ಜಿ ಪಿ ಬಸವರಾಜು
ಎರಡು
ಕಡ್ಡೀ ಕಾಲು,
ಒಂದು
ಉದ್ದನೆಯ ಕೋಲು,
ಗೋಲಿ ಕಣ್ಣುಗಳಿಲ್ಲದ
ಖಾಲಿ
ಕನ್ನಡಕ,
೧೫೦ಕ್ಕೆ ಮತ್ತೇನು
ಬೇಕು ಗಾಂಧಿ?
ಎಲ್ಲವೂ ದೇಶಿ,
ಬೀದಿಯ ಸರಕು
ಅಗ್ಗವೆಂದರೆ ಅಗ್ಗ
ಹಿಗ್ಗಿನಿಂದಲೇ ತಂದು
ಒಂದಲ್ಲ ಹತ್ತು ಬಾರಿ
ಅಡ್ಡಬಿದ್ದು
ಗಾಂಧಿಗೆ ರೂಪಕೊಡಲು
ನೋಡಿದೆ
ಬಟ್ಟೆ ಎಂದರು ಕೆಲವರು
ಮೂಲೆಗೆ ಬಿದ್ದ ಖಾದಿ
ಭಂಡಾರಗಳು, ಚರಕಗಳು
ಹುಡುಕಿ, ತಡಕಿ ತಂದರೂ
ಅಪ್ಪಟ ದೇಶಿ ಎಂದರೂ
ಸಿಗಲಿಲ್ಲ ನಿಜದಲ್ಲಿ
ಗಾಂಧೀಜಿಯ ಬಟ್ಟೆ
ಸುದ್ದಿ ಕೇಳಿ, ಗಾದಿ-
ಇಳಿದು ಕೆಳಗೆ ಬಂದ
ಪ್ರಧಾನಿ, ನಿಂತಲ್ಲೇ
ಕಳಚಿದರು ತೊಟ್ಟ ಬಟ್ಟೆ
ಇಗೋ ತಗೊಳ್ಳಿ ತೊಡಿಸಿ
ಗಾಂಧೀಜಿಗೆ, ಇದು
ಗಾಂಧಿಯದೇ ಬಟ್ಟೆ ಎಂದರು;

ತೊಟ್ಟರೂ ಕೋಟಿ
ಕಳಚಿದರೂ ಕೋಟಿ
ಝಗಮಗಿಸುವ ಪ್ರಧಾನಿ-
ಬಟ್ಟೆ ಎಂದರೆ
ಸಾಮಾನ್ಯವೇ ಎಂದು
ಬೀಗಿ, ಜೋಡಿಸಿದೆ ಗಾಂಧಿಗೆ;
ಬೆಚ್ಚಿಬಿದ್ದು ಗಾಂಧಿ
ಬೊಚ್ಚುಬಾಯಲ್ಲಿ
ನಕ್ಕರು,
‘ಇನ್ನೂ ಕಳೆಯಲಿ
೧೫೦, ಆಗಲಾದರೂ
ಸಿಕ್ಕೀತು ನನ್ನ ಬಟ್ಟೆ
ನನಗೆ’
ಘಾಟಿ ಮುದುಕನಿಗೆ
ಬಟ್ಟೆಯೇ ಬೇಡ
ಇರಲಿ ಹೀಗೆ
ಗೊಮ್ಮಟನ ಹಾಗೆ,
ಕಣ್ಣಾದರೂ ಇರಲಿ
ಖಾಲಿ ಕನ್ನಡಕ ಸರಿ-
ಅಲ್ಲ
ಎಂದು ಹೊರಟೆ
ರಾಮ ರಾಮ
ಸುತರಾಂ ಸಿಗಲಿಲ್ಲ
ದಾನಿಗಳು ದೇಶದ ತುಂಬ
ಗಾಂಧಿ ಕಣ್ಣು ಎಲ್ಲೂ ಬೆಳಗಲಿಲ್ಲ
ಖಾಲಿ ನಗುತ್ತಿತ್ತು
ಗಾಂಧಿ ಕನ್ನಡಕ






ಚೆನ್ನಾಗಿದೆ