ಕೊರೊನ ರಜಾದಿನಗಳ ಜ್ಞಾನೋದಯ
ಶ್ವೇತಾ ಹೊಸಬಾಳೆ
ಈಗ ಒಂದೆರಡು ತಿಂಗಳಿಂದ ಕರೋನಾದೇ ಹಾವಳಿ. ಎಲ್ಲೆಲ್ಲೂ ಅದರದೇ ಸುದ್ದಿ. ಸುದ್ದಿಗೆ ಪರ‍್ಯಾಯ ಪದವೇ ಕರೋನಾ ಎಂಬಂತಾಗಿಬಿಟ್ಟಿದೆ. ಸಡನ್ನಾಗಿ ಎಲ್ಲವೂ ಬದಲಾಗಿದೆ; ಬದಲಾಗಲೇಬೇಕಾದ ಅನಿವಾರ್ಯತೆ ಮನುಷ್ಯನ ಮುಂದೆ ಸೃಷ್ಟಿಯಾಗಿದೆ. ಬದುಕು ಬದಲಾಗಿದೆ; ಜೀವನಶೈಲಿ, ದಿನಚರಿ, ಆಲೋಚನಾ ಲಹರಿ ಎಲ್ಲವೂ ಬದಲಾಗಿದೆ. ಲಂಗು ಲಗಾಮಿಲ್ಲದೆ ಓಡುತ್ತಿದ್ದ ಮನುಷ್ಯನ ಓಟಕ್ಕೆ ಬ್ರೇಕ್ ಬಿದ್ದಿದೆ. ತನ್ನನ್ನು ಬಿಟ್ಟರಿಲ್ಲ ಎಂದು ಮೆರೆಯುತ್ತಿದ್ದ ಅಹಂಕಾರ ಕಾವು ಕಳೆದುಕೊಂಡು ತಣ್ಣಗಾಗಿದೆ. ಪ್ರಕೃತಿಯಿಂದ ಮನುಷ್ಯನ ಗರ್ವಭಂಗವಾಗಿದೆ.
ಆತ ಮತ್ತೆ ಹಳೆಯ ದಿನಗಳಿಗೆ ಮರಳಿದ್ದಾನೆ. ತನ್ನ ಕೆಲಸ, ತನ್ನ ಮನೆಯ ಕೆಲಸ ತಾನೇ ಮಾಡಿಕೊಳ್ಳುತ್ತಿದ್ದಾನೆ. ಸಣ್ಣ ಸಣ್ಣ ಸಂಗತಿಗಳಲ್ಲಿ ಖುಷಿ ಕಂಡುಕೊಳ್ಳುತ್ತಿದ್ದಾನೆ. ಕುಟುಂಬದ ಮೌಲ್ಯ ಅರಿವಾಗಿದೆ. ನಾಲಗೆಯ ರುಚಿಗಾಗಿ ಹಪಹಪಿಸುವುದನ್ನು ಬಿಟ್ಟು ಇದ್ದುದರಲ್ಲಿ ರುಚಿ ಕಂಡುಕೊಳ್ಳುತ್ತಿದ್ದಾನೆ. ಬೇಕಾದ್ದು ಬೇಡವಾದ್ದನ್ನೆಲ್ಲ ಬಾಚಿಕೊಳ್ಳುತ್ತಿದ್ದ ಕೊಳ್ಳುಬಾಕ ಸಂಸ್ಕೃತಿಗೆ ಕಟ್ಟುಬಿದ್ದಿದ್ದವ ಮಿತವ್ಯಯಿಯಾಗುವತ್ತ ಮನಸ್ಸು ಮಾಡುತ್ತಿದ್ದಾನೆ.
ಇದೆಲ್ಲವೂ ತನ್ನಿಂದ ತಾನೇ ಆಗಿದ್ದಲ್ಲ. ಮನುಷ್ಯನ ಸ್ವಯಂಕೃತ ಅಪರಾಧಕ್ಕೆ ಹೀಗೂ ಆಗಬಲ್ಲುದು ಎಂದು ಪ್ರಕೃತಿ ಕಲಿಸುತ್ತಿರುವ ಪಾಠ. ಎಲ್ಲವೂ ಅತಿಯಾದಾಗ ಅತಿರೇಕಕ್ಕೆ ಹೋದಾಗ ಮಿತಿಯನ್ನು ಮನಗಾಣಿಸಿ ಕಣ್ತೆರೆಸುವ ಪ್ರಯತ್ನ. ಇಲ್ಲಿ ಮತ್ತೆ ಸಹಜತೆಗೆ ಮರಳಿ ಎನ್ನುವ ಸಂದೇಶವಿದೆ. ಮಿತಿಯನ್ನು ಮೀರಿದ್ದರ ಪರಿಣಾಮ ಮನುಷ್ಯ ತನಗೆ ತಾನೇ ಧಿಗ್ಬಂಧನ ವಿಧಿಸಿಕೊಂಡು ಕಾಲು ಕಟ್ಟಿಹಾಕಿಕೊಂಡು ನಾಲ್ಕು ಗೋಡೆಗಳ ಮಧ್ಯೆ ಕೂರಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ. ಅತಿಯಾದ ಮಾಲಿನ್ಯ ಸೃಷ್ಟಿಸಿ ನಿಸರ್ಗದ ಉಸಿರುಕಟ್ಟಿಸುತ್ತಿದ್ದ ಮನುಷ್ಯನ ನಿರಾಳ ಉಸಿರಾಟಕ್ಕೀಗ ಧಕ್ಕೆಯಾಗಿದೆ. ಅಸಹಜವಾಗಿದ್ದ ಎಲ್ಲಾ ರೀತಿಯ ಮೋಜು ಮಸ್ತಿಗೆ ಕಡಿವಾಣ ಬಿದ್ದು ಆತಂಕ ಅನಿಶ್ಚಿತತೆಯಲ್ಲಿ ಕಾಲ ಕಳೆಯುವಂತಾಗಿದೆ.

ಈ ಹಂತದಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಎಲ್ಲರಿಗೂ ವೈಯಕ್ತಿಕವಾಗಿಯೂ, ಸಾಮುದಾಯಿಕವಾಗಿಯೂ ಅವರವರ ಭಾವ ಬದುಕಿಗೆ ಹೊಂದಿಕೊಂಡಂತೆ ಜ್ಞಾನೋದಯಗಳಾಗಿವೆ, ಆಗುತ್ತಿದೆ; ಹೊರಗೆ ತೋರ್ಪಡಿಸಿಕೊಳ್ಳದಿದ್ದರೂ ಮನಸ್ಸಿಗೆ ಸತ್ಯ ಗೋಚರವಾಗಿದೆ. ಇಂಥಾ ಸಂದರ್ಭದಲ್ಲಿ ಹಳ್ಳಿಯಲ್ಲಿದ್ದ ನನಗೂ ಪ್ರಕೃತಿಗೆ ಮತ್ತಷ್ಟು ಹತ್ತಿರವಾಗುವ ಅದರಲ್ಲಿನ ಸೂಕ್ಷ್ಮಗಳನ್ನು ಗಮನಿಸುವ ಅವಕಾಶ ಒದಗಿಬಂತು.
ನನ್ನೆದುರು ದಿನಾ ದಿನಾ ಪ್ರಕೃತಿಯ ಬೆರಗು ವಿಸ್ಮಯಗಳ ಹೊಸಾ ಲೋಕವೇ ತೆರೆದುಕೊಂಡಿತು. ಹಳ್ಳಿಯಲ್ಲೇ ಹುಟ್ಟಿ ಬೆಳೆದು ನಂತರ ಪಟ್ಟಣ ಸೇರಿಕೊಂಡು ಕಾಡು ಗಿಡ ಮರಗಳಿರುವ ಶುದ್ಧ ಹವೆಗಾಗಿ ಹಂಬಲಿಸುತ್ತಿದ್ದ ನನಗೆ ಮತ್ತೆ ಒಂದಷ್ಟು ದಿನಗಳ ಕಾಲ ಇಲ್ಲಿನ ಪರಿಸರದ ಒಡನಾಟ ಸಿಕ್ಕಿತು. ಪ್ರತಿದಿನದ ಬೆಳಗಿನ ಸುತ್ತಾಟದಲ್ಲಿ ಕಣ್ಣು ಕಿವಿ ಮೂಗುಗಳು ಜಾಗೃತವಾದವು. ಸುಮ್ಮನೆ ನೋಡುವುದು ಬೇರೆ, ಗಮನಿಸುವುದು ಬೇರೆ ಎಂದು ಅರಿವಿಗೆ ಬಂದಿದ್ದು ಈಗಲೇ.
ಅದೆಷ್ಟು ಥರದ ಗಿಡ ಮರಗಳು! ಪ್ರತಿಯೊಂದು ಮರ ಅವುಗಳ ವಿನ್ಯಾಸ ಎಲೆ ಚಿಗುರುಗಳೂ ವಿಭಿನ್ನ. ಶಿಶಿರದಲ್ಲಿ ಸಾಲು ಸಾಲಾಗಿ ಬೋಳಾಗಿ ನಿಂತಿದ್ದ ಮರಗಳಲ್ಲಿ ಚೈತ್ರ ಬಂದಾಗ ಚಿಗುರೊಡೆಯುವ ಸಂಭ್ರಮ. ಸರ‍್ಯನ ಬಿಸಿಲಿಗೆ ದೀಪದಂತೆ ಕಂಗೊಳಿಸುತ್ತಿರುವ ಚಿಗುರೆಲೆಗಳು ಬೆಳೆದು ಹಸಿರಾಗುವ ಸೊಗಸನ್ನು ದಿನಾ ದಿನಾ ಗಮನಿಸುವುದೇ ಖುಷಿ. ಹಸಿರೆಲೆಗಳನ್ನು ತೊನೆದಾಡಿಸುತ್ತಾ ನಿಂತ ಮರಗಳು ನನಗೆ ಜೀವಂತಿಕೆಯ ಸಂಕೇತಗಳಾಗಿ ಕಾಣುತ್ತವೆ. ಕೆಳಗೆ ಒಣಗಿದ ವಿವಿಧ ಬಗೆಯ ದರಕು ಎಲೆಗಳ ನಡುವೆ ಬೀಜ ಕಾಯಿಗಳು ಬಿದ್ದಿರುತ್ತವೆ. ಸಾಮಾನ್ಯವಾಗಿ ಗೊತ್ತಿರುವ ಕೆಲವೊಂದನ್ನು ಹೊರತುಪಡಿಸಿ ಒತ್ತೊತ್ತಾಗಿ ಆಕಾಶಕ್ಕೇ ಚಪ್ಪರ ಹಾಕಿದಂತಿರುವ ಮರಗಳ ಸಾಲಿನಲ್ಲಿ ಉದುರಿರುವ ಬೀಜ ಯಾವ ಮರದ್ದು ಎಂದು ಗೊತ್ತಾಗುವುದೇ ಇಲ್ಲ!
ಬೆಳಗಿನ ಸುತ್ತಾಟದಲ್ಲಿ ಹಕ್ಕಿಗಳ ಚಿಲಿಪಿಲಿ ಗಾನದ ಹಿಮ್ಮೇಳದೊಂದಿಗೆ ಬೇರೆ ಬೇರೆ ಮರಗಳನ್ನು ನೋಡುವುದೇ ಧ್ಯಾನವಾಯಿತು. ಅವುಗಳ ವಿಸ್ತಾರ, ಅಗಾಧತೆ, ದೈತ್ಯ ಆಕಾರಗಳ ಮುಂದೆ ನನ್ನನ್ನು ಕಾಡುತ್ತಿದ್ದ ಪ್ರಶ್ನೆಗಳು ಗೌಣವಾಗಿ ಕಂಡವು. ನಿಸರ್ಗದ ಸ್ಥಿರತೆ ಲಯಬದ್ಧತೆಯಲ್ಲಿ ನನ್ನೊಳಗಿನ ಗೊಂದಲಗಳಿಗೆ ಪರಿಹಾರವಿದ್ದಂತೆ ಅನಿಸಿತು. ಒಂದು ದಿನವಂತೂ ದೂರದಿಂದ ಕೆಂಪು ಮರವೊಂದು ಕಾಣಿಸಿ ಗದ್ದೆ ಬಯಲುಗಳನ್ನು ತೋಡುಗಳನ್ನು ದಾಟಿ ಬೇಲಿ ಹಾರಿ ಅದರ ಸಮೀಪ ಹೋದಾಗ ದಂಗಾಗುವ ಸರದಿ ನನ್ನದು; ಅವು ಹೂಗಳಲ್ಲ, ಎಲೆಗಳು! ಸಂಪೂರ್ಣ ರಕ್ತವರ್ಣದ ಕೆಂಪು ಎಲೆಗಳನ್ನು ಹೊತ್ತ ಮರ ಸರ‍್ಯನ ಬಿಸಿಲಿಗೆ ಹೊಳೆಯುತ್ತಿತ್ತು. ಇಲ್ಲಿಯವರೆಗೂ ಸಣ್ಣ ಪುಟ್ಟ ಗಿಡಗಳಲ್ಲಿ, ಎತ್ತರದ ಮರಗಳಲ್ಲಿ ದೂರದಿಂದ ಭಾಗಶಃ ಚಿಗುರೆಲೆಗಳನ್ನು ನೋಡಿ ಖುಷಿಪಡುತ್ತಿದ್ದ ನನಗೆ ಅಂದು ನಿಸರ್ಗದ ಬಹುದೊಡ್ಡ ಅಚ್ಚರಿಯನ್ನು ಬಲು ಹತ್ತಿರದಿಂದ ನೋಡುವ ಭಾಗ್ಯ! ಮೊದಲಬಾರಿಗೆ ಅಂಥದ್ದೊAದು ಮರವನ್ನು ನೋಡಿದ ನನಗೆ ಅದನ್ನು ಬಿಟ್ಟು ಈಚೆ ಬರಲು ಮನಸ್ಸಾಗಲೇ ಇಲ್ಲ.

ನನ್ನ ಸ್ನೇಹಿತರೊಬ್ಬರಿಗೆ ಅದರ ಚಿತ್ರಗಳನ್ನು ಕಳಿಸಿದಾಗ ಇಂಥದ್ದೇ ಮರಗಳು ನೂರು ನೂರೈವತ್ತು ವರ್ಷಗಳಷ್ಟು ಹಳೆಯದು ದೊಡ್ಡದು ಭದ್ರಾ ಮುತ್ತತ್ತಿಯಲ್ಲಿವೆ ಎಂದರು. ಒಮ್ಮೆ ಅವುಗಳನ್ನೂ ನೋಡುವ ಹಂಬಲವಾಯಿತು. ಮರುದಿನ ಪಕ್ಕದ ಊರಿನ ಕೆರೆಯ ಏರಿಯಲ್ಲಿ ನಡೆಯುತ್ತಿರುವಾಗ ತಿಳಿಗುಲಾಬಿ ಬಣ್ಣದ ಚಿಗುರೆಲೆಗಳನ್ನು ಹೊತ್ತ ಮರ ಆಕರ್ಷಕವಾಗಿ ಕಂಡು ಸೆಳೆಯಿತು. ಅದರಲ್ಲೇ ಸ್ವಲ್ಪ ಬಲಿತ ಎಲೆಗಳು ಗಿಳಿಹಸಿರು ಬಣ್ಣಕ್ಕೆ ತಿರುಗಿದ್ದವು. ಸೂರ್ಯನ ಬಿಸಿಲಲ್ಲಿ ಅವೆರಡು ಬಣ್ಣಗಳ ಸಂಯೋಜನೆ ಮನಸೂರೆಗೊಂಡು ಮುದನೀಡಿತು. ಫೋಟೋಗಳನ್ನು ಕ್ಲಿಕ್ಕಿಸುತ್ತಾ ಬಹಳ ಹೊತ್ತು ಅಲ್ಲಿಯೇ ನಿಂತೆ.
ನೋಡುವ ಕಣ್ಣಿದ್ದರೆ ಸುತ್ತಾಡುವ ಮನಸ್ಸಿದ್ದರೆ ನಿಸರ್ಗದಲ್ಲಿ ಅದೆಷ್ಟು ಬೆರಗು ಸೊಬಗುಗಳಿವೆ! ಖುಷಿ ನೀಡುವ ಸಂಗತಿಗಳಿವೆ!. ಇದುವರೆಗೂ ಒಮ್ಮೆಯೂ ಹೋಗಿರದಿದ್ದ ಜಾಗಗಳಲ್ಲೆಲ್ಲಾ ಅಲೆದಾಡಿದೆ. ಸರ‍್ಯ ಒಬ್ಬನೇ ಆದರೂ ಜಗತ್ತಿಗೊಂದೇ ಸರ‍್ಯೋದಯವಾಗಿದ್ದರೂ ಒಂದೊದು ಜಾಗದಲ್ಲೂ ಸರ‍್ಯೋದಯದ ಸೌಂದರ್ಯ ಬೇರೆ ಬೇರೆಯೇ! ಬೆಟ್ಟದ ಮೇಲೆ, ಕೆರೆಯ ಮೇಲೆ, ಅಡಿಕೆತೋಟದ ಹಿನ್ನೆಲೆಯಲ್ಲಿ, ಹಸಿರು ಗದ್ದೆಗಳ ನಡುವಿನಲ್ಲಿ ಕಿತ್ತಳೆ ಬಣ್ಣದಲ್ಲಿ ಹೊಳೆಯುವ ಸೂರ‍್ಯನನ್ನು ನೋಡಿದೆ. ಬೆಳಗಿನ ಬಿಸಿಲು ದೇಹಕ್ಕೂ ಮನಸ್ಸಿಗೂ ಚೇತೋಹಾರಿ ಅನುಭೂತಿ ನೀಡಿ ನಿಸರ್ಗದ ಚೈತನ್ಯ ನನ್ನೊಳಗೂ ಇಳಿದು ಆಹ್ಲಾದವೆನಿಸುತ್ತಿತ್ತು. ಒಂದು ಸಂಜೆ ಮಳೆ ಬಂದು ರಾತ್ರಿಯಿಡೀ ಸುರಿದು ಮರುದಿನ ತೊಳೆದಿಟ್ಟಂತೆ ಇಡೀ ಪ್ರಕೃತಿಯೇ ಸ್ವಚ್ಛ ಶುಭ್ರ, ಬಿಸಿಲೂ ಪ್ರಖರ; ಮನೆಯ ಹತ್ತಿರದ ಏರುದಾರಿಯಲ್ಲಿ ದಟ್ಟ ಹಸುರಿನ ಮಧ್ಯೆ ಇಣುಕುವ ಬಿಸಿಲಕೋಲೂ ನಿಖರ! ಮೊಬೈಲಿನಲ್ಲಿ ಸೆರೆಹಿಡಿದಿದ್ದ ಚಿತ್ರವನ್ನು ನೋಡಿದಾಗ ಚಿಕ್ಕಂದಿನಲ್ಲಿ ಗ್ರೀಟಿಂಗ್ ಕಾರ್ಡುಗಳಲ್ಲಿ ದಟ್ಟ ಕಾಡಿನ ಸುಂದರ ಚಿತ್ರಗಳನ್ನು ನೋಡಿ ಕಣ್ಣರಳಿಸುತ್ತಿದುದು ನೆನಪಾಗಿ ಇಂಥಾ ಸೌಂದರ್ಯ ಇಲ್ಲೇ ನನ್ನ ಕಣ್ಣ ಮುಂದೇ ಇದೆಯೇ ಎಂದು ಈಗಲೂ ಅಚ್ಚರಿ!
ಸಾಮಾನ್ಯವಾಗಿ ಹಬ್ಬದ ಸಂದರ್ಭದಲ್ಲಿ ಊರಿಗೆ ಬಂದು ವಾರವೋ ಹತ್ತು ದಿನವೋ ಇದ್ದು ಮತ್ತೆ ಬೆಂಗಳೂರಿಗೆ ವಾಪಾಸ್ಸಾಗುತ್ತಿದುದು ಮಾಮೂಲಿ. ಈ ಕರೋನಾ ಲಾಕ್‌ಡೌನ್ ನ್ನಿಂದಾಗಿ ಈಗ ತಿಂಗಳಾನುಗಟ್ಟಲೆ ಊರಿನಲ್ಲೇ ಇರುವಂತಾಗಿ ಮತ್ತೆ ಹಳೆಯ ದಿನಗಳಿಗೆ ಮರಳಿದಂತಾಯಿತು. ನಾವು ಚಿಕ್ಕವರಿದ್ದಾಗ ಮಕ್ಕಳಾಗಿದ್ದವರು ಈಗ ಕಾಲೇಜಿಗೆ ಹೋಗುವಷ್ಟು ದೊಡ್ಡವರಾಗಿದ್ದಾರೆ. ನನ್ನ ಮಗ ನನ್ನಂತೆ ಊರಿನ ಕೇರಿಯಲ್ಲಿ ಸೈಕಲ್ ಹೊಡೆಯುವಂತಾಗಿ ಕಾಲಚಕ್ರ ಒಂದು ಸುತ್ತು ತಿರುಗಿದೆ. ಆಗ ತುಂಬಾ ದೂರ ಎನಿಸುತ್ತಿದ್ದ ಹೈಸ್ಕೂಲಿನ ದಾರಿ ಈಗ ಬೆಳಗಿನ ಸುತ್ತಾಟದಲ್ಲಿ ಮನಸ್ಸಿಗೆ ಹತ್ತಿರವಾಯಿತು. ದಾರಿಬದಿಯಲ್ಲಿ ಸಿಗುತ್ತಿದ್ದ ಕಾಡುಹಣ್ಣುಗಳ ರುಚಿ ಮತ್ತೆ ನಾಲಗೆಗೆ ನೆನಪಾಯಿತು.
ಸಾಯಿಸುತೆ, ಉಷಾ ನವರತ್ನರಾಂ ಮುಂತಾದವರ ಕಾದಂಬರಿಗಳನ್ನು ಹೆಚ್ಚು ಓದುತ್ತಿದ್ದ ಹಿರಿಯ ಗೆಳತಿಯೊಬ್ಬಳು ನಮಗೆ ಅವುಗಳ ಕಥೆಗಳನ್ನು ಆಸಕ್ತಿಕರವಾಗಿ ಹೇಳುತ್ತಾ ದಾರಿಯ ದೂರ ಆಯಾಸ ಮರೆಸುತ್ತಿದ್ದ ಚಿತ್ರ ಅದೇ ದಾರಿಯಲ್ಲಿ ಎಷ್ಟೋ ವರ್ಷಗಳ ನಂತರ ನಡೆಯುತ್ತಿದ್ದ ನನ್ನ ಮುಂದೆ ಫ್ಲಾಶ್‌ಬ್ಯಾಕ್ ಥರ ಬಂದು ಹಿಂದಿನಿಂದ ನಾನು ನೋಡುತ್ತಿದ್ದಂತೆ ಭಾಸವಾಗಿ ಪುಳಕಗೊಂಡೆ!.

ಮಲಗುವ ಕೋಣೆಯ ಕಿಟಿಯಿಂದ ಕಾಣುವ ಚಿಕ್ಕ ಕಾಡು, ಬಂದಾಗ ಬೋಳಾಗಿದ್ದ ಕಿಟಕಿಯ ಹತ್ತಿರದಲ್ಲಿದ್ದ ಮರದಲ್ಲಿ ನಿಧಾನ ಕಂದು ಮಿಶ್ರಿತ ಕೆಂಪು ಚಿಗುರುಗಳು ಕಾಣಿಸಿದ್ದು, ಅವು ಹಸಿರು ಬಣ್ಣಕ್ಕೆ ತಿರುಗುವ ನಿಸರ್ಗದ ಮ್ಯಾಜಿಕ್, ಹಾಗೇ ಸ್ವಲ್ಪ ದಿನಗಳ ನಂತರ ತಿಳಿಹಳದಿ ಬಣ್ಣದ ಹೂಗೊಂಚಲು ತೂಗಾಡತೊಡಗಿದ್ದನ್ನು ದಿನಾ ದಿನಾ ಗಮನಿಸುವುದು, ಹುಣ್ಣಿಮೆಯ ರಾತ್ರಿ ಕಿಟಕಿಯ ಮೂಲಕ ಹಾಸಿಗೆಗೇ ಚಂದಿರ ಬೆಳದಿಂಗಳು ಹಾಸಿದ್ದು ಎಲ್ಲವೂ ಬಹಳ ಆಪ್ತವೆನೆಸಿ ಮನಸ್ಸಿಗೆ ಅಪರಿಮಿತ ಆನಂದ ಕೊಟ್ಟವು. ಹಿಂದಿನಬಾರಿ ಊರಿಗೆ ಬಂದಿದ್ದಾಗ ನಾನೇ ನೆಟ್ಟಿದ್ದ ಹೊಂಗೆ ಸಸಿಗಳಿಗೆ ದಿನಾ ಸಂಜೆ ನೀರೆರೆಯುವ ಕಾಯಕವೂ ಮನಸ್ಸಿಗೆ ನೆಮ್ಮದಿ ಕೊಟ್ಟಿತು.
ಎಲ್ಲಕ್ಕಿಂತ ಮಿಗಿಲಾಗಿ ಬೆಳಗಿನ ಸುತ್ತಾಟ, ನಿಸರ್ಗದ ಒಡನಾಟಕ್ಕೆ ಮನಸ್ಸಿನ ಎಲ್ಲಾ ಬಗೆಯ ಬೇಸರ ಉದ್ವೇಗ ಚಡಪಡಿಕೆಗಳನ್ನು ಕಡಿಮೆ ಮಾಡುವ ಶಕ್ತಿಯಿದೆ. ಬೆಳಗು-ಬೆರಗು, ಹಸಿರು-ಚಿಗುರು, ಎಲೆಗಳ ಮೇಲಿನ ಇಬ್ಬನಿ, ವಿವಿಧ ವಿನ್ಯಾಸದ ಜೇಡರಬಲೆಗಳೆಲ್ಲಾ ಮುಂಜಾವಿನ ಮಾಯಾಲೋಕದಲ್ಲಿ ಮುತ್ತಿನಹಾರಗಳಾಗಿ ಹೊಳೆಯುತ್ತಿದುದು, ಸರ‍್ಯೋದಯ-ಸರ‍್ಯಾಸ್ತಗಳೆಲ್ಲ ನನ್ನ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿ ಪ್ರಕೃತಿಯ ಫೋಟೋಗ್ರಫಿ ಮನಸ್ಸಿಗೆ ಅತೀವ ಖುಷಿ ಕೊಟ್ಟಿತು; ಹೊಸ ಸಾಧ್ಯತೆಗಳನ್ನು ಹೊಳೆಯಿಸಿತು.
ಮಂಜು ಮುಸುಕಿದ ದಾರಿಯಲ್ಲಿ ಹಕ್ಕಿಗಳ ಕಲರವ ಆಲಿಸುತ್ತಾ ನಡೆಯುವುದನ್ನು ಮರೆಯಲಾರೆ. ತಂಪುಗಾಳಿಯೊಂದಿಗೆ ತೇಲಿ ಬರುತ್ತಿದ್ದ ಕಾಡುಹೂಗಳ ಪರಿಮಳವನ್ನು ಮರೆಯಲಾರೆ. ಮನಸ್ಸಿನ ಭೀತಿಗಳನ್ನು ಕ್ಷಣವಾದರೂ ಮರೆಸುತ್ತಿದ್ದ ಕೆರೆಗಳ ಪ್ರಶಾಂತತೆಯಲ್ಲಿ ಕರಗಿಹೋಗಿದ್ದನ್ನು ಮರೆಯಲಾರೆ. ಸರ‍್ಯೋದಯದ ಹೊಂಬೆಳಕಲ್ಲಿ ತೋಯುತ್ತಾ ನಿಸರ್ಗದ ಹೊಸತನ ಮೈಮನಗಳನ್ನೂ ಆವರಿಸಿಕೊಳ್ಳುವ ಪರಿಯನ್ನು ಮರೆಯಲಾರೆ.
ಇಡೀ ಜಗತ್ತೇ ಲಾಕ್‌ಡೌನ್ ಆಗಿ ಬಹುತೇಕರಿಗದು ಸಜೆಯಾಗಿದ್ದರೆ ಕರೋನಾ ರಜಾದಿನಗಳು ನನ್ನ ಪಾಲಿಗೆ ಅದ್ಭುತ ಅನುಭವಗಳ ಕಣಜವಾಗಿದ್ದು ಹೀಗೆ. ಲಾಕ್ ಡೌನ್ ಹಲವರಿಗೆ ಹಲವು ಬಗೆಯಲ್ಲಿ ಒತ್ತಡವಾಗಿ ಪರಿಣಮಿಸಿದರೆ ಪ್ರಕೃತಿಗೆ ಹತ್ತಿರವಾಗುವ ಅವಕಾಶ ದೊರೆತ ಪರಿಣಾಮ ನನ್ನೊಳಗಿದ್ದ ಒತ್ತಡಗಳನ್ನು ಕಳೆದುಕೊಳ್ಳುವಂತಾಗಿದ್ದು ವಿಚಿತ್ರ ವೈರುಧ್ಯವೆನಿಸಿ ಸದಾ ಮಿಶ್ರಭಾವನೆಗಳನ್ನು ಮೂಡಿಸುತ್ತದೆ.









0 Comments