ಕೆಲಸ ಯಾವುದಾದರೇನು? ನೆಮ್ಮದಿ ಮುಖ್ಯ…

ಸುಹಾನ್ ಶೇಕ್

 

ಕಳೆದ ಕೆಲ ವಾರಗಳಿಂದ ನೆಮ್ಮದಿಯಿಂದ ನಿದ್ದೆ ಮಾಡುತ್ತಿದ್ದೇನೆ. ಜೀವಕ್ಕೆ ವಿಪರೀತ ತ್ರಾಣ ಮೈ ಕೈ ನೋವಿನ ನಡುವೆಯೂ ನೆಮ್ಮದಿಯನ್ನು ಅನುಭವಿಸುವ ನಿದ್ದೆ ಅದು.

ನನ್ನ ಪದವಿ ಮುಕ್ತಾಯವಾಗಿ ಹತ್ರ ಹತ್ರ ಒಂದು ವರ್ಷ ಆಗ್ತಾ ಬಂತು. ಈ ನಡುವೆ ಕೆಲಸಕ್ಕಾಗಿ ಎಂದೂ ಕಾಣದ ಬೆಂಗಳೂರಿನ ರಸ್ತೆಗಳಲ್ಲಿ ಎರಡೆರಡು ಬಾರಿ ಅನಾಮಿಕನಾಗಿ ಅಲೆದಾಡಿ, ಮಾಧ್ಯಮಗಳ ಕಛೇರಿಯಲ್ಲಿ ಗಂಟೆಗಟ್ಟಲೆ ಕಾದು ಸುಸ್ತಾಗಿ ಇಂಟರ್ ವ್ಯೂ ಕೊಟ್ಟು ಬಂದಿದ್ದು ಜೀವನದಲ್ಲಿ ಒಂದು ಅನುಭವ ಪಾಠವಾಗಿ ಉಳಿದಿದೆ.

ಅಲ್ಲಿ ಇಲ್ಲಿ ಕೇಳಿದ ಅಂತೆ ಕಂತೆಗಳ ಕೆಲಸಕ್ಕೆ ರೆಸ್ಯೂಮ್ ಹಾಕಿ ಕೂತದ್ದೂ ಇದೆ. ಕೆಲವೊಮ್ಮೆ ಅಲ್ಲಿ ಅವನಿಗೆ ಕೆಲಸ ಸಿಕ್ಕಿತಂತೆ ಇವನಿಗೆ ಇಲ್ಲಿ ಕೆಲಸವಾಯಿತಂತೆ ಎಂದು ಮನೆಯವ್ರ ಅಂತೆ ಕಂತೆಗಳೇ ನನಗೆ ಮುಂದೇನು ಅನ್ನುವ ಚಿಂತೆಯಾಗಿ ಬಿಟ್ಟು ಒಬ್ಬನೇ ಕೂತು ಗಂಟೆಗಟ್ಟಲೆ ಯೋಚನೆಯಲ್ಲಿ ಲೀನವಾಗಿ ಮಲಗಿದ್ದು ಇದೆ.

ಜರ್ನಲಿಸಂ ಹೆಸರು ತಂದು ಕೊಟ್ಟಿದೆ. ಇದೇ ಹೆಸರು ಮುಂದೆ ಜೀವನಕ್ಕೆ ಒಂದು ತುತ್ತು ಅನ್ನ ಕೊಟ್ಟರೆ ಅದಕ್ಕಿಂತ ದೊಡ್ಡ ಖುಷಿಯ ಉಡುಗೊರೆ ಮತ್ತೊಂದಿಲ್ಲ. ಓದು ಬರಹ ಇದುವರೆಗೆ ಒಂದಿಷ್ಟು ಹಣ ಜೊತೆಗೆ ನಾಲ್ಕು ಜನರು ಗುರುತಿಸಲ್ಪಡುವ ವ್ಯಕ್ತಿಯನ್ನಾಗಿ ರೂಪಿಸಿದೆ. ಮಾಧ್ಯಮ ಕ್ಷೇತ್ರದಲ್ಲಿ ಬದುಕನ್ನು ಕಟ್ಟಿಕೊಳ್ಳುವ ಕನಸು ಕನಸಾಗಿಯೇ ಉಳಿದಿದೆ. ಪ್ರಯತ್ನಕ್ಕೆ ಕೊನೆಯಿಲ್ಲ. ಇಂದಲ್ಲ ನಾಳೆ. ನಾಳೆಯಲ್ಲದಿದ್ರೆ ನಾಡಿದ್ದು..

ಸದ್ಯ ನಾನು ಕಳೆದ ಇಪ್ಪತ್ತು – ಇಪ್ಪತ್ತೆರಡು ದಿನಗಳಿಂದ ನೆಮ್ಮದಿಯಿಂದ ಇದ್ದೇನೆ. ನನ್ನ ಅಪ್ಪ ಇಪ್ಪತ್ತೈದು ವರ್ಷಗಳಿಂದ ಸೆಂಟ್ರಿಂಗ್ ಕೆಲಸ ಮಾಡಿಕೊಂಡು ಬಂದವರು. ತಾವು ಬಿಸಿಲಿನಲ್ಲಿ ಬೆಂದು ಕಾದ ಕಬ್ಬಿಣವನ್ನು ಬೆಂಡು ಮಾಡಿಯಾದ್ರು ಪರವಾಗಿಲ್ಲ ತನ್ನ ಮಕ್ಕಳು ಒಳ್ಳೆ ಶಿಕ್ಷಣ ಪಡೆಯಬೇಕು, ಬೆಳೆಯಬೇಕು ಅನ್ನುವ ಅವ್ರ ನಿಯತ್ತು ನಮ್ಮನ್ನು ಇವತ್ತು ಎರಡು ಹೊತ್ತಿನ ತುತ್ತಿಗೆ ಕಮ್ಮಿಯಾಗದಂತೆ ರೂಪಿಸಿದೆ.

ಕೆಲಸ ಸಿಗುವವರೆಗೆ ಅಲ್ಲಿ ಇಲ್ಲಿ ಚಿಲ್ಲರೆ ಕೆಲಸ ಮಾಡಿ, ಬರವಣಿಗೆಯ ಹಾದಿಯಲ್ಲಿ ಹೆಸರು ಜೊತೆಗೆ ಒಂದಿಷ್ಟು ಹಣ, ಕಾಮೆಂಟ್ರಿ, ಕ್ಯಾಟರಿಂಗ್ ನಲ್ಲಿ ಬರುವ ಹಣವನ್ನು ಕಿಸೆಗಿಟ್ಟು ಅಮ್ಮನ ಕೈಯಿಗೆ ಸ್ವಲ್ಪ ಹಣ ಕೊಟ್ಟು ಉಳಿದದ್ದು ನನ್ನ ಕಿಸೆಗಿಟ್ಟು ಇಷ್ಟು ದಿನ ಜಾಸ್ತಿ ಮನೆಯಲ್ಲೇ ಇದ್ದೆ.

ಆದ್ರೆ ಕಳೆದ ಮೂರು ವಾರಗಳಿಂದ ಒಂದು ದಿನವೂ ವಿಶ್ರಾಂತಿಯೇ ಇಲ್ಲದಾಗೆ ದುಡಿಯುತ್ತಿದ್ದೇನೆ. ಅಪ್ಪನ ಜೊತೆಗೆ ಸೆಂಟ್ರಿಂಗ್ ಕೆಲಸಕ್ಕೆ ಹೋಗ್ತಾ ಇದ್ದೇನೆ. ಇದೇನು ಇಷ್ಟು ಕಲಿತು ಈ ಕೆಲಸಕ್ಕೆ ಹೋಗೋದಾ? ಈ ಪ್ರಶ್ನೆಯನ್ನು ಅಕ್ಕಪಕ್ಕದವರು ಅವ್ರು ಇವ್ರು ಅಂಥ ಸುಮಾರು ಜನ ಕೇಳಿದ್ದಾರೆ. ಕೇಳ್ತಾ ಇದ್ದಾರೆ. ಕೆಲವರಿಗೆ ನನ್ನ ನಡೆ ಆಶ್ಚರ್ಯ ತಂದಿರಬಹುದು. ಇನ್ನೂ ಕೆಲವರಿಗೆ ಅಪ್ಪನ ಹಾಗೆ ಇವನ ಹಣೆಬರಹವೂ ಹೀಗೆ ಅಂತಾ ಅನ್ನಿಸಿರಬಹುದು. ಆಡುವವರು ಆಡಿಕೊಳ್ತಾರೆ ಜೀವನದಲ್ಲಿ ಎಲ್ಲವನ್ನೂ ಆಲಿಸಬೇಕು. ಮನಸ್ಸನ್ನು ಪಾಲಿಸಬೇಕು ಅಲ್ವಾ?

ಅಪ್ಪನ ಜೊತೆ ಕೆಲಸ ಮಾಡುವಾಗ. ಬಿಸಿಲಿನ ಬೇಗೆಯಲ್ಲಿ ಕಾದ ಕಬ್ಬಿಣವನ್ನು ಎತ್ತಿ ಹಿಡಿದಾಗ ಕೈ ಸುಡುವಷ್ಟು ಕೈ ಉರಿದಿದೆ. ಬಿಸಿ ಕಬ್ಬಿಣದ ಶೀಟ್ ಅನ್ನು ಎತ್ತಿಕೊಟ್ಟಾಗ ಸೊಂಟ ನೋವಿನಿಂದ ಮರುದಿನ ಮೈ ಕೈ ಕಾಲು ನೋವಿನಲ್ಲಿ ಏಳಲಾಗದ ವಿಪರೀತ ತ್ರಾಣದಿಂದ ಸುಸ್ತಾಗಿ ಹೋಗಿತ್ತು. ಮೊದಲ ದಿನ ಹಾಗೆಯೇ ಎರಡನೇ ದಿನ ಪರವಾಗಿಲ್ಲ, ಮೂರನೇ ದಿನ ಓಕೆ. ಹೀಗೆ ಮುಂದುವೆರದು ಈಗ ಎರಡು ವಾರಕ್ಕೂ ಹೆಚ್ಚು ದಿನಗಳಾಗಿವೆ. ಸುಸ್ತು ಅಭ್ಯಾಸವಾಗಿ ಬಿಟ್ಟಿದೆ. ಮಧ್ಯಾಹ್ನ ಬುತ್ತಿಯಿಂದ ಎರಡು ತುತ್ತು ತಿಂದು ಹತ್ತು ನಿಮಿಷ ಮಲಗುವ ನಿದ್ದೆ ನಿಜಕ್ಕೂ ವಿವರಿಸಲಾಗದ ನೆಮ್ಮದಿ.

ಕಳೆದ ಮೂರು ವಾರಗಳಿಂದ ಸೆಂಟ್ರಿಂಗ್ ಕೆಲಸಕ್ಕೆ ಹೋಗಿದ್ದೇನೆ, ಪೈಂಟಿಂಗ್ ಕೆಲಸಕ್ಕೂ ಹೋಗಿದ್ದೇನೆ. ಎರಡು ಮೂರು ವಾರಗಳಲ್ಲಿ ದುಡಿದದ್ದು ಹತ್ರ ಹತ್ರ ಹತ್ತು ಸಾವಿರ. ಖುಷಿಯಿದೆ, ನೆಮ್ಮದಿಯಿದೆ. ಕೆಲಸ ಯಾವುದಾದ್ರೂ ಏನು ಕನಸು ನನಸಾಗುವವರೆಗೆ ಕೈಕಟ್ಟಿ ಮನೆಯೊಳಗೆ ಕೂತುಕೊಂಡರೆ ಹಣ ಆಕಾಶದಿಂದ ಬೀಳಲ್ಲ. ಅದಕ್ಕಾಗಿ ದುಡಿಬೇಕು, ರಕ್ತ ಬೆವರು ಮಣ್ಣಲ್ಲಿ ಸೇರಿ ದುಡಿಬೇಕು.

ಅಂದಹಾಗೆ ಇವತ್ತು ಸಂಜೆ ಸ್ವಲ್ಪ ಬಿಡವು ಸಿಕ್ಕಿತು. ಹೇರ್ ಕಟ್ ಮಾಡಿದೆ, ಅಪ್ಪನಿಗಾಗಿ ಚಪ್ಪಲಿ, ನನ್ಗೊಂದು ಜೋಡಿ ಚಪ್ಪಲಿ ತಕ್ಕೊಂಡೆ. ನಾಳೆಯೂ ಕೆಲಸ. ದುಡ್ಡು ಜವಾಬ್ದಾರಿಯನ್ನು ಹೆಚ್ಚಿಸಿದೆ. ಬ್ಯಾಂಕ್ ನಲ್ಲಿ ಕೂಡಿ ಇಡ್ಬೇಕು. ಅಮ್ಮನಿಗೆ ಕೊಡಬೇಕು. ನೆಮ್ಮದಿಯ ನಿದ್ದೆ ಹೊಡಿಬೇಕು..

‍ಲೇಖಕರು Avadhi Admin

September 23, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

 1. Sumangala GM

  ಪ್ರಿಯ ಸುಹಾನ್ ಅವರೆ… ನಿಮ್ಮ ಬರಹ ಒಂಥರದ ನೆಮ್ಮದಿ ಎನ್ನಿಸ್ತು. ನಿಜ, ನಾವೆಲ್ಲ ಶ್ರಮ ಜೀವನವ ಆಚೆ ದಬ್ಬಿ, ಕುರ್ಚಿಯಲ್ಲಿ ಕೂತು ಮಾಡುವ ಕೆಲಸವೇ ತುಂಬಾ ಶ್ರೇಷ್ಟ ಎಂಬ ವ್ಯಸನಕ್ಕೆ ಬಿದ್ದಿದ್ದೇವೆ… ನನ್ನನ್ನೂ ಸೇರಿಸಿಕೊಂಡೇ ಈ ಮಾತು ಹೇಳುತ್ತಿರುವೆ. ನಿಮ್ಮ ಬಗ್ಗೆ ತುಂಬ ಮೆಚ್ಚಿಕೆಯೂ ಅನ್ನಿಸಿತು. ನಿಜ, ಕೆಲಸ ಯಾವುದಾದರೂ, ಅದನ್ನು ಮಾಡುತ್ತಿರುವ ಪ್ರಕ್ರಿಯೆಯಲ್ಲಿ ತುಸುವಾದರೂ ಸಂತಸ ದಕ್ಕಿಸಿಕೊಳ್ಳುವಂತಾದರೆ ಅದೇ ಅತ್ಯುತ್ತಮ ಕೆಲಸ. ಹೀಗೆಯೇ ಬರೆಯುತ್ತಿರಿ ಮತ್ತು ಮನಕ್ಕೆ ಹಿತವೆನ್ನಿಸುವ ಕೆಲಸ ಮಾಡುತ್ತಿರಿ ಎಂಬ ಹಾರೈಕೆ ನನ್ನದು…!

  ಪ್ರತಿಕ್ರಿಯೆ
  • Suhan

   ಧನ್ಯವಾದಗಳು ಸರ್.. ಈಗ ಉದಯವಾಣಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಅದಕ್ಕೆ ಕಾರಣ ಇದೇ ಬರಹ..

   ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: