ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಖುಶ್ವಂತ ಸಿಂಗ್ ಮತ್ತು ಒಂದು ಪೆಗ್ ಮಾಲ್ಟ್ ವ್ಹಿಸ್ಕಿ

ಡಾ ಎಸ್ ಬಿ ಜೋಗುರ

ಈಚೆಗೆ ನನಗೆ ಪರಿಚಯವಿರುವ ಸ್ನೇಹಿತರೊಬ್ಬರು ಖ್ಯಾತ ಪತ್ರಕರ್ತ, ಲೇಖಕ ಖುಶ್ವಂತ ಸಿಂಗ್ ತೀರಿದಾಗ ಯಾವುದೋ ಒಂದು ಪತ್ರಿಕೆಯಲ್ಲಿ ಬಂದಿರುವ ಅವರ ಬಗೆಗಿನ ವಿಚಾರಗಳನ್ನು ಓದಿ ದೀರ್ಥಾಯುಷ್ಯದ ಯಶಸ್ಸಿನಲ್ಲಿ ಒಂದು ಪೆಗ್ ಮಾಲ್ಟ್ ವ್ಹಿಸ್ಕಿ ಕೂಡ ಕೆಲಸ ಮಾಡುತ್ತದೆಯಂಥಲ್ಲ..? ಆ ಮಾಲ್ಟ್ ವಿಸ್ಕಿ ಎಂದರೆ ಏನು..? ಎನ್ನುವ ಪ್ರಶ್ನೆಯನ್ನು ಕೇಳಿದರು. ಅವರು ಮದ್ಯ ಸೇವಿಸುವುದೇ ಅಪರೂಪ, ಇನ್ನು ಸೇವಿಸುವುದೇ ಹೌದಾದಲ್ಲಿ ಈ ಮಾಲ್ಟ್ ವಿಸ್ಕಿಯನ್ನೇ ಸೇವಿಸದರಾಯಿತು ಎನ್ನುವ ಹಂಬಲ ಅವರದು. ನಾನು ಅವರಿಗೆ ಮಾಲ್ಟ್ ಅಂದರೆ ಕೆಲವು ಬಗೆಯ ಕಾಳುಗಳನ್ನು ನೆನೆಸಿ, ಒಣಗಿಸಿ, ಭಟ್ಟಿ ಇಳಿಸಿ ತಯಾರಿಸುವ ಮದ್ಯ ಎಂದು ಹೇಳಿದೆ. ಅದೇ ವೇಳೆಗೆ ದೀರ್ಘಯುಷ್ಯಕ್ಕೆ ಇಂಥದೇ ಒಂದು ಸೂತ್ರ ಎಂದಿಲ್ಲ. ಯಾಕೆಂದರೆ ಯಾವುದೇ ಸೂತ್ರಗಳ ಸಹವಾಸವಿಲ್ಲದೆಯೆ ನೂರಾರು ವರ್ಷ ಬದುಕಿರುವ ಉದಹರಣೆಗಳೂ ಇವೆ. ಒಂದಂತೂ ಸತ್ಯ ದೇಹ ಮತ್ತು ಮನಸಿನ ಸಮತೋಲನವನ್ನು ಸಾತತ್ಯವಾಗಿ ಕಾಯ್ದುಕೊಳ್ಳುವಲ್ಲಿಯೇ ನಿಜವಾದ ಆರೋಗ್ಯ..ಆಯಸ್ಸು ಅಡಕವಗಿದೆ.

ನಾವು ಮಾಡುತ್ತಿರುವ ಯಾವುದೇ ಕೆಲಸವನ್ನು ಅತ್ಯಂತ ಪ್ರೀತಿಯಿಂದ ಮಾಡುವಲ್ಲಿಯೆ ಅ ದಿನದ ನಿಜವಾದ ಆಯಸ್ಸು ಅರ್ಥಪೂರ್ಣವಾಗಿ ಕಳೆದಿರುತ್ತದೆ. ಬೆಳಕು ಹರಿಯುತ್ತಿರುವಂತೆ ಮೆದುಳಿನಲ್ಲಿ ಅಡ್ಡಾದಿಡಿ ಗೆರೆ ಕೊರೆಯುವಂತೆ ನಾನಾ ಬಗೆಯ ರೇಜಿಗೆಗಳನ್ನು ಹೊತ್ತು ದಿನಗಳೆಯುವುದು ಅನಾರೋಗ್ಯದ.. ಅಲ್ಪಾಯುಷ್ಯದ ಸೂತ್ರ. ಅದರಲ್ಲೂ ವಯಸ್ಸಾಗುತ್ತಾ ಬಂದಂತೆ ಮತ್ಸರ ಕಕ್ಕುವ ಖಯಾಲಿಯನ್ನು ಪ್ರಜ್ಞಾಪೂರ್ವಕವಾಗಿಯಾದರೂ ನೀವು ಬಿಡದಿದ್ದರೆ ನೀವು ಎಂಥದೇ ಸೂತ್ರವನ್ನು ಅನುಸರಿಸಿದರೂ ದೀರ್ಥಾಯುಷಿಗಳಾಗಿ ಬದುಕಲಾರಿರಿ. ಅಷ್ಟಕ್ಕೂ ಸರ್ವಜ್ಞನ ಕರೆಯದೇ ಬರುವವರಾಗಿ ನೂರರು ವರ್ಷ ಬದುಕುವುದರಲ್ಲಿ ಅದೇನು ಕಡಿದು ಹಾಕುವುದಿದೆಯೋ ಗೊತ್ತಿಲ್ಲ.

ಬರೀ ಮಾಲ್ಟ್ ವ್ಹಿಸ್ಕಿ ಕುಡಿಯುವದಷ್ಟೇ ಮುಖ್ಯವಲ್ಲ.. ಹಾಗೆ ಕುಡಿದು..ತಿಂದು ಆದ ಮೇಲೆ ರಾತ್ರಿಯಿಡೀ ಅಲ್ಲಿ ವ್ಯಯಿಸಿದ ಹಣದ ಬಗ್ಗೆ ಲೆಕ್ಕ ಹಾಕಿದರೆ ನಿಮ್ಮ ಬದುಕು ಇನ್ನಷ್ಟು ಬೇಗ ಚುಕ್ತಾ ಆಗುತ್ತದೆ. ನನ್ನ ಕೆಲವು ಸ್ನೇಹಿತರಿದ್ದಾರೆ. ಅಪರೂಪಕ್ಕೊಮ್ಮೆ ಅವರು ಡ್ರಿಂಕ್ಸ್ ಮಾಡಿದರೂ ಊಟಕ್ಕಾಗಿ ಅವರು ವ್ಯಯಿಸುವ ಸಮಯಕ್ಕಿಂತಲೂ ಹೆಚ್ಚಾಗಿ ಅಲ್ಲಿರುವ ರೇಟ್ ಬೋರ್ಡ್ ಓದುವದರಲ್ಲಿ ಕಳೆಯುತ್ತಾರೆ. ಅತ್ಯಂತ ನಿರ್ಗತಿಕರಂತೆ ಕನಿಷ್ಟ ಬೆಲೆಯ ಮದ್ಯ ಸೇವಿಸುವುದು.. ಒಣಗಿದ ಹಫ್ಫಳ ತಿನ್ನುವುದು..ಒಂದು ಬಿರಿಯಾನಿಯನ್ನು ಮೂರ್ನಲ್ಕು ಜನ ತಿನ್ನುವುದು ಕೊನೆಗೆ ಬಿಲ್ ಬಂದಾಗ ಅಯ್ಯೋ ಬಿಲ್ ಬಹಳ ಅಯ್ತಲ್ಲ..? ಅಂತ ಕರಬುವವರು ಕೂಡ ಈ ಸರ್ದಾಜಿಯ ಮಾಲ್ಟ್ ವಿಸ್ಕಿ ಸೂತ್ರವನ್ನು ಕೊಂಡಾಡುತ್ತಾರೆ. ಒಂದೆರಡು ಸಾರಿ ಇವರ ಸಹವಾಸ ನೋಡಿ ಅವರ ಜೊತೆಗೆ ಹೋಗುವುದನ್ನೇ ನಾನು ಬಿಟ್ಟು ಬಿಟ್ಟೆ. ನಾನು ಮೊದಲೇ ಹೇಳಿದೆ ಏನೇ ಮಾಡಿದರೂ ಯಾವುದನ್ನೇ ಮಾಡಿದರೂ ಪ್ರೀತಿಯಿಂದ ಸಂಪೂರ್ಣವಾಗಿ ತೊಡಗಿಸಿಕೊಂಡು ಮಾಡಬೇಕು. ಡಾಕ್ಟರು ಹೇಳಿದ ಕಾರಣಕ್ಕೆ ಒಂದು ನಾಯಿಯನ್ನು ಸಾಕುವುದಕ್ಕೂ ನಿಜವಾಗಿಯೂ ಅವುಗಳನ್ನು ಅಪಾರವಾಗಿ ಪ್ರೀತಿಸುವ ಗುಣವಿದ್ದು ಸಾಕುವುದಕ್ಕೂ ವ್ಯತ್ಯಾಸವಿಲ್ಲವೇ..? ಖುಷ್ವಂತಸಿಂಗ್ ತಾನು ಪ್ರತಿನಿತ್ಯ ಕುಡಿಯುತ್ತಿದ ಮಾಲ್ಟ್ ವಿಸ್ಕಿಗಾಗಿ ವಿನಿಯೋಗಿಸಿದ ದುಡ್ಡನ್ನು ಕುರಿತು ಲೆಕ್ಕ ಹಾಕುತ್ತ ಮಲಗಿದರೆ 99 ವರ್ಷ ಆತ ಬದುಕಲು ಸಾಧ್ಯವೇ ಇರಲಿಲ್ಲ. ಆತ ಏನೇ ಮಾಡಿದರೂ ಪ್ರಫುಲ್ಲವಾದ ಮನ:ಸ್ಥಿತಿಯಿಂದ ಮಾಡುವವನು.

ಖುಷ್ವಂತಸಿಂಗ್ ತನ್ನ ಸಾವಿನ ಬಗ್ಗೆ ಹದಿನೈದು ವರ್ಷ ಮುಂಚೆಯೆ ಮಾತನಾಡಿರುವುದಿತ್ತು. ತನ್ನ 85 ವರ್ಷದ ಹುಟ್ಟು ಹಬ್ಬದ ಸಂದರ್ಭದಲ್ಲಿ ‘ಟೈಮ್ಸ್ ಆಫ್ ಇಂಡಿಯಾ’ ದ ಹುಮ್ರಾ ಖುರೈಸಿ ಸಂದರ್ಶನ ಮಾಡುವ ವೇಳೆಯಲ್ಲಿಯೆ ಸಾವನ್ನು ಯತರ್ಥವಾಗಿ ಸ್ವೀಕರಿಸುವ ಬಗ್ಗೆ ಮಾತನಾಡಿದ್ದರು. ಖುಸ್ವಂತ ಪಶ್ಚಿಮ ಪಂಜಾಬದ ಒಂದು ಪುಟ್ಟ ಗ್ರಾಮದಲ್ಲಿ ಜನಿಸಿದವರು. ಅವರ ತಂದೆಯವರು ಆಗ ದೆಹಲಿಯಲ್ಲಿದ್ದರು. ತಾಯಿ ಪಂಜಾಬದ ಆ ಹಳ್ಳಿಯಲ್ಲಿ. ಜೊತೆಗೆ ಅಜ್ಜಿ ಅಂದರೆ ತಂದೆಯ ತಾಯಿಯೂ ಇದ್ದರು. ಅವರಿಗೆ ತಮ್ಮ ಜನ್ಮ ದಿನದ ಬಗ್ಗೆಯೂ ಗೊಂದಲಗಳಿರುವ ಬಗ್ಗೆ ಒಂದು ಲೇಖನದಲ್ಲಿ ಖುಸ್ವಂತ ತಮಾಷೆಯಾಗಿ ಹೇಳಿಕೊಂಡಿರುವುದಿದೆ. ಇದನ್ನು ಆ ಖುರೈಸಿ ಎದುರಲ್ಲಿಯೂ ಅವರು ಹೇಳಿರುವದಿದೆ. ಅವರ ತಂದೆಯವರು ಹೇಳುವ ಹಾಗೆ ಅವರ ಜನನ ಫೆಬ್ರುವರಿ 2-1915 ಅವರ ಅಜ್ಜಿ ಹೇಳುವ ಹಾಗೆ ಅಗಷ್ಟ ತಿಂಗಳು 1915 ಅಂದರೆ ಹೆಚ್ಚೂ ಕಡಿಮೆ ತಮ್ಮ ಗ್ರಾಮದಲ್ಲಿ ಎಲ್ಲರ ಹುಟ್ಟಿನ ಹಣೆಬರಹವೇ ಹೀಗೆ. ಹೀಗಾಗಿ ಒಂದೆರಡು ವರ್ಷ ಹೆಚ್ಚೂ ಕಡಿಮೆ ಅಂತರಗಳು ಜನ್ಮ ದಿನಕ್ಕೆ ಸಂಬಂಧಿಸಿ ಇದ್ದೇ ಇವೆ ಎಂದ ಖುಶ್ವಂತ್ ತಮ್ಮ ಜನ್ಮದ ಬಗ್ಗೆಯೂ 1914 ರಿಂದ 1916 ರ ವರೆಗೂ ಕತೆಗಳಿವೆ ಎಂದು  ‘Big book of Malice’  [Prepare for death while alive]  [p.232] ಎನ್ನುವ ಕೃತಿಯಲ್ಲಿ ಅವರು ಬರೆದಿರುವದಿದೆ. ಖುಶ್ವಂತಸಿಂಗ್ ಗೆ ಆಗ 85 ವರ್ಷ ತಾನು ಹೆಚ್ಚೆಂದರೆ ಒಂದೆರಡು ವರ್ಷ ಬದುಕಬಹುದು ಎಂದ ಮನುಷ್ಯ ಮತ್ತೆ ಹದಿನೈದು ವರ್ಷ ಮೊದಲಿನಷ್ಟೇ ಕ್ರಿಯಾಶೀಲವಾಗಿ ಬದುಕಿದ್ದು ಯಾರಿಗಾದರೂ ಅವರ ಆರೋಗ್ಯದ ಸೂತ್ರಗಳನ್ನು ಕುರಿತು ಯೋಚಿಸುವಂತೆ ಮಾಡೇ ಮಾಡುತ್ತದೆ.

ಖುಷ್ವಂತ್ ಒಬ್ಬ ನೀರಿಶ್ವರವಾದಿಯಾಗಿದ್ದ ಮನುಷ್ಯ. ಹೀಗಾಗಿ ಧಾರ್ಮಿಕ ಯಾತ್ರಾಸ್ಥಳಗಳಿಗೆ ಭೇಟಿ ನೀಡುವುದು, ಪೂಜೆ ಪ್ರಾರ್ಥನೆಗಳ ಮೂಲಕ ಸ್ವರ್ಗದ ಅನ್ವೇಷಣೆ ಮಾಡುವ ಗುಣ ಹೊಂದಿರದೇ ತೀರಾ ಸ್ವಾಭಾವಿಕವಾಗಿ ಸಾಯಬೇಕು ಎಂದು ಹಂಬಲಿಸುತ್ತಿದ್ದರು. ಅದಕ್ಕೆ ತಕ್ಕುದಾದ ರೀತಿಯಲ್ಲಿಯೆ ಮನ:ಸ್ಥಿತಿಯನ್ನು ರೂಪಿಸಿಕೊಂಡಿದ್ದರು. ಸಾಕ್ರೇಟಿಸ್ ಹೇಳುವ ‘ಪ್ರತಿಯೊಬ್ಬನು ಸಾಯುವದನ್ನು ತಾಲೀಮು ಮಾಡಬೇಕು’ ಎನ್ನುವ ಮಾತನ್ನು ಮತ್ತೆ ಮತ್ತೆ ಮನನ ಮಾಡುತ್ತಿದ್ದ ಖುಷ್ವಂತ್ ಹೇಗೆ ತಾಲೀಮು ಮಾಡಬೇಕು ಎನ್ನುವುದನ್ನು ನಮಗೆಲ್ಲ ತನ್ನ 58 ವರ್ಷ ವಯಸ್ಸಿನಲ್ಲಿಯೆ ಟಿಬೆಟ್ ಬೌದ್ಧ ಗುರು ದಲೈ ಲಾಮಾ ಮೆಡಿಟೇಶನ್ ಮೂಲಕ ತೋರಿಸಿಕೊಟ್ಟಿರುವರು ಎಂದಿರುವರು. ಆದರೆ ತನ್ನಂಥಾ ನಿರೀಶ್ವರವಾದಿಗೆ ಇದು ತುಸು ಕಷ್ಟ ಎಂದು ಒಪ್ಪಿಕೊಳ್ಳುವ ಖುಷ್ವಂತಸಿಂಗ್ ಪ್ರತಿಯೊಬ್ಬ ಲೌಕಿಕ ಮನುಷ್ಯ ಸಾವು ಕೇವಲ ಬೇರೆಯವರಿಗೆ ಮಾತ್ರ ತನಗೆ ಬರುವದಿಲ್ಲ ಎಂಬಂತೆ ಬದುಕುವುದೇ ಈ ಬದುಕಿನ ಬಹುದೊಡ ವಿಪರ್ಯಾಸ. ಇಂದು ಅವನು ನಾಳೆ ನಾನು ಎನ್ನುವ ಕಟು ವಾಸ್ತವ ಸಹಿಸುವ ಗುಣವೇ ನಮ್ಮನ್ನು ಆ ದಿಶೆಯಲ್ಲಿ ಸಾಕಷ್ಟು ಪ್ರಬುದ್ಧರನ್ನಾಗಿಸುತ್ತದೆ ಎನ್ನುವ ಖುಷ್ವಂತ ತನ್ನಿಷ್ಟದ ಹಾಗೆ ತುಂಬು ಜೀವನವನ್ನು ಬದುಕಿದವರು. ಇಂಥದೇ ಇನ್ನೊಂದು ವ್ಯಕ್ತಿತ್ವ ನಮ್ಮದೇ ರಾಜ್ಯದ ಲಂಕೇಶ ಮೇಸ್ಟರು. ಲಂಕೇಶ ಕೇವಲ ತಾನು ಕಲಿಸುತ್ತಿದ್ದ ವಿದ್ಯಾರ್ಥಿಗಳಿಗೆ ಮಾತ್ರ ಮೇಸ್ಟ್ರಾಗಿ ಉಳಿಯಲಿಲ್ಲ. ರಿಕ್ಷಾ ಓಡಿಸುವವನ ಪಾಲಿಗೂ..ತರಕಾರಿ ಮಾರುವವನ ಪಾಲಿಗೂ ಅವರು ಮೇಸ್ಟ್ರಾಗಿದ್ದರು. ಈ ಬಗೆಯ ಮೇಸ್ಟ್ರಾಗುವುದು ಅವರನ್ನು ಬಿಟ್ಟರೆ ಮತ್ಯಾರಿಗೂ ಸಾಧ್ಯವಾಗಿಲ್ಲ.

ಹಾಗೆಯೆ ಖುಶ್ವಂತಸಿಂಗ್ ಪತ್ರಿಕೋದ್ಯಮದಲ್ಲಿ ತನ್ನ ಸಹವಾಸಕ್ಕೆ ಬರದೇ ಎಲ್ಲೋ ದೂರದ ಪ್ರದೇಶದಲ್ಲಿದ್ದವರಿಗೂ  ಮೂರ್ತಿಯಾಗಿಸಿ ಬಿಲ್ಲು ವಿದ್ಯೆ ಕಲಿತ ಏಕಲವ್ಯನಂತೆ ಅನೇಕರ ಪಾಲಿಗೆ ಒಬ್ಬ ಒಳ್ಳೆಯ ಗುರುವಾಗಿ ಕೆಲಸ ಮಾಡಿರುವದಿದೆ. ಇವರಿಬ್ಬರೂ ಎರಡು ವಿಶ್ವವಿದ್ಯಾನಿಲಯವಿದ್ದಂತೆ. ಲಂಕೇಶರು ರಜ್ಯ  ವಿಶ್ವವಿದ್ಯಾಲಯವಾದರೆ, ಖುಶ್ವಂತ ಸೆಂಟ್ರಲ್ ಯುನಿವರ್ಸಿಟಿ ಇದ್ದಂತೆ. ಇವರ ವಿದ್ವತ್ತು..ಪ್ರತಿಭೆ..ಸಾಮಥ್ರ್ಯದ ಹಿಂದೆ ಇದ್ದದ್ದು ಯಾವುದೋ ಒಂದು ಬ್ರ್ಯಾಂಡಿನ್ ವಿಸ್ಕಿಯಾಗಲೀ ರಮ್ ಅಗಲೀ ಅಲ್ಲ. ಬದಲಾಗಿ ಸಾತತ್ಯವಾದ ಅಧ್ಯಯನದ ಶಿಸ್ತು..ಶ್ರಮ ಪಡುವ ಗುಣ. ಹಾಗಾಗಿಯೆ ಖುಶ್ವಂತ್ ಅತಿಯಾಗಿ ಯಾರ ಜೊತೆಗೊ ಹರಟೆ ಹೊಡೆಯುವದನ್ನು ಇಷ್ಟಪಡುತ್ತಿರಲಿಲ್ಲ. ಸಾವಿನ ಕಡೆಯ ದಿನಗಳಲ್ಲಿ ಪ್ರಧಾನಿ ಪತ್ನಿ ಕೌರ್ ಅವರೊಂದಿಗೆ ಮಾತಿಗೆ ಕುಳಿತಾಗ ಅರ್ಧ ಘಂಟೆಯ ನಂತರ ಟೈಮನ್ನು ನೋಡಿ ಪ್ರಧಾನಿಯ ಪತ್ನಿ ಅರ್ಧ ಘಂಟೆಗಿಂತಲೂ ಹೆಚ್ಚು ನನ್ನಂಥವನ ಜೊತೆಗೆ ಹರಟುತ್ತ ಕೂಡಬಾರದು ಎಂದವನು.  ಇವರನ್ನು ತಕ್ಕ ಮಟ್ಟಿಗಾದರೂ ಅಮೂರ್ತವಾಗಿ ಗ್ರಹಿಸುವ ಮೂಲಕವೇ ನಾವು ಇವರ ಪ್ರಭಾವಕ್ಕೆ ಒಳಪಡುವ ಅಗತ್ಯವಿದೆ. ಅವರು ತಿನ್ನುವ, ಕುಡಿಯುವ, ತೊಡುವ ಪರಿಕರಗಳನ್ನು ಅನುಸರಿಸುವ ಮೂಲಕವಲ್ಲ. ಅಷ್ಟಕ್ಕೂ ಪೆಗ್ ಇಳಿಸುವ ಪ್ರೀತಿ ಅದರ ಬಿಲ್ ಭರಿಸುವ ಸಂದರ್ಭದಲ್ಲಿಯೂ ಅದೇ ಪ್ರಮಾಣದಲ್ಲಿದ್ದಾಗ ಮಾತ್ರ ನೀವು ಹೊಟ್ಟೆಗಿಳಿಸಿದ ಗುಂಡು.. ತುಂಡು ಕೆಲಸ ಮಾಡಬಹುದೇ ಹೊರತು ಆಸಿಡಿಟಿಗೆ ಕಾರಣವಾಗುವಂಥಾ ರಾಸಾಯನಿಕವನ್ನು ಶ್ರವಿಸುವಂಥಾ ಆಲೋಚನೆಗಳನ್ನು ಮಾಡುವವರಿಗೆ ಯಾವುದೇ ಸೂತ್ರಗಳು ಅಪ್ಲಿಕೇಬಲ್ ಆಗುವುದಿಲ್ಲ ಎನ್ನುವುದೇ ಕಠೋರ ಸತ್ಯ.

 

‍ಲೇಖಕರು avadhi

1 April, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading