ಕೆ ವಿ ತಿರುಮಲೇಶ್

`ಈ ಇಂಥ ರಾತ್ರಿ’
ಮೂಲ: ವಿಲಿಯಂ ಶೇಕ್ಸ್ಪಿಯರ್: In such a night
[ಇದು ವಿಲಿಯಂ ಶೇಕ್ಸ್ಪಿಯರ್ ನ Merchant of Venice ನಾಟಕದ ಕೊನೆಯ ಅಂಕದಲ್ಲಿ ಬರುವ ”In such a night” ಎಂಬ ಪದ್ಯಭಾಗ. ಲೋರೆಂಝೋ ಎಂಬ ತರುಣ ಮತ್ತು ಜೆಸ್ಸಿಕಾ ಎಂಬ ತರುಣಿ ಪ್ರಣಯಿಗಳು. ಜೆಸ್ಸಿಕಾ ಶೈಲಾಕ್ನ ಮಗಳು. ಪ್ರಣಯಿಗಳಿಬ್ಬರೂ ಬೆಲ್ಮೋಂಟ್ ತಲಪಿ ಅಲ್ಲಿಗೆ ಪೋರ್ಶಿಯಾ ಮತ್ತಿತರರು ಬರುವುದನ್ನು ಕಾಯುತ್ತಿರುತ್ತಾರೆ. ಮತ್ತು ಸುಮ್ಮನೆ ಸಮಯ ಕಳೆಯಲು ಪ್ರೀತಿ ಸಂಬಂಧವಾದ ಈ ಸಂಭಾಷಣೆಯಲ್ಲಿ ತೊಡಗುತ್ತಾರೆ. In such a night `ಈ ಇಂಥ ರಾತ್ರಿ’ ಎಂಬ ಮಾತು ಇದರಲ್ಲಿ ಪಲ್ಲವಿಯಂತೆ ಬರುತ್ತದೆ.]
ಲೋರೆಂಝೋ.
ಚಂದ್ರ ಹೊಳೆಯುವನು ಪ್ರಕಾಶಮಾನ. ಇದೇ ಈ ಇಂಥ ರಾತ್ರಿ
ಮಧುರ ತಂಗಾಳಿ ಮರಗಳ ಮಿದುವಾಗಿ ಮುದ್ದಿಸಿದಾಗ
ಅವು ಯಾವುದೇ ಸದ್ದು ಮಾಡದೆ ಇದ್ದು, ಈ ಇಂಥ ರಾತ್ರಿ
ನಾನಂದುಕೊಳ್ಳುವೆ ಟ್ರಾಯ್ಲಲುಸ್ ಏರಿ ಟ್ರೋಜನ್ ಗೋಡೆಗಳ,
ಎಲ್ಲಿ ಕ್ರೆಸಿಡಾ ಮಲಗಿದ್ದಳೋ ಅಂದಿನಿರುಳು
ಆ ಗ್ರೀಶಿಯನ್ ಡೇರೆಗಳ ನೋಡಿ ನಿಡುಸುಯ್ದುದ್ದು.
ಜೆಸ್ಸಿಕಾ.
ಈ ಇಂಥ ರಾತ್ರಿ
ಥಿಸ್ಬಿ ಅಳುಕಳುಕಿ ಇಬ್ಬನಿ ಜಾರಿ ಬಿದ್ದು
ಧುತ್ತನೇ ತನ್ನೆದುರು ಸಿಂಹದ ನೆರಳ ಕಂಡು,
ಬೆದರಿ ಕಾಲ್ಕಿತ್ತದ್ದು.
ಲೋರೆಂಝೋ.
ಈ ಇಂಥ ರಾತ್ರಿ
ಡೈಡೋ ಶೋಕವೃಕ್ಷದ ರೆಂಬೆ ಕೈಯಲ್ಲಿ ಹಿಡಿದು
ಉಬ್ಬರದ ಕಡಲ ದಂಡೆಯ ಮೇಲೆ ನಿಂದು
ತನ್ನಿನಿಯ ಮರಳಿ ಕಾರ್ತಜಿಗೆ ಬರಲು ಬೀಸಿದ್ದು.
ಜೆಸ್ಸಿಕಾ.
ಈ ಇಂಥ ರಾತ್ರಿ ಮೀಡಿಯಾ
ಕಲೆಹಾಕಿದ್ದು ಸಮ್ಮೋಹಿನೀ ಸಸ್ಯಗಳ
ವೃದ್ಧ ಈಸನ್ಗೆ ಪುನರ್ ಯೌವನವ ತರಲು.
ಲೋರೆಂಝೋ.
ಈ ಇಂಥ ರಾತ್ರಿ
ಜೆಸ್ಸಿಕಾ ಕದ್ದದ್ದು ಧನಿಕ ಯಹೂದಿಯಿಂದ
ಆಮೇಲೆ ಓಡಿದ್ದು ತನ್ನ ಪೋಲಿ ಪ್ರಣಯಿ ಸಮೇತ
ವೆನೀಸಿನಿಂದ ಬೆಲ್ಮೋಂಟ್ ತನಕ.
ಜೆಸ್ಸಿಕಾ.
ಈ ಇಂಥ ರಾತ್ರಿ
ಲೋರೆಂಝೋ ಅವಳ ಪ್ರೀತಿಸುವೆನೆಂದು ಮಾತು ಕೊಟ್ಟದ್ದು,
ಅವೆಷ್ಟೋ ಪ್ರಮಾಣ ವಚನಗಳಿಂದ ಅವಳ ಆತ್ಮವ ಗೆದ್ದು,
ನಿಜವಿರದೆ ಯಾವುದೊಂದೂ.

ಲೋರೆಂಝೋ.
ಈ ಇಂಥ ರಾತ್ರಿ ಮುದ್ದು ಜೆಸ್ಸಿಕಾ, ಪುಟ್ಟ ಗಯ್ಯಾಳಿಯ ಹಾಗೆ,
ಪ್ರಿಯಕರನ ಬಯ್ದದುದ್ದು, ಮತ್ತವನು ಅದಕ್ಕೆ ಅವಳ ಕ್ಷಮಿಸಿದ್ದು.
ಜೆಸ್ಸಿಕಾ.
ನಿನ್ನ ರಾತ್ರಿಯ ನಾನು ಅತಿರಾತ್ರಿ ಮಾಡುತ್ತಿದ್ದೆ, ಯಾರೂ ಬರದೆ ಇದ್ದರೆ;
ಆದರೆ, ಅದೋ, ಕೇಳಿಸುತ್ತಿದೆ ಒಬ್ಬ ಮನುಷ್ಯನ ಕಾಲ ಸಪ್ಪಳ.
***
ಟಿಪ್ಪಣಿಗಳು:
ಟ್ರಾಯ್ಲಲುಸ್. ಟ್ರಾಯ್ ರಾಜ ಪ್ರಯಾಮ್ನ ಮಗ. ಕ್ರೆಸಿಡಾ ಎಂಬವಳನ್ನು ಪ್ರೀತಿಸುತ್ತಾನೆ. ಟ್ರಾಯ್ಗೆಗೆ ಮುತ್ತಿಗೆ ಹಾಕಿದ ಗ್ರೀಕರು ಕ್ರೆಸಿಡಾಳನ್ನು ಸೆರೆಹಿಡಿದು ತಮ್ಮ ಪಾಳಯಕ್ಕೆ ಕೊಂಡೊಯ್ಯುತ್ತಾರೆ. ಟ್ರಾಯ್ಲಲುಸ್ ಗೋಡೆಯೇರಿ ಆ ಕಡೆ ನೋಡಿ ಮರುಗುವ ದೃಶ್ಯ. Troilus and Cressida ಎಂಬ ಶೇಕ್ಸ್ಪಿಯರ್ನ ಪ್ರತ್ಯೇಕವಾದ ಒಂದು ನಾಟಕವೂ ಇದೆ.
ಪಿರಾಮಸ್ ಮತ್ತು ಥಿಸ್ಬಿ. ಪುರಾತನ ಗ್ರೀಕ್ ದಂತಕತೆಯ ನಾಯಕ ಮತ್ತು ನಾಯಕಿ. Pyramus and Thisbe ಶೇಕ್ಸ್ಪಿಯರ್ನ ಕಾಲದ ಒಂದು ಜನಪ್ರಿಯ ನಾಟಕವಾಗಿತ್ತು. ಪಿರಾಮಸ್ ಮತ್ತು ಥಿಸ್ಬಿ ಬ್ಯಾಬಿಲೋನಿನಲ್ಲಿದ್ದ ಪ್ರಣಯಿಗಳು. ಒಂದು ದಿನ ಅವರು ಗೋರಿಯೊಂದರ ಬಳಿ ರಾತ್ರಿ ಭೇಟಿಯಾಗುವುದಾಗಿ ತೀರ್ಮಾನಿಸಿರುತ್ತಾರೆ. ಮೊದಲೇ ಬಂದು ತಲಪಿದ ಥಿಸ್ಬಿ ಸಿಂಹವೊಂದನ್ನು ಕಂಡು ಹೆದರಿ ಓಡಿಹೋಗುತ್ತಾಳೆ. ಹಾಗೆ ಹೋಗುವಾಗ ಅವಳ ಮೇಲುದ ಅಲ್ಲಿ ಜಾರಿಬಿದ್ದಿರುತ್ತದೆ. ನಂತರ ಬಂದ ಪಿರಾಮಸ್ ಈ ಮೇಲುದವನ್ನು ಕಂಡು ಥಿಸ್ಬಿಯನ್ನು ಸಿಂಹ ಕೊಂದಿತು ಎಂದುಕೊಂಡು ದುಃಖದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಆಮೇಲೆ ಮರಳಿದ ಥಿಸ್ಬಿ ಪಿರಾಮಿಸನ ಕಳೇಬರವನ್ನು ನೋಡಿ ತಾನೂ ಆತ್ಮಹತ್ಯೆ ಮಾಡುವಳು. ಶೇಕ್ಸ್ಪಿಯರ್ನ A Midsummer Night’s Dream ನಾಟಕದೊಳಗೆ ಬರುವ ಪ್ರಹಸನದ ಕತೆ ಇದುವೇ.
ಡೈಡೋ. ಗ್ರೀಕರು ಮತ್ತು ಟ್ರೋಜನರ ಹತ್ತು ವರ್ಷಗಳ ಯುದ್ಧದಲ್ಲಿ ಕೊನೆಗೂ ಟ್ರೋಜನರು ಸೋತು ಅವರ ದುರ್ಗ ಬೆಂಕಿಗೆ ಆಹುತಿಯಾದಾಗ, ಈನಿಯಸ್ ಎಂಬ ಟ್ರೋಜನ್ ಯುವಕ ಮತ್ತು ಅವನ ಹಲವಾರು ಅನುಯಾಯಿಗಳು ಅಲ್ಲಿಂದ ರೋಮಿನ ಕಡೆಗಾಗಿ ವಲಸೆ ಹೋಗುತ್ತಾರೆ. ದಾರಿಯಲ್ಲಿ ಅವರು ಸ್ವಲ್ಪ ಕಾಲ ಕಾರ್ತಜಿನಲ್ಲಿ ತಂಗುತ್ತಾರೆ. ಕಾರ್ತಜಿನ ರಾಣಿ ಡೈಡೋ ಈನಿಯಸ್ನಲ್ಲಿ ಅನುರಕ್ತಳಾಗುತ್ತಾಳೆ. ಆದರೆ ಗುರಿ ತಲಪಲೇಬೇಕಾದ ಟ್ರೋಜನರು ರಾತ್ರೋರಾತ್ರಿ ಅಲ್ಲಿಂದ ಹಡಗ ಹತ್ತುವರು. ಇದರಿಂದ ದುಃಖಿತಳಾದ ಡೈಡೋ ಚಿತೆಗೆ ಹಾರಿ ಸಾಯುತ್ತಾಳೆ. ಐತಿಹ್ಯದ ಪ್ರಕಾರ ಈನಿಯಸ್ಸನ್ನು ಮರಳಲು ಕೋರುವಂತೆ ಡೈಡೋ ಕಳಿಸುವುದು ತನ್ನ ಸೋದರಿ ಅನ್ನಾಳನ್ನು. ಶೇಕ್ಸ್ಪಿಯರ್ ಇಲ್ಲಿ ಡೈಡೋ ಸ್ವತಃ ಹಾಗೆ ಮಾಡುವಂತೆ ಕಲ್ಪಿಸಿಕೊಂಡಿದ್ದಾನೆ.
ಈಸನ್. ಜೇಸನ್ನ ಪಿತ. ಬಂಗಾರದ ತುಪ್ಪಳ ಹುಡುಕಿ ಹೋದ ಜೇಸನ್ ತನ್ನ ಆರ್ಗೋನಾಟಿಕ್ ಸಾಹಸ ಯಾತ್ರೆಯಿಂದ ಮರಳುತ್ತಲೂ, ಯಕ್ಷಿಣಿಯಿಂದ ಎಂಬಂತೆ ಮೀಡಿಯಾ ಈ ವೃದ್ಧ ಈಸನ್ಗೆ ತಾರುಣ್ಯ ಬರಿಸುತ್ತಾಳೆ.






ವಿಲಿಯಂ ಶೇಕ್ಸ್ಪಿಯರ್ ನ estu kruthigalu kannadakke anuvada kandive hagu avu elli siguttave emba mahithi iddare dayavittu thilisi plz
mahesh avare, neevu T S Satyanth ra article ‘how does shakespeare become sekh pir in kannada’ odi.. nimage kannadadalli anuvadagondiruva ella mahiti sigutte.
koneya naalku saalugaLa kaadidavu…nice sir.