ಕೃಷ್ಣಮೂರ್ತಿ ಬಿಳಿಗೆರೆ ಲಹರಿ- ಕಬ್ಬಿಣದ ಬಕೇಟಿನ ಜೊತೆಗೆ ಶಿವಾಯ ನಮಹ…

ಕೃಷ್ಣಮೂರ್ತಿ ಬಿಳಿಗೆರೆ 

ಏಳು ಎಂಟನೇ ವರ್ಷದಿಂದ ಶುರುವಿಟ್ಟು ಸಿಕ್ಕ ಸಿಕ್ಕ ಗುಂಡಿ ಗೊಟರುಗಳಲ್ಲಿ ಮೊದಲು ನೆಲೀಜು ಆಡಿ, ನಂತರ ಕೆರೆ ಕಟ್ಟೆಗಿಳಿದು ಬಗ್ಗಡದಲ್ಲಿ ಒದ್ದಾಡಿ, ಸುಮ್ಮನೆ ನೀರಿಗಿಳಿದು ಸಲೀಸಾಗಿ ಈಜುವ ಎಮ್ಮೆ ಬಾಲ ಹಿಡಿದು ಆಳವಾದ ನೀರಿಗಿಳಿದು ದೈರ್ಯ ಸಂಪಾದಿಸಿ, ಹಾಲವಾಣದ ದಡಿ, ಎರಡು ಜಿಡ್ಡಿ ಕಾಯಿ, ಬಾಳೆ ದಿಂಡುಗಳೇ ಮುಂತಾದ ದೇಸಿ ಜೀವ ರಕ್ಷಕಗಳನ್ನು ಯದ್ವಾ ತದ್ವಾ ಬಳಸಿ ಮೂರು ನಾಲ್ಕು ಬಾರಿ ಸಾವಿನ ಸಂದಿಯಿಂದ ತಪ್ಪಿಸಿಕೊಂಡು ಕೊನೆಗೂ ಸುಮಾರು ಐದಾರು ವರ್ಷಗಳ ಶತಪ್ರಯತ್ನ ಮಾಡಿ ಈಜು ಕಲಿತದ್ದು. ಇದು ಹಳ್ಳಿಗಳಲ್ಲಿನ ಎಲ್ಲರ ಸಹಜ ಈಜುಯಾನ. ಇದರಲ್ಲಿ ಕೆಲವರು ಮುಳುಗಿ ನಕ್ಷತ್ರವಾಗಿರುವುದು ನಿಜ. 

ಈಜು ಕಲಿಯುವವರೆಗೂ ಒಂದು ತರವಾದರೆ ಕಲಿತ ಮೇಲೆ ಇನ್ನೊಂದು ತರ. ನೀರಿನಲ್ಲಿ ತೇಲುವ, ನೀರಿನ ಮೇಲೆ ನಡೆಯುವ, ನೀರಿನ ಆಳ ಅಳೆಯುವ ಹುಮ್ಮಸ್ಸು ಹೆಡೆಯಾಡುತ್ತದೆ. ನೀರೊಳಗೆ ಮುಳುಗಿ ಆಡುವ ಆಟವನ್ನು ಆಡುವಂತೆ ನೀರೇ ಒತ್ತಾಯಿಸುತ್ತದೆ. ಆಗ ಸ್ವಾಭಿಮಾನಿಯಾದ ಯಾರೂ ಸುಮ್ಮನಿರುವುದು ಸಾಧ್ಯವಿಲ್ಲ.

ಇಪ್ಪತ್ತೈದು ಮುವತ್ತು ಅಡಿ ಬಾವಿಗೆ ನೆಗೆದು ತಳದಿಂದ ಮಣ್ಣು ತರುವವರು, ಪ್ರೇಕ್ಷಕರೊಬ್ಬರು ಮೇಲಿನಿಂದ ಬಾವಿಗೆ ಎಸೆದ ಎಂಟಾಣೆ ನಾಣ್ಯವನ್ನು ತಳ ಸೇರುವುದರೊಳಗೆ ಹಿಡಿದು ಅದನ್ನು ಟ್ರೋಫಿಯಂತೆ ಎತ್ತಿ ಹಿಡಿಯುವವರ ಘನತೆ ಹೆಚ್ಚುತ್ತದೆ. ಈ ಘನವೆತ್ತ ಕೆಲಸಗಳೆರಡರಲ್ಲೂ ನಾನು ಪಾತ್ರ ವಹಿಸುತ್ತಿದ್ದೆ. ನೀರು ನೆಲದಷ್ಟೇ ಸಲೀಸು ಎನಿಸುವಷ್ಟು ಅಹಂ ಬೆಳೆದ ಪರಿಣಾಮವೇ ಕಬ್ಬಿಣದ ಬಕೇಟಿನ ಜೊತೆ ಶಿವಾಯನಮಹ ಆಗುವ ಅಪಾಯಕ್ಕೆ ಕಾರಣವಾದದ್ದು. 

ಅದು ಆದದ್ದು ಹೀಗೆ. ತುಮಕೂರಿನ ಸಿದ್ದಗಂಗಾ ಬಡಾವಣೆಯಲ್ಲಿ ನಾವು ಮೂರು ಜನ ಸ್ನೇಹಿತರು ಡಿಗ್ರಿ ವಿದ್ಯಾಭ್ಯಾಸದ ಸಲುವಾಗಿ ತಗಡಿನ ಔಟ್‌ ಹೌಸಿನಲ್ಲಿ ವಾಸವಾಗಿದ್ದೆವು. ಅದಕ್ಕೆ ಹೊಂದಿಕೊಂಡಂತೆ ಒಂದು ಸೇದೋ ಬಾವಿಯಿತ್ತು. ಮನೆಕಟ್ಟಲು ಓನರ್ರು ತೋಡಿಸಿದ್ದ ಬಾವಿಯದು. ದಿಢೀರನೆ ಬೋರುವೆಲ್‌ ಕೊರೆಸಿ ನೀರೆತ್ತಿ ಮನೆಕಟ್ಟುವ ಕಾಲವಿನ್ನು ಜನಜನಿತವಾಗಿರಲಿಲ್ಲ. ನಾವು ಆ ಬಾವಿಯ ನೀರನ್ನು ಅದಕು ಇದಕು ಯದಕು ಬಳಸುತ್ತಿದ್ದೆವು. 

ಓನರ್ರು ತುಂಬಾ ಒಳ್ಳೆಯ ಜನ. ನಾವು ನೀರು ಸೇದಿಕೊಳ್ಳಲು ಪಡುತ್ತಿದ್ದ ಕಷ್ಟ ನೋಡುತ್ತಿದ್ದರು. ಆ ನಮ್ಮ ಪ್ಲಾಸ್ಟೀಕ್‌ ಬಕೇಟ್‌ ಏನು ಮಾಡಿದರೂ ಮುಳುಗುತ್ತಿರಲಿಲ್ಲ ನಾವು ಬಿಡುತ್ತರಲಿಲ್ಲ, ಗುಂಗಿಸಿ ಗುಂಗಿಸಿ ಜಗ್ಗುತ್ತಿದ್ದೆವು. ಹೀಗೆ ಮಾಡಿ ಒಂದು ಬಕೆಟ್ ದಡಕ್ಕೆ ತಗುಲಿ ಒಡೆದು ಹೋಗಲು, ಆಗ ಓನರ್‌ ಕರುಣಿಸಿದ್ದೇ ಈ ಕಬ್ಬಿಣದ ಬಕೆಟ್.‌ ಅಂದಿನಿಂದ ನಾವು ಆ ಬಕೆಟ್‌ ಯಾವ ತಕರಾರು ಇಲ್ಲದೆ ನಮಗೆ ನೀರನ್ನು ಮೊಗೆಮೊಗೆದು ಕೊಡತೊಡಗಿತು, ನಾವೂ ಧಾರಾಳವಾಗಿ ನೀರು ಸೇದಿಕೊಂಡು ಬಕೇಟುಗಟ್ಟಲೆ ಸ್ನಾನ ಮಾಡತೊಡಗಿದೆವು. ಒಂದು ಕಾಲದಲ್ಲಿ ಗದ್ದೆ ಬಯಲಾಗಿದ್ದ ತಗ್ಗು ಪ್ರದೇಶ ಈ ಬಡಾವಣೆ. ಮಳೆಗಾಲದಲ್ಲಿ ಕೈಗೆಟಕುವಂತೆ ಈ ಬಾವಿಗೆ ನೀರು ಬರುತ್ತಿತ್ತು. 

ಹೀಗಿರಲಾಗಿ ನನ್ನ ಗೆಳೆಯರಲ್ಲೊಬ್ಬ ಅಚಾನಕ್ಕಾಗಿ ಬಾವಿಯ ಕಟ್ಟೆಯ ಮೇಲೆ ಹಗ್ಗ ಬಿಗಿಸಿಕೊಳ್ಳಲು ಕಾಯುತ್ತಿದ್ದ ಸದರಿ ಕಬ್ಬಿಣದ ಬಕೇಟನ್ನು ಬಾವಿಯೊಳಗೆ ಕೆಡವಿದ. ಅದು ಯಾವ ಮಮಕಾರವೂ ಇಲ್ಲದೆ ಸಲೀಸಾಗಿ ಇವನ ಕಣ್ಣಮುಂದೆಯೇ ಮುಳುಗಿ ಕಾಣೆಯಾಯಿತು, ಓನರ್‌ ಕೂಡ  ಈ ದೃಶ್ಯದ ಪ್ರತ್ಯಕ್ಷದರ್ಶಿಯಾದದ್ದು ಪರಿಸ್ಥಿತಿ ಇದ್ದಕ್ಕಿದ್ದಂತೆ ಬಿಗಡಾಯಿಸಲು ಕಾರಣವಾಯಿತು. ಇದುವರೆವಿಗೂ ಆ ಕಬ್ಬಿಣದ ಬಕೇಟಿನ ಬಗೆಗೆ ನಿರ್ಮೋಹಿಗಳಾಗಿದ್ದ ಓನರ್‌ ದಿಢೀರನೆ ಆ ಬಕೇಟು ಚಿನ್ನದ್ದೇನೋ ಎನ್ನುವಂತೆ ಭಾವಿಸಿ ವ್ಯಾಮೋಹಿಸಿತೊಡಗಿದರು ಅಷ್ಟೇ ಅಲ್ಲ, ನಾವು ಮದುವೆಯಾದ ಹೊಸದರಲ್ಲಿ ಕೊಂಡದ್ದೆಂದೂ, ಅದು ಈಗ ಬೇಕೇ ಬೇಕೆಂದು ಒತ್ತಾಯಿಸತೊಡಗಿದರು. ಅವರ ಆಸೆ ಹೊಸ ಬಕೇಟು ತರಲಿ ಎಂಬುದಾಗಿದ್ದರೆ ಅದರಲ್ಲಿ ಆಶ್ಚರ್ಯವೇನು. ಆದರೆ ನಮ್ಮ ಸ್ಥಿತಿ ಅದಕ್ಕೆ ಪೂರಕವಾಗಿರಲಿಲ್ಲ.

ಗುಜರಿ ಅಂಗಡಿಯಲ್ಲಿ, ಅದಕ್ಕೂ ಮಿಗಿಲಾಗಿ ಆ ಬಡಾವಣೆಯ ಮನೆಗಳ ಕಾಂಪೌಂಡುಗಳಲ್ಲಿ ಇದೇ ತೆರೆನಾದ ಲಡಕಾಸಿ ಬಕೇಟಿಗಾಗಿ ತಪಾಸಣೆ ನಡೆಯಿತು. ಆ ಪ್ರಯತ್ನದಲ್ಲಿ ನಾವು ವಿಫಲರಾದೆವು. ಕೊನೆಗುಳಿದ ಮಾರ್ಗ ಬಾವಿಯೊಳಗೆ ಮುಳುಗಿ ಆ ಬಕೇಟನ್ನು ಎತ್ತಿ ತರುವುದು ಮಾತ್ರ. ಆ ನನ್ನ ತಪ್ಪಿತಸ್ಥ ಗೆಳೆಯನಿಗೆ ಈಜು ಬರುತ್ತಿರಲಿಲ್ಲವಾಗಿ ಅದರ ಹೊಣೆಗಾರಿಕೆ ನನ್ನ ಮೇಲೆ ಬಿತ್ತು. ಇದಕ್ಕೆ ಬೇರಾರು ಕಾರಣರಾಗದೆ, ಈಜು ಪಟುತ್ವದ ಬಗೆಗೆ ಕೊಚ್ಚಿಕೊಳ್ಳುತ್ತಿದ್ದ ನಾನೇ ಕಾರಣನಾಗಿದ್ದೆ. 

ಇಷ್ಟು ಹೊತ್ತಿಗೆ ಮೂರು ದಿನ ಕಳೆದಿತ್ತು. ಇನ್ನು ತಡಮಾಡುವಂತಿರಲಿಲ್ಲ. ತಡಮಾಡದೆ ಹಗ್ಗ ಕಟ್ಟಿಕೊಂಡು ಬಾವಿಗಿಳಿದೆ. ಅದು ಕೇವಲ ಹತ್ತು ಅಡಿ ಸುತ್ತಳತೆಯ ಬಾವಿಯಾಗಿತ್ತು. ಆಳ ಎಷ್ಟು ಎಂಬ ಅಂದಾಜಿರಲಿಲ್ಲ. ದಮ್ ಕಟ್ಟಿ ಮುಳುಗಿದೆ ಉಹುಂ ತಳ ಸಿಗಲಿಲ್ಲ. ಕಟ್ಟಿದ್ದ ದಮ್‌ ಸಾಕಾಗಲಿಲ್ಲ. ಮೇಲೆ ಬಂದೆ. ಓನರ್‌ ಮನೆಯವರು ಮತ್ತು ನನ್ನ ಗೆಳೆಯರು ಬಾವಿ ಕಟ್ಟೆಗೆ ಆತುಕೊಂಡು ಒಲಂಪಿಕ್‌ ಸ್ಪರ್ಧೆ ನೋಡುವವರಂತೆ ಕುತೂಲದಿಂದ ವೀಕ್ಷಿಸುತ್ತಿದ್ದರು. ‘ನೀರು ಸಖತ್‌ ಆಳ ಐತೆ’ ಎಂದೆ ನೀರನ್ನೆ ಬೆವರು ಒರೆಸಿಕೊಳ್ಳುವಂತೆ ಒರೆಸಿಕೊಳ್ಳುತ್ತಾ ಕೂಗಿಕೊಂಡೆ. ಅವರಿಗೆ ಆ ಕೂಗು ಪಿಳ್ಳೆ ನೆವದಂತೆ ಕೇಳಿಸಿರಬೇಕು.

ಮತ್ತೊಂಮ್ಮೆ ತುಸ ಜಾಸ್ತಿ ದಮ್‌ ಕಟ್ಟಿ ಮುಳುಗಿದೆ, ಈ ಸಲ ತಲೆ ಕೆಳಗೆ ಮಾಡಿ ಮಿಂಚಿನಂತೆ ಮುಳುಗಿದ್ದರಿಂದ ತಳವೇನೋ ಸಿಕ್ಕಿತು, ಬಕೇಟನ್ನು ಕೈವಶಮಾಡಿಕೊಳ್ಳಲು ರಾಪಾಡಿದೆ. ಯಾಕೋ ಬಾವಿಯೇ ನನ್ನನ್ನು ಕೈವಶಮಾಡಿಕೊಳ್ಳುತ್ತಿರುವಂತೆ ತೋರಿತು. ಬಕೇಟು ಕೈಗೆ ಸಿಕ್ಕುವುದಿರಲಿ ನಾನೇ ಬಾವಿಯಲ್ಲಿ ಬಂಧಿಯಾಗುತ್ತಿದ್ದೆ. ಒಳಗಿನ ಉಸಿರು ಮುಗಿಯುತ್ತಿತ್ತು. ನಾನು ಎಲ್ಲಿದ್ದೇನೆ ಎಂಬ ಸ್ಮೃತಿಯೂ ಕೈಕೊಡತೊಡಗಿತು. ಇನ್ನು ತಡಮಾಡುವಂತಿಲ್ಲವೆಂದು ಜೀವಭಯ ಪ್ರಜ್ಞೆ ಎಚ್ಚರಿಸಿತು. ಮೈಮುದುಡಿಕೊಂಡು ಮೇಲೆ ಬರಲು ಯತ್ನಿಸಿದೆ ಆಗಲಿಲ್ಲ. ಕಾಲು ತಲೆ ಎರಡೂ ಬಾವಿಯ ದಡಕ್ಕೆ ತಗುಲುತ್ತಿವೆ. ದೇಹ ಸಿಕ್ಕಿಕೊಂಡಂತಾಗಿ ಒದ್ದಾಡಿದೆ. ಒಮ್ಮೆ ಜಡಾಯಿಸಿ ತಳ ಒದ್ದು ನೇರವಾದೆ. ಅಂತೂ ಮೇಲೆ ಬಂದೆ. ಇದೆಲ್ಲಾ ಒಟ್ಟು ಮುವತ್ತು ಸೆಕೆಂಡಿನ ನಿಜ ನಾಟಕವಾಗಿತ್ತು.

ಸಿಕ್ತಾ ಸಿಕ್ತಾ, ಎಲ್ಲಿ ಬಕೇಟು, ಎಂಬ ಕೂಗು ಮೊಳಗುತ್ತಿದೆ. ನಾನು ಏನು ಎಂದೆ ಸತ್ತ ದನಿಯಲ್ಲಿ. 

ನನ್ನ ಪರಿಸ್ಥಿಗೆ ಕಾರಣವಾದದ್ದು ಹೀಗೆ. ಓನರ್‌ ಬಾವಿ ತೋಡುವಾಗ ಮೇಲೆ ಅಗಲವಾಗಿ ತೋಡಿಸಿದ್ದಾರೆ, ಕೆಳಕ್ಕೆಹೋದಂತೆ ಸಿದ್ದೇಮಣ್ಣು ಸಿಕ್ಕಿದ ಕಾರಣ ದಡ ಕುಸಿಯುವ ಭಯಕ್ಕೆ ಚಿಕ್ಕ ಸಿಮೆಂಟ್‌ ಬಳೆಗಳನ್ನು ಬಿಟ್ಟುಕೊಂಡು ಬಾವಿ ಆಳವಾಗಿಸಿದ್ದಾರೆ. ಅದು ನನಗೆ ಹೇಗೆ ಗೊತ್ತಾಗಬೇಕು, ಅದಕ್ಕೆ ನಾನು ಆ ಚಿಕ್ಕ ಸಿಮೆಂಟಿನ ಬಳೆಯಲ್ಲಿ ತಗಲಾಗಿಕೊಂಡು. ಕಬ್ಬಿಣದ ಬಕೇಟಿನ ಜೊತೆ ಶಿವಾಯನಮಹ ಆಗಬೇಕಾಗಿದ್ದ ಪರಿಸ್ಥಿತಿ ಎದುರಿಸಬೇಕಾಗಿ ಬಂದದ್ದು.

‍ಲೇಖಕರು Admin

December 15, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: