ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೆ ಜಿ ಎನ್ ಎಂಬ ಮಹಾಗುರು ಕನಸಿಗೆ ಬಂದು..

ಎಸ್‌ ಜಿ ಸಿದ್ದರಾಮಯ್ಯ

ಈ ಮನೆಯ ಮಾಡಿನೊಳಗೆ
ಅದೆಷ್ಟು ಮರೆವಿನ ಇರವುಗಳೋ ?!.
ಮರೆತಂತಿದ್ದವು ಇದ್ದಕ್ಕಿದ್ದೊಲೆ
ಬೆಳಕಿಂಡಿಯೊಳಗೆ ತೂರಿ
ಗುಣಿತಾತ್ಮಕ ಜಾತ್ರೆಯ ಜವಾರಿ.

ಗುರುವೇ ಗುರುಪಾದವೇ ಇಂದು ಆದದ್ದು ಅದೇ :
ಕಲ್ಲು ಕರಗುವ ಹೊತ್ತಿನಲ್ಲಿ ಸಟ್ಟನೆ ಎದುರಿಗೆ ಬಂದಿರಿ
ಬಂದವರು ಬಂದಂತೆ ಕೈಹಿಡಿದಿರಿ
ಮನೆಗೆ ಬಾ ಎಂದಿರಿ.

ಮರು ಕ್ಷಣದಲ್ಲೆ ನಿಮ್ಮ ಮನೆಯಂಗಳದಿ
ನೀವು ಅದೇ ಆಗ ಕರೆದ ಕರೇವಿನ ಗಿಣ್ಣ
ಉಣಬಡಿಸಿದ್ದು ತಾಯಿ ಅನ್ನಪೂರ್ಣ

ಎಷ್ಟು ದಶಕದ ಬರವೋ ಹಸಿವು ತಣಿದಿತ್ತು
ರಸಿಕನಾಡುವ ಮಾತು ಶಶಿಯುದಿಸಿ ಬಂದಂತೆ
ಮಾತು ಮಾತಿನ ನಡುವೆ ಕಳೆದ ಕವಿಗಳ ಬೆರಗು

ಉಂಡದ್ದು ಕಂಡದ್ದು ಕೇಳಿದ್ದು
ಸೋಹಂ ಕರಗಿದ ದಾಸೋಹಂ

ಎಲ್ಲ ಇಲ್ಲಿಗೆ ಪೂರ್ಣ ಎಂಬಲ್ಲಿಗೆ
ನೀವು ಬಯಲು ಬಯಲು ಬಯಲನು ತಬ್ಬಿ
ಮರೆವಿನ ಇರವು ಮಹಾ ಬಯಲು.

‍ಲೇಖಕರು Admin

14 January, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading