಭಟ್ಟರು ವತ್ಸಲಾಳನ್ನ ಈಚೆ ಕರೆದು ಸಂದಿಗ್ಧವನ್ನ ವಿವರಿಸಿದರು. ಕೇಳಿಸಿಕೊಂಡ ವತ್ಸಲಾ ಮನೆಯಾಚೆಯ ಮಾವಿನಮರದ ಬುಡದ ಕಾಂಡಕ್ಕೆ ಒರಗಿ ಕೂತಳು. ಈ ಗಿಡ ತಾನು ಬುದ್ದಿ ತಿಳಿದ ನಂತರ ನೆಟ್ಟದ್ದು: ಈಗಲೂ ನೆನಪಿದೆ. ಈಗ ಎಷ್ಟು ದೊಡ್ಡದಾಗಿ,ವಿಶಾಲವಾಗಿ ಬೆಳೆದಿದೆ. ಇಲ್ಲಿ ಕೂತ ನಾನು ಅದರೆದುರು ಕನಿಷ್ಠ ವ್ಯಕ್ತಿ. ಅಪ್ಪ ಈ ಮರದ ಹಣ್ಣು ತಾನೇ ತಿನ್ನಬೇಕೆಂದು ನೆಟ್ಟನೇ? ತನಗೆ ಪ್ರಾಪ್ತವಾಗದಿದ್ದರೂ ಮಕ್ಕಳಿಗೆ, ಮೊಮ್ಮಕ್ಕಳಿಗೆ, ಬೇಡ ಯಾರಿಗೋ, ಕೊನೆಗೆ ಹಕ್ಕಿ,ಮಂಗಗಳಿಗೆ ದೊರೆಯಲೆಂದು ನೆಟ್ಟ ನಿರಪೇಕ್ಷ ಮನಸ್ಸಿನಿಂದ ನೆಟ್ಟಿದ್ದೇ? ಎನ್ನುವ ಪ್ರಶ್ನೆಗಳು ಎದುರಾದವು.
ತಾನು ಸಂದಿಗ್ಧ ಸ್ಥಿತಿಯಲ್ಲಿದ್ದಾಗ ಸಣ್ಣ ಪುಟ್ಟ ನೆರವು ಮಾಡುತ್ತಿದ್ದ ಅಪ್ಪ ಹೇಳುತ್ತಿದ್ದ. ‘ಮಗಳೇ, ನಿನಗೆ ಕಲಿಸಿದ್ದು ನೀನು ಸ್ವಾವಲಂಬಿಯಾಗಲೆಂದು. ಬದುಕನ್ನು ಎದುರಿಸಲೆಂದು. ಕಷ್ಟದಲ್ಲಿರುವ ನಿನ್ನನ್ನ ನಾನು ನಮ್ಮ ಮನೆಗೆ ಕರೆದುಕೊಂಡು ಹೋಗೋದಿಲ್ಲ, ಇಲ್ಲೇ ನೀನು ಬದುಕು ಕಟ್ಟಿಕೊಳ್ಳಬೇಕು’ ಎಂದಿದ್ದ. ಅಮ್ಮ ತೀರಿದ ನಂತರ ಒಂಟಿಯಾಗಿ ಉಳಿದ ಅಪ್ಪನನ್ನು ತನ್ನ ಬೆಂಗಳೂರಿನ ಮನೆಗೆ ಕರೆದಾಗ ‘ವತ್ಸಲಾ, ನಾನು ಉಸಿರಿನ ಕೊನೆ ತನಕ ಇಲ್ಲೇ ಇರೋದು’ ಎಂದು ಸ್ಪಷ್ಟವಾಗಿ ಹೇಳಿದ್ದ.
ಮುಂದೇನು? ಅನ್ನುವದನ್ನ ವತ್ಸಲಾ ಅಷ್ಟರಲ್ಲೇ ತಿರ್ಮಾನಿಸಿ ತಿಮ್ಮಣ್ಣ ಭಟ್ಟರ ಬಳಿ ‘ ಅಪ್ಪನ ಕ್ರಿಯಾವಿಧಿ ನಾನೇ ಮಾಡ್ತೇನೆ’ ಎಂದಳು. ಕಕ್ಕಾಬಿಕ್ಕಿಯಾದ ಭಟ್ಟರು ‘ ಈವರೆಗೂ ಎಲ್ಲೂ ಈ ಥರ ನಡೆದಿಲ್ಲ. ಶಾಸ್ತç,ಸಂಪ್ರದಾಯಕ್ಕೆ ಅಪಚಾರ ಆಯ್ತು ಅಂಥ ಗೌಜಿಯಾದ್ರೆ?’ ಎಂದು ಗಲಿಬಿಲಿಗೊಂಡರು.
‘ ಏನೂ ಬಂದ್ರೂ ನಾನು ಎದುರಿಸುತ್ತೇನೆ. ನೀವು ಗೋಳಿಕೈ ವಿಶ್ವಾನಾಥ ಭಟ್ಟರು ಪುರಾತನವನ್ನ ಸಂಶೋಧಿಸಿ, ಪೂಜ್ಯರುಗಳಿಂದ ಸಮ್ಮತಿ ಪಡೆದು ಪ್ರಕಟಿಸಿದ ಸದ್ಗತಿ ಎನ್ನುವ ಗ್ರಂಥವನ್ನ ಗಮನಿಸಿಲ್ಲ ಕಾಣುತ್ತದೆ. ಒಮ್ಮೆ ಓದಿ. ಅಲ್ಲಿ ಉತ್ತರವಿದೆ. ಹೆತ್ತವರು ಕೊಟ್ಟ ಸುಖ ಮರೆತು, ಅವರ ದುಡಿಮೆಯ ಫಲಕ್ಕೆ ಹಂಬಲಿಸುವ ವಿಕೃತ ವ್ಯಕ್ತಿತ್ವ ಮತ್ತು ಮನಸ್ಸುಗಳಿಗೆ ನಾನು ಈ ಮೂಲಕ ಧಿಕ್ಕಾರ ಹೇಳುತ್ತೇನೆ. ನಾನು ಕ್ರಾಂತಿ ಮಾಡುವ ಭ್ರಮೆ ಹೊತ್ತವಳಲ್ಲ. ಮುಂದಿನನವರು ಅನುಸರಿಸಲಿ ಎನ್ನುವ ತುಡಿತ ಮಾತ್ರ ನನಗೆ. ಈ ನೆಲಕ್ಕೆ ತಂದ ಹಿರಿಯರಿಗೆ ಈ ಮೂಲಕ ಋಣ ತೀರಿಸುತ್ತೇನೆ. ಅದು ನನ್ನ ಭಾಗ್ಯ’ ಎಂದವಳು ‘ ಭಟ್ಟರೇ, ಒಂದು ಮಾತು ನೀವು ನಡಿಸಿಕೊಡಲೇಬೇಕು. ನನ್ನ ಹೆಸರಿನಲ್ಲಿರುವ ಈ ಜಮೀನು ರಾಮಚಂದ್ರ ನಾಯ್ಕರ ಹೆಸರಿಗಾಗುವಂತೆ ನೀವು ಮಾಡಿಕೊಡಬೇಕು’ ಎಂದಳು.
0 ಪ್ರತಿಕ್ರಿಯೆಗಳು