ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೊನೆಯಾಗುವ ಮುನ್ನ..

ಮಂಜುಳಾ ಹಿರೇಮಠ

ಮರೆತಿದ್ದೇವೆ ಎಷ್ಟೊಂದು ಕೆಲಸಗಳಿವೆ
ಎಷ್ಟೊಂದು ನೋಡಿರದ ಮುಖಗಳು ನೋಡಲೇಬೇಕು
ಎಷ್ಟೊಂದು ಕೇಳಿರದ ಕಥೆಗಳು ಕೇಳಲೇಬೇಕು

ಎಂದೋ ಒಮ್ಮೆತಪ್ಪಿಸಿದ ತಪ್ಪಿಗೆ ಪೇಪರ್ ಹಾಕುವ ಹುಡುಗನ
ಶಪಿಸುವುದ ಬಿಡಬೇಕು ಕರೆದೊಮ್ಮೆಚಹಾ ಕೊಟ್ಟು ಅವನ ಊರು ಹೆಸರು ಕೇಳಬೇಕು
ಮನೆ ಕೆಲಸದಾಕೆಯನ್ನೊಮ್ಮೆಕೂರಿಸಿ ಸಿಹಿ ಅಡುಗೆ ಬಡಿಸಿ
ಜೊತೆ ಕೂತು ಉಣ್ಣಬೇಕು

ಶಿಳ್ಳೆ ಹೊಡೆಯುತ್ತ ಮಧ್ಯರಾತ್ರಿ ಬೀದಿ ಕಾಯುವ
ಗೂರ್ಖನಿಗೊಂದು ಸ್ವೇಟರ್ ಕೊಡಿಸಿ ಸಲಾಂ ಹೇಳಬೇಕು
ಕೊನೆ ಮನೆಯ ವೃದ್ಧ ದಂಪತಿಗೆ ಇನ್ನಾದರೂ
ತರಕಾರಿ ತಂದು ಕೊಡಬೇಕು …

ಪ್ರತಿ ಬಾರಿ ನಗುತ್ತಲೇ ಟೇಬಲ್ ಒರೆಸುವ ಹೋಟೆಲ್ ಹುಡುಗನಿಗೊಂದು ಹೊಸ ಅಂಗಿ
ಕೊಡಿಸಿ,ಬೆನ್ನು ತಟ್ಟಬೇಕು
ಬಸ್ಸಿಳಿದಾಗೊಮ್ಮೆಗುರಿ ತಲುಪಿಸುವ. ಚಾಲಕನಿಗೆ ಮುಗುಳ್ನಕ್ಕು ಧನ್ಯವಾದ ಹೇಳಬೇಕು

ಹಳೆಯ ಗೆಳೆಯ ಗೆಳತಿಯರನೆಲ್ಲ ಕಂಡು
ಕೈ ಕುಲುಕಿ ಮಾತಾಗಬೇಕು
ಸಂತತಿಯ ಹಿರಿಯ ಜೀವಗಳನೆಲ್ಲ ಮುಟ್ಟಿ ಮೈದಡವಿ
ನಗು ಮೂಡಿಸಬೇಕು

ಇನ್ನಾದರೂ ಮುಖದ ಗಂಟುಗಳ ಸಡಿಲಿಸಬೇಕು
ಮಗುವಂತೆ ಕ್ಷಣದಲ್ಲೇ ಮುನಿಸ ಮರೆಯಬೇಕು
ಸಣ್ಣ ಸಂಗತಿಗಳಲ್ಲೇ ದೊಡ್ಡ ಸಂಭ್ರಮಗಳಿವೆ
ಇರುವುದೆಲ್ಲವ ಹಂಚುತ್ತಾ ಹೋಗಬೇಕು
ಕೊನೆಯಾಗುವ ಮುನ್ನ ಖಾಲಿಯಾಗಬೇಕು.

 

‍ಲೇಖಕರು avadhi

8 May, 2020

3 Comments

  1. T S SHRAVANA KUMARI

    ಸೊಗಸಾದ ಭಾವಗಳ ಕವಿತೆ

  2. ಎಂ. ಕುಸುಮ

    ಹೌದು, ಖಾಲಿಯಾಗುತ್ತಾ ಜೀವನದ ನಿಜಾರ್ಥ ಅರಿತುಬಿಡಬೇಕು. ಕವನ ತನ್ನ ಆಶಯವನ್ನು ಬಿತ್ತುವಲ್ಲಿ ಸಫಲವಾಗಿದೆ, ಅಭಿನಂದನೆಗಳು ☺️

  3. Adivala Gangamma

    ಸರಳ ಸುಂದರ ಕವಿತೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading