ಜಾತಿ ಮಾತು
ಡಾ ಗ್ಲ್ಯಾಡ್ಸನ್ ಜತ್ತನ್ನ
ಮತ್ತು ಕೊರಗನಿಗೇಕೆ ಅದು ತಿಳಿಯಲಿಲ್ಲ?
ಮುದ್ದಿನ ನಾಯಿ ‘ದೊರೆ’ ಇಂದೇಕೆ ಬೊಗಳುತ್ತಿಲ್ಲ?
ಸದಾ ಸದ್ದು ಮಾಡುವ ಅವನ ತಗಡಿನ ಡಬ್ಬಿ
ಇಂದು ಸದ್ದೇ ಇಲ್ಲದೆ ಸುಮ್ಮನಿದೆಯೇಕೆ…?
ಬಹುಶಃ ತನ್ನ ಕೊರಗನ್ನು ಒಳಗೇ ಅದುಮಿಟ್ಟುಕೊಂಡನೇ?
ಛೆ ಛೆ… ಅಂಥ ಅಳುಕಿನವನೇನಲ್ಲ ಕೊರಗ
ತನ್ನ ನಾಯಿಗೆ ‘ದೊರೆ’ ಅಂತ ಹೆಸರಿಟ್ಟಾಗಲೇ
ಎಲ್ಲರಿಗೂ ತಿಳಿದಿತ್ತು, ಈತ ಒಳಗಿನ ಚಳಿಗೆ ಕ್ಯಾರೇ ಅನ್ನದವ

ಡಿಸೆಂಬರ್ ತಿಂಗಳ ಮಲೆನಾಡ ಚಳಿಗೂ ಹೆದರದೆ
ಬರೀ ಮೈಲಿ ಕೇರಿಯ ಹೊರಗೆ ಎದೆ ನಿಗುರಿಸಿ ನಡೆದಾಗ
ಹೇಗೆ ಹೊಳೆಯುತ್ತಿತ್ತು ಅವನ ಮೈಮೇಲಿನ ಬರೆ!
ಬೇಕೆಂದೇ ನಡೆದಿದ್ದನೋ ಅಥವಾ ಚಳಿಗಾಲದ ಬಿಸಿಲು
ಹಿತವೆನಿಸಿಯೋ, ಅಥವಾ ಇನ್ನೇನಕ್ಕೋ…
ಅಂತೂ ಮೇಲಿನ ಮನೆಯ ಐತಾಳರ ಹೆಂಡತಿ
ಕಿಡಕಿಯಿಂದ ಇವನ ಬರಿಮೈ ಕದ್ದು ನೋಡಿ ಕಡೆಗೆ
ಸಿಕ್ಕಿಬಿದ್ದು ಪಚೀತಿಯಾದದ್ದು ಈಗ ರಹಸ್ಯವೇನಲ್ಲ.
ಕೊರಗನಿಗೂ ಗೊತ್ತು ಬಿಡಿ ಈಗ ಇದೆಲ್ಲಾ
‘ದೊರೆ’ ಮಾತ್ರ ಸುಮ್ಮನೆ ನಡೆಯುತ್ತಿರಲಿಲ್ಲ
ಅವನ ದಿಟ್ಟ ನಡಿಗೆಗೆ ಒಳಗೊಳಗೇ ಉರಿದು
ಕುಂಯ್ ಕುಂಯ್ ಎಂದು ಬಾಲ ಮುದುಡಿ
ಹಿಂಜರಿಯಲಿಲ್ಲವೇ ಮಾಣಿಯ ಬಿಳೀ ಕುನ್ನಿ
ಇನ್ನು ಕೊರಗನ ತಗಡಿನ ಡಬ್ಬಿ ಸುಮ್ಮನಿತ್ತೇ?
ಡನ್-ಡಬ… ಡನ್-ಡಬ… ತಾಳವಿಲ್ಲದ ಸದ್ದು
ತಿಂಗಳ ರಜೆಯಾಗಿ ಹೊರಗೆ ಮಲಗಿದ್ದ ಬಟ್ಟರ
ಮಗಳು ಹೆದರಿ ಒಳಗೆ ಓಡಲಿಲ್ಲವೇ?
ಆದರೆ ಇಂದು ಮಾತ್ರ ಇದೇನು ಸ್ಮಶಾನ ಮೌನ?
ಕೊರಗ ಸೋತನೇ? ಎಷ್ಟು ಮಾತ್ರಕ್ಕೂ ಇಲ್ಲ…
ನಾನ್ ಸತ್ರೂ ಸರಿ, ಆದ್ರೂ ಸೋತು ಸಾಯಲ್ಲ
ಕೊರಗ ಅಂದು ಗಡಂಗಿನ ಮುಂದೆ ಫುಲ್ ಟೈಟಾಗಿ
ತೊದಲಿದ್ದು ಇನ್ನೂ ನೆನಪಿದೆ, ಕೆಲವರಿಗಾದರೂ
ಅಜರ್ೆಂಟಾಗಿ ಎರಡು ಬಾಟ್ಲು ರಕ್ತ ಬೇಕಂತೆ
ಮಗಳು ಭಾಗ್ಯ ಅರಚಿದಾಗ ಕೊರಗ ಎಚ್ಚೆತ್ತ
ಏಯ್, ಸ್ವಲ್ಪ ಹುಷಾರಾಗಿರು ಮಾರಾಯ್ತಿ,
ಯಾವ್ಯಾವ್ದೋ ರಕ್ತ ಕೊಟ್ಟು ನನ್ ಜಾತಿ ಕಡ್ಸಾರು…
ಗಹಗಹಿಸಿ ನಕ್ಕು ಕೊರಗ ಕೆಮ್ಮಿದಾಗ
ಮಗ್ಗುಲಲ್ಲಿ ಮಲಗಿದ್ದ ‘ದೊರೆ’ ಕಣ್ತೆರೆದ…






entha kavana..idu!!!!!!!!!!!!!!!!! wonderful…….!!!!! great!!!..shubhavaagali!!
Nice