“ಭೂತಯ್ಯನ ಮಗ ಅಯ್ಯು” ಸಿನೆಮಾ ಯಾರು ತಾನೇ ನೋಡಿಲ್ಲ? ಅದರಲ್ಲಿ ಬರೋ ಹೋಟೆಲಿನ ಸೀನು. ಫುಲ್ ಮೀಲ್ಸು ಅನ್ನೋ ಬೋರ್ಡು ನೋಡಿ ಒಳನುಗ್ಗುವ ನಾಕು ಜನ ಒಂದೇ ರೀತಿಯ ಮುಸುಕು ಹಾಕಿ ಒಬ್ಬರ ನಂತರ ಒಬ್ಬರು ಉಂಡು, “ಹೊಟ್ಟೇನೇ ತುಂಬಲಿಲ್ಲ ಫುಲ್ ಮೀಲ್ಸು ಅಂತ ಬೋರ್ಡು ಹಾಕಿದೀರಾ?” ಅಂತ ಗಲಾಟೆ ಎಬ್ಬಿಸಿ, ಕೊಟ್ಟ 2 ರೂಪಾಯಿಯನ್ನೂ ವಾಪಾಸು ಪಡೆಯುವ ದೃಶ್ಯ. ಎಷ್ಟು ವರ್ಷವಾದ್ರೂ ಇದು ಕನ್ನಡದ “ದಿ ಬೆಸ್ಟ್ ಕಾಮಿಡಿ ಸೀನ್” ಗಳಲ್ಲೊಂದು.
ಇದು ಕಲ್ಪನೆಯಲ್ಲ. ನಿಜವಾಗಿ ನಮ್ಮ ಮೈಸೂರಿನ ಇಂದ್ರಭವನ ಹೋಟೇಲಿನಲಿ ನಡೆದ ನಿಜ ಘಟನೆಯಂತೆ. ಯಥಾವತ್ ಅಲ್ಲದಿದ್ರೂ ಸ್ವಲ್ಪ ಹೆಚ್ಚೂ ಕಡಿಮೆ ಹೀಗೇ ಇತ್ತಂತೆ ಆ ಘಟನೆ. ಹೋಟೇಲಿನ ಓನರ್ ತಗೊಳ್ರಪ್ಪ ಅಂತ ಫುಲ್ ಮೀಲ್ಸಿನ ಐದು ರೂಪಾಯಿನ ವಾಪಾಸು ಕೊಟ್ಟು, ನಮಸ್ಕಾರ ಮಾಡಿ, “ತಿರುಗಿಸ್ರೋ ಬೋರ್ಡು” ಅಂದಿದ್ದರಂತೆ.
ಆ ಕಾಲವೇ ಹಂಗಿತ್ತು, ಫಾಸ್ಟು ಫುಡ್, ಚಾಟ್ಸ್ ಇನ್ನೂ ಕಣ್ಣುಬಿಟ್ಟಿರಲಿಲ್ಲ. ಅದರಲ್ಲೂ ಹಳ್ಳಿಗಳಲ್ಲಿ ಈಗಿನವರ ಹಾಗೆ ಎರಡ್ ದೋಸೆ , ಮೂರಿಡ್ಲಿ ತಿಂದು ಹೊಲದ್ ಕೆಲಸ ಮಾಡೋಕಾಗ್ತಿತ್ತಾ? ಯಾರೋ “ದೊಡ್ಡವರ” ಮನೆಗಳಲ್ಲಿ ಬಿಟ್ರೆ ಮಾಮೂಲಿ ಪ್ರಜೆಗಳು ನಿತ್ಯವೂ ರುಚಿಗೆ ಅಷ್ಟು ಗಮನ ಕೊಡ್ತಿರ್ಲಿಲ್ಲ. ಬೆಳಗಾಗೆದ್ದು ಎರಡ್ ರಾಗಿ ಮುದ್ದೆ ಜಡ್ಕೊಂಡ್ ಹೋದ್ರೆನೇ ಮೈಮುರಿದು ದುಡಿಯೋಕಾಗ್ತಿದ್ದದ್ದು.
ತಿನ್ನೋದಲ್ಲ ಮುಖ್ಯ, ತಿಂದದ್ದನ್ನ ಅರಗಿಸಿಕೊಳ್ಳೋದು.ಕಾಯಕ್ಕೆ ಕೆಲಸ ಕೊಡೋದು. ಮಾವ ಹೇಳಿದ್ದೊಂದು ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿ ನೆನಪಾಗ್ತಿದೆ. ತಗಡೂರಿನಲ್ಲಿ ಮಣಿನ ಮಾರಶೆಟ್ಟಿ ಅಂತೊಬ್ಬ ಉಪ್ಪಾರರ ಮನುಷ್ಯ ಇದ್ದನಂತೆ. ಹಸುಗಳಿಗೆ, ಬಾವಿಯ ನೀರಿಗೆ ಬೇಕಾದ ಹಗ್ಗ ನೇಯುತ್ತಿದ್ದ, ದನಗಳ ಮುಖಕ್ಕೆ ಹಾಕೋ ಮುಸುಡಿಗುಕ್ಕೆಯನ್ನೂ ಮಾಡ್ತಿದ್ದ. ಅದನ್ನ ಬೇರೆ ಬೇರೆ ಊರಿಗೂ ಹೋಗಿ ಮಾರಿಬರ್ತಿದ್ದ. ಅದು ಕಾಸಿನ ಕಾಲವಲ್ಲ. ಧಾನ್ಯಗಳ ಕಾಲ. ಮಾರಶೆಟ್ಟಿ ತನ್ನ ಸರಕುಗಳನ್ನ ಮಾರಿ, ಗಾಡಿಯಲ್ಲಿ ಧವಸಗಳನ್ನು ತರುತ್ತಿದ್ದ. ಹಾಗೇ ಮಾರಾಟಕ್ಕೆಂದು ಪಡುಸೀಮೆ (ಹೆಚ್ ಡಿ ಕೋಟೆ ಸುತ್ತ ಮುತ್ತಲ ಪ್ರದೇಶ) ಕಡೆ ಹೊರಟ. ವ್ಯಾಪಾರ ಮುಗಿಸಿ ಬರೋವಾಗ ದಾರಿಯಲ್ಲಿ ಮದುವೆ ಮನೆಯೊಂದು ಕಾಣಿಸಿತು. ಮಾರಶೆಟ್ಟಿಗೂ ಹಸಿವೆಯಾಗಿತ್ತು. ಗಾಡಿ ನಿಲ್ಲಿಸಿ ವಿಚಾರಿಸಿದ. ಗೌಡರ ಮಗಳ ಮದುವೆ, ಲಿಂಗಾಯತರ ಕಡ್ಲೆ ಹುಳಿ ವಾಸನೆ ಗಾಳಿಯಲ್ಲಿ ಅವನ ಮೂಗಿಗೆ ಬಡೀತು. “ಉಂಡ್ಕಂಡ್ ಓಗು ಮಾರಾಯ. ನಮ್ ಗೌಡರು ಪುಣ್ಯಾತ್ಮರು ಅನ್ನಕ್ ಇಲ್ಲ ಅನ್ನವರಲ್ಲ” ಅಂದವರ ಮಾತು ಕೇಳಿ ಮದುವೆ ಮನೆ ಒಳ ಹೊಕ್ಕ. ಗೌಡರನ್ನು ಮಾತಾಡಿಸಿದ. “ ಅಯ್ಯೋ ಪುಣ್ಯಾತ್ಮ, ಕೇಳ್ತೀಯಲ್ಲಯ್ಯ, ನಾಕ್ ಜನಕ್ ಅನ್ನ ಆಕಕೇ ಅಲ್ವಯ್ಯ ಮದ್ವ ಮಾಡದು? ಓಗಪ್ಪ ಕುಂತ್ಕೋ..ಏಯ್ ಹಾಕ್ರಯ್ಯ ಊಟವ ಇವನಗ” ಅಂತ ಅಪ್ಪಣೆ ಕೊಡಿಸಿದ್ರು ಗೌಡ್ರು. ಮಾರಶೆಟ್ಟಿ ಕೇಳಿ ಎರಡೆಲೆ ಹಾಕಿಸಿಕೊಂಡು ಕೂತ. ನಾಕು ಬಕೀಟು ಅನ್ನ, ಎರಡು ಬಕೀಟು ಸಾರು, ಒಂದು ಬಕೀಟು ಹುಳಿ, ಐವತ್ತು ಹಪ್ಪಳ, ಎರಡು ಸೌಟು ಉಪ್ಪಿನಕಾಯಿ, ಒಂದು ಬಕೀಟು ಪಾಯಸ…. ಬಡಿಸುತ್ತಿದ್ದವರಿಗೂ ಒಂಥರದ ಉಮೇದು ಬಂದುಬಿಟ್ಟಿತ್ತು. ಅವರು ತಂದು ತಂದು ಹಾಕೋಕೇ.. ಇವನು ಉಣ್ಣೋಕೆ.
ಎಲ್ಲವನೂ ಉಂಡು ಮುಗಿಸಿ, ಗೌಡರಿಗೆ ನಮಸ್ಕರಿಸಿ ಹೊರಟ. ಗಾಡಿ ಕಟ್ಟಿದ. ಅರ್ಧ ಮೈಲು ಸಾಗುವಷ್ಟರಲ್ಲೇ ಯಾಕೋ ಹೊಟ್ಟೆ ಭಾರವೆಸಿಸೋಕೆ ಶುರುವಾಯ್ತು. ಗಾಡಿಯಿಂದಿಳಿದ ಮಾರಶೆಟ್ಟಿ ಒಂದು ಎತ್ತು ಬಿಚ್ಚಿ ಗಾಡಿ ಹಿಂದಕ್ಕೆ ಕಟ್ಟಿದ. ಅದರ ಜಾಗದಲ್ಲಿ ತಾನು ನಿಂತ. ಎತ್ತು ಒಂದು ಕಡೆ . ಶೆಟ್ಟಿ ಮತ್ತೊಂದು ಕಡೆ, ಸುಮಾರು 9 ಮೈಲಿಯ ದೂರದ ದಾರಿ ಕ್ರಮಿಸಿ ಊರು ತಲುಪಿದ್ರು. ಅಲ್ಲಿಗೆ ಹೊಟ್ಟೆಯ ಭಾರ ಇಳಿದಿತ್ತು.

ನಾಗರಾಜಪ್ಪ ಅಂತೊಬ್ಬರಿದ್ರು, ನಮ್ಮೂರಿನೋರೇ..ಸುಮಾರು ಆರೂವರೆ ಅಡಿಯ ಭರ್ಜರಿ ಆಳು. ನಮ್ಮನೆಯೊಳಕ್ಕೆ ಬಗ್ಗದೇ ಹೊಸಿಲು ದಾಟಲಾರದಂತ ಗಾತ್ರ. ವಡೆ, ಬಜ್ಜಿ, ಬೋಂಡ ಮಾಡಿದರೆ 50-70 ಖಾಲಿಮಾಡುತ್ತಿದ್ದರು. ನೀರು ಕುಡಿದು ತೇಗಿ. “ಅಯ್ಯೋ ಈಗ ಮದ್ಲನಂಗ್ ಸೇರದೇ ಇಲ್ಲ,” ಅಂತಿದ್ದರು. ಅಯ್ಯೋ ಭಗವಂತ ಮುಂಚೆ ಇನ್ನೆಷ್ಟ್ ತಿಂತಿದ್ರೋ ಅಂತ್ ಕೇಳಿದ್ರೆ, ಅವರ ತಿಂದಾಟದ ಕಥೆಗಳನ್ನೆಲ್ಲ ರೋಚಕವಾಗಿ ಹೇಳ್ತಿದ್ದರು. ಅವರೂ ಅವರ ಹೆಣ್ಣುಕೊಟ್ಟಮಾವನೂ ಪುಟ್ಟೆಗಟ್ಟಲೆ ಬಜ್ಜಿ, ವಡೆಗಳನ್ನೂ, ಸೇರುಗಟ್ಟಲೇ ಪಾಯಸವನ್ನೂ ಕುಡೀತಿದ್ದರಂತೆ. ಇಡ್ಲಿಯಾದರೆ ನೂರಾರು. (ಅದೂ ದೊಡ್ಡ ಗಾತ್ರದ ತಟ್ಟೆ ಇಡ್ಲಿ). ಒಂದು ಸಲ ಬೇಯೋಕೆ ಇಟ್ಟದ್ದೆಲ್ಲ ಒಬ್ಬರಿಗೇ ಸ್ವಾಹ. ಇಂತದೇ ಇನ್ನೊಂದು ಜೀವ ವಾಸುದೇವಮೂರ್ತಿಗಳು. ಮಂಡ್ಯದ ಹತ್ತಿರದ ಕೆನ್ನಾಳು ಊರಿನವರು. ಕಾಲೇಜಿನ ಜೊತೆಗೇ ಮೈಸೂರು ಆಕಾಶವಾಣಿಲಿ ಕೆಲಸ ಮಾಡ್ತಿದ್ದಾಗ ಕೃಷಿ ವಿಭಾಗಕ್ಕೆ ಸಂದರ್ಶನ ಕೊಡಲು ಬಂದು ಪರಿಚಯವಾದವರು. (ಅವರ ಕಲರ್ಫುಲ್ ವ್ಯಕ್ತಿತ್ವದ ಬಗ್ಗೆ ಇನ್ಯಾವಾಗಲಾದರೂ ಹೇಳುವೆ) ಥೇಟು ನಮ್ಮೂರ ನಾಗರಾಜಪ್ಪನಂತದೇ ಭಾರೀ ದೇಹಾಕೃತಿ. ಎರಡು ವರ್ಷದ ಹಿಂದೆ ಆಯುಧ ಪೂಜೆ ದಿನ ನಮ್ಮ ಜಮೀನಿಗೆ ಬಂದಿದ್ದರು. ಮೋಟಾರು ಸ್ಟಾಟರುಗಳಿಗೆ ಪೂಜೆ ಮಾಡಿ, ಸ್ವೀಟಿನ ಡಬ್ಬಿ ಅವರಿಗೆ ಹಿಡಿದರೆ, ಇಡಿಯ ಡಬ್ಬಿನೇ ಖಾಲಿ ಮಾಡಿ, ಬಾಕ್ಸು ಬೇಲಿಗೆ ಎಸೆದರು. ಮತ್ತೆ ಮನೆಗೆ ಬಂದು ತಟ್ಟೆ ತುಂಬ ಕೇಸರೀಬಾತು. ಊಟದ ವಿಚಾರದಲ್ಲಿ ಸಂಕೋಚ ನಟಿಸುವುದು ಅವರಿಗೆ ಗೊತ್ತೇ ಇಲ್ಲ. ನಮ್ಮದೇ ಮನೆ ಅನ್ನುವಂತೆ ಇದ್ದುಬಿಟ್ಟರು. ಅವರ ಉಣ್ಣುವ ಸಾಹಸಗಳ ಬಗೆಗೆ ಹೇಳುತ್ತಾ ಕೂತರು. ಈಗಲೂ ಬೆಳಗಾಗೆದ್ದು ಎರಡು ಮುದ್ದೆ ಉಣ್ಣುತ್ತಾರಂತೆ. ಇತ್ತೀಚೆಗೆ ಫೋನು ಮಾಡಿದರೆ, “ಈಗ ಯಾಕೋ ಮದಲ್ನಂಗ್ ಸೇರಲ್ಲ ಕಣವ್ವ” ಅಂತಾರೆ.
ಇಂತ ಒಬ್ಬೊಬ್ಬರು ಅಲ್ಲಲ್ಲಿ ಸಿಗೋದು ಬಿಟ್ಟರೆ ಈಗಿನವರಿಗೆ ಈ ಗಾತ್ರದ ಉಣ್ಣುವಿಕೆ ಒಂಥರ ಟಿವಿಯ ಚೋಡಾ ಭೀಮ್ ಕಥೆಯ ಹಾಗೆ. ಈಗ್ಯಾರು ಅಷ್ಟೆಲ್ಲ ತಿಂತಾರೆ. ಈಗಿನವಕ್ಕೆ ತಿನ್ನೋ ಶಕ್ತೀನೂ ಇಲ್ಲ ಅರಗಿಸೋ ಶಕ್ತೀನೂ ಇಲ್ಲ. ಈ ಮಾತಿಗೆ ಅಪವಾದವೆಂಬಂತೆ ನಮ್ಮ ಅಣ್ಣಂದಿರಿದ್ದರು. (ನನ್ನ ದೊಡ್ಡಪ್ಪನ ಮಕ್ಕಳು. ತೋಟದಲ್ಲೆ ಅವರ ಮನೆ)) ತಿಂಡಿ ಪಂಡಿ ನಡೀತಿರ್ಲಿಲ್ಲ. ಬೆಳಗಾಗೆದ್ದು ಮುದ್ದೆ ಜಡೀಬೇಕು. ಅನ್ನವಾದ್ರೂ ಒಂದ್ ಮಕ್ಕರಿ ಗಾತ್ರ. ಪಾಪ ಹೊಸದಾಗಿ ಮದುವೆಯಾಗಿ ಬಂದ ಡಿಗ್ರಿ ಪಾಸು ಮಾಡಿದ ಅತ್ತಿಗೆ, “ಅವರಮ್ಮ ದಿನಾ ಬೆಳಗಾಗೆದ್ದು ಅಡುಗೆ ಮಾಡ್ತಾರೆ ಇನ್ನು ನಾನು ಬಂದಿದ್ದೇನಲ್ಲ ಥರ ಥರ ತಿಂಡಿ ರುಚಿ ತೋರಿಸ್ತೇನೆ” ಅಂತ ಮನಸಲ್ಲಿ ಅಂದುಕೊಂಡೋ ಏನೋ ದಿನಾ ಒಂದು ಬಗೆ ಮಾಡೋಕೆ ಶುರುಮಾಡಿದ್ರು. ಇಡ್ಲಿ, ಚಪಾತಿ, ಉಪ್ಪಿಟ್ಟು..ಒಂದಷ್ಟು ದಿನ ನಡೀತು. ಆವತ್ತು ನಾನೂ ಇದ್ದೆ ನಾಜೂಕಾಗಿ ಒಂದೊಂದೇ ಪೂರಿ ಬೇಸಿ ಬೇಸಿ ಕೊಡುತ್ತಿದ್ದರೆ ಬಸವಣ್ಣನ ತಟ್ಟೇಲಿ ತಿರುಗಿನೋಡೋಷ್ಟರಲ್ಲಿ ಎಲ್ಲ ಖಾಲಿ 10, 20, 30 ಆಯ್ತು.. ನೋಡೋವಷ್ಟೂ ನೋಡಿ, “ಐ ಇದ್ಯಾಕ ನಮಗ್ ಸರಿಬರಲ್ಲ ಕಣ ಇಟ್ ತಕ್ಕಂಡ್ ಬನ್ನಿ ಅನ್ನು ” ಅಂದ . ನಾಜೂಕಿನ ಅತ್ತಿಗೆ ಅವಳತ್ತೆ ಮಾಡಿದ್ದ ಇಟ್ಟು ಸಾರು ತಂದು ಬಡಿದರು. “ನೋಡು ನಮ್ಮನೆಗೆ ಹೋಗೋರ ಬರೋರ್ ಜಾಸ್ತಿ, ಆಳುಕಾಳುಗಳಿರತಾರೆ, ಈ ತಿಂಡಿ ಪಂಡಿ ಕಟ್ಕಂಡ್ರೆ ಆಗಲ್ಲ.” ಅಂತ ಗಂಡ ಬುದ್ದಿ ಹೇಳಿದ.ಹೇಳದಿದ್ರೂ ಅವರೇ ಕಲೀತಿದ್ರು. ಸಿಟಿಯ ಹತ್ತು ಮನೇಲಿ ಕಲಸೋಷ್ಟು ಚಪಾತಿ ಹಿಟ್ಟು ಕಲಸಿ ಬೇಸಿ ಕೊಟ್ಟ್ರೂ. “ಐ ಅದ್ಯಾವ್ ಮೂಲೆಗೋಯ್ತೋ .ಇವೆಲ್ಲ ನಮಗ್ ಗಿಟ್ಟಲ್ಲ” ಅನ್ನೋ ಅಣ್ಣತಮ್ಮದೀರ್ಗೆ ಮಾಡಾಕೋ ತಾಳ್ಮೆ ಯಾವಳಿಗಿದ್ದೀತು. ಎಷ್ಟೋ ಸಲ ಅಲ್ಲಿ ಊಟ ಮಾಡಿ, ಊರೊಳಗಿನ ನಮ್ಮ ಮನೆಗೆ ಬಂದು, ಅಲ್ಲಿ ಊಟ ಮಾಡಿದ್ದೇ ಸುಳ್ಳಾ ಅನ್ನಸುವಂತೆ ತಿಂದದ್ದೂ ಇದೆ. ಈಚೆಗೆ ಊರಿಗೆ ಹೋಗಿದ್ದಾಗ ಹೇಳ್ತಿದ್ದರು ಈಗ ಅಷ್ಟೆಲ್ಲ ಊಟ ಮಾಡೋಕಾಗಲ್ವಂತೆ.ಕೆಲಸವೂ ಆಗಲ್ವಂತೆ.
ಜಮಾನದಿಂದ ನಮ್ಮ ಜಮೀನು ಉಳೋ ನಮ್ಮ ಪುಟ್ಟಸಿದ್ದನ ಊಟದ ವಿಚಾರ ಯಾಕೇಳ್ತೀರ? ಮುಂಚೆ, ಅಂದ್ರೆ ಅಪ್ಪನ ಮದುವೆಗೂ ಮುಂಚೆ ಇಟ್ಟು, ನೀರು, ಮೆಣಸಿನಕಾಯಿ, ಉಪ್ಪು. ಮಜ್ಜಿಗೆ ಇಷ್ಟಿದ್ದರೂ ಸಾಕಿತ್ತಂತೆ. ಅಮ್ಮ ಬಂದ ಮೇಲೂ ಎರಡೆರಡು ಮುದ್ದೆ ಆಗಲೇಬೇಕು. ಪಿಯುಸಿಲಿದ್ದಾಗ ನಾನೂ ಮಾಡಿ ಕೊಟ್ಟಿದ್ದೇನೆ ಎಷ್ಟೋ ಸಲ. ಈಗ ಅಮ್ಮ ನಾಕು ದೋಸೆ ಹುಯ್ದುಕೊಡ್ತಾರೆ. “ಯಾರಿಗೆ” ಅಂದ್ರೆ . “ಪುಟ್ಸಿದ್ದ ಇವತ್ತು ಉಳೋಕ್ ಕಟ್ಟಿದಾನೆ” ಅಂತಾರೆ. “ಇದೇನ್ ಪುಟ್ಸಿದ್ದ. ಉಳಾ ಮನ್ಸ ನೀನು . ಇಷ್ಟ್ ಎಲ್ಲಿಗ್ ಸಾಕಾದ್ದು?” ಅಂದ್ರೆ, “ಐ ಮದ್ಲನಂಗ್ ಸೇರಲ್ಲ ಅಳೀ” ಅಂತಾನೆ.
“ಐ ಎಲ್ಲರ ಹಟ್ಟಿಲೂ ಬಾತ್ ತಿಂದೂ ತಿಂದೂ ಬೇಜಾರಾಗದ ಅಳಿ, ರವ ಉಪ್ಪಿಟ್ ಮಾಡ್ಕಂಡ್ ಬನ್ನಿ, ಮಧ್ಯಾಹ್ನಕ್ಕ ಅಸರ್ ಬ್ಯಾಳ ಪಾಯಸ ಮಾಡ್ಬುಡಿ” ಭತ್ತ ನಾಟಿ ಮಾಡೋಕ್ ಬರೋರ ಆರ್ಡರು. ಸಂಜೆಯಾದ್ರೆ “ಪುಟ್ಟಪ್ಪ ಒಂದ್ ನೂರ್ ರೂಪಾಯಗ್ ಬೋಂಡ ತರ್ಸಿ. ಬರಿ ಟೀ ಏನಳಿ?” ಅಂತಾರೆ. ಈಗ ಹಳ್ಳಿಗರು ತಿನ್ನುವುದು ಕೂಡ ನಾಲಗೆಗೆ.. ಕಾಯದ ಕಾಯಕಕ್ಕಲ್ಲ. ಮುದ್ದೆ ತಿಂದು ಮಾಡುತ್ತಿದ್ದ ಕೆಲಸಕ್ಕೂ ಈಗ ಉಪ್ಪಿಟ್ಟು ತಿಂದು ಮಾಡೋ ಕೆಲಸಕ್ಕೂ ಸಾಕಷ್ಟು ವ್ಯತ್ಯಾಸವೂ ಇದೆ ಬಿಡಿ. ಕೂಲಿ ಮಾತ್ರ ಹೆಚ್ಚಿತಷ್ಟೆ. ಈಗೀಗ ಹಳ್ಳಿಗೊಂದು ಬೇಕರಿ, ತಂಪು ಪಾನೀಯಗಳೂ ಬಂದಿವೆ, ಬರ್ತ್ಡೇ ಕೇಕುಗಳಿಗೂ ದೂರ ಹೋಗಬೇಕಾಗಿಲ್ಲ.
ಇಲ್ಲಿ, ಬೆಂಗಳೂರಲ್ಲಿ ಜೋಳದ ರೊಟ್ಟಿಯ ಹೋಟೆಲಿನ ವ್ಯಾಪಾರ ಬಲು ಜೋರು. ಪಪ್ಪಾಯಿಯಿಂದಲೇ ಬೆಳಗಾಗೋದು. ಗೋಡೆಗೆಸೆದರೆ ವಾಪಾಸು ಬರುವಂತ ಗಟ್ಟಿ ಮುದ್ದೆಯ ಗಲ್ಲಿ ಹೋಟೆಲಿಗೆ, ಪಾರ್ಕಿಂಗ್ ಕಷ್ಟವಾದರೂ ಹೋಗ್ತಾರೆ ಜನ. ಶುಗರ್ ರಾಗಿಯ ರೇಟನ್ನ ಹೆಚ್ಚಿಸಿದೆ. ಟಪ್ಪರ್ ವೇರು ಡಬ್ಬಿಯಲ್ಲಿನ ರಾಗಿ ರೊಟ್ಟಿ, ಕ್ಯಾಬಿನಲಿ ಕೂತು ಕಿಲ ಕಿಲ ನಗುತ್ತದೆ.
ಕುಸುಮಬಾಲೆ ಕಾಲಂ ’ಯ್ಯೋಳ್ತೀನ್ ಕೇಳಿ’ : ಇವರು ನಮ್ಮ ಊರಿನ ಊಟದ ರಸಿಕರು!
ನಿಮಗೆ ಇವೂ ಇಷ್ಟವಾಗಬಹುದು…

ನಿಮ್ ಕಡ್ಯಾಗ ಮುದ್ದಿ ಆದ್ರ ನಮ್ ಕಡಿಕೆ ರೊಟ್ಟಿ ತಿಂತಾರ ಒಬ್ಬೊಬ್ರು ಎಂಟ ರೊಟ್ಟಿ ತಿಂತಾರ ಗೊತ್ತೇನ್
ಬೋ ಪಸಂದಾಗದೆ ಇದನ್ನೋದಿ ವಟ್ಟೆ ತುಂಬ ಇಟ್ ಉಂಡಂಗಾಯ್ತು
ಬೋ ಪಸಂದಾಗಿ ಬರ್ದಿದಿ ಕಣ್ಣವ್ವಾ… ಹೊಟ್ಟಿಗೆ ಹಿಟ್ಟು ಬಿದ್ದು ತಣ್ಣಗ್ ಆದಂಗಾಯಿತು
ನಿಮ್ಮ ಕಡೆ ಹಿಂಗಾದರೆ, ನಮ್ಮ ಕಡೆ ಕತೆ ಕೇಳಿ, ನಮ್ಮ ಮಾವ ಇದ್ರು, ಅವರಿಗೆ ಕರಿಗಡಬು (ಹೂರಣಹಾಕಿ ಮಾಡಿದ್ದು) ಬಲು ಪ್ರೀತಿ. ಒಂದು ಹೊತ್ತಿಗೆ ೪೦ ಕಡಬು ತಿನ್ನುತ್ತಿದ್ದರು. ಆಶ್ಚರ್ಯವೆಂದರೆ, ಕಡಬು ಮಾಡುವ ಮುನ್ನವೇ ದೇವರಿಗೆಂದು ಒಂದಿಷ್ಟು ನೈವೇದ್ಯಕ್ಕಾಗಿ ಹೂರಣ ತೆಗೆಯಲು ಹೇಳಿ ಒಂದು ತಾಟಿನಲ್ಲಿ ಹೂರಣವನ್ನು ತುಪ್ಪ ಹಾಕಿಕೊಂಡು ತಿನ್ನತ್ತಿದ್ದರು. ತೀರಾ ಇತ್ತೀಚೆಗೆ ತೀರಿಕೊಂಡರು. ಅವರಿಗೆ ಬಿಪಿ, ಶುಗರ್ ಏನು ಇರಲಿಲ್ಲ.