– ರವಿ ಮೂರ್ನಾಡು
ಕೃಷ್ಣಾ …
ನಿನ್ನೊಡನಿದ್ದ ಹದಿನಾರು ಸಾವಿರ ಹೆಂಡತಿಯರು
ಏನಾದರು ಗೊತ್ತಾ ?
ನಿನ್ನಲಂಕೃತ ಶಯ್ಯಾಗಾರದಲ್ಲಿ
ಒಬ್ಬರಿಗೊಬ್ಬರು ಮೈಮರೆತಿದ್ದವರು
ಸದ್ದಿಲ್ಲದೆ ಮುಂಜಾನೆ ಮಂಚದಿಂದೆದ್ದು
ನದಿಯ ದಡಕೆ ಸ್ನಾನಕ್ಕೆಂದು ಹೋದವರು
ಹಿಂತಿರುಗಿ ಬರಲಿಲ್ಲ ಎಂಬುವುದು
ಈಗ ದೊಡ್ಡ ಸುದ್ದಿ ..!
ಅವರೆಲ್ಲಾ ಈ ವಿಶಾಲ
ಶಾಡ್ವಲದಡಿಯಲ್ಲಿ
ಎದುರಿಗಿದ್ದ ಬೆಟ್ಟದ ತಪ್ಪಲಿನಲಿ
ಕಾನನದ ಕವಲು ದಾರಿಯಲಿ
ವೈಯ್ಯಾರದಲಿ ಹೂ ಕುಯ್ಯಲು ಹೋಗಿ
ದಿಕ್ಕು ತಪ್ಪಿದ್ದಾರೆ !
ದಿಕ್ಕು ತಪ್ಪಿದವರೆಲ್ಲಾ
ಶಹರಿನ ಒಳ ಹೊಕ್ಕು
ಮಹಡಿ ಮನೆಗಳ ಕೋಣೆ ಕೋಣೆಯಲಿ
ಹಂಚಿ ಹೋಗಿದ್ದಾರೆ ಕೃಷ್ಣಾ… !
ಒಂದಷ್ಟು ಜನ
ಗಲ್ಲಿ ಗಲ್ಲಿಯಲಿ ಕಣ್ಣು ಹಾಯಿಸಿ
ಹರಕು ಚಿಂದಿಯಾಳಗೆ ಕೈ ಬೀಸಿ
ಮುರುಕು ಛಾವಡಿ ಕೆಳಗೆ ಚಾಪೆಯಾಗಿ
ಕತ್ತಲೆಯ ಮುಸುಕಿನೊಳಗೆ
ನಿದ್ರಿಸುತ್ತಿದ್ದಾರೆ ಕೃಷ್ಣಾ …
ತುಳಿದು ಬಿಟ್ಟವರ ಕಾಲಿನಡಿ ಧೂಳಾಗಿದ್ದಾರೆ…!
ಇನ್ನೊಂದಷ್ಟು ಜನ..
ನಿನ್ನ ಸೇವಕರ ಅಡಿಯಾಳಾಗಿ ಬಿಕ್ಕಳಿಸಿ
ಅದುಮಿಟ್ಟ ಆಸೆಗಳಿಗೆ ಬಣ್ಣ ಹಚ್ಚಿ
ಬೂದಿ ಮುಚ್ಚಿದ ನೋವಿನ ಕೆಂಡಕ್ಕೆ
ಗಾಳಿ ಹಾಯಿಸುತ್ತಿದ್ದಾರೆ ಕೃಷ್ಣಾ …!
ಮನೆ- ಮನಗಳ ಮೂಲೆಯಲಿ
ಉರಿವ ಬೆಂಕಿ ಒಲೆಯಾಗಿದ್ದಾರೆ…!
ಅಳಿದುಳಿದ ಅಷ್ಟೊಂದು ಜನ…
ಪರದೆಯ ಮೇಲೆ ಪರದೆಯೆತ್ತಿ
ನರ್ತಕಿಯರಾಗಿ ಬೆತ್ತಲೆಯಾಗುತ್ತಿದ್ದಾರೆ ಕೃಷ್ಣಾ …
ಕೆಂಪು ದೀಪದ ಮಂದ ಬೆಳಕಿನಡಿ
ಮಿಣುಕು ಬೆಳಕುಗಳಾಗಿ ಉರಿಯುತ್ತಿದ್ದಾರೆ…!
ಕೃಷ್ಣಾ … ನಿನ್ನ ಹೆಂಡತಿಯರೆಲ್ಲಾ
ಕೆಲವರು ಬ್ರಾಹ್ಮಣರಾದರು !
ಕೆಲವರು ಹೊಲತಿಯರಾದರು !
ಕೆಲವರು ಜಾತಿ-ಜಾತಿಯ ಹಣೆಪಟ್ಟಿಯಲಿ
ಅವರಿವರಿಗೆ ಭಾರವಾದರು !
ಕಾಮದ ಜಿಡ್ಡಿಗೆ ಜಡ್ಡುಗಟ್ಟಿ
ಜಾತಿಯನು ಮೀರಿ
ಎಲ್ಲರಿಗೂ ಬೇಕಾದರು …!
]]>






ಕಾಮದ ಜಿಡ್ಡಿಗೆ ಜಡ್ಡುಗಟ್ಟಿ
ಜಾತಿಯನು ಮೀರಿ
ಎಲ್ಲರಿಗೂ ಬೇಕಾದರು …!
tumbaa athapurnavaagide dost….
ಮಂಜಾನೆಗೇ ಒಂದು ಒಳ್ಳೆಯ ಕವಿತೆಯನ್ನು ಓದಿದ ಖುಷಿಯಿದೆ… ಸುಂದರ ಕವಿತೆಯಲ್ಲಿ ಅಷ್ಟೇ ಗಟ್ಟಿಯಾಗಿ ಆಕ್ರೋಶ ಭಿತ್ತರವಾಗಿದೆ…
ವಿಷಯದ ವಿಷದೊಳಗೆ ಸಿಲುಕಿದ ಪುರುಷ ಪ್ರಪಂಚದಲ್ಲಿ ನರಳುವ ಅಸಂಖ್ಯ ಗೋಪಿಕೆಯರ ಕಣ್ಣೀರಿಗೆ ಆ ನಂದ ನಂದನನ ಅಗಾಧ ಪ್ರೀತಿಯ ಹಸ್ತವೇ ಬೇಕಾಗಿರುವುದು.. ದುರಂತವೆಂದರೆ, ಇಂದಿಗೂ ನಾವುಗಳು.. ಕೃಷ್ಣ ಎಂದರೆ ಸ್ತ್ರೀಲೋಲ, ರಸಿಕ ಶಿಖಾಮಣಿ ಎಂದೇ ಬಿಂಬಿಸುತ್ತೇವೆ.. ಅವನೊಳಗಿರುವ ಜ್ನ್ಯಾನಿಯನ್ನು ಹುಡುಕುವ ಕಣ್ಣುಗಳನ್ನು ಅವನಿನ್ನೂ ನಮಗೆ ಕೊಟ್ಟಿಲ್ಲ…
ನಿಜಕ್ಕೂ ಇಷ್ಟವಾದ ಕವಿತೆ.. ಕಲಿಯುಗ ಬಂತೆಂದು ಕೈ ಕೊಡವಿ ಎದ್ದು ಹೋದ ಕೃಷ್ಣನಿಗೆ ಅವನ ಮರೆವನ್ನು ತಿಳಿಸುವ ವಾಸ್ತವ ವಿಷಯ ಅರುಹುವ (ಎಚ್ಚರಿಸುವ) ಶೈಲಿ ತುಂಬಾ ಸರಳ ಸುಂದರವಾಗಿದೆ.. ನಿಮಗೆ ಅಭಿನಂದನೆಗಳು ಸರ್..
ಅಧ್ಬುತ ಕವಿತೆ ಸರ್ . ತುಂಬಾ ಇಷ್ಟವಾಯಿತು
ಕವನದಲ್ಲಿನ ಹತಾಶೆಯ ಭಾವ ಮುಖ್ಯವಾಗಿ ಗಮನಸೆಳೆಯುತ್ತದೆ. ಕವಿಯು ತಾ ಕೃಷ್ಣನಿಗೆ ಅರುಹುತ್ತಿದ್ದರೂ, ತನ್ನವರೆಂದುಕೊಂಡವರು ತನ್ನನ್ನು ಅರ್ಧನೀರಿನಲಿ ಕೈ ಬಿಟ್ಟರೆಂದೆನಿಸಿಕೊಂಡು ಊಹಿಸಿ, ಆ ಕಳೆದುಕೊಂಡ ಹತಾಶೆಯಲಿ ಬರೆದಿರುವಂತೆ ಭಾಸವಾಯ್ತು.
ಹೀಗೆ ಬಹುಷಃ ಪ್ರತೀಕಗಳಲ್ಲಿ ಕವಿತೆ ಕಟ್ಟುವಲ್ಲಿ ರವಿ ಮೂರ್ನಾಡರು ಎತ್ತಿದ ಕೈ. ನನ್ನ ಭಾವಕ್ಕೆ ಸಿಕ್ಕ ಅರ್ಥದಲ್ಲಿ ಅರುಹಿದ್ದೇನೆ. ನನ್ನ ಊಹೆ ತಪ್ಪಾದರೂ ಆದೀತು.
ಇಡೀ ಜಗವ ಕಾಪಾಡಿದವ
ತನ್ನ ಹೆಂಡತಿಯರನೇಕೆ ಮಧ್ಯೆ ಕೈಬಿಟ್ಟನೆಂಬ
ಹತಾಶೆಯ ಪ್ರಶ್ನೆಯೇ?
ಚೆನ್ನಾಗಿದೆ.
ಸಾವಿರಕ್ಕೊಂದು ಕವನ ಇದು.. ಕವನಕ್ಕೆ ತನ್ನದೇ ಆದ ವಿಶಿಷ್ಟವಾದ ಆಯಾಮವಿದೆ.. ಇಂತಹ ಒಂದು ಪರಿಕಲ್ಪನೆಯನ್ನು ಓದುಗರ ಮುಂದಿಟ್ಟ ಕವಿಮನಕ್ಕೆ ನನ್ನ ಸಾಷ್ಟಾಂಗ ಪ್ರಣಾಮಗಳು.. ನಿತ್ಯ ಸುಮಂಗಲಿಯರು ಮತ್ತು ದೌರ್ಜನ್ಯಕ್ಕೊಳಗಾಗುತ್ತಿರುವ ಹೆಣ್ಣುಮಕ್ಕಳ ಅಳಲನ್ನು ತೆರೆದಿಟ್ಟ ಬಗೆ ವಿಶಿಷ್ಟವಾಗಿದ್ದು ಕೃಷ್ಣನೂ ಒಮ್ಮೆ ಯೋಚಿಸಿಯಾನು.. ಅವರ ಅಳಲಿಗೆ ಸಾಂತ್ವಾನವಾದಾನು.. ಕವಿತೆಯ ಒಡಲು ಮತ್ತು ಗಟ್ಟಿತನ ಮೆಚ್ಚುಗೆಯಾಯ್ತು..
ನನಗೆ ಮೊದಲಿಂದಲೂ ಕಾಡಿದ ಪ್ರಶ್ನೆ, ಅವನ ಹೆಂಡತಿಯರು ಏನಾದರೂ ಅಂತ! ಈಗ ನನಗೂ ಉತ್ತರ ಸಿಕ್ಕಿತು.
ಒಂದು ವಾಸ್ತವಕ್ಕೆ ಕನ್ನಡಿ ಹಿಡಿದಂತಿರುವ ತೀವ್ರ ವಿಷಾದದ ಕವಿತೆ.
ಸರಳವಾಗಿ ಮನ ಗೆದ್ದಿತು.