ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕುಸುಮಬಾಲೆ ಕಾಲಂ : ಸಿಂಪಲ್ಲಾಗೊಂದ್ ಚೆಡ್ಡಿ ಸ್ಟೋರಿ

ಪ್ರತೀವಾರ ಘನಗಂಭೀರವಾಗೇ ಯಾಕೆ ಬರೆಯಬೇಕು ಹೇಳಿ? ಅದಕ್ಕೇ ಈ ವಾರ “ಸಿಂಪಲ್ಲಾಗೊಂದ್ ಚೆಡ್ಡಿ ಸ್ಟೋರಿ” ಯೋಳ್ತೀನ್ ಕೇಳಿ.
“ ನಮ್ಮಕ್ಕ ನಿಮ್ಮೂರಿಗ್ ಮದ್ವೆ ಆಗ್ ಬಂದಾಗ ಈ ಊರ್ ಜನ ನ್ಯಾಯವಾಗ್ ಪಂಚೆನೇ ಉಟ್ಕತಿರ್ನಿಲ್ಲ. ಬರೀ ಚಡ್ಡೀಲೇ ತಿರುಗಾಡ್ತಿದ್ರು. ಇಡೀ ಊರ್ಲಿ ಯಾರನ್ ನೋಡಿದ್ರೂ ಬರೀ ಚಡ್ಡೀಯೇ. ಈಗೇನ್ ಆಯರಳ್ಳಿ ಜನ ಈ ತರ ಷೋಕಿ ಕಲ್ತ್ ಬುಟ್ರಲ್ಲಾ..” ಎಷ್ಟೋ ವರ್ಷದ ನಂತರ ನಮ್ಮೂರನ್ನ ಒಂದ್ ರೌಂಡ್ ಹಾಕಿ, ಬಿದ್ದಿರೋ ಹಳೆ ಮನೆಗಳನ್ನೂ, ಎದ್ದಿರೋ ಹೊಸಮನೆಗಳನ್ನೂ, ಜನರ ವೇಷ, ಭಾಷೆ, ರೀತಿ, ನೀತಿಗಳನ್ನೂ ನೋಡಿ ಬೆರಗಾದ ನಮ್ಮ ಸೋದರಮಾವ ಹೇಳಿದ ಮಾತಿದು.
ಕೃಷಿ, ದುಡಿಮೆ, ಮಣ್ಣು, ಇಷ್ಟೇ ನಮ್ಮ ಸೀಮೆ ಜನರ ಜಗತ್ತಾಗಿತ್ತು. ಮೂವತ್ತು ವರ್ಷದ ಹಿಂದೆ. ನಮ್ಮಮ್ಮ ಮದುವೆಯಾಗಿ ಬಂದಾಗ, ಆ ಸೀಮೆಯವರೆಲ್ಲ ಈ ಸೀಮೆಯವರನ್ನ ಆಡಿಕೊಂಡದ್ದೇ ಆಡಿಕೊಂಡದ್ದು. ಮೊದಲೇ, “ಬರ ಮಣ್ಣಿಗಷ್ಟೆ ಷೋಕಿಗಲ್ಲ,” ಅಂತ ನಂಬಿದ ಚಾಮರಾಜನಗರ ಜಿಲ್ಲೆ ಜನ ಅವರು. ಈ ಮೈಸೂರ ಸೀಮೆಯ ತಳುಕಿಲ್ಲದ ಜನರ ನೋಡಿ, ತಾವೇನೋ ಪ್ರಾನ್ಸಿನಿಂದಲೋ, ಇಟಲಿಯಿಂದಲೋ ಬಂದಂತೆ ನಕ್ಕರು. ಅವರ ಆಡಿಕೊಂಡದ್ದು ಭಾಷೆಗಿಂತಲೂ ಮುಖ್ಯವಾಗಿ ಈ ಊರ ಗಂಡಸರ ಪಟಾಪಟಿ ಚೆಡ್ಡಿಯ ವೇಷವನ್ನ.
ಇಡೀ ಊರಿಗೂರೇ ಪಟಾಪಟಿ ಚಡ್ಡಿ. ಪಂಚೆ ಗಿಂಚೆ ಎಲ್ಲ ಏನಿದ್ರೂ ಹಬ್ಬಕ್ಕೋ, ಮದ್ವೆಗೋ, ಮಠಕ್ಕೋ ಹೋದಾಗ ಅಷ್ಟೆ. ಹೊಸಬರಿಗೆ, “ಏನಪ್ಪ ಈ ಊರ್ ಜನ, ನೆಂಟರ ಮನೆ ಹೆಂಗಸರ ಮುಂದೂ ಹೀಗ್ ಬರೀ ಚಡ್ಡಿ ಇಕ್ಕಂಡ್ ಓಡಾಡ್ತರಲ್ಲ ನಾಚಿಗ್ಗೆಟ್ಟೋರು” ಅನಿಸಿರಬೇಕು. ಆದರೆ ಇವರಿಗೇನೂ ಅನಿಸ್ತಿರಲಿಲ್ಲ . ಯಾಕಂದ್ರೆ ಅದೊಂದು ಅತ್ಯಂತ ಸಹಜ ಉಡುಪಾಗಿತ್ತು. ನಮ್ಮೂರ ಹೆಂಗಸರಿಗೂ ಊರ ಗಂಡಸರನ್ನೆಲ್ಲ ಚಡ್ಡೀಲೇ ನೋಡೀ ನೋಡೀ ಎಷ್ಟು ಅಭ್ಯಾಸವಾಗಿತ್ತೆಂದರೆ, ಅವರಿಗೇನೂ ನಾಚಿಕೆಯಾಗ್ತಿರಲಿಲ್ಲ..!
ನಿಧಾನಕ್ಕೆ ಮೈಸೂರಿಂದ ಕೇವಲ 12 ಕಿಲೋಮೀಟರ್ ದೂರದ ನಮ್ಮೂರಿಗೂ, ಒಂದು 120 ನಂಬರಿನ ಕೆಂಪು ಬಸ್ಸು ಬಂತು. ಅದರ ಜೊತೆಗೆ ನಾಗರಿಕತೆ ಅನ್ನೋದು ಬಂತು. ಆಮೇಲೆ ಬೈಕು ಬಂತು. ಕಾರು ಬಂತು. ಬಾರು ಬಂತು ಬರಬೇಕಾದ್ದು, ಬರಬಾರದ್ದು ಎಲ್ಲವೂ ಬಂತು ಬಿಡಿ. ಈಗ ಇದನ್ನು ಬರೆಯುವ ಹೊತ್ತಿಗೆ ಅನಿಸುತ್ತಿದೆ, ನನಗೆ ತಿಳುವಳಿಕೆ ಬಂದಾಗಲೂ ಇವರೆಲ್ಲ ಚಡ್ಡೀಲೇ ಓಡಾಡ್ತಿದ್ದರು. ಅಂದರೆ 25 ವರ್ಷದಲಿ ಇಷ್ಟೆಲ್ಲಾ ಆಗಿಹೋಯಿತಾ? ಅಲಲಾ ಕೆಂಪು ಬಸ್ಸೇ, ನವನಾಗರಿಕತೆಯೇ.!
ಹ್ಞಾ, ಚಡ್ಡಿ ವಿಷಯಕ್ಕೆ ಬರೋಣ, ನಮ್ಮೂರ ಜನ ಯಾಕೆ ಹಗಲೆಲ್ಲ ಚಡ್ಡಿ ಹಾಕೊಂಡಿರ್ತಿದ್ದರು ಅಂದರೆ, ಹೇಳಿದೆನಲ್ಲ. ನಮ್ಮೂರ ಜನರ ಕಸುಬು, ಬದುಕು ಎಲ್ಲವೂ ಕೃಷಿಮಯ. ಜಮೀನು ಕೆಲಸ, ರೇಷ್ಮೆ ಹುಳ, ಹೀಗೆ ಬೇಕಾದಷ್ಟು ಮೈಗೆಲಸ. ಇದನ್ನೆಲ್ಲ ಮಾಡೋಕೆ ಪದೇ ಪದೇ ಜಾರುವ, ಆಗಾಗ ಎತ್ತಿ ಎತ್ತಿ ಕಟ್ಟಿಕೊಳ್ಳಬೇಕಾದ ಪಂಚೆ, ಕಿರಿಪಿರಿ ಮಾಡ್ತಿತ್ತು. ಮತ್ತು ಬಗ್ಗಿ ಎದ್ದು ಮಾಡಲು, ದಾರದಿಂದ ಕಟ್ಟಬಲ್ಲ ಚಡ್ಡಿಯೇ ಸೂಕ್ತ ಉಡುಗೆ ಅನಿಸಿತ್ತು. ಹಾಗಾಗಿ ಪಂಚೆ ಕಿತ್ತೆಸೆದು, ಆರಾಮಾಗಿ, ಕಂಫರ್ಟ್ ಆಗಿ ಯಾವಾಗಲೂ ಚಡ್ಡೀಲೇ ಇದ್ದುಬಿಡುತ್ತಿದ್ದರು.
ಹಳೆಯ ಮೈಸೂರು ಭಾಗದಲ್ಲಿ ಮಂಡ್ಯವೂ ಸೇರಿದಂತೆ ಯಾರೆಲ್ಲ ಜಮೀನು, ಕೆಸರು ಗದ್ದೆ ಕೆಲಸಗಳಲ್ಲಿ ನಿರಂತರ ತೊಡಗಿಸಿಕೊಂಡು, ಮೈಮುರಿದು ಕೆಲ್ಸ ಮಾಡ್ತಿದ್ದರೋ ಅವರೆಲ್ಲರ ನಿತ್ಯದ ಉಡುಪು ಈ ಪಟಾಪಟಿ ಚೆಡ್ಡಿಯೇ! ಈ ಚಡ್ಡಿ ಹೇಗಿದ್ದಿರಬಹುದು? ಯಾವುದೋ ಸಿನೆಮಾದಲ್ಲಿ ದೊಡ್ಡಣ್ಣನೋ, ಸಾದುಕೋಕಿಲಾನೋ ಹಾಕಿಕೊಂಡಿದ್ದು ಕಣ್ಮುಂದೆ ಬಂತಾ? ಹ್ಞಾ ಅದೇ ಪಟಾಪಟಿ ಚಡ್ಡಿ ಅಂದ್ರೆ. ಮೀಟರುಗಟ್ಟಲೆ ಬಟ್ಟೆ ತಂದು ಊರಲ್ಲಿದ್ದ ಟೈಲರ್ ಕೈಯಲ್ಲಿ ಹೊಲಿಸುತ್ತಿದ್ದರು. ಪಟಾಪಟಿ ಚಡ್ಡಿಗೆ ಅಳತೆ ಚೂರು ಆಚೀಚೆ ಆದರೂ ನಡೀತಿತ್ತು..!!
ಮೊನ್ನೆ ಹಬ್ಬಕ್ಕೆ ಮಗನಿಗೆ ಹೊಸಬಟ್ಟೆ ಹಾಕುತ್ತಿದ್ದಾಗ ನಮ್ಮೂರ ನಿಂಗಪ್ಪಣ್ನ ಬಂದರು. ಅವನ ಚಡ್ಡಿಯ ರೇಟು ನೋಡಿ ಕೇಳಿದರು. “ಏನವ್ವ ತಾಯಿ, ಇದರ ದುಡ್ಡಗ ನಾವು, ಆರ್ ವರ್ಷ ಚಡ್ಡಿ ವಲಿಸ್ಕಬಹುದು.ಇಷ್ಟ್ ದುಡ್ ಕೊಟ್ಟಿದ್ದರ್ಯಲ್ಲ ಇದ್ರಲ್ಲೇನ್ ಏಸಿ ಇದ್ದುದಾ? ಬುದ್ದಿ ಇಲ್ಲ ನಿಮಗೂವ” ಅಂದರು. ನಿಜ. ಗೇಣುದ್ದ ಚಡ್ಡೀಲಿ ಏನಿರುತ್ತೆ ಅಂತ ಅಷ್ಟೊಂದು ದುಡ್ಡು ಕೊಡಬೇಕು? ಪ್ರಶ್ನೆ ಕೇಳೋಹಾಗಿಲ್ಲ. ಮಾಲ್‍ನಲ್ಲಿ ಮಾನ ಹೋಯ್ತದೆ. ದೊಡ್ಡ ಜನ ಅನಿಸಿಕೋಬೇಕಾದರೆ ಗೇಣುದ್ದದ ಚಡ್ಡಿಗೆ ಅದರುದ್ದದ ದೊಡ್ಡ ನೋಟು ಮಡುಗ್ಬುಟ್ ಬತ್ತಾ ಇರ್ಬೇಕು ಅಷ್ಟೆ.
ಪತ್ರಿಕೆಗಳನು ಓದಿ ತಿಳಿಯುವ ವಯಸಲ್ಲಿ, ಪೇಪರಲ್ಲಿ “ಚಡ್ಡಿಗಳು. ಚೆಡ್ಡಿಗಳು” ಅಂತ ಬರೆದರೆ ಯಾರ ಬಗ್ಗೆ ಹೇಳ್ತಿದಾರಿವರು ಅಂತ ಗೊತ್ತೇ ಆಗ್ತಿರಲಿಲ್ಲ. ಸುತ್ತ ಮುತ್ತ ಹೇಳೋರೂ ಇರಲಿಲ್ಲ. ಎಲ್ಲ ಬರೀ ಪಟಾಪಟಿಗಳೇ ಸುತ್ತ! ಆಮೇಲೆ ಅದು ಆರ್ ಎಸ್ ಎಸ್ ನವರಿಗೆ ಹೇಳೋ ಮಾತು ಅಂತ ಗೊತ್ತಾಯ್ತು. ಆಟಕ್ಕೆ, ಓಟಕ್ಕೆ ದೈಹಿಕ ಶ್ರಮಕ್ಕೆ, ಅನುಕೂಲವಾಗಲೆಂದು ಆ ದಶಕಗಳಲ್ಲಿ ಮಾಡಿದ ಡಿಸೈನ್ ಅದು. ಆಗ ಪೋಲೀಸರೂ ಚೆಡ್ಡಿ ಹಾಕುತ್ತಿದ್ದರು. ಹಳೇ ಸಿನೆಮಾಗಳಲ್ಲಿ ಈಗ ಚಡ್ಡಿ ಪೋಲೀಸ್‍ಗಳನ್ನ ನೋಡಿದರೆ ನಮಗ್ಯಾಕೋ ನಗು ಬರ್ತದೆ. ಈಗಲೂ ಕೆಲವು ಕಡೆ ಹಾಗೇ ಇದೆ. ಪಿಂಕ್ ಚೆಡ್ಡಿಯದೂ ದೊಡ್ಡ ಸುದ್ದಿಯೇ.

ಇದ್ಯಾವುದರ ಅರಿವೂ ಇಲ್ಲದಿದ್ದರೂ, ಕೆಂಪು ಬಸ್ಸುಗಳ ಸಂಖ್ಯೆ ಹೆಚ್ಚಿದಂತೆಲ್ಲಾ, ನಮ್ಮ ಸೀಮೆ ಜನ ತಮ್ಮ ಪಟಾಪಟಿ ಚಡ್ಡಿಯ ಓಡಾಟವನ್ನ ನಿಧಾನಕ್ಕೆ ಬಿಡ್ತಾ ಬಂದ್ರು. ಕೆಲವರು ಪಂಚೆ ಸುತ್ಕೊಳೋದ್ ಕಲಿತ್ರು.ಮತ್ತೆ ಕೆಲವರು ಪ್ಯಾಂಟು ಏರಿಸಿಕೊಂಡ್ರು. ನಾಗರಿಕತೆ ಬಂತು ಅನ್ನೋದೊಂದು ಕಾರಣ . ಮಣ್ಣಿನ ಕೆಲಸವೇ ಕಡಿಮೆ ಈಗ, ಅನ್ನೋದು ಅದಕ್ಕಿಂತ ಮುಖ್ಯ ಕಾರಣ.
ಆದರೆ ಇವರು ಬಿಟ್ಟ ಚಡ್ಡಿ ಅಲ್ಲಿ ಸಿನೆಮಾದಲ್ಲಿ ಬರೋಕ್ ಸುರು ಆಗೋಯ್ತು. ದರ್ಶನ್, ಸುದೀಪು, ಅಂಬರೀಷ್, ದೊಡ್ಡಣ್ಣ, ಮೊನ್ನೆಯ ಯಶ್. ಎಲ್ರೂ ಇದ್ದಕ್ಕಿದ್ದಂತೆ ಪಟಾಪಟಿಯ ಬ್ರಾಂಡ್ ಅಂಬಾಸಿಡರ್‍ಗಳಾಗಿಹೋದ್ರು. ಎಷ್ಟರ ಮಟ್ಟಿಗೆ ಅಂದ್ರೆ, ಮಂಡ್ಯದ ಹಳ್ಳಿಗಳ ಜನ ಹೀಗೇ ಪಟಾಪಟಿಗಳನ್ನ ಹಾಕೊಂಡ್ ಓಡಾಡ್ತಾರೇನೋ ಅಂತ ತುಂಬ ಜನ ತಪ್ ತಿಳ್ಕೊಂಡಿದಾರೆ. ಮಂಡ್ಯದ ಹಳ್ಳಿ ಹೈದ, ಲೂಸಿಯಾ ಸಿನೆಮಾ ಗಾಯಕ ನವೀನ್ ಸಜ್ಜು ಹೇಳುತ್ತಿದ್ದ “ಈಗ್ಯಾರ್ ಪಟಾಪಟಿ ಆಕೋತಾರಕ್ಕಾ, ಈಗ ಊರ್ ಕಡೇನೂ ಬರ್ಮುಡಾನೇ ಟ್ರೆಂಡು. ಏನೋ ಹಳೆ ತಲೆಗಳ್ ಹೊಲಿಸ್ಕೋತಾರೆ ಅಷ್ಟೆ. ಮೊನ್ನೆ ಒಂದ್ ಆಡಿಯೋ ರಿಲೀಸಲ್ಲಿ ಆ ಪಟಾಪಟಿ ಬಟ್ಟೇಲೇ ಪ್ಯಾಂಟ್ ಥರ ಮಾಡಿ ಒಂದೇನೋ ಕಾಂಬಿನೇಷನ್ ಮಾಡಿ ಡಾನ್ಸರ್ಸ್ ಡಾನ್ಸ್ ಮಾಡಿದ್ರು. ಸಖತ್ತಾಗಿತ್ತು” ಅಂದ.
ಅಲ್ಲಿ ದೂರದಲ್ಲಿ ಯಾರೋ ಬಳಸುತ್ತಿದ್ದ ಬರ್ಮುಡಾ, ಪ್ರತಿಷ್ಟಿತನಗರಗಳು, ಗುಂಪುಗಳನ್ನ ತಲುಪಿ, ನಿಧಾನಕ್ಕೆ ಒಳನುಗ್ಗುತ್ತಾ, ಸಣ್ಣ ನಗರಗಳಿಗೆ ಬಂದು.. ಮುಂದಕ್ಕೆ ಕೆಂಪುಬಸ್ಸಲಿ ಓಡಾಡ್ತಾ ಮಾಡಿದ್ದೆಲ್ಲ ಅನುಕರಣೆ. ಅಲ್ಯಾರೋ ಸೆಕೆ ಅಂತ ಚೆಡ್ಡಿ ಹಾಕೊಂಡರೆ ನಾವು ಚಳಿಗಾಲದಲ್ಲೂ ಹಾಕಿಕೊಳ್ತೀವಿ. ಅಲ್ಯಾರೋ ಚಳಿ ಅಂತ ಸೂಟು ಟೈ ಹಾಕಿಕೊಂಡರೆ, ನಾವು ಸೆಕೆಯಲ್ಲೂ ಹಾಕಿಕೊಳ್ತೀವಿ. ಬಟ್ಟೆ ಇರುವುದು ನಮ್ಮ ಅನುಕೂಲ, ನಮ್ಮ ಕಂಫರ್ಟ್ ಗೆ ತಾನೇ?
ಮೊನ್ನೆ ಯಾವುದೋ ಮಾಲ್‍ನ ಹೊರಗೆ ಗೊಂಬೆಗಳಿಗೆ ಪಟಾಪಟಿ ಚಡ್ಡಿಹಾಕಿ ನಿಲ್ಲಿಸಿಬಿಟ್ಟಿದಾರೆ. ಆಮೇಲೆ ಗೊತ್ತಾಯಿತು ಪಟಾಪಟಿ ಡಿಸೈನಿನಲೇ ಬರ್ಮುಡಾ ಮಾಡಿದಾರಂತೆ. ಈಗ ಎಲ್ಲ ಪಟಾಪಟಿ ಚಡ್ಡಿಯೂರುಗಳಲ್ಲೂ ಬರ್ಮುಡಾ “ಟ್ರೆಂಡ್” ಶುರುವಾಗಿದೆ. ಹುಡುಗರೆಲ್ಲ ಪಂಚೆ ಬಿಟ್ಟು ಮತ್ತೆ ಚಡ್ಡಿಗಿಳಿದಿದ್ದಾರೆ. ಒಂದೊಂದ್ಸಲ ಚೆಡ್ಡೀಲೇ ಸಿಟಿಗೋಗ್ತಾರೆ, ಫ್ಯಾಷನ್ನು. ಈಗ ಹಳ್ಳಿ ಹುಡುಗರು ಅಪ್ಡೇಟ್ ಆಗಿರುವುದರ, ಮುಂದುವರೆದಿರುವುದರ, ಮೇಲ್ನೋಟದ ಸಾಕ್ಷಿ ಚೆಡ್ಡಿ. ಪಂಚೆ ಉಟ್ಟಿದ್ನಾ? ಅವನಿನ್ನೂ ಹಳ್ಳಿಯೋನೇ ಅಂತರ್ಥ!
“ಅಯ್ಯೋ ಅವರೇನ್ ಪಂಚ ಉಟ್ಕಳಲ್ಲ ಕಣ್ ಬುಡಿ. ಅದೆಂತದೋ ಬಂದವಲ್ಲ ಅದಿಕ್ಕಂಡ್ ತಿರುಗಾಡ್ತರ” ಸಿಟಿ ಅಳಿಯನ ಬಗ್ಗೆ ಅತ್ತೆ ಆಡಿದಳು. ಅಳಿಯ ಪಂಚೆ ಉಡಲ್ಲಾ, ಚಡ್ಡೀಲಿರ್ತಾನೆ ಅನ್ನೋದೂ ಒಂದು ಒಣಪ್ರತಿಷ್ಟೆಯ ಸಂಗತಿಯಾಗಬಹುದಾ? ಮಾದೇಸ್ವರಾ! ಸೀರಿಯಲ್ ನೊಂದಿಗೇ ಬದುಕು ಸಾಗಿಸುವ ಸಣ್ನವಯಸಿನ ಹುಡುಗಿ, ಗಂಡನಿಗೆ ಹೇಳುತ್ತಾಳೆ, “ಅದೇನ್ ಈ ಪಂಚೆ ಉಟ್ಕಳದು? ಒಗಿಯಕ್ಕೆಲ್ಲ ಹಿಂಸೆ. ನಾಕ್ ಬರ್ಮುಡಾ ತಕ್ಕಳಿ, ಎಲ್ಲ ಆಕಂಡ್ ಓಡಾಡಲ್ವ ಈಗ?” ಬರ್ಮುಡಾ ಮುಖೇನ ಗಂಡನನು ಅಪ್‍ಡೇಟ್ ಮಾಡುವ ಮನಸು ಅವಳದು.
ತಪ್ಪೇನಿದೆ? ಈಗ್ ನಾವ್ ಚೆಡ್ಡಿಹಾಕೊಂಡ್ ಓಡಾಡಿದ್ರೆ ಏನ್ ಕಷ್ಟ ನಿಮಗೆ? ಕಷ್ಟದ್ದಲ್ಲ ಪ್ರಶ್ನೆ. ಆಗ ಅನಾಗರಿಕ ಅನಿಸಿದ್ದು, ಈಗ ಮತ್ತೆ ನಾಗರಿಕವೆನಿಸಿದ್ದು ಹೇಗೆ? ಯಾವುದು ಫ್ಯಾಷನ್ ಆಗುತ್ತದೋ ಟ್ರೆಂಡ್ ಆಗುತ್ತದೋ ಅದು ನಮ್ಮ ಪಾಲಿನ ಮಹಾಪ್ರಸಾದ. ಚೆಡ್ಡಿಯಾದರೂ ಸೈ. ಮತ್ತೊಂದಾದರೂ ಸೈ. ಹಳತು ಹೊಸತಾಗುತ್ತದೆ. ಹೊಸತು ಹಳತಾಗುತ್ತದೆ. ಆಗಾಗ ಹಳತು ಕರಗಿ ಹೊಸತು ಹುಟ್ಟುತ್ತದೆ. ನಾವು ನಮ್ಮ ಹೆಜ್ಜೆಗಳನು ಮರೆತು ತಿರುಗುತ್ತಿದ್ದೇವೋ ಹುಡುಕುತ್ತಾ ತಿರುಗುತ್ತಿದ್ದೇವೋ, ಅಥವಾ ಅನುಕರಿಸಿ ತಿರುಗುತ್ತಿದ್ದೇವೋ, ಒಟ್ಟಿನಲಿ ಅಲ್ಲಲ್ಲೆ ಪರಿಭ್ರಮಣ.
ಅಂತೂ ಊರೂರುಗಳಲಿ ಬರ್ಮುಡಾದ ಹುಡುಗರಿದ್ದಾರೆ. ಬರ್ಮುಡಾದ ಜೇಬಲಿ ಸ್ಮಾರ್ಟ್ ಫೋನ್ ಇದೆ, ಊರ ಕಟ್ಟೆಯ ಮುಂದೆ ಗುಂಪಾಗಿ ಕೂತು ಮಾತಾಡುತ್ತಾರೆ. ಹೊಸ ಹುಡುಗಿ, ಹೊಸ ಮೊಬೈಲ್ ಆಪ್, ಹೊಸ ಕೋರ್ಸ್, ಹೊಸ ಸಿನೆಮಾ, ಹೊಸ ಹಾಡು. ಬೇಡದ ವೀಡಿಯೋಗಳು. ಇತ್ಯಾದಿ ಇತ್ಯಾದಿ. ಮಾತಾಡ್ತಾ ಕೂತ ಗೋಡೆ ಪಕ್ಕದ ಮೋರಿಯ ವಾಸನೆ, ಸರಕಾರೀ ಶಾಲೆಯ ಯಾತನೆ. ಊರಿನ, ದೇಶದ ಯೋಚನೆ, ಏನಾದರೂ ಯೋಜನೆ? ಯಾವುದನ್ನೂ ತಾಕಿಸಿಕೊಳ್ಳದೇ ವಿಡಿಯೋಗಳು ಬ್ಲೂಟೂತು, ವಾಟ್ಸಪ್ಪಿನಲಿ ಹರಿದಾಡುತ್ತವೆ.!
ಹಳತು ಕಳಚಿ ಒಟ್ನಲ್ಲಿ ಕ್ರಾಂತಿಮಾಡಲು ಹೊರಟಿದ್ದೇವೆ. ಬದಲಾಗಿದ್ದೇವೆ, ಹೊಸತಾಗಿದ್ದೇವೆ, ಅಪ್ಡೇಟ್ ಆಗಿದ್ದೇವೆ, ಹೊಸದಾಗಿ ವಿನ್ಯಾಸವಾಗಿದ್ದೇವೆ,ಕಡ ತಂದ ಬರ್ಮುಡಾವಾಗಿದ್ದೇವೆ.
ಪಟಾಪಟಿ ಚೆಡ್ಡಿಯದು ಸಿಂಪಲ್ ಸ್ಟೋರಿ ಏನಲ್ಲ.!!
 

‍ಲೇಖಕರು G

13 January, 2015

ನಿಮಗೆ ಇವೂ ಇಷ್ಟವಾಗಬಹುದು…

19 Comments

  1. ನಾಗೇಂದ್ರ ಶಾ

    ಒಟ್ಡಾ… ಇತಿ ಚಡ್ಡೀ ಪರಾಣವೂ…. ಪರಿಸಮಾಪ್ತಿ. (ಹೊಸದಾಗಿ ಚೆಡ್ಡಿ ಸೂಟ್ ಬಂದಿದೆ.)

  2. sudeendra

    ಈ ಪಟಾಪಟಿ ಮಂಡ್ಯ ಜೀನ್ಸ್ ಅಂತಾನೇ ಫೇಮಸ್ಸು. ಈಗ ಹೆಣ್ಣ್ ಗಳು ಇಕ್ಕೋತರಲ್ಲ ಅದಿನ್ನೂ ಪಟಾಪಟಿ ಅಗಿಲ್ಲರಾ, ಮುಂದ್ ಅಗಬೋದು, ಊ ಅನ್ನಿ

  3. ಋತಊಷ್ಮ

    ಕುಸುಮಬಾಲೆ ಅಕ್ಕಾ, ಚೆಡ್ಡಿ ಸ್ಟೋರಿ ತುಂಬಾ ಇಷ್ಟವಾಯ್ತು.

  4. basavaraj

    ಹಳತು ಹೊಸದಾಗುತ್ತದೆ.ಹೊಸತು ಹಳೆಯದಾಗುತ್ತದೆ.ಆಗಾಗ ಹಳತು ಕರಗಿ ಹೊಸತು ಹುಟ್ಟುತ್ತದೆ.ಈ ಮಾತು ಬರಹಕ್ಕೆ ಹೆಡ್ಡಿಂಗ ಆಗಬೆಕಿತ್ತು.ಅನ್ನೊವಸ್ಟು ಚನ್ನಾಗಿದೆ.

  5. sugunamahesh

    ಹಹಹ ಚೆನ್ನಾಗಿದೆ ನೆನ್ನೆ ತಾನೇ ಈ ಬರ್ಮುಡಾ ಏನು ಹೊಸದು ನಮ್ಮ ನಮ್ಮೂರಿನ ಜನ ಆಗಿನ ಕಾಲದಲ್ಲೇ ಪಟಾಪಟಿ ಚಡ್ಡಿ ಹಾಕ್ತಿದ್ದ್ರು ಅದನ್ನೇ copy ಮಾಡವ್ರೇ 🙂 ಎಂದು ವಾದಿಸಿದ್ದೆ ಇಲ್ಲಿ ಸ್ನೇಹಿತರೊಂದಿಗೆ. ಹಳೆಯದು ಹೊಸತಾಗುತ್ತಲೇ ಇರುತ್ತದೆ. ಬೋಪಸಂದಾಗೈತೆ ಚಡ್ಡಿ ಪುರಾಣ

  6. sindhu

    ಕುಸುಂ..
    ಈ ಪ್ಯಾರಾ ಮತ್ತೆ ಮತ್ತೆ ಓದಿಕೊಂಡೆ.
    ಅಂತೂ ಊರೂರುಗಳಲಿ ಬರ್ಮುಡಾದ ಹುಡುಗರಿದ್ದಾರೆ. ಬರ್ಮುಡಾದ ಜೇಬಲಿ ಸ್ಮಾರ್ಟ್ ಫೋನ್ ಇದೆ, ಊರ ಕಟ್ಟೆಯ ಮುಂದೆ ಗುಂಪಾಗಿ ಕೂತು ಮಾತಾಡುತ್ತಾರೆ. ಹೊಸ ಹುಡುಗಿ, ಹೊಸ ಮೊಬೈಲ್ ಆಪ್, ಹೊಸ ಕೋರ್ಸ್, ಹೊಸ ಸಿನೆಮಾ, ಹೊಸ ಹಾಡು. ಬೇಡದ ವೀಡಿಯೋಗಳು. ಇತ್ಯಾದಿ ಇತ್ಯಾದಿ. ಮಾತಾಡ್ತಾ ಕೂತ ಗೋಡೆ ಪಕ್ಕದ ಮೋರಿಯ ವಾಸನೆ, ಸರಕಾರೀ ಶಾಲೆಯ ಯಾತನೆ. ಊರಿನ, ದೇಶದ ಯೋಚನೆ, ಏನಾದರೂ ಯೋಜನೆ? ಯಾವುದನ್ನೂ ತಾಕಿಸಿಕೊಳ್ಳದೇ ವಿಡಿಯೋಗಳು ಬ್ಲೂಟೂತು, ವಾಟ್ಸಪ್ಪಿನಲಿ ಹರಿದಾಡುತ್ತವೆ.!
    ಹಳತು ಕಳಚಿ ಒಟ್ನಲ್ಲಿ ಕ್ರಾಂತಿಮಾಡಲು ಹೊರಟಿದ್ದೇವೆ. ಬದಲಾಗಿದ್ದೇವೆ, ಹೊಸತಾಗಿದ್ದೇವೆ, ಅಪ್ಡೇಟ್ ಆಗಿದ್ದೇವೆ, ಹೊಸದಾಗಿ ವಿನ್ಯಾಸವಾಗಿದ್ದೇವೆ,ಕಡ ತಂದ ಬರ್ಮುಡಾವಾಗಿದ್ದೇವೆ.
    ಪಟಾಪಟಿ ಚೆಡ್ಡಿಯದು ಸಿಂಪಲ್ ಸ್ಟೋರಿ ಏನಲ್ಲ.!!
    ಕಾಲಂ ಬರಿಯಕ್ಕೆ ಏನ್ ವಿಷ್ಯ ಬೇಕಾದ್ರೂ ಆಯ್ಕೋಬಹ್ದು. ಆದರೆ ಎಲ್ಲ ವಿಷಯಗಳಲ್ಲೂ ನಾವು ಬೇಕೆಂದೆ ಮುಚ್ಚಿಟ್ಟುಕೊಂಡು ಹಲ್ಲುಕಿರಿಯುತ್ತ ಇರುವ ತಲ್ಲಣಗಳ ಬಗ್ಗೆ, ಒಳಗೊಳಗೇ ಹತ್ತುತ್ತಿರುವ ಒರಲೆಯ ಬಗ್ಗೆ ಬರೆಯುತ್ತಿರುವ ಪರಿಗೆ ದಂಗಾಗಿದ್ದೇನೆ.
    ವಿಷಾದವೆಂದರೆ ಈ ಬದಲಾವಣೆಗಳ ಮುಖವೇ ಆಗಿರುವ ಯಾರಿಗೂ ತಾವು ಯಾಕೆ ಬದಲಾಗಿದೀವಿ ಅನ್ನುವುದೇ ಗೊತ್ತಿರೋದಿಲ್ಲ, ಎಂದಾದರೂ ಗೊತ್ತಾಗುವಾಗ ಅದರಿಮ್ದ ಹೊರಬರದ ಹಾಗೆ.. ನೀವೇ ಬರೆದ ಹಾಗೆ.. ಪರಿಭ್ರಮಣ.
    ಸಂತೋಷವೆಂದರೆ ನಮಗೆ ಇದು ಗೊತ್ತಾಗುತ್ತಾ ಇದೆ, ಹೌದು ಅನಿಸುತ್ತಿದೆ, ಮತ್ತೆ ಬದಲಾವಣೆಯ ತುಡಿತದ ಒರತೆ ಬತ್ತದೆ ಹಾಗೇ ಒಸರುತ್ತಿದೆ ಅನ್ನುವುದು. ಮುಂದಿನ ಚುಚ್ಚುಮದ್ದಿಗೆ ಕಾಯುತ್ತಾ…
    ಮತ್ತೊಂದು ವಿಷ್ಯ ಅಂದ್ರೆ ಈ ಎಲ್ಲವನ್ನೂ ಆ ಭಾಷೆ ಮುಕ್ಕಾಗದ ಹಾಗೆ, ನವನಾಗರಿಕರಿಗೆ ನೆತ್ತಿ ಹತ್ತದ ಹಾಗಿನ ಹದದಲ್ಲಿ ನೀವು ಬರೆಯುತ್ತಿರುವುದು.

  7. Kantha

    Yes Kusuma, the same trend is on in every villages and also our’s.
    But, I love pattapatti,Ayyo neeve yenara heli, naan agle eldu patapati nikkarugulge alathe kot bandhaythu.
    Well, one of my uncle was telling “Ayyo ee hengusru sangagolu bandu manyaage timug sariyagi ‘tee’ kaasoru illappo,enana yolire saavira mathadthave ee hengusrugulu” ella nan karma. Hope this line will trigger your thoughts and bring us one more article.

  8. Anonymous

    realy nice one

  9. ಡಾ.ಶಿವಾನಂದ ಕುಬಸದ

    ತುಂಬಾ ಚೆಂದದ ಬರಹ…

  10. ಅಕ್ಕಿಮಂಗಲ ಮಂಜುನಾಥ

    ಯುಗ ಯುಗಾದಿ ಕಳೆದರೂ
    ಯುಗಾದಿ ಮರಳಿ ಬರುತಿದೆ
    ನಮ್ಮ ತನವನಷ್ಟೆ ಮರೆತಿದೆ

  11. vidyashankar

    Very well written Kusama… This is also a cultural revolution of lesser value!

  12. chaithra

    ನಾಗರಿಕತೆ ಬಂತು ಅನ್ನೋದೊಂದು ಕಾರಣ . ಮಣ್ಣಿನ ಕೆಲಸವೇ ಕಡಿಮೆ ಈಗ, ಅನ್ನೋದು ಅದಕ್ಕಿಂತ ಮುಖ್ಯ ಕಾರಣ.
    ನಾವು ನಮ್ಮ ಹೆಜ್ಜೆಗಳನು ಮರೆತು ತಿರುಗುತ್ತಿದ್ದೇವೋ ಹುಡುಕುತ್ತಾ ತಿರುಗುತ್ತಿದ್ದೇವೋ, ಅಥವಾ ಅನುಕರಿಸಿ ತಿರುಗುತ್ತಿದ್ದೇವೋ, ಒಟ್ಟಿನಲಿ ಅಲ್ಲಲ್ಲೆ ಪರಿಭ್ರಮಣ.
    ವೈದೇಹಿ ಯವರು ನನಗಿಷ್ಟ. ಅವರ ನಂತರ ನೀವೇ ನನಗಿಷ್ಟವಾಗಿದ್ದು.

  13. ಅಂಜಲಿ

    ಚೆನ್ನಾಗಿದೆ

  14. Anil Talikoti

    ಭ್ರಾಮಕ ಜಗತ್ತಿನ ತುಣುಕುಗಳು (ವಾಟ್ಸಪ್ಪಿನಲಿ ಹರಿದಾಡುವ ವಿಡಿಯೋಗಳು ಇತ್ಯಾದಿ) ಕೊಟ್ಟಷ್ಟು ಖುಷಿಯನ್ನು ಮೋರಿಯ ವಾಸನೆ, ಶಾಲೆಯ ಯಾತನೆ ಕೊಡಲಾರವು. ಕೃಷಿ, ದುಡಿಮೆ, ಮಣ್ಣು ಕೂಡಾ ಅಷ್ಟೆ ,ಅದರ ಬದಲು ಸುಡುಸುಡುವ ದೀಪಗಳ ಅಡಿಯಲ್ಲಿ ,ಮಾಲ್ ಗಳಲ್ಲಿ ಕೆಲಸ ಮಾಡುವದರಲ್ಲಿ ಧನ್ಯತೆ ಕಾಣುವವರ ಸಂಖ್ಯೆ ಹೆಚ್ಚಾಗಿದೆ. ನಿಮ್ಮ ಭಾಷೆ, ಬರಹ ಕಟ್ಟಿ ಕೊಡುವ ನೋಟಗಳು ಅನನ್ಯ.
    -ಅನಿಲ

  15. shidram

    nice n very funny its too intresting n not boring even a line so much thnks to u good article…..

  16. Rangaswamy

    nice article

  17. manjunatha dasanapura

    Halliyallagutiruva badalavanegalu nammannu gulamarannagisuvatta karedoyyutide.

  18. ತಿಲಕ್ ರಾಜ್ ಸೋಮಯಾಜಿ

    ನಮ್ಮೂರಲ್ಲೂ ಚಡ್ಡಿಧಾರಿ roaming ರೋಮist ಗಳ ಹಾವಳಿ ಅತಿಯಾಗಿದೆ ಕುಸುಮ ಬಾಲೆ ಅವರೇ. ಏನ್ಮಾಡುವುದು ಹೇಳಿ. 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading