ಜಯಲಕ್ಷ್ಮಿ ಪಾಟೀಲ್ ತಮ್ಮ ಕಥಾ ಸಂಕಲನ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ.
ರಂಗನಟಿಯಾಗಿ ನಂತರ ಕಿರುತೆರೆ, ಹಿರಿತೆರೆ ಎರಡನ್ನೂ ಪ್ರವೇಶಿಸಿದ ಜಯಲಕ್ಷ್ಮಿ ದೃಶ್ಯ ಮಾಧ್ಯಮದಲ್ಲಿ ಸಾಧಿಸಿದ್ದು ಅಪಾರ.
‘ಈ ಹೊತ್ತಿಗೆ’ ಮೂಲಕ ಸಾಕಷ್ಟು ಕೃತಿ ಸಮೀಕ್ಷೆಗಳನ್ನು ನಡೆಸಿದ, ಈ ಮೂಲಕ ಕಥಾ ಸಂಕಲನ ಹಸ್ತಪ್ರತಿ ಬಹುಮಾನ ನೀಡುವ ವಿನೂತನ ಯೋಜನೆ ರೂಪಿಸಿ ಯಶಸ್ವಿಯಾದವರು. ಮಹಿಳಾ ಜನದನಿ ರಕ್ಷಣೆಗೆಂದೇ ರೂಪಿಸಿದ ಸಂಸ್ಥೆ ಜನದನಿ ಮಹಿಳಾ ಸಬಲೀಕರಣದಲ್ಲಿ ಈಗ ಮೈಲುಗಲ್ಲು.
‘ಹಂಗು, ಗುಂಗು ಎರಡೂ ಮಿತಿಯಲ್ಲಿದ್ದರೆ ಬದುಕು ಚೆನ್ನ’ ಎನ್ನುವುದು ಇವರ ಧ್ಯೇಯವಾಕ್ಯ.
‘ಅವಧಿ’ಗೆ ಸುರಪರಿಚಿತರಾದ ಜಯಲಕ್ಷ್ಮಿ ಪಾಟೀಲ್ ಇಂದಿನಿಂದ ತಮ್ಮ ಬದುಕಿನ ನಿಲುದಾಣಗಳ ಬಗ್ಗೆ ಬರೆಯಲಿದ್ದಾರೆ.
ಕನ್ನಡಿ.. ಬಾಚಣಕಿ..
‘ಕನ್ನಡಿ, ಬಾ ಬಾಚಣಕಿ ಆಯೇರಿ ಮಾಡಿ… ಇವರಿಗೆ ಆ.. ಆ.. ಆ’
ಪರದೆಯ ಮರೆಯಲ್ಲಿಂದ ಯಾರೋ ಕಳ್ಳ ದನಿಯಲ್ಲಿ, ‘ಆಭಾರಿಯಾಗಿದ್ದೇನೆ ಆಭಾರಿಯಾಗಿದ್ದೇನೆ ಅನ್ನು’
ರಂಗದ ಮೇಲೆ ಆಭಾರಿಯಾಗಿದ್ದೇನೆ ಅನ್ನುವ ವಾಕ್ಯ ಪೂರ್ಣವಾಗುವ ಮೊದಲೇ ಪ್ರೇಕ್ಷಕರ ಗುಂಪಿಂದ, ‘ಕಿರಾಣಿ ಅಂಗ್ಡಿ ಸಿದ್ದನಗೌಡ, ಸಾಕೀನ್ ಕುಳೇಕುಮಟಗಿ ಅವರಿಂದ ೫ ರೂಪಾಯಿ’,
‘ಟೇಲರ್ ಕಾಸಪ್ಪ – ಸಾಕೀನ್ ಮೋರಟಗಿ, ೨ ರೂಪಾಯಿ’,
‘ಮಿಲ್ಟ್ರಿ ಹೊಟೆಲ್ ಮಾಬೂ ಸಾಕೀನ್ ಮೋರಟಗಿ ಇವ್ರಿಂದ ಒಂದು ಸ್ಟೀಲ್ ಪಿಲೇಟಾ ಮತ್ತ ವಾಟೆ ಅಂತ್ರೀ’ ಹೆಣ್ಣುಮಗಳೊಬ್ಬಳ ಪರ ಗಂಡಸಿನ ದನಿ.
‘ಕುಂಬಾರ ಬಸಪ್ಪ – ಸಾಕೀನ್ ಜೇರಟಗಿ ೧ ರೂಪಾಯಿ’
…..
ಅವಿಭಜಿತ ಬಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಒಂದು ಹಳ್ಳಿ ಮೋರಟಗಿ. ಊರ ಅಂಚಿಗೆ, ಬಸ್ಸುಗಳು ಓಡಾಡುವ ರಸ್ತೆಗಂಟಿದಂತೆಯೇ ಇರುವ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ, ದೊಡ್ಡ ದೊಡ್ಡ ಎರಡು ಗೋದಾಮುಗಳು, ಸಂತೆ ಸೇರಲು ಊರ ನಟ್ಟ ನಡುವೆ ದೊಡ್ಡದಾದ ಬಯಲು, ಪೋಸ್ಟ್ ಆಫೀಸ್, ಪೋಲಿಸ್ ಠಾಣೆ, ವಿರಕ್ತಮಠ, ಸುಮಾರು ಆರು ಸಾವಿರ ಜನಸಂಖ್ಯೆ ಇರುವಂಥ ದೊಡ್ದ ಹಳ್ಳಿ ಅದು. ಬೇಸಿಗೆ ಕಾಲ. ಉರಿಬಿಸಲ ನಾಡಲ್ಲಿನ ಯುವಕರಿಗೆ ಹೊತ್ತು ಕಳೆಯುವುದು ಬಲು ಕಷ್ಟದ ಸಮಯವದು. ೧೯೭೮ರಲ್ಲಿ ಮೋರಟಗಿಯ ಉತ್ಸಾಹಿ ಯುವಕರು ಮತ್ತು ಮಧ್ಯವಯಸ್ಕರು ಸೇರಿ ನಾಟಕವಾಡುವ ಮೂಲಕ ಬೇಸಿಗೆಯ ಧಗೆಯನ್ನು ನೀಗಿಕೊಳ್ಳಲು ನಿರ್ಧರಿಸಿದ್ದರೆಂದು ಕಾಣುತ್ತದೆ.
ಪರ ಊರಿಂದ ಪೇಟಿ ಮಾಸ್ತರರೊಬ್ಬರನ್ನು ಕರೆತಂದು, ಅವರು ಉರು ಹೊಡೆಸಿ ಅಭ್ಯಾಸ ಮಾಡಿಸಿದ ಸಾಮಾಜಿಕ ನಾಟಕವನ್ನು ಆಡುತ್ತಿದ್ದಾರೆ. ನಾಟಕಕ್ಕೆಂದೇ ಬಿಜಾಪುರದಿಂದ ಕಂಪನಿ ನಾಟಕದ ಇಬ್ಬರು ನಟಿಯರನ್ನು ಕರೆಸಿಕೊಂಡಿದ್ದಾರೆ
. ಪ್ರದರ್ಶನಕ್ಕೆ ಎರಡು ದಿನ ಮೊದಲಷ್ಟೇ ಅವರು ಬಂದಿಳಿದಾಗ, ತಿಂಗಳಿಂದ ಪ್ರ್ಯಾಕ್ಟೀಸ್ ಮಾಡುತ್ತಿದ್ದ ತಂಡದ ನಟ ವರ್ಗಕ್ಕೆಲ್ಲ ಆತಂಕ, ಅಸಹನೆ. ‘ಇವರುಗಳಿಂದ ನಾಟಕ ಹಾಳಾಗುವುದು ಗ್ಯಾರೆಂಟಿ, ತಿಂಗಳಿಂದ ಬಾಯಿಪಾಠ ಮಾಡುತ್ತಿರುವ ನಾವುಗಳೇ ಅಲ್ಲಲ್ಲಿ ಕಮಕಮ ಅನ್ನುತ್ತಿರುವಾಗ, ನಾಡಿದ್ದು ನಾಟಕವಿದೆ ಅನ್ನುವಾಗ ಇಂದು ಬಂದ ಇವರ ಗತಿ ಏನು? ನಾವೇ ಊರಿನ ಗಂಡಸರೇ ಹೆಣ್ಣುವೇಷ ಹಾಕಿದ್ದರೆ ಚೆನ್ನಾಗಿರೋದು’ ಎನ್ನುವ ದುಸುಮುಸು. ಆದರೆ ಮರುದಿನದ ಪ್ರ್ಯಾಕ್ಟೀಸಲ್ಲಿ ಆ ನಟಿಯರಿಬ್ಬರೂ ಎಲ್ಲೂ ಉಗ್ಗದೆ, ಕುಗ್ಗದೇ ಪಾತ್ರಕ್ಕೆ ಜೀವ ತುಂಬಿ ಎಲ್ಲಾ ಮಾತುಗಳನ್ನು ಸುಲಲಿತವಾಗಿ ಒಪ್ಪಿಸಿದಾಗ ಊರ ತುಂಬಾ ಮನೆಮನೆಯಲ್ಲೂ ಅವರ ಕುರಿತೇ ಬೆರಗಿನ ಮಾತುಗಳು.
ನಟಿಯರಿಬ್ಬರು ಮೋರಟಗಿಗೆ ಬಂದ ದಿನವೇ ರಂಗಮಂಚ ಮತ್ತು ಸಭಾಂಗಣದ ತಯಾರಿಯೂ ಶುರುವಾಗಿತ್ತು. ಬಹುಶಃ ನಾಟಕ ಕಂಪನಿಯೊಂದರಿಂದ ರಂಗಮಂಚಕ್ಕೆ ಬೇಕಾಗುವ ಕಂಬ, ಪಳಿ, ಪರದೆಗಳನ್ನೆಲ್ಲ ಬಾಡಿಗೆಗೆ ತಂದಿದ್ದರೆನಿಸುತ್ತದೆ. ಪೇಟಿ ಮಾಸ್ತರರ ದೇಖರೇಖಿಯಲ್ಲಿ ರಂಗಮಂಚ ತಯಾರಾಗಿ, ದೃಶ್ಯಗಳಿಗನುಗುಣವಾಗಿ ಪರದೆಗಳನ್ನು ಸುತ್ತಿ ಮೇಲೆ ಕಟ್ಟಲಾಗಿತ್ತು.
ಸ್ಟೇಜಿನ ಎದುರು ಅದಕ್ಕಂಟಿಕೊಂಡತೆಯೇ ಪೇಟಿ ಮಾಸ್ತರ್ ಮತ್ತು ತಬಲಾದವರು ಕುಳಿತುಕೊಳ್ಳಲೆಂದು ಮಾಡಿದ ತಗ್ಗಿನ ಹಿಂದಿನಿಂದ ಪ್ರೇಕ್ಷಕರು ಕುಳಿತುಕೊಳ್ಳಲೆಂದು ಬಯಲನ್ನು ಸ್ವಚ್ಛ ಮಾಡಲಾಗಿತ್ತು. ಅದು ಈ ಮೊದಲು ನಿತ್ಯ ದನ ಕರುಗಳು ಮೇಯ್ದು ಸಗಣಿ ಹಾಕುವ, ನಾಯಿ ಕತ್ತೆ ಹಂದಿಗಳೆಲ್ಲ ಅಲೆಯುತ್ತಾ ಹೊಲಸು ಮಾಡುವ ದೊಡ್ಡ ಸಪಾಟಾದ ಬೇಕಾರ್ ಬಯಲು.
ಊರಿನ ಬಸ್ಟ್ಯಾಂಡಿಗೆ ನೂರಿನ್ನೂರು ಮೀಟರಿನಷ್ಟೆ ಅಂತರವಿತ್ತಾದ್ದರಿಂದ ಆಗಾಗ ಅದು ಪ್ರಯಾಣಿಕರ ತುರ್ತಿನ ಬಯಲ ಶೌಚಾಲಯವೂ ಆಗುತ್ತಿತ್ತು. ಅಲ್ಲಲ್ಲಿ ಬೆಳೆದ ಜಾಲಿ ಕಂಟಿಗಳು ಅಂಥವರಿಗೆ ಮರೆಯಾಗಿರಲು ಅನುಕೂಲ ಮಾಡಿಕೊಟ್ಟು ಅವರ ಆ ಹೊತ್ತಿನ ಮರ್ಯಾದೆಯನ್ನು ಕಾಪಾಡುತ್ತಿದ್ದವು. ಅಂಥಾ ಗಲೀಜು ಜಾಗವೊಂದು ಇದೀಗ ಅದ್ಯಾವುದರ ಸುಳಿವೂ ಸಿಕ್ಕದಂತೆ ಸುಂದರ ಬಯಲಾಗಿ ಬದಲಾಗಿತ್ತು. ಆ ವಾರ ಪ್ರಯಾಣಿಕರು ಒಂದಾ ಮಾಡಲು, ಶೌಚಕ್ಕೆ ಮರೆ ಎಲ್ಲಿ ಹುಡುಕುವುದು ಎಂದು ಪರದಾಡಿರಲೂ ಸಾಕು.
ನಾಟಕದ ದಿನ ರಾತ್ರಿ ಒಂಬತ್ತು ಗಂಟೆಗೆ ಆರಂಭವಾಗಲಿರುವ ನಾಟಕ ನೋಡಲು, ಸಂಜೆ ಏಳಕ್ಕೆಲ್ಲಾ ಮೋರಟಗಿಯ ಸುತ್ತ ಹತ್ತು ಹಳ್ಳಿಯ ಜನ ಎತ್ತಿನ ಬಂಡಿ ಕಟ್ಟಿಕೊಂಡು ಬಂದು ಅಲ್ಲಿ ಸೇರತೊಡಗಿದ್ದರು. ಸ್ವಚ್ಛ ಮಾಡಿದ ನೆಲದ ಮೇಲೆ ಚಾಪೆ, ಜಮಖಾನೆ, ಟವಲ್ಲು ಹಾಸಿಕೊಂಡು ಒತ್ತೊತ್ತಿ ಕುಳಿತರೂ ಸಾಲದೆ, ತುಂಬಾ ಹಿಂದೆ ಕುಳಿತರೆ ಸರಿಯಾಗಿ ಕಾಣುವುದಿಲ್ಲವೆಂದು ಕುಳಿತವರ ಸುತ್ತಲೂ ಕೋಟೆ ಕಟ್ಟಿದಂತೆ ಎದ್ದು ನಿಂತು, ಆಗಾಗ ಕುಕ್ಕರಗಾಲಲ್ಲಿ ಕುಳಿತು ಮತ್ತೆ ಮೇಲೆದ್ದು ನಿಲ್ಲುತ್ತಾ ನಾಟಕ ನೋಡುತ್ತಿದ್ದರು. ಮುಂದಿನ ಸಾಲಲ್ಲಿ ಊರ ಗಣ್ಯರಿಗಾಗಿ ಹತ್ತಾರು ಕಬ್ಬಿಣದ ಮಡಚುವ ಕುರ್ಚಿಗಳನ್ನು ಹಾಕಲಾಗಿತ್ತು.
ನಾಟಕ ಅರ್ಧ ಮುಗಿದು ಹತ್ತು ನಿಮಿಷಗಳ ನಂತರ, ನಾಟಕಕ್ಕೆ ಸಂಬಂಧವೇ ಇಲ್ಲದ ಒಂದು ನೃತ್ಯದೊಂದಿಗೆ ಮತ್ತೆ ನಾಟಕ ಮುಂದುವರೆದಿತ್ತು. ಕುಣಿತ ಮುಗಿದು ಇನ್ನೇನು ಮುಂದಿನ ದೃಶ್ಯಕ್ಕೆ ಹೋಗಬೇಕು ಅನ್ನುವಾಗಲೇ ಆಹೇರಿಗಳ ಸುರಿಮಳೆ ನೃತ್ಯಗಾತಿಗೆ. ಪ್ರೇಕ್ಷಕರು ಹಾಗೆ ಬಕ್ಷೀಸು ಕೊಡುವಾಗೆಲ್ಲ ನಾಟಕ ನಿಲ್ಲಿಸುವುದು ಅನಿವಾರ್ಯ. ಹಳ್ಳಿಗಳಲ್ಲಿ ಹಾಗೇ. ಅಪರೂಪಕ್ಕೆ ನಾಟಕದಲ್ಲಿ ಅಭಿನಯಿಸುವ ತಮ್ಮ ತಮ್ಮ ಬಂಧು, ಸ್ನೇಹಿತರಿಗೆ, ಮೆಚ್ಚಿನ ನಟ ನಟಿಯರಿಗೆ, ಪ್ರೇಕ್ಷಕರು ಒಂದು ರೂಪಾಯಿಂದ ಮೊದಲುಗೊಂಡು ನೂರಾ ಒಂದು ರೂಪಾಗಯಿಗಳವರೆಗೆ, ಬಟ್ಟೆ, ಸಾಮಾನು, ಬಂಗಾರ ಆಹೇರಿ ಮಾಡುವ ಮೂಲಕ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾರೆ.
ಹೀಗೇ ೧, ೨, ೫, ೧೧, ೨೫ ರೂಪಾಯಿಗಳು, ತಾಟು ಪ್ಲೇಟುಗಳು ಒಟ್ಟಾಗಿ ಕಲರವ ಹೆಚ್ಚಾಗುತ್ತಿದ್ದಂತೆಯೇ ಸೈಡ್ ವಿಂಗಿನಿಂದ, ಗುಂಗುರು ಕೂದಲಿನ ಚೆಂದದ, ಎತ್ತರವಾಗಿ ತೆಳ್ಳಗಿದ್ದ ನಾಯಕ ನಟ ಶಶಾಂಕ್ ಪಾತ್ರಧಾರಿ ಸ್ಟೇಜ್ ಮೇಲೆ ಬಂದು, ‘ಪ್ರೇಕ್ಷಕ ಬಂಧುಗಳಲ್ಲಿ ವಿನಂತಿ. ದಯಮಾಡಿ ಆಯೇರಿ ಮಾಡೋರೆಲ್ಲ ಹಿಂಗ ಗದ್ಲಾ ಮಾಡ್ದನ ಕುಂತಲ್ಲೇ ಕುಂದರ್ರಿ. ನಮ್ಮೋರೊಬ್ಬ್ರು ಪೆನ್ನ ಹಾಳಿ ಹಿಡ್ಕೊಂಡು ನಿಮ್ಮ ಹಂತ್ಯಾಕ ಬರ್ತಾರ. ಅವ್ರ ಕೈಯಾಗ ನಿಮ್ಮ ಆಯೇರಿ ಕೊಟ್ಟು ಹೆಸ್ರು ಬರಸ್ರಿ. ನಿಮ್ಮೆಲ್ಲಾರ ಹೆಸ್ರನ ಸ್ಟೇಜ್ ಮ್ಯಾಲೆ ಹೇಳ್ತೀವಿ. ಗದ್ಲಾ ಮಾಡಬಾರದಾಗಿ ವಿನಂತಿ’ ಎಂದು ವಿನಂತಿಸಿದ ಮೇಲೆ ಸಭೆಯಲ್ಲಿನ ದನಿಗಳು ಅಡಗಿದವು.
ಸ್ಟೇಜ್ ಮೇಲೆ ನೆಟ್ಟಗೆ ಆಭಾರಿಯಾಗಿದ್ದೇನೆ ಅನ್ನಲು ಪರದಾಡುತ್ತಿದ್ದ ೯ ವರ್ಷದ ಹುಡುಗಿಗೆ, ಅಷ್ಟೊಂದು ಜನರ ಹೆಸರು ನೆನಪಿಟ್ಟುಕೊಂಡು ಆಭಾರಿಯಾಗಿದ್ದೇನೆ ಅನ್ನಬೇಕಲ್ಲಾ ಅನ್ನುವ ಚಿಂತೆ! ಲಿಸ್ಟ್ ಹಿಡಿದುಕೊಂಡು ಬಂದ ವ್ಯಕ್ತಿ ಹುಡುಗಿಯೆದುರು ಹಾಳೆಯನ್ನು ಹಿಡಿದಾಗ, ಆ ಸೊಟ್ಟಾಪಟ್ಟ ಅಕ್ಷರಗಳನ್ನು ನೋಡಿ ಇನ್ನೂ ದಿಗಿಲು! ಕಣ್ಣ್ ಕಣ್ಣ್ ಬಿಡುತ್ತಾ ಓದಲು ತಿಣಕಾಡುತ್ತ ಹಾಗೂ ಹೀಗೂ ಮೊದಲ ಹೆಸರು ಓದುವಷ್ಟರಲ್ಲಿಯೇ, ಇನ್ನೂ ಅರ್ಧದಷ್ಟು ನಾಟಕ ಬಾಕಿ ಇದ್ದು ಈ ಹುಡುಗಿಯಿಂದಾಗಿ ತಡವಾಗುತ್ತಿದೆಯಲ್ಲ ಅನಿಸಿರಬೇಕು ನಾಯಕ ನಟನಿಗೆ. ರಂಗದ ಮೇಲೆ ಆ ಹುಡುಗಿಯನ್ನು ಏನೂ ಅನ್ನುವಂತಿಲ್ಲ ಬೇರೆ! ಸಹನೆ ಧರಿಸಿ,
‘ಅವ್ವೀ, ನಾ ಹೆಸರು ಓದ್ಕೋಂತ ಹೋಕ್ಕೀನಿ, ನೀ ಕೈ ಮುಗದು ಆಭಾರಿಯಾಗಿದ್ದೇನೆ ಅಂಕೋತ ಹೋಗಾ.’ ಎಂದವನೇ ಪಟ್ಟಿಯಲ್ಲಿರುವ ಹೆಸರುಗಳನ್ನು ಓದತೊಡಗಿದ.
‘ವೀರಭದ್ರಸ್ವಾಮಿ ಹಿರೇಮಠ, ಸಾಕೀನ್…’
“ಆ ಆ ಆಭಾರಿಯಾಗಿದ್ದೇನೆ’
‘ಹನುಮಂತರಾಯ ಬಿರಾದಾರ್, ಸಾಕೀನ್…’
‘ಆ ಆಭಾರಿಯಾಗಿದ್ದೇನೆ’
ಹುಡುಗಿಗೆ ಆಭಾರಿಯಾಗಿದ್ದೇನೆ ಎನ್ನುವ ಹೊಸ ಪದ ಅಂದೂ ಅಂದೂ ಬಾಯಿಪಾಠವಾಗಿ, ಇನ್ನೇನು ತನಗೆ ಸುಲಲಿತವಾಗಿ ಅನ್ನಲು ಬಂತು ಎಂಬ ಖುಷಿಯಲ್ಲಿ ಹುರುಪಿನಿಂದ ಮುಂದೆ ಬರುವ ಹೆಸರಿಗೆ ಕಿವಿಯಾಗಿ ಉತ್ಸಾಹದಿಂದ ನಾಯಕ ಶಶಾಂಕನತ್ತ ಕಣ್ಣುಗಳನ್ನ ಹೊರಳಿಸಿದರೆ,
‘ಬಂಗಾರದ ಮನುಷ್ಯ ಚಿತ್ರದ ‘ಆಗದು ಎಂದು ಕೈಲಾಗದು ಎಂದು..’ ಎನ್ನುವ ಹಾಡಿಗೆ ನೃತ್ಯ ಮಾಡಿದ, ನಮ್ಮೆಲ್ಲರ ಹೆಮ್ಮೆಯ ಸರಕಾರಿ ವೈದ್ಯರಾದ ಡಾ. ಆರ್.ಎಲ್ ಅವರಾದಿ ಸರ್ ಅವರ ಹಿರಿಯ ಸುಪುತ್ರಿಗೆ ನೀವೆಲ್ಲರು ನಿಮ್ಮ ಅಮೋಘ ಚಪ್ಪಾಳೆ ಮತ್ತು ಆಯೇರಿ ನೀಡಿ ಪ್ರೋತ್ಸಾಹಿಸಿದ್ದಕ್ಕಾಗಿ ಅನಂತ ಧನ್ಯವಾದಗಳು. ಇನ್ನೀಗ ಎರಡು ನಿಮಿಷಗಳಲ್ಲಿ ನಾಟಕ ಆರಂಭವಾಗಲಿದೆ, ದಯವಿಟ್ಟು ಎಲ್ಲರೂ ಶಾಂತರಾಗಿ ಕುಂದ್ರಬೇಕೆಂದು ವಿನಂತಿ’ ಎಂದುಬಿಟ್ಟ.
ಪಟ್ಟಿಯಲ್ಲಿನ ಹೆಸರುಗಳು ಮುಗಿದಿದ್ದವು. ನಿರಾಸೆಯಾಯಿತು ಆಕೆಗೆ. ಜೊತೆಗೇ ‘ಪ್ರೋತ್ಸಾಹಿಸಿದ್ದಕ್ಕಾಗಿ’ ಎಂದು ಹೇಳಿಕೊಟ್ಟಿದ್ದನ್ನ ಹೇಳಲು ತಾನು ಮರೆತುಬಿಟ್ಟಿದ್ದೆ ಎನ್ನುವುದು ಶಶಾಂಕ ‘ಪ್ರೋತ್ಸಾಹಕ್ಕೆ’ ಎನ್ನುವಾಗ ಹೊಳೆಯಿತು. ಅಷ್ಟೊತ್ತು ಸಭೆಯ ಕೇಂದ್ರಬಿಂದುವಾಗಿದ್ದ ಹಿಗ್ಗಿನ ಜಾಗದಲ್ಲೀಗ ಒಂದು ವಾಕ್ಯವನ್ನೂ ಹೇಳಲು ಬಾರದ ದಡ್ದಿ ಎಂದು ಆಡಿಕೊಂಡು ಹೀನಾಯವಾಗಿ ಕಾಣುವುದು ಖಂಡಿತ ಎನಿಸಿ ಅವಳ ಮುಖ ಸಪ್ಪಗಾಯಿತು. ಪ್ರೇಕ್ಷಕರಿಗೆ ಕೊನೆಯದಾಗಿ ನಮಸ್ಕರಿಸಿ ಶಶಾಂಕನೊಂದಿಗೆ ರಂಗದಿಂದ ನಿರ್ಗಮಿಸಿತು ಹುಡುಗಿ.
….
ಬಂದ ಹಣ, ಪಾತ್ರೆ, ಕನ್ನಡಿ ಬಾಚಣಿಗೆ, ಅಂಗಿ ಇತ್ಯಾದಿ ಎಲ್ಲವನ್ನೂ ಅಪ್ಪ ನಾಟಕ ತಂಡಕ್ಕೆ ಕೊಡಲು ಹೇಳಿದಾಗ, ‘ಅವೆಲ್ಲ ನನಗೆ ಬಂದಿದ್ದು ಯಾಕೆ ಯಾರಿಗೋ ಕೊಡಬೇಕು?’ ಎಂದೂ ಯೋಚಿಸದೆ ಎಲ್ಲವನ್ನೂ ಕೊಟ್ಟ ನಾನು, ಕನ್ನಡಿ ಮತ್ತು ಬಾಚಣಿಗೆಯನ್ನು ಮಾತ್ರ ಅಪ್ಪಿ ಹಿಡಿದು, ಇದನ್ನೂ ಕೊಡಬೇಕಾ? ಎನ್ನುವ ಭಾವದಿಂದ ಅಪ್ಪನ ಮುಖ ನೋಡಿದೆ. ಅಪ್ಪಾ, ‘ಕೊಡು ಜಲ್ದಿ, ಹೋಗೂನು ಮನಿಗೆ’ ಅಂದಾಗ ನನಗವುಗಳನ್ನು ಕೊಡಲು ಮನಸ್ಸಿಲ್ಲ ಅನ್ನುವುದನ್ನು ಅರ್ಥ ಮಾಡಿಕೊಂಡ ಅಲ್ಲಿಯವರು, ‘ಏನ್ರೀ ಸರ, ಪಾಪ ಹುಡ್ಗಿಗೆ ಅಷ್ಟರ ಇರ್ಲಿ ಬಿಡ್ರಿ’ ಅಂದರು. ಅಪ್ಪಾ ‘ಆತ್ ನಡಿ’ ಎಂದರು.
ತುಂಬಾ ಖುಶಿಯಿಂದ, ನನ್ನದೆಂಬ ಆಸ್ಥೆಯಿಂದ ಆ ಊರಿನಿಂದ ಅಪ್ಪಾಗೆ ದೋಟಿಹಾಳಕ್ಕೆ ವರ್ಗಾ ಆಗುವವರೆಗೂ ಜತನದಿಂದಿಟ್ಟುಕೊಂಡಿದ್ದೆ ತಗಡಿನ ಫ್ರೇಮ್ ಉಳ್ಳ ಆ ಪುಟ್ಟ ಕನ್ನಡಿ ಮತ್ತು ಪುಟ್ಟ ಬಾಚಣಿಗೆಯನ್ನು.
ಶಾಲೆಯ ಗ್ಯಾದರಿಂಗ್ ನ ಹೊರತಾಗಿ, ದೊಡ್ಡ ಸಮೂಹದೆದುರು ಇದು ನನ್ನ ಮೊದಲ ರಂಗಪ್ರವೇಶವಾಗಿತ್ತು! ಶಾಲೆಯಲ್ಲಿ ಗ್ಯಾದರಿಂಗ್ ನ ವೇಳೆ ಸಮೂಹನೃತ್ಯವನ್ನೇ ಇಲ್ಲಿ ಒಬ್ಬಳೇ ಮಾಡಿದ್ದೆ ಯಾವುದೇ ಅಳುಕಿಲ್ಲದೆ. ಆ ನಂತರ ನಾನು ಬಣ್ಣ ಹಚ್ಚಿದ್ದು ೨೨-೨೩ ವರ್ಷಗಳ ನಂತರ, ನಟಿಯಾಗಿ.
ಚಂದದ ಎಂಟ್ರಿ ಕೊಟ್ಟಿದ್ದೀರಿ… ಮುಂದಿನ ಪರದೆಗಳು ತೆರೆದು ಮುಖ್ಯ ನಾಟಕ ನೋಡಲು ಕಾದಿರುವೆವು.
ಬಹಳ ಚಂದ ಬರ್ದಿರಿ ಜಯಾ
ಪ್ರಸಂಗ ಕಣ್ಣಿಗೆ ಕಟ್ಟಿದಂತಿತ್ತು. ನನಗೂ ಶಾಲೆಯಲ್ಲಿ ಅಭಿನಯಿಸಿದ ನಾಟಕದಲ್ಲಿ ಸಿಕ್ಕ ಬಹುಮಾನ ನೆನಪಿಗೆ ಬಂತು. ಮುಂದಿನ ಭಾಗಕ್ಕಾಗಿ ಕಾಯುತ್ತಿರುವೆ
ನಮಸ್ಕಾರ ಮೇಡಮ್ ನಿಮ್ಮ ರಂಗಪ್ರವೇಶದ ಬಗ್ಗೆ ಕುತೂಹಲಕರವಾಗಿ ಬರೆದಿದ್ದೀರಿ. ನಿಮ್ಮ ಅಂಕಣ ಓದಿದ ಮೇಲೆ ಗ್ರಾಮೀಣ ಭಾಗದಲ್ಲಿ ನಡೆಯುವ ನಾಟಕ ಪ್ರದರ್ಶನಕ್ಕೇ ಹೋಗಿ ಬಂದಂತಾಯಿತು. ಕಲೆಯ ಕುರಿತ ಗ್ರಾಮೀಣ ಜನರ ಆಸಕ್ತಿ, ಅದನ್ನು ಅವರು ವ್ಯಕ್ತಪಡಿಸುವ ರೀತಿ ಇವೆಲ್ಲವನ್ನೂ ಬಹಳ ಚಂದ ಒಡಮೂಡಿಸಿದ್ದೀರಿ. ಬಹಳ ಚಂದದ ಅಂಕಣ. ಪ್ರತೀ ವಾರ ತಪ್ಪದೇ ಓದುತ್ತೇನೆ. ಅಭಿನಂದನೆಗಳು ಮತ್ತು ಶುಭಹಾರೈಕೆಗಳು
ಆಪ್ತವಾಗಿ ಆವರಿಸಿಕೊಳ್ಳುವ ಬರಹ.
ತುಂಬ ಆಪ್ತವೆನಿಸುವ ಸುಂದರ ಬರೆಹ..
ನಮ್ಮ ಹಳ್ಳಿಯ ದಿನಗಳನ್ನು ನೆನಪಿಸಿದಿರಿ