ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕುಸುಮಬಾಲೆ ಕಾಲಂ ’ಯ್ಯೋಳ್ತೀನ್ ಕೇಳಿ’ :ಇರುವುದೆಲ್ಲವ ಬಿಟ್ಟು


ಯಾವುದೋ ಕಾರು ಮನೆ ಮುಂದೆ ಬ0ದು ನಿಂತಿತು. ಮುಂಚೆಯೆಲ್ಲ  ಬೈಕ್ ಸೌಂಡಾದರೆ ಯಾರು ಅಂತ ಇಣುಕುತ್ತಿದ್ದ ನಮ್ಮೂರ ಜನಕ್ಕೆ ನಿಧಾನಕ್ಕೆ ಬೈಕು “ಕಾಮನ್ ಆಗಿಹೋಗಿ, ನಮ್ಮೂರ್ ಬೀದೀಲ್ ಓಡಾಡ್ದಿರೋ ಬೈಕೇ ಇಲ್ಲ ಅಂತಾಗಿದ್ದು ಹಳೆ ಕಥೆ. ಆಮೇಲೆ ಕಾರ್ ಬಂದರೆ ಇಣುಕುವುದಿತ್ತು. ಜಮೀನು ರೇಟು ಸುನಾಮಿ ಬಂದಂಗ್ ಬಂದ್ ಮೇಲೆ, ನಮ್ಮೂರ ಒಂದಷ್ಟು ಮನೆಗಳ ಮುಂದೆ ಕಾರ್ ಪಾರ್ಕಿಂಗ್ ಪರ್ಮನೆಂಟ್ ಆದ ಮೇಲೆ, ಕಾರಿನಲ್ಲಿ ಬಂದು ಹೋಗೋರೂ ಜಾಸ್ತಿಯಾದ ಮೇಲೆ. ಕಾರುಗಳು ಕೂಡ ಕುತೂಹಲ ಕಳಕೊಂಡು “ಕಾಮನ್” ಆಗತೊಡಗಿತು. ಆದರೆ ಕಾರು ಖುದ್ದು ಮನೆಯ ಮುಂದೆಯೇ ಬಂದು ನಿಂತಾಗ ಇಣುಕದಿರಲಾದೀತೇ?
ಕಾರೇನೋ ನಿಂತದ್ದು ಹೌದು. ಒಳಗೆ ಬಂದವರು ಮಾತ್ರ ನಮ್ಮೂರ ಗಡಿಯಾರದ ಮಲ್ಲಣ್ಣ(ಅವರು ನಮ್ಮೂರಲ್ಲೆ ಕೈಗೆ ವಾಚು ಕಟ್ಟಿದ ಮೊದಲ ವ್ಯಕ್ತಿಯಂತೆ, ಹಾಗಾಗಿ ಮಲ್ಲಣ್ಣನ ಹೆಸರಿನ ಹಿಂದೆ ಗಡಿಯಾರವೂ ಸೇರಿಕೊಂತು) “ಒಂದೈದ್ ಕೆಜಿ ಮಾವಿನಣ್ಣು ಬೇಕಾಗಿತ್ತಲ್ಲ ಇದ್ದದಾ?” ಅಂದರು.  ಮಾವು ಫಲ ಕಚ್ಚಿ ಮೂರನೇ ವರ್ಷವಾದರೂ ಮಾರುವ ಮನಸ್ಸು ಮಾಡದೆ, ನಾವೂ ಮನಸಾರೆ ತಿಂದು, ಬಳಗಕ್ಕೆಲ್ಲ ಹಂಚಿ. ಇನ್ನೊಂದಷ್ಟು ಉಳ್ಕಂಡಿತ್ತು. ಆಗ್ಲೆ ಕೇಳದಲ್ವ ಮಲ್ಲಣ್ಣ, ಈಗ ಎಲ್ಲಾ ತೀರ್ಕಂಡ್ ಬಂದಿರಾ ಒತ್ನಲ್ ಕ್ಯೋಳ್ತಾ ಇದ್ದಯಲ್ಲ?”ಅಂದ್ರು ಅಪ್ಪ. “ನನಗ್ಯಲ್ಲ. ಒಬ್ರು ಸಾವ್ಕಾರ್ರು ಬೆಂಗಳೂರಿಂದ ಬಂದರ ಅವರಗ, ಹೋದ್ ವರ್ಷ ಯಾವಾಗ್ಲೋ ನಿಮ್ ಜಮೀನ್ ಹಣ್ ತಿಂದಿದ್ರಂತ ಅದಕ್ ಪುನ ತಡಿಕಂಡ್ ಬಂದರ.ದುಡ್ ಎಷ್ಟಾದ್ರೂ ಸರಿ ಒಂದತ್ ಕೆಜಿ ಬೇಕು ಅಂದ್ರು. ಕರ್ಕಂಡ್ ಬಂದಿ” ಅಂದ್ರು ಮಲ್ಲಣ್ಣ. ಹತ್ ಕೆಜಿ ಹಣ್ಣೂ ಇಲ್ಲ, ನಾವ್ ಮಾರ್ತಾನೂ ಇಲ್ಲ ಅನ್ನೋಷ್ಟರಲ್ಲಿ ಕಾರಿಂದ ತೆಳ್ಳಗಿನ ಜೀವವೊಂದು ಇಳಿದು ಒಳಗೆ ಬಂತು.
ಇಲ್ವ ಇವರೆ, ಇದ್ರೆ ನೋಡಿ. ನಾವು ನಂಜನಗೂಡಿಂದ ಹಂಗ್ ಹೋಗ್ತಿದ್ದೋರು ಈ ಹಣ್ಣಿನ್ ಸಲುವಾಗ್ ಹಿಂಗ್ ಬಂದ್ವಿ” ಅಂದ್ರು. ದೂರದಿಂದ ಬಂದಿದ್ದಿರಿ ಮನೆಲಿರದ್ ಸ್ವಲ್ಪ ಬೇಕಾರ್ ತಕಂಡೋಗಿ ಮಾರೋ ಅಷ್ಟಿಲ್ಲ ಅಂದರು ಅಪ್ಪ. ನೀವ್ಯಾವಾಗ್ ನಮ್ ಜಮೀನ್ ಹಣ್ ತಿಂದಿದ್ರಿ? ಕೇಳಿದರು. “ಹೀಗೇ ನಿಮ್ಮೂರಲ್ ಜಮೀನಿದೆಯಾ ಅಂತ ನೋಡೋಕ್ ಬಂದಿದ್ವಿ. ಆಗ ಮಲ್ಲಣ್ಣೋರ್ ಕೊಟ್ಟಿದ್ರು,” ಅಂದ್ರು. ಇಲ್ ಜಮೀನ್ ತಗೊಳಕ್ ಬಂದಿದ್ರಾ? ಬೆಂಗಳೂರಿಂದ? ಅಪ್ಪ ಹುಬ್ಬೇರಿಸಿದರು. “ನಾನು ಮೈಸೂರವನು ನನ್ ಫ್ರೆಂಡು ಬೆಂಗಳೂರು.” ಅನ್ನುವಷ್ಟರಲ್ಲಿ ಸೆಕೆ ತಾಳಲಾರದೇ ಆ ಒಳಗಿದ್ದ ಜೀವವೂ ಕಾರು ಗ್ಲಾಸು ಇಳಿಸಿತು. “ಬನ್ನಿ ಸಾರ್, ಬನ್ನಿ ಒಳಗೆ. ಜ್ಯೂಸ್ ಕುಡೀರಿ ಬನ್ನಿ.” ಶುರುವಾಯ್ತು ಸತ್ಕಾರ. “ಎಲ್ಲಿರೋದು ಬೆಂಗಳೂರ್ಲಿ ನೀವು? ನನ್ ಮಗಳೂ ಬೆಂಗಳೂರೇ” ಅಂದರು ಅಪ್ಪ. (ಮಕ್ಕಳ್ಯಾರಾದರೂ ಬೆಂಗಳೂರಲ್ಲಿದ್ದರೆ ಹಳ್ಳಿಯ ಮನೆಗೆ ಬಂದೋರ ಜೊತೆ ಅಪ್ಪ-ಅಮ್ಮಂದಿರು ಅದನ್ನ ಹೇಳೋದೇ ಒಂದು ಗೈರತ್ತು) “ಹೌದಾ? ಎಲ್ಲಿ ಮನೆ?” ಕೇಳಿದರು. ಮಗನ ಬೇಸಿಗೆ ರಜೆಗೆ ಅಂತ ಹೋಗಿ, ಅಲ್ಲಿಂದಲೇ ಸೀರಿಯಲ್ ಬರೆವ ಕಾಯಕ ಮಾಡ್ತಿದ್ದ ನಾನು, ಶೂಟಿಂಗ್ ಸ್ಪಾಟಿಗೆ ಸೀನ್ ಕಳಿಸಲು ಇಂಟರ್ನೆಟ್ಟು ಸಿಗ್ನಲ್ಲು ಸಿಗದೇ ಲ್ಯಾಪ್ ಟಾಪು ಹಿಡಿದು “ಆ ಮನೆ ಈ ಮನೆ ಆ ಜಗಲಿ ಈ ಜಗಲಿ ಅಡ್ಡಾಡುತ್ತಾ.. ಒಂದು ಕಿರುಕಡ್ಡಿಯಷ್ಟಾದರೂ ನೆಟ್ವರ್ಕು ಕರುಣಿಸೋ ಮಾದಪ್ಪ ಅಂತ ಬೇಡಹತ್ತಿದ್ದೆ. ಕಡೆಗೂ ಜಗಲಿಯ ಕಡೇ ಕಂಬದ ಬಳಿ ನಿಂತು ಮೇಲ್ ಮಾಡಿ, your mail has been sent ಅಂತ ಬಂದಾಗ ನಿಟ್ಟುಸಿರು. ಆಮೇಲೇ ಅವರಿಗೆ ಮನೆ ಅಡ್ರಸ್ಸು ಹೇಳಿದ್ದು ನಾನು.
ಅವರೊಟ್ಟಿಗೆ ನಡೆದ ಸಂಭಾಷಣೆ ಬೇಡ. ಬೋರು. ಡೈರೆಕ್ಟು ಕಥೆ ಹೇಳ್ತೀನಿ ಕೇಳಿ. ಅವರ ಮನೆ ಜಯನಗರ ಏಳನೇ ಬ್ಲಾಕು.ಕೆ ಆರ್ ರೋಡಿನಿಂದ ಜಯನಗರಕ್ಕೆ ಹೋಗೋ ಮೇನ್ ರೋಡಿನಲಿ ಊಊದ್ದಕ್ಕೂ ಒಂದು ಲೈನು ಪೂರಾ ಇರೋದು ಅವರದೇ ಮನೆಗಳಂತೆ. “ನಮ್ ಬೀದಿ ಈ ತುದಿಯಿಂದ ಆ ತುದೀವರೆಗೂ ನಮ್ಮದೇ ಮನೆ” ಅಂತ ಯಾರಾದ್ರೂ ಸಿಟಿ ಸ್ನೇಹಿತೆಯರಿಗೆ ಹೇಳಿ ಕಾಲರು ಎತ್ತಿಕೊಳ್ತಿದ್ದ ನಾನು. ಬೆಂಗಳೂರಂತಾ ಬೆಂಗಳೂರಲಿ ಬೀದಿಗಟ್ಟಲೆ ಮನೆ ಮಡಿಕಂಡಿರೋ ಈಯಪ್ಪನನ್ನ ನೋಡಿ ದಂಗುಬಿದ್ದೆ!

ಆ ಜಾಗವಲ್ಲದೆ, ಬ್ಯಾಂಕು ಹೋಟೆಲು ಅಂತಲೂ ಆ ಏರಿಯಾ ಸುತ್ತಮುತ್ತ ಬೇಕಷ್ಟು ಜಾಗ ಬಾಡಿಗೆಗೆ ಕೊಟ್ಟಿದಾರೆ. ಒಂದೇ ಮಾತಲ್ಲಿ ಕೋಟ್ಯಾಧಿಪತಿ ಕೆಟಗರಿ ಅಂತಿಟ್ಕೊಂಡುಬಿಡಿ. ಆ ಮನುಷ್ಯ ಜಮೀನು ತಗೊಂಡು ವ್ಯವಸಾಯ ಮಾಡಬೇಕಂತೆ. “ಮೈಸೂರು ಸುತ್ತ ಮುತ್ತ ಸ್ವಲ್ಪ ಜಾಸ್ತಿ ಅನಿಸಿತು. ಹಾಗಾಗಿ ನಂಜನಗೂಡು ಹತ್ತಿರದ ಕಾರ್ಯದಲ್ಲಿ ಸ್ವಲ್ಪ ಜಮೀನು ಮಾಡಿದೀನಿ” ಅಂದ್ರು. (ಕಾರ್ಯ ಅಂದರೆ ಊರ ಹೆಸರು. ನಮ್ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಪರ್ಮನೆಂಟು ಪಿ ಎ ಕಾಪು ಸಿದ್ದಲಿಂಗಸ್ವಾಮಿಯ ಸ್ವಗ್ರಾಮ) ಬೆಂಗಳೂರಿಂದ ನಂಜನಗೂಡಿನ ಕಾರ್ಯ!! ಬಾಪ್ರೇ.. ಎಷ್ಟ್ ದಿನಕ್ ಒಂದ್ಸಲ ಬರ್ತೀರ? ಕೇಳಿದೆ. ವಾರಕ್ಕೊಂದ್ಸಲ. ಅಂದರು. “ಬರೋದು ಹೋಗೋದರಲ್ಲೇ ಆಗತ್ತಲ್ಲ? ನಿಮ್ಮ ಟೈಮು,” ಅಂದರೆ , ಪರವಾಗಿಲ್ಲ, ಅಭ್ಯಾಸವಾಗಿದೆ ಅಂದರು. “ಬೆಂಗಳೂರು ಬಿಟ್ಟು, ಒಂದು ತೋಟ ಮಾಡಿಕೊಂಡು, ಒಂದು ತೊಟ್ಟಿಮನೆಕಟ್ಟಿಸಿಕೊಂಡು ಬದುಕಬೇಕು. ಈಗ ಹೋಗಿ ಬಂದು ಮಾಡ್ತಿದೀನಿ. ನಿಧಾನಕ್ಕೆ ಇಲ್ಲೆ ಸೆಟಲ್ ಆಗೋಣ ಅಂತ “ ಅಂದರು. “ನಾನು ಕೊಂಡಾಗ ಖಾಲಿ ಭೂಮಿ, ಏನೂ ಇರ್ಲಿಲ್ಲ ಈಗ್ ಬಂದ್ ಒಂದ್ಸಲ ನೋಡಿನಮ್ ಜಮೀನು . ಅಂದು, ಬೆಂಗಳೂರಿನ ಮನೆಗೂ ಆಹ್ವಾನಿಸಿ ಹೋದರು.
ಗಿಡುನ್ ಜಮೀನ್ಗಳು ಅಂತ ಒಂದಷ್ಟಿವೆ. ಬೆಟ್ಟದಂತ ಜಾಗ, ಮಟ್ಟಸವಲ್ಲದ ಹಳ್ಳದಿಣ್ಣೆ ಪ್ರದೇಶ. ಪಕ್ಕದಲ್ಲೆ ಕಾಡು ಇರೋದರಿಂದ, ಗಿಡಮರಗಳುಳ್ಳ ಜಾಗ ಅನ್ನೋ ಹಿನ್ನೆಲೆಯಿಂದ “ಗಿಡುನ್ ಜಮೀನ್ಗಳು” ಅಂತ ಆಡುಭಾಷೆಯಾಗಿರಬಹುದು ಅಂತ ನನ್ನ ಗ್ರಹಿಕೆ. ಆ ಸರ್ಕಾರೀ ಜಾಗವನ್ನ ಹಿಂದೆ ಬೇಕಷ್ಟು ಹಿಡ್ಕೊಂಡು ಕೃಷಿ ಮಾಡ್ತಿದ್ದರು. ಅದಕ್ಯಾವ ದಾಖಲೇನೂ ಇರ್ಲಿಲ್ಲ. ಆಮೇಲಾಮೆಲೆ ಕೆಲವರು ದಾಖಲೆ, ಖಾತೆ ಮಾಡಿಸಕೊಂಡರು. “ಬರೀ ಕಲ್ಲು ಮುಳ್ಳು, ಅಲ್ಲೇನ್ ಬೆಳಿಯಕಾದ್ದು?” ಅಂತ ಬಿಟ್ಟವರೇ ಹೆಚ್ಚು. ಬೆಳೆಗಿಂತ ಮೇವಿಗೆ ಆಭೂಮಿನ ಹೆಚ್ಚು ಬಳಸ್ತಿದ್ದದು. ಮಾರೋ ಸರದಿ ಆರಂಭವಾದಾಗ,ಬಹುತೇಕ ಹೆಣ್ಣುಮಕ್ಕಳ ಮದುವಗೆ ಆ ಜಮೀನುಗಳನ್ನ ಮಾರಲಾಯ್ತು. ತೀರಾ ಕಡಿಮೆ ಬೆಲೆಗೆ. ಈಗ ಅಲ್ಲಿ ಎಕರೆಗೆ ಎಂಟು ಲಕ್ಷ !
ರೇಟಿನ ಮಾತು ಬಿಡಿ. ಆ ಸಮಯದಲ್ಲಿ ಆ ಗಿಡುನ್ ಜಮೀನನ್ನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಆಫೀಸರ್ ಇಂದ್ರಮ್ಮ ಕೊಂಡರು. ಅವರ ಗಂಡ ಜಯರಾಮ್ ಕೂಡ ಸೆಂಟ್ರಲ್ ಗೌರ್ಮೆಂಟು ಉದ್ಯೋಗಿ. ಆಳುಗಳೊಂದಿಗೆ ಕೆಲಸಕ್ಕಿಳಿದರು. ಜಮೀನಿನ ಸಲುವಾಗಿ ತುಸು ಬೇಗನೇ ರಿಟೈರ್ಮೆಂಡ್ ತಗೊಂಡರು. ಅವರ ಜಮೀನಿನ ಹಣ್ಣುಗಳೀಗ ರಿಲಯನ್ಸ್ ಫ್ರೆಶ್ಗೆ!! ಈಗಲೂ ಅವರು ಸಿಟಿಯಿಂದ ಜಮೀನಿಗೆ ಬರೋದು ಸಿಟಿಬಸ್ಸಿನಲ್ಲಿ!! “ಇದ್ಯಾಕ ಮಾರಾಯ , ಒಂದ್ ಕಾರ್ ತಕಂಡ್ ತಿರಗಾಡ್ಲಾರ್ದೆ ಇವರಿಬ್ರೂ ಈಪಾಟಿ ಕಷ್ಟ್ಬಬಿದ್ದರು? ಐ ಗಂಟ್ ಮಡಿಕಂಡ್ ಏನ್ಮಾಡಬೇಕು? ದುಡ್ಡಿದ್ರ ಆಗ್ಬುಟ್ಟದ? ಸೋಕಿ ಮಾಡಕುವ ಪಡ್ಕಬಂದಿರ್ಬೇಕು ಯೋಗವಾ” ಅಂತ ಬಸುನ್ಗುಡಿಲಿ ಉಂಡು ಅರಗಿಸೋಕೆ ಕೂತವರ ಮಾತು.
ನಾನು ಬೆಳೆದ ಅಜ್ಜಿ ಮನೆನ ಮಗನಿಗೂ ಒಸಿ ತೋರಿಸುವಾ ಅಂತ ಈ ಕೂಸು, ನನ್ ಲ್ಯಾಪ್ಟಾಪು ಎಲ್ಲಾನೂ ಹಿಂದೆ ಮುಂದೆ ಕಟ್ಕಂಡು ಚಾಮರಾಜನಗರದ ದೇಶವಳ್ಳಿ ಅನ್ನೋ ಪುಟಾಣಿ ಗ್ರಾಮಕ್ಕೆ ಹೋದರೆ ಅಲ್ಲಿ ಪಕ್ಕದ ಮನೆ ಪುಟ್ತಾಯಕ್ಕ ಆಗ್ಲೆ ಗಂಟು ಕಟ್ತಾ ಇದ್ರು. “ಇದೇನ್ ಪುಟ್ತಾಯಕ್ಕ ಇಷ್ಟೊಂದ್ ಲಗೇಜು?” ಅಂದೆ. ಆಗ ಗೊತ್ತಾದ ಕಥೆ, ಅವರು ಊರು ಬಿಟ್ಟೇ ನಾಕು ವರ್ಷವಾಯ್ತಂತೆ. ಇಬ್ಬರು ಗಂಡು ಮ್ಕಕಳು ಬೆಂಗಳೂರಿನ ಫ್ಯಾಕ್ಟರಿ ಸೇರಿದಾರೆ. ಈಗ ಅಪ್ಪ ಅಮ್ಮನೂ ಅವರನ್ನು ಸೇರಿಕೊಳ್ಳಲು ಹೋಗ್ತಿದಾರೆ. “ಮತ್ತೆ ನಿಮ್ ಜಮೀನು?” “ಐ ಜಮೀನ್ಲಿ ಏನ್ ಮಾಡಕಾದ್ದು ಕುಸ್ಮಾ? ನಿಮ್ ದಿಕ್ಕಲಂಗ ನೀರೂ ಬರಲ್ಲ. ಮಳನೇ ನಂಬ್ಕಬೇಕು, ಇದ್ ನಂಬಿದರ ಆಯ್ತು. ಇಟ್ಗೂ ಬಟ್ಗೂ ಬರಲ್ಲ. ರೇಸ್ಮ ಹುಳ ಮೇಯಿಸ್ತಿದ್ದೋ, ಮನ ತುಂಬ ಅದ್ನೆ ತುಂಬ್ಕಬೇಕು. ಹಿಂಸೆಯಾಯ್ತದ. ಮುಂದಕ್ಕ ನಮ್ ಐಕಳಗ ಹೆಣ್ ಕೊಡೋರ್ ಕೊಡಲ್ಲ. ಹೋಗ್ಲಿ ಹುಡುಗರು ಎಲ್ಯಾರ ಕೆಲ್ಸಕ್ಕಾರೂ ಸೇರ್ಕಳಂವು ಅಂದ್ರ ನಗರ, ಕೊಳ್ಳಗಾಲದಲ್ಲೆಲ್ಲ ಫ್ಯಾಕಟರಿಗಳೂ ಇಲ್ಲ.. ಇದ್ರು ಸಂಬಳ ಕಮ್ಮಿ. ಯಾರೋ ಗುರುತಿನವರು ಬೆಂಗಳೂರಿಗ್ ಸೇರ್ಸಿದ್ರು ಒಬ್ಬ ಹೋದ, ಆಮೇಲ್ ಚಿಕ್ಕವನೂ ಹೋದ. ಈಗ ಒಂದ್ ವರ್ಷದಿಂದ ಅವರಪ್ಪನ್ನೂ ಸೆಕ್ಯುರಿಟಿ ಕೆಲ್ಸಕ್ ಸೇರ್ಸರ. ನಾನೂ ಹೋಗಿ ಬಂದು ಮಾಡ್ತಿದ್ದಿ. ಈಗ ಆರ್ ತಿಂಗಳಿಂದ ಅಲ್ಲೆ. ಒಸಿ ಸಾಮಾನ್ ಉಳ್ಕಂಡಿದ್ದೋ ತಕಂಡೋಯ್ತಾ ಅಂವಿ” ಅಂದರು. “ವಾಪಸ್ ಬರಲ್ಲ ಅಂಗಾದ್ರೆ ನೀವು?” ಅಂದೆ. “ಐ ಹಂಗೂ ಉಂಟವ್ವ? ನಮ್ಮೂರು ಕೇರಿ ಬುಟ್ಬುಡಕಾದ್ದ? ಒಂದಷ್ಟ್ ವರ್ಷ ಸಂಪಾದನ ಮಾಡ್ಕ ಬತ್ತಿಂವಿ. ಅಂದರು. ಬವ್ವ ಮನಗ. ಬನಸಂಕರಿ ತಾವಂತಲ್ಲ ನೀ ಇರದು? ನಿಮ್ಮ ಮಾವ ಯೋಳ್ತಿತ್ತು. ನಾವು ಬನ್ನೇರ್ ಘಟ್ಟ ರೋಡ್ಲಿ ಬಿಳೇಕಳ್ಳಿ ತಾವಿರದು, ಬಾ ಒಂದ್ ಸಲ.” ಅಂತ ಫೋನ್ ನಂಬರು ಕೊಟ್ಟರು.ಒಂದು ವರ್ಷ ಕಳೀತು. ನಾನು ತಂಗಿ ಮದುವೆಗೆ ಕರೆಯಲು ಹೋದೆ. ಅವರ ಮೊದಲ ಮಗನಿಗೆ ಮದುವೆಯಾಗಿತ್ತು. ನರಸೀಪುರದ ಹುಡುಗಿ. ಅವರ ಮಾತು, ರೀತಿ, ಎಲ್ಲ ಬದಲು. ಅವರು ಊರುಕೇರಿಗಿನ್ನು ಮರಳದವರು ಅಂತ ಖಾತ್ರಿಯಾಗಿತ್ತು!
ಅಮೆರಿಕೆಯಲ್ಲಿ ಸಾಫ್ಟ್ವೇರ್ ಎಂಜಿಯರ್ ಉದ್ಯೋಗ ತೊರೆದು ಬಂದ ಯುವಕನೊಬ್ಬ ಮೈಸೂರಿನ ಆಲನಹಳ್ಳಿಯಲ್ಲಿ ಹಾಲಿನ ಡೈರಿ ತೆರೆದಿದ್ದಾನೆ. “ನೆನಪಿರಲಿ” ಖ್ಯಾತಿಯ ಡೈರೆಕ್ಟರ್ ರತ್ನಜ, ನೀನಾಸಂ ಅಶ್ವತ್ಥ. ಇಬ್ಬರೂ ಮಂಡ್ಯದ ಹತ್ತಿರ ಕೃಷಿಯಲ್ಲಿ ತೊಡಗಿದ್ದಾರೆ. ನಮ್ಮ ಹೀರೋ ಉಪೇಂದ್ರ ಅವರು ಕೂಡ ಕೃಷಿ ಬಗ್ಗೆ ಆತ್ಮೀಯರ ಗುಂಪಿನಲ್ಲಿ ಆಸಕ್ತಿಯಿಂದ ಮಾತಾಡುತ್ತಾರೆ. ನಮ್ಮೂರ ಸಾಕಷ್ಟು ಭೂಮಿ ಈಗ ಸಂತೇಪೇಟೆಯ ಸಾಹುಕಾರರದು. “ಕಾಸಿರೋ ಕೆಲವರು ಶೋಕಿಗ್ ಜಮೀನ್ ತಗೊಂಡು, ಕೂಲಿ ಜಾಸ್ತಿ ಮಾಡಿ ನಮ್ಮಂತ ರೈತರ ಪ್ರಾಣ ತೆಗೀತಾರೆ. ಅವರಿಗೇನೋ ಎಲ್ಲಿಂದಾನೋ ಬರತ್ತೆ ಸುರೀತಾರೆ. ನಾವೆಲ್ಲೋಗಬೇಕು? ಅಲ್ಲೇ ತೆಗ್ದು ಅದಕ್ಕೇ ಸುರಿದು ಅದರಲ್ಲೇ ಬದುಕೋರು?” ಅಂತ ನಾನೇ ಆಗಾಗ ಕಾರಿಕೊಳ್ಳುತ್ತೇನೆ.
ಹೋಮಿಯೋಪತಿ ಡಾಕ್ಟರೊಬ್ಬರ ಬಳಿ ಹೋಗಿದ್ದೆ. ಏನೇನೋ ಮಾತಾಡುತ್ತಾ “ಎಂಬಿಬಿಎಸ್ ಓದಿ ಆಯುರ್ವೇದ ಪ್ರಾಕ್ಟೀಸ್ ಮಾಡ್ತಾರೆ. ಆಯುರ್ವೇದ ಓದಿ ಹೋಮಿಯೋಪತಿ ಔಷಧಿ ಕೊಡ್ತಾರೆ. ಹಳ್ಳಿಯವರು ಸಿಟಿಗ್ ಬರ್ತಾರೆ. ಸಿಟಿಯವರು ಹಳ್ಳಿಗ್ ಹೋಗ್ತಾರೆ ಈ ಕಲಸುಮೇಲೋಗರವೇ ಎಡವಟ್ಟು ಅಂದರು. ಹುಡುಕಿ ನೋಡಿದರೂ ನಮ್ಮೂರ ಹುಡುಗೀರ ಹತ್ತಿರ ಲಂಗ ಬ್ಲೌಸಿಲ್ಲ.ಮೊನ್ನೆ ಪುಸ್ತಕ ಬಿಡುಗಡೆ ಸಮಾರಂಭ ಮುಗಿಸಿ ಹೊರಬಂದಾಗ ಕೈಯಲ್ಲಿ ನ್ಯೂಸ್ ಚಾನಲ್ ಲೋಗೋ ಹಿಡಿದ ಹುಡುಗಿ ಲಂಗ ಬ್ಲೌಸು ಹಾಕಿದ್ದು ನೋಡಿ ಕಣ್ಣು ತಿಕ್ಕಿದ್ದೆ. ಜೊತೆಯ ಗೆಳತಿಯರಿಗೂ ತೋರಿಸಿದ್ದೆ.
ಬಿ. ಸುರೇಶ್ ಸರ್ ಪುಟ್ಟಕ್ಕನ ಹೈವೇ ಸಿನೆಮಾ ಸಂವಾದ. ರೈತರ ಬಗ್ಗೆ ಮಾತುಕತೆ. ಆಗಿನ್ನೂ ಡ್ರಾಮಾ ಸಿನೆಮಾ ಮುಗಿಸಿದ್ದ ನೀನಾಸಂ ಸತೀಶ, ಅಚ್ಯುತರಾವ್, ನಾನೂ ಕಾರ್ಯಕ್ರಮ ಮುಗಿದ ಮೇಲೂ ರೈತರ ಬಗ್ಗೆಯೇ ಮಾತಾಡುತ್ತಿದ್ದೆವು. ಸತೀಶ ಕೇಳಿದ್ದ, “ರೈತರ ಮಕ್ಕಳು ರೈತರೇ ಆಗಬೆಕಾ?”
 

‍ಲೇಖಕರು G

12 August, 2014

ನಿಮಗೆ ಇವೂ ಇಷ್ಟವಾಗಬಹುದು…

8 Comments

  1. ಲಕ್ಷ್ಮೀಕಾಂತ ಇಟ್ನಾಳ

    ಹೌದು, ‘ಇರುವುದೆಲ್ಲವ ಬಿಟ್ಟು’, ಇರದುದರ ಚಡಪಡಿಕೆಯ ಪಲ್ಲಟಗಳ ಸುಂದರ ಬರವಣಿಗೆ, ಹಳ್ಳಿಯನ್ನು ಬಿಟ್ಟು ಪೇಟೆಗೆ ಒಕ್ಕಲಾಗುವುದನ್ನು ಒಪ್ಪಬಹುದು, ಅದು ಬದುಕಿನ ಪ್ರಶ್ನೆ ಅಂದಕೋಬಹುದು. ಆದರೆ ಈ ಹಳ್ಳಿಯೆಡೆಗಿನ ಪಯಣವಿದೆಯಲ್ಲಾ, ಇಲ್ಲಿ ಒಳ ಮನಸಿನ, ವಿವೇಕವೊಂದರ,ಆತ್ಮ ಸಾಕ್ಷಿಯೆಡೆಗಿನ ಪಯಣವಿದು.,ಸುಮ್ಮನೆ ಸಾಧ್ಯವಾಗದು, ಈ ನಗರಬದುಕಿನ ಶುಷ್ಕತೆಯನ್ನು, ಶೂನ್ಯವನ್ನು ತೊರೆದು, ನಿಸರ್ಗ ಮಡಿಲಿನತ್ತ ಧ್ಯಾನಿಸುವ ಸೆಳೆತವಿದು. ಇಂತಹ ಸೆಳೆತಕ್ಕೆ ಸಿಗುವವರು, ನಿಜಕ್ಕೂ ಅಭಿನಂದನಾರ್ಹರು, ಪ್ರಕೃತಿಯೆಡೆಗಿನ ಪಯಣಿಗರಿಗೆ ನಿಜಕ್ಕೂ ಒಂದು ಸಲಾಮ್ ಹೇಳಲೇಬೇಕು, ಅದನ್ನೇ ಪ್ರೇರೇಪಸಿಬೇಕು ಅನ್ನಿಸುತ್ತದೆ ಮನಸ್ಸು. ಬದುಕು ಅವರಿಗೆ ಅಂತಹ ಅವಕಾಶವನ್ನು ಕರುಣಿಸುತ್ತದಲ್ಲ, ಅದನ್ನು ಅವರ ಅದೃಷ್ಟವೆಂದೇ ಹೇಳಬೇಕು. ಈ ನಗರದ ಬಣ್ಣದ ಬದುಕು, ಸುಳ್ಳುಗಳ ಸಾಗರವೆಂದು ಮೊನ್ನೆ ಒಬ್ಬ ಹಿರಿಯರು ಹೇಳುವುದನ್ನು ಕೇಳಿದ್ದೇನೆ. ಹಳ್ಳಿಗೆ ಹೋಗಿ ಇದ್ದು ಬಿಡಬೇಕೆಂದು ಕನ್ನಡದ ಖ್ಯಾತ ಕವಿ,ಲೇಖಕರು, ಕತೆಗಾರ, ಸಿನಿ ಲಿರಿಸಿಸ್ಟ ಮೊನ್ನೆ ಹೇಳುತ್ತಿದ್ದುದನ್ನು ಹಾಗೆಯೇ ನೆನಪಸಿಕೊಂಡೆ, ಚಿಂತನೆಗೆ ಹಚ್ಚುವ ಬರಹಕ್ಕೆ ಲೇಖಕರಿಗೆ ವಂದನೆಗಳು.

  2. ಸಂತೋಷ್.ಎಲ್

    ಯಕ್ಕೊ ಎಷ್ಟ್ ಚಂದ ಬರ್ದಿಯ.ಹೋಮಿಯೋಪತಿ ಡಾಕ್ಟರೊಬ್ಬರ ಬಳಿ ಹೋಗಿದ್ದೆ. ಏನೇನೋ ಮಾತಾಡುತ್ತಾ “ಎಂಬಿಬಿಎಸ್ ಓದಿ ಆಯುರ್ವೇದ ಪ್ರಾಕ್ಟೀಸ್ ಮಾಡ್ತಾರೆ. ಆಯುರ್ವೇದ ಓದಿ ಹೋಮಿಯೋಪತಿ ಔಷಧಿ ಕೊಡ್ತಾರೆ. ಹಳ್ಳಿಯವರು ಸಿಟಿಗ್ ಬರ್ತಾರೆ. ಸಿಟಿಯವರು ಹಳ್ಳಿಗ್ ಹೋಗ್ತಾರೆ ಈ ಕಲಸುಮೇಲೋಗರವೇ ಎಡವಟ್ಟು ಅಂದರು. ಹುಡುಕಿ ನೋಡಿದರೂ ನಮ್ಮೂರ ಹುಡುಗೀರ ಹತ್ತಿರ ಲಂಗ ಬ್ಲೌಸಿಲ್ಲ.ಮೊನ್ನೆ ಪುಸ್ತಕ ಬಿಡುಗಡೆ ಸಮಾರಂಭ ಮುಗಿಸಿ ಹೊರಬಂದಾಗ ಕೈಯಲ್ಲಿ ನ್ಯೂಸ್ ಚಾನಲ್ ಲೋಗೋ ಹಿಡಿದ ಹುಡುಗಿ ಲಂಗ ಬ್ಲೌಸು ಹಾಕಿದ್ದು ನೋಡಿ ಕಣ್ಣು ತಿಕ್ಕಿದ್ದೆ. ಜೊತೆಯ ಗೆಳತಿಯರಿಗೂ ತೋರಿಸಿದ್ದೆ. ಎಲ್ಲಾ ತಳ್ಕಂಬಳ್ಕ

  3. ಆರ್. ಎಸ್. ನಾಯಕ

    “ಎಂಬಿಬಿಎಸ್ ಓದಿ ಆಯುರ್ವೇದ ಪ್ರಾಕ್ಟೀಸ್ ಮಾಡ್ತಾರೆ. ಆಯುರ್ವೇದ ಓದಿ ಹೋಮಿಯೋಪತಿ ಔಷಧಿ ಕೊಡ್ತಾರೆ. ಹಳ್ಳಿಯವರು ಸಿಟಿಗ್ ಬರ್ತಾರೆ. ಸಿಟಿಯವರು ಹಳ್ಳಿಗ್ ಹೋಗ್ತಾರೆ ಈ ಕಲಸುಮೇಲೋಗರವೇ ಎಡವಟ್ಟು ಅಂದರು”. ಹೌದು ಇಂದಿನ ಸ್ಥಿತಿ ಹಾಗೇ ಇದೆ. ಇಂದು ರೈತಾಪಿ ಜನರನ್ನು ಬಿಟ್ಟು ಉಳಿದವರೆಲ್ಲ ಜಮೀನು ಖರೀದಿಸುತ್ತಿದ್ದಾರೆ. ಅರಣ್ಯವಾಸಿಗಳಿಗೆ ಕಾಡಿನ ಇಂಚಿಂಚೂ ಗೊತ್ತಿರುತ್ತದೆ. ಗಿಡ ಮರ ಬಳ್ಳಿ, ಅವುಗಳ ಬೀಜೋತ್ಪತ್ತಿ, ಪ್ರಾಣಿ ಪಕ್ಷಿ, ಅವುಗಳ ಸಂತಾನ ಇಲ್ಲವೂ ಗೊತ್ತಿರುತ್ತದೆ. ಆದರೆ ಕಾಡನ್ನೇ ನೋಡದವರು ಅರಣ್ಯಾಧಿಕಾರಿಗಳಾಗುತ್ತಾರೆ. ಬಾಲ್ಯದಲ್ಲೇ ಸಮುದ್ರದಲ್ಲಿ ಈಜಾಡುವ, ಮೀನುಗಳ ಬಗ್ಗೆ ವಿವರವನ್ನೆಲ್ಲ ತಿಳಿದುಕೊಂಡ ಮೀನುಗಾರರ ಮಕ್ಕಳಿಗೆ ಮೀನುಗಾರ ಇಲಾಖೆಯ ಉನ್ನತ ಹುದ್ದೆಗಳಿಗೆ ಹೋಗಲಾಗುತ್ತಿಲ್ಲ. ಕೃಷಿ ಇಲಾಖೆಯಲ್ಲೂ ಇದೇ ಕಥೆ. ಇವೆಲ್ಲವೂ ಹಣವಿದ್ದವರ ಮತ್ತು ನಗರಗಳಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತ ಮೆಖಾಲೆ ಮಕ್ಕಳ ಪಾಲಾಗುತ್ತಲಿದೆ. ಇಂಥ ಗೋಳಿನಿಂದ ಮುಕ್ತಿಯಿಲ್ಲವೆನಿಸುತ್ತದೆ. ಇರಲಿ, ಒಂದು ಒಳ್ಳೆಯ ಕಥೆ ಓದಿದಂತಾಯಿತು. ಆದರೆ ಇದು ಕಥೆಯಲ್ಲ; ವಾಸ್ತವ. ಧನ್ಯವಾದಗಳು.

  4. amardeep.p.s.

    chennagide, ishtavaaytu lekhana ….

  5. bhuvana

    very nice…

  6. umesh desai

    ಒಳ್ಳೆ ಬರಹ ಕೊನೆಯ ಪ್ರಶ್ನೆ ಕಾಡತದ

  7. Guruprasad Kurtkoti

    ಬರಹ ಇಷ್ತವಾಯ್ತು!

  8. Sushma Moodbidri

    ಮನುಷ್ಯದು ಸದಾ ಅತೃಪ್ತ ಮನಸ್ಸು..
    ದಕ್ಕಿದರಲ್ಲಿ ಸುಖ ಕಾಣುವುದು ಗೊತ್ತೇ ಇಲ್ಲ ಅವನಿಗೆ..
    ಹಳ್ಳಿಗರಿಗೆ ದಿಲ್ಲಿಯ ಕನಸು..
    ದಿಲ್ಲಿಯವರಿಗೆ ಹಳ್ಳಿಯದ್ದು…
    – ಕಾಲಮಾನಕ್ಕೆ ತಕ್ಕುದಾದ ಬರಹ..
    ಚೆನ್ನಾಗಿದೆ..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading