ಕೆ ನಲ್ಲತಂಬಿ ಅನುವಾದ ಸರಣಿ- ಅರಸನ ಮಧ್ಯಾಹ್ನ ಭೋಜನ!

ಮೂಲ: ಎಸ್ ರಾಮಕೃಷ್ಣನ್  

1966 ರಲ್ಲಿ  ತಮಿಳುನಾಡಿನ ವಿರುದುನಗರ್ ಜಿಲ್ಲೆಯ ಮಲ್ಲಾಂಕಿಣರು ಎಂಬ ಹಳ್ಳಿಯಲ್ಲಿ ಹುಟ್ಟಿದವರು. ಪೂರ್ಣಾವಧಿ ಬರಹಗಾರರಾಗಿ ಚೆನ್ನೈಯಲ್ಲಿ ವಾಸವಿದ್ದಾರೆ. ದೇಶಾಂತರಿ ಎಂಬ ಪ್ರಕಾಶನವನ್ನು ನಡೆಸುತ್ತಿದ್ದಾರೆ.

ಸಣ್ಣಕಥೆ, ಕಾದಂಬರಿ, ಅಂಕಣ, ಸಿನಿಮಾ ಸಾಹಿತ್ಯ, ಮಕ್ಕಳ ಸಾಹಿತ್ಯ, ಇತಿಹಾಸ, ನಾಟಕ, ಅನುವಾದ ಹೀಗೆ ಅನೇಕ  ಪ್ರಕಾರಗಳ ಬರಹಗಳಲ್ಲಿ ತೊಡಗಿಕೊಂಡಿದ್ದಾರೆ. ಇಂಗ್ಲೀಷಿನಲ್ಲೂ ಬರೆಯುತ್ತಾರೆ. 10 ಕಾದಂಬರಿ, 21 ಸಣ್ಣಕಥೆಗಳ ಸಂಕಲನ, ಮೂರು ನಾಟಕ, 22 ಮಕ್ಕಳ ಸಾಹಿತ್ಯ, ಅನೇಕ ಅಂಕಣ ಸಂಕಲನಗಳನ್ನು ಬರೆದಿದ್ದಾರೆ.

ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಉತ್ತಮ ಕಾದಂಬರಿ ಪ್ರಶಸ್ತಿ, ಉತ್ತಮ ಪುಸ್ತಕ ಪ್ರಶಸ್ತಿ, ಠಾಗೂರ್ ಸಾಹಿತ್ಯ  ಪ್ರಶಸ್ತಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮುಂತಾದುವುಗಳನ್ನು ಗಳಿಸಿದ್ದಾರೆ.

ತಮಿಳಿನ ಪ್ರಮುಖ ಸಾಹಿತಿಗಳಲ್ಲಿ ಒಬ್ಬರು.

ಕೆ ನಲ್ಲತಂಬಿ

16

ಹೆಚ್ಚಾಗಿ, ಅರಸನಿಗೆ ಬೆಳಗಿನ ಆಹಾರ ಇರುವುದಿಲ್ಲ. ಹಣ್ಣು, ಹಣ್ಣಿನ ರಸಗಳನ್ನು ಮಾತ್ರ ನೀಡಲಾಗುತ್ತದೆ. ರಾಜನಿಗೆ ಬೇಕಾದ ಹಣ್ಣಿನ ರಸವನ್ನು ತಯಾರಿಸಿ ಅದನ್ನು ಚಿನ್ನದ ಬಟ್ಟಲಿನಲ್ಲಿ ತುಂಬಿ, ಅದಕ್ಕೆ ಮುದ್ರೆ ಹಾಕುತ್ತಾರೆ. ಅದು ಯಾವ ಹಣ್ಣಿನ ರಸ ಎಂದು ಆ ಬಟ್ಟಲಿನ ಮೇಲೆ ಬರೆದು ಅಂಟಿಸಿರುತ್ತಾರೆ.

ಮುದ್ರೆ ಇಡಲು ಅಡುಗೆಯ ಕೋಣೆಯಲ್ಲಿ ಪ್ರತ್ಯೇಕ ಅಧಿಕಾರಿ ಇರುತ್ತಾರೆ. ಅವರು ಮುದ್ರೆ ಹಾಕಿದ ಬಟ್ಟಲನ್ನು, ರಾಜನ ಆಹಾರ ವಿಭಾಗದ ಅಧಿಕಾರಿಯೊಬ್ಬರು ಪರೀಕ್ಷಿಸುತ್ತಾರೆ. ಅಡುಗೆ ಮನೆಯಲ್ಲಿ ಕೆಲಸಮಾಡುವುದಕ್ಕೆ ಹೊಸ ಆಳುಗಳನ್ನು ಸೇರಿಸಿಕೊಳ್ಳುವುದಕ್ಕೋ, ಅಡುಗೆ ಮಾಡುವವರು ಕಾರಣವಿಲ್ಲದೆ ರಜೆ ತೆಗೆದುಕೊಳ್ಳುವುದಕ್ಕೋ ಅನುಮತಿ ಇರುವುದಿಲ್ಲ. ಅದಕ್ಕೆ ಕಾರಣ, ಅವರು ಸಂಚು ಮಾಡಿಬಿಡಬಹುದು ಎಂಬ ಸಂಶಯ! 

ರಾಜ ಪ್ರತಿನಿತ್ಯ ರಾಜ್ಯದ ಮೃಗಗಳನ್ನು ವೀಕ್ಷಿಸಬೇಕು. ಅದಕ್ಕೆ ದಿನವೂ ನಿರ್ದಿಷ್ಟ ಸಂಖ್ಯೆಯ ಆನೆ, ಕುದುರೆ, ಒಂಟೆ, ಹಸು, ಹೇಸರಗತ್ತೆ ಮುಂತಾದುವನ್ನು ರಾಜನ ಮುಂದೆ ತಂದು ನಿಲ್ಲಿಸುತ್ತಾರೆ. ಮೃಗಗಳನ್ನು ಹೇಗೆ ಆರೋಗ್ಯದಿಂದ ಇರುವಂತೆ ನೋಡಿಕೊಳ್ಳುತ್ತಾರೆ ಎಂಬುದನ್ನು ನೋಡಿ, ಅದಕ್ಕೆ ಬೇಕಾದ ಸಲಹೆಗಳನ್ನು, ಸನ್ಮಾನಗಳನ್ನು ರಾಜ ನೀಡುತ್ತಾನೆ. ಅಕ್ಕರೆಯಿಲ್ಲದೆ ಮೃಗಗಳನ್ನು ನೋಡಿಕೊಳ್ಳುವ ಕೆಲಸಗಾರರಿಗೆ ಸಂಬಳ ಕಡಿತವನ್ನು ಮಾಡುವುದುಂಟು. ದಾಗ್, ದಾಕ್ಷಿಕ ಎಂಬ ಗುರುತುಗಳನ್ನು ಮಾಡಿರುವ ಕುದುರೆಗಳನ್ನು ವೀಕ್ಷಿಸುವುದು, ಹೊಸದಾಗಿ ಮೃಗಗಳನ್ನು ಕೊಂಡುಕೊಳ್ಳುವುದರ ಬಗ್ಗೆಯೂ, ಅವುಗಳ ಬೆಲೆಯ ಕುರಿತೂ, ರಾಜ ಸಲಹೆ ನೀಡುತ್ತಾನೆ.

ಈ ರೀತಿ ಸೈನ್ಯವನ್ನು ವೀಕ್ಷಿಸುವುದು, ಚಿತ್ರಕಲೆಯನ್ನು ವೀಕ್ಷಿಸುವುದು, ಚಿತ್ರಗಳನ್ನು ಬರೆಸುವುದು, ಭಾಷಾಂತರಿಸಿದ ಕೃತಿಗಳನ್ನು ಓದಿಸಿ, ತಿಳಿದುಕೊಳ್ಳುವುದು, ಹೊಸದಾಗಿ ನೆಯ್ಗೆ ಮಾಡಿ ತರುವ ಬಟ್ಟೆಗಳನ್ನು ನೋಡುವುದು, ವಜ್ರ ಮಾರುವವವರು, ಕರಕುಶಲ ಕೆಲಸಗಾರರು, ಕಟ್ಟಡ ವಿನ್ಯಾಸಕರು, ನಕ್ಷೆ ಬರೆಯುವವರು ಮುಂತಾದವರೊಂದಿಗೆ ಸಮಾಲೋಚನೆ ಮಾಡುವುದು ಎಂದು ದಿನಕ್ಕೊಂದು ಬಗೆಯ ಕೆಲಸಕ್ಕೆ ಸುಮಾರು ಒಂದೂವರೆ ಗಂಟೆಯನ್ನು ಮೀಸಲಿಡಲಾಗುತ್ತದೆ. 

ರಾಜ 30 ಬಗೆಯ ಖಡ್ಗಗಳನ್ನು ಬಳಸುತ್ತಾನೆ. ಪ್ರತಿ ಖಡ್ಗಕ್ಕೂ ಪ್ರತ್ಯೇಕ ಹೆಸರುಗಳುಂಟು. 8 ಕಿರುಗತ್ತಿಗಳು, 20 ಶೂಲಗಳು, 86 ಬಾಣಗಳು ರಾಜ ಪ್ರತ್ಯೇಕವಾಗಿ ಬಳಸುವುದಕ್ಕಾಗಿ ವಿಶೇಷವಾಗಿ ತಯಾರಿಸಲಾಗುತ್ತದೆ. ಅದನ್ನು ದಿನವೂ ಪರೀಕ್ಷಿಸಿ ನೋಡುವುದು ರಾಜನ ವಾಡಿಕೆ. ಅಂತಹ ಕಾರ್ಯ ಚಟುವಟಿಗೆಗಳು ಮಧ್ಯಾಹ್ನಕ್ಕೆ ಮೊದಲು ನಾಲ್ಕುವರೆ ಗಂಟೆಗಳ ಕಾಲ ನಡೆದಿವೆ. ಅದು ಮುಗಿದಕೂಡಲೇ  ರಾಜ ಅಂತಃಪುರಕ್ಕೆ ಹೋಗುತ್ತಾನೆ. ಮಧ್ಯಾಹ್ನದ ಆಹಾರವೇ ರಾಜನ ಪ್ರಧಾನ ಆಹಾರ ಎಂಬುದರಿಂದ, ಅದನ್ನು ತಯಾರಿಸಲು 30 ವಿಶೇಷ ಅಡುಗೆಯವರು   ಇರುತ್ತಾರೆ. ಅವರನ್ನು ನಿರ್ವಹಣೆ ಮಾಡಲು ಒಬ್ಬ ಪ್ರಧಾನ ಅಡುಗೆಯವನು ಇರುತ್ತಾನೆ. ಅಡುಗೆ ಮನೆಯಲ್ಲಿ ಕೆಲಸಮಾಡಲು ನೂರಕ್ಕೂ ಹೆಚ್ಚು ಜನ ಇರುತ್ತಾರೆ. 

ಅತಿ ಉನ್ನತ ಗುಣಮಟ್ಟದ ಅಕ್ಕಿಯಿಂದ, ಸಾಸುವೆಯವರೆಗೆ  ಪ್ರತ್ಯೇಕವಾದ  ಭೂಮಿಯಲ್ಲಿ ಬೆಳಸಿ, ಅವನ್ನು ಉಗ್ರಾಣದಲ್ಲಿ ಸುರಕ್ಷತೆಯಿಂದ ಇಡಲಾಗುತ್ತದೆ. ಗಂಗೆ ನದಿಯಿಂದ ನೀರು ತಂದು ಅದರಲ್ಲಿ ಅಡುಗೆ ಮಾಡಿದ್ದಾರೆ. ಧಾನ್ಯಗಳಿಂದ ಮಾಡುವ ಆಹಾರಗಳು, ತರಕಾರಿ, ಹಲವು ಬಗೆಯ ಮಾಂಸಾಹಾರಗಳು, ಸಿಹಿತಿಂಡಿಗಳು, ಮಸಾಲಾ ಹೆಚ್ಚಾಗಿ ಸೇರಿಸದ ಆಹಾರಗಳು ಎಂದು ಮಧ್ಯಾಹ್ನ ಭೋಜನಕ್ಕೆ 135 ಬಗೆಯ ಆಹಾರಗಳನ್ನು ಬಡಿಸಲಾಗುವುದು. 

ಪ್ರಧಾನ ಬಾಣಸಿಗ ದಿನವೂ ಆಹಾರ ಟಿಪ್ಪಣಿಯೊಂದನ್ನು ಬರೆಯಬೇಕು. ಅದರಲ್ಲಿ, ರಾಜನಿಗೆ ಅಂದು ಯಾವ ಆಹಾರ ತಯಾರು ಮಾಡಲಾಯಿತು, ಅದನ್ನು ಮಾಡಿದವರು ಯಾರು ಎಂಬ ವಿವರಗಳನ್ನು ದಾಖಲೆ ಮಾಡಬೇಕು. ಚಿನ್ನ, ಬೆಳ್ಳಿ, ಕಂಚು, ತಾಮ್ರ ಮುಂತಾದ ಪಾತ್ರೆಗಳನ್ನು ಅಡುಗೆಗೆ ಬಳಸಲಾಗುತ್ತದೆ. ಚಿನ್ನ ಮತ್ತು ಬೆಳ್ಳಿಯ ಪಾತ್ರೆಗಳನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ಮುಚ್ಚಿ ಕಟ್ಟಿ ಮುದ್ರೆ ಇಡಲಾಗುತ್ತದೆ. ಕಂಚು, ಪಿಂಗಾಣಿ ಪಾತ್ರೆಗಳನ್ನು ಬಿಳಿಯ ಬಟ್ಟೆಯಿಂದ ಮುಚ್ಚಿ ಮುದ್ರೆ ಇಡಲಾಗುತ್ತದೆ. 

ವ್ರತದ ದಿನಗಲಾದ ಶುಕ್ರವಾರ ಮತ್ತು ಭಾನುವಾರಗಳಲ್ಲಿ ಮಾಂಸಾಹಾರ ನಿಷಿದ್ಧ ಎಂಬುದರಿಂದ, ಆ ದಿನಗಳ ಅಡುಗೆಯನ್ನು  ಮಾತ್ರ ಪ್ರತ್ಯೇಕವಾಗಿ ದಾಖಲಿಸಬೇಕು. ಆ ದಿನಗಳಲ್ಲಿ ಯಾವ ಮಾಂಸಾಹಾರ ಆಡುಗೆಗಳನ್ನು ತಯಾರು ಮಾಡಕೂಡದು. ಉಳಿದ ದಿನಗಳು ಆಡು, ದನ, ಕೋಳಿ, ಬಾತುಕೋಳಿ, ಜಿಂಕೆ, ಮೊಲ, ಕಾಡೆ, ಮೀನುಗಳು, ಏಡಿ ಮುಂತಾದ 16 ಬಗೆಯ ಮಾಂಸಾಹಾರಗಳನ್ನು ತಯಾರಿಸಲಾಗುತ್ತದೆ. 

ಆಹಾರಕ್ಕೆ ಮುಂಚೆ ರಾಜನಿಗೆ ಮೊದಲು ಒಬ್ಬ ಪ್ರತಿ ಆಹಾರವನ್ನು ಸೇವಿಸಿ ವಿಷ  ಪರೀಕ್ಷೆ ಮಾಡಿದ ನಂತರವೇ ಬಡಿಸಲಾಗುವುದು. ಅದೇ ರೀತಿ, ಆಹಾರ ಬಡಿಸುವವರು ಸೀನಿದರೇ ಅದನ್ನು ಅಪಶಕುನ ಎಂದು ಪರಿಗಣಸುತ್ತಿದ್ದರು. ಒಂದೂವರೆ ಗಂಟೆ ಮಧ್ಯಾಹ್ನದ ಆಹಾರವನ್ನು ಸೇವಿಸಿದ ಮೇಲೆ ರಾಜ ತಾಂಬೂಲ ಹಾಕುತ್ತಾನೆ. ಅದಕ್ಕೆ ಚಿನ್ನದ ತಟ್ಟೆಯಲ್ಲಿ ವೀಳ್ಯದೆಲೆ, ಅಡಿಕೆ, ವಾಸನೆ ಪದಾರ್ಥಗಳನ್ನು ಇಟ್ಟಿರುತ್ತಾರೆ. 

ಅದರ ನಂತರ ರಾಜ ಅಂತಃಪುರಕ್ಕೆ ಹೋಗುತ್ತಾನೆ. ಅಲ್ಲಿ ವಿಶ್ರಾಂತಿಯ ನಂತರ ರಾಜ ಮಹಿಳೆಯರ ನಿಧಿ ಮತ್ತು ಆಡಳಿತ ಸಮಸ್ಯೆಗಳನ್ನು ಕೇಳಿ ಅವರಿಗೆ ಪರಿಹಾರ ನೀಡುತ್ತಾನೆ. ಅದರ ನಂತರ ಆನೆಯ ಕಾಳಗ, ಸಿಂಹ ಅಥವಾ ಎತ್ತಿನ ಕಾಳಗ, ಸೈನಿಕರ ಮಲ್ಲಯುದ್ಧ ಮುಂತಾದುವುಗಳಲ್ಲಿ ಯಾವುದಾದರೂ ಒಂದನ್ನು ನೋಡಿ ಆನಂದಿಸುತ್ತಾನೆ. ಸಂಜೆಗೆ ಮೊದಲು ದರ್ಬಾರ್ ಪ್ರಾರಂಭವಾಗುತ್ತದೆ. 

ಆ ಸಭೆಯಲ್ಲಿ ಕೆಲಸಕ್ಕೆ ನೇಮಕಾತಿ, ಸಂಬಳ ಬಡ್ತಿ, ನ್ಯಾಯ ವಿಚಾರಣೆ, ವಿದೇಶದ ರಾಯಭಾರಿಗಳೊಂದಿಗೆ ಭೇಟಿ, ಆಡಳಿತ ಕೆಲಸಕ್ಕಾಗಿ  ಬೇರೆ ಪ್ರದೇಶಗಳಿಗೆ ಹೋಗುವ ಅಧಿಕಾರಿಗಳಿಗೆ ಬೀಳ್ಕೊಡುಗೆ, ಬೇರೆ ಪ್ರದೇಶಗಳಲ್ಲಿ ಆಡಳಿತ ಕೆಲಸಗಳನ್ನು ಮುಗಿಸಿ ಹಿಂತಿರುಗುವ ಅಧಿಕಾರಿಗಳಿಗೆ ಸ್ವಾಗತ, ಸೈನ್ಯ ವಿಭಾಗಗಳಿಗೆ ನಿಧಿ ಹಂಚಿಕೆಯ ಸಮಾಲೋಚನೆ ಮುಂತಾದವು ನಡೆಯುತ್ತದೆ. 

ಸುಮಾರು ಎರಡೂವರೆ ಗಂಟೆ ನಡೆಯುವ ಈ ದರ್ಬಾರ್, ಕೆಲವು ಸಮಯ ಸಂಜೆಯವರೆಗೆ ಮುಂದುವರೆಯುವುದೂ ಸಹ ಉಂಟು. ದರ್ಬಾರಿನಲ್ಲಿ ರಾಜನ ಮುಂದೆ ನಿಂತು ಮಾತನಾಡುವ ಹಕ್ಕನ್ನು ಎಲ್ಲರಿಗೂ ನೀಡುವುದಿಲ್ಲ. ಅದು ಕೇವಲ ಕೆಲವರಿಗೆ ನೀಡಲಾಗುವ ಗೌರವ. ಉಳಿದವರು ಆ ಹಕ್ಕನ್ನು ಪಡೆದುಕೊಂಡವರ ಮೂಲಕವೇ ತಮ್ಮ ಕೋರಿಕೆಗಳನ್ನು ತಿಳಿಸಬೇಕು. ಈ ರೀತಿ ಪತ್ರಗಳನ್ನು ಓದಲು ವಜೀರ್-ಅನ್ನು  ನೇಮಕ ಮಾಡಿರುತ್ತಾರೆ. ಆಡಳಿತ ಕಾರ್ಯದರ್ಶಿ ರಾಜ ಕುಳಿತಿರುವ ಮಂಟಪದ ಪಕ್ಕದಲ್ಲಿ ನಿಂತುಕೊಂಡು, ತಮ್ಮ ಇಲಾಖೆಗೆ ಸೇರಿದ ಟಿಪ್ಪಣಿಗಳನ್ನು ಓದುತ್ತಾರೆ. ಅದರಲ್ಲಿ, ಮುನ್ಸೀಪ್ದಾರ, ಭಕ್ಷಿ, ಸದರ್, ಮೀರ್ ಸಾಮಾನ್, ದಿವಾನ್ ಎಂದು ಅನೇಕ ಅಧಿಕಾರಿಗಳು ಇರುತ್ತಾರೆ. 

ಆಧಾಯ, ನಿಧಿ, ನೇಮಕಾತಿ, ಸಂಬಳ ನೀಡುವುದು, ದತ್ತಿ ಇಲಾಖೆಗಳ ಬಗ್ಗೆ ಹಿಂದಿನ ದಿನ ಮಾಡಿದ ಬದಲಾವಣೆಗಳನ್ನು ಪ್ರತಿದಿನವೂ ಸಂಕ್ಷಿಪ್ತವಾಗಿ ಕಾರ್ಯದರ್ಶಿ ಓದುತ್ತಾನೆ. ಅದರಲ್ಲಿ ಬೇಕಾದ ಬದಲಾವಣೆಗಳನ್ನು ಮಾಡಲಾಗುತ್ತದೆ. ರಾಜನ ವಿಶೇಷ ಗಮನಕ್ಕೆ ತರಬೇಕಾದ ಮುಖ್ಯವಾದ ಮನವಿಗಳನ್ನು ಪ್ರತ್ಯೇಕವಾಗಿ ವಿಚಾರಿಸಿ  ಅದಕ್ಕೆ ತಕ್ಕ ಆಜ್ಞೆಗಳನ್ನು ಹೊರಡಿಸುವುದು ಪದ್ಧತಿ. 

ರಾಜ ನೀಡುವ ಆಜ್ಞೆಗಳನ್ನು ವಾಗುಯನವಿಸ್ ಎಂಬ ಟಿಪ್ಪಣಿ ಬರೆದುಕೊಳ್ಳುವ ಅಧಿಕಾರಿ, ತನ್ನ  ಪುಸ್ತಕದಲ್ಲಿ ಬರೆದುಕೊಳ್ಳುತ್ತಾನೆ. ನಂತರ, ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ಪರಾಮರ್ಶೆಗೆ ಒಳಗಾಗುತ್ತವೆ. ನಂತರ ಅದರ ತಿದ್ದುಪಡಿಯಾದ ಆಕಾರವನ್ನು ರಾಜನ ಮುಂದೆ ತಂದಿಟ್ಟು ಒಪ್ಪಿಗೆ ಪಡೆಯಲಾಗುತ್ತದೆ. ಅದಕ್ಕೆ ಹೆಸರು ಯಾದ್ದಾಷ್ಟ್. ಅದರ ನಂತರ, ಆ ಆಜ್ಞೆ ಹಲವು ಹಂತಗಳನ್ನು ದಾಟಿ ಮುಖ್ಯಮಂತ್ರಿಯ ಒಪ್ಪಿಗೆ ಪಡೆದು ಬರುತ್ತದೆ. ರಾಜನ ಬಳಿ ಐದು ಬಗೆಯ ಮುದ್ರೆಗಳು ಇರುತ್ತದೆ. ಅದರಲ್ಲಿ ಉಸೀಕ್ ಎಂಬ ಉಂಗುರದ ಮುದ್ರೆ ಬಹಳ ಮುಖ್ಯವಾದುದು. 

ಈ ಕೆಲಸಗಳು ಮುಗಿದ ಮೇಲೆ, ರಾಜ ಮತ್ತೆ ಅಂತಃಪುರಕ್ಕೆ ಹೋಗುತ್ತಾನೆ. ಅಲ್ಲಿ ಸಂಜೆಯ ಸ್ನಾನವಾಗುತ್ತದೆ. ಅದು ಮುಗಿದ ಮೇಲೆ, ಅಲ್ಲಿರುವ ಪ್ರತ್ಯೇಕ ಮಂಟಪದಲ್ಲಿ ನ್ಯಾಯಾದೀಶರು, ಕವಿಗಳು, ತತ್ವಜ್ಞಾನಿಗಳು, ಇರುತ್ತಾರೆ. ಅವರೊಂದಿಗೆ ಸಾಹಿತ್ಯ ಮತ್ತು ಜ್ಞಾನಮಾರ್ಗ ಕುರಿತು ರಾಜ ಚರ್ಚೆ ನಡೆಸುತ್ತಾನೆ. ಆ ಸಮಯದಲ್ಲಿ, ಹೊಸದಾಗಿ ಬರೆದ ಕವಿತೆಗಳನ್ನು ಓದಿಸಿ, ರಾಜ ಕೇಳುವುದುಂಟು. ಕೆಲವು ಸಮಯ ಜ್ಞಾನಮಾರ್ಗದ ಕುರಿತು ವಿವಾದ ನಡೆಯುತ್ತದೆ. ಇತಿಹಾಸ ತಜ್ಞರೊಂದಿಗೂ ವಾದವಿವಾದಗಳು ನಡೆಯುತ್ತವೆ. 

ಅದರ ನಂತರ ಪ್ರತ್ಯೇಕವಾಗಿ ನಿರ್ಮಿಸಿರುವ ಖುಶಾಲ್ ಖಾನೆಗೆ ರಾಜ ಹೋಗುತ್ತಾನೆ. ಅಲ್ಲಿ ಚಿನ್ನ, ಬೆಳ್ಳಿಯಲ್ಲಿ ಮಾಡಿದ 12 ದೀಪಗಳು ಪರಿಮಳ ಭರಿತ ಎಣ್ಣೆಯಲ್ಲಿ ಪ್ರಕಾಶವಾಗಿ ಬೆಳಗುತ್ತಿರುತ್ತದೆ. ದೀಪ ಹಚ್ಚುವ ಸಮಯದಲ್ಲಿ ಹಾಡಲು ದ್ವಿಪದಿ ಹಾಡೊಂದನ್ನು ಹಾಡುತ್ತಾರೆ. ಆ ಸ್ಥಳಕ್ಕೆ, ತುರ್ತಾದ ಆಡಳಿತ ಕೆಲಸಗಳನ್ನು ಚರ್ಚಿಸಲು ದಿವಾನ್ ಮತ್ತು ಭಕ್ಷಿ ಇಬ್ಬರಿಗೆ ಮಾತ್ರ ಅನುಮತಿ ಇರುತ್ತದೆ. ಅವರು ತಮ್ಮ ಕೋರಿಕೆಯನ್ನು ಮುಂದಿಡುವ ಮೊದಲು, ಮಂಡಿಯೂರಿ ನಮಸ್ಕರಿಸಿ ಸುದ್ಧಿಯನ್ನು ಹೇಳಬೇಕು.

ಈ ಪ್ರತ್ಯೇಕ ಕೋಣೆಯಲ್ಲಿ ಕೆಲವು ಸಮಯ ಪರ್ಷಿಯದ ರಾಯಭಾರಿ ಮತ್ತು ವಿದೇಶದವರನ್ನು ಬೇಟಿಯಾಗುವುದು ನಡೆಯುತ್ತದೆ. ಹಗಲಿನಲ್ಲಿ ವಿಚಾರಿಸಲು ಆಗದ ಮುಖ್ಯವಾದ ಕಾರ್ಯಗಳನ್ನೂ, ರಹಸ್ಯ ಭೇಟಿ, ಹಣ ವಿನಿಮಯ ಆಜ್ಞೆಗಳನ್ನು ಇಲ್ಲಿ ಚರ್ಚಿಸಲಾಗುತ್ತದೆ. ಸಾಮಾನ್ಯವಾಗಿ ರಾತ್ರಿ 7 ರಿಂದ 9 ರ ವರೆಗೆ ರಾಜ ಈ ಕೋಣೆಯಲ್ಲಿ ಇರುತ್ತಾನೆ. 

ನಂತರ ಅಲ್ಲಿಂದ ಹೊರಟು, ಷಾಬೂರ್ಜ್ ಎಂಬ ಒಳ ಮಂಟಪಕ್ಕೆ ರಾಜ್ಯ ಹೋಗುತ್ತಾನೆ. ಅಲ್ಲಿ ರಾಜನ ಕುಟುಂಬ ಸದಸ್ಯರು ಮತ್ತು ರಾಜಕುಮಾರರು ರಾಜನನ್ನು ಬೇಟಿಯಾಗಿ ಮಾತನಾಡಿಸುತ್ತಾರೆ. 45 ನಿಮಿಷಗಳು ಈ ಕೋಣೆಯಲ್ಲಿದ್ದು ಅಂತಃಪುರಕ್ಕೆ ತೆರಳಿ ಸಂಗೀತ ಆಲಿಸುವುದು, ನಾಟ್ಯ ನೋಡುವುದು ಪದ್ಧತಿ. ಇದಕ್ಕೆ ರಾಜ್ಯದ ಅತಿ ಶ್ರೇಷ್ಟ ಸಂಗೀತ ಕಲಾವಿದರನ್ನು, ನೃತ್ಯಗಾತಿಯರನ್ನು ಕರೆದು ತರುತ್ತಾರೆ. ಕಾರ್ಯಕ್ರಮದ ಕೊನೆಯಲ್ಲಿ ಅವರಿಗೆ ಬಹುಮಾನಗಳನ್ನು ನೀಡಿ ಕಳುಹಿಸುತ್ತಾರೆ. 

ಸಂಗೀತ ಕಚೇರಿ ಮುಗಿದ ಮೇಲೆ ಹಣ್ಣು ಸಿಹಿಗಳನ್ನು ರಾಜ ಸೇವಿಸುತ್ತಾನೆ. ಹೀಗೆ ದಿನವೂ ಸಂಗೀತ ನೃತ್ಯಕ್ಕಾಗಿ ಒಂದೂವರೆ ಗಂಟೆಗಳನ್ನು ಮೀಸಲಿಡುತ್ತಾನೆ. ನಂತರ ಇಷ್ಟವಾದ ಒಂದು ಹೆಣ್ಣಿನ ಕೋಣೆಗೆ ರಾಜ ಹೋಗುತ್ತಾನೆ. ಅಲ್ಲಿ ತೆರೆಯ ಮರೆಯಲ್ಲಿ ನಿಂತುಕೊಂಡು ಕಾಮೋದ್ರೇಕ ಉಂಟುಮಾಡುವ ಕಥೆಗಳನ್ನು ಹೇಳಲು ಒಬ್ಬರು ಇರುತ್ತಾರೆ. ಶೃಂಗಾರ ಹಾಡುಗಳನ್ನು ಹಾಡುವವವರೂ, ಮಿಲನದ ಬಗ್ಗೆ ತಮಾಷೆಯಾಗಿ ಮಾತನಾಡುವ ಹೆಣ್ಣುಗಳೂ ಇರುತ್ತಾರೆ. 

ಐದರಿಂದ ಆರು ಗಂಟೆಗಳಷ್ಟೇ ರಾಜನ ನಿದ್ರೆ. ಯುದ್ಧ ಕಾಲದಲ್ಲಿ ಈ ನಿದ್ದೆ ಕೇವಲ ಮೂರು ಗಂಟೆಗಳು. ನೀತಿ ನಿಯಮದಂತೆ ನಮಾಜ್  ಮಾಡುವುದು, ನ್ಯಾಯಕ್ಕೆ ಸಂಬಂಧಪಟ್ಟ ದೂರುಗಳನ್ನು ವಿಚಾರಿಸಲು ಪ್ರತ್ಯೇಕ ದಿನವನ್ನು ನಿಗಧಿಗೊಳಿಸುವುದು, ಪಾರದರ್ಶಿಕ ಆಡಳಿತ ಪದ್ಧತಿಯನ್ನು ಅನುಸರಿಸುವುದು, ಜಾತ್ರೆಗಳಲ್ಲಿ ಪಾಲ್ಗೊಳ್ಳುವುದು, ಬೇಟೆಗೆ ಹೋಗುವುದು, ಶೌರ್ಯ ಕ್ರೀಡೆಗಳಲ್ಲಿ ತೊಡಗಿಕೊಳ್ಳುವುದು, ಹುಲಿಗಳನ್ನು ಪಳಗಿಸುವುದು, ಕಲೆಗಳನ್ನು ಅಭ್ಯಾಸ ಮಾಡುವುದು, ಅಲಂಕಾರ ಬರಹಗಳನ್ನು ಬರೆಯುವುದು, ನೂತನ ವಸ್ತುಗಳನ್ನು ಪರೀಕ್ಷಿಸುವುದು ಎಂದು ಮೊಗಲ್ ಚಕ್ರವರ್ತಿಗಳು ಒಂದು ದಿನದಲ್ಲಿ 24 ಗಂಟೆಗಳು ಸಾಲದೆ ಇದ್ದರು. 

ವರ್ಷದಲ್ಲಿ ಒಂದು ತಿಂಗಳೋ ಅಥವಾ ಎರಡು ವಾರಗಳೋ ರಾಜ ಸಂಪೂರ್ಣವಾಗಿ  ಉಪವಾಸ ಇರುತ್ತಾನೆ. ಅದನ್ನು ಲಂಘನ ತಿಂಗಳು ಎಂದು ಕರೆಯುತ್ತಾರೆ. ಆ ತಿಂಗಳು ಅವನು ನಿಂಬೆಯ ರಸವನ್ನು ಸೇವಿಸಿಕೊಂಡು ಸರಳವಾದ ಉಡುಪುಗಳನ್ನು ಧರಿಸಿಕೊಂಡು, ಸಂಗೀತ ಕೇಳುವುದು, ಕವಿತೆ ವಾಚನ ಮಾಡುವುದರಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಾನೆ. ಸಾಮಾನ್ಯ ಮನುಷ್ಯರ ಹಾಗೆ, ದೊರಕುವುದನ್ನು ಸ್ವೀಕರಿಸಿ ನೆಮ್ಮದಿಯಾದ ಬದುಕನ್ನು ರಾಜರಿಂದ ಎಂದೂ ಅನುಭವಿಸಲಾಗುವುದಿಲ್ಲ.  

ಒಬ್ಬ ರಾಜ ಭಾರತದ ಶ್ರೇಷ್ಟ ರಾಜ ಎಂದು ಹೆಸರು ಗಳಿಸಲು ಮೂರು ಅಂಶಗಳು ಪ್ರಮುಖವಾದವು ಎನ್ನುತ್ತಾನೆ ಇತಿಹಾಸ ಅಧ್ಯಾಪಕ ಇಬಿನ್ ಹಾಸನ್. ಅವು, ಬಲವಾದ ಸೈನ್ಯ, ಬಲಿಷ್ಠವಾದ ಕೇಂದ್ರ ಸರಕಾರ, ಪ್ರಜೆಗಳನ್ನು ಹಿಂಸಿಸದೆ ಅವರ ಜೀವನದ ಏಳಿಗೆಗೆ ನೆರವಾಗುವುದು. 

ಈ ಮೂರನ್ನೂ ಸಹ ಹಲವು ರಾಜರುಗಳಿಂದ ಸಮಾಳಿಸಲು ಸಾಧ್ಯವಾಗಿದೆ. ಆದರೆ, ಅವರ ವಾರಿಸುದಾರರ, ಸಹೋದರರ, ಪತ್ನಿಯರ ಅಧಿಕಾರದ ಆಸೆಗಳನ್ನು, ಅವರ ನಯವಂಚಕ ಯೋಜನೆಗಳನ್ನು ಅವರಿಂದ ಅರಿತುಕೊಳ್ಳಲು ಆಗಲಿಲ್ಲ. ಯುದ್ಧ ಕಾಲದಲ್ಲಿ ಕೊಲ್ಲಲ್ಪಟ್ಟುದಕ್ಕಿಂತಲೂ ಹಾಸಿಗೆಯಲ್ಲಿ ಕೊಲ್ಲಲ್ಪಟ್ಟ ರಾಜರ ಸಂಖ್ಯೆ ಹೆಚ್ಚೆಂದು ಹೇಳುತ್ತದೆ ಇತಿಹಾಸ. 

ರಾಜ ಬದುಕು ಎಂಬುದು ಅತಿಯಾದ ಸಂತೋಷವೂ, ಅನಿರೀಕ್ಷಿತ ಬಿಕ್ಕಟ್ಟುಗಳೂ, ಅರ್ಥವಾಗದ ಪ್ರಾಣ ಭಯವೂ ಬೆರತೆ ಇರುತ್ತದೆ. ಅದು, ಬಲಿ ಕೊಡುವ ಆಡಿಗೆ ಬಗೆಬಗೆಯಾದ ಆಹಾರಗಳನ್ನು ನೀಡಿ ಸಾಕುವಂತೆ. ಆ ರೀತಿಯಲ್ಲಿ, ರಾಜರಿಗಿಂತಲೂ ಸಂತೋಷವಾದ  ಜೀವನವನ್ನು ಸಾಮಾನ್ಯ ಮನುಷ್ಯ ಅನುಭವಿಸುತ್ತಾನೆ ಎಂಬುದೇ ಎಂದಿಗೂ ಬದಲಾಗದ ಸತ್ಯ. 

| ಇನ್ನು ನಾಳೆಗೆ |

‍ಲೇಖಕರು Admin

August 10, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: