ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕ್ರಿಶ್ಚಿಯನ್ನರು, ಚರ್ಚ್ ಮತ್ತು ನಾನು

ಬಿ ಎಂ ಹನೀಫ್
*

ನನ್ನ ಬಾಲ್ಯದ ಒಂದು ಮಹತ್ವದ ಘಟ್ಟ ಕುಂದಾಪುರದ್ದು. ಅಲ್ಲಿನ ಚರ್ಚ್ ರಸ್ತೆಯಲ್ಲಿ ನನ್ನ ಮನೆ ಇತ್ತು. ನಮ್ಮಪ್ಪ ಬಿಡಿಒ ಕಚೇರಿಯಲ್ಲಿ agricultural extension officer ಆಗಿದ್ದರು.

ಚರ್ಚ್ ರಸ್ತೆಯಲ್ಲಿ ಹವಾಲ್ದಾರ್ ಎನ್ನುವವರ ತಾರಸಿ ಮನೆಯಿತ್ತು.‌ ಅಲಕ ನಂದಾ ಎನ್ನುವ ಮನೆಯ ವಿಶಿಷ್ಟ ಹೆಸರು ಈಗಲೂ ನೆನಪಿದೆ. ಹವಾಲ್ದಾರ್ ಅವರ ಮನೆ ಮುಂದೆ ಇದ್ದ ಕ್ರಿಶ್ಚಿಯನ್ ಕಾಂಪೌಂಡ್ ನಲ್ಲಿ ನಮ್ಮ ಬಾಡಿಗೆ ಮನೆ.

ನಮ್ಮ ಕಾಂಪೌಂಡಿನಲ್ಲಿ ಒಟ್ಟು ನಾಲ್ಕು ದೊಡ್ಡ ಮನೆಗಳಿದ್ದವು. ಒಂದು ಮನೆ ಶೇರೆಗಾರರದ್ದು. ಇನ್ನೊಂದು ಮನೆ ದಲಿತರದ್ದು, ಮತ್ತೊಂದು ಲಿಂಗಾಯತರದ್ದು.

ಮಂಗಳೂರಿನ ಪಡುಪಣಂಬೂರಿನಲ್ಲಿ ಮದ್ರಸಾ ಮತ್ತು ಉರ್ದು ಶಾಲೆಯ ಮೂರನೇ ತರಗತಿವರೆಗಿನ ಶಿಕ್ಷಣ ಮುಗಿಸಿ ಕುಂದಾಪುರಕ್ಕೆ ಬಂದವನು ನಾನು. ಕುಂದಾಪುರದಲ್ಲಿ ಚರ್ಚ್ ಕಾಂಪೌಂಡಿನ ಹೊರಗೆಯೇ ನಮ್ಮ ಮನೆ ಇತ್ತು.

ಕುಂದಾಪುರದ ಉದ್ದನೆಯ ಚರ್ಚ್ ರಸ್ತೆಯ ಕಣ್ಣೋಟ ಈಗಲೂ ನನ್ನ ಮನಸ್ಸಿನ ಸ್ಥಾಯಿಭಿತ್ತಿಯಲ್ಲಿ ಸ್ಥಿರವಾಗಿದೆ. ಬೋರ್ಡ್ ಹೈಸ್ಕೂಲಿನಿಂದ ಆರಂಭವಾಗುವ ಸುಮಾರು ಎರಡು ಕಿಮೀ ಉದ್ದದ ಈ ರಸ್ತೆ ನದೀ ತೀರದವರೆಗೆ ಇದೆ.

ಈಗ ನದಿ ದಾಟಲು ಸೇತುವೆ ಇದೆ. ಕಾರಿನಲ್ಲಿ ದಾಟಿದರೆ ಕೋಡಿ ತಲುಪುತ್ತೀರಿ. ಆಗ ದೋಣಿಯಲ್ಲಿ ನದಿ ದಾಟಬೇಕಿತ್ತು.

ನಾಲ್ಕನೇ ಮತ್ತು ಐದನೇ ತರಗತಿ ಕಲಿತದ್ದು ಚರ್ಚ್ ಕಾಂಪೌಂಡಿನ ಎಡಬದಿಯಲ್ಲಿ ಇದ್ದ ಸೈಂಟ್ ಜೋಸೆಫ್ಸ್ ನಲ್ಲಿ. ಆ ಬಳಿಕ ಆರನೇ ತರಗತಿ ಬೋರ್ಡ್ ಹೈಸ್ಕೂಲ್ ಪಕ್ಕದಲ್ಲಿ ಇದ್ದ ಸೈಂಟ್ ಮೇರೀಸ್ ನಲ್ಲಿ.

ನಮ್ಮ ಬಾಡಿಗೆ ಮನೆಯಿದ್ದ ತೆಂಗಿನ ತೋಟದಲ್ಲೇ ಇನ್ನೊಂದು ತುದಿಯಲ್ಲಿ ಓನರ್ ಮನೆಯಿತ್ತು. ನಾರ್ಬರ್ಟ್, ಸೀಬರ್ಟ್ ಎಂಬ ಇಬ್ಬರು ಮನೆ ಮಾಲೀಕರ ಮಕ್ಕಳ ಹೆಸರು ನೆನಪಿದೆ. ಇವರಲ್ಲಿ ಒಬ್ಬರು ವಿದೇಶದಲ್ಲಿ ಕೆಲಸದಲ್ಲಿದ್ದರು. ಅವರ ತಂಗಿ ನನಗೆ ಮೇರಿಯಕ್ಕ. ಕುಂದಾಪುರದ ಪೇಟೆಗೆ ಏನಾದರೂ ಖರೀದಿಗೆ ಮೇರಿಯಕ್ಕ ನಡೆದೇ ಹೋಗುವುದಿದ್ದರೆ ನಾನು ಅವರ ಜೊತೆಗಿರಬೇಕು.

ಕ್ರಿಶ್ಚಿಯನ್ ಕುಟುಂಬದ ವೈಶಿಷ್ಡ್ಯಗಳೆಲ್ಲ ನನ್ನ ಗಮನಕ್ಕೆ ಬಂದದ್ದು ಕುಂದಾಪುರದಲ್ಲೇ. ಅವರ ಕ್ರಿಸ್ಮಸ್ ಸಡಗರ, ಮನೆಯಲ್ಲಿ ನಡೆಯುವ ಕುಟುಂಬದ ಸದಸ್ಯರ ಪಾರ್ಟಿ ಮತ್ತು ಅದರಲ್ಲಿ ಮಾಡುವ ಸಂಗೀತಮಯ ಡ್ಯಾನ್ಸ್ ಎಲ್ಲವನ್ನೂ ನಾನು ಬೆರಗುಗಣ್ಣುಗಳಿಂದ ನೋಡುತ್ತಿದ್ದೆ. ನಮ್ಮ ಶಾಲಾ ವಾರ್ಷಿಕೋತ್ಸವದಲ್ಲೂ ” ಯೇ ಯೇ ಕತ್ರಿನಾ… ನಾ ನಾ ಯೂಂಜಿನಾ..” ಎನ್ನುವ ಹಾಡಿಗೆ ಡ್ಯಾನ್ಸ್ ಮಾಡುತ್ತಿದ್ದುದು ನೆನಪಾಗುತ್ತಿದೆ.

ಚರ್ಚ್ ನ ಎತ್ತರದ ಗೋಪುರದಲ್ಲಿದ್ದ ಗಂಟೆ ಬೆಳಿಗ್ಗೆ ಮತ್ತು ಸಂಜೆ ಮೊಳಗುತ್ತಿತ್ತು. ಊರಿನಲ್ಲಿ ಯಾರಾದರೂ ಮರಣ ಹೊಂದಿದರೂ ಆ ಗಂಟೆ ಬಾರಿಸುತ್ತಿದ್ದರು. ಉದ್ದನೆಯ ಹಗ್ಗ ಕಟ್ಟಿದ ಗಂಟೆಯದು. ಹಗ್ಗವನ್ನು ಎಳೆದು ಗಂಟೆ ಬಾರಿಸುತ್ತಿದ್ದರು.

ಕ್ರಿಶ್ಚಿಯನ್ನರ ಮರಣದ ಮೆರವಣಿಗೆ ಬಹಳ ಶಾಂತಿಯುತವಾಗಿ ನಡೆಯುತ್ತಿತ್ತು. ಅಲಂಕಾರಿಕ, ಮೇಲೆ ಕವಚ ಇರುವ ತಳ್ಳುವ ಗಾಡಿಯಲ್ಲಿ ಪಾರ್ಥಿವ ಶರೀರವನ್ನು ಬಾಕ್ಸ್ ನಲ್ಲಿ ಇಡಲಾಗುತ್ತಿತ್ತು. ಗಾಡಿಯ ಎದುರಿಗೆ ಎರಡು ಸಾಲು ಮಾಡಿ ಜನರು ಮೆಲುದನಿಯಲ್ಲಿ ಕ್ರಿಸ್ತನ ಸ್ತೋತ್ರಗಳನ್ನು ಹಾಡುತ್ತಾ ಸಾಗುತ್ತಿದ್ದರು. ಎಲ್ಲರಿಗಿಂತ ಮುಂದೆ ಪಾದ್ರಿ ಕೈಯಲ್ಲಿ ಪುಟ್ಟ ಬೈಬಲ್ ಹಿಡಿದುಕೊಂಡು ಮೆರವಣಿಗೆಯನ್ನು ಮುನ್ನಡೆಸುತ್ತಿದ್ದರು. ಅವರ ಪಕ್ಕದಲ್ಲೇ ಒಬ್ಬರು ಎತ್ತರದ ಶಿಲುಬೆಯನ್ನು ಹಿಡಿದುಕೊಂಡು ನಡೆಯುತ್ತಿದ್ದರು.

ತಳ್ಳುಗಾಡಿಯ ಹಿಂದೆ ಜನರು ಎರಡು ಸಾಲಿನಲ್ಲಿ ಮತ್ತು ಇನ್ನೂ ಹಿಂದೆ ಸಣ್ಣ ಗುಂಪಿನಲ್ಲಿ ನಡೆದು ಬರುತ್ತಿದ್ದರು.
ಬಹಳ ಸಲ ನಾನೂ ಈ ಶವಯಾತ್ರೆಯಲ್ಲಿ ಸೇರಿಕೊಳ್ಳುತ್ತಿದ್ದೆ. ಚರ್ಚ್ ವರೆಗೆ ಅವರ ಜೊತೆಗೇ ಹೋಗಿ ನಾನೂ ಮಣ್ಣು ಹಾಕುತ್ತಿದ್ದೆ.

ಆ ಚರ್ಚ್ ನ ಸ್ಮಶಾನವಂತೂ ಸುಂದರವಾಗಿತ್ತು. ಕ್ರೋಟನ್ ಗಿಡಗಳು, ಆಯತಾಕಾರದ ಗೋರಿ ಮೇಲಿನ ನಿರ್ಮಾಣಗಳು, ಪುಟ್ಟ ಶಿಲುಬೆಗಳು.. ಬಣ್ಣದ ಹೂಗಿಡಗಳು!

ನಾನು ಸೈಕಲ್ ಕಲಿತದ್ದು ಇದೇ ಚರ್ಚ್ ರಸ್ತೆಯಲ್ಲಿ. ಅಪ್ಪ ಕಚೇರಿಯಿಂದ ಮಧ್ಯಾಹ್ನದ ಊಟ ಮಾಡಲು ಬಾಡಿಗೆ ಸೈಕಲ್ ನಲ್ಲಿ ಬರುತ್ತಿದ್ದರು. ಆಗ ಒಂದೂವರೆ ಗಂಟೆ ಸೈಕಲ್ ನನ್ನ ಕೈವಶ. ಮನೆ ಸಮೀಪದ ಸಣ್ಣ ಕಲ್ಲುಸಂಕದ ಬಳಿಗೆ ಸೈಕಲನ್ನು ತಳ್ಳಿಕೊಂಡು ಹೋಗಿ ಕಷ್ಟಪಟ್ಟು ರೋಲ್ ಮೇಲೆ ಕುಂಡೆಯೂರಿ, ಅರ್ಧ ಪೆಡ್ಲಿಂಗ್ ಮಾಡುತ್ತಾ ಚರ್ಚ್ ವರೆಗೆ ಬಂದು ಚರ್ಚ್ ನ ಕಾಂಪೌಂಡಿಗೆ ಮುಂದಿನ ಚಕ್ರವನ್ನು ಮೆಲ್ಲಗೆ ಡಿಕ್ಕಿ ಹೊಡೆಸಿ, ಬಾಗಿದ ಸೈಕಲ್ ನಿಂದ ಕೆಳಗೆ ಇಳಿಯುವುದು. ಹೀಗೆಯೇ ಅಭ್ಯಾಸ ಆದ ಬಳಿಕ ನಿಧಾನಕ್ಕೆ ಸೀಟ್ ಮೇಲೆ ಕೂತು ಫುಲ್ ಪೆಡಲ್ ಹೊಡೆಯುವುದು ಅಭ್ಯಾಸವಾಯಿತು.

ನನ್ನ ಹೈಸ್ಕೂಲಿನ ಮೊದಲ ಎರಡು ಮಂಗಳೂರಿನ ರೊಸಾರಿಯೊ ಹೈಸ್ಕೂಲಲ್ಲಿ. ಅಲ್ಲಿಯೂ ಶಾಲೆಯ ವಿಶಾಲ ಮೈದಾನದ ಎದುರಿಗೇ ಚರ್ಚ್.

ಕಟ್ಟುನಿಟ್ಟಿನ ಮೊಂತೆರೊ ಸಿಸ್ಟರ್, ಸೆಲಿನಾ ಟೀಚರ್, ತಮಾಷೆಯ ಜೆಸ್ಸಿ ಮೇಡಂ, ಗಂಭೀರ ವದನದ ಮೊರಾಸ್ ಸರ್, ಮಸ್ಕರೇಂಞಸ್ ಸರ್, ಮೌತ್ ಆರ್ಗನ್ ನುಡಿಸುತ್ತಿದ್ದ ತಾವ್ರೊ ಸರ್, ಲೀನಾ ಮೇಡಂ, ಫಾದರ್ ಥಾಮಸ್… ಸದ್ಯಕ್ಕೆ ನೆನಪಿಗೆ ಬರುವ ಗುರುಗಳ ಹೆಸರುಗಳಿವು.

ಕುಂದಾಪುರದಲ್ಲಿ ಇದ್ದಾಗ ನಾವೆಲ್ಲ ಗೆಳೆಯರು ಒಟ್ಟಾಗಿ ಹಾಡುತ್ತಿದ್ದ ಸಿನಿಮಾ ಹಾಡು- ” ಗೆಗೆಗೆ ಗೇಗೆ… ಗೇರೆ ಸಾಯ್ಬಾ.. ಪ್ಯಾರ್ ಮೆ ಸೌದಾ ನಹೀ…!” ಮತ್ತು
“ಚಲ್ ಚಲ್ ಚಲ್ ಮೇರೆ ಹಾಥಿ, ಓ ಮೇರೆ ಸಾಥಿ…”

ಬಾಲ್ಯದಲ್ಲಿ ನಮಗ್ಯಾರಿಗೂ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎನ್ನುವುದರ ವ್ಯತ್ಯಾಸ ಸ್ವಲ್ಪವೂ ಗೊತ್ತಿರಲಿಲ್ಲ.

ಕುಂದಾಪುರದಲ್ಲಿ ಎಡ್ಡಿ ಅಂತ ಒಬ್ಬ ಕ್ಲಾಸ್ ಮೇಟ್ ಇದ್ದ. ಪ್ರತಿದಿನ ವಿನಾಕಾರಣ ನಮ್ಮಲ್ಲಿ ಯಾರಿಗಾದರೂ ಅವನು ಹೊಡೆಯುತ್ತಿದ್ದ. ನಾನು ಆಗ ಬಡಪಾಯಿ. ವಾಪಸ್ ಹೊಡೆಯುವುದೂ ಗೊತ್ತಿರಲಿಲ್ಲ. ಕೆಲವು ಸಲ ಜಗಳಗಳೂ ಆಗುತ್ತಿದ್ದವು. ಆದರೆ ಅವನು ಪ್ರತಿ ಸೋಮವಾರ ಮಾತ್ರ ಶಿಸ್ತಾಗಿ ಬಂದು ಹೊಡೆತ ತಿಂದವರ ಬಳಿ ಕ್ಷಮೆ ಕೇಳುತ್ತಿದ್ದ.

ಇದೇನು ಹೀಗೆ…ಎಂದು ಗೊತ್ತಾಗದೆ ಒಂದು ದಿನ ಅವನನ್ನೇ ಕೇಳಿದೆ. ಆತ ಹೇಳಿದ್ದು- “ಪ್ರತಿ ಭಾನುವಾರ ಚರ್ಚ್ ನಲ್ಲಿ confession ಇದೆ. ನಾನು ವಾರದಲ್ಲಿ ಮಾಡಿದ ತಪ್ಪನ್ನು ಒಪ್ಪಿಕೊಳ್ಳಬೇಕು. ಫಾದರ್ ಅವರು ನನಗೆ ಕ್ಷಮೆ ಕೇಳಲು ಸೂಚಿಸುತ್ತಾರೆ. ಕ್ಷಮೆ ಕೇಳದೆ ಇದ್ದರೆ ಕರ್ತನು ನಮ್ಮನ್ನು ಕ್ಷಮಿಸುವುದಿಲ್ಲ. ನರಕದ ಶಿಕ್ಷೆ ಕೊಡುತ್ತಾನಂತೆ.”

ಕುಂದಾಪುರದ ಬಾಲ್ಯದ ಹತ್ತಾರು ಘಟನೆಗಳು ನೆನಪಿನಲ್ಲಿವೆ. ಹಲವಾರು ಗೆಳೆಯರ ಹೆಸರೂ ನೆನಪಿನಲ್ಲಿದೆ. ಆದರೆ ಅವರು ಯಾರನ್ನೂ ಬಳಿಕ ನಾನು ಭೇಟಿಯಾಗಿಲ್ಲ. ಅಪ್ಪ ಎರಡು ಮೂರು ವರ್ಷಕ್ಕೊಮ್ಮೆ ಟ್ರಾನ್ಸ್ ಫರ್ ಆಗುತ್ತಿದ್ದುದರಿಂದ ಶಿಕ್ಷಣದ ಉದ್ದಕ್ಕೂ ಅವಿಭಜಿತ ದ.ಕ. ಜಿಲ್ಲೆಯಲ್ಲಿ ವಿವಿಧೆಡೆಗೆ ‌ನನ್ನ ವಲಸೆಯೇ ಆಯಿತು.

ಕ್ರಿಸ್ಮಸ್ ದಿನ ಇದೆಲ್ಲ ನೆನಪಾಯಿತು. ಈ ವಾರ ಕುಂದಾಪುರಕ್ಕೆ ಹೋಗಬೇಕು. ಮೊದಲು ಆ (ಬಡ್ಡಿಮಗ) ಎಡ್ಡಿ ಎಲ್ಲಿದ್ದಾನೆಂದು ಹುಡುಕಬೇಕು. ಅವನ ಮನೆ ನೆನಪಿದೆ.

ಎಲ್ಲ ಕ್ರಿಶ್ಚಿಯನ್ ಸೋದರ ಸೋದರಿಯರಿಗೆ Happiest Christmas.

(ಈ ಚಿತ್ರ fb ಯಲ್ಲಿ ಸಿಕ್ಕಿತು. ಎಲ್ಲಿಯದೋ ಗೊತ್ತಿಲ್ಲ. ವಾಟರ್ ಮಾರ್ಕ್ ನಲ್ಲಿ ಖುರೇಶಿ ಹೊಕ್ಕಾಡಿ ಅಂತ ಹೆಸರಿದೆ. ಅವರಿಗೂ ಥ್ಯಾಂಕ್ಸ್ ಆಯ್ತಾ…)

‍ಲೇಖಕರು avadhi

25 December, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading