ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕುಸುಮಬಾಲೆ ಕಾಲಂ ’ಯ್ಯೋಳ್ತೀನ್ ಕೇಳಿ’ : ಸೌಭಾಗ್ಯಳೂ ಮತ್ತವಳ ಅಮ್ಮ ರಾಜಿಯೂ..

ಅವಳ ಹಾಲಿನಂತ ಬಿಳಿ ಮೈಬಣ್ಣವನ್ನೂ , ನಕ್ಕರೆ ಥೇಟು ಅಡ್ವಟ್ರೈಸ್ಮೆಂಟಿನ ಹಾಗೇ ಫಳ್ ಅನ್ನುವ ಅವಳ ಹಲ್ಲುಗಳನ್ನೂ, ಆ ಎತ್ತರವನ್ನೂ, ತೆಳು ನೀಲಿ ಬಣ್ಣದ ಸೀರೆಯನ್ನೂ ನೋಡುತ್ತಾ ಆ “ಸೌಭಾಗ್ಯ” ಳೊಂದಿಗೆ ಮಾತಾಡೋದೇ ಮಹಾ ಸೌಭಾಗ್ಯವೆಂಬಂತೆ ನಿಂತುಕೊಂಡಿದ್ದರು ಬೀದಿ ಜನ. ಅವಳು ಒಳ ತೂರಿಕೊಂಡದ್ದೇ, ಬಿಳಿ ಬಣ್ಣದ ಎಸ್ಟೀಮ್ ಕಾರು ರೊಂಯ್ ಅಂತ ಹೊರಟುಹೋಯ್ತು.
ಆ ಅಪ್ಸರೆಯ ಹ್ಯಾಂಗೋವರಿಂದ ಆಚೆ ಬಂದು ಅಕ್ಕ ಪಕ್ಕದ ಜಗಲಿಗಳಲ್ಲಿ ಸೇರಿಕೊಂಡ್ರು ಹೆಂಗಸರು. ಅವರಿನ್ನೂ ಅವಳ ಸೀರೆ ನೆಕ್ಲೇಸು, ಇತ್ಯಾದಿಗಳ ಬಗ್ಗೆ ಮಾತು ಶುರುಮಾಡಬೇಕಿತ್ತು. ಅಷ್ಟೊತ್ತಿಗೆ ಸಿದ್ದಪ್ಪ ಬುಸು ಬುಸು ಅಂತ ಬುಸುಗುಡುತ್ತಾ ಬಂದ. “ಓಹೋಹೋಹೋ .. ಕಾರ್ ಮೇಲ್ ಕುಂತ್ಕಂಡು ಕಣ್ಣೇ ಕಾಣೊಲ್ದು. ವ್ಯಾನಿಟಿ ಬ್ಯಾಗ್ ನ್ಯಾತಾಕಂಡು ಆ ಥರವಾಘ್ ಓದ್ಲಲ್ಲ ಬಡ್ಡಿ, ನನ್ ನೋಡ್ಬುಟ್ಟು ಅತ್ತಗ್ ತಿರಿಕಂಡ್ ಓಯ್ತಳ. ಅಟ್ಟಿ ಜೀತಗಾರನಗ್ ಉಟ್ಟಿರ ಬಡ್ಡಿ ಇಂವ. ಹೆಂಗ್ ಮೆರೆದಾಡ್ತಳ ನೋಡು, ನಾಡಕೋಟಿ ಸಾಹುಕಾರನ ಮಗಳಂಗ್ ಆಡ್ತ ಕುಂತವಳ. ಯಾವ್ ದೊಡ್ಡವರ್ ,ಮನ ಮಕ್ಕಳು ನಾಚ್ಕಬೇಕು ಅವಳ ನೋಡಿ,” ಹೋಗ್ಲಿ ಬುಡು ಸಿದ್ದಪ್ಪ ಅಂತ ಸಂತೈಸಿದರೂ ನಿಲ್ಲಿಸಲಿಲ್ಲ. ಅವನು ಉಂಡದ್ದು ಜೀರ್ಣವಾಗಲು ಒಂದಾದರೂ ಇತಿಹಾಸದ ಪಾಠ ಮಾಡಲೇಬೇಕಿದ್ದುದು ಅವನ ರೂಢಿ. ಇವತ್ತು ರಾಣಿಯಂತವಳ ಚರಿತ್ರೆಯ ಕೆದಕುವ ಅವಕಾಶ ಸಿಕ್ಕಿರೋವಾಗ ಅವನು ಹೇಗೆ ಬಿಟ್ಟಾನು? ಶುರುಹಚ್ಚಿಕೊಂಡ.
ಈ ಸೌಭಾಗ್ಯ ಅನ್ನೋವಳ ಅವ್ವ ರಾಜೀ ಒಂದ್ ಕೂಸೆತ್ಗಂಡು, ಕೆಆರ್ ಆಸ್ಪತ್ರ ಡಾಕ್ಟರ್ ಮನೆ ಸೇರ್ಕಂಡಳು, ಅವಳ್ನಅಲ್ಲಗ್ ಸೇರಿಸ್ತವನು ನಾನೇ , ಆ ಡಾಕ್ಟರ್ ಎಡ್ತಿ ಸತ್ ಮೇಲ ಅವನ್ನೇ ಒಳಕಾಕಂಡು ಗಂಡನ್ ಮಾಡ್ಕಂಡ ಈ ರಾಜಿ, ಈಗ್ ಬಂದೋದ್ಲಲ್ಲ , ಇವಳ ಸಾಕಿ ದೊಡ್ಡವಳ್ ಮಾಡಿ ಒಬ್ ಡಾಕಟರ್ನೇ ಇಡ್ದು ಮದ್ವ ಮಾಡಿ , ಇರಾಬರಾದ್ನೆಲ್ಲ ಈ ಅವ್ವ ಮಕ್ಕಳ ಹೆಸರಗ್ ಮಾಡ್ಬುಟ್ಟು ಅಂವ ಮೇಲಕ್ಕೇ ಒಂಟೋದ…ಸಿದ್ದಪ್ಪನ ಮಾತು ಸುರಿಯುತ್ತಲೇ ಇತ್ತು. “ಸರಿ ಕಣ್ ಮಾವ ಈಗ ಈ ಹಳ ಕತನೆಲ್ಲ ಯಾತಕ್ ಯೋಳಿಯೇ?” ಮಂಜುಳ ಕೇಳಿದಳು. ನೀಲಿ ಸೀರೆಯ ಆ ಸುಂದರಿಗೆ ಮಂಜುಳ ಫ್ಯಾನು ಆಗಿಹೋಗಿದ್ದಳು.
ಸಿದ್ದಪ್ಪ ಮುಂದುವರೆಸಿದ. “ನನ್ನ ನೋಡುದ್ಲಲ್ಲ ಬೋಸುಡಿ ಮಗ, ಮಾವ ಚೆನ್ನಾಗಿದ್ದರ್ಯಾ? ಉಸಾರಾ? ಅಂದಿದ್ರ ಅವಳ ಬಾಯಿ ಸೇದೋಯ್ತಿತ್ತಾ? “ ಪ್ರಶ್ನೆ ಎಸೆದ. “ಏ ಆವಕ್ಕ ನಿನ್ನ ನೋಡಿದ್ರ ಮಾತಾಡಿಸ್ತಿತ್ತು. ನೋಡ್ನಿಲ್ಲ ಬುಡು” ಸಮಾದಾನ ಮಾಡಿದರು. “ಆದ್ರೂವ, ಎಂತೆಂತೆವರ ಮಕ್ಕಳಗ ಎಂತೆಂತಾ ಬಾಳ ನೋಡು “ ಜಗಲಿ ಹೆಂಗಸರು ಸಿದ್ದಪ್ಪನ ಬಾಯಿಂದ ರಿಲೇ ತೆಗೆದುಕೊಂಡು ಆಡತೊಡಗಿದರು. “ಅಲ್ದೇ ಇದ್ರೂ. ಈ ನನ್ ತಾಯಿ ಅದ್ಯಾವ್ ನಕ್ಷತ್ರದಲ್ಲುಟ್ಟಿದ್ಲೋ ಕಾಣಿ ಓಗು, ಅವರವ್ವ ಈ ಊರ್ಲೆ ಜೀವನ ಮಾಡಿದ್ರ ಇವಳ ಮಾನೊಸ್ಥರು ಮದ್ವೆ ಮಾಡ್ಕಳರಾ? ಈ ಐಭೋಗ ಸಿಕ್ತಿತ್ತಾ?.” ಸುಶೀಲಗೂ ನಾಲಗೆ ಕಡೀತು, ತಾನೂ ಕಂಡ ಐಭೋಗ ವರ್ಣಿಸತೊಡಗಿದಳು. “ಆವತ್ತು ನನ್ ಮೈದುನನ್ ಮದ್ವಗ್ ಯೋಳಕ್ಕೋ ಗಿದ್ನಲ್ಲ , ಆವತ್ ನೋಡಬೇಕಾಗಿತ್ತು. ಕಿಟ್ಟಿ ಪಾರ್ಟಿ ಅಂತಲಂತ, ತಿಂಗಳಗೊಬ್ಬಬ್ಬರ ಅಟ್ಟಿಲಿ ಅಂಗ್ ಸೇರ್ಕಂಡರಂತ, ಬರೀ ಎಂಗಸ್ಗಳೆ ಸೇರ್ಕೊಂಡ್ ಮಾಡದಂತೆ, 20-30 ಜನ ಇದ್ರು ಕಣ್ ನನ್ ತಾಯ್ಗಳೇ, ಸೌಭಾಗ್ಯ ಕರ್ಕೊಂಡೋಗಿ ಇವರು ನಮ್ಮೂರವರು ಅಂತ ಯೋಳುದ. ಅವರ್ ಮಾತೇನ . ಕತೆಯೇನ ಒಡವೆ , ಸೀರೆ ಏನ.? ಅವರ್ ಮಾತೋ ಕತ್ಯೋ ಒಂದೂ ಅರ್ಥವಾಗೊಲ್ದು. ಬರೀ ಇಂಗ್ಲೀಷಿಯೇ. ನಾನೂ ಅತ್ತಗೂ ಇತ್ತಗೂ ನೋಡ್ದಿ, ಆ ಹೆಂಗಸ್ಕೊಳ್ ಮುಂದ ನಿಂತ್ಕಳಕೇ ನಾಚ್ಕ ಆಗೋಯ್ತು ನನಗ. ಕಡೆದು ಬಂದ್ಬುಟ್ಟೆ,”
 
ಕುಡಿಯಕ , ತಿನ್ನಕ ಒಸಿ ಮಡಗಿರ್ನಿಲ್ಲ. ಈ ಸೌಭಾಗ್ಯ ಅಕ್ಕ ಊಟ ಮಾಡ್ಕಂಡೋಗಿ ಅಂದ್ಲು, ಅಲ್ಲೋಗಿ ಅದೆಂತದೋ ಎಸರೇ ಬರದೇ ಇರೋ ತಿಂಡಿಗಳ ತಿನ್ನಕ್ ಬರದೇ, ಅವಮಾನ ಮಾಡ್ಕಂಡ್ ಬರಬೇಕಾಯ್ತದ ಅಂತ ನಾನೇ ಓಗ್ನಿಲ್ಲ. “ ಅಂದಳು. “ ಐ ಅಂತ ಊಟ ಬುಟ್ಬುಟ್ ಬಂದಿದ್ದಯಲ್ಲ ಯೋಳು. ನಾನಾಗಿದ್ರ ಅದೆಂತದಾರು ಆಗಿರ್ಲಿ ಅಂತ ತಿನ್ಕಂಡ್ ಬರಾನು” ಮಂಜುಳ ಅಂದಳು. “ನೋಡು, ಜೀತಗಾರನಿಗ್ ಹುಟ್ಟಿರಾ ಬಡ್ಡಿ ಯೋಗವಾ” ಹರಕುಬಾಯಿ ಸಿದ್ದಪ್ಪ ಮತ್ತೆ ಸೇರಿಸಿದ.
ಮರಿಲಿಂಗಪ್ಪ ಅಷ್ಟೊತ್ತೂ ಸುಮ್ಮನೆ ಕೂತಿದ್ದೋನು, ಎದ್ದು ಜಗುಲಿ ಬದಲಿಸಿದ, “ಅಷ್ಟೊತ್ತಿಂದ ನಾನೂ ಕೇಳತ್ಲೇ ಇವ್ನಿ, ಆ ಎಣ್ಣು ಬಂದ್ ಹೋತ್ತಾವಿಂದ ಇದ್ನೇ ಆಡುದ್ರಿ, ಉಡೌ ಸಿದ್ದಪ್ಪ, ಆ ಎಣ್ಣು ರಾಜೀನ ಗಂಡಸಾದವನಿಗ್ ಮದ್ವಮಾಡಿದ್ರ, ಅಂವ ಯಾಕ್ ಜೀತಗಾರನ್ ನೋಡಳು ಯೋಳು ಮತ್ತ? ಆ ಷಂಡ ಬಡ್ಡೇದ ತಾನೇ ಯೋಳ್ಕೊಟ್ಟಿದ್ನಂತ, ಮಾನ ಓಯ್ತದ, ಬಾಯಿ ಬುಡಬೇಡ, ಯಾವನ್ ತಾಂವಕಾರೂ ಓಗ್ ಮನಿಕೋ ಅಂತ. ಕೂಸು ಧರೆಗ್ ಬಿದ್ದೇಟ್ಗೆ ಓಗಿ ಗೌಡನ ಮಗ, ಕೆರಗ್ ಮುಳಿಕಂಡ, ಆ ಜೀತಗಾರ ಗಂಡು ಎದರ್ಕಂಡ್ ಊರ್ನೇ ಬುಟ್ಬುಡ್ತು. ಗೌಡ ಆಸ್ತಿನೆಲ್ಲ ಹೆಣ್ಮಕ್ಕಳೆಸುರುಗ್ ಬರೆದ್ಬುಟ್ಟ. ಆ ಎಣ್ಣು ಈ ಊರ್ಲಿದ್ರ ನೀವು ಬಾಳಾಟ ಕೊಡ್ತಿದ್ರ್ಯಾ? ಕೈಯೋ ಕಾಲೋ ಹಿಡಿದು ಆ ಡಾಕುಟರ್ ಮನಲಿ. ಕೆಲಸಕ್ ಸೇರ್ಕಂಡ. ಪುಣ್ಯಾತ್ಮ , ಎಡ್ತಿ ಸೊತ್ತೋಗಿ ಒಬ್ಬಂಟಿಗನಾದ , ತಣ್ಣೀರ್ಗ ಬಿಸಿನೀರಿನಾಸೆ ಅಂತ. ಅವಳುಗೂ ಅವನಗೂ ಸರೋಯ್ತು. ಇವನು ಸಿದ್ದಪ್ಪ ಹೇಳುತ್ತಿದ್ದ ಇತಿಹಾಸದ ಕಥೆಗೆ ವಸ್ತುಸ್ಥಿತಿ ಸೇರಿಸಿದ.
ಆ ರಾಜೀಗುಟ್ಟಿರಾ ಈ ಮಗಳು ಈ ಊರ್ಗ ಯಾತಕ್ ಬರಬೇಕು ಯೋಳು ಮದ್ಲು? ಕಾಸು ಕರಿಮಣಿ ಸಿಕ್ತಿತ್ತಾ? ಇಲ್ಲ. ಅವಳೇ ನಿಮ್ಮ ಕಷ್ಟಗಳಿಗೆಲ್ಲ ಆಯ್ತಳ. ಸುಳ್ಳೋ ನಿಜವೋ ಹೇಳು? ಕೇಳಿದ “ ನಿಜ ಕಣಪ್ಪ, ನನ್ ಮಗನಿಗ ಜಾಂಡೀಸಾಗಿದ್ದಾಗ. ಓಗ್ ಕ್ಯೋಳಿದೇಗಟ್ಗೆ ಐದ್ ಸಾವ್ರ ಎತ್ಕೊಟ್ಬುಟ್ಲು ನನ್ ತಾಯೀ. ಅವಳ ಗಂಡನೂ ಪುಣ್ಯಾತ್ಮ,. ಅವರ ಆಸ್ಪತ್ರಲೇ ಸೇರಿಸ್ಕೊಂಡು ಗುಣ ಮಾಡಿದ್ರು. ಐದ್ ಪೈಸ ತಕ್ಕಳ್ನಿಲ್ಲ.”ಅಂದಳು ಶಿವಮ್ಮ.
ಸಿದ್ದಪ್ಪ ಬುಸು ಬುಸು ಅನ್ನುತ್ತಲೇ ಇದ್ದ. ಮರಿಲಿಂಗಪ್ಪ ಮಾತು ಮುಂದುವರೆಸಿದ “ಆ ಗುಣ ಹೆಣ್ಣುಗ್ ಬಂದಿರಬೇಕಾದ್ರ ಅದು ಸುಮ್ಮನ ಬಂದುದಾ? ರತ್ತದಲ್ಲಿರಬೇ ರತ್ತದಲ್ಲಿ “ ಸಿದ್ದಪ್ಪ ರತ್ತದ ಮಾತಿಗೆ ಮುಸಿ ಮುಸಿ ನಕ್ಕ. ಮರಿಲಿಂಗಪ್ಪನ ರೋಷ ಉಕ್ಕಿತು. “ ಯಾಕುಡಾ ಅಂಗ್ ಕೊಸಗುಟ್ಟಿಯೇ? ಇವರವ್ವ ಆ ರಾಜೀ ಕಮ್ಮಿ ವಂಶದವಳ? ದೊಡ್ ಆಸ್ತಿವಂತರು. ಅವರಪ್ಪ ಅವರ ತಾತ ಎಲ್ಲ ಕೊಟ್ ಬಾಳಿದವರು. ಅಟ್ಟಿ ಜೀತಗಾರರಿಗೂ ಗಟ್ಟಿ ಮಸರು ಉಯ್ತಿದ್ದವರು. 2-3 ವರ್ಷ ನಾನೇ ಇದ್ದು ನೋಡಿನಿ ಆಗ. ಬೊಪ್ಪಗೌಡನಪುರದ ಕಂಡಾಯ ಒಂಟ್ರ, ಸ್ವಾಮ್ಗೊಳು ಆಗ ಕುದರೆ ಮೇಲ್ ಬರಾವರು. ಇವರಟ್ಟೀಲಿ ಬುಟ್ರ ಎಲ್ಲೂ ಉಂಡವರಲ್ಲ. ಶ್ರೀಶೈಲದಿಂದ ಮುಡುಕೊತೆರೆಗ್ ಬರ್ತಿದ್ದ ದರ್ಬಾರಿನ ಎತ್ತುಗಳುಗ ಇವರಟ್ಟೀಲ್ ನಡೀತಿದ್ ಪೂಜೆ ನೋಡಕ್ ಒಂದ್ ಆನಂದ. ಆಳುಗಳು ಅಂದ್ರ ಮನ ಮಕ್ಕಳಂಗ ನೋಡ್ಕತಿದ್ರು. ಕಷ್ಟ ಅಂದವರ ಯಾವತ್ತಿಗೂ ಬರಿಕೈಲಿ ಕಳಿಸಿದವರಲ್ಲ. ದೊಡ್ ಘಟ, ದೊಡ್ ಮನಸು.ಗೌಡರದು. ಚನ್ನಮಲ್ಲಪ್ಪನೋರು ವಿಭೂತಿ ಪಟ್ಟೆ ಬಳ್ಕಂಡ್ ಬಂದ್ ಕುಂತ್ಕಂಡ್ರ ಸಾಕ್ಸಾತ್ ಅಲ್ಲಮಪ್ರಭುಗಳೇ ಬಂದಂಗಾಯ್ತಿತ್ತು.
ಅಂತವನ ಮಗಳು ಈ ರಾಜಿ. ಅವಳಿಗೂ ಅಪ್ಪನ ಸಂಸ್ಕಾರವೇ, ಈ ಊರ್ ಎಂಗಸ್ಗಳು ದೇವರ್ ಪೋಟಕ್ಕ ಉಭತಿ, ನೀರು, ಅರಿಶಿನ ಕುಂಕುಮ ಬಳಿಯದ್ ಬುಟ್ಟು ಬ್ಯಾರೆ ಪೂಜ ಕಲ್ತಿದ್ರ? ರಾಜೀ ಬಂದ್ಮೇಲ ಇವರೆಲ್ಲ ಹಬ್ಬ, ಅರಿಜಿನ, ಎಲ್ಲ ಕಲುತ್ರು. ಅವಳೂ ಪುಣ್ಯಾತ್ಗಿತ್ತಿ. ಕೈಲಿ ಅನ್ನ ಹಾಕುದ್ರ ಎಂತಾ ಉಣ್ಣ ಮಗನೂ ಇನ್ನೊಂದ್ಸಲ ಕೇಳಬಾರದು ಅಂತಾ ದೊಡ್ ಕೈ. ಏನೋ ಗ್ರಾಚಾರ ಈ ಊರ್ಗ, ಈ ಗೌಡನ್ ಹಟ್ಟಿಗ್ ಬಂದ್ ಸಿಕ್ಕಾಕಂಡ. ನೇನೋ ಆಗೋದ. “ಊರುಕೇರಿ ಮರೀಬೇಡ, ಅವರ ಕಷ್ಟಕ್ಕಾಗು” ಅಂತ ಅವ್ವ ಯೋಳ್ಕೊಟ್ಟಿರಾ ಪಾಠ, ಅವರ ತಾತ ಚನ್ನಮಲ್ಲಪ್ಪನವರ ರತ್ತ ಈ ಸೌಭಾಗ್ಯಳ ಗುಣದಲ್ಲಿ ಬಂದಿರದು.”
ಸಿದ್ದಪ್ಪ ಬಿದ್ದೂ ಬಿದ್ದೂ ನಗತೊಡಗಿದ. “ಚನ್ನಮಲ್ಲಪ್ಪನ ರತ್ತ ರಾಜೀಗ್ ಬಂದಿರಾ ಮಾತ ಒಪ್ಕೋಬೋದು. ಅದು ಈ ಸೌಭಾಗ್ಯ ಅನ್ನವಳಿಗೆಂಗ್ ಬಂದದು? ಅವಳು ಉಟ್ಟಿರಾದು ಗೌಡನಟ್ಟಿ ಜೀತಗಾರ ಶಂಭನಿಗೆ. ಈ ಶಂಭನೂ ಅವರಪ್ಪನೂ ಯಾವ್ ದೊಡ್ ಮನುಸರಾಗಿದ್ದರಪ್ಪ? ಯಾವ್ ಮನುಸರ್ಗ, ಮಠ-ಮಾನ್ಯಗಳುಗ ದಾನ ಕೊಟ್ಟಿದ್ನಪ್ಪ? ಕೇಳಿದ. “ಕೂಸು ಯಾರಿಗಾರು ಉಟ್ಟಿರ್ಲಿ. ಅದ ನಾವೂ ಕಂಡಿಲ್ಲ ನೀವೂ ಕಂಡಿಲ್ಲ. ಅವ್ವ ಸತ್ಯ, ಅಪ್ಪ ನಂಬಿಕೆ. ಅದ್ ಬ್ಯಾರೆ ಮಾತು. ಆದ್ರ ಅದರ ಮೈಲಿ ಹರಿಯಾದು ಬರೀ ಅಪ್ಪನ ರತ್ತವಲ್ಲ ತಿಳ್ಕೋ” ಅಂದ ಮರಿಲಿಂಗಪ್ಪ. “ಮಗಳ ಮದುವೆಗೆ ಕಾಸು ಎಷ್ಟ್ ಈಸ್ಕಂಡಿದ್ದೀಯೇ ಹೇಳು?” ಅಂತ ಮರಿಲಿಂಗಪ್ಪನ್ನ ಕುಹಕವಾಡಿ ಸಿದ್ದಪ್ಪ ಪಂಚೆ ವದರಿಕೊಂಡು ಮೇಲೆದ್ದ.
 

‍ಲೇಖಕರು G

8 July, 2014

ನಿಮಗೆ ಇವೂ ಇಷ್ಟವಾಗಬಹುದು…

4 Comments

  1. VidyaShankar

    ಸುತ್ತಲಿನ ಜನರ ಮನಸ್ಥಿತಿ ಮತ್ತು ರಕ್ತ ತಾಯಿಯದೂ ಕೂಡ ಅಂತ ತುಂಬಾ ಚೆನ್ನಾಗಿ ಬರೆದಿದ್ದೀರಿ 🙂

  2. amardeep.p.s.

    ತುಂಬಾ ಚೆನ್ನಾಗಿದೆ ಬರಹ ಮತ್ತು ಶೈಲಿ …… ಅಭಿನಂದನೆಗಳು …

  3. Anonymous

    ಅವನು ಉಂಡದ್ದು ಜೀರ್ಣವಾಗಲು ಒಂದಾದರೂ ಇತಿಹಾಸದ ಪಾಠ ಮಾಡಲೇಬೇಕಿದ್ದುದು ಅವನ ರೂಢಿ. ಇವತ್ತು ರಾಣಿಯಂತವಳ ಚರಿತ್ರೆಯ ಕೆದಕುವ ಅವಕಾಶ ಸಿಕ್ಕಿರೋವಾಗ ಅವನು ಹೇಗೆ ಬಿಟ್ಟಾನು? ಶುರುಹಚ್ಚಿಕೊಂಡ.
    “ ಜಗಲಿ ಹೆಂಗಸರು ಸಿದ್ದಪ್ಪನ ಬಾಯಿಂದ ರಿಲೇ ತೆಗೆದುಕೊಂಡು ಆಡತೊಡಗಿದರು.
    “ನೋಡು, ಜೀತಗಾರನಿಗ್ ಹುಟ್ಟಿರಾ ಬಡ್ಡಿ ಯೋಗವಾ”
    odthaa odtha sakath majaa sikthu

  4. chaithra

    Chennagide:)

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading