ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕ್ಲೌಡಿನೊಳಗೆ ಸಿಕ್ಕಿ ಹಾಕಿಕೊಂಡ ಕವಿತೆ..

ಸದಾಶಿವ ಸೊರಟೂರು 

ಎಲ್ಲರೂ ಕೇಳುತ್ತಾರೆ
ಒಬ್ಬರೆ ಅಲ್ಲವೇ ನೀವು ರೂಮಿನಲ್ಲಿ?
ಉತ್ತರಿಸುತ್ತೇನೆ ‘ಇಲ್ಲ, ಒಬ್ಬನಲ್ಲ…’

ನೋಡಿ ರೂಮೆಂದರೆ ಇಷ್ಟೇ
ಅದಕ್ಕೆ ಅಂಟಿಕೊಂಡ ಒಂದ ಶೌಚ
ಕೈಯಿಟ್ಟ ಕಡೆಯಲ್ಲಾ ಸಿಗುವ
ಪುಸ್ತಕಗಳ ರಾಶಿ,
ಏನೇನೊ ಗೀಚಿಸಿಕೊಂಡ ಅನಾಥ ಹಾಳೆಗಳು
ಮತ್ತು ಚಹಾ ಬೇಯಿಸಿ ಕವನಗಳೊಂದಿಗೆ
ಕುಡಿಯಲು ಇಟ್ಟುಕೊಂಡು
ಒಂದು ಸೀಮೆಎಣ್ಣೆಯ ಸ್ಟೌವ್.
ಒಂದೊಂದು ಕವಿತೆಗೂ ಒಂದೊಂದು ರುಚಿ
ನಾನು ಒಬ್ಬನೇ ಇಲ್ಲ ಮಾರಾಯ
ಇಲ್ಲಿ ಕವಿತೆಗಳಿವೆ.
ನಿಮಗೆ ಗೊತ್ತಲ್ಲ….!?
ಅವುಗಳನ್ನು ಸಂಭಾಳಿಸುವುದು
ಈಗೀಗ ಕಷ್ಟವೆನಿಸಿಬಿಟ್ಟಿದೆ
ತೊಟ್ಟಿಲಲ್ಲಿ ಮಲಗಿಸಿ
ನಿಪಲ್ ನೀಡಿ ತೂಗಿದರೆ ಸಾಕು
ಮಲಗುವ ಮಕ್ಕಳಂತಲ್ಲ ಅವು;
ಸದಾ ಎಚ್ಚರದ ಗಿರಾಕಿಗಳು
ಎಲ್ಲೆಲ್ಲಿಗೊ ಹೋಗಿ ನುಗ್ಗಿ
ಬಂದು ನನ್ನ ಎದೆ ಮೇಲೆ ಕೂತು
ಹಿಂಡುತ್ತವೆ ಇಲ್ಲವೆ
ಬೆನ್ನು ಮೇಲೆ ಕೂತು
ತಣ್ಣನೆಯ ಕೈಯಿಂದ ಮೃದುವಾಗಿ ಸವರಿ
‘ಬಿಡು, ಮಾರಾಯ ನೀನೆ ಲಕ್ಕಿ’
ಅನ್ನುತ್ತವೆ..
ಅದ್ಯಾಕೆಂದು ನನಗೆ  ಉತ್ತರವೇ ಹೊಳೆದಿಲ್ಲ

ಹೆಣ್ಣನ್ನು ಹಾಗೆ ಹಿಡಿಯಾಗಿ ಮುಕ್ಕುವ
ಸುಳ್ಳನ್ನು ಸತ್ಯವಾಗಿಸುವ
ಕೃತಕತೆಯನ್ನೆ ಬದುಕು ಮಾಡಿಕೊಂಡ,
ಶೋಕಿಗೆ ಬಿದ್ದು, ನೀತಿ ನಿಯತ್ತನ್ನು
ಅಡ್ಡಡ್ಡ ಮಲಗಿಸಿರುವ,
ಹಸಿದ್ಹಸಿದು ಊಟಕ್ಕೆ ಬರೀ
ಇಷ್ಟೇ ಇಷ್ಟೇ ಗಾಳಿ‌ ಕುಡಿದ,
ಬಟ್ಟೆಯೇ ಇಲ್ಲದೆ ಬರೀ ಹೊಲಿಗೆಯಿಂದಲೇ
ಮೈಮುಚ್ಚಿಕೊಂಡಿರುವ-
ಎಡೆಯಲ್ಲೆಲ್ಲಾ ಸುತ್ತಾಡಿ
ಬಂದ ಕವಿತೆಗಳು ನನ್ನ ಎದೆಯೊಳಗೆ
ಸಣ್ಣಗೆ ಕೊರೆಯುತ್ತವೆ..

ಇಂತಹ ಅದೆಷ್ಟು ಕವನಗಳಿವೆ
ನನ್ನ ರೂಮಿನೊಳಗೆ!
ಒಬ್ಬನೇ ಇದ್ದರೂ ಕವಿತೆಗಳ ಸಹವಾಸಕ್ಕೆ
ಜಾತ್ರೆಯ ಮಧ್ಯದ ದಿಗಿಲು
ಕಳೆದು  ಹೋಗುವ ತಹತಹಿಕೆ
ನಾನು ಒಬ್ಬನೇ ಇರಲು ಬಿಡದಂತೆ
ಬಂದು ಬಂದು ಮುತ್ತುತ್ತಾ, ಮಿಡಿಯುತ್ತಾ
ಕೂತರೆ ನನ್ನ ಪಾಡೇನು ಸ್ವಾಮಿ?

ಸಾಕಾಗಿದೆ ಈ ಕವಿತೆಗಳ ಸಹವಾಸ
ಕವಿತೆಗಳ ವಿಲೇವಾರಿಯೇ ಕಷ್ಟವಾಗಿದೆ
ಹಾಗೆ ಬಂದ ಬಂದ ಕವಿತೆಗಳನ್ನು
ಕ್ಲೌಡ್ ನೊಳಗೆ ತಳ್ಳಿ
ಪಾಸ್ವರ್ಡ್ ಮರೆಯುತ್ತೇನೆ
ಏನೋ‌ ಸಣ್ಣ ಸಮಾಧಾನ!

ಹಾಗೆ ಅವತ್ತು ಕವನಗಳನ್ನು ತಳ್ಳಿ-ತಳ್ಳಿ
ಪಾಸ್ವರ್ಡ್ ಕೊಡುವಾಗ
ಅವಳ ಕವಿತೆಯೂ ಕ್ಲೌಡ್ ಹೊಕ್ಕಿದೆ
ನನ್ನ ಹಣೆ ಬರಹ ನೋಡಿ
ಪಾಸ್ವರ್ಡ್ ಕೂಡ ಮರೆತಿದೆ
ಮರೆತಿದೆಯೊ? ಬೇಕು ಅಂತಾನೆ ಮರೆತೆನೊ?
ನನಗೂ ಅನುಮಾನ!
ಕವನ ಮತ್ರ ಕ್ಲೌಡ್ ನೊಳಗೆ ಸಿಕ್ಕಿ ಹಾಕಿಕೊಂಡಿದೆ
ಪಾಸ್ವರ್ಡ್ ಸಿಗಬೇಕೊ ಬೇಡವೊ
ಎಂಬ ದ್ವಂದ್ವದಲ್ಲೇ ಇದ್ದೇನೆ..

ಹೌದು, ಬದುಕು ಹಾಗೆಯೇ ಇರಬೇಕು
ಹಿಡಿಯಷ್ಟು ದ್ವಂದ್ವ ಸದಾ ಜೀವಂತವಿರಬೇಕು!
ಅವಳ ನೆನಪಿನಂತೆ, ಅರ್ಧ ಮುಗಿದ ಬದುಕಿನಂತೆ..

‍ಲೇಖಕರು avadhi

23 January, 2020

2 Comments

  1. T S SHRAVANA KUMARI

    thumba chennagide.

  2. ಲಲಿತಾ ಸಿದ್ಧಬಸವಯ್ಯ

    ಕವಿತೆ ಸೊಗಸಾಗಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading