ಮರೆವೂ ಅಂದ್ರೆ ಮರೆವು…

ಸಮತಾ ಆರ್

ಹೀಗೊಂದು ದಿನ ಎಂದಿನಂತೆ ನನ್ನ ದಿನ ನಿತ್ಯದ ಬಸ್ ಪ್ರಯಾಣದಲ್ಲಿ ತೂಕಡಿಸುತ್ತ ಕುಳಿತಿದ್ದೆ. ಯಾವುದೋ ನಿಲ್ದಾಣ ಬಂದು ಬಸ್ ನಿಂತಿತು. ಇಳಿಯುವವರ, ಹತ್ತುವವರ ಗದ್ದಲ, ‘ಕಳ್ಳೆಕಾಯ್ ಕಳ್ಳೆಕಾಯ್’ ಎಂದು ಕೂಗುವವನ ಸದ್ದಿಗೆ ಎಚ್ಚರಾಯಿತು. ಸ್ವಲ್ಪ ಜನ ಹತ್ತಿ ಕುಳಿತು, ಕಂಡಕ್ಟರ್ ಎಂಟ್ರಿ ಮಾಡಿಸಿಕೊಂಡು ಬಂದ ಬಳಿಕ ಬಸ್ ಹೊರಟಿತು.ನನ್ನ ಎದುರು ಸೀಟಲ್ಲಿ ಇಬ್ಬರು ಹೆಂಗಸರು ಬಂದು ಕುಳಿತರು. ಮಾತನಾಡಿಕೊಂಡೇ ಬಸ್ ಹತ್ತಿ, ಕುಳಿತಾಗಲೂ ಮಾತೂ ಅಂದ್ರೆ ಮಾತೇ.

ಯಾವುದೋ ಸಮಾರಂಭಕ್ಕೆ ಹೊರಟಿದ್ದರು ಅಂತ ಕಾಣುತ್ತೆ, ಭರ್ಜರಿಯಾಗಿ ಅಲಂಕರಿಸಿ ಕೊಂಡಿದ್ದರು. ಮಾತು ಮಾತ್ರ ನಾನ್ ಸ್ಟಾಪ್ ನಡಿತಾನೆ ಇತ್ತು. ಬಸ್ ನಿಲ್ದಾಣ ಬಿಟ್ಟು ಒಂದು ಐದು ನಿಮಿಷವಾಗಿರಬೇಕು, ಇದ್ದಕ್ಕಿದ್ದಂತೆ ಅವರಿಬ್ಬರಲ್ಲಿ ಒಬ್ಬಾಕೆ, ‘ಅಯ್ಯೋ ಅಕ್ಕಾ, ಮಗೆಲ್ಲೆ!?’ ಎಂದು ಗಾಬರಿಯಿಂದ ಕೇಳಿದಳು. ಆ ಅಕ್ಕನೂ ಬೆರಗಾಗಿ,’ ಆಂ, ನೀನ್ ಎತ್ಕೊಂಡ್ ಬರ್ ನಿಲ್ವ!’ ಎಂದು ಕೇಳಿದಳು. ಇವಳು ಇನ್ನೂ ಗಾಬರಿಯಾಗಿ,’ ಅಯ್ಯೋ ಡ್ರೈವರಣ್ಣ ಬಸ್ ನಿಲ್ಸಿ. ನಮ್ ಮಗವ ಬಸ್ ಸ್ಟ್ಯಾಂಡ್ ನಲ್ಲೆ ಬುಟ್ ಬಂದ್ ಬುಟ್ಟಿವಿ. ವಸಿ ಬಸ್ ನಿಲ್ಸಿ,’ ಎಂದು ಕೂಗಿಕೊಳ್ಳುತ್ತಾ ಬಸ್ ನಿಲ್ಲಿಸಿ ಅವಸರವಸರವಾಗಿ ಇಳಿದು ನಿಲ್ದಾಣದೆಡೆಗೆ ಓಡಿದರು. ಬಸ್ ನಲ್ಲಿ ಇದ್ದವರಿಗೆಲ್ಲ ಗಾಬರಿ. ಕೆಲವರು, ‘ಏನು ಹಾಳು ಮಾತೋ, ಹೆತ್ತ ಮಗ ಕೂಡ ನೆನಪಿಲ್ಲ ಅಂದ್ರೆ,’ ಎಂದು ಬೈದುಕೊಳ್ಳುತ್ತಾ, ‘ಸದ್ಯ ಮಗು ಸಿಕ್ರೆ ಸಾಕಪ್ಪಾ,’ ಎಂದು ಆಶಿಸುತ್ತಾ, ‘ಇನ್ನೇನು ಮಾಡೋದು, ಹೊರಡಿ,’ ಎಂದಾಗ ಬಸ್ ಹೊರಟಿತು.  

ಈ ಮರೆವು ಅನ್ನೋದು ಮಾಡೋ ಎಡವಟ್ಟುಗಳು ಅಷ್ಟಿಷ್ಟಲ್ಲ. ಇದರ ಹಾವಳಿಯಿಂದ ತಪ್ಪಿಸಿ ಕೊಂಡಿರೋರು ಯಾರಿದ್ದಾರೆ? ಪ್ರಪಂಚದಲ್ಲಿ, ಬಡವ, ಬಲ್ಲಿದ, ಮೇಲೂ ಕೀಳು, ಹೆಂಗಸು ಗಂಡಸೆನ್ನದೆ ಎಲ್ಲರನ್ನೂ ಯಾವುದೇ ಬೇಧ ಭಾವ ತೋರದೆ ಕಾಡುವ ಏಕೈಕ ಅಂಶ ಈ ಮರೆವು.ನನಗಂತೂ ಸ್ವಲ್ಪ ಜಾಸ್ತಿಯೇ ಬಿಡಿ. ಅಡಿಗೆ ಮನೆಯಿಂದ ಹಿಡಿದು, ನಾನು ಕೆಲಸ ಮಾಡುವ ಶಾಲೆಯವರೆಗೂ ಇದರ ಹಾವಳಿ ಹಬ್ಬಿದೆ.

ಹಾಲು ಕಾಯಲು ಇಟ್ಟು, ಬೇರೇನೋ ಕೆಲಸಕ್ಕೆ ಹೋಗಿ, ಹಾಲನ್ನು ಮರೆತು ಸೀದು ಹೋಗಿರುವ ಪಾತ್ರೆಗಳು ಅದೆಷ್ಟೋ. ಮಾಡಿರೋ ಅಡುಗೆಗೆ ಉಪ್ಪು ಹಾಕಲು ಮರೆಯುವುದಂತೂ ಸರ್ವೇ ಸಾಮಾನ್ಯ.ಅದೇನೇ ಇರಲಿ, ವಗ್ಗರಣೆಗೆ ಅಂತ ಎಣ್ಣೆ ಕಾಯಲು ಇಟ್ಟು, ಮರೆತು ಇನ್ನೇನೋ ಮಾಡಲು ಹೋಗಿ, ಬಾಣಲೆಯ ಎಣ್ಣೆಗೆ ಬೆಂಕಿ ಹಿಡಿದು ಅಷ್ಟೆತ್ತರಕ್ಕೆ ಹೊತ್ತಿ ಉರಿದ ದಿನ ಆದ ಭಯ ಅಷ್ಟಿಷ್ಟಲ್ಲ. ಅವತ್ತಿನಿಂದ ಅಡುಗೆ ಮಾಡುವಾಗ ಅಡುಗೆ ಮನೆ ಬಿಟ್ಟು ಅಲ್ಲಾಡುವುದಿಲ್ಲ. ಹರಿಹರ ಬ್ರಹ್ಮರೆ ಬಂದರೂ ನನ್ನ ದೃಷ್ಟಿ ಆಡುಗೆ ಸ್ಟೋವ್ ಬಿಟ್ಟು ಆಚೀಚೆ ಹೋಗುವುದಿಲ್ಲ.

ಏನನ್ನಾದರೂ ಜೋಪಾನವಾಗಿ ಎತ್ತಿಡಬೇಕು ಎಂದು ಕೊಂಡು ಎತ್ತಿಟ್ಟು ಬಿಟ್ಟ ಮೇಲೆ ಕಥೆ ಮುಗೀತು. ಬೇಕಾದ ಹೊತ್ತಿನಲ್ಲಿ ಜಪ್ಪಯ್ಯ ಎಂದರೂ ಎಲ್ಲಿ ಇಟ್ಟಿದ್ದೇನೆ ಎಂದು ನೆನಪಾಗದೂ ಅಂದ್ರೆ ಆಗದು. ಏನನ್ನೋ ಹುಡುಕಲು ಹೋಗಿ ಮತ್ತೆ ಇನ್ನೇನೋ ಸಿಕ್ಕಿರುವುದು ಕೂಡ ಇದೆ.
ಒಮ್ಮೆ ನನ್ನ ಮುತ್ತಿನ ಓಲೆ ಹಾಕಿಕೊಳ್ಳುವ ಎಂದು ಹುಡುಕಿದರೆ ಎಲ್ಲಿಯೂ ಸಿಗದೆ ‘ಈ ದುಬಾರಿ ಚಿನ್ನದ ಕಾಲದಲ್ಲಿ ಕಳೆದುಕೊಂಡೆನಲ್ಲ,’ ಎಂದು ಬೇಸರಿಸಿ ಕೊಂಡು ಸುಮ್ಮನಾಗಿದ್ದೆ. ಆದರೆ ಒಮ್ಮೆ ಮಿಕ್ಸಿ ಜಾರ್ ಒಂದನ್ನು ರಿಪೇರಿಗೆ ಕೊಡುವ ಎಂದುಕೊಂಡು ಅದರ ಮುಚ್ಚಳ ತೆಗೆದು ನೋಡಿದರೆ ನನ್ನ ಮುತ್ತಿನ ಓಲೆ  ಅದರಲ್ಲಿ ಕುಳಿತು,ನನ್ನನ್ನೇ ನೋಡ್ತಾ ಹಲ್ಲು ಕಿರಿತು. ನಮ್ಮಪ್ಪರಾಣೆ ಅದುಅಲ್ಲಿಗೆ ಹೇಗೆ ಹೋಯಿತು, ಯಾಕೆ ಅಲ್ಲಿ ಇಟ್ಟೆ ಅನ್ನೋದು ನನಗೆ ಇಲ್ಲೀವರೆಗೆ ತಿಳಿದಿಲ್ಲ.

ಮರೆವಿನಿಂದ ಬರೀ ನನ್ನೊಬ್ಬಳಿಗೆ ಮಾತ್ರವಲ್ಲ ಬೇರೆಯವರಿಗೂ ಕಿರಿ ಕಿರಿ ಮಾಡಿದ್ದೂ ಇದೆ. ಒಮ್ಮೆ ನನ್ನ ನೆರೆಮನೆಯಾಕೆ ಒಬ್ಬರು ಶಾಪಿಂಗ್ ಗೆ ಎಂದು ನನ್ನ ಜೊತೆಗೂಡಿ ಬಂದರು. ಮಾರ್ಕೇಟ್ ನಲ್ಲಿ ಸಾಕಷ್ಟು ಅಂಗಡಿ ಸುತ್ತಿದ ಬಳಿಕ ಅಲ್ಲಿ ಒಂದು ಅಂಗಡಿ ಬಳಿ ನನ್ನ ಸಹೋದ್ಯೋಗಿಯೊಬ್ಬರು ಕಾಣಿಸಿದರು. ಸರಿ ‘ಒಂದು ನಿಮಿಷ ಬಂದೇ ಇರಿ,’ ಅಂತ ನನ್ನ ನೆರೆಮನೆಯವರಿಗೆ ಹೇಳಿ ನನ್ನ ಗೆಳತಿ ಬಳಿ ಹೋದೆ. ಅಲ್ಲಿ ಅವಳು ‘ಇಲ್ಲೇ ಎಲ್ಲೋ ಸೀರೆಗಳ ಸೇಲ್ ಇದೆಯಂತೆ ಬರ್ತೀಯ,’ ಎಂದಾಗ, ‘ನಡಿಯೇ,’ ಎಂದು ಅವಳ ಜೊತೆ ಹೋಗಿದ್ದೇ. ನನ್ನ ನೆರೆಮನೆಯವರು ನನಗೆ ನೆನಪಾದದ್ದು, ನಾನು ಶಾಪಿಂಗ್ ಮುಗಿಸಿ ಮನೆ ತಲುಪಿದಾಗಲೇ. ಅವರೋ ಕಾಯ್ದು ಕಾಯ್ದು ಸಾಕಾಗಿ ಒಬ್ಬರೇ ಹಿಂದಿರುಗಿದ್ದರು. ಅವರ ಮುಖ ನೋಡಲು ಕೂಡ ನಾಚಿಕೆಯಾಗಿ ಒಂದೆರಡು ದಿನ ಕದ್ದು ತಿರುಗಿದೆ.

ನನ್ನ ಕಥೆ ಹೀಗಾದರೆ, ನನ್ನ ಮಗನಿಗೆ ಮಾತನಾಡುವಾಗ ಪದಗಳೇ ಮರೆತು ಹೋಗುತ್ತವೆ. ಒಮ್ಮೆತನ್ನ ರೂಮ್ನಲ್ಲಿ ಕುಳಿತು, ಹಾಲ್ ನಲ್ಲಿದ್ದ ನನಗೆ, ‘ಅಮ್ಮ ಅದರ ಮೇಲೆ ಅದು ಇಟ್ಟಿದ್ದಿನಲ್ಲ ಅದು ಕೊಡು,’ ಅಂತ ಹೇಳಿದ. ‘ಯಾವುದರ ಮೇಲೆ ಏನು ಇಟ್ಟಿದ್ದಾನೆ, ಏನು ಕಥೆ,’ ಅಂತ ಗೊತ್ತಾಗುವುದಾದರೂ ಹೇಗೆ? ‘ಲೋ ಅದೇನು ಅಂತ ಸರಿಯಾಗಿ ಹೇಳು,’ ಅಂದರೂ ಮತ್ತೆ ಅದೇ, ‘ಅದರ ಮೇಲೆ ಅದು ಇಟ್ಟಿದ್ದಿನಲ್ಲ ಅದು ಕೊಡು,’ ನನಗೆ ರೇಗಿ ಹೋಗಿ, ‘ನೀನೇ ಬಂದು ತೊಗೊ ಎಂದಾಗ ಬಂದು, ಟೇಬಲ್ ಮೇಲೆ ಇಟ್ಟಿದ್ದ ಪುಸ್ತಕ ತೊಗೊಂಡು ಹೋದ. ‘ಅಷ್ಟೂ ಗೊತ್ತಾಗೋದಿಲ್ಲ ನಿಂಗೆ ಅಮ್ಮ,’ ಅನ್ನೋ ಮುನಿಸು ಬೇರೆ! ಇನ್ನು ಸ್ನೇಹಿತರು, ನೆಂಟರು ಬಹಳ ಕಾಲದವರೆಗೆ ಭೇಟಿಯಾಗದೇ, ಅಚಾನಕ್ ಆಗಿ ಎಲ್ಲಿಯಾದರೂ ಸಿಕ್ಕಿ ಬಿಟ್ಟರೆ ಅವರ ಹೆಸರು ನೆನಪಾಗದೆ ಆಗೋ ಪಜೀತಿ ಅಷ್ಟಿಷ್ಟಲ್ಲ. ಹೇಗೋ, ‘ಅಣ್ಣ, ಅಕ್ಕ, ಚೆನ್ನಾಗಿದ್ದೀರಾ’ ಅಂತ ಹೇಳಿ ನೆಂಟರನ್ನು ನಿಭಾಯಿಸಿದರೂ, ಒಮ್ಮೊಮ್ಮೆ ಈ ಉಪಾಯ ಕೈ ಕೊಟ್ಟದ್ದೂ ಇದೆ.

ಯಾವುದೋ ಒಂದು ಹಬ್ಬದಲ್ಲಿ ನನ್ನ ಗಂಡನ ಊರಿನ ಓರ್ವ ನೆಂಟರ ಮನೆಗೆ ಹೋಗಿ, ಅಲ್ಲಿ ಮನೆಯಾಕೆಯ ಹೆಸರು ಎಷ್ಟು ತಲೆ ಕೆರೆದುಕೊಂಡರೂ ನೆನಪಾಗಲಿಲ್ಲ. ಗಂಡನ ಕೇಳುವ ಅಂದರೆ ಅವರು ಮನೆಯೊಳಗೆ ಹೊಕ್ಕು ಎಲ್ಲೋ ಮಾಯವಾಗಿದ್ದರು. ಸರಿ ನನ್ನ ಅಕ್ಕ ಬಾಣವನ್ನೆ ಬಿಟ್ಟು ಮಾತನಾಡಲು ಶುರು ಮಾಡಿದೆ. ಆದರೆ ಆ ಮನೆಯಾಕೆ ನಾನು ಅವಳನ್ನು ಅಕ್ಕ ಅಂದಾಕ್ಷಣವೇ, ‘ನನ್ನನ್ಯಾಕೆ ಅಕ್ಕ ಅಂತೀರಿ,ನಾನು ನಿಮಗಿಂತ ಚಿಕ್ಕವಳು,’ ಎಂದು ಗುರ್ ಎಂದಳು.ನಾನು ಸಾವರಿಸಿಕೊಂಡು, ‘ಅದು ಆ ತರಹ ಅಲ್ಲ, ಗೌರವ ಸೂಚಕವಾಗಿ ಹೇಳಿದ್ದು,’ ಎಂದಾಗ ಸ್ವಲ್ಪ ಸಮಾಧಾನ ಗೊಂಡಳು. ಅಮೇಲಿನಿಂದ ಅಪ್ಪಿ ತಪ್ಪಿಯೂ ಯಾರಿಗೂ ‘ಅಕ್ಕ ಗಿಕ್ಕ’ ಅನ್ನಲು ಹೋಗಿಲ್ಲ.

ಗಂಡಸರನ್ನು ಅಣ್ಣ ಅಂದರೆ ಯಾರೂ ದೂರಿಲ್ಲ. ಆದರೆ ಹೆಂಗಸರನ್ನು ಅವರ ವಯಸ್ಸು ಹೆಚ್ಚು ತೋರುವ ಹಾಗೆ ಸಂಬೋಧಿಸುವುದು ಕಷ್ಟ ಅಂದ್ರೆ ಕಷ್ಟ ಸ್ವಾಮಿ. ಚಿಕ್ಕಂದಿನಿಂದ ಬಳಕೆಯಲ್ಲಿ ಇರುವ ನೆಂಟರು ಸ್ನೇಹಿತರು ಅಷ್ಟು ಬೇಗ ಮರೆತು ಹೋಗೋಲ್ಲ. ಆದ್ರೆ ಗಂಡನ ಮನೆ ಕಡೆಯವರು ಮದುವೆಯಾದ ಬಳಿಕ ಪರಿಚಿತರಾದವರು. ಅವರ ತೀರಾ ಸಮೀಪದ ನೆಂಟರು, ಗೆಳೆಯರು ನೆನಪಲ್ಲಿ ಇದ್ದರೂ, ಎಲ್ಲೋ ಒಂದು ಇಲ್ಲ ಎರಡು ಬಾರಿ ಭೇಟಿಯಾದವರು ನೆನಪಾಗುವುದು ಬಹಳ ಕಷ್ಟ. ಎಷ್ಟೋ ಬಾರಿ ದಾರಿಯಲ್ಲಿ ಭೇಟಿಯಾಗುವವರು ಮುಗುಳ್ನಕ್ಕು ವಿಶ್ ಮಾಡಿದರೆ, ನಾನೂ ನಕ್ಕು ಪ್ರತಿ ವಂದಿಸಿದರೂ, ಅವರ್ಯಾರು ಅಂತ ಖಂಡಿತ ಗೊತ್ತಿರುವುದಿಲ್ಲ.

‘ನಮ್ಮ ಯುವರಾಜ್ನ ಹೆಡ್ತಿಗೆ ವಸಿ ಜಂಭ,’ ಅಂತ ಅವರು ಹೇಳಿಕೊಂಡರೂ ನಾನೇನು ಮಾಡಲಿ ಹೇಳಿ. ನನ್ನ ಕಷ್ಟ ನನಗೆ ಮಾತ್ರ ಗೊತ್ತು. ಹಾಗಾಗಿ ದಾರಿಯಲ್ಲಿ, ಊರಿಗೆ ಹೋದಾಗ, ಯಾರು ಸಿಕ್ಕಿ ಮಾತನಾಡಿಸಿದರು ಚೆನ್ನಾಗಿ ಮಾತನಾಡಿಸಿ ಬಿಡುತ್ತೇನೆ. ಇದರಿಂದ ಒಂದು ದಿನ ಟೋಪಿ ಹಾಕಿಸಿಕೊಂಡಿದ್ದು ಇದೆ. ಅದು ಏನಾಯ್ತು ಅಂದ್ರೆ, ಒಂದು ದಿನ ಹಣ್ಣಿನ ಅಂಗಡಿ ಬಳಿ ನಿಂತು ಹಣ್ಣು ಕೊಳ್ಳುತ್ತಿದ್ದೆ. ಆಗ ಅಲ್ಲಿಗೆ ಬಂದ ಒಬ್ಬ ಆಸಾಮಿ, ‘ಮೇಡಂ, ನೀವು ಯುವರಾಜ್ ಮನೆಯವರಲ್ವ,’ ಅಂದ. ‘ಹೌದು, ನೀವು ಯಾರು’ ಎಂದಿದ್ದಕ್ಕೆ, ‘ನಾನು ಅವರ ಗೆಳೆಯ, ಹೋದ ವರ್ಷ ನಿಮ್ಮ ಮನೆ ಗೃಹ ಪ್ರವೇಶಕ್ಕೆ ಬಂದಿದ್ದೆ, ನೆನಪುಂಟ’ ಎಂದ.

ಗೃಹ ಪ್ರವೇಶಕ್ಕೆ ಬಂದಿದ್ದ ಅಂದ ಮೇಲೆ ಹತ್ತಿರದವರೇ ಇರಬೇಕು ಅನ್ನಿಸಿತು. ಅವನು ಮಾತು ಮುಂದುವರೆಸುತ್ತಾ, ‘ಮೇಡಂ ಇನ್ನೂರು ರೂಪಾಯಿ ಇದ್ದರೆ ಕೊಡಿ, ಅಲ್ಲಿ ರೇಷನ್ ಅಂಗಡಿಯಲ್ಲಿ ಬಿಲ್ ಜಾಸ್ತಿ ಆಗಿ ಬಿಡ್ತು, ನಾಳೆಯೇ ನಿಮ್ಮ ಮನೆಯವರಿಗೆ ಕೊಡುವೆ,’ ಎಂದಾಗ ನಾನು ದಾಕ್ಷಿಣ್ಯಕ್ಕೆ ಸಿಲುಕಿ ದುಡ್ಡು ಕೊಟ್ಟೆ. ಅವನು ತೆಗೆದುಕೊಂಡು ಹೋದ. ಹೆಸರೂ ಏನೋ ಒಂದು ಹೇಳಿ ಹೋದ. ಮನೆಗೆ ಹೋಗಿ ಹೇಳಿದಾಗ ನನ್ನ ಗಂಡ ಬೈದು ಬೈದು ಇಟ್ಟರು.’ ನನ್ನ ಗೆಳೆಯರು ಯಾರೂ ಆ ರೀತಿ ಇಲ್ಲ, ಯಾರೋ ಏನೋ ನಿನಗೆ ಟೋಪಿ ಹಾಕಿದ’ ಎಂದಾಗ ಪೆಚ್ಚಾಗಿ ಸುಮ್ಮನಾದೆ. ಆ ಆಸಾಮಿ ಇನ್ನೆಂದೂ ಕಾಣಲಿಲ್ಲ, ನನ್ನ ದುಡ್ಡು ನನಗೆ ವಾಪಸ್ಸು ಬರಲೂ ಇಲ್ಲ. 

ಈ ಮರೆವಿಗೆ ಸಂಸ್ಕೃತದಲ್ಲಿ ವಿಸ್ಮೃತಿ ಅನ್ನೋ ಸುಂದರವಾದ ಹೆಸರಿದೆ. ನಮ್ಮ ಕೊನೆಯ ಸೋದರ ಮಾವನಿಗೆ ಈ ಹೆಸರಿನ ಅರ್ಥ ಗೊತ್ತಿಲ್ಲದೇ ತಮ್ಮ ಮಗಳಿಗೆ ವಿಸ್ಮೃತಿ ಎಂದು ಹೆಸರಿಟ್ಟು ಬಿಟ್ಟರು. ನಮಗೆಲ್ಲಾ ಆಶ್ಚರ್ಯ ಅಂದ್ರೆ ಆಶ್ಚರ್ಯ. ಕೇಳಿದರೆ, ‘ಏ, ನೀನೇ ಹೇಳಿದ್ದು ಈ ಹೆಸರಿಡಲು’ ಅಂತ ಬಾಣ ನನ್ನ ಕಡೆಗೇ ತಿರುಗಿಸಿ ಬಿಟ್ಟರು. ನನಗೇನೂ ಹೇಳಲು ತೋಚದೆ ಸುಮ್ಮನಾಗಿದ್ದೆ. ಆದರೆ ನಮ್ಮ ಅತ್ತೆಯೊಬ್ಬರಿಗೆ ಈ ಹೆಸರು ಹೇಳಲು ನಾಲಿಗೆ ಹೊರಳದೆ, ‘ಅಯ್ಯೋ, ನಮ್ ವೆಂಕಟೇಶ್ ತನ್ ಮಗ್ಳಿಗೆ ಅದೇನೋ ಕಿಶ್ನುಮೂರ್ತಿ ಅಂತ ಹೆಸರಿಟ್ಟವ್ನೆ’ ಅನ್ನಲು ಪ್ರಾರಂಭಿಸಿದಾಗ ವಿಸ್ಮೃತಿಯನ್ನು ವಿಸ್ಮಿತ ಎಂದು ಬದಲಾಯಿಸಿದರು.

ವಿಸ್ಮೃತಿ ಆಗಲಿ, ಮರೆವು ಅಂತ ಆದ್ರೂ ಆಗಲಿ ಮಾಡೋ ಹಾವಳಿ ಮಾತ್ರ ಒಂದೇ. ದಿನನಿತ್ಯದ ಎಷ್ಟೊಂದು ಕೆಲಸಗಳಿಗೆ ತಡೆಯೊಡ್ಡಿ ಬಿಡುತ್ತದೆ. ಅಡುಗೆ ಮನೆಯಲ್ಲಿ ಅಡುಗೆ ತಡವಾಗೋದು ಮನೆಯಾಕೆ ಸರಿಯಾಗಿ ಸಾಮಗ್ರಿಗಳ ತಂದಿಟ್ಟು ಕೊಳ್ಳಲು ಮರೆತು ಹೋದರೆ. ದಾರಿಯಲ್ಲಿ ಇದ್ದಕ್ಕಿದ್ದಂತೆ ಸ್ಕೂಟಿ ನಿಂತು ಹೋದಾಗಲೇ ಪೆಟ್ರೋಲ್ ಹಾಕಿಸಲು ಮರೆತು ಹೋಗಿರುವುದು ನೆನಪಾಗುವುದು. ಪರೀಕ್ಷೆಗಳಲ್ಲಿ ಅಂಕ ಕಡಿಮೆ ಬರೋದು ಓದಿದ್ದು ಮರೆತು ಹೋದಾಗ. ನನ್ನ ಪುಣ್ಯಕ್ಕೆ ಪಾಠ ಮಾಡುವಾಗ ಮಾತ್ರ ಹೇಳುವ ವಿಷಯಗಳು ಮರೆತು ಹೋಗೋಲ್ಲ. ಟೀಚರ್ ಹೇಳೋದನ್ನೆಲ್ಲ ಹೇಳೋದು ಮರೆತರೇ ಮಕ್ಕಳ ಗತಿ ಏನಾಗಬೇಡ!

ವಿಚಿತ್ರವೆಂದರೆ ಅಷ್ಟೊಂದು ವರ್ಷಗಳ ಕಾಲ, ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಓದಿದ ವಿಷಯಗಳು ತಲೆಯಲ್ಲಿ ನಿಂತಿಲ್ಲ. ತರಗತಿಗಳಿಗೆ ಪಾಠ ಮಾಡಲು ಹೋಗುವ ಮುನ್ನ ಚೆನ್ನಾಗಿ ಓದಿಕೊಂಡೇ ಹೋಗಬೇಕು. ಆದರೆ ಎಲ್ಲಿಯಾದರೂ ಯಾವುದಾದರೂ ಸಿನೆಮಾ ಹಾಡು ಕೇಳಿದ್ರೆ ಸಾಕು, ಅದು ಯಾವ ಸಿನೆಮಾದ ಹಾಡು, ಹಾಡಿನ ಸಾಹಿತ್ಯ, ಹಾಡಿದವರು ಯಾರು, ಸಂಗೀತ ನಿರ್ದೇಶಕರು, ಆ ಹಾಡಿಗೆ ಅಭಿನಯಿಸಿದ ನಾಯಕ ನಾಯಕಿಯರು, ಅವರ ಅಫೇರ್ ಗಳು, ಲೊಳ್ಳೆ ಲೊಟ್ಟೆ, ಎಲ್ಲಾ ಅಕ್ಷರ ಅಕ್ಷರ ಬಿಡದೆ ನೆನಪಾಗಿ ಬಿಡುತ್ತವೆ. ‘ಇದೇ ರೀತಿಯಲ್ಲಿ ಓದಿದ್ದೆಲ್ಲ ನೆನಪಲ್ಲಿ ಇದ್ದಿದ್ದರೆ ಟೀಚರ್ ಆಗೋ ಬದಲು ಇನ್ನೇನೋ ಆಗಬಹುದಿತ್ತು ಕಣಮ್ಮ, ಪಾಪ ನೀನು’ ಅಂತ ನನ್ನ ತಲೆಹರಟೆ ಮಕ್ಕಳು ಹುಸಿ ವಿಷಾದ ನಟಿಸುತ್ತ ಮುಸಿ ಮುಸಿ ನಗುತ್ತವೆ.

ನನ್ನ ಮರೆವಿನ ಪರಿಣಾಮಗಳ ಮೊದಲ ಬಲಿಪಶುವಾದ ನನ್ನ ಗಂಡ ಅರ್ಧ ನಗು,ಅರ್ಧ ಬೇಸರದಿಂದ. ‘ಗಜನಿ ಪಿಚ್ಚರ್ ನಲ್ಲಿ ಆಮೀರ್ ಖಾನ್ ತನ್ನ ಬಗೆಗಿನ ಮಾಹಿತಿ ಎಲ್ಲಾ ಒಂದು ಕಾರ್ಡ್ ನಲ್ಲಿ ಬರೆದುಕೊಂಡು ತನ್ನ ಕುತ್ತಿಗೆಗೆ ನೇತು ಹಾಕಿಕೊಂಡಿರುವ ಹಾಗೆ ವಯಸ್ಸಾದ ಮೇಲೆ ನೀನೂ ಹಾಕಿಕೊಳ್ಳಬೇಕಾಗುತ್ತದೆ, ಇಲ್ಲದೇ ಹೋದರೆ ನನ್ನನ್ನೇ ಮರೆತು ಬಿಡುತ್ತೀಯ,’ ಎಂದು ಅಣಕಿಸುತ್ತಾರೆ. ಗಜನಿ ಪಿಚ್ಚರ್ ನ ಈ ಉಪಾಯ ನನಗೂ ಸರಿ ಅನ್ನಿಸುತ್ತೆ. ಈಗ ನಾನೂ ಕೂಡ ಶಾಲೆಯಿಂದ ಮನೆಗೆ ಹಿಂದಿರುಗುವಾಗ ಏನನ್ನಾದರೂ ಮನೆಗೆ ತರಬೇಕಾದರೆ, ಶಾಲೆಗೆ ಹೊರಡುವಾಗಲೇ ಎಡ ಅಂಗೈ ಮೇಲೆ ಕೆಂಪು ಇಂಕಿನ ಪೆನ್ನಿಂದ ಒಂದು ಸಣ್ಣ ಚುಕ್ಕೆ ಇಟ್ಟು ಕೊಳ್ಳುತ್ತೇನೆ. ಅದನ್ನು ನೋಡಿದಾಗೆಲ್ಲ, ಮನೆಗೆ ಇವತ್ತು ಏನನ್ನು ತೊಗೊಂಡು ಹೋಗಬೇಕು, ಅನ್ನೋದು ಹೊಳೆಯುತ್ತೆ. ಚುಕ್ಕೆ ನೋಡೋದೇ ಮರೆತು ಹೋದರೆ, ನೋಡಿದರೂ ಯಾಕೆ ಇಟ್ಟುಕೊಂಡಿದ್ದೇನೆ ಅನ್ನೋದೇ ಮರೆತು ಹೋದರೆ, ಅದು ಇನ್ನೊಂದು ಕಥೆ ಬಿಡಿ.

ಮರೆವು ಕೇವಲ ಮನುಷ್ಯರ ವೈಯಕ್ತಿಕ ಸಂಗತಿಯಲ್ಲ. public memory is short ಅನ್ನೋ ಮಾತಿದೆ. ಜನ ಸಮುದಾಯಗಳ ನೆನಪಿನ ಶಕ್ತಿ ಬಹಳ ಕ್ಷಣಿಕ. ಇಲ್ಲದೇ ಹೋಗಿದ್ದಿದ್ದರೆ ಇತಿಹಾಸದಲ್ಲಿ ಆದ ತಪ್ಪುಗಳೇ ಮತ್ತೆ ಮತ್ತೆ ಮರು ಕಳಿಸುತ್ತಿದ್ದವೇ? ದ್ವೇಷ, ಹಿಂಸೆಗಳಿಂದ ಆಗಿರುವ ಅನಾಹುತಗಳನ್ನೆಲ್ಲಾ ಮರೆತು, ಮತ್ತೆ ಮತ್ತೆ ಅದೇ ದಾರಿಯಲ್ಲಿ ಕ್ರಮಿಸುವವರ ಕಂಡರೆ ಅಪಾರ ವಿಷಾದವೆನಿಸುತ್ತದೆ.

ಹಾಗಂತ ಹೇಳಿ ಮರೆವು ಎಲ್ಲಾ ಕಾಲದಲ್ಲೂ ತೊಂದರೆ ಕೊಡುತ್ತದೆ ಅಂತೇನೂ ಇಲ್ಲ.ಎಷ್ಟೋ ಜನರ ಕಷ್ಟ ಕಾಲದಲ್ಲಿ ಜಾಣ ಮರೆವು ಅವರ ಕೈ ಹಿಡಿದು ಕಾಪಾಡುತ್ತದೆ. ನನ್ನ ವಿದ್ಯಾರ್ಥಿಗಳಲ್ಲಿ ಕೆಲವು ಕಿಲಾಡಿಗಳಿಗೆ ಹೋಂ ವರ್ಕ್ ನಿಂದ ತಪ್ಪಿಸಿಕೊಳ್ಳಲು ಇದೊಂದು ನೆಪ. ‘ಮೇಡಂ, ಬರೆದಿದ್ದೇ ಮೇಡಂ, ತರೋದಿಕ್ಕೆ ಮರೆತು ಹೋಯ್ತು, ಬೇಕಾದ್ರೆ ನಾಳೆ ಗ್ಯಾರಂಟಿ ತಂದು ತೋರಿಸ್ತೀನಿ,’ ಎನ್ನುತ್ತಾ, ಮುಖದಲ್ಲಿ ಅಪಾರ ಮುಗ್ಧತೆ ಸೂಸುತ್ತಾ ಹೇಳುವಾಗ ನಂಬದಿರಲು ಹೇಗೆ ಸಾಧ್ಯ! ನಾಳೆ ಮತ್ತೆ ಅದೇ ರಾಗ, ‘ಬೇಕಿದ್ರೆ, ಈಗ ಮನೆಗೆ ಕಳಿಸಿ ನೋಡಿ, ತಂದು ಬಿಡ್ತೀನಿ,’ ಅನ್ನೋ ಆತ್ಮ ವಿಶ್ವಾಸದ ಮಾತು ಬೇರೆ.ಶಾಲಾ ಸಮಯದಲ್ಲಿ ಹೇಗೂ ಮಕ್ಕಳನ್ನು ಹೊರಗೆ ಕಳಿಸುವಂತಿಲ್ಲ ಅನ್ನೋದು ಮಾತ್ರ ಅವರಿಗೆ ಚೆನ್ನಾಗಿ ನೆನಪಲ್ಲಿ ಇರುತ್ತೆ.

ಮನೆಯಲ್ಲಿ ಯಾವುದಾದರೂ ಕಾರ್ಯ ಮಾಡಿದಾಗ ಯಾರಾದರೂ ನೆಂಟರು ಇಷ್ಟರನ್ನು ಕರೆಯಲು ಮರೆತು ಹೋಗಿ, ಅವರುಗಳು ಎಲ್ಲಿಯಾದರೂ ಸಿಕ್ಕು ದೂಷಿಸುವ ರಾಗದಲ್ಲಿ ಕೇಳುವಾಗ ಈ ಜಾಣ ಮರೆವಿನ ಮೊರೆ ಹೋಗೋದೇ ಸರಿ. ‘ಅಯ್ಯೋ, ಅವತ್ತು ಏನಾಯ್ತು ಅಂದ್ರೆ, ನಿಮ್ಮನೆ ಇರೋ ಏರಿಯಾದಲ್ಲೇ ಎಷ್ಟ್ ಓಡಾಡಿದ್ರೂ, ನಿಮ್ಮ ಮನೆ ರಸ್ತೆ ಮರೆತು ಹೋಗಿತ್ತು,ಹುಡುಕಿ ಹುಡುಕಿ ಸಾಕಾಯಿತು, ಫೋನ್ ಮಾಡಿದ್ರಾಯ್ತು ಅಂದ್ಕೊಂಡ್ ಬಂದೆ. ಮನೆಗೆ ಬರೋಷ್ಟರಲ್ಲಿ ಹಾಳು ಮರೆವು ಕೈ ಕೊಟ್ಟು ಬಿಡ್ತು ನೋಡಿ. ಎಲ್ಲಿ ನಿಮ್ ಫೋನ್ ನಂಬರ್ ಕೊಡಿ, ನಿಮ್ಮ ಅಡ್ರೆಸ್ಸ್ ಸ್ವಲ್ಪ ಹೇಳಿಬಿಡಿ. ಮುಂದಿನ ಸಾರಿ ಖಂಡಿತಾ ಮರೆಯೊಲ್ಲ,’ ಅಂತ ಹೇಳಿ ನಿಭಾಯಿಸಿ ಬಿಡಬಹುದು.

‘ಅಯ್ಯೋ, ಛೇ, ಮರೆತು ಹೋಯಿತು,’ ಅಂತಾ ಹೇಳಿ ಹುಟ್ಟಿದ ಹಬ್ಬ, ವಿವಾಹ ವಾರ್ಷಿಕೋತ್ಸವ, ಇತ್ಯಾದಿ ಮಹತ್ವದ ದಿನಗಳ ಗಂಡ ಮರೆತು ಬಿಟ್ಟರೆ ಆ ದಿನ ಮನೆಯಲ್ಲಿ ಅಘೋಷಿತ ಶೀತ ಯುದ್ಧ ಪ್ರಾರಂಭವಾಗಿ ಬಿಡುತ್ತದೆ. ಪ್ರಪಂಚದ ಎಲ್ಲ ತಲೆಹರಟೆ ನೆನಪಲ್ಲಿ ಇಟ್ಟುಕೊಂಡು ಹೆಂಡತಿ ಹುಟ್ಟಿದ ಹಬ್ಬ ಮರಿತಾರೆ ಅಂದ್ರೆ ಅದಕ್ಕಿಂತ ಅನ್ಯಾಯ ಇನ್ನೇನಿದೆ. ಮತ್ತೆ ಹೆಂಡತಿಗೆ ಏನಾದರೂ ಉಡುಗೊರೆ ಕೊಟ್ಟು ಕದನ ವಿರಾಮ ಘೋಷಿಸಬೇಕಷ್ಟೆ.

ಮರೆವು ಅನ್ನೋದು ಶಾಪವೂ ಹೌದು, ವರವೂ ಹೌದು. ತಮ್ಮ ಜೀವನದಲ್ಲಿ ನಡೆದ ಪ್ರತಿಯೊಂದು ಕ್ಷಣದ ನೆನಪು ಇರುವುದು ಒಂದು ವಿಧದ ರೋಗವಂತೆ. ಆ ರೋಗಿಗಳ ಪಾಡು ಯಾರಿಗೂ ಬೇಡ. ಇರೋ ಅಲ್ಪ ಸ್ವಲ್ಪ ನೆನಪುಗಳ ಭಾರವೇ ಹೊರಲಾರದಷ್ಟು ಅನ್ನಿಸುವಾಗ, ಇಡೀ ಜೀವನದ ನೆನಪುಗಳ ಬೆಟ್ಟ ಹೊರಲಾದೀತೆ? ಮರೆವು ಇಲ್ಲದೇ ಹೋಗಿದ್ದಿದ್ದರೆ ಜೀವನದ ನೋವುಗಳ ಮರೆತು ಮುಂದೆ ಸಾಗಲಾಗುತ್ತಿತ್ತೇ.? ಅದರಲ್ಲೂ ಸುಖದ, ಖುಷಿಯ ವಿಷಯಗಳ ಮರೆಯುವಷ್ಟು ಬೇಗ ಮನ ದುಕ್ಕದ, ನೋವಿನ ಸಂಗತಿಗಳ ಮರೆಯದು.

ಯಾರೋ, ಏನೋ, ಎಂದೋ ಹೇಳಿದ ಮಾತು, ಮಾಡಿದ ಅವಮಾನ, ಮಗ್ಗುಲು ಮುಳ್ಳು ಮುರಿದು,ಎದೆಯಲಿ ಚುಚ್ಚಿ ನಾಟಿ ಕೊಂಡಿರುವುದು ಕಿತ್ತೊಗೆಯಲು ಕಷ್ಟ ಸಾಧ್ಯ. ಆದರೂ ಸಂಕಟಗಳ ಮರೆಯಲೇ ಬೇಕು. ಅವುಗಳು ಕಲಿಸಿದ ಪಾಠಗಳು ಮಾತ್ರ ಮರೆತು ಹೋಗಬಾರದು ಅಷ್ಟೆ. ನೋವುಗಳೆಲ್ಲ ಮರೆಗೆ ಸರಿದು, ನಲಿವುಗಳು ಮರೆಯದೆ ಇರುವಂತಾದರೆ ಸಾಕು, ಜೀವನವದೆಷ್ಟು ಸುಂದರವಾಗುವುದು ಅಲ್ಲವೇ.

‍ಲೇಖಕರು Admin

August 10, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. km vasundhara

    ಓದಿ ಬಹಳ ಖುಷಿಪಟ್ಟೆ. ಒಳ್ಳೆಯ ಬರಹ ಸಮತಾ

    ಪ್ರತಿಕ್ರಿಯೆ
  2. Jayakala DL

    ಮರೆವು…… ತುಂಬಾ ಚೆನ್ನಾಗಿ ಬರೆದ್ದಿದ್ದೀರಾ. ಮರೆಯದೆ ಮರೆವಿನ ಬಗ್ಗೆ ಬರೆದು ಓದಲು ಅವಕಾಶ ಮಾಡಿದ್ದಕ್ಕೆ ಧನ್ಯವಾದಗಳು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: