ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕುಸುಮಬಾಲೆ ಕಾಲಂ ’ಯ್ಯೋಳ್ತೀನ್ ಕೇಳಿ’ : ರೇಷ್ಮೆ ಸೀರೆಯ ಹಿಂದಿನ ಕಥೆ

“ಅಮ್ಮ ಅಲ್ನೋಡು ಚಕ್ಲ ತಿಲುಗ್ತಾ ಇದೆ” ಮಗ discovery channel ನೋಡುತ್ತಾ ಹಿಗ್ಗುತ್ತಿದ್ದ, ನೀರಿನಲ್ಲಿ ಕೊತ ಕೊತ ಕುದಿಯುತ್ತಿದ್ದ ಮೆತ್ತನೆ ವಸ್ತುವನ್ನ ಹೊರತೆಗೆದು ಅದರಿಂದ ದಾರ ಎಳೆಯುತ್ತಿದ್ದರು..ನಾಟ್ಯವನ್ನೂ ಮೀರಿಸುವಂತ ಭಾವಭಂಗಿಯ ಜೊತೆ ಇಂಗ್ಲೀಷು ಮಾತಾಡುತ್ತ ನವಯುವಕನೊಬ್ಬ ಇಡೀ ಪ್ರೊಸೆಸ್ಸನ್ನ ಪರಿಚಯಿಸುತ್ತಿದ್ದ. ಒಂದೆರಡು ಕ್ಷಣದಲ್ಲಿ ಅದು ರೇಷ್ಮೆಗೂಡಿಂದ ದಾರ ತೆಗೀತಿರೋದು ಅಂತ ನನಗೆ ಗೊತ್ತಾಯ್ತು… ಹಿಂದೊಮ್ಮೆ ಅದು ನಮ್ಮ ಮನೆಯ, ಹೆಚ್ಚು ಕಡಿಮೆ ಇಡೀ ಊರಿನ ಕುಲಕಸುಬಾಗಿದ್ದುದರ ನೆನಪಾಯ್ತು.
“ಎಷ್ಟ್ ಜರಕ್ ಬಿದ್ದಿದ್ದವು?” ಈಗ ಏಡ್ ಜರ, ನಿಮ್ಮವು ಮೂರಲ್ವ? ನಿಮ್ಮವು ಹಣ್ಣಾದ್ ಮೇಲ್ ನಮ್ಮವಾಯ್ತವ” “ರೈಟಿದ್ದದಂತಲ್ಲ ಈಗ?” “ಈಗಿದ್ದದಂತಪ್ಪ, ಕರಿಮಲ್ಲಯ್ಯನಟ್ಟಿಯವರು ಒಳ್ಳಿ ದುಡ್ ಒಡ್ಕಂಡ್ ಬಂದರ. ನಮ್ಮವ್ ಅಣ್ಣಾಗಗಂಟ ಅದೇ ರೇಟು ಇದ್ದದೋ ಓದ್ದೋ ಯಾರಗ್ ಗೊತ್ತು?” ಹೆಚ್ಚಿನ ಮಾತುಗಳು ರೇಷ್ಮೆ ಬೆಳೆ, ಹುಳ, ರೇಟು, ಮಾರ್ಕೆಟ್ಟು, ಚಂದ್ರಿಕೆ, ಇವುಗಳ ಸುತ್ತಲೇ ಗಿರಕಿ ಹೊಡೀತಿದ್ವು. “ರೇಷ್ಮೆ ಕೃಷಿ” ಅನ್ನೋದು ಸರ್ಕಾರದ ಭಾಷೆಯಾದರೆ, ಲೋಕಲ್ಲಲ್ಲಿ ಹುಳ ಮೇಯಿಸೋದು ಅನ್ನೋದೇ ರೂಢಿ.
50, 100, 200 ಹೀಗೆ ಮನೆಯ ಜಾಗದ ಮೇಲೆ, ಅವರ ಜಮೀನಲ್ಲಿರೋ ಹಿಪ್ಪುನೇರಳೆ ಸೊಪ್ಪಿನ ಆಧಾರದ ಮೇಲೆ ರೇಷ್ಮೆ ಮೊಟ್ಟೆ ತರ್ತಿದ್ದರು. ಸಣ್ಣ ಮೊಟ್ಟೆಗಳು ಒಡೆದು ಪಿಳಿ ಪಿಳಿ ಹುಳಗಳಾಗುತ್ತಿದ್ದವು. ಅವಕ್ಕೆ ಚಿಗುರು ರೇಷ್ಮೆ ಸೊಪ್ಪು ತಂದು ಕ್ಯಾರೆಟ್ ತುರೀತೀವಲ್ಲ ಅಷ್ಟು ಸಣ್ಣಗೆ ಹೆಚ್ಚಿ ಹಾಕ್ತಿದ್ದೆವು. ಆಮೇಲೆ ಅದು 1,2,3,4  ಹೀಗೆ ವಾರಕ್ಕೊಂದು ಜರದ ಹಾಗೆ ಬೆಳೆದ ಹಾಗೆಲ್ಲ ಸೊಪ್ಪಿನ ಆಕಾರವೂ ಹಿಗ್ಗುತ್ತಿತ್ತು. ನಮ್ಮಮ್ಮ ಚೂರಿ ಹಿಡಿದು ಸೊಪ್ಪನ್ನ ಮರದ ಕೊಂಟಿನ ಮೇಲಿಟ್ಕೊಂಡು ಚೊರ್ ಚೊರ್ ಅಂತ ಸಣ್ಣಗೆ ಕತ್ತರಿಸುತ್ತಿದ್ದರು.
ಮೇಜದೊಳಕ್ಕೆ ಬಿದಿರಲ್ಲಿ ಹೆಣೆದ ದೊಡ್ಡ ತಟ್ಟೆ. ಆ ತಟ್ಟೆಯೊಳಗಾಡುವ ಹುಳಗಳು. ಸೊಪ್ಪು ತರೋದು, ಕತ್ತರಿಸೋದು ಅವಕ್ಕೆ ಹಾಕೋದು. ದಿನಕ್ಕೆ ಮೂರ್ನಾಲಕು ಬಾರಿ, ಸೊಪ್ಪು ಹಾಕೋ ಮುನ್ನ, ಹಿಂದಿನ ದಿನ ಅವು ಸೊಪ್ಪು ತಿಂದು ಕಸ, ಕಡ್ಡಿ, ಪಿಕ್ಕೆ ಎಲ್ಲಾನೂ ಕೆಳಗ್ ಬಿಟ್ಟು ಮೇಲೆ ನಲಿಯುತ್ತಿದ್ದವು, ಒಂದು ಖಾಲಿ ತಟ್ಟೇನ ಕೆಳಗಿಟ್ಟು. ಹುಳವಿರೋ ತಟ್ಟೇನ ಮೇಜದಿಂದ ಎಳಕೊಂಡು, ಆ ಕಡೆ ಈ ಕಡೆ ಇಬ್ಬರು ಖಾಲಿ ತಟ್ಟೆಯ ಮೇಲೆ ಓರೆಯಾಗಿ ಹಿಡಿದು ನಿಲ್ಲಿಸಿಕೊಂಡು, ಅಡಿಯ ಕಸ ಬಿಟ್ಟು ಮೇಲಣ ಹುಳವನ್ನ ರೋಲ್ ಮಾಡಿಕೊಳ್ತಾ ಖಾಲಿ ತಟ್ಟೆಗೆ ಉರುಳಿಸಿಕೊಂಡು, ಕಸ ಖಾಲಿ ಮಾಡಿ ಆ ತಟ್ಟೇನ ಪಕ್ಕಕ್ಕಿಟ್ಟು ಹೊಸ ತಟ್ಟೆಯಲ್ಲಿ ಗುಪ್ಪೆ ಬಿದ್ದುಕೊಂಡ ಹುಳಗಳನ್ನ ಹದವಾಗಿ ಹರಡಿ ಅವಕ್ಕೆ ಬೇಕಾದಷ್ಟು ಚಿಕ್ಕದಾಗಿ ಕತ್ತರಿಸಿದ ಸೊಪ್ಪು ಹಾಕಿ ಮತ್ತೆ ಮೇಜಕ್ಕೆ ತಳ್ಳಿಬಿಡೋದು. ಮತ್ತೊಂದು ತಟ್ಟೆ ಎಳಕೊಳ್ಳೋದು, ಹೀಗೆ ಒಂದೊದಂದು ತಟ್ಟೆಯ ಹುಳಕ್ಕೂ ಕಸ ತೆಗೆದು ಹೊಸ ಊಟ ಹಾಕೋದು ನಿತ್ಯ ಕಾಯಕವಾಗಿತ್ತು.

ಯಾವ್ ರೋಗವೂ ಬರದೇ 1,2,3,4 ಹೀಗೆ ಹುಳ ಜರಕ್ಕೆ ಬೀಳ್ತಾ.. ಹುಳ ಬಲಿತ ಹಾಗೆ ನಮ್ಮ ಕನಸುಗಳೂ ಬಲಿಯುತ್ತಿದ್ವು, ಅದರಲ್ಲೂ ಹಬ್ಬ ಹತ್ತಿರವಿದ್ರಂತು ಮುಗೀತು. ಹಣ್ಣುಳ ಮಾರಿ ಬಂದ ದುಡ್ಡಲ್ಲಿ, ಹೊಸ ಬಟ್ಟೆ ತಗೊಳೋ ಕನಸು. ಸ್ಕೂಲು ಶುರುವಾಗೋ ಟೈಮಾದರೆ ಹೊಸಬ್ಯಾಗು ಪುಸ್ತಕಗಳ ಕನಸು, ಅಮ್ಮನಿಗೆ ಸ್ಟೀಲ್ ಪಾತ್ರೆಯದೋ, ಸೀಮೆಣ್ಣೆ ಸ್ಟವ್ನದೋ ಕನಸು, ಅಪ್ಪನಿಗೆ ಎಲ್ಲರ ಕನಸನ್ನ ಈಡೇರಿಸೋ ದೊಡ್ಡ ಕನಸು.
ಹುಳ ಹಣ್ಣಾದ ದಿನ ಸ್ಕೂಲಿಗೆ ರಜೆ, ಗೂಡು ಕಟ್ಟೋಕೆ ಅಂತ ಚಂದ್ರಿಕೆಗಳಿಗೆ ಬಿಟ್ಟ ಹುಳಗಳನ್ನ ಬೀದೀಲೆಲ್ಲ ನಿಲ್ಲಿಸಿರ್ತಿದ್ದೆವಲ್ಲ, ಕಾಗೆ ಬಂದು ಹುಳಗಳನ್ನ ತಕ್ಕೊಂಡು ಹೋಗದ ಹಾಗೆ ಕೋಲು ಹಿಡ್ಕೊಂಡ್ ಕಾಯೋದು ನನ್ ತಂಗಿ ಕೆಲಸ. ಗೂಡು ತೆಗೆದು, ದೊಡ್ಡ ಕುಕ್ಕೆಗೆ ತುಂಬಿಕೊಂಡು, ಪ್ರೈವೇಟ್ ಬಸ್ಸುಗಳ ಮೇಲೆ ಹಾಕಿಕೊಂಡು ಮುಡಿಗುಂಡದ ಮಾರ್ಕೆಟ್ಟಿಗೋ, ಮರಳ್ಳಿ ಮಾರ್ಕೆಟ್ಟಿಗೋ ಹೋಗಿ ಮಾರಿಬರುತ್ತಿದ್ದರು ಅಪ್ಪ. ಅವರು ಬರೋವರೆಗೂ ನಾವು ಜಗಲಿ ಮೇಲೆ ಕಾದುಕೊಂಡು ಕೂತಿರ್ತಿದ್ದೆವು.
ಒಳ್ಳೆ ರೇಟು ಸಿಕ್ಕರೆ ಕ್ಯಾಶು, ತಿಂಡಿ ಜೊತೆ ಖುಷಿಯಾಗಿ ಬರ್ತಿದ್ದರು. ಕೆಟ್ಟ ರೇಟು ಸಿಕ್ಕರೂ ತಿಂಡಿಯಂತು ಬರುತ್ತಿತ್ತು ಆದರೆ ಇಷ್ಟೆಲ್ಲ ಕಷ್ಟಪಟ್ಟದ್ದಕ್ಕೆ ಸಿಕ್ಕ ಬಿಡಿಗಾಸು ರೇಷ್ಮೆಬೆಳೆಯ ಗೊಬ್ಬರಕ್ಕೂ ಸಾಲದಾದಾಗ ಮಾತ್ರ ಸಿಟ್ಟು, ಅಸಹನೆ, ತಿಂಗಳೆಲ್ಲ ಹಗಲೂ ರಾತ್ರಿ ಅನ್ನದೇ ಕಷ್ಟಪಟ್ಟಿದ್ದಕ್ಕೆ ಇಷ್ಟೇ ಸಿಕ್ಕಿದ್ದಾ? ಥೂ ಸುಮ್ನೆ ಯೋಳಿದರಾ? ಬ್ಯಾಸಾಯ ಅಂದ್ರ ನಾ ಸಾಯ ನೀ ಸಾಯ ಮನಮಂದಿಯಲ್ಲ ಸಾಯ ಅಂತ? ಅಂತೆಲ್ಲ ಗೊಣಗಿ, ನಮ್ಮಂದೇ ಸ್ಥಿತೀಲಿರುತ್ತಿದ್ದ ಅಕ್ಕಪಕ್ಕದವರ ಗೊಣಗಾಟಕ್ಕೂ ಜೊತೆಯಾಗಿ ಮತ್ತೆ ಮೊಟ್ಟೆ ತರಲು ಹೋಗುತ್ತಿದ್ದರು. ಅಮ್ಮ ಹಳೆ ಪೇಪರು ಮೆಂತ್ಯಕಾಳು ಎರಡನ್ನೂ ರುಬ್ಬಿ ಸಂಪಣ ಮಾಡಿ, ತಟ್ಟೆ ಸಾರಿಸಿ ಹೊಸ ಬೆಳೆಗೆ ಅಣಿಯಾಗುತ್ತಿದ್ದರು.ನಾವು ನಮ್ಮ ಕನಸುಗಳನ್ನ ಮುಂದಿನ ಬೆಳೆಗೆ ಕಾದುಕೊಳ್ಳುತ್ತಿದ್ದೆವು. ಫೀಸ್ನಂತ ವಿಷಯವಿದ್ದರೆ ಸಾಲವಿತ್ತಲ್ಲ..ಅದೂ ಮುಂದಿನ ಬೆಳೆ ನಂಬಿಕೊಂಡೇ.
ಹುಳ ಬಿಡೋ ಚಂದ್ರಿಕೆಗಳಿಗೂ ಆಗ ಭಾರೀ ಡಿಮಾಂಡು. ಒಟ್ಟಿಗೇ ನಾಕೈದು ಜನರ ಹುಳ ಹಣ್ನಾದರೆ ಚಂದ್ರಿಕೆಗಳಿಗೆ ಭಯಂಕರ ಪರದಾಟ. ನಮ್ಮಮ್ಮ ತಲೆಓಡಿಸಿ ನಾವೇ ಚಂದ್ರಿಕೆ ತಂದರೆ ನಮಗೂ ಆಗತ್ತೆ ಬಾಡಿಗೆಗೂ ಕೊಡಬಹುದು ಅಂತ ತೀರ್ಮಾನಿಸಿದರು. ತಲಕಾಡಿಂದ ತಡಿಕೆ ತಂದು, ಇನ್ನೆಲ್ಲಿಂದಲೋ ಬಿದಿರಿನ ಹೂವಿನಂತ ಹೆಣಿಕೆ ತಂದು ಪ್ಲಾಸ್ಟಿಕ್ ವೈರ್ ತಂದು ಅದನ್ನ ದುಂಡಾಗಿ ಕಟ್ಟುತ್ತಾ ಕಡೆಗೂ ಚಂದ್ರಿಕೆ ರೆಡಿಯಾಯ್ತು. ಒಂದು ಚಂದ್ರಿಕೆಗೆ 2 ರೂಪಾಯಿ ಬಾಡಿಗೆ. ಕೆಲವು ಸಲ ಡಿಮಾಂಡು ಜಾಸ್ತಿಯಾಗಿ ಗಾಡಿ ಕಟ್ಟಿಕೊಂಡು ಪಕ್ಕದೂರಿಗೂ ತಗೊಂಡು ಹೋಗ್ತಿದ್ದರು. ಗುರುತಿಗೆ ಚಂದ್ರಿಕೆ ಮೇಲೆ ಹೆಸರು ಬರೀಬೇಕಲ್ಲ? ಜೇಷ್ಟಪುತ್ರಿಯೂ ಅಪ್ಪನ ಪ್ರೀತಿಯ ಪುತ್ರಿಯೂ ಆದ ನನ್ನ ಹೆಸರು ಕೆಲಕಾಲ. ಮೇಲೆ ತಮ್ಮನದು, ಆಮೇಲೆ ನನ್ನ ತಂಗಿಯದು ಕೆಲ ಕೆಲ ವರ್ಷ ಚಂದ್ರಿಕೆಗಳ ಮೇಲೆ ರಾರಾಜಿಸಿತು. ಚಂದ್ರಿಕೆಗಳು, ಹುಳದ ಮೇಜ , ಆ ಕಡೆ ಹಸುಗಳು, ಜೊತೆಗೆ ನಾವೂ.. ಸಹಬಾಳ್ವೆ ಮಾಡುತ್ತಿದ್ದೆವು.
ನಿಜ ಹೇಳಬೇಕಂದ್ರೆ ನಮ್ಮಪ್ಪನ ಮದುವೆ ಮಾಡಿಸಿದ್ದೇ ಈ ಹುಳಗಳು. ಕತೆ ಕೇಳಿ, ಮದುವೆಗೆ ಮುಂಚೆ ನಮ್ಮಪ್ಪ ಗೂಡು ಮಾರೋಕೆ ಅಂತ ಮರಳ್ಳಿ ಮಾರ್ಕೆಟ್ಟಿಗೆ ಹೋದಾಗ ಅಲ್ಲಿ ಪರಿಚಯವಾದ ಅಮ್ಮನೂರಿನ ರಾಮಸ್ವಾಮಿ, ಇವರಿಬ್ಬರ ಮದುವೆ ಮಧ್ಯಸ್ಥಿಕೆ ವಹಿಸಿದ್ದು. ಆ ಅದೇ ರಾಮಸ್ವಾಮಿ ಈಗ 3 ವರ್ಷಗಳ ಹಿಂದೆ ನನ್ನ ಮಗ ಹುಟ್ಟಿದ ಟೇಮಲ್ಲಿ ಹುಡಿಕಂಡ್ ಬಂದಿದ್ದ. ಮಗಳ ಮದುವೆಗೆ ಸಹಾಯ ಕೇಳಲು. “ ಹುಳ ಮೇಯಿಸದ್ ಬುಟ್ಟೇ ಬುಟ್ರಿ ಅನ್ನಂಗದ? “ ಅಂದ. “ಈಗ್ಯಾರ್ ಉಳ ಮೇಯಿಸೀರು ಮಾರಾಯ? “ ಅಂದರು. ರಾಮಸ್ವಾಮಿ. “ಐ ನಾವೂ ಆಗ್ಲೆ ಬುಟ್ ಬುಟ್ಟೋ ಅನ್ನಿ” ಅಂದ.
ಬಣ್ಣಾರಿ ಅಮ್ಮನ್ ಶುಗರ್ ಫ್ಯಾಕ್ಟರಿ ಬಂತು ನೋಡಿ, ದಿನಾ ಈ ಹುಳುಗಳೊಂದಿಗೆ ಬಡಿದಾಡಿ ಸಾಯೋ ಬದಲು ಸಾಲವೋ ಸೋಲವೋ ಮಾಡಿ ಬೋರ್ ತೆಗೆಸಿ ಕಬ್ಬು ಕೂರಿಸಿಬಿಟ್ರೆ ಆಯ್ತು. ವರ್ಷವೆಲ್ಲ ನೀರ್ ಹಾಯಿಸಿಕೊಂಡಿದ್ರೆ ವರ್ಷ ಮುಗಿಯೋದರೊಳಗೆ ಲಕ್ಷಗಳು. ವರುಣಾ ನಾಲೆಯೂ ಬಂತು. ಅಲ್ಲಿಗೆ ಊರೆಲ್ಲ ಭತ್ತ , ಕಬ್ಬು, ಬಾಳೆ ಅಂತ ಶುರು ಮಾಡ್ಕೊಂಡ್ರು. ಹುಳಗಳು ಊರೇ ಬಿಟ್ಟವು.
ಇಷ್ಟರ ಮಧ್ಯೆಯೂ ಒಬ್ಬಿಬ್ಬರು ರೇಷ್ಮೆಯನ್ನೇ ನಂಬಿದಾರೆ. ನನ್ನ ಅಣ್ಣನೊಬ್ಬನ ತೋಟಕ್ಕೆ ಹೋದಾಗ ಅವನ ರೇಷ್ಮೆ ಬೆಳೆವ ವಿಧಾನ ನೋಡಿ ಬೆಚ್ಚಿ ಬಿದ್ದೆ. ಅದಕ್ಕೆಂದೇ ವಿಶೇಷ ಮನೆ. ಸಿಧ್ದಪಡಿಸಿದ ಸ್ಟಾಂಡ್ಗಳು, ಸೊಪ್ಪು ಸಣ್ಣಗೇ ಕತ್ತರಿಸಬೇಕಿಲ್ಲ. ಎಲೆಗಳನ್ನೇ ಹಾಕಿಬಿಡೋದು. ದಿನಾಕಸ ತೆಗೆಯುವಂತಿಲ್ಲ ಕಸ ಬಂದು ಕೆಳಗೆ ತಾನೇ ಶೇಖರವಾಗತ್ತೆ. ಚಂದ್ರಿಕೆಯಂತು ಇಲ್ಲವೇ ಇಲ್ಲ. ಅದೆಂತದೋ ಪ್ಲಾಸ್ಟಿಕ್ ನೆಟ್. ಒಂಥರಾ ಫ್ಯಾಕ್ಟರಿ ಇದ್ದ ಹಾಗಿತ್ತು. ಎಷ್ಟು ಕೇಜಿಗೆ ಕುತೂಹಲಕ್ಕೆ ಕೇಳಿದೆ. 400-500 ರೂಪಾಯಿ. ಅಂದ. (ಅಬ್ಬ, ನನಗೆ ನೆನಪಿದ್ದ ಹಾಗೆ ಆಗ ಇದ್ದದ್ದು ಒಂದು ಕೆಜಿಗೆ 50 ರೂಪಾಯಿ) 100 ಮೊಟ್ಟ ತಂದ್ರ ಸರ್ಯಾಗಾದ್ರ 30-40 ಸಾವ್ರ ಮಾಡಬೋದು..ಸಬ್ಸಿಡಿ ಕೊಡ್ತರ ಕೆಜಿಗಿಷ್ಟು ಅಂತ. ಮೊಟ್ಟ ತಂದ್ರ ಅದಕೂ ಸಬ್ಸಿಡಿ, ಆಮೇಲ ಔಸದಿ ಪೌಸದಿ ಎಲ್ಲ ಕೊಡ್ತರ..” ಅಂದ ಹೇಳಿದ “ಮತ್ತಿಷ್ಟೆಲ್ಲ ಇದ್ಮೇಲೆ ಜನ ಯಾಕ್ ರೇಷ್ಮೆ ಬೆಳಿಯಲ್ಲ. ? “ “ಜಮೀನ್ಗಳ್ಗ ರೇಟ್ ಎಚ್ಕಂಡು ಎಲ್ಲ ಬೆಳೆದ್ನೇ ಬುಟ್ ಬುಟ್ ಕುಂತರ ನಮ್ಮೂರ್ಲಿ. ಇದ್ಯಾರ್ ಮಾಡಿರು? ಸ್ಟಾಟಿಂಗು ಬಂಡವಾಳ ಬೇಕಲ್ಲ? ಅದ್ಕೇನ್ಮಾಡದು? ಬ್ಯಾಂಕ್ಲಿ ಸಾಲ ಮಾಡಬೆಕು ಅಂದ್ರುವ ಧೈರ್ಯ ಬೇಕಲ್ಲ. ಉಳ ಆದವೋ ಓದವೋ.. ಅದ್ರಲ್ಲೂ ಅಣ್ಣಾಗ ವತ್ಲಿ ಆಳ್ಗಳ್ ಸಿಕ್ಕದೇ ಓದ್ರ ಅಷ್ಟೆ ಕತ. ನೋಡು ಎಂಟ್ ಎಕರೇಲೀ ಆಳುಗಳ ಸಿಗದೇ ಒಬ್ಬನೇ ಕೆಲ್ಸ ಮಾಡಕಾದ್ದ? ಆಗದೇ ಒಸಿ ಬುಟ್ಟೇ ಬುಟ್ಟೇ ಬುಟ್ಟಿನಿ. ಮುಂದಕ ಇನ್ನೂ ಕಷ್ಟವಾಯ್ತದ ನಮ್ ನಮ್ ಜಮೀನ್ ಕೆಲಸಕ್ಕ ಳ್ಗಳ ನಾವೇ ಉಟ್ಟುಸ್ಕಬೇಕು ಅಷ್ಟಿಯೆ.” ಅಂದ ಮತ್ತೆ ಎಲೆಕ್ಷನ್ ರಿಸಲ್ಟ್ ನೋಡಿದ್ಯಾ? ಅಂದೆ. ಹ್ಞೂ ಯಾವನೋ ಮೋದಿ ಅಂತ್ಲಂತಲ್ಲ ಗೆದ್ದಿರಂವ. ನೋಡಂವು ತಾಡಪ್ಪ ರೇಷ್ಮ ಬೆಳೆಯವರಗ ಅಂವ ಏನೇನ್ ಮಾಡಿನು ಅಂತ . ಅಂದ.
ಇಷ್ಟೆಲ್ಲ ನೆನಪಾಗೋ ಹೊತ್ತಿಗೆ, ಟಿವಿಯಲ್ಲಿ ರೂಪದರ್ಶಿ ಬಳುಕುವ ಸೊಂಟ ಕಾಣಿಸುತ್ತ ರೇಷ್ಮೆಸೀರೆಯ ಜಾಹೀರಾತು ಕೊಡುತ್ತಿದ್ದಳು.

‍ಲೇಖಕರು G

20 May, 2014

ನಿಮಗೆ ಇವೂ ಇಷ್ಟವಾಗಬಹುದು…

5 Comments

  1. Anonymous

    ತುಂಬಾ ಚೆನ್ನಾಗಿ ಬರ್ದಿದ್ದೀರಿ ಕುಸುಮ. ರೇಷ್ಮೇ ಬಗ್ಗೆ ಕೇಳಿ ತಿಳಿದಿದ್ದಷ್ಟೆ. ಅದರ ಹಿಂದಿನ ಕತೆಯ ಬಗ್ಗೆಯು ಅಲ್ಲಿ ಇಲ್ಲಿ ಅರಿತಿದ್ದು. ಸೂಕ್ಷ್ಮ ಪರಿಚಯ ಆಗಿರ್ಲಿಲ್ಲ. ಇದೊಂದು ಕತೆಗೆ ವಸ್ತುವೂ ಆಗಬಲ್ಲುದು. ಉತ್ತಮ ಕತೆಯೂ ಆಗಬಲ್ಲದು.
    ಮಂಡ್ಯದ ಸೊಗಡುಳ್ಳ ಭಾಷೆ. ನನ್ನ ಸ್ನೇಹಿತೆಯೊಬ್ಬಳು ಮಂಡ್ಯದವಳು ಅವಳು ಆಗೀಗ ಆಡುವ ಮಾತು ಕೇಳಿದ್ದೆನಷ್ಟೆ. ಸೊಗಸಾಗಿದೆ.

  2. ಸುಮಂಗಲಾ

    ಕುಸುಮಾ… ತುಂಬಾ ಮನತಟ್ಟುವಂತೆ ಬರ್ದಿದ್ದೀರಿ, ಬಹಳ ವರ್ಷಗಳ ಹಿಂದೆ ನಾವು ಕೂಡ ಭದ್ರಾವತಿ ಬಳಿ ಇದ್ದಾಗ ಹುಳ ಸಾಕಿದ್ವಿ, ನಮ್ಮ ದೊಡ್ಡಪ್ಪನಿಗೆ ಹೊಸಹೊಸದನ್ನು ಮಾಡುವ ಉಮೇದು ಇತ್ತು… ನಿಮ್ಮ ಲೇಖನ ಓದುತ್ತ ಅಂದಿನ ದಿನಗಳು ನೆನಪಾದವು, ಆದರೆ ನಮ್ಮ ಸುತ್ತಲಿನಲ್ಲಿ ಆಗ ಯಾರೂ ಸಾಕುತ್ತಿರಲಿಲ್ಲ ಎನ್ನಿ, ಹುಳ ಸಾಕುವುದು ಒಂದು ಜಗತ್ತಾದರೆ, ಈ ಹುಳಗಳಿಂದ ರೇಷ್ಮೆ ಎಳೆ ತೆಗೆಯುವ ಫಿಲೇಚರ್ ಯೂನಿಟ್ ಗಳದು ಇನ್ನೊಂದೇ ಲೋಕ…ನನಗೆ ಫಿಲೇಚರ್ ಯುನಿಟ್ ಗಳಲ್ಲಿ ಕೆಲಸ ಮಾಡುವ ಹೆಣ್ಣುಮಕ್ಕಳು ಸದಾ ಕಾಡುತ್ತಾರೆ… ನಿಮಗೆ ಯಾರಿಗಾದರೂ ಆಸಕ್ತಿ ಇದ್ದರೆ ಈ ವಿಡಿಯೋ ನೋಡಿ

  3. amardeep.p.s

    chennagide…madam…. reshme bele bagge mattu belegaarara bagge .

  4. DINESH

    FENTASTIC

  5. Anil Talikoti

    ಮನತಟ್ಟುವ ಅದ್ಭುತ ಬರಹವಿದು. ಒಂದೊಮ್ಮೆ ಕೆಲಸಕ್ಕಾಗಿ ಪರದಾಡುತ್ತಿದ್ದ ಆಳ್ಗಳು – ಈಗ ಆಳ್ಗಳಿಗಾಗಿ ಪರದಾಡುವ ಕೆಲಸ – ಬದಲಾವಣೆಯೇ ಕಾಲದ ಮಹಿಮೆ ಎನ್ನುವದನ್ನು ಚೆನ್ನಾಗಿ ತೋರಿಸಿಕೊಡುತ್ತದೆ.
    -ಅನಿಲ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading