ಕೆ ಆರ್‌ ಸಂಧ್ಯಾರೆಡ್ಡಿ ಕರೋನಾಮುಕ್ತೆಯಾದ ಕಥನ ಆರಂಭ

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿದ್ದ ಕೆ ಆರ್ ಸಂಧ್ಯಾರೆಡ್ಡಿ ಅವರು ಕನ್ನಡ ಜಾನಪದಕ್ಕೆ ಕೊಟ್ಟ ಕೊಡುಗೆ ಅಪಾರ.

‘ಮೂವತ್ತೈದರ ಹೊಸ್ತಿಲು’ ಇವರ ಮೊದಲ ಕವನ ಸಂಕಲನ. ಅಲ್ಲಿಂದ ಅವರು ಹಿಂದಿರುಗಿ ನೋಡಲಿಲ್ಲ. ಕವಿತೆ, ಕಥೆ, ಅನುವಾದ, ಜಾನಪದ ಇವರ ಪ್ರೀತಿಯ ಕ್ಷೇತ್ರಗಳಾದವು.

ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಸಂಧ್ಯಾರೆಡ್ಡಿ ನಂತರ ಎನ್ ಜಿ ಇ ಎಫ್ ಸಂಸ್ಥೆಯಲ್ಲಿ ಧೀರ್ಘ ಕಾಲ ಅನುವಾದಕರಾಗಿದ್ದರು. ತಾಯಿ ಅನಸೂಯ ರಾಮರೆಡ್ಡಿ ಸಹಾ ಲೇಖಕಿ. ಬರವಣಿಗೆ ಹಾಗೂ ಸಂಗೀತ ಇವರಿಗೆ ಚಿಕ್ಕಂದಿನಿಂದಲೇ ಬಂದ ಒಲವು.

ತಮ್ಮೊಳಗೆ ಕೊರೋನಾ ನೆಲೆಸಿದ್ದನ್ನೂ ಅದನ್ನು ಅವರು ಮುಲಾಜಿಲ್ಲದೆ ಹೊರಗೆ ಹಾಕಿದ್ದರ ಕಥನ ಇಂದಿನಿಂದ ಪ್ರತೀ ದಿನ ನಿಮ್ಮ ಮುಂದೆ

‘ಬರ್ಕ್ ವೈಟ್ ಕಂಡ ಭಾರತ’ದ ಅನುವಾದ, ‘ಲೇಖ ಲೋಕ’ ಸಂಪಾದನೆ ಇವರ ಹೆಮ್ಮೆಯ ಗರಿಗಳು.

1

ಪೂರ್ವ ಪುರಾಣ…

ನಾನು ಆಸ್ಪತ್ರೆಗೆ ಸೇರಿದ ವಿಷಯವನ್ನು ಯಾರಿಗೂ ತಿಳಿಸಲಿಲ್ಲ. ಯಾಕೆಂದರೆ ಎಲ್ಲರಂತೆಯೇ ಕಷಾಯ ಕುಡಿದುಕೊಂಡು, ಮಾಸ್ಕ್ ಹಾಕಿಕೊಂಡು ಸ್ಯಾನಿಟೈಜರ್ ಬಳಸುತ್ತ, ಗಾರ್ಗಲ್ ಮಾಡುತ್ತಾ ಹೀಗೆ ಏನೇನು ಮುನ್ನೆಚ್ಚರಿಕೆಯ ಕ್ರಮಗಳನ್ನು ಎಲ್ಲರೂ ತೆಗೆದುಕೊಳ್ಳುತ್ತಾ ಬಂದಿದ್ದರೋ ಅದನ್ನೆ ನಾನೂ ಪಾಲಿಸುತ್ತಾ ಬಂದಿದ್ದರೂ, ನನಗೆ ಕೋವಿಡ್ ಎಂದರೆ ಎಲ್ಲರಿಗೂ ಭಯವಾಗಬಹುದು ಎಂಬ ಕಾರಣದಿಂದ.

ಇಷ್ಟಕ್ಕೂ ನಾನು ಹೊರಗೆ ಹೋಗಿ ಬಂದು ೨೦-೨೫ ದಿನಗಳೇ ಕಳೆದಿದ್ದವು. ಈ ಮಧ್ಯೆ ಡಿಟಿಪಿಗಾಗಿ ಮನೆಯ ಬಳಿಯೇ ಇರುವ ಡಿಟಿಪಿ ಸ್ಥಳಕ್ಕೆ ನಡೆದುಕೊಂಡು ಹೋಗಿ ಕೊಡುವುದು ತೆಗೆದುಕೊಂಡು ಬರುವುದಲ್ಲದೆ ಅಲ್ಲಿ ೫ ನಿಮಿಷ ಕೂತಿದ್ದೂ ಇಲ್ಲ.

ಇಷ್ಟಾಗಿಯೂ ಕರೋನಾ ಹೇಗೆ ಮತ್ತು ಯಾವಾಗ ನನ್ನ ದೇಹವನ್ನು ಪ್ರವೇಶಿಸಿತೋ ಊಹಿಸುವುದೂ ಕಷ್ಟ. ಮೊದಲು ಎಲ್ಲೆಲ್ಲಿಯೋ ದೂರದಲ್ಲಿ ಸೀಲ್ ಡೌನ್, ಕ್ವಾರಂಟೈನ್ ಆದ ಸುದ್ದಿಗಳು ಕೇಳಿ ಬರುತ್ತಿದ್ದವು. ಕ್ರಮೇಣ ಅದು ಹೆಚ್ಚು ಹೆಚ್ಚಾಗಿ ವ್ಯಾಪಿಸುತ್ತಾ ನಮ್ಮ ಬಡಾವಣೆಯ ಅನೇಕ ಅಡ್ಡ ರಸ್ತೆಗಳು ಸೀಲ್ ಡೌನ್ ಆಗಿದ್ದವು. ಇದಲ್ಲದೆ ದೊಡ್ಡವರೆನಿಸಿಕೊಂಡ ಎಷ್ಟೋ ಮಂದಿಗೆ ಪಾಸಿಟಿವ್ ಅಂತ ಗೊತ್ತಾದಾಗ, ಯಾಕೋ ಇದು ಗಾಳಿಯಿಂದಲೇ ಹರಡುತ್ತಿದೆಯೇನೋ, ಹಾಗೇನಾದರೂ ಆದರೆ ನನಗೂ ಒಂದು ದಿನ ಬಂದರೆ ಅಚ್ಚರಿಯಿಲ್ಲ, ಇಷ್ಟಕ್ಕೂ ಅದು ಬಂದರೆ ಅನುಭವಿಸದೆ ಇನ್ನೇನು ಮಾಡಲು ಸಾಧ್ಯ ಎಂದುಕೊಂಡು ಸುಮ್ಮನಾಗುತ್ತಿದ್ದೆ. ಊರೆಲ್ಲಾ ಸುತ್ತಾಡಬೇಡವೇ, ಇದು ಭಯಂಕರವಾಗಿದೆ, ಇದೇನೋ ಇನ್‌ಕ್ಯುಬೇಶನ್ ಪಿರಿಯಡ್ ಅಂತೆ, ಆಮೇಲೆ ಭಯಂಕರವಾಗಿ ಹರಡುತ್ತದೆ ಎಂದು ನನ್ನ ಗೆಳತಿಯರು ಎಚ್ಚರಿಸುತ್ತಲೇ ಇದ್ದರು.

ಆದರೆ ಹಾಗಂತ ಮನೆಯಲ್ಲೆ ಎಷ್ಟು ದಿನ ಕೂರುವುದು? ಮಾಡಬೇಕಾಗಿದ್ದ ಕೆಲವು ಕೆಲಸಗಳನ್ನು ಮಾಡಿ ಮುಗಿಸಲೇ ಬೇಕಿತ್ತು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳವರ ಮೀಸಲಾತಿಯನ್ನು ಹೆಚ್ಚಿಸುವ ಕುರಿತು ಜಸ್ಟಿಸ್ ನಾಗಮೋಹನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ರಚಿತವಾದ ಆಯೋಗದಲ್ಲಿ, ವರದಿ ಸಿದ್ಧಪಡಿಸಲು ಪೂರಕ ಕೆಲಸಗಳಿಗೆ ನೆರವಾಗುವುದಕ್ಕಾಗಿ ಜಸ್ಟಿಸ್ ಅವರು ನಾಲ್ವರು ಪರಿಣತರನ್ನು ನೇಮಿಸಿಕೊಂಡಿದ್ದರು. ಇದರಲ್ಲಿ ನಾನೂ ಇದ್ದೆ. ಕಳೆದ ನವೆಂಬರ್ ತಿಂಗಳಿಂದ ಇದರ ಕೆಲಸ ಆರಂಭ ವಾಗಿತ್ತು.

ರಾಜ್ಯ ಯುವ ಕೇಂದ್ರ ‘ಯವನಿಕ’ದಲ್ಲಿ ಈ ಆಯೋಗದ ಕೆಲಸ ಕಾರ್ಯಗಳಿಗಾಗಿ ಸ್ಥಳಾವಕಾಶ ಮಾಡಿಕೊಡಲಾಗಿತ್ತು. ಜೂನ್ ಅಂತ್ಯದ ವೇಳೆಗೆ ವರದಿ ಸಲ್ಲಿಸಬೇಕಾಗಿತ್ತು. ಈ ವರದಿಯಲ್ಲಿರಬೇಕಾದ ಬೇರೆ ಬೇರೆ ಅಧ್ಯಾಯಗಳನ್ನು ಸಿದ್ಧಪಡಿಸುವ ಕೆಲಸವನ್ನು ನಮ್ಮ ನಮ್ಮ ಪರಿಣತಿಗನುಗುಣವಾಗಿ ಹಂಚಿಕೊಡಲಾಗಿತ್ತು. ನಾನು ಕೆಲವು ಪೂರ್ವ ಪೀಠಿಕೆಯ ಅಧ್ಯಾಯಗಳ ಜೊತೆಗೆ ಸರ್ವೋಚ್ಚ ನ್ಯಾಯಾಲಯದ
ಕೆಲವೊಂದು ಮಹತ್ವದ ತೀರ್ಪುಗಳ ಆಯ್ದ ಭಾಗಗಳ ಭಾಷಾಂತರ ಹಾಗೂ ಇಂಥದೇ ಸಂಬಂಧ ಪಟ್ಟ ಭಾಷಾಂತರದ ಕೆಲಸ ಮಾಡುತ್ತಿದ್ದೆ. ಅಷ್ಟರಲ್ಲಿ ಲಾಕ್‌ಡೌನ್ ಘೋಷಣೆಯಾಯಿತು.

ಆಯೋಗದ ಮಾಹಿತಿ ಸಂಗ್ರಹಣೆಯ ಕೆಲಸ ಆ ವೇಳೆಗೆ ಬಹುತೇಕ ಪೂರ್ಣಗೊಂಡಿತ್ತಾದ್ದರಿಂದ ಲಾಕ್‌ಡೌನ್‌ನಿಂದ ಹೆಚ್ಚು ತೊಂದರೆಯಾಗಲಿಲ್ಲ. ನಮ್ಮ ಮನೆಗಳಲ್ಲಿಯೇ ನಾವು ಬರೆದದ್ದರ ಪರಿಷ್ಕಾರ ಮಾಡುತ್ತಿದ್ದೆವು. ಲಾಕ್‌ಡೌನ್ ತೆರವಾದ ನಂತರ, ಎಂದಿನಂತೆ ವಾರದಲ್ಲಿ ಎರಡು ಮೂರು ದಿನ ಕಚೇರಿಯಲ್ಲಿ ಸೇರಿ ನಾವುಗಳು ಬರೆದದ್ದನ್ನು ಕ್ರೋಢೀಕರಿಸಿ ಅಧ್ಯಕ್ಷರ ಮಾರ್ಗದರ್ಶನದಲ್ಲಿ ಪರಿಷ್ಕರಿಸುವ ಕೆಲಸ ಮಾಡುತ್ತಿದ್ದೆವು.

ಈ ಕೆಲಸ ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ನಡೆಯುತ್ತಿತ್ತು. ಇಲಾಖೆಯವರು ನಮಗೆ ಆಫೀಸಿಗೆ ಹೋಗಿ ಬರಲು ಪ್ರತ್ಯೇಕ ವಾಹನ ವ್ಯವಸ್ಥೆ ಮಾಡಿದ್ದರಿಂದ ಕರೋನ ಅವಧಿಯಲ್ಲಿ ಪಾಲಿಸಬೇಕಾಗಿದ್ದ ನಿಯಮಗಳನ್ನು ಪಾಲಿಸಲು ತೊಂದರೆಯಾಗಲಿಲ್ಲ. ವರದಿ ಸಂಪೂರ್ಣ ಸಿದ್ಧವಾಗಿ ಅದನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲು ದಿನಾಂಕದ ನಿಗದಿಯಾಯಿತು. ಜುಲೈ ೨ ರಂದು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ವರದಿ ಸಲ್ಲಿಸಿ, ನಿಗದಿತ ಅವಧಿಯೊಳಗಾಗಿ ಕೆಲಸವನ್ನು ತೃಪ್ತಿಕರವಾಗಿ ಮಾಡಿ ಮುಗಿಸಿದ ಸಮಾಧಾನದೊಂದಿಗೆ ಆಫೀಸಿಗೆ ಹಿಂದಿರುಗಿ ಎಲ್ಲರೂ ಒಟ್ಟಿಗೆ ಊಟ ಮಾಡಿ ಚೆದುರಿದೆವು.

ಸಧ್ಯ, ಇನ್ನು ಮುಂದೆ ನಮಗೆ ಮೀಸಲಾಗಿದ್ದ ವಾಹನವೇ ಆಗಿದ್ದರೂ ಅದರಲ್ಲಿ ಹೋಗಿ ಬರುವ ಮತ್ತು ಕಚೇರಿಯಲ್ಲಿ ಇತರ ಸಾರ್ವಜನಿಕರ ಸಂಪರ್ಕಕ್ಕೆ ಬರುವ ಸಾಧ್ಯತೆಯಿಂದ ಮುಕ್ತವಾದೆ ಎಂದು ನಾನು ಅಂದುಕೊಂಡಿದ್ದೆ. ಆದರೆ ಹೀಗಾದ ನಾಲ್ಕೈದು ದಿನಗಳ ನಂತರ ನಮ್ಮ ಕಚೇರಿಯಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಒಂದಿಬ್ಬರಿಗೆ ಪಾಸಿಟಿವ್ ಬಂದಿದೆ, ಆದ್ದರಿಂದ ನೀವುಗಳೆಲ್ಲಾ ಕ್ವಾರಂಟೈನ್‌ನಲ್ಲಿರಿ ಎಂಬ ಸೂಚನೆ ಆಫೀಸಿನಿಂದ ಬಂದಾಗ ನನ್ನ ಮನಸ್ಸು ಹಿಂದಿನ ದಿನಗಳ ಮೆಲುಕು ಹಾಕತೊಡಗಿತು.

ಯಾರಿಗೆ ಪಾಸಿಟಿವ್ ಬಂದಿತ್ತೋ ಅವರ ಸಂಪರ್ಕವಾಗಿ ಹತ್ತು ದಿನಗಳಾಗುತ್ತಾ ಬಂದಿತ್ತು ಮತ್ತು ನಮ್ಮ ಎಲ್ಲ ಕೆಲಸಗಳಿಗೂ ಸಹಾಯಕನಾಗಿದ್ದ ಆತ ನಮಗೆ ಬಿಸಿನೀರು ತಂದುಕೊಡುವ, ಊಟ ಬಡಿಸುವ, ಜೆರಾಕ್ಸ್ ಇತ್ಯಾದಿಗಳನ್ನು ಮಾಡಿಕೊಡುವ ಎಲ್ಲಾ ಕೆಲಸಗಳನ್ನು ನಿಷ್ಠೆಯಿಂದ ಮಾಡುತ್ತಿದ್ದ. ‌

ಆತ ಒಂದು ದಿನ ನಮ್ಮ ಪಕ್ಕದಲ್ಲಿಯೇ ನಿಂತು, ನಾವು ಕರೋನಾ ಸೋಂಕಿನ ಲಕ್ಷಣಗಳ ಬಗ್ಗೆ ಮಾತಾಡುತ್ತಾ ಮೈಕೈನೋವು ಬರುವುದೂ ಅದರ ಒಂದು ಲಕ್ಷಣ ಎಂದು ಹೇಳುತ್ತಿದ್ದಾಗ ಆತ ನಾನು ಕೊಟ್ಟಿದ್ದ ಜೆರಾಕ್ಸ್ ಕೆಲಸದ ಹಾಳೆಗಳನ್ನು ನನ್ನ ಮುಂದಿಡುತ್ತಾ ನನಗೂ ಒಂದೆರಡು ದಿನದಿಂದ ಮೈಕೈನೋವು ಅಂದಿದ್ದ. ಆತ ಈಗಾಗಲೇ ನಿವೃತ್ತನಾಗಿ ಈ ಕೆಲಸಕ್ಕಾಗಿಯೇ ವಿಶೇಷವಾಗಿ ಸ್ವಲ್ಪ ಅವಧಿಯವರೆಗೆ ನೇಮಕಗೊಂಡಿದ್ದ. ಬಸ್ಸಿನಲ್ಲಿ ಬಹಳ ದೂರದಿಂದ ಬರುತ್ತಿದ್ದ. ಹುಷಾರಾಗಿರು ಅಂತ ಹೇಳಿದ್ದೆವು. ಅನಂತರ ನಾನು ಆಫೀಸಿಗೆ ಹೋಗಿರಲಿಲ್ಲ. ನಾವು ವರದಿ ಸಲ್ಲಿಸುವ ದಿನವೂ ಆತ ಬಂದಿರಲಿಲ್ಲ. ಜ್ವರದಿಂದ ಆತ ಬರಲಿಲ್ಲ ಎಂದು ತಿಳಿಯಿತು.

ಈಗ ಕ್ವಾರಂಟೈನ್‌ನಲ್ಲಿರಿ ಎಂದು ತಿಳಿಸಿದಾಗ ಯಾವುದೋ ಒಂದು ಅವ್ಯಕ್ತ ಭೀತಿ ಕಾಡತೊಡಗಿತು. ಒಳಗೊಳಗೇ ಭಯ, ಮೇಲು ಮೇಲೆ ಸಮಾಧಾನ ತಂದುಕೊಳ್ಳುತ್ತಾ ಆ ರಾತ್ರಿ ಕಳೆದೆ. ಮಾರನೇ ದಿನ ಮಧ್ಯಾಹ್ನ ಆಫೀಸಿನಿಂದ ಇನ್ನೊಂದು ಫೋನ್. ಎಲ್ಲರಿಗೂ ಕರೋನಾ ಟೆಸ್ಟ್ ಗೆ ಆಫೀಸಿನಲ್ಲಿಯೇ ವ್ಯವಸ್ಥೆ ಮಾಡಲಾಗಿದೆ ಬನ್ನಿ ಎಂದು. ನಾನು ಆತನ ಸಂಪರ್ಕವಾದ ದಿನದಿಂದ ಎಷ್ಟು ದಿನವಾಯಿತು ಎಂದು ಲೆಕ್ಕ ಹಾಕತೊಡಗಿದೆ.

ಆ ಟೆಸ್ಟ್ ಮಾಡಿಸಿಕೊಳ್ಳುವುದಕ್ಕಾಗಿ ಹೋಗಿ ಪುನಃ ಅಲ್ಲಿ ಯಾರಿಗಾದರೂ ಪಾಸಿಟಿವ್ ಇದ್ದರೆ ಅನಗತ್ಯವಾಗಿ ಸೋಂಕಿಗೊಳಗಾಗುವುದೇಕೆ ಎಂದು ನನ್ನ ಸೋದರಮಾವ ಅರಿವಳಿಕೆ ತಜ್ಞರಾಗಿ ನಿವೃತ್ತರಾಗಿರುವ ಡಾ. ನರೇಂದ್ರ ಅವರಿಗೆ ಫೋನ್ ಮಾಡಿದಾಗ, ಅವರು ಹತ್ತು ದಿನವಾಗಿದ್ದರೆ ಪರವಾಗಿಲ್ಲ ಎಂದು ಹೇಳಿ ಮುನ್ನೆಚ್ಚರಿಕೆಯ ಕ್ರಮವಾಗಿ ತೆಗೆದುಕೊಳ್ಳಬಹುದಾದ ಮಾತ್ರೆಗಳನ್ನು ತಿಳಿಸಿದರು.

ಈ ಮಾತ್ರೆಗಳನ್ನು ತಪ್ಪದೆ ತೆಗೆದುಕೊಳ್ಳುತ್ತಾ ಬಿಸಿನೀರು ಕುಡಿಯುತ್ತಾ ಮನೆಯಿಂದ ಎಲ್ಲೂ ಹೊರಗೆ ಹೋಗದೆ ಒಂದು ಥರಾ ದುಗುಡ ತುಂಬಿದ ಸಮಾಧಾನದಿಂದಲೇ ೧೨ ದಿನ ಆಯಿತು, ೧೫ ದಿನ ಆಯಿತು, ೨೦ ದಿನ ಆಯಿತು, ಇನ್ನು ಆ ಸೋಂಕಿನ ಭಯ ಖಂಡಿತ ಇಲ್ಲ ಎಂದು ಪೂರ್ತಿ ಸಮಾಧಾನ ತಳೆಯುತ್ತಾ ಇಂಗ್ಲಿಷ್‌ನಲ್ಲಿದ್ದ ಸಿ. ಆರ್. ರೆಡ್ಡಿಯವರ ರಾಜಕೀಯ ಹಾಗೂ ಇನ್ನಿತರ ಉಪನ್ಯಾಸಗಳ ಅನುವಾದ ಮಾಡಿಕೊಂಡು ದಿನ ನೂಕುತ್ತಾ ಇದ್ದೆ.

ಹೀಗಿರುತ್ತಾ ಆ ದಿನ ಶಂಕರ್ ತಂದ ತರಕಾರಿಗಳನ್ನು ಬಕೆಟ್ ನೀರಿಗೆ ಹಾಕಿ ತೊಳೆಯುತ್ತಾ ಇರುವಾಗ ಒಂದು ನೀರಿನ ಹನಿ ಸೀದಾ ಕಣ್ಣೊಳಗೆ ಬಿತ್ತು. ಮೂಗು, ಬಾಯಿ, ಕಣ್ಣು ಇತ್ಯಾದಿ ಯಾವುದೇ ಲೋಳೆ ಪದರ ಇರುವ ಅಂಗಾಂಗಗಳ ಮೂಲಕವೂ ಕರೋನಾ ಪ್ರವೇಶಿಸಬಹುದು ಎಂಬುದರ ನೆನಪಾಗಿ ನೀರಿನ ಹನಿಯನ್ನು ನಿವಾರಿಸುವುದು ಹೇಗೆ? ನನ್ನ ಕರೋನಾ ಮೂಲ ಅದೇ ಇರಬಹುದೇ? ಕರೋನಾ ಬರಬೇಕು ಅಂದಿದ್ದರೆ ನಾವು ಎಷ್ಟೇ ಹುಷಾರಾಗಿದ್ದರೂ ಬರುತ್ತೆ ಇದೊಂದು ರೀತಿ ವಿಧಿ ಇರಬೇಕು ಅನ್ನಿಸಿಬಿಟ್ಟಿತು.

ಇಂಥ ಸಂದರ್ಭದಲ್ಲಿ ಮಾತ್ರವೇ ಅಲ್ಲ ಆಗಾಗ ನೆನಪಾಗುವ ಪರೀಕ್ಷಿತ ಮಹಾರಾಜನ ಕಥೆಯೂ ಹೀಗೇ ಆಗಿತ್ತು. ಪರೀಕ್ಷಿತ ಮಹಾರಾಜ, ಅರ್ಜುನನ ಮೊಮ್ಮಗ, ಅಂದರೆ ಅಭಿಮನ್ಯುವಿನ ಮಗ. ತುಂಬ ಒಳ್ಳೆಯ ಚಕ್ರವರ್ತಿಯಾಗಿದ್ದ. ಅವನು ಒಮ್ಮೆ ಬೇಟೆಗೆ ಹೋದಾಗ ಬಹಳ ಬಾಯಾರಿಕೆ ಆಗುತ್ತದೆ. ಹೀಗೇ ನೀರಿಗಾಗಿ ಹುಡುಕುತ್ತಾ ಹೋದ ಅವನಿಗೆ ಒಂದು ಆಶ್ರಮ ಕಾಣಿಸುತ್ತದೆ. ಅದು ಶಮೀಕ ಋಷಿಯ ಆಶ್ರಮ.

ಶಮೀಕನು ಬಹಳ ಗಾಢವಾದ ಧ್ಯಾನದಲ್ಲಿ ತೊಡಗಿರುತ್ತಾನೆ. ಪರೀಕ್ಷಿತ ಮಹಾರಾಜನು ನೀರಿಗಾಗಿ ಎಷ್ಟೇ ಕರೆದರೂ ಅವನು ಧ್ಯಾನದಿಂದ ಎಚ್ಚೆತ್ತು ಕೊಳ್ಳುವುದಿಲ್ಲ. ಇದರಿಂದ ತುಂಬ ಕೋಪಗೊಂಡ ಪರೀಕ್ಷಿತನು ಒಂದು ಸತ್ತ ಹಾವನ್ನು ಶಮೀಕನ ಕೊರಳಿಗೆ ಹಾಕಿ ಹೊರಟು ಹೋಗುತ್ತಾನೆ. ಶಮೀಕನ ಮಗ ಶೃಂಗಿಯು ಆಶ್ರಮಕ್ಕೆ ಹಿಂದಿರುಗಿದಾಗ ಈ ದೃಶ್ಯವನ್ನು ಕಂಡು ಯಾರು ಈ ಕೃತ್ಯವನ್ನು ಮಾಡಿದರೋ ಅವರು ಏಳು ದಿನಗಳೊಳಗೆ ತಕ್ಷಕನು ಕಚ್ಚಿ ಸಾಯಲಿ ಎಂದು ಶಾಪ ಕೊಡುತ್ತಾನೆ.

ಈ ಶಾಪದ ಬಗ್ಗೆ ತಿಳಿದ ಪರೀಕ್ಷಿತನು ಬಹಳ ಭಯಭೀತನಾಗುತ್ತಾನೆ. ಅವನ ಮಂತ್ರಿ ಪರಿವಾರದವರೆಲ್ಲ ಸೇರಿ ಆತನನ್ನು ಸುಭದ್ರ ಕೋಟೆಯಲ್ಲಿಡುತ್ತಾರೆ. ಇರುವೆ ಸುಳಿಯುವುದಕ್ಕೂ ಅವಕಾಶವಿಲ್ಲದಂಥ ಕೋಟೆಯೊಳಗೆ ಹೋಗುವುದಾದರೂ ಹೇಗೆ ಎಂದು ತಿಳಿಯದೆ ಕಂಗಾಲಾದ ತಕ್ಷಕನು ಒಂದು ಉಪಾಯ ಮಾಡುತ್ತಾನೆ. ರಾಜನಿಗೆ ತೆಗೆದುಕೊಂಡು ಹೋಗುತ್ತಿರುವ ಹಣ್ಣಿನಲ್ಲಿ ಒಂದು ಚಿಕ್ಕ ಹುಳುವಾಗಿ ಸೇರಿಕೊಳ್ಳುತ್ತಾನೆ. ಪರೀಕ್ಷಿತನು ಈ ಹಣ್ಣನ್ನು ಕೊಯ್ದಾಗ ಹೊರಬಂದ ತಕ್ಷಕ ದೊಡ್ಡ ಹಾವಾಗಿ ತನ್ನ ನಿಜರೂಪ ತಾಳಿ ಪರೀಕ್ಷಿತನನ್ನು ಕಚ್ಚುತ್ತಾನೆ. ವಿಷವೇರಿ ಪರೀಕ್ಷಿತನು ಸಾಯುತ್ತಾನೆ.

। ಇನ್ನು ನಾಳೆಗೆ ।

‍ಲೇಖಕರು Avadhi

May 29, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: