ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕುಸುಮಬಾಲೆ ಕಾಲಂ, ’ಯ್ಯೋಳ್ತೀನ್ ಕೇಳಿ’ : ಮಣ್ಣು ಮಾಯೆಯೆಂಬರು, ಮಣ್ಣು ಮಾಯೆಯಲ್ಲ…

ಅಪ್ಪ ಹಾರ್ಟ್ ಆಪರೇಷನ್ ಆಗಿ ಮೈಸೂರಿನ ಮಾವನ ಮನೇಲಿ ಉಳಿದಿದ್ದರು. ನಾನೂ ಅಲ್ಲಿಂದಲೇ ನಮ್ಮ ಧಾರಾವಾಹಿ ಬರೆವ ಕಾಯಕಮಾಡುತ್ತಿದ್ದೆ. ಒಂದಿನ “ಅಕ್ಕಾ.. ಅಕ್ಕಾ..” ಯಾರೋ ಕೂಗಿ ಧನಿ. ಅಮ್ಮ ಇಣುಕಿ ನೋಡಿದರು. “ತರಕಾರಿ ಮೂಟ ಎಲ್ ಮಡುಗ್ಲಿ? “ ಇಲ್ಲೆ ಇಡಪ್ಪ” ಬತ್ತೀನಿ ಅಕ್ಕ, ಮಹೇಶಣ್ಣ ಬಂದ್ರ ಯೋಳ್ಬುಡಿ” ಅಂತ ಹೊರಟ, “ಬಪ್ಪ.ಟೀ ಕುಡಿ” ಅಮ್ಮನ ಆಹ್ವಾನ. “ಬ್ಯಾಡಿ ಅಕ್ಕ ನಾ ಏನೂ ಕುಡಿಯಲ್ಲ” ಅಂದ.“ಯಾವೂರಪ್ಪ” ಅಪ್ಪ ಕೇಳಿದರು. “ಇಲವಾಲ” ಅಂದ . ಇಲ್ಲೇನು ಕೆಲಸ ಮಾಡ್ತೀಯ? “ ಲಲಿತ್ ಮಹಲ್ ಪಕ್ಕದಲ್ಲಿ ಸಾಕಳ್ಳಿ ಜಮೀನುಗಳೆಲ್ಲ ಲೇ ಔಟ್ ಆದ್ವಲ್ಲ? ಅಲ್ಲಿ ಸೈಟ್ ಅಳತೆ ಮಾಡ್ತಾರೆ, ಅಲ್ಲಿ ಸೈಟುಗಳಿಗೆ ಕಲ್ ನೆಟ್ಟು ಬಣ್ಣ ಹಾಕದು.” “ಮದ್ವೆ?” “ಚೋರನಹಳ್ಳಿ ಹುಡುಗಿ ಮದ್ವೆ ಆಗಿದೀನಿ ಅಣ್ನ, “ ಓ ಚೋರ್ನಹಳ್ಳಿ? ನಮ್ಮೂರ್ ಪಕ್ಕದ್ದು? ಅಲ್ಯಾರ್ ಮನೆ ಹುಡುಗಿ? ಕೇಳಿದರು ಅಪ್ಪ. ಅವನು ವಿವರ ಹೇಳಿದ. ಅಪ್ಪ ಒಂದಷ್ಟು ಸುತ್ತಾಕಿ ಅವನತ್ತೆ ಮನೆ ಗುರುತು ಹಚ್ಚಿದರು. “ಒಬ್ಳೇ ಮಗಳಲ್ವ? ಆ ಹುಡುಗಿ?” “ ಹ್ಞೂ ಅಣ್ಣ , ಎರಡೆಕರೆ ಜಮೀನಿದೆ” ಅಂದ ಎಲ್ಲಿ? ಕೇಳಿದರು. “ಚೋರನಹಳ್ಳಿ ಬಸ್ಟಾಂಡ್ ಹಿಂದಿರದೇ ನನ್ ಹೆಂಡತಿ ಹೆಸರಲ್ಲಿರೋ ಜಮೀನು” ಅಂದ.. “ಮತ್ತಿನ್ನೇನಯ್ಯ? ಕೋಟ್ಯಾಧಿಪತಿ ನೀನು..ಈಗೆಲ್ಲ ನಲವತ್ತು ಐವತ್ತು ಲಕ್ಷ ಹೇಳ್ತಾರೆ ಆ ಏರಿಯಾದಲ್ಲಿ. ನೀ ಯಾಕ್ ಸೈಟ್ ಅಳತ ಮಾಡ್ಕಂಡ್ ನಿಂತಿದ್ದಯೀ?. “ಈ ಜಮೀನು ನನಗ್ ಲೆಕ್ಕ್ಕಕೇ ಇಲ್ಲ ಅಣ್ಣ.
ನಮ್ಮೂರ್ಲಿ ಅತ್ತೆಕರೆ ಅದ ಎಕರೆಗೆ ಎಂಬತ್ ಲಕ್ಷ , ಕೋಟಿ ಗಂಟ ರೇಟ್ ನಡಿತಾ ಅದ? ಅಂದ . ಅಯ್ಯೋ ಮಾದಪ್ಪನೇ..ಅಲ್ಲಿಗೆ ಇವನು ಹತ್ತನ್ನೆರಡ್ ಕೋಟಿ ಒಡೆಯ!! ದಾರಾವಾಹಿ ಸಂಭಾಷಣೆ ಬರೀತಾ ಈ ಮಾತ್ನೆಲ್ಲ ಕಿವಿಗ್ ಹಾಕೋತಿದ್ ನನಗೆ ಈ ವಿಚಿತ್ರ ಆಸಾಮೀನ ನೋಡ್ಲೇಬೇಕನ್ನಿಸಿ ಎದ್ದು ಬಂದೆ. ಐದೂವರೆ ಅಡಿಯ ಒಣಕಲು ದೇಹಿ, ಮುಖದಲ್ಲಿ ಪೆದ್ದು ಕಳೆ. ಕೊಳೆಯಾದ ಶರಟು, ಸಿಮೆಂಟು ಮೆತ್ತಿಕೊಂಡ ಪ್ಯಾಂಟು. “ ಅಲ್ರೀ.. ನಿಮ್ಮ ಜಮೀನೇ ಲೇ ಔಟು ಮಾಡಿ ನೀವೇ ಸೈಟ್ ಹಂಚೋ ಸ್ಥಿತೀಲಿರೋವಾಗ, ಬೇರೆ ಸೈಟಿನ ಅಳತೆಕಲ್ಲು ನೆಟ್ಟು ಬಣ್ಣ ಬಳಿಯೋ ಕೆಲ್ಸ ಯಾಕ್ ಮಾಡ್ತಿದೀರ?” ಅವನು ಕಥೆ ಹೇಳಿದ. ಹುಣಸೂರು ರಸ್ತೆಯ ಇಲವಾಲದ ಬಳಿ ಅವರಿಗಿದ್ದದ್ದು ಹತ್ತಲ್ಲ, ಮೂವತ್ತು ಎಕರೆ ಜಮೀನು. ಇಪ್ಪತ್ತು ಎಕರೆ ಆಗಲೆ ಮಾರಿಯಾಯ್ತು. ಈಗ ಉಳಿದಿರೋದು ಹತ್ತೆಕರೆ.
ಲೇ ಔಟ್ ಜನ ಬಂದು ಜೀವಮಾನದಲ್ಲೆಂದೂ ನೋಡದಷ್ಟು ಲಕ್ಷಗಳಿಗೆ ಬೇಡಿಕೆ ಇಟ್ಟಾಗ, ಮೊದಲು ಹತ್ತೆಕರೆ ಮಾರಿದ.ಅಪ್ಪನ ಒಬ್ಬನೇ ಮಗ, ಕೈಲಿ ಬೇಕಾದಷ್ಟು ದುಡ್ಡು. ಎಲ್ಲ ಶೋಕೀನೂ ಮಾಡಿದ. ಫ್ರೆಂಡ್ಸ್ಗೆ ಕೊಟ್ಟ, ಸಾಲಕ್ಕೆ ಜಾಮೀನಾದ. ಸಾಕಷ್ಟು ಹಣ ಪೋಲಾಯ್ತು. ಕೈಲಿದ್ದ ಕಾಸು ಖಾಲಿಯಾದ ಮೇಲೆ ಸ್ನೇಹಿತರು ಹತ್ತಿರ ಸುಳಿಯಲಿಲ್ಲ. ಜಾಮೀನೂ ತಲೆಮೇಲೆ ಬಂತು, ಮತ್ತೆ ಇವನೇ ಸಾಲ ಮಾಡಿದ. ಮತ್ತೆ ಹತ್ತು ಎಕರೆ ಮಾರಿದ. ಅಷ್ಟೂ ಹಣದಲ್ಲಿ ಸಾಲಾ ಚುಕ್ತಾ ಮಾಡಿದ.
ಲಕ್ಷಗಳು ಅಲಕ್ಷ್ಯವಾಗಿದ್ದ ಸ್ಥಿತಿ, ಖಾಲಿ ಕೈ ಎರಡನ್ನೂ ನೋಡಿದ. ಕಾಸಿದ್ದಾಗ ಬರುವ, ಇಲ್ಲದಿದ್ದಾಗ ಮುಖ ತಿರುಗಿಸುವ ಜನ ರೇಜಿಗೆ ಹುಟ್ಟಿಸಿದ್ದರು. ಜೀವನ ಹೊಸ ಪಾಠ ಕಲಿಸುತ್ತಿತ್ತು. ಈ ನಡುವೆ ಅವನ ದೊಡ್ಡಪ್ಪನ ಮಗ ಇವನಷ್ಟೇ ಆಸ್ತಿವಂತ. ಅವನೂ ಒಬ್ಬನೇ ಮಗ, ಮದುವೆ ಫಿಕ್ಸ್ ಆಗಿತ್ತಂತೆ..ಡೆಂಗ್ಯೂ ಬಂದು ಸತ್ತುಹೋದನಂತೆ. ಈ ಸಾವು ಅವನಿಗೊಂಥರ ನಶ್ವರತೆ ಮೂಡುವಂತೆ ಮಾಡಿತು. ಬಯಸದಿದ್ದರೂ ಸತ್ತ ಅವನ ಆಸ್ತಿಗೂ ಈಗ ಇವನೇ ಹಕ್ಕುದಾರ. ಅಲ್ಲಿಗೆ ಮತ್ತಷ್ಟು ಕೋಟಿಗಳ ಒಡೆಯ. ಆದರೆ ಯಾಕೋ ಅವನಿಗೆ ಯಾವುದೂ ಬೇಡವೆನಿಸಿದೆ. “ಇರಾದ್ ನಾನು ನನ್ ಹೆಂಡತಿ, ನಮ್ಮಜ್ಜಿ ಮೂರೇ ಜನ ..ಜಮೀನ್ಲಿ ಒಂದಷ್ಟ್ ತರಕಾರಿ ಬೆಳ್ಕತ್ತೀನಿ. ಇಲ್ಲಿ ಲೇ ಔಟ್ ಕೆಲ್ಸ ಮಾಡ್ತೀನಿ.ನಮ್ ಸಂಬಂಧಿಕರದೇ ಲೇ ಔಟು. ಬದುಕೋಕ್ ಸಾಕು. ಕಾಸು ಎಷ್ಟಿದ್ದರೇನು? ತಿನ್ನದ್ ನಾಕ್ ತುತ್ತು ಅನ್ನ ತಾನಿಯೇ?” ತತ್ವ ಎಸೆದ. ಜಮೀನು ನಾನು ದುಡೀಲಿಲ್ಲ. ಮಾರೋ ಹಕ್ಕೂ ನನಗಿಲ್ಲ ಅಂದುಬಿಟ್ಟ” ಮೈಸೂರ್ ಪಕ್ಕದಲ್ಲೇ ಹತ್ತೇ ಕಿಲೋಮೀಟರು. ಅಲ್ಲಿ ಐದೆಕರೆ ಜಮೀನಿದೆ ನಮ್ದು” ಅಂತ ಬೀಗಿ ಹೇಳಿಕೊಳ್ಳುವುದನ್ನು ಆವತ್ತಿಂದ ನಿಲ್ಲಿಸಿದ್ದೇನೆ.

ಅಪ್ಪನ್ನ ಊರಿಗೆ ಬಿಟ್ಟು ಬೆಂಗಳೂರಿಗೆ ಹೊರಟು ನಮ್ಮೂರ ಬಸ್ಟಾಂಡಿನಲಿ ನಿಂತಿದ್ದಾಗ ನಮ್ಮ ಪೈಲ್ವಾನಣ್ಣ ಬಂದರು. ಪೈಲ್ವಾನ್ ಅಂದರೆ ದಪ್ಪ ಮೀಸೆಯ, ದೊಡ್ಡ ದೇಹದ ಜಟ್ಟಿ ಅಲ್ಲ. ಅದು ಅಂಚಿಕಡ್ಡಿಯಂತ ದೇಹ. ಒಂದ್ಸಲ ಒಂದು ಮದುವೆ ಮನೇಲಿ ಗಲಾಟೆಯಾಗ್ತಿತ್ತಂತೆ. ನಮ್ಮೂರವರ್ಯಾರೋ ಪೈಲ್ವಾನನ್ ಕೂಗಿ ಪೈಲ್ವಾನನ್ ಕೂಗಿ ಅಂದ್ರಂತೆ. ಆ ಊರವರು ಫುಲ್ ಗಡ ಗಡ. ಅಷ್ಟರಲ್ಲಿ ನಮ್ ಪೈಲ್ವಾನಣ್ಣ ಸೌಟು ಹಿಡ್ಕೊಂಡ್ ಬಂದರು. (ಮದುವೆಲಿ ಪೈಲ್ವಾನು ಅಡುಗೆ ಬಡಿಸೋಕೆ ಬಂದಿದ್ರು.) ಪೈಲ್ವಾನರ ಆಕಾರ ನೋಡಿ ಗಲಾಟೆ ನಿಂತು ನಗು ಶುರುವಾಯ್ತಂತೆ. ಇವರ ಒರಿಜಿನಲ್ ಹೆಸರು ಮಹದೇವ. ನನ್ನ ತರಲೆ ಅಣ್ಣಂದಿರು ಇವರಿಗೆ ಪೈಲ್ವಾನ್ ಅಂತ ಹೆಸರಿಟ್ಟಿದ್ರು. ನಾನೂ ನನ್ನ ತಂಗಿಯೂ ಪೈಲ್ವಾನಣ್ಣ ಅಂದರೆ ಎಲ್ರೂ ಬಿದ್ದೂ ಬಿದ್ದೂ ನಗೋರು. ಅವತ್ತು ಎಷ್ಟೋ ವರ್ಷದ ನಂತರ ಸಿಕ್ಕರು. “ಏನ ಕುಸ್ಮ.. ನಿನ್ ಮಗನಾ ಇಂವ?” ಕೇಳಿದರು. “ಹೂ ಅಣ್ಣ. ನಿಮ್ಮ ಮಗ?” “ ಊರ್ಗೋಗನ. ರಜವಲ್ವ ಈಗ.? ಎಡ್ತಿ ಮಗ ಇಬ್ರೂ ಇಲ್ಲ. ಅಂದ್ರು.. ಒಂದಿಂಚೂ ವ್ಯತ್ಯಾಸವಿಲ್ಲ. ಅದೇ ಝೀರೋ ಸೈಜಿನ ಆಕೃತಿ. ಸರಿ ಉಭಯ ಕುಶಲೋಪರಿ ಶುರುವಾಯ್ತು. “ನನಗೇನ್ ಯೋಚ್ನ ಇಲ್ಲ ಈಗ. ಉತ್ತನಹಳ್ಳಿ ನನ್ ಎಂಡ್ತಿ ಅಪ್ಪನ ಮನ. ಮೂರ್ ಜನ ಅಣ್ಣದೀರು ಇಂವ ಒಬ್ಬಳೇ ಮಗಳು. 8 ಎಕರ ಜಮೀನಂವ. ಎಕರಗ ಎಪ್ಪತ್ತೈದ್ ಲಕ್ಷಕ್ ಕ್ಯೋಳ್ತಾ ಅವರ.. ಅವರು ಒಂದ್ ಕೋಟಿ ಆಗ್ಲಿ ನೋಂಡವು ಈಗೇನರ್ಜೆಂಟು ಅಂತ ತಡ್ಕಂಡರ. ಮಾರಬೇಕು ಅಂದ್ರ ನನ್ ಎಡ್ತಿ ಸೈನೂ ಬೇಕು. ಈಗ ನನ್ ಮಗನ್ನ 50 ಸಾವ್ರ ಕೊಟ್ಟು ಕಾನ್ವೆಂಟಗ್ ಸೇರ್ಸರ. ಬಟ್ಟ ಬರಿ. ಖರ್ಚೆಲ್ಲ ಅವರದೇ. ದುರಾಸ ಇಲ್ಲ ನನಗ. ಹತ್ ಕುಂಟೆ ಜಮೀನ್ ಕೊಟ್ರೂ ಸಾಕು ಬೇಕಾದಷ್ಟಾಯ್ತು. ಅದ್ಕೇ ನಾನು ಈಗ ಎಲ್ಲೂ ಕೆಲ್ಸಕ್ ಓಗಲ್ಲ. ಸುತ್ತೂರ್ ಮಠದವರು ಪಂಕ್ಷನ್ ಮಡುಗುದಾಗ ಓಗಿ ಪೆಂಡಾಲ್ ಹಾಕ್ತೀನಿ. ಈಗೇನ್ ದಿನಕ್ ಐನೂರ್ ಕೂಲಿ. ತಿಂಗಳಗ್ ಹದಿನೈದ್ ಜಿನ ಕೆಲ್ಸ ಮಾಡ್ತೀನಿ. ಸಾಕು ಬೇಕಾದಷ್ಟು. ಗೇದು ಮಗನಿಗ್ ಕಾಸ್ ಮಡಗಬೇಕು ಅನ್ನಂಗೇನಿಲ್ವಲ್ಲ.? ತಿರಗಾಡಕಂಡ್ ಆದಷ್ಟ್ ಕೆಲ್ಸ ಮಾಡ್ಕ ಓಯ್ತಾ ಇರದು” ಅಂದ್ರು. ಇನ್ನು ಹತ್ತಾರು ವರ್ಷ ಕೂಲಿ ಮಾಡಿದರೂ ನೋಡಲಾಗದ ಮೊತ್ತ ಶ್ರಮವಿಲ್ಲದೆಯೇ ಪೈಲ್ವಾನಣ್ಣನ ಅಕೌಂಟಿಗೆ ಬಂದು ಬೀಳುತ್ತದೆ. “ಇನ್ನೇನಣ್ಣ ಮತ್ತೆ ಹೊಡದ್ರಲ್ಲ ಚಾನ್ಸು” ಅಂದೆ. ಪೈಲೂ ಹಲ್ಕಿರಿದರು. ನಂಗೆ ಬಸ್ಸು ಬಂತು.
ವರುಣ.. ಚೋರನಹಳ್ಳಿ..ಸುತ್ತ ಮುತ್ತಲ ಜಮೀನುಗಳು ಮೈಸೂರು ನಗರಾಭಿವೃದ್ದಿ ಮಂಡಳಿಗೆ ಒಳಪಡೋ ಮುನ್ಸೂಚನೆ ಸಿಕ್ಕಿ, ರೈತರು ಅನಿವಾರ್ಯವಾಗಿ ಜಮೀನು ಮಾರಲೇಬೇಕಾಯ್ತು. ಆಗ ಆ ಊರುಗಳಿಂದ ಮದುವೆಯಾಗಿ ಹೋಗಿದ್ದ ಹೆಣ್ಣುಮಕ್ಕಳ ಗಂಡಂದಿರೂ, ಅವರ ಮನೆಯವರಿಗೂ ಚಾನ್ಸೋ ಚಾನ್ಸು. ಇಲ್ಲಿ ಕೋಟಿಗೆ ಮಾರಿದ್ದು ಅಲ್ಲಿ ಲಕ್ಷಗಳಾದರೂ ಭಾಗ ಸಿಗುತ್ತದೆ. ಕೆಲ ಹೆಣ್ಣುಮಕ್ಕಳು ಸಮಪಾಲು ಬೇಕೇಬೇಕು ಅಂತ ಹಠಕ್ಕೆ ಬಿದ್ದರೆ. ಮತ್ತೆ ಕೆಲವರು ಕೊಟ್ಟಷ್ಟು ಕೊಡಿ ನನ್ನಪ್ಪನ ಮನೆ ಹಾಳುಮಾಡಲಾರೆ ಅಂದರು. ಇನ್ನೂ ಕೆಲವರ ಪಾಡೇನು ಹೇಳ್ತೀರಿ. ಗಂಡ ಕೇಳು ಅನ್ನೋಕೆ.. ಅಪ್ಪನ ಮನೆಯವರು. “ನಾವು ಜಮೀನ್ ಕಳ್ಕಳವರು ಬಂದದ್ನೆಲ್ಲ ಹಂಚ್ಬುಟ್ರ ನಮಗೇನ್ ಉಳ್ಕಂಡದು ? ಕಷ್ಟಬಿದ್ದು ನಿಮ್ಮ ಮದ್ವ ಮಾಡಿಲ್ವ? ಬಾಣಂತನ ಮಾಡಿಲ್ವ? ಅಂತ ಎಮೋಷನಲ್ ಬ್ಲಾಕ್ಮೇಲ್ ಮಾಡೋಕೆ. ಮಧ್ಯೆ ಆ ಹೆಣ್ಣುಜೀವಗಳದು ಕತ್ತರಿ ಮಧ್ಯದ ಅಡಿಕೆಯ ಪಾಡು.
ನೆನ್ನೆ ಮೊನ್ನೆ ಮದುವೆಯಾದವರ ಕಥೆ ಒಂಥರ. ಮದುವೆಯಾಗಿ 40 -50 ವರ್ಷವಾದವರೂ ಕೂಡ ತವರಿನ ಭೂಮಿಯ ಕೋಟಿ ಮಾರಾಟದಿಂದ ಲಾಭ ಪಡೆದರು. ಯಾರಿಗೂ ಬೇಡವಾಗಿದ್ದ ಮನೆಯ ಮುದುಕಿ ಅಲ್ಲೆಲ್ಲೋ ಜಮೀನು ರೇಟು ಹೆಚ್ಚಿಸಿಕೊಂಡದ್ದಕ್ಕೆ. ಮಕ್ಕಳು ಸೊಸೆಯಂದಿರ ಮಧ್ಯೆ ಮರ್ಯಾದೆ ಹೆಚ್ಚಿಸಿಕೊಂಡಳು. ಇದೊಂಥರ “ಬಯಸದೇ ಬಂದ ಭಾಗ್ಯ’
ಬಾವ-ಬಾಮೈದುನರ ಮಧ್ಯೆ ಘೋರ ಜಗಳವಾಗಿ 40 ವರ್ಷಗಳ ಕಾಲ ಮಾತಿಲ್ಲದೇ ಬದುಕಿದ್ದರು. ಜಮೀನು ಮಾರಾಟಕ್ಕೆ ಮನೆಮಗಳ ಸೈನು ಬೇಕು. “ಹೆಣ್ಣುಮಕ್ಕಳಿಗೆ ಸಮಾನ ಆಸ್ತಿ ಇತ್ತೀಚಿನ ಕಾನೂನು ಅವರಿಗೆ ಅನ್ವಯಿಸಲ್ಲ.” ಅಂದರು. . ಕೊಳ್ಳುವ ಸಾಹುಕಾರ “ಬ್ಯಾಡ ಸ್ವಾಮಿ. ಸುಮ್ನೇ ತಕರಾರು ಅರ್ಜಿ ಹಾಕ್ತಾರೆ. ಕೇಸು ನಡಿಯಲ್ಲ ಗೊತ್ತು. ಆದ್ರೆ ಕೇಸಿದೆ ಅಂತ ನಮ್ಮ ಲೇ ಔಟ್ ಸೈಟಿಗೆ ಜನ ಬರಲ್ಲ, ಸೈನ್ ತಗೊಂಡ್ ಬಂದ್ಬಿಡಿ” ಅಂದ. ವಿಧಿಯಿಲ್ಲದೇ ಅಕ್ಕನ ಮನೆಗೆ ಓಡಿದರು. ಭಾವ, ಬಾಮೈದುನರಿಗೆ ಹೋಳಿಗೆಯ ಊಟ ಹಾಕಿಸಿದ. ಎಲೆ ಅಡಿಕೆ ಜಗೀತಾ ಪಡಸಾಲೇಲಿ ಆಸೀನರಾಗಿದ್ದ ಭಾವನ ಬಳಿ ಬಂದು ಬಾಮೈಕಳು ಪೇಪರು ಹಿಡಿದರು. ಯಜಮಾನರು “ಏಯ್ ಇವಳೇ” ಅಂದರು. ಹೆಂಡತಿ ಬಂದಳು. ಸೈನು ಬೇಕಂತೆ ನಿನ್ನ ತಮ್ಮಂದಿರಗೆ ನಂಜ್ಮಮಣ್ಣಿ ನಿನ್ನ ಹೆಸರು . ನಾಕಕ್ಷರಕ್ಕೆ ನಾಕು ಲಕ್ಷ, ಸೊನ್ನೆಗೆ ಐವತ್ ಸಾವ್ರ, ಒತ್ತಕ್ಷರಕ್ಕೆ ಐವತ್ ಸಾವ್ರ ಇಷ್ಟ್ ದುಡ್ಡೂ ಈ ಕೈಲ್ ತಗೋ.. ಆ ಕೈಲಿ ಸೈನ್ ಮಾಡು. ಅಂದ್ರು.
ಗಂಡ ಸತ್ತ ನಂತರ ಆಸರೆಗಾಗುತ್ತಾನೆ ಅಂತ ಒಬ್ಬನೇ ಮಗನನ್ನು ಕೂಲಿ ಮಾಡಿ, ಇದ್ದ ಸಣ್ಣ ಜಮೀನಲ್ಲಿ ಒಂದಿಷ್ಟು ಬೆಳಕೊಂಡು, ಕಷ್ಟಪಟ್ಟು ಓದಿಸಿದಳು ಜಯ. ಹತ್ತನೇ ಕ್ಲಾಸಲ್ಲಿ ಫಸ್ಟ್ಕ್ಲಾಸು ಆಹುಡುಗ. ಅವನು ಪಿಯುಸಿಗೆ ಬಂದಾಗ, ಅವರ ಸುತ್ತಲ ಜಮೀನುಗಳನ್ನೆಲ್ಲ ಸಂತೇಪೆಟೆ ಸಾಹುಕಾರರು ಕೊಂಡು, ಇವಳ ಜಮೀನು ಮಧ್ಯೆ ಸಿಕ್ಕಿಬಿದ್ದಿತ್ತು. ವಿಧಿಯಿಲ್ಲದೆ ಜಯ ಜಮೀನು ಮಾರಬೇಕಾಯ್ತು. ಮಗ ಪೋಲೀಸಾಗಬೇಕು ಅಂತ ಅವಳ ಆಸೆ. ಈ ದುಡ್ಡಲ್ಲಿ ಒಂದರ್ಧ ಎಕರೆ ಗದ್ದೆ ತಗೋಬೇಕು ಅನ್ನುಸ್ತದ ಅಳಿ. ನಮ್ಮಪ್ಪನ ಮನ ತಾವು ಸಿಕ್ತದ. ಆದ್ರ ನಮ್ ಗಂಡುಗ ಪೋಲೀಸ್ ಕೆಲ್ಸ ಬಂದ್ಬುಟ್ರ? ಕೆಲಸ ಕೊಡವರು ಲಂಚ ಕ್ಯೋಳಿರಂತಲ್ಲ ಅಳಿ, ಅದಕ್ ಸಲವಾಗ್ ಮಡಗಿನಿ” ಅಂತ ಒಂದೆರಡು ಲಕ್ಷ ಇಟ್ಟುಕೊಂಡಿದ್ಲು. ಆ ಹುಡುಗನೋ ಮೊಬೈಲು, ಬೈಕು ಅಂತ ಒಂದೋದೇ ಬೇಡಿಕೆ ಇಡುತ್ತಾ ಹೋದ. ಗಂಟು ಬಿಚ್ಚಲ್ಲ ಬೈಕು ಕೊಡಿಸಲ್ಲ ಅಂತ ಹಠ ಮಾಡಿದಳು. ತಿಳಿದವರಿಂದ ಬುದ್ದಿ ಹೇಳಿಸಿದಳು. ಅವನು ಆತ್ಮಹತ್ಯೆಯ ನಾಟಕವಾಡಿದ ಲಕ್ಷದ ಬೈಕು ಬಂತು. ಪಿಯುಸಿ ಫೇಲಾದ ಗಂಟು ಕರಗಿಸಿದ..ಈಗ ಮೈಸೂರು ಅರಮನೆ ಪಕ್ಕದ ಫುಟ್ಪಾತ್ ರಿಪೇರಿ ಕೆಲಸಕ್ಕೆ ಹೋಗ್ತಾನೆ.
ಆ ಇಲವಾಲದ ಹುಡುಗ ಮತ್ತೆ ಮತ್ತೆ ನೆನಪಾಗುತ್ತಾನೆ. ಅವನು ಬಣ್ಣ ಬಳಿಯುತ್ತಿರುವ ಸೈಟುಗಳ ಮಣ್ಣು ಅವನಿಗೆ ದಿನಕ್ಕೊಂದು ಕಥೆ ಹೇಳುತ್ತಿರಬಹುದು, ಮಣ್ಣು ಹೊನ್ನಾದ ಕಥೆ, ಕಣ್ಣು ಕುಡುಡಾಗಿಸಿದ ಕಥೆ, ಕನ್ನಡದ “ಒಂದು ಮುತ್ತಿನ ಕಥೆ” ಥರದ ಕಥೆ.. ಕೇಳಿ, ಕೇಳಿ ಅವನು ಇನ್ನಷ್ಟು ಮತ್ತಷ್ಟು ಗಟ್ಟಿಗನಾಗುತ್ತಿರಬಹುದು ಅನ್ನಿಸುತ್ತದೆ.
ಮೈಸೂರು ಕೋರ್ಟಿನಲಿ ಹೋಗಿ ನಿಂತರೆ ಸುತ್ತಲ ಹಳ್ಳಿಗರ ದಂಡೇ ನೆರೆದಿರುತ್ತದೆ. ಎಲ್ಲರದೂ ಜಮೀನು ವ್ಯಾಜ್ಯ. ಲಕ್ಷಗಳಿಗಾಗಿ.. ಕೋಟಿಗಳಿಗಾಗಿ. ಸೈಕಲ್ಲಿದ್ದವರ ಬಳಿ ಬೈಕು ಬಂದಿದೆ. ಬೈಕಿದ್ದವರ ಬಳಿ ಕಾರು, ಸಣ್ಣಹಂಚಿನೆ ಮನೆಗಳು, ತೊಟ್ಟಿಮನೆಗಳು ನೆಲಕ್ಕುರುಳಿ ತಿಂಗಳುಗಳು ಕಳೆವುದರಲಿ ತಾರಸಿಗಳು ಏಳುತ್ತಿವೆ. ಪ್ರತಿಊರಾಚೆಯೂ ಸಣ್ಣಹೆಂಚುಗಳ ದೊಡ್ಡ ಗುಡ್ಡೆಗಳು ಬೀಳುತ್ತಿವೆ. ಹಸಿರು ತೊನೆದಾಡಬೇಕಿದ್ದ ಭೂತಾಯಿಯ ಒಡಲು ಕಾಂಕ್ರೀಟು ಕಾಡಾಗುತ್ತಿದೆ. ಜನರ ಭಾಷೆ, ರೀತಿ, ನೀತಿ ಎಲ್ಲವೂ ಬದಲಾಗುತ್ತಿದೆ. ಈ ವರ್ಷ ನಷ್ಟವಾದರೆ ಮುಂದಿನ ವರ್ಷ, ಈ ಬೆಳೆ ನಾಶವಾದರೆ ಮುಂದಿನ ಬೆಳೆ. ಭೂತಾಯಿ ಬಂಜೆಯಾಗುವುದಿಲ್ಲ. ಆದರೆ ಹಣವ ಬಿತ್ತಿ ಹಣವ ಬೆಳೆವ ನನ್ನ ಹಳ್ಳಿಗರು ಬದುಕುತ್ತಾರೆಯೇ? ಎಷ್ಟು ದಿನ ಬದುಕಿಯಾರು? ಯಾಕೋ ಭಯವಾಗುತ್ತದೆ.

***

 

‍ಲೇಖಕರು G

17 June, 2014

ನಿಮಗೆ ಇವೂ ಇಷ್ಟವಾಗಬಹುದು…

4 Comments

  1. vidyashankar

    Very well told. It is the story of almost farmers across the country.

  2. paaru

    ಅವ್ವ..ನನ್ನವ್ವ..ಫಲವತ್ತಾದ ಕಪ್ಪು ನೆಲ
    ಅಲ್ಲಿ ಹಸಿರು ಪತ್ರದ ಹರವು, ಬಿಳಿಯ ಹೂ ಹಬ್ಬ;
    ಸುಟ್ಟಷ್ಟು ಕಸುವು, ನೊಂದಷ್ಟೂ ಹೂ ಹಣ್ಣು
    ಮಕ್ಕಳೊದ್ದರೆ ಅವಳ ಅಂಗಾಂಗ ಪುಲಕ;
    ಹೊತ್ತ ಬುಟ್ಟಿಯ ಇಟ್ಟು ನರಳಿ ಎವೆ ಮುಚ್ಚಿದಳು ತೆರೆಯದಂತೆ…
    ಲಂಕೇಶ್

  3. Rajan

    It is the story of the day! What those people who became engineers/doctors by year of education couldn’t even dream these people in villages are having in their hands, crores are losing value. It is shuddering to think about the food situation 10-20 years down the line.
    Somebody needs to say this is it and put a full stop to this outrageous population growth and cancerous urbanization that is going to hurt India big, big time..

  4. anand salundi

    ಅದ್ಬುತವಾಗಿ ಕಟ್ಟಿಕೊಟ್ಟಿದ್ದೀರಿ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading