ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಕೊನೆಯ ಬಾರಿಗೆ ಸನಿಹಕ್ಕೆ ಕೂತು…’ ರಾಜಶೇಖರ ಬಂಡೆ ಕವಿತೆ

ರಾಜಶೇಕರ ಬಂಡೆ

ಬದುಕಿನ ಅಷ್ಟೂ ಅನಂತದ ದಿಕ್ಕುಗಳಿಗೆ
ಚೂಪಾದ ಗೂಟವಿಕ್ಕಿ ಇಲ್ಲಿ ನಿನ್ನ ಬಗಲಲ್ಲಿ
ಮೈ ಹರಡಿಕೊಂಡು ಬಿದ್ದದ್ದು ಒಂದೊಳ್ಳೆ
ಪಾಠದ ಕೊನೆಯ ತತ್ವದ ಹಾಗಿದೆ, ನೀ ನನ್ನ ಅಂಗೈ ಊದಿಸಿ, ಕಪಾಳಕ್ಕೆ
ಬಡಿದು, ಎದೆಗೆ ಜಾಡಿಸಿ ಒದ್ದು ಬದುಕಲು
ಬಿಟ್ಟ ಶಿಕ್ಷಕಿಯಾಗಿಬಿಟ್ಟೆ,
 
ಕೊನೆಯ ಬಾರಿಗೆ ಸನಿಹಕ್ಕೆ ಕೂತು ಅಂಗೈಗೆ
ಬರೆದುಕೊಂಡ ಆ ಹೆಸರನ್ನ ಎದೆಗೊಡ್ಡಿಕೊಂಡೆ,

ಯಾರದ್ದೋ ನೆರಳು, ಆಸರೆ, ಪ್ರೀತಿ, ಮಾತು, ಮೌನ, ಬಿಕ್ಕಳಿಕೆ, ತೋಳು, ಆದರ, ಆ ಅಂತಃಕರಣ, ಆಳ್ವಿಕೆ, ಆಲಿಂಗನ, ಅತಿಸಲಿಗೆ
ಈ ಪಾಪಿಯ ತಕ್ಕಡಿ ಪಾಲಿಗೆ ಮೋಸದ ಅಳತೆಯಾದದ್ದು, ಸಾವಿನ ಬಾಗಿಲಲ್ಲೂ
ದೂಡುವ ಧಡೂತಿಯ ಅಸೂಯೆಯಷ್ಟೇ ನೋವುಣಿಸುತ್ತಿದೆ,
 
ಕೆಲವೊಮ್ಮೆ ನಿನ್ನನ್ನ ಡಿಕ್ಟೇಟು ಮಾಡುತ್ತಿದ್ದ ಆ ಸ್ವಂತದ ಸ್ವಾರ್ಥ ಕಣರಹಿತ ನನ್ನ ಬಚ್ಚಲು ಬಾಯಿ ಮಾತುಗಳೀಗ ರಣಹೇಡಿಯಂತಹ ಹೃದಯದ ಅತೀ ಸಮೀಪದಲ್ಲಿ ಕಹಳೆಯೂದುತ್ತ ಶಂಖ ಜಾಗಟೆ ಸಮೇತ ತಿಥಿಯಾಗುತ್ತಿವೆ,
 
ಒಂದು ಸಂಜೆ ಮೊದಲ ಸಮಯದಲ್ಲಿ ಸಾವಿರ ಮಾತಾಡಿ, ಹೃದಯ ಬದಲಿಸಿಕೊಂಡು ಒತ್ತಾಯಕ್ಕೆ ಮುಖವಾಡ ಅಂಟಿಸಿಕೊಂಡ ಆ ಹೊತ್ತು ಯಾವತ್ತಿಗೂ
ಚುಚ್ಚಬಲ್ಲ, ಎಲ್ಲ ಬದುಕಿನ ಉಲ್ಲಸಿತ ಕ್ಷಣಗಳನ್ನ ಗಬಕ್ಕನೆ ನುಂಗಬಲ್ಲ ಆ ಹೊತ್ತು
ಈವತ್ತಿಗೂ ಈ ಸಂಜೆಗೂ ತಾಜಾ ಮೋಜು ಮಾಡುತ್ತಿದೆ,
 
ಇಷ್ಟು ಬೊಗಸೆಯಲ್ಲಿ ಅದೆಷ್ಟು ಒಲವ ಬಚ್ಚಿಡಬಲ್ಲೆ, ಎದುರು ಬದುರು ಕೂತು ಹಲ್ಲು
ತೆರೆದುಕೊಂಡು ಕೆನ್ನೆ ಚಿವುಟುವ ಉಮೇದುವಾರಿಕೆಯನ್ನ ಅದುಮಿಟ್ಟುಕೊಳ್ಳಬಲ್ಲೆ, ಎಲ್ಲೋ ಹುಟ್ಟುವ ತೆವಲಿಗೆ ಹಸಿರು ಹಸಿರಾದ ನೆನಹುಗಳನ್ನ ರಾತ್ರಿ ನೀಲಿಗೆ ತೆರೆದುಕೊಳ್ಳದುದಕ್ಕೆ ಎದೆಯುಬ್ಬಿಸಿಕೊಂಡೆ,
 
ಸಾವಿರ ನೋವಿಗೆ ಮುಲಾಮೊಂದ ಹುಡುಕುತ್ತಾ ಹೊರಟರೆ ಅಲ್ಲೆಲ್ಲೋ
ತನಗೆ ತಾನೇ ಸೆಳೆದುಬಿಡುವ ಸಾವು ಭಯ ಹುಟ್ಟಿಸಿ ಆತ್ಮದ ಹಸಿವು ನೀಗಿಸಿಕೊಂಡು
ನಿನ್ನತ್ತ ಹುಂಬ ನಗೆ ಚೆಲ್ಲಿಬಿಟ್ಟರೆ…
ಛೇ ಕೊನೆಗಳಿಗೆಯಲ್ಲೂ ನೆನಪುಗಳದ್ದೇ ಹೊಡೆತ,
 
ಬಿತ್ತಿದ, ಬೆಳೆದ, ಕನಸ ಗೋಪುರಕ್ಕೆ ಕಪ್ಪು ಕಣ್ಣಿನ ಕಳ್ಳ ಕನ್ನದ ಬಾಗಿಲು
ತೆರೆದ ಹಾಗೇ ಬಿಟ್ಟು ನಿನ್ನನ್ನ ಅನಾಮತ್ ಹೆಗಲಿಗೇರಿಸಿಕೊಂಡು ಗಡಿಗಳಾಚೆಗೋ ಸಾಗರದಂಚಿಗೋ ಎಳೆದು ರಮಿಸುವ ಈ
ಊರಿನಲ್ಲಿ ಸನ್ಯಾಸಿ ಧ್ಯಾನಕ್ಕೂ ಕೂಡ ನೂರು ಪ್ರಶ್ನೆ,
 
ಬದುಕಿನ ಒಂದೊಂದು ಮೂದಲಿಕೆಗೂ ನಿರ್ಲಕ್ಷೆಗೂ ಜವಾಬು ಕೊಡುವ ಮಾಮೂಲಿಯಾಗುಳಿವ ಬಗೆ ಸುಲಭದ್ದಲ್ಲ
ನನ್ನನ್ನ ನಂಬು, ಯಾವ ಕ್ಷಣವೂ ಮುಂದಿನ
ಯಾವ ದಿನವೂ ನಿನ್ನ ಎಣಿಕೆಗೆ ತಾಳೆಯಾಗುವುದಿಲ್ಲ, ಅಲ್ಲೆಲ್ಲಾದರೂ ಒಂಟಿಯಾಗುಳಿದ ಕ್ಷಣ ನಿನ್ನ ನರಗಳಲ್ಲಿ
ವೇಗ ಹೆಚ್ಚಿಸಿಕೊಳ್ಳುವ ನನ್ನ ನೆನಪುಗಳಿಗೆ
ಖಂಡಿತ ಮುಪ್ಪಿನ ಚಿಂತೆ ಬೆನ್ನಿಗೆ ಎಣ್ಣೆ ಬಳಿದುಕೊಂಡು ನಿಂತಲ್ಲೇ ಶವವಾದ ಕಳೇಬರವಾಗಿ ಉಳಿದುಬಿಡುತ್ತೆ,
 
ಸಾವೂ ತಗುಲದ ಅನಾಮಿಕನಾಗಿ
ಯಾವುದೋ ಮೂಲೆಯೊಂದರಲ್ಲಿ
ನಿನ್ನ ಭಾವಚಿತ್ರದೆದುರು ಮಂಡಿಯೂರಿ
ಮುಗಿಯದ ಭಾವಗಳನ್ನ ಎಣಿಸುತ್ತಾ ಕೂತಿರುತ್ತೇನೆ.
 

‍ಲೇಖಕರು G

17 May, 2014

4 Comments

  1. mmshaik

    heart touching…

  2. ಡಾ.ಶಿವಾನಂದ ಕುಬಸದ

    ತುಂಬ ಚೆನ್ನಾಗಿದೆ,ಮನತಟ್ಟುತ್ತದೆ…..
    face book ನಲ್ಲಿ ಈ ಮೊದಲೇ ಓದಿದ ನೆನಪು…

  3. sangeetha raviraj

    arthagarbitha kavite eshtavaythu

  4. vasudeva nadig

    rajshekhar olleya kavi..hosa image koduva hosa dhani

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading