ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕುಸುಮಬಾಲೆ ಕಾಲಂ : ಸರ್ವೆ ನಂ 94/1 ರ ಆತ್ಮಕಥೆ

ಈ ಇಡೀ ಭರತಖಂಡದಲಿ ನನ್ನಂತ ತುಂಡು ಭೂಮಿಗಳು ಅದೆಷ್ಟೋ. ಬೇರೆ ಬೇರೆ ಬಣ್ಣದವು.ಬೇರೆ ಬೇರೆ ಗುಣದವು. ಬೇರೆ ಬೇರೆ ಆಕಾರದವು. ಎಲ್ಲಕ್ಕೂ ಒಂದೊಂದು ಇತಿಹಾಸ.. ಒಂದೊಂದು ಕತೆ. ಹಾಗೇ ನನ್ನದೂ ಒಂದು ಕಥೆ. ಹಾಗೆ ನೊಡಿದರೆ ನಾನು ಸುಂದರಿ ಮರಳುಮಿಶ್ರಿತ ಕೆಂಪುಮಣ್ಣು ನನ್ನದು. ಫಲವತ್ತತೆ ತುಂಬಿಕೊಂಡಿದ್ದೆ. ಬಿದ್ದ ಮಳೆನೀರು ಹೀರಿಕೊಂಡು ಬೆಳೆಗೆ ಬೇಕಾದಷ್ಟೇ ಕೊಡುತ್ತಾ ಹದವಾಗಿ ಬೆಳೆಸುವ ಕುಶಲಿ ನಾನು. ಏನಿದ್ದರೇನು? ಈಗ ಉಳಿದಿರುವುದು ಒಂದು ನಿಟ್ಟುಸಿರು ಮಾತ್ರ. ಇರಲಿ,ಈ ನಿಟ್ಟುಸಿರ ಕಥೆ ಹೇಳಲಿಕ್ಕೆಂದೇ ಬಂದಿದ್ದೇನೆ. ಕೇಳಿಬಿಡಿ.
ತೀರಾ ಮೊದಲಿಗೆ ನನಗೊಂದು ಹೆಸರು ಅಂತಿರಲಿಲ್ಲ. ನನಗಲ್ಲ ಯಾವ ಭೂಮಿಗೂ ಹೆಸರಿರಲಿಲ್ಲ.ಎಲ್ಲವೂ ಬಯಲು,ಆಮೇಲಾಮೇಲೆ ಮನುಷ್ಯರು ಗುಂಪುಗಳಾಗಿ ಒಂದಷ್ಟಷ್ಟು ಬೆಳೆಯುತ್ತಿದ್ದರು. ಇಂತವರದು ಇಂತದೇ ಅಂತ ಯಾವ ಗುರುತೂಇರಲಿಲ್ಲ. ಅವರವರ ಶಕ್ತ್ಯಾನುಸಾರ ಉತ್ತೂ ಬಿತ್ತೂ ಮಾಡುತ್ತಿದ್ದರು.ಅಳತೆ ಕೂಡ ಇರಲಿಲ್ಲ. ಈ ಅಲೆಮಾರಿ ಮನುಷ್ಯ ಊರುಗಳ ಮಾಡಿಕೊಂಡ.ನಾನೂ ಊರೊಂದಕ್ಕೆ ಸೇರಿದ ಸಾವಿರಾರು ಎಕರೆ ಭೂಮಿಯಲ್ಲಿ ಸೇರಿಕೊಂಡಿದ್ದೆ. ಸಾವಿರ ನೂರಾಯಿತು ನೂರು ನಲವತ್ತಾಯಿತು. ನಲವತ್ತೀಗ ನಾಕಕ್ಕೆ ಬಂದು ನಿಂತಿದೆ. .
ನನ್ನ ಬಂಧುಗಳೂ ಇಲ್ಲೆ ಅಕ್ಕಪಕ್ಕದಲ್ಲಿದ್ದಾರೆ. ಆದರೀಗ ನಾವೆಲ್ಲ ಒಂದೇ ಮನೆಗೆ ಸೇರಿದವರಾಗಿಲ್ಲ ಬಿಡಿ. ಒಟ್ಟಿನಲಿ ಒಂದು ದಿನ ಯಾರೋ ಬಂದು ಅಳತೆ ಮಾಡಿ , ಬೇಲಿ ಹಾಕಿ , ಸರ್ವೇ ನಂಬರ್ 94/1 ಅಂತ ಹೆಸರಿಟ್ಟು ಹೋದರು. ಸಧ್ಯಕ್ಕೆ ನನ್ನ ಹೆಸರು ಅದೇ. ಹ್ಞಾ.. ಹೆರಲ್ಲೇನಿದೆ ಬಿಡಿ. ಅದೆಲ್ಲ ಮನುಷ್ಯರ ಹಳವಂಡಗಳು. ನನ್ನ ಹೆಸರಿಗೂ ಅವರೇ ಕಿತ್ತಾಡುತ್ತಿರುವವರು. ನನ್ನ ಹೆಸರಿನ ಒಡೆತನಕ್ಕಾಗಿ ಏನೆಲ್ಲಾ ಬಡಿದಾಟಗಳು.! ನಿಜಕ್ಕೂ ನನಗೇನು ಬೇಕು? ಅಂತ ಕೇಳಿದವರೊಬ್ಬರಿಲ್ಲ ಇಲ್ಲಿ. ಇರಲಿ ನನ್ನ ಅಸ್ತಿತ್ವದ ಇತಿಹಾಸ ನಿಮ್ಮನ್ನು ಮೀರಿದ್ದು. ಆದರೂ..ಒಂದು ಇನ್ನೂರು ವರ್ಷಗಳ ಈಚಿನ ನನ್ನ ಆತ್ಮಕಥೆಯ ತುಣುಕುಗಳನ್ನ ಹೇಳ್ತೀನಿ ಕೇಳಿ.
ಈ ಕುಟುಂಬಕ್ಕೆ ನನ್ನನ್ನೂ ಸೇರಿ ಸುಮಾರು ನೂರೆಕರೆಗೂ ಮಿಕ್ಕಿ ಭೂಮಿ ಇತ್ತು. ರಾಗಿ , ಜೋಳ ಬೆಳೆಯುತ್ತಿದ್ದರು. ಕೃಷಿ ಬಿಟ್ಟು ಬೇರೇನೂ ಗೊತ್ತಿರಲಿಲ್ಲ ಈ ಜನಕ್ಕೆ ಆಗ. ದೊಡ್ಡಮಾದಪ್ಪ ಶ್ರಮಗಾರ ಅವರಪ್ಪ ಮೊದಲು ಉಳುತ್ತಿದ್ದದು ಬರೀ ಇದೇ ಸರ್ವೆ ನಂಬರ್ 94/1 ಆದ ನನ್ನನ್ನು ಅಂದರೆ ನಾಕೆಕರೆಯನ್ನು ಮಾತ್ರ. ಆಮೇಲೆ 96 ಎಕರೆ ಅವನೇ ರೂಢಿಸಿದ್ದು. ಸದರೀ ದೊಡ್ಡಮಾದಪ್ಪನ ಹೊಟ್ಟೇಲಿ ಹುಟ್ಟಿದ ಇಬ್ಬರು ಗಂಡುಮಕ್ಕಳಲ್ಲಿ ಒಬ್ಬ ಗಂಡು ಮಗ ತೀರಿಕೊಂಡದ್ದರಿಂದ, ಈ ನೂರೆಕರೆ ಇನ್ನೊಬ್ಬ ಮಗನಾದ ಚಿಕ್ಕನಂಜಪ್ಪನ ಹೆಸರಲ್ಲೇ ಉಳೀತು. ಚಿಕ್ಕನಂಜಪ್ಪನ ಅಣ್ಣ ನಿಜವಾಗಿಯೂ ಬಾವಿಗೆ ಬೀಳಲಿಲ್ಲ. ಇವನೇ ಆಸ್ತಿಯ ಸಲುವಾಗಿ ಅಣ್ನನನ್ನ ನೂಕಿದ ಅಂತಲೂ ಸುದ್ದಿ. ಒಟ್ಟಿನಲಿ ಆ ಇಡಿಯ ನೂರೆಕರೆಯ ನಂಬರು 94 ಆಗಿತ್ತು. ಚಿಕ್ಕನಂಜಪ್ಪನಿಗೂ ಮೂರು ಗಂಡುಮಕ್ಕಳು.ಎರಡು ಹೆಣ್ಣುಮಕ್ಕಳು. ಈ ಚಿಕ್ಕನಂಜಪ್ಪನ ಹೆಂಡತಿಯ ತವರಲ್ಲಿ ಗಂಡುಮಕ್ಕಳಿಲ್ಲ. ಹಾಗಾಗಿ ಚಿಕ್ಕನಂಜಪ್ಪನ ಐದೂ ಮಕ್ಕಳಲ್ಲಿ ದೊಡ್ಡಮಗನಾದ ಮಾದಪ್ಪನನ್ನ ದತ್ತು ತಗೊಂಡರು. ಇನ್ನು ಚಿಕ್ಕನಂಜಪ್ಪನ ಉಳಿದ ಇಬ್ಬರು ಗಂಡು ಮಕ್ಕಳ ನಡುವೆ ಆಸ್ತಿ ಹಂಚಿಕೆಯಾಗಬೇಕಿತ್ತು. ಆದರೆ ಹಾಗಾಗಲಿಲ್ಲ.

ಮಕ್ಕಳಿಬ್ಬರಿಗೂ ಆಸ್ತಿ ಪಾಲು ಮಾಡಲು ದಿನ ನಿಗಧಿ ಮಾಡಿ, ಸುತ್ತಲ ಹತ್ತೂರಿಗೂ ದೊಡ್ಡ ನ್ಯಾಯಗಾರರೆಂದೇ ಹೆಸರಾದ ಚನ್ನಬಸಪ್ಪನವರ ನೇತೃತ್ವದಲ್ಲಿ ಊರ ಮುಖಂಡರು ಜಗಲಿ ಏರಿದರು. ಮನೆಯ ಆಸ್ತಿಪತ್ರಗಳು, ಪಾತ್ರೆ-ಪಗಡೆ, ಚಿನ್ನ-ಬೆಳ್ಳಿ ಎಲ್ಲವನೂ ತಂದು ನಡುಹಟ್ಟಿಯಲಿ ಪೇರಿಸಲಾಯ್ತು. “ಏನ್ರಯ್ಯ ಯಾವ್ಯಾವ ದಿಕ್ಕಿನಲಿ ಯಾರ್ಯಾರಿಗೆ ಹಂಚಬೇಕು? ನಿಮ್ಮದೇನಾದರೂ ಅರಿಕೆಗಳೂ ತಕರಾರುಗಳೂ ಉಂಟೋ? ಚನ್ನಬಸಪ್ಪನವರು ಕೇಳಿದಾಗ, ಹಿರಿಯವನು ಹೇಳಿದ,” ಈ ಪಾಲು ಮಾಡೋದೇ ಬ್ಯಾಡ ಇನ್ನೂ ಚಿಕ್ಕವನ ಮದುವೆ ಕೂಡ ಆಗಿಲ್ಲ. ಪಾಲು ಗೀಲು ಯಾತಕ್ಯಾ ಈಗ್ಲಿಯೇ? ಅಂದ. “ನಿಂದೆಗಪ್ಪ?” ಅಂತ ಚಿಕ್ಕವನನ್ನ ಕೇಳಿದರೆ ಅವನೂ “ಬ್ಯಾಡಿ ಬುಡಿ.” ಅಂದ. ಆದರೆ ಹಿರೀಕರು.”ಉಟ್ಟುಟ್ತಾ ಅಣ್ಣತಮ್ಮದೀರು ಬೆಳ್ಬೆಳಿತಾ ದಾಯಾದಿಗಳು ಕಣ್ರಪಾ. ಎಲ್ಲಾ ಚೆಂದಾಗಿದ್ದಾಗ್ಲೇ ಭಾಗ ಮಾಡ್ಕಳಿ” ಅಂದವರು. ಪೂರ್ವಕ್ಕೆ ಕೆರೆ, ಉತ್ತರಕ್ಕೆ ಸಣ್ಣಮ್ಮನ ಜಮೀನು, ದಕ್ಷಿಣಕ್ಕೆ ಸರಕಾರೀ ರಸ್ತೆ.. ಈ ಸದರೀ ಜಮೀನು ಚಿಕ್ಕನಂಜಪ್ಪನವರ ಹಿರಿಯ ಮಗನಾದ…… ….ಹೀಗೆ ಪತ್ರ ಬರೆಯುತ್ತಿರುವಾಗ ಸಿನೆಮಾದಲ್ಲಿ ಬಂದ ಹಾಗೆ ಬಂದ ದತ್ತುಹೋಗಿದ್ದ ಹಿರಿಯ ಮಗ ಮಾದಪ್ಪ. ತಾಯಿಯ ಊರಿಗೆ ದತ್ತು ಹೋದವ, “ಯಾವನಯ್ಯ ಆಸ್ತಿ ಪಾಲು ಮಾಡಂವ? ನಾ ಇಲ್ವ ಇಲ್ಲಿ? “ ಅಂತ ಬಂದ.”ಅಲ್ಲಯ್ಯ, ದತ್ತು ಅಂತ ಹೋದ ಮೇಲೆ ಈ ಮನೆ ಆಸ್ತಿ ನಿನಗೆಂಗ್ ಕೊಡಕಾದ್ದು? ಅಂದರೆ “ ದತ್ತು ಹೊಂಟೋದ್ರ? ನಾನು ನಮ್ಮಪ್ಪನಿಗೇ ಉಟ್ಟಿರದು, ಇಲ್ಲ ಅನ್ಬುಡಿ, ಇತ್ಲಾಗ್ ತಲ ಆಕಂಡೂ ಮನಿಕಳಲ್ಲ.” ಅಂದ. “ತಿಕ ಬಾಯಿ ಏಡ್ನೂ ಮುಚ್ಕಂಡ್ ಕೂತ್ಕ ಬಡ್ಡೆತ್ತದೆ, ಮಾತಾಡಕ್ ಬರಾಧ್ ನಿನಗೊಬ್ಬನಿಗೇ ಅಲ್ಲ ಕಣ, ಪಾಲ್ ಬೇಕು ತಾನೇ? ಕೊಡ್ತೀವಿ. ಆದ್ರ ನೀ ಇಲ್ಲಿ ಪಾಲು ತಕ್ಕಬೇಕು. ಇಲ್ಲ ನೀ ದತ್ತು ಓಗಿರಾ ತಾವು ತಕ್ಕಬೇಕು, ಎರಡ್ ಆಸ್ತಿನೂ ಗೋರಿ ಗುಡ್ಡ ಆಕಳಂವು ಅಂತ ಮಾಡಿದ್ದಯಾ? ನಿನ್ನ ಆಟ ನಮಗ್ ಗೊತ್ತಿಲ್ಲ ಅನ್ಕಂಡಿದ್ದಯಾ?ಬೋಳಿಮಗನೆ,” ಅಂತ ಚನ್ನಬಸಪ್ಪನವರು ಮೈಕಿಲ್ಲದೆಯೇ ಊರಿಗೇ ಕೇಳುವಷ್ಟು ದೊಡ್ಡಧನಿಯಲ್ಲಿ ಕೂಗಿದರು. ಗಿಡ್ಡದೇಹಿ ಮಾದಪ್ಪ ಗೊಣಗಿದ. ಪ್ರಕರಣ ನಾಳೆಗೆ ಮುಂದೂಡಲಾಯಿತು.
ಮರುದಿನ ಮಾದಪ್ಪನನ್ನ ದತ್ತು ತಗೊಂಡು ಹೋಗಿ ಸಾಕಿ, ಮದುವೆ ಮಾಡಿ, ಐದು ಮಕ್ಕಳಾಗುವತನಕ ಇರಿಸಿಕೊಂಡು ಆಸ್ತಿನೇಲ್ಲ ಇವನಿಗೆ ಕೊಡಲು ಸಿಧ್ದವಾಗಿದ್ದ ಮುದುಕಿ ಪಾರ್ವತಮ್ಮ ಬಂದಳು. ಚನ್ನಬಸಪ್ಪನವರು ಹೇಳಿದರು. “ಇಷ್ಟೆಲ್ಲ ಮಾಡಿದ್ ನಿನ್ನ ಬುಟ್ಟು ಇಲ್ಲಿ ಆಸ್ತಿ ಕ್ಯೋಳಕ್ ಬಂದನ ಪಾರತಮ್ಮ. ಈಗ ಇಲ್ಲಿ ಆಸ್ತಿ ತಕಂಡ್ಮೇಲೆ ಇಂವ ನಿನ್ನ ಮನೆ ಮಗನಲ್ಲ. ಅಲ್ಲಿ ದೀಪ ಬೆಳಗೋನಲ್ಲ. ಇಲ್ ತಗಾಬೇಕು ಇಲ್ಲಾ, ಅಲ್ ತಗಾಬೇಕು ನಿಂದೇನ್ ತೀರ್ಮಾನ ಯೋಳು” ಅಂದರು. ಪಾರತಮ್ಮ , “ನೀವೆಂಗ್ ಯೋಳ್ತಿದ್ದರಿ ಅಂಗೆ ಅಣ್ಣಯ್ಯ” ಅಂದ ಕೂಡ್ಲೇ “ಅಯ್ಯೋ ಜಾತ್ಗೆಟ್ ಸೂಳೇಮಗಳೇ.ನೀ ಕೊಡಾ 25 ಎಕರಲಿ ಐದ್ ಗಂಡ್ಮಕ್ಕಳಿಗೂ ಏನ್ ಕೊಡಲಿ ನಾನು? ”ಅನ್ನುತ್ತಾ ಪಾರತಮ್ಮನನ್ನು ಎಡಗಾಲಲ್ಲಿ ಒದ್ದುಬಿಟ್ಟ ಮಾದಪ್ಪ. ಜಗಲಿಯಿಂದೆದ್ದ ಚನ್ನಬಸಪ್ಪನೋರು, ಮಾದಪ್ಪನನ್ನ ಜುಟ್ಟು ಹಿಡಿದು ತೊಟ್ಟಿಮನೆಯ ಮಧ್ಯಕ್ಕೆ ಕೆಡವಿಕೊಂಡು, ಭಕ್ತಕುಂಬಾರದಲ್ಲಿ ರಾಜ್ಕುಮಾರ್ ಮಣ್ಣು ತುಳಿದ ಹಾಗೆ, ತುಳಿದು ನಚ್ಚುಗುಜ್ಜು ಮಾಡುತ್ತಿರಲು, ಪಾರತಮ್ಮನೇ ಬಂದು “ಬುಟ್ಬುಡೀ” ಅಂತ ಕಾಲು ಹಿಡಕೊಂಡಳು.
ಕಡೆಗೂ ತನಗೆ ಪಾರತಮ್ಮನ 25 ಎಕರೆ ಆಸ್ತಿಯೂ ಬೇಡ ದತ್ತುತನವೂ ಬೇಡ ನಾನು ನಮ್ಮಪ್ಪನ ಆಸ್ತೀಲೇ ಪಾಲು ತಗೋತೀನಿ. ಆ ಊರು ಬಿಟ್ಟು ಇಲ್ಗೇ ಬಂದಿರ್ತೀನಿ ಅಂದ. ಮಾದಪ್ಪನ ಹೆಂಡತಿ ಒಳಬಾಗಿಲಿಂದ, ಹೆತ್ತವ್ವನಂತಿದ್ದ ಪಾರತಮ್ಮನ ಮುಖ ನೋಡಿದಳು.ಕಣ್ಣೀರಾದಳು. ನ್ಯಾಯಗಾರರೂ “ನಮ್ಮಪ್ಪನಿಗ್ ನಾ ಉಟ್ಟಿದನೋ ಇಲ್ವೋ ? ಅಂತ ಕೇಳೋನ ಮುಂದೆ, ಬೇರೆ ದಾರಿ ಕಾಣದೇ ಆಸ್ತಿ ಮೂರು ಭಾಗ ಮಾಡಲು ಸಿಧ್ದವಾದರು. ನಾನು ಅಂದರೆ ಸರ್ವೆ ನಂಬರ್ 94/1 ಈ ಆಸ್ತಿಯ ಪಾಲುದಾರಿಕೆಯ ವೇಳೆ ಎಲ್ಲಿಗೆ ಸೇರುತ್ತೀನೋ ಯಾವನ ಕೈಗೆ ಸಿಗುತ್ತೀನೋ ಅಂತ ಕಾತರಳಾಗಿದ್ದೆ.
ಆಸ್ತಿ ಭಾಗವಾಯ್ತು. ನಾನು ನನ್ನೊಂದಿಗೆ ಇನ್ನೂ 25 ಎಕರೆ, ಆ ಮದುವೆಯಾಗದ ಚಿಕ್ಕವನ ಪಾಲಿನಲ್ಲಿದ್ದೆವು. ಉಳಿದವರಿಗೂ ಮೂವತ್ತು ಮೂವತ್ತು ಎಕರೆ, ಮಿಕ್ಕ ಹತ್ತೆಕರೆ ಅವ್ವನ ಹೆಸರಿಗೆ ಅವಳು ತೀರಿಕೊಂಡ ಮೇಲೆ ಅವಳ ಹೆಣ್ಣುಮಕ್ಕಳಿಗೆ ಅಂತಿತ್ತು. ಆದರೆ ಮಾದಪ್ಪ ಮತ್ತೆ ತಗಾಧೆ ತೆಗೆದ. ಊರ ಮುಂದಲ ಈಶಾನ್ಯ ಮೂಲೆಯ ಜಾಗ ನನಗೇ ಬರಬೇಕು. ವಿಚಿತ್ರ ಹಟಕ್ಕೆ ನಿಂತ. ಯಾಕ್ಲಾ? ಅಂದರೆ “ನಾ ಹಿರೀಮಗ ನಾಕೇಳಿದ್ ಜಾಗ ಮದ್ಲು ಕೊಡಿ” ಅಂದ. ಮತ್ತೆ ಒದೆಸಿಕೊಂಡ. ಹೇಗೋ ನಾನು ಚಿಕ್ಕವನ ಬಳಿಯೇ ಉಳಿದೆ. ಅವನು ಆ ವರ್ಷ ಹುರುಳಿ ಬಿತ್ತಿದ. ಇನ್ನೇನು ಮಡಿಲು ತುಂಬಿಕೋಬೇಕು ಅನ್ನುವಾಗ ಈ ದೊಡ್ಡವನು ಬಂದು ಅದನ್ನೆಲ್ಲ ಉತ್ತುಬಿಟ್ಟ. ರಾಗಿ , ಜೋಳ, ಹಲಸಂದೆ, ಏನು ಬಿತ್ತಿದರೂ ಅಷ್ಟೆ. ಇವನು ಬಿತ್ತೋದು. ಅವನು ಉಳೋದು. ಕೇಳಿದರೆ , ಈ ಜಾಗ ನನಗ್ ಬರ್ಕೊಡು. ನನಗ್ ಬೇಕು ಅಂತ ಅಲ್ ಪಾಲು ಕೊಟ್ಟಿದಾರೆ. ಅಲ್ಲಿ ಮಣ್ಣು ಚೆನ್ನಾಗಿಲ್ಲ ಅನ್ನುತ್ತಿದ್ದ.ನೋಡಿ ನೋಡಿ ಸಾಕಾಗಿ ಮತ್ತೆ ನ್ಯಾಯಕ್ಕೆ ಸೇರಿಸಿದರೆ ಚನ್ನಬಸಪ್ಪನವರು “ಹಿಡಿದು ಕಟ್ರಲಾ ಅವನ್ನ” ಅಂದು ಕಂಬಕ್ಕೆ ಕಟ್ಟಿಸಿ, ಚಡಿ ಏಟನ್ನೇ ಕೊಟ್ಟರು. “ನನಗೆ ಐದ್ ಗಂಡ್ಮಕ್ಕಳು. ಎರಡನೆಯವನಿಗೆ ಇಬ್ಬರೇ. ಚಿಕ್ಕವನಿಗೆ ಮದುವೆಯಿಲ್ಲ. ಐದ್ ಗಂಡೈಕಳಿಗ್ ಏನ್ ಕೊಡಲಿ? ಅದೂ ಕಪ್ ಮಣ್ಣು. ಇದು ಕೆಂಪ್ ಮಣ್ಣು” ಅಂತೇನೇನೋ ಹೇಳಿದ. “ನೀ ಐದ್ ಉಟ್ಸು ಅಂತ ನಾವೇಳಿದ್ವ? ಈ ಎರಡೆಯವನ ಹೆಂಡತಿಗಿನ್ ಮಕ್ಕಳೇ ಆಗಲ್ವ? ಮೂರನೆಯವನೂ ಗಂಡಸಲ್ವ? ಅವನ್ಗೂ ಮೂರೋ ನಾಕೋ ಗಂಡು ಉಟ್ತಾವಪ್ಪ. ನೀವ್ ಹುಟ್ಸೋವಕ್ಕ್ಲಲ್ಲ ಆಸ್ತಿ ಭಾಗ ಮಾಡದು. ನಿಮ್ಮಪ್ಪನಿಗ್ ಉಟ್ಟಿದವರಿಗಷ್ಟೆ” ಅಂತ ತೀರ್ಪಿತ್ತರು.
ಚನ್ನಬಸಪ್ಪನೋರು ಬದುಕಿದ್ದರೆ ಸರ್ವೆ ನಂಬರ್ 94/1 ಎಂಬ ಹೆಸರಿನ ನನಗೆ ಈ ದುಸ್ಥಿತಿ ಬರುತ್ತಿರಲಿಲ್ಲವೇನೋ. ಆದರೆ…. ಅವರು ಉಳಿಯಲಿಲ್ಲ.
ಇಷ್ಟಕ್ಕೂ ಮಾದಪ್ಪ ನನ್ನನ್ನೇ ಬಯಸಿದ್ದು ಯಾಕೆ? ಅನ್ನುವ ಗುಟ್ಟು ಆ ಮನೆಯ ಹೆಂಗಸರಿಗೆ ಗೊತ್ತಿತ್ತು. ಅದಕ್ಕಾಗೇ ಅವರು ಹಾದರಕ್ಕೂ ಇಳಿದುಬಿಟ್ಟರಾ?. ಅಷ್ಟಾದರೂ ನಾನು ಕಡೆಗೂ ಆ ಕುಟುಂಬಕ್ಕೆ ದಕ್ಕಲೇ ಇ್ಲಲ ಯಾಕೆ? ಎಲ್ಲೆಂಲ್ಲಿಂದ ಯಾರ್ಯಾರ ಕೈ ಸೇರಿದೆ? ಈಗ ಸರ್ವೆ ನಂಬರ್ 94/1 ಆದ ನನ್ನ ಒಡೆತನ ಯಾರದ್ದು ಅಂತೆಲ್ಲ ಮುಂದಿನವಾರ ಹೇಳ್ತೀನಿ. ಆ ಗುಟ್ಟಿನ ಹಿಂದಿನ ಇಟೆರೆಸ್ಟಿಂಗ್ ಕತೆಯನ್ನೂ…
 

‍ಲೇಖಕರು G

18 November, 2014

ನಿಮಗೆ ಇವೂ ಇಷ್ಟವಾಗಬಹುದು…

6 Comments

  1. ಅಹೋರಾತ್ರ

    ಚೆಂದದ ಮಾತುಗಳು.

  2. sindhu

    Kusum,
    tale mattu hrudaya eradoo ಸರ್ವೆ ನಂಬರ್ 94/1 munde nintide!
    waiting for the next post.

  3. shanthakumari

    ನಂಗೆ ನನ್ನ ಗಂಡನ ಊರು ಚಾಮರಾಜನಗರದ ಮೆಳ್ಳಹಳ್ಳಿಗೇ ಹೋದಂಗಾಯ್ತು ಕುಸುಮ ಅಷ್ಟೂ ಸಹಜ ಮತ್ತು ಕೂತೂಹಲ ಹುಟ್ಟಿಸುವಂತಿದೆ.

  4. Anil Talikoti

    ಮನುಷ್ಯನಲ್ಲಿ ಸ್ವಾರ್ಥವಿಲ್ಲದಿದ್ದಲ್ಲಿ ಯಾವುದೆ ಕಾನೂನುಗಳ, ಸರಕಾರಗಳ ಅವಶ್ಯಕತೆಯೇ ಇರುತ್ತಿರಲಿಲ್ಲವೇನೋ.
    “ಚನ್ನಬಸಪ್ಪನೋರು ಬದುಕಿದ್ದರೆ ಸರ್ವೆ ನಂಬರ್ 94/1 ಎಂಬ ಹೆಸರಿನ ನನಗೆ ಈ ದುಸ್ಥಿತಿ ಬರುತ್ತಿರಲಿಲ್ಲವೇನೋ” ಎಂದುಕೊಳ್ಳುವ ಪಾಪದ ತುಂಡು ಭೂಮಿ ಕಲಿಯುವದು ಇನ್ನೂ ಬಹಳವೇ ಇದೆ.
    ಒಂದು ಚಿಕ್ಕ ಉದಾಹರಣೆ ಅಮೆರಿಕಾದ್ದು – ೧೮೮೯ ರಲ್ಲಿ ಓಕ್ಲಹೋಮಾ ಎಂಬಲ್ಲಿ ೨೦ ಲಕ್ಷ ಎಕರೆಯಷ್ಟು ಜಾಗವನ್ನು , ಯಾರು ಎಷ್ಟು ಓಡಿ, ಕುದುರೆ ಸವಾರಿ ಮಾಡಿ, ಚಕ್ರದ ಗಾಡಿ ಓಡಿಸಿ ಆಕ್ರಮಿಸಿಕೊಳ್ಳುತ್ತಾರೊ ಅಷ್ಟನ್ನು ಅವರಿಗೆ ನೀಡುವದಾಗಿ ಹೇಳಿದಾಗ ೫೦ ಸಾವಿರ ಜನರು ನೆರೆದಿದ್ದರು. ಅದರಲ್ಲೂ ಅನೇಕರು ಒಳ್ಳೆಯ ಜಾಗ ಪಡೆಯಲು ಓಟದ ನಿಗದಿತ ಸಮಯಕ್ಕೂ ಮೊದಲೆ ಹೋಗಿ ಅಡಗಿ ಕುಳಿತ್ತಿದ್ದರಂತೆ. ಪುಕ್ಕಟ್ಟೆ ಕೊಟ್ಟರೂ ಅದರಲ್ಲಿ ಫಲವತ್ತಾದ ಜಾಗಕ್ಕಾಗಿ, ನೆಲಕ್ಕಾಗಿ ಆ ಕಾಲದಲ್ಲಿ ಜನ ಪ್ರಯತ್ನಪಟ್ಟರೆಂದಮೇಲೆ ಈ ಕಾಲದಲ್ಲಿ ತುಂಡು ನೆಲಕ್ಕಾಗಿ ದಾಯಾದಿ ಕಲಹ ಸಾಮಾನ್ಯವೇನೋ.
    ~ಅನಿಲ

  5. shankar pujari

    ತುಂಬಾ ಚನ್ನಾಗಿದೆ

  6. vidyashankar

    Interesting and good narration

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading