ಮುಂಗಾರಿನ ಹನಿಗಳಲ್ಲಿ ಮಿಂದು…
ಸರೋಜಿನಿ ಪಡಸಲಗಿ
‘ಆಟೋ’ ಕೂಗಿದೆ. ‘ಇಲ್ಲ’ ಎಂದು ಕೈ ಆಡಿಸುತ್ತಾ ಹೋದ ಆತ. ಈ ಕಡೆಯಿಂದ ಬಂದ ಇನ್ನೊಂದು ಆಟೋಗೆ ಕೈ ಮಾಡಿದಾಗ ನಿಂತು, ಎಲ್ಲಿ ಎಂದ. ‘ ಅಶೋಕಾ ಪಿಲ್ಲರ್’ ಎಂದೆ. ಇಲ್ಲಾ ಅಂತ ತಲೆಯೆಲ್ಲಾ ಡಿಸಿ ಹೊರಟೇ ಹೋದ ಆತ. ಹತ್ತು ನಿಮಿಷ ಆದ್ರೂ ಒಂದೂ ಆಟೋ ಸಿಗಲಿಲ್ಲ. ಸಣ್ಣಗೆ ತುಂತುರಾಗಿ ಸಿಡಿಯುತ್ತಿದ್ದ ಮಳೆ ಜೋರಾಯಿತು ಈಗ. ಮುಂಗಾರು ಹನಿಗಳ ಸಿಂಚನ ಮನಕ್ಕೆ ಮುದ. ಸಣ್ಣಗೆ ಹಾಡನೊಂದ ಗುನುಗ್ತಾ ಒಂದು ಗಿಡದ ಕೆಳಗೆ ನಿಂತೆ. ಆ ಮೋಹಕ ಗುಂಗಿನಲ್ಲಿ 2-3 ಆಟೋ ಹಾಗೇ ಹೋಗಾಯ್ತು.
ಅಷ್ಟಿಷ್ಟು ನೆಂದೇ ಇನ್ನೊಂದು ಆಟೋಗೆ ಕೈ ಮಾಡಿದಾಗ ನಿಂತೇ ಬಿಟ್ಟ ಆತ ! ಸಡಗರದಿಂದ ಹೇಳ್ದೆ ‘ ಅಶೋಕಾ ಪಿಲ್ಲರ್’ ಅಂತ. ‘ ಬನ್ನಿ ಮೇಡಂ’ ಎಂದ. ಗಡಿಬಿಡಿಸಿ ಹತ್ತಿ ಕುಳಿತೆ. ಹೊರಟಿತು ಸವಾರಿ.ಮುಖ ಸವರೋ ಇರುಚಲು, ತಂಗಾಳಿ. ಖುಷಿ ಇಮ್ಮಡಿಯಾಗಿ ಗುನುಗುತ್ತಿದ್ದ ಧ್ವನಿ ಜೋರಾಯ್ತು ಅಂತ ಕಾಣ್ತದೆ. ‘ ಏನು ಮೇಡಂ ಮಳೆ ಈ ಥರ ಬೆಳಿಗ್ಗೆ ನೇ ಶುರು ಆದ್ರೆ ಯಾರೂ ಈಚೆನೇ ಬರಲ್ಲ.’ ಅಂದ. ಅಂದ್ರೆ ನೀವೇನು ಹೊರಟೇ ಬಿಟ್ಟೀರಲಾ ಎಂಬಂತೆ. ನಾನು ನಕ್ಕು ‘ನನಗೆ ಮಳೆ ಅಂದ್ರೆ ಇಷ್ಟ. ಉಲ್ಲಾಸ ಉತ್ಸಾಹ ತುಂಬ್ತದೆ ಈ ಮಳೆ’ ಅಂದೆ. ಆತ ಆಶ್ಚರ್ಯದಿಂದ ಒಮ್ಮೆ ತಿರುಗಿ ನೋಡಿ ಆಟೋ ಜೋರು ಮಾಡಿದ. ಅವನಿಗನಿಸಿರಬೇಕು ‘ಇದ್ಯಾವುದೋ ವಿಚಿತ್ರ ಗಿರಾಕಿ ಸಿಕ್ತು ಅಂತ.
ನಿಜ. ನಾನು ಹಾಗೇ. ಮಳೆ ಅಂದ್ರೆ ನನಗೆ ಹುಚ್ಚು. ಕಾರ್ಮೋಡ ಕವಿದು ನಟ್ಟಿರುಳ ಕಾವಳದ ನೆರಳು ಹಾಸಿ, ಸುಂಯ್ಯ ಅಂತ ಸುಳಿಗಾಳಿ ಸುಳಿದರೆ, ಮನ ಹುಚ್ಚೆದ್ದು ಕುಣಿದು ರೆಕ್ಕೆ ಬಿಚ್ಚಿ ಹಾರಿ ಮೋಡದ ಕುದುರೆ ಏರಿ ಸವಾರಿ ಹೊರಟಿತೆಂದೇ ಲೆಕ್ಕ. ನನ್ನೂರು ಮಲೆನಾಡ ಸೆರಗಿನಲ್ಲಿ ಗುಡ್ಡಗಳ ಮಡಿಲಲ್ಲಿ ಅರಳಿ ನಿಂತ ಊರು. ಅಲ್ಲಿ ಸುರಿವ ಸೋನೆ ಮಳೆ, ಜಡಿಮಳೆ, ಅಬ್ಬರದ ಗುಡುಗಿನ ಮಳೆ ಒಂದೊಂದು ಸೌಂದರ್ಯ ತೋರಿ ನನಗೆ ಮಳೆ ಹುಚ್ಚು ಹಿಡಿಸಿ ಬಿಟ್ತೋ ಏನೋ.
ಹೋಳಿ ಹುಣ್ಣಿಮೆಗೆ ಕಾಮನ ಬೂದಿ ತೋಯಿಸಲು ಗಡಗಡಿಸಿ ಗುಡಗುಡಿಸಿ ಬರುವ ಮಳೆ, ಮೃಗಶಿರಾ,(ಮಗೀ ಮಳೆ ರೈತಾಪಿ ಜನರ ಬಾಯಲ್ಲಿ) ಮಳೆಯ ಹೊತ್ತಿಗೆ ಗುಡುಗೋದನ್ನ ಕಡಿಮೆ ಮಾಡಿ, ಕಪ್ಪು ಮೋಡದೆದೆ ಸೀಳಿ ಸೂರ್ಯನನ್ನು ಹಣಕಲೂ ಬಿಡದೇ, ಜಡಿಹಿಡಿದು ಸುರಿದು ಶ್ರಾವಣದ ಸಂಭ್ರಮ ಸಡಗರದಲಿ ಮೆರೆದು, ನವರಾತ್ರಿಯಲ್ಲಿ ಮತ್ತೆ ಗುಡುಗಿ ಅಬ್ಬರದಿ ಸುರಿದು ಹೋಗುವ ವರೆಗೂ ನಮ್ಮೂರನ್ನು ಬಿಟ್ಟು ಕದಲ್ತಾನೇ ಇರ್ಲಿಲ್ಲ. ಒಮ್ಮೊಮ್ಮೆ ಮತ್ತೆ ತುಲಸೀ ಮದುವೆ ಮುಂದೇನೂ ಹಾಜರ್. ಹೀಗಾಗಿ ನನಗೂ, ಮಳೆಗೂ ಅನ್ಯೋನ್ಯ ನಂಟು.
ಸ್ಕೂಲ್ ನಿಂದ ಬರೋಮುಂದೆ ಮಳೆ ಸುರೀತಿದ್ರೆ ಮುಗೀತು, ಹಬ್ಬ ನನಗೆ. ಸ್ಕೂಲ್ ಬ್ಯಾಗ್ ಒಂದು ದಿಕ್ಕು, ಕೊಡೆ ಒಂದು ದಿಕ್ಕು, ನಾನು ಆ ಜಡಿಮಳೆಯಲ್ಲಿ ಕಳ್ಳೆಮಳ್ಳೆ ಆಟ ಆಡ್ತಾ ” ಗುಡು ಗುಡು ಮುತ್ಯಾ (ತಾತ ಅಂತ ಅರ್ಥ) ಬಂದಾನ ಬೆಣ್ಣೀ ರೊಟ್ಟಿ ತಂದಾನ” ಅಂತ ಹಾಡಿ ಕುಣಿದು, ನೆನೀತಾ ತಲೆಗೂದಲಿನಿಂದ ಇಳಿಯೋ ನೀರನ್ನು ಝಟ್ ಅಂತ ಝಾಡಿಸಿ, ಅಲ್ಲಿ ಚಲ್ಲುವರೆವ ಹನಿಗಳಲ್ಲಿ ಆಗಸದ ಕಾಮನಬಿಲ್ಲು ನೋಡ್ತಾ ಸ್ಕರ್ಟ ತುದಿ ಹಿಂಡಿ, ಮತ್ತೆ ಆಟಕ್ಕೆ ರೆಡಿ ಆ ಸೋನೆಯಲಿ.
ಮಳೇಲಿ ನೆಂದು, ‘ ಏ ಸಾಕಿನ್ನು ನಡೀಯೇ ನನ್ನ ಅಮ್ಮ ಬೈತಾರೆ’ ಅಂತ ನಡುಗುವ ಗೆಳತೀನ ನೋಡಿದಾಗಲೇ ಮನೆ ನೆನಪು ನನಗೆ. ಅಪ್ಪನ ಏಟು ಅಮ್ಮನ ಸಿಟ್ಟಿನ ನೆನಪಿಗೆ ಮನದಲ್ಲಿ ನಡುಕ, ಆ ಒದ್ದೆ ಮೈಯಲ್ಲೂ ಬೆವರು. ಬರುವ ಸೀನುಗಳನ್ನು ತಡೆ ಹಿಡಿಯುತ್ತಾ, ಪಾಟೀಚೀಲ ಹೆಗಲಿಗೇರಿಸಿ, ಅದು ನೆನೆಯದಂತೆ ಆಗ ಕೊಡೆ ಬಿಡಿಸಿ ಮನೆಗೆ ಹೊರಡೋ ಗಡಿಬಿಡಿ. ಯಾಕೆ ಲೇಟ್ ಆಯ್ತು ಅಂದ್ರೆ ಉತ್ತರ ತಯಾರು. “ಜೋರು ಮಳೇಲಿ ನೆನೀಬಾರದೂಂತ ಅಲ್ಲೇ ಸ್ವಲ್ಪ ಹೊತ್ತು ನಿಂತಿದ್ದು ಬಂದ್ವಮ್ಮ. ಆದರೂ ಪೂರ್ತಿ ಒದ್ದೆ. ಮಳೆ ಬಲು ಜೋರು.” ಅಂತ ಸಮಜಾಯಿಷಿ. ಅಮ್ಮನಿಗೆ ಗೊತ್ತು ಎಲ್ಲಾ. ಗದರುತ್ತ, ಅಪ್ಪನ ಸಿಟ್ಟಿನಿಂದ ಬಚಾವ್ ಮಾಡಿ ಒಳಗೆ ಕರೆದೊಯ್ದು ಮೆತ್ತಗೆ ಬೈಯ್ದು, ಉದ್ದ ತಲೆಗೂದಲನ್ನು ಒರೆಸಿ ಸಾಂಬ್ರಾಣಿ ಹೊಗೆ ಕಾಯಿಸಿ, ಬಿಸಿ ಬಿಸಿ ಶುಂಠಿ ಹಾಲು ಕುಡಿಸಿ, ‘ಓದಿಕೋ ಇನ್ನು’ ಅಂತ ಜೋರಾಗಿ ಹೇಳುತ್ತಿದ್ದುದನ್ನು ನೆನಪಿಸಿ ನನ್ನಷ್ಟಕ್ಕೆ ನಾನೇ ನಕ್ಕೆ. ‘ಏನು ಮೇಡಂ’ ಎಂದ ಆಟೋದವನಿಗೆ ‘ಏನಿಲ್ಲ, ಫೋನ್ ಇತ್ತು’ ಎಂದೆ.
ಹಾಗೇ ಕಣ್ಮುಂದೆ ಕಾಲೇಜು ದಿನಗಳು ಹರಿದಾಡಿದ್ವು. ಆ ಮಜಾನೇ ಬೇರೆ. ಮನದಲ್ಲಿ ಭಾವನೆಗಳ ಊಟೆ ಚಿಮ್ಮಿಸಿ, ಕಂಗಳಲ್ಲಿ ನೂರು ಕನಸು ಅರಳಿಸಿ ಆ ಮಳೆಯಲ್ಲಿ ಏನೋ ಅರಸಿ ಹೊರಡುತ್ತಿತ್ತು ಜೀವ. ಗುಡುಗುವ ಗುಡುಗಿನಲ್ಲೂ ಅದೆಂಥದೋ ರಮಣೀಯತೆ, ಭೀಭತ್ಸ ಸೌಂದರ್ಯ ಕಣ್ಣಿಗೆ. ಭೂಮ್ಯಾಕಾಶ ಒಂದು ಮಾಡುವಂತೆ ಸುರಿವ ಮಳೆಯಲ್ಲಿ ಗಿಡದ ಬುಡದಲ್ಲಿ ಆಸರೆ ಹುಡುಕಿ ನಿಂತು, ಆ ಉರುಳಿ ಹೋಗುತ್ತಿರುವ ಬೆಂಕಿ ಚೆಂಡು ನೋಡಿ ಅಚ್ಚರಿ ಭರಿತ ಉಲ್ಲಾಸದಿಂದ ಹಾಡು ಹರಿದರೆ ಅದೇ ದಾರಿಯಲ್ಲಿ ಹೋಗುವ ರೈತನೊಬ್ಬ, ‘ ಹೇ, ಈಕಡೆ ಬನ್ನಿ. ಗುಡುಗು ಸಿಡಿಲು ಬರೋವಾಗ ಗಿಡದ ಬುಡದಲ್ಲಿ ನಿಲ್ಲಬಾರದು. ಬರ್ರಿ ಈಚೆ’ ಎಂದು ಕೂಗಿದ್ದು ಇನ್ನೂ ನಿನ್ನೆ ಮೊನ್ನೆ ಕರೆದಂತೆ ನಿಚ್ಚಳ ಕಿವಿಯಲ್ಲಿ. ಹೆದರಿ ನಡುಗುತ್ತಿದ್ದ ಕೈಗಳಿಂದ ನನ್ನ ಕುತ್ತಿಗೆಗೆ ಜೋತು ಬಿದ್ದು’ ಮಳೆ ಬರೋವಾಗ ಇನ್ನೆಂದೂ ನಿನ್ನ ಜೊತೆ ಬರೋದಿಲ್ಲ’ ಎಂದ ಸ್ನೇಹಿತೆಯ ಮಾತು ನೆನೆದು ನಗು.
ಚಿಕ್ಕವರಿದ್ದಾಗ ಕಿವಿಗಪ್ಪಳಿಸುವ ಗುಡುಗು, ಕಣ್ಣು ಕೋರೈಸುವ ಮಿಂಚಿಗೆ ಹೆದರಿ ಓಡಿ ಅಮ್ಮನ ಸೆರಗಿನಲ್ಲಿ ಅವಿತರೂ ಎಂದೂ ಆ ಸುಳಿ ಮಿಂಚು ನೋಡೋದನ್ನ ತಪ್ಪಿಲ್ಲ. ಬೆಳೆದು ಅರಳಿ ನಿಂತ ಮನದಲ್ಲಿ ಇನ್ನೇನೋ ಆಸೆ, ಕಣ್ಣಲ್ಲಿ ಮುಗಿಲ ಮಾರಿಗೆ ಹೊಳಪು ತಂದ ಮಿಂಚು. ಸುರಿಯೋ ಮಳೆಯಲ್ಲೇ ನೆನೆದುಕೊಂಡೇ, ನಮ್ಮ ಕಾಲೇಜಿನ ಬೆನ್ನಿಗೇ ಇರುವ ಪುಟ್ಟ ಗುಡ್ಡದ ಮೇಲೇರಿ ಅಲ್ಲಿರುವ ಕೆಂಪು ಹೂವಿನ ಗಿಡದ ಕೆಳಗೆ ನಾಲ್ಕು ಹೆಜ್ಜೆ ಹಾಕಿ, ಅಲ್ಲಿರುವ ಕಲ್ಲೊಂದರ ಮೇಲೆ ಕುಳಿತು, ಆ ಗಿಡದ ಬೊಡ್ಡೆಗೊರಗಿ, ಸುತ್ತಲಿನ ಸೌಂದರ್ಯ ಸವಿಯುವುದನ್ನೆಂದೂ ತಪ್ಪಿಸಿದ್ದಿಲ್ಲ, (ಕ್ಲಾಸ್ ತಪ್ಪಿದರೂ). ಎಲ್ಲರೂ ‘ ಮಯೂರಿ’ ಅಂತಲೇ ನನ್ನ ಕೂಗ್ತಿದ್ದದ್ದು, ನನ್ನ.
ನಾನೇನೂ ಅದಕ್ಕೆ ಕ್ಯಾರೇ ಅಂದದ್ದಿಲ್ಲ. ನನ್ನ ಲೋಕದಲ್ಲಿ ನಾ. ನಮ್ಮ ಕಾಲೇಜ್ ಬಸ್ ಬರೋ ದಾರಿಯಲ್ಲಿ ಒಂದು ದೊಡ್ಡ ಹಳ್ಳ ಅಡ್ಡಗಟ್ಟೋದು ಜೋರು ಮಳೆ ಆದಾಗ. ಅಬ್ಬಾ! ಅದೇನು ಭೋರ್ಗರೆತ, ಮೊರೆತ, ಅಬ್ಬರ! ಯಾವ ಕಡಲಿಗೂ ಕಮ್ಮಿ ಇಲ್ಲ. ಅದರ ಭರಾಟೆ ಇಳಿಯೋವರೆಗೂ ನಾವು ಈಚೆ ದಡ, ನನ್ನೂರು ಆಚೆ ದಡ.ನನಗೆ ಅಬ್ಬರಿಸಿ ಹರಿವ ನೀರಲ್ಲಿ ಕಾಲುಗಳಿಳಿ ಬಿಟ್ಟು, ಧಾರಾಕಾರ ಮಳೆಯಲ್ಲಿ ಕೂರೋ ಆಸೆ. ಬಸ್ ಡ್ರೈವರ್, ‘ ಏನಮ್ಮಾ, ಮನೇಲಿ ಹೇಳಿ ಬಂದೀಯಾ ಹೇಗೆ?’ ಅಂತ ಗದರಿದ್ದು ಕಿವಿಯಲ್ಲಿ ಮೊರೆವಂತಿದೆ.
ಇನ್ನೊಂದು ಭರ್ಜರಿ ಸರ್ಕಸ್! ಸೊಂಟದ ಕೆಳಗೆ ಇಳಿಬಿದ್ದ ಜಡೆಯಿಂದ ಸೋರೋ ನೀರು, ಕಾಲಿಗೆ ತೊಡರೋ ಒದ್ದೆ ಸೀರೆ, ಚಟ್ ಪಟ್ ಸದ್ದು ಮಾಡುತ್ತ ರೊಜ್ಜು ಸಿಡಿಸೋ ಚಪ್ಪಲಿ ಕಾಲು ಕಿತ್ತು ಎತ್ತಿಡುತ್ತ, ತೊಯ್ಯದಂತೆ ಎದೆಗವಚಿ ಹಿಡಿದ ಪುಸ್ತಕ ಒಂದು ಕೈಯಲ್ಲಿ, ಕೊಡೆ ಒಂದು ಕೈಯಲ್ಲಿ! ಆಹಾ! ಏನು ಹೇಳಲಿ? ಸುನಂದಾ ಬೆಳಗಾಂವಕರ್ ಅವರ ಲೇಖನ ನೆನಪಿಗೆ ಬರೋದು.
ಆ ದಿನಗಳು ಬಾರವಲ್ಲ ಮತ್ತೆ! ನಿಜ, ಬಾರವು. ಆದರೆ ನನ್ನ ಭಾವಲಹರಿ ನನ್ನಲ್ಲೇ ಭದ್ರ. ಈಗಲೂ ಅಷ್ಟೇ. ಮಳೆ ಸುರೀವಾಗ ಕಿಟಕಿ ಪಕ್ಕ ಕೂತು, ಆ ಮಳೆಯ ಧಾರೆಯಲಿ ಮನ ತೇಲಿ ಬಿಟ್ಟು, ದುಗುಡ, ದುಮ್ಮಾನ ಎಲ್ಲಾ ಗಂಟು ಕಟ್ಟಿ ಮೋಡದೆಡೆ ತೂರಿ ಹಗುರಾಗಿ ಬಿಡ್ತೀನಿ. ತೊಪ್ಪನೇ ತೊಯ್ದ, ಮಳೆಯ ಅಬ್ಬರದಲ್ಲಿ ಓಲಾಡುತ್ತ ನಿಂತ ಮರ ನಾನಾಗಬಾರದೇ ಎನಿಸಿ ಆಸೆ ಕಂಗಳಿಂದ ನೋಡೋದು ಮಾತ್ರ. ಎಲೆಯ ತುದಿಯಿಂದ ತೊಟ್ಟಿಕ್ಕೋ ಮುತ್ತಿನ ಮಣಿಗಳ ಮುಡಿವಾಸೆ.
ಆ ಕಪ್ಪು ಮೋಡ ಕಾವಳದ ನೆರಳು ಹಾಸಿದರೆ ಅದೇನೋ ಮೋಡಿಗೆ ಒಳಗಾಗ್ತದೆ ಜೀವ. ಸೃಷ್ಟಿಯ ಸೌಂದರ್ಯ ಇಮ್ಮಡಿಸಿದಂತೆ ಕಣ್ಣಲ್ಲಿ ಮಿಂಚು ಮೂಡ್ತದೆ. ತಲೆ ಭಾರ, ಜ್ವರ ಬರೋದು ಖಾತ್ರಿ ಇದ್ದರೂ, ಒಂದು ರೌಂಡ್ ಮಳೆಯಲ್ಲಿ ನೆನೆಯುತ್ತಾ ಸುತ್ತಿ ಬಂದರೇನೇ ಸಮಾಧಾನ. ಮುಂಗಾರಿನ ಹನಿಗಳಲ್ಲಿ ಮಿಂದು, ಆ ಸಿಂಚನ ನೀಡೋ ಉತ್ಸಾಹ, ಉಲ್ಲಾಸ ಅದಮ್ಯ. ಕನಸು ಕಲ್ಪನೆಗಳಲ್ಲಿ ಮುಳುಗಿದ್ದವಳನ್ನು ‘ ಮೇಡಮ್, ಅಶೋಕಾ ಪಿಲ್ಲರ್’ ಎಂಬ ಧ್ವನಿ ಎಚ್ಚರಿಸಿತು. ಧಡಬಡಿಸಿ ಇಳೆಗೆ ಇಳಿದು ಬಂದು ನೋಡಿದರೆ ಅಬ್ಬರದ ಧಾರಾಕಾರ ಮಳೆ! ಕೈಯಲ್ಲಿ ಕೊಡೆ ಇಲ್ಲ! ಕುಣಿದಾಡಿ ಹೋಯ್ತು ಜೀವ. ಗಡಬಡಿಸಿ ಆಟೋದ ಮೀಟರ್ ಹಣ ಕೊಟ್ಟು ಕೆಳಗಿಳಿದೆ ಆ ಮುಂಗಾರಿನ ಹನಿಗಳಲ್ಲಿ ಮಿಂದು ನೆನೆಯಲು…..
ಕೈಯಲ್ಲಿ ಕೊಡೆ ಇಲ್ಲ! ಕುಣಿದಾಡಿ ಹೋಯ್ತು ಜೀವ..
ನಿಮಗೆ ಇವೂ ಇಷ್ಟವಾಗಬಹುದು…





0 Comments