ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕುಸುಮಬಾಲೆ ಕಾಲಂ ’ಯ್ಯೋಳ್ತೀನ್ ಕೇಳಿ’ : ಜನ ಮಾಮೂಲ್ನಂಗೇ ಮಾದಪ್ಪನ್ ದಿಕ್ಕಗ್ ತಿರಿಕಂಡ್ರು


“ ಕೂಸ್ಗ ಸ್ಯಾನೆ ಉಸಾರಿಲ್ಲ ಕಣ್ ಚಿಕ್ಕೀ..ಬೆಳಗಾನ ನಿದ್ದ ಮಾಡಿಲ್ಲ. ಕಣ್ಣು ಬಾಯಿ ಬುಟ್ಟಾಡ್ತಿತು. ನಾನು ನಿದ್ದ ಮಾಡಿಲ್ಲ. ಕೂಸ್ನವರವ್ವೂ ನಿದ್ದ ಮಾಡಿಲ್ಲ.” ದೇವೀರಮ್ಮ ಬೀದಿ ಎಂಗಸರ್ ತಾವ್ ಅಲವತ್ಕೋತಿದ್ರು. “ಡಾಕ್ಟರ್ ಶಾಪ್ಗ್ ಕರ್ಕೊಂಡೋಗೈ ತಾಯೀ” ಅಂತ್ಯಾರೋ ಕೇಳಿದ್ದಕ್ಕೆ “ನೆನ್ನ ಜಿನ ಜೇಸೆಸ್ ಗೇ( ಜೆ ಎಸ್ ಎಸೆ್ ಆಸ್ಪತ್ರೆ) ಕರ್ಕೊಂಡೋಗಿದ್ ಬಂದಿವಿ, ಸಿರಪ್ ಕೊಟ್ಟರ, ನೋಡಾಂವು. ಇನ್ನೇನ ನಾಕೈದ್ ಜಿನವಾಯ್ತು, ಕೂಸು ಈತರವಾಗ್ ಆಡಕೆರ್ಗಿ,ಅಟ್ಲಿರವ್ರಿಗೆಲ್ಲ ಕೈಕಾಲ್ ಬುಟ್ಟೋಗದ ಓಗತಗಿ” ಅಂತ ನಿಟ್ಟುಸುರ್ ಬುಡಾವತ್ಗೆ, ನಂಜಕ್ಕ ಬಂದ್ ಮೀಟಿಂಗ್ ಜಾಯಿನ್ ಅದ್ರು. “ ಕೂಸ್ಗಳು ಅಂದ್ರ ಸುಮ್ನೆ ಬಂದವ ತಕ್ಕವ್ವಾ,..ಪರಿಯಾರದ್ ಮಾರವ್ವಗ್ಯಾರೂ ಅರಸ್ಕಳೈ ?” ಅಂತ ಹೊಸ ಬೀಜ ನೆಟ್ರು.. ನೀರೆರಿಯೋಕೂ ಸುರು ಮಾಡಿದ್ರು.
“ನೆನ್ನ ಜಿನ ರಾಗಿ ಮಿಲ್ ಮಾಡಸ್ಕಂಡ್ ಬರಾವು ಅಂತೋಗಿದ್ದಿ. ಬರೀ ಇದೇ ಸುದ್ದಿ. ಆಲ್ತುರುಂಡೀಲಿ (ಆಲತ್ತೂರು ಹುಂಡಿ) ಯಾವಳ್ಗಯೋ ಮಕ್ಕಳಿರ್ನಿಲ್ವಂತ. ಮದ್ಯಾಗಿ 12 ವರ್ಷವಾಗಿತ್ತಂತ, ಅಲ್ಲಗ್ ಅರಸ್ಕಂಡ್ ಮೇಲ ಅವಳಿ ಮಕ್ಕಳಾದ್ವಂತ. ಅಂತ ಉದಾಹರಣೇನೂ ಕೊಟ್ರು. ಅಷ್ಟರಲ್ ಬಂದ್ ಸುಣ್ಣದ್ ಮಾದೇವಿ, “ ನಿಜ ಅಳಿ, ಎಲ್ಐಸಿ ಮಾಡುಸ್ತೀನಿ ಅಂತೊಬ್ ಬತ್ತಿದ್ಲಲ್ಲಳಿ, ದ್ಯಾವಲಾಪುರ್ದಂವ? ಅವಳಿಗ ಸ್ಯಾನ ವಯಸಾಗಿರ್ನಿಲ್ವಳಿ? ಅಂದಿದ್ದಕ್ಕೆ, “ ಮೂವತ್ತಾಗಿತ್ತು ಕಣ್ಯೋಳು, ನಮ್ಮ ರೇಣುಕನ್ ವಾರಗ” ಅಂದ್ರು ನಂಜಮ್ಮ, “ ಅವಳಿಗ ಮದ್ವೆಂತಳಿ, ಪರಿಯಾರದ್ ಮಾರವ್ವಗ್ ಅರಸ್ಕಂಡ್ ಮೇಲ ಮದ್ವ ಒಪ್ಪಂದ ಆಯ್ತಂತಳಿ” ಅಂದ್ಲು. ಮೂಡಳ್ಳಿಲ್ ಅಂಗಾಯ್ತಂತ..ಸೊಳ್ಳೇಪುರ್ದಲ್ ಇಂಗಾಯ್ತಂತ..ಅಂತ, ತಾವ್ ಕೇಳಿದ್ ಕಥೆಗಳೂ ಉಪಕಥೆಗಳೂ ಒಬ್ಬರ ಬಾಯಿಂದ್ಲೂ ಉದುರೋಕ್ ಸುರು ಆಗಿ, ದೇವೀರಮ್ಮನ ನಂಬಿಕೆ ಬೀಜಾನೂ ಚಿಗುರಿ, “ಸಿವಾ ಅಂತ ಅರಸ್ಕತ್ತಿನಿ ಬುಡೆವ್ವ ಆ ತಾಯಿ ಮಾಡದಂಗಾಗ್ಲಿ.” ಅನ್ನೋ ನಿರ್ಧಾರಕ್ಕೂ ಬಂದ್ಬುಟ್ರು. “ ಓಗಿ ತಣ್ಣೀರುಯ್ಕಂಡು ಒಂದ್ ಕಾಣಕ ಕಟ್ಟಿ” ಅಂತ ದೇವೀರಮ್ಮನ್ನ ನಿಂತ್ಕಾಲಲ್ ನಿಲಬುಡದೇ ಅಟ್ಟಿಗ್ ಕಳಿಸಿ, ಕಥೆ.. ಉಪಕಥೇ ಮುಂದರಿಸ್ಕಂಡ್ರು.
ಹದಿನಾರಿಗೂ (ಹದಿನಾರು ಅನ್ನೋದೊಂದು ಊರ ಹೆಸರು, ಮೂಲದಲ್ಲಿ ಯದುನಾಡಂತೆ) ಆಯರಳ್ಳಿಗೂ ಮಧ್ಯದಲ್ಲಿ “ ಬಿಳಿಕೆರೆ ಮಾದಪ್ಪ” ನ ದೊಂದ್ ದೇವಸ್ಥಾನ. ಅಲ್ಲಿ ಹಿಂದೆ ಬಿಳಿಕೆರೆ ಅಂತೊಂದ್ ಊರೂ ಇತ್ತು ಅಂತ ಕೆಲವರು ಅಂದರೆ, ದೇವಸ್ಥಾನದ್ ಪಕ್ಕದ್ ಕೆರೆ ನೀರು ಬೆಳ್ಲಂಬೆಳ್ಳಗ್ ಇದ್ದದ್ದರಿಂದ ಆ ಹೆಸ್ರು ಅಂತ ಇನ್ನೊಂದ್ ವಾದ. ಎರಡೂರ್ ಮಧ್ಯದ್ ಕಾಡಲ್ಲಿದ್ ಆ ಪುಟ್ಟ ದೇವಸ್ಥಾನ ಅದೆಷ್ಟೋ ವರ್ಷ ಅನಾಥವಾಗಿತ್ತು. ಹಬ್ಬ ಹರಿದಿನ್ದಲ್ಲಿ ಊರ್ ತಮ್ಮಡಪ್ಪ ಓಗಿ ಮಾದಪ್ಪನ್ ಮೈಗೆ ನೀರ್ ಕಾಣಿಸಿ ಬಂದ್ರೆ ಹೆಚ್ಚು, ಸುತ್ತ ಮುಳ್ಳು ಕಂಟಿ, ಇನ್ನೇನು ಬಿದ್ದೇ ಹೋಗೋ ಸ್ಥಿತೀಲಿತ್ತು. ಪಕ್ಕದಲ್ಲಿ ಟ್ರೆಕಿಂಗ್ಗೆ ಪ್ರಶಸ್ತವಾಗಿರೋ ಒಂದ್ ಗುಡ್ಡ. ವರ್ಷಕ್ಕೊಂದ್ಸಲ ಮೈಸೂರರಮನೆ ಹೆಂಗಸರು ಫಾರಿನ್ ಗೆಳತಿಯರ ಜೊತೆಲ್ ಬಂದು, ಒಂದು ದಿನ ಇಲ್ಲಿ ಕಳೆದುಹೋಗ್ತಾರೆ ಅಂತಾನೂ ಹೇಳೊದಿದೆ. ಇಂತಾ ಮಾದಪ್ಪನ್ ದೇವಸ್ಥಾನಕ್ಕೆ ಇದ್ದಕ್ಕಿದ್ದಂಗ್ ದೆಸೆ ಬಂತು. ಮೈಸೂರ್ ತಾಲೋಕ್ ಜಮೀನ್ಗಳಿಗೆ ಸುನಾಮಿ ಬಂದಂಗ್ ರೇಟ್ ಬಂದ ಮೇಲಂತೂ, ದೇವಸ್ಥಾನ ಜೀರ್ಣೋದ್ದಾರ ಆಗಿ, ಪ್ರತಿ ಅಮವಾಶ್ಯೆ ದಿನ ಆಯರಳ್ಳಿ, ಹದ್ನಾರು, ಸೊಳ್ಳೇಪುರ , ಕಿರಾಳು, ಆಲತ್ತೂರುಂಡಿ , ಹುಳಿಮಾವು ಸುತ್ತ ಮುತ್ತಲ ಊರ್ಗಳಿಂದ ಸಾವ್ರಾರ್ ಜನ ಸೇರೋಕ್ ಸುರು ಮಾಡುದ್ರು, ಕಡೇ ಕಾರ್ತೀಕ ಸೋಮವಾರಕ್ಕಂತು ದೋಡ್ ಜಾತ್ರೆ. ಜನಕೆಲ್ಲ ಒಳ್ಳೇದ್ ಮಾಡ್ಕಂಡು, ಮಾದಪ್ಪ ತಾನೂ ಸಂತುಷ್ಟನಾಗಿದ್ದ.

ಸದರಿ ಮಾದಪ್ಪನೋರ್ ದೇವಸ್ಥಾನದ್ ಪಕ್ಕದ ಎರಡು ಫರ್ಲಾಂಗ್ ದೂರದಲ್ಲೆ ಒಚ್ಚ ಒಸಾ ಪರಿಯಾರದ್ ಮಾರವ್ವ ಉಟ್ಕಂಡಿದ್ಲು, ಕಲ್ ರೂಪವಾಗ್ ಕುಂತಿದ್ಲು, ಕಥೆಯಾಗ್ ಹರಿದಾಡ್ತಿದ್ಲು, ಅಲ್ಲಂಗಾಯ್ತಂತೆ ಇಲ್ಲಿಂಗಾಯ್ತಂತೆ..ಅನ್ನೋ ಸಕ್ಸಸ್ ಸ್ಟೋರಿಗಳ ಜೊತೇಲಿ, “ ಅರಸ್ಕಂಡವರು 16 ಮಂಗಳವಾರ ಓಗಬೇಕಂತ” ಅನ್ನೋ ರೂಲ್ಸೂ ಸೇರ್ಕಂಡು, ಪ್ರತಿ ಮಂಗ್ಳೋರ ರೂಟ್ ಬಸ್ಸಲ್ಲಿ ಕಾಲ್ ಮಡಗಕ್ ಜಾಗ ಸಿದಗಂಗಾಯ್ತು. ಜನ ಈ ಥರವಾಗಿ ತನ್ನೂ ದಾಟ್ಕಂಡ್ ಮುಂದುಕ್ಕೋಗದ್ನ, ಗರ್ಭಗುಡಿ ಒಳಗಿರಾ ಮಾದಪ್ಪನೋರು ಸುಮ್ಮನ್ ಕುಂತ್ಕಂಡ್ ಅಬ್ಜುರ್ ಮಾಡ್ತಿದ್ರು.
ಇತ್ತಲಾಗಿ ದೇವೀರಮ್ಮನ್ ಮನ ಕೂಸೂ ಉಸಾರಾಗಿ “ ಒಂದ್ ವಾರ್ದಿಂದ ಔಸ್ದಿ ಕೊಟ್ರುವ ಜೆರವೇ ಬುಟ್ಟಿರ್ನಿಲ್ಲ ಕೂಸ್ಗ, ಅರಸ್ಕತ್ಲೆ ನೋಡು ಸುಮ್ಗ ಕೂಸು ಗರಡ್ನಂಗ್ ಆಡ್ತದ” ಅಂತ ಯೋಳಿದ್ದೇ ತಡ, ಬೀದಿ ಎಂಗಸರು “ನಾವೂ ಓಗಿದ್ ನೋಡ್ಕಂಡ್ ಬರಾಂವು ತಕ್ಕಳಿ “ ಅಂತ ಬೋರ್ಡ್ ಮೀಟಿಂಗಲ್ಲಿ ಡಿಸೈಡ್ ಮಾಡಿದ್ರೂ, ಒಳಗೊಳಗೇ ಒಬ್ಬೊಬ್ರೂ ಅರ್ಸಕಂಡಿದ್ದದ್ದ ಬಾಯಿ ಬುಟ್ ಆಡ್ನಿಲ್ಲ.
ಇಂಗ್ ಅಟ್ಟಟ್ಗೂ ಒಂದೊಂದ್ ಕತ ಉಟ್ತಿರಾ ಹೊತ್ಲಿ ,ನಮ್ಮಟ್ಟಿಯೂ ಒಂದ್ ಉಪಕತೆಯ ಉಗಮಕ್ ಸಾಕ್ಷಿ ಆಯ್ತು. ನ್ಮಮ ಮಾತ್ರೋಶ್ರೀ ಅವರು, ಸ್ನಾನಕ್ ಓಗೋವಾಗ್ ಬಿಚ್ಚಿಟ್ಟಿದ್ ತಮ್ಮ ಕಿವಿಯೋಲೇನ ವಾಪಸ್ ಬಂದ್ ನೋಡ್ದಾಗ ವಾಲೆ ಒಂದೇ ಒಂದಿತ್ತು. ಇಡೀ ಅಟ್ಯಾಗಿದ್ ಅಟ್ಟೀನೆಲ್ಲ ಹುಡುಕಿದ್ರೂವೆ, ವಾಲೆ ಸಿಗನೇ ಇಲ್ಲ. ಈ ವಾಲೆ ಅಂದರೆ ಅಂತಿತದ್ದಲ್ಲ, ನಮ್ಮಮ್ಮನಿಗ್ ಮದ್ವೆ ಗೊತ್ತಾದಾಗ, ಅವರಜ್ಜಿ ಹೆಗ್ಗವಾಡಿಪುರದ್ ಕೆಂಪಮ್ಮನೋರು ಗಾಡೀಲಿ ಕೊಳ್ಳೆಗಾಲಕ್ ಓಗಿ, ತಾನು ಎಲ್ಲೋ ನೋಡಿದ್ ಡಿಜನ್ನ ವಿವರವಾಗ್ ಎಕ್ಸ್ ಪ್ಲೇನ್ ಮಾಡಿ, ಶೆಟ್ರಲ್ ಕೈಲ್ ಮಾಡ್ಸಿದ್ದು. ಸುಮಾರು 28 ವರ್ಷದಿಂದ್ಲೂವೆ ಸತತವಾಗಿ ಬಳಕೇಲೇ ಇರೋ ಈ ವಾಲೆಲಿರಾ ಮುತ್ತುಗಳು ಇನ್ನೂ ಥಳಗುಟ್ತಿದ್ವು, ಅದರ ತಿರುಪಿನಲ್ಲೇ ಒಂದ್ ವಾಲೆ ಆಗೋಂಥದ್ದು, ಇಂತಿಪ್ಪ ವಾಲೆ ಈಗ ಕಾಣೆಯಾಗಿತ್ತು, ಆಳುಗಳಿಗ್ ಊಟ ಕೊಟ್ಬರೋಕ್ ಹೋದ್ ನಮ್ಮಮ್ಮ, ವಾಪಾಸು ಬಂದು ನೋಡಲಾಗಿ, ವಾಲೆ ಗ್ರೇಂಡರಿನ ಕಾಲ ಹತ್ರವೇ ಸಿಕ್ಬೀಳ್ತು. ಹೊಲದಿಂದ ಬರ್ತಾ ದಾರೀಲಿ ನಮ್ಮಮ್ಮ ಪರಿಯಾರ್ದ್ ಮಾರವ್ವಗ್ ಅರಸ್ಕಂಡಿದ್ರಂತೆ!!
ಅಲ್ಲ ಇಷ್ಟ್ ದಿನ ಇರದಿದ್ ಮಾರಮ್ಮ ಈಗೆಲ್ಲಿಂದ ಬಂದ್ಲಂತೆ? ಇದರ್ ಬಗ್ಗೆ ಎಲ್ರುಗೂ ಹೆಂಗ್ ಗೊತ್ತಾಯ್ತು? ಮೊದ್ಲು ಹೇಳ್ದೋರ್ಯಾರು? ಇದಕ್ಕೇನರ ಹಿಸ್ಟರಿ ಉಂಟಾ ಇತ್ಯಾದಿ ನಮ್ ಸೈಂಟಿಫಿಕ್ ಅಂಡ್ ಸೋಶಿಯಲ್ ಕೊಶ್ಚೆನ್ಗಳಿಗೆ ಯಾರತ್ರಾನೂ ಸರಿಯಾದ್ ಉತ್ರ ಇರ್ನಿಲ್ಲ. ಬರ್ಬರ್ತಾ ಜನಾನೂ ಜೋರಾದ್ರು, ಬಯಲಲ್ಲಿದ್ ಮಾರಮ್ಮನ್ ತಲ ಮೇಲಕ್ಕ ಎಮರ್ಜನ್ಸಿಗೆ ನಾಕ್ ಮಟ್ಟಾಳ ಗರಿ ಕೌಸಿದ್ರು. ಅಕ್ಕ ಪ್ಕಕದ್ ಹೊಲಗಳಿಂದ ಸುರ್ಗಿ ಮರ ತರ್ದು, ಅಡ್ಡಡ್ಡಲಾಗ್ , ಉದ್ದುದ್ದವಾಗ್ ಕಟ್ಟಿ, ಕ್ಯೂ ಸಿಸ್ಟಮ್ಗ್ ಅನುಕೂಲ ಮಾಡಲಾಯ್ತು. ಯಾರೋ “ಅರಸ್ಕಂಡಿದ್ದವರು” ಅಲ್ಲೇ ಒಂದ್ ಮದವಾನೂ ಮಾಡಿದ್ದಾಯ್ತು. ಮಠದಲ್ಲೂ, ಬಸುನ್ಗುಡೀಲೂ ಎಲ್ಲೆಲ್ಲೂ ಇದೇ ಟಾಪಿಕ್ಕು, “ಇಂಗೇ ನಡುದ್ಬುಟ್ರ, ದಿನೆಚ್ಚುಕಮ್ಮಿ ಆರತಿ ಉಕ್ಕುಡದಂಗೇ ಆಗೋಯ್ತದ” ಅಂತೊಬ್ಬಂದ್ರೆ, “ಜನ ನೋಡಿದರ್ಯಾ? ಯಾವ್ ಆರತಿ ಉಕ್ಕಡವಾ? ಅದಕಿಂತ್ ಜೋರಾಯ್ತದ” ಅಂತಿನ್ನೊಬ್ಬ.
ಒಂದಿನ ಬೆಳಿಗ್ಗೇನೇ ಒಂದ್ ಬ್ರೇಕಿಂಗ್ ನ್ಯೂಸು ಹದಿನಾರಿಂದ ಸುರುವಾಗಿ ಸುತ್ಮುತ್ತಲ ಊರ್ಗೆಲ್ಲ ಹರಡ್ತು.ಅದೇನಪಾ ಅಂದ್ರೆ ಪರಿಯಾರದ್ ಮಾರವ್ವ ದೇವಸ್ಥಾನ ನಿರ್ವಹಣೆ ಮಾಡ್ತಿದ್ ಇಬ್ಬರು ಹುಡುಗ್ರು (ಯುವಕರು) ರಾತ್ರೋರಾತ್ರಿ ಕಿತ್ತಾಡ್ಕಂಡಿದ್ರು. ಈ ಕಿತ್ತಾಟಕ್ ಕಾರಣ, ಮಂಗಳಾರತಿ ಮತ್ತು ಹುಂಡಿ ಕಾಸು, ಜನ ಹೆಚ್ಚಾದಷ್ಟೂ ಸೇರ್ತಿರಾ ದುಡ್ಡೂ ಹೆಚ್ತಿತ್ತು. ಆ ಅನಿರೀಕ್ಷಿತ ಮೊತ್ತ ಇಬ್ಬರ ಜಗಳಕ್ಕೆ ಕಾರಣವಾಗಿತ್ತು. ಪರಿಯಾರದ್ ಮಾರವ್ವೆಯ ಒರಿಜಿನಲ್ ಸ್ಟೋರಿಯೂ ಬಯಲಾಗಿತ್ತು.
ಅದು ಆದದ್ದು ಹೀಗೆ. ಆ ಇಬ್ಬರೂ ದನ ಕಾಯೋ ಹುಡುಗರು. ದನ ಮೇಯಾಕ್ ಬುಟ್ ಬುಟ್ ಸುಮ್ ಕುಂತಿರ್ಲಾರದೇ, ಅಲೆಲ್ಲೋ ಅಡ್ಡಡ್ಡ ಬಿದ್ದಿದ್ ಒಂದ್ ಕಲ್ನ ತಂದು ಉದ್ದುಕ್ ನಿಲಿಸಿದ್ರು, ಅಲ್ಲೆ ಓಗ್ತಿದ್ ಒಬ್ಬ ಇದೇನು ಅಂತ್ ಹೇಳ್ದಾಗ ಹುಡುಗಾಟಕ್ ಒಂದ್ ಕತೆ ಹೇಳುದ್ರು, ಆಯಪ್ಪ ಅದೇನ್ ಸಂಕಷ್ಟದಲ್ಲಿದ್ನೋ, ಅದೇನ್ ಅರ್ಸಕಂಡ್ನೋ, ಅದೇನ್ ಪರಿಯಾರಾ ಆಯ್ತೋ.. ಒಟ್ನಲ್ಲಿ ಯಾವ್ ಈಮೇಲ್ ಗೂ ಕಮ್ಮಿ ಇಲ್ದಂದೆ ಊರೂರ್ ತಲುಪ್ಕಂಡು, ಜನಮರುಳೋ ಜಾತ್ರೆಮರುಳೋ ಆಗಿತ್ತು. ಇದಾಗುತ್ಲೂ ಸಕ್ಸಸ್ ಸ್ಟೋರಿಗಳಷ್ಟೇ ಅರಕೆ ನರವೇರ್ದಿರಾ ಪೇಲ್ಯೂರ್ ಸ್ಟೋರಿಗಳೂ ಒಂದೊಂದಾಗ್ ಆಚಗ್ ಬಂದೋ.
“ಮಾಡ್ತಿದ್ ದೇವ್ರ ಬುಟ್ಬುಟ್ಟು ಯಾವ್ಯಾವ್ದನೋ ಮಾಡ್ತೀನಿ ಅಂತೋದ್ರ ಆದ್ದ ತಕ್ಕಳಿ, ಅಲ್ದೇ ಇದ್ರೂವ ನಮ್ ಜನಕ ಬುದ್ದಿ ಇಲ್ಲ” ಅಂತ ಮಠದ್ ಜಗಲಿಯಿಂದ ಬಂದ್ ಮಾತು, ಊರ್ ಮಾತಾಯ್ತು. ಜನ ಮಾಮೂಲ್ನಂಗೇ ಮಾದಪ್ಪನ್ ದಿಕ್ಕಗ್ ತಿರಿಕಂಡ್ರು.
 

‍ಲೇಖಕರು G

8 April, 2014

ನಿಮಗೆ ಇವೂ ಇಷ್ಟವಾಗಬಹುದು…

7 Comments

  1. ಬಿ.ಸುರೇಶ

    ಚೆಂದಾಗದೆ ಕಣೇಳಿ…
    ನಂಬ್ಕೆ ಉಟ್ಟಾದ್ನೂ ನಂಬ್ಕೆ ಸಾಯೋದ್ನೂ ಒಂದೇ ಕತೆಯಾಗಿಟ್ಟು ಪಸಂದಾಗಿ ರಾಮನವಮಿ ಮಾಡ್ಕಂಡಿದೀರಳಿ…
    ಇಂಗೇ ಬರ್ದು ಬರ್ದು ನಮಗೂವೆ ಓದೊ ಮಜಾ ಆಗಾಗ ಕೊಡ್ಬೇಕು ಕಣೇಳಿ…!

  2. Mohan.V.Kollegal

    ಮಾರವ್ವನ್ನೇ ಹುಟ್ಸಿದ್ ಕತನ ಚೆನ್ನಾಗ್ ಯೇಳಿದರಿ. ನಿಮ್ ಬರವಣ್ಗ ಓದ್ತಿದ್ರ ಕುಸುಮಬಾಲೆ ಕಾದಂಬ್ರೀಲಿ ಬರ ಜೋತಮ್ದೀರ್ ಮಾತುಕತ ಗೆಪ್ತೀಗ್ ಬತ್ತದ. ಒಟ್ನಲ್ ನಮ್ ಕುಸ್ಮ ಚೆನ್ನಾಗ್ ಬರ್ದಳ.

  3. Anonymous

    ಚಂದ ಇದೆ ಕುಸುಮಾ..ಭಾಷೆ ದಿವಿನಾಗಿದೆ..

  4. samyuktha

    ನಿನ್ ಬಾಸೆ ಸೂಪರ್ ಕಣಮ್ಮೀ! 🙂

  5. Anonymous

    ಕಥೆಯ ಆರಂಭ , ಯಥಾ ಪ್ರಕಾರ ಭಾಷೆ ಚೆನ್ನಾಗಿದೆ. ಆದರೆ ಜನರ ನಂಬಿಕೆ ಸಡನ್ನಾಗಿ ಕುಸಿಯುವಂತೆ ತೋರಿಸಿರುವುದು ಬಹಳ ಸಡನ್ ಆಯಿತು ಆ ಭಾಗವನ್ನು ಇನ್ನು ರವಷ್ಠು ಆಸಕ್ತಿಕರವಾಗಿ ಬೆಳೆಸಬೇಕಿತ್ತು. ಒಂದು ಪತ್ತೇದಾರಿ ಕಥೆಯಷ್ಟೇ ರೋಮಾಂಚಕವಾಗಿರುತ್ತಿತ್ತು.

  6. anand salundi

    ಚೆಂದಾಗಿದೆ ಇಂಗೆ ಬರ್ಕೊಂಡು ಓಯ್ತಾ ಇರಿ
    ನಾವು ಓದ್ತೀವಿ…

  7. kiran

    ಬಾಳ್ ಸಂದಕದ ಕ ಕುಸೆ..ಓದಕೆನ ಮಜ್ವಗದ..ಆದ್ರ ಮಾತಾಡೋದ್ನ ಬರ್ಯೋದು ಕಸ್ಟದ ಕೆಲ್ಸ. ಆದ್ರ ಅದ್ನ ನೀ ಮಾಡ್ತಿದಯ್..ಇಂಗೆಯಾ ಬರ್ದು ನಮ್ ಬಾಸೆಯಾ ಎಲ್ರಿಗೂ ಗೊತ್ ಮಾಡು….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading