ಬಾಲ್ಯವನ್ನು ದಿಟ್ಟಿಸಿದ ಹೊಸ ಬಗೆಯ ಕವಿತೆಗಳು.
ಸೋಮು ರೆಡ್ಡಿ
ಮನುಷ್ಯನ ಜೀವನದಲ್ಲಿ ಕಳೆದು ಹೋದ ಬಾಲ್ಯದ ದಿನಗಳು ಯಾವತ್ತಿಗೂ ಮರಳಲಾರವು. ಬೇಕೆಂದಾಗ ಆ ದಿನಗಳನ್ನು ನೆನಪಿಸಕೊಳ್ಳಬಹುದೇ ವಿನಃ ಅದರಂತೆ ಬದುಕಲಾಗುವುದಿಲ್ಲ. ಬಾಲ್ಯವೆಂದರೆ ಬರೀ ನೆನಪು ಮಾತ್ರ. ಕೆಲವು ನೆನಪುಗಳು ಆಗಾಗ ನೋವು ನೀಡಿದರೆ, ಕೆಲ ಮಧುರವಾದ ನೆನಪುಗಳು ಸದಾ ಹಚ್ಚ ಹಸಿರಾಗಿ ಮನದಲ್ಲಿ ಉಳಿದುಕೊಂಡು ಬಿಡುತ್ತವೆ. ಬಾಲ್ಯದ ಆ ದಿನಗಳು ಸವಿನೆನಪುಗಳ ಸುಂದರ ತೋಟ. ನೆನೆದಷ್ಟು ಮುಗಿಯದ, ಸವೆಯದ, ಮಧುರವಾದ ಪಯಣ, ಕಾರಣವೇ ಇಲ್ಲದ ನಲಿವು, ಒಲವು ಚಿಕ್ಕ ಚಿಕ್ಕ ಕಾರಣಕ್ಕೂ ಸಂಭ್ರಮಿಸಿದ್ದೇ ಗೆಲುವು. ಅದೊಂದು ಚಂದದ ಮುಗ್ದತೆಯ ಬಾಳಿನ ಪಯಣ. ಹೀಗೆ ನೋವು-ನಲಿವಿನ ತಮ್ಮ ಮಿಶ್ರ ಅನುಭವಗಳನ್ನು ಕವಿ ಸಿದ್ರಾಮ್ ಪಾಟೀಲ್ ‘ಕೆಂಪು ದಿಣ್ಣೆಯ ಕವಿತೆಗಳು’ ಎಂಬ ಕೃತಿಯ ಮೂಲಕ ತೆರೆದಿಟ್ಟಿದ್ದಾರೆ.
ಕೆಂಪು ದಿಣ್ಣೆ ಎಂಬ ಈ ವಿಶಿಷ್ಟವಾದ ಶೀರ್ಷಿಕೆ ಕೇವಲ ಇಲ್ಲಿ ರೂಪಕವಾಗಿ ಕಾಣಿಸುವುದಿಲ್ಲ. ಕೆಂಪು ದಿಣ್ಣೆಯನ್ನು ಕವಿಯು ತನ್ನೂರಿನ ಪ್ರಭಾವಳಿಯಂತೆ ಕಂಡು ಅಲ್ಲಿಂದಲೇ ಊರಿನ ಒಡಲನ್ನು ದಿಟ್ಟಿಸಿ ಜನರ ಬದುಕಿನ ಎಲ್ಲ ಬಗೆಯ ಬವಣೆಗಳನ್ನು, ಅಲ್ಲಿನ ಹಿರಿಮೆ, ಹೊಳವು, ಚೆಲವು, ವೈಭವ ಹೀಗೆ ಎಲ್ಲವನ್ನೂ ತಮ್ಮ ಕವಿತೆಯಲ್ಲಿ ಸೊಗಸಾಗಿ ಹಿಡಿದಿಟ್ಟಿದ್ದಾರೆ. ಕವಿಯು ಖಾಸ ಬದುಕಿನಲ್ಲಿ ಸರಳ ಮತ್ತು ಸಹಜತೆಯನ್ನು ಆಶ್ರಯಿಸಿದ್ದರಿಂದ ಕೆಲ ಕವಿತೆಗಳು ಆಚಾರ, ವಿಚಾರ, ಸಂಪ್ರದಾಯಗಳಾಚೆಗೂ ಬದುಕಿನ ಸಾತ್ವಿಕತೆ ತೋರಿಸಿ ಕೊಡುತ್ತವೆ. ಎಲ್ಲಕ್ಕಿಂತಲೂ ಮಿಗಿಲಾಗಿ ತಮ್ಮ ಬಾಲ್ಯದ ಅನುಭವಗಳನ್ನು ಮೆಲುಕು ಹಾಕುತ್ತಾ ಆಗಿನ ಬದುಕನ್ನು ವಾಸ್ತವಕ್ಕೆ ತಂದು ನಿಲ್ಲಿಸಿ ಒಳಿತು, ಕೆಡಕುಗಳಿಗೆ ತಾರ್ಕಿಕ ಸ್ಪರ್ಶ ಸೋಕಿಸುತ್ತಾರೆ. ಇಲ್ಲಿನ ಕವಿತೆಗಳು ಹೆಚ್ಚಾಗಿ ಪ್ರಾದೇಶಿಕೆ ಭಾಷೆಯಿಂದ ರಚಿಸಲ್ಪಟ್ಟಿದ್ದರಿಂದ ಕಾವ್ಯದ ಓದು ಹೆಚ್ಚುಗಾರಿಕೆಯಂತೆ ಕಂಡಿದೆ.
ಕನ್ನಡ ಕಾವ್ಯ ಲೋಕದ ಪರಂಪರೆಯನ್ನು ನಾವು ಸೂಕ್ಷ್ಮವಾಗಿ ಗಮನಿಸಿದಾಗ ಅವ್ಯಾಹತವಾಗಿ ಹರಿದು ಬಂದ ಕಾವ್ಯ ಪ್ರವಾಹವು ನಮ್ಮನ್ನು ಬೆರಗಾಗಿಸದೇ ಇರದು. ಅಂದಿನಂತೆ ಇಂದಿಗೂ ಅನೇಕರು ತಮ್ಮ ಕಾವ್ಯದ ಮೂಲಕ ಸಾಹಿತ್ಯಕ್ಕೆ ಲಗ್ಗೆಯಿಡುವವರ ಸಂಖ್ಯೆ ಕಡಿಮೆಯೇನಿಲ್ಲ. ಆದರೆ ಹೊಸಬರ ಕಾವ್ಯಗಳು ಓದುಗ ಹೃದಯಕ್ಕೆ ಮುಟ್ಟುವುದಿಲ್ಲ ಎಂಬ ಅಪಸ್ವರ ಕೇಳಿ ಬರುತ್ತಿರುವುದೇ ಇಂದಿನ ವಿಪರ್ಯಾಸ. ಏತನ್ಮಧ್ಯೆ ಸಿದ್ರಾಮ ಪಾಟೀಲರ ಕವಿತೆಗಳನ್ನು ಓದಿದಾಗ ಅದು ಸುಳ್ಳು ಅನ್ನಿಸಿದ್ದಂತೂ ಸುಳ್ಳಲ್ಲ. ಇಂದಿನ ರಾಜಕೀಯ ವ್ಯವಸ್ಥೆ, ಸಮಾಜದ ತರತಮ, ಧರ್ಮದ ಗುದ್ದಾಟ, ಹದಗೆಟ್ಟ ಆರ್ಥಿಕ ಸ್ಥಿತಿ, ಸ್ತ್ರೀ ಸಂವೇದನೆ, ವಾಸ್ತವದ ಬಿಸಿ ಬಿಸಿ ಚರ್ಚೆ ಹೀಗೆ ಇನ್ನಿತರ ಅಂಶಗಳನ್ನಿಟ್ಟುಕೊಂಡು ಸಿದ್ರಾಮ್ ಅವರ ಕವಿತೆಗಳು ಹುಟ್ಟಿಕೊಂಡಿದ್ದರೆ ಓದುಗನಿಗೆ ಈ ಕೆಂಪು ದಿಣ್ಣೆ ಇನ್ನಷ್ಟು ರುಚಿಸುತ್ತಿತ್ತು.
0 ಪ್ರತಿಕ್ರಿಯೆಗಳು