ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕುಸುಮಬಾಲೆ ಕಾಲಂ ’ಯ್ಯೋಳ್ತೀನ್ ಕೇಳಿ’ : ಈ ಕತ ಬರೆದ್ ಬುಟ್ಬುಟ್ಟು ಒಂದ್ ಕೂಸ್ ಎರವ್ವ..

“ನಿನಗೆ ಹುಟ್ಟುವ ತವಕ, ನನಗೂ ಹೆರಲಾರದ ಸಂಕಟ.

ಸ್ವಲ್ಪ ತಾಳು, ತೋಳಮೇಲಿನ ಕೂಸು ನಿದ್ದೆಗೆ ಜಾರಿಬಿಡಲಿ..”

ಎಂದು ಮನದಲ್ಲಿನ ಭಾವದೆಳೆಗೆ ಹೇಳುತ್ತಾ, ಕವನ ಬರೆಯುತ್ತಾ, ಸೀರಿಯಲ್ ಗಳ ನಡುವೆ ಕಳೆದುಹೋಗದೆ ಎಳೆ ಜೋಡಿಸುವ, ತನ್ನೊಳಗಿನ ಅಮ್ಮನನ್ನೂ, ಕವಿಯನ್ನೂ

ಜೊತೆ ಜೊತೆಯಾಗೇ ಸಾಕುವ ಕುಸುಮ ಬಾಲೆ ಚಾಮರಾಜನಾಗರದ ಕೂಸು.

ರದ ನಾಡಿನಿಂದ ಬೊಗಸೆ ತುಂಬಾ ಕಥೆಗಳನ್ನು ಹೊತ್ತು ತಂದಿರುವ ಕುಸುಮಬಾಲೆ ಕಾಲಂ ಇಂದಿನಿಂದ ’ಅವಧಿ’ಯಲ್ಲಿ, ಅದೇ ಭಾಷೆ , ಅದೇ ಸೊಗಡಿನೊಂದಿಗೆ..

***


ಲಯವಿರುವುದು ಸಂಗೀತಕ್ಕೆ ಮಾತ್ರವಲ್ಲ, ಭಾಷೆಗೂ ಒಂದು ಲಯವಿದೆ. ಮಂಗಳೂರು, ಉತ್ತರಕರ್ನಾಟಕದಂತ ಭಾಷೆಗಳ ಲಯ, ಅಲ್ಲಿನವರಲ್ಲದವರಿಗೂ ಗೊತ್ತು. ಯಾಕಂದರೆ ಆ ಭಾಷೆಗಳು ಸಿನೆಮಾದಲ್ಲಿ, ಟಿವಿಗಳಲ್ಲಿ, ಹಾಸ್ಯಕಾರ್ಯಕ್ರಮಗಳಲ್ಲಿ ಬಳಸಲ್ಪಟ್ಟು ಒಂದಿಷ್ಟು ಪ್ರಚಾರ ಪಡೆದಿವೆ. ಆದರೆ ಹಳೆ ಮೈಸೂರು, ಚಾಮರಾಜನಗರದ ಭಾಷೆಗಳಿಗೆ ಇಂತಾ ಪ್ರಚಾರ ಅಷ್ಟಾಗಿ ಸಿಕ್ಕಿಲ್ಲ. ಬರವಣಿಗೆಯಲ್ಲಿ ಮಾತಿನ ಲಯವನ್ನ ಪೂರ್ಣವಾಗಿ ಹಿಡಿಯಲಾಗದು, ಒಮ್ಮೆಯೂ ಕೇಳಿಯೇ ಇರದ ಭಾಷೆಯ ಲಯವನ್ನು ಕೇವಲ ಓದಿ ಹಿಡಿಯುವುದು ಓದುಗನಿಗೂ ಕಷ್ಟ. ಆದರೆ ಅಸಾಧ್ಯವೇನಲ್ಲ. ಜಾಗತೀಕರಣ, ತಂತ್ರಜ್ಞಾನದ ಅತಿವೇಗದ ಆವರಿಸುವಿಕೆ ಕನ್ನಡವನ್ನೇ ನುಂಗುತ್ತಿರುವ ಹೊತ್ತಲ್ಲಿ, ಹೊಸ ತಲೆಮಾರು ತಮ್ಮೂರ ಭಾಷೆಯನ್ನಾಡಲು ಕೀಳರಿಮೆ ತೋರುತ್ತಿರುವ ಹೊತ್ತಲ್ಲಿ, ಹಳೆ ಮೈಸೂರು ಭಾಗದ, ಗಡಿನಾಡ ಭಾಷೆಗೆ, ಬದುಕಿಗೆ, ಲಯಕ್ಕೆ ಒಂದು ಮಿಂಚುಹುಳುವಾಗುವ ಪ್ರಯತ್ನವಿದು. “ಈ ದೇಶದ ಹೆಸರೇನು?” ಎಂದು ಕೇಳಿದರೆ ಉತ್ತರ ತಿಳಿಯದ, ತಮ್ಮ ಆಯಸ್ಸಿನ ಬಹುಭಾಗವನ್ನು ಒಂದೇ ಊರು, ಒಂದೇ ಬೀದಿಯಲ್ಲಿ ಕಳೆದುಬಿಡುವ ಜನರ ಮೇಲೆ ಮುಖ್ಯವಾಹಿನಿಯ ವಿಚಾರಗಳು, ಎಷ್ಟು, ಮತ್ತು ಹೇಗೆ ತಲುಪುತ್ತವೆ ಎಂಬುದನ್ನು ಕೂಡ ಆಡುವ ಪ್ರಯತ್ನವಿದು.
– ಕುಸುಮ ಬಾಲೆ
ಇನ್ನೂ ಡಿಗ್ರಿ ಮುಗಿಸಿರದ ನಮ್ ತಂಗಮ್ಮನೋರು ನ್ಯೂಸ್ ಚಾನೆಲ್ಲಿನ ಆಂಕರಿಂಗ್ ಟೆಸ್ಟಿಗ್ ಅರ್ಜಿ ಆಕಿದವರೂ ಪಾಸೂ ಆಗ್ಬುಟ್ರು. ಕೆಲ್ಸಾನೂ ತಕಂಡೇ ಬಂದ್ಬುಟ್ರು. ನಮ್ಮಪ್ಪ ಸಣ್ಣ ಪುಟ್ಟ ವಿಷಯಾನೇ ಬಿಡಾ ಮನ್ಸ ಅಲ್ಲ, ಇನ್ನು ಗವರ್ಮೆಂಟ್ ಇಸ್ಕೂಲಲ್ ಓದಿದ್ ತನ್ ಮಗಳು ನ್ಯೂಸ್ ಚಾನೆಲ್ಲಿನಲ್ಲಿ ವಾರ್ತಾವಾಚಕಿಯಾಗಿದಾಳೆ ಅನ್ನಾ ಸುದ್ದಿನ ಬಿಡೋದುಂಟಾ? ತಾನೇ ಒಂದ್ ಲೋಕಲ್ ಚಾನಲ್ಲಿನ ಥರವಾಗ್ ಕೆಲ್ಸ ಸುರು ಮಾಡ್ಕಂಬುಟ್ರು, ಊರಿಕೇರಿ ನೆಂಟ್ರು, ಎತ್ರು ಒಬ್ಬರ್ನೂ ಬುಡದೇ ಸಾರ್ಕಂಡ್ ಬಂದಿದ್ದಾಯ್ತು. ಅಷ್ಟ್ ಸಾಲದು ಅಂತ ಫೂನ್ ಬೇರೆ, ನ್ಯೂಸು ಸುರು ಆಗೋ ಅರ್ಧ ಗಂಟೆಗ್ ಮುಂಚೆ ಕೈಲಿ ಪೋನಂಬೋ ಪೋನ್ ಹಿಡ್ಕಂಡ್ ಕೂತ್ಕಂಡ್ರ ಮುಗದೇ ಓಯ್ತ್ ..”ಈಗ್ ಬತ್ತಳ ನೋಡಿ ನನ್ ಮಗಳು” ಅಂತ ಚಾನೆಲ್ಲು ಎಸ್ರು, ಟೇಮು ಎಲ್ಲನು ದಿನಕ್ ಐವತ್ ಜನಕ್ ಮುಟ್ಟಿಸ್ತಿದ್ರು.
ನಮ್ಮೂರ ಗೌರ್ಮೆಂಟು ಇಸ್ಕೂಲಿಗೂ ಒಂಥರದ್ ಗರಿ ಬಂದ್ಬುಡ್ತು. ಐಕಳ್ ಮುಂದ್ ನಿಂತ್ಕಂಡ್ ಪಾಠ ಮಾಡಾ ಮೇಡಮ್ಮದೀರೆಲ್ಲ. “ನೋಡಿ ಮಕ್ಕಳೇ, ನಮ್ಮಶಾಲೇಲಿ ಓದಿದ್ ಸ್ಟೂಡೆಂಟು ಇವತ್ತು ಸ್ಯಾಟಲೈಟ್ ಚಾನಲ್ಲಲ್ಲಿ ನ್ಯೂಸ್ ಓದ್ತಾರೆ,ಇದು ನಮಗೆ ಹೆಮ್ಮೆ ವಿಷಯ” ಅಂತ ಹೇಳೋದು ಮರೀತಿರ್ಲಿಲ್ಲ.
ಇನ್ನು ಊರ ವಿದ್ಯಾವಂತರು, ಪುಡಿರಾಜಕಾರಣಿಗಳಿಗೂ ಏನೋ ಒಂಥರವಾದ್ ಕುಸಿ. ನಾಕೈದು ದಿನ ಟಿವಿಲಿ ಜನ ನೋಡಿದ್ ಮೇಲಂತು, ನೋಡಿ ಅಂತ ಟೇಮಿಂಗ್ಸ್ ಏಳ್ತಿದ್ ನಮ್ಮಪ್ಪ, ನೋಡುದ್ರಾ? ಅಂತ ಕೇಳಾಕ್ ಸುರು ಮಾಡಿದ್ರು. ಅಥವಾ ಕೇಳಾಕ್ ಮುಂಚೆ ಜನ ಯೋಳಾಕ್ ಸುರು ಮಾಡುದ್ರು. ಹಾಲಿನ್ ಡೈರಿ, ಓಟ್ಳು, ಮಠ, ಎಲ್ಲೋದ್ರೂ ಇದೇ ಮಾತು. “ಯಾನ ಪುಟ್ಟಣ್ಣ ಉಡುಗಾಟದ್ ಕೆಲ್ಸವಾ ಇದು? ಎಷ್ಟ್ ಕೋಟಿ ಜನವಿದ್ದದು ದೇಸ್ದಲಿ, ಎಂತೆಂತ ಸಿಟಿಲ್ ಬೆಳ್ತಿರಾ ಐಕಿದ್ದವ್.. ಎಲ್ಲರ್ನೂ ಬುಟ್ಬುಟ್ಟು ಈ ಕೆಲ್ಸವ ನಿನ್ ಮಗಳ್ಗೇ ಕೊಡಬೇಕು ಅಂದ್ರ, ಏನ್ ತಮಾಸಿ ಮಾತಾ ಇದು? ಅಂತೊಬ್ಬ.”.” ನೋಡ್ಕಳ್ದಿಯೇ ಅಷ್ಟುನೂವ ತಲಲ್ ಮಡಿಕಂಡು ಒಂದೇ ಉಸುರುಗ್ ಯೋಳ್ತಳಲ್ಲ ಅದ್ ಯೋಳಿ ಪಸ್ಟು” (ಮುಂದೆ ಟಿಪಿ ಓಡೋದು ಅವರಿಗ್ ಗೊತ್ತಿಲ್ಲ ಪಾಪ) ಅಂತೊಬ್ಬ.” ಯಾನ ಬುಡಪ್ಪ ಮಗಳ ಟೀವಿಲ್ ನೋಡ್ಕಳಂಗಾದ,” “ ದಿನೆಚ್ಚುಕಮ್ಮಿ ಎಲ್ಲನೂ ಮಾರಬುಟ್ಟು ನೀನೂ ಸಿಟಿ ಸೇರ್ಕಳೈ ಬುಡು ಪುಟ್ಟಪ್ಪ, ನಾವೂ ತಿರ್ಗಾಡ್ಕಂಡ್ ಬತ್ತಿವಿ ಬೆಂಗಳೂರ್ ನೋಡಕ” ಅಂತಿನ್ನೊಬ್ಬ.

ಬಾಣಂತಿಯಾಗಿದ್ ನನ್ ಮುಂದಕ್ ಬಂದ್ ನಮ್ಮಮ್ಮ ಸುರು ಹಚ್ಕಂಡ್ರು. “ತ್ವಾಟ್ದಲ್ ಕೆಲ್ಸ ಮಾಡಾ ಆಳ್ಗಳ್ ಕತಾ ಒಸ್ಯಲ್ಲ ಕಣ್ ಕುಸ್ಮ, ಆ ರತ್ನಿ, ಸಿವಿ ಎಲ್ಲ ನೋಡುದ್ರಂತ, “ಯಾನಳಿ ನಿಮ್ ಮಗಳವರು ಅಂಗ್ ಕಾಣ್ತಾರಲ್ಲಳಿ, ಪುಟ್ಟಪ್ಪನವರು ಯೋಳಿದ್ರಂತ, ನಮ್ಮೈಕ ಆಕಿದ್ದೋ ನೋಡ್ದೋ ಅಳಿ, ಯಾನ ಅಷ್ಟ್ ಚೆನಾಗ್ ಕಾಣ್ತಾರಳಿ , ಅಂತಿದ್ರು ಎಲ್ಲ. ರತ್ನಿ ಅಂತು ಕೆಲಸ ಕೈಬುಡಾಗಂಟ ಇದೇ ಸುದ್ದಿ, “ಯಾನಳಿ ಅಂತಂತ ದೊಡ್ ಮಿನಿಸ್ಟರುಗಳ್ ಜೊತಲೆ ಮಾತಾಡ್ತರಲ್ಲಳಿ, ಇನ್ನೇನಳಿ ನಮ್ಮೈಕಳಗ್ ಒಂದ್ ಕೆಲ್ಸ ಗಿಲ್ಸ ಬೇಕು ಅಂದ್ರ ಒಸಿ ಯೋಳ್ಸಿ ಅಳಿ, ನಿಮ್ಮಗಳ್ ಕೈಲಿ, ಅಂದ್ಲು(ನ್ಯೂಸು ಮಧ್ಯದಲ್ ಬರೋ ವಿಷುವಲ್ನ ನೋಡಿ ಆ ಸಕಲ ಮಂತ್ರಿಗಳೂ ಅಲ್ಲೆ ಪಕ್ಕದಲೇ ಇದ್ದಾರೆ ಅಂತ ನಮ್ ರತ್ನಿ, ಸಿವಿ ತಪ್ ತಿಳ್ಕಂಡಿದ್ರು.) ಮುಂದುವರೆಸಿದ್ರು ನಮ್ಮಮ್ಮ.. “ಹೊಲದಿಂದ ಹಟ್ಟಿಗ್ ಬರಾಗಂಟ ಉದ್ದಕ್ಕು ಮನ ಮನಲೂ ಇದೇ ಮಾತು. ಕ್ಯೋಳ್ದೋರ್ಗೆಲ್ಲ ಯೋಳಿ ಯೋಳಿ ನಂಗೂ ಸಾಕಾಗೋಯ್ತು” ಅಂತ ಮೇಲ್ನೋಟಕ್ ಅಂದ್ರೂ ಆ ಸಾಕಾಗುವಿಕೆಲೊಂಥರದ್ ಕುಸಿಯೇ ಕಾಣ್ತಿತ್ತು. ಈ ಏಡ್ ಮನೆಯವರ್ ಬುಟ್ಟು ಊರೆಲ್ಲ ಮಾತಾಡ್ತುದ. ಅಂತ ದಾಯಾದಿಗಳ ಮನೆಗೆ ನಿಂತಲ್ಲಿಂದಲೇ ತಿವಿದರು. ಅವರ ಅಸೂಯೆಗ್ ತಕ್ ಪಾಠ ಆಯ್ತು ಅನ್ನೋ ಒಳಾರ್ಥವೂ ಆ ಮಾತಿಗಿತ್ತು ಅನ್ನಿ. ಒಟ್ನಲ್ಲಿ ಮಗಳು ಟೀವೀಲಿ ಬರೋಕ್ ಸುರುವಾದ್ಮೇಲೆ ಎತ್ತವಳಿಗೂ, ಉಟ್ಟಿಸಿದವನಿಗೂ ಒಂಥರವಾದ್ ತೂಗುವಿಕೆ ಪ್ರಾಪ್ತವಾಗೋಗಿತ್ತು.
ಹಟ್ಲಿ ಇಷ್ಟೆಲ್ಲ ದರ್ಬಾರ್ ನಡೀತಿದ್ರೂ, ಸೋಮ ಮಾತ್ರ ಈ ವಿಷಯವಾಗಿ ಒಂದೇ ಒಂದ್ ರೆಸ್ಪಾನ್ಸೂ ಕೊಟ್ಟಿರ್ಲಿಲ್ಲ. ಕೊಳ್ಳೆಗಾಲದ್ ಪಕ್ಕದ್ ಉತ್ತಂಬಳ್ಳಿಯ ಈ ಸೋಮ, ನಾಕನೇ ಕ್ಲಾಸಿಂದ ಹತ್ತರವರೆಗೂ ಸತತ ಪೇಲು. ಸಧ್ಯಕ್ಕೆ ನಮ್ಮ ಕೊಟ್ಟಿಗೆ ಉಸ್ತುವಾರಿ ಸಚಿವನಾಗಿ ಬಂದಿದ್ದ. ಆಲ್ಮೋಸ್ಟು ಒಂದ್ ವಾರದಿಂದ ಮಗಳನ್ನ ಟಿವೀಲಿ ನೋಡ್ತಾ, ಒಂಥರವಾಗಿ ತೇಲ್ತಿದ್ ನಮ್ಮಪ್ಪನ ಗಮನಕ್ಕೆ, ಮೋಟ್ ಗೋಡೆ ಮೇಲ್ ಕೂತು ಟಿವಿ ನೋಡ್ತಿದ್ ಸೋಮ ಕಾಣಿಸ್ದ. “ಏನ್ಲಾ ಸೋಮ ನೀ ಏನೂ ಏಳ್ಳೇ ಇಲ್ವಲ್ಲ, “ ಅಂದ್ರು, “ ಯಾನಳಿ, ಯಾನೋಳ್ಬೇಕು” ಅಂದ ಸೋಮ. “ಯಾನ್ಯೋಳದು ಅಂದ್ರ? ನೋಡು ಅಲ್ಲಿ, ಟಿವಿಲಿ ಬರಾದ “ ಅಂತ ಒಂಥರವಾಗ್ ಅಂದ್ರು. ನಿನ್ನೂ ಸೇರ್ಸವಾ ನೋಡು” ಅಂತ್ ಬೇರೆ ಟಾಂಗು, .. “ಏ.. ಅದೂ ಒಂದ್ ಕೆಲ್ಸವಾ ಓಗಿ ಯೋಳಿ” ಅಂದ್ಬುಟ್ಟ ಸೋಮ. ಅಮ್ಮನ ಕಿವಿಯೂ ಅಲರ್ಟ್ ಆಯ್ತು.” ಯಾನಡಾ ಸೋಮ ಇಂಗಂದ್ಬುಟ್ಟೆ? ಚೆಂದಿಲ್ವ ಈ ಕೆಲ್ಸ? ಅಂದ್ರು , “ಇನ್ಯಾನಳಿ ಮತ್ತ? ಸುಮ್ಮನ್ ಕುಂತ್ಕಂಡು ಇಂಗಿಂಗಾಯ್ತು ಇಂಗಿಂಗಾಯ್ತು ಅಂತ್ ಯೊಳದು ಅಷ್ಟಿಯೆ, ಅದೂ ಒಂದ್ ಭಾರಿ ಕೆಲ್ಸವಾ ಯೋಳಿ? ಅಂತ ಪ್ರಶ್ನೆ ಎಸೆದ. “ವಾರ್ತ ವಾರ್ತ ಅನ್ಕಂಡು ಐಕ ಡ್ಯಾನ್ಸ್ ಮಾಡದ್ನೂ ಆಕದ್ ಬುಟ್ಬುಟ್ರಿ, ಊಟಕ್ಕಿಕ್ಕಿ ನಿದ್ ಬತ್ತದ ಮನಿಕತ್ತಿನಿ” ಅಂತ ಆಕಳಿಸಿದ, ಪ್ರೈಮ್ ನ್ಯೂಸಿನ ಹೊತ್ತಿಗೆ ಸೋಮನಿಗೆ ಸಮಾ ಗೊರಕೆ.
ಈ ಥರವಾಗ್ ನಮ್ಮಪ್ಪಂಗಾದ್ ಮೊಖಭಂಗವ ನಾವೂ ಒಂದ್ಸಲ ಪೇಸ್ ಮಾಡಬೇಕಾಯ್ತು. ಅದ್ ಯೋಳ್ತೀನ್ ಕ್ಯೋಳಿ. ನಂಜನಗೂಡ್ ತಾಲೋಕ್ಲಿ ತಗಡೂರು ಅಂತೊಂದ್ ಊರು. (ದ್ಯಾವನೂರ್ ಪಕ್ಕದ್ದೇ) ನಮ್ಮ ದೊಡ್ ಮಾವನವರು ತೀರ್ಕೊಂಡಾಗ ಅವರ್ ಮೂರ್ ಜನ ಗಂಡ್ಮಕ್ಕಳು, ನನ್ ಗಂಡನ್ ಜೊತಲುಟ್ಟುದ್ ಮೂರ್ ಜನ ಸೊಸೇರು ಎಲ್ಲರೂ 12 ದಿನ ಅಲ್ಲೇ ಇರಬೇಕಾಯ್ತು. ಮದುವೆಯಾದ್ ಮೇಲ್ ತಗಡೂರಿಗ್ ಹೋಗಿದ್ದು ಅದು ಎರಡನೇ ಸಲವಷ್ಟೆ, ಆದ್ರೂ ನಮ್ ದೊಡ್ಮಾವ ನನ್ ಬಗ್ಗೆ ಚೆನ್ನಾಗೇ ಬಿಲ್ಡಪ್ಪು ಕೊಟ್ಟಿದ್ರು. ಅದಕ್ ಸಕಾರಣ ಏನಪ್ಪಾ ಅಂದ್ರೆ ಟೀವಿ. “ ದಾರಾವಾಯಿ ಬರಿಯವ್ ನೀನಿಯವ್ವಾ? ರಾಜಪ್ಪಣ್ಣನ್ ಸೊಸ? ಪಾಯಿ ಸಿದ್ದಪ್ಪಣ್ಣ ಅಟ್ಟಿಗೋದಾಗೆಲ್ಲ ಯೋಳ್ತಿದ್ರು” ಅಂತ ಬೀದಿ ಹೆಂಗಸರು ಕೇಳ್ತಿದ್ರೆ, ಸಿಕ್ಕಿದ್ ಸ್ಕೋಪ್ನ ನಾನೂ ಚೆನ್ನಾಗೇ ತಗಾತಿದ್ದೆ.
ನಮ್ಮದು ಗೊತ್ತಲ್ಲ? “ಷೋ ಮಸ್ಟ್ ಗೋ ಆನ್” ಸೂತ್ರದ ಕೆಲಸ. ಏನೇ ಆದ್ರೂ ಓಡ್ತಿರಬೇಕು ಸೀರಿಯಲ್ಲು. ಹಂಗಾಗಿ ಅಲ್ಲೇ ಕೂತು ಬರೀಬೇಕಾಯ್ತು. ಎಲ್ ಬರಿಯೋದು? ಹಟ್ಟಿ ತುಂಬ ಜನ, ಐಕ್ಳು, ಮಕ್ಳು. ಗಜಿಬಿಜಿ,ನನ್ ಪೇಚು ಎದುರ್ಮನೆ ರತ್ನಕ್ಕನಿಗ್ ಅರ್ಥವಾಗಿ, “ಯಾನವ್ವಾ? ಬರಬೇಕಾ ಕುಸು? ನಮ್ಮಟ್ಲಿ ಒಬ್ರೂ ಇಲ್ಲ. ಇಲ್ಲಿ ಗಲಾಟಿ ನಿನಗ. ಬವ್ವ ಅಲ್ ಕೂತ್ಕಂಡ್ ಬರ್ಕಳೈ” ಅಂತ ರತ್ನಕ್ಕ ಅವರಟ್ಟಿ ದಾರಿ ತೋರ್ಸಿದ್ರು. ಅವರ್ ತೊಟ್ಟಿ ಹಟ್ಟಿ ಕಂಬಕ್ ಒರಿಕಂಡು ನಾನೂ ಸುರುಅಚ್ಕಂಡೆ. “ಬರ್ದು ಯಾರ್ ಕೈಲ್ ಕೊಟ್ ಕಳಿಸಿಯವ್ವ ಬೆಂಗಳೂರ್ಗ? ಅಂನ್ಕಂಡ್ ಮುಂದಕ್ ಬಂದ್ರು ರತ್ನಕ್ಕ “ ಯಾರೂ ಓಗಂಗಿಲ್ಲ ಇದ್ರಲ್ಲೇ ಕಳಿಸ್ಬೋದು” ಅಂದೆ. “”ಅವ್ವೈ..ಇದ್ರಲ್ಲೆಂಗ್ ಒಂಟೋದ್ದವ್ವ ಬೆಂಗಳೂರ್ಗಂಟ?” ಅಂತ ಬಾಯ್ ಮೇಲ್ ಬೆಳ್ ಮಡಿಕಂಡಾಗ. ಇರಾ ಬರಾ ಶಕ್ತಿಮೀರಿ ವಿವರ ಕೊಟ್ಟಿದ್ದಾಯ್ತು (ಒಳಗೊಳಗೇ ಸ್ಕೋಪು). “ ಯಾನವಾ ಇಂಗಾಗೋಯ್ತು ಪ್ರಪಂಚ..ಸರಿ ಕಣ್ ನನ್ ತಾಯಿ. ಬರ್ಕವ..ಬರ್ಕ. “ ಅಂತ ಏಕಾಂತಕ್ ದಾರಿ ಮಾಡ್ಕೊಟ್ರು. ನಾನೂ ಕುಟ್ಟಕ್ ಸುರು ಮಾಡ್ಕಂಡೆ..ಸ್ವಲ್ಪತ್ತಲೇ ಬಾಗಿಲು ಕೊಂಯಕ್ ಅಂತ ಸದ್ ಮಾಡ್ತು, ತಿರುಗ್ ನೋಡುದ್ರೆ.. ಒಂದಜ್ಜಿ, “ರತ್ನೀ.. ಯಾನ್ ಮಾಡಿಯೇ” ಅನ್ಕಂಡ್ ಎಂಟ್ರಿ ಕೊಟ್ರು.
“ ಬನ್ನೆಮ್ಮ, ಯಾನು ಇಲ್ಲ ಕಣ್ ಬನ್ನಿ, ಅಂತ ಸ್ವಾಗತ ಮಾಡುದ್ರು ರತ್ನಕ್ಕ. “ಯಾನ ಒಬ್ಬರ ಸದ್ದೂ ಇಲ್ಲ ಅನ್ನಂಗದ?” ಅಂತ ಪ್ರಶ್ನೆ ಕೇಳ್ತಲೇ ಕಂಬ ಇಡ್ಕಂಡ್ ತೊಟ್ಟಿಗ್ ಕಾಲು ಇಳಿಬುಟ್ರು. “ಐಕ ಇಸ್ಕೂಲ್ಗೋಗವ, ಇವರು ಒಲದ್ ತಾವ್ಕೋಗರ,,ಇನ್ಯಾರಿದ್ದರು? ನಾ ಒಬ್ಬಳೀಯೆ, ಟೀ ಮಡುಗಲ್ಯಾ? ಅನ್ನುವ ರೆಗ್ಯುಲರ್ ಕೊಶ್ಚನ್ ಕ್ಯೋಳುದ್ರು. “ಬ್ಯಾಡ ಕವ್ವ, ಈಗ್ ತಾನೇ ಉಂಡ್ಕಂಡ್ ಬಂದೀನಿ..ಈ ತಾಯಿ ಯಾರಾ? ಅಂತ ನನ್ ಕಡೆ ಕಣ್ಬುಟ್ರು ನಿಂಗಮ್ಮಜ್ಜಿ. “ ಏ ಸಿದ್ದಪ್ಪಣ್ಣನ್ ತಮ್ಮನ್ ಸೊಸ” ಅಂದಾಗ, ನಿಂಗಮ್ಮಜ್ಜಿ ಒಸಿ ದಂಡೆಕ್ ಬಂದು ದೃಷ್ಟಿಸಿ ನೋಡಿ,” ನೀನಿಯವ್ವ? ನಾ ನೋಡೇ ಇರ್ನಿಲ್ಲ, ಎಲ್ಲ ಸಿಟಿ ಸೇರ್ಕಂಡಿದ್ದರಿ ನಾವೆಲ್ ಕಾಣವ್ ನಿಮ್ಮ? ಚೆಂದಾಗಿದ್ದಯಾ? ಅಂದ್ರು. ನನ್ ಉತ್ತರ ಕೊಡೋಕೂ ಅವಕಾಸ ಕೊಡದೇ ಮಾತ್ ಸುರು ಅಚ್ಗಂಡ್ರು.” ನಾನು ಈ ಸಿದ್ದಪ್ಪನಾ, ರಾಜಪ್ಪನಾ ಎಲ್ರೂನೂ ಸಾಕಿದಂವ, ನನ್ ಕೈಲೇ ಬೆಳುದ್ರು ಅವರೆಲ್ಲ. ನಾ ಇನ್ನೂ ಇವನಿ ನೋಡು,ನನ್ ಮುಂದ್ ಅವನೇ ಒಂಟೋದ ಒಳ್ಳಿ ಪಾಯಿ” ಅಂತ ಅಷ್ಟೊತ್ ಗುಣಗಾನ ಮಾಡಿ, ಕಣ್ಣೊರೆಸ್ಕೊಂಡ್ರು. , ರತ್ನಕ್ಕ, “ ದಾರಾವಾಯಿ ಬರತಳ ಅಂತ್ ಮಾತಾಡ್ತಿರ್ನಿಲ್ವ? ಅವಳೀಯೇ ಇಂವ, ಅದ್ಯಾನ ಬರೀಬೇಕಂತ, ಅವರಟ್ಲಿ ಒಸಿ ಗಲಾಟಿ ಅಂತ ಇಲ್ಲಗ್ ಕರ್ಕಂಡ್ ಬಂದಿ” ಅಂದ್ರು. ನಿಂಗಜ್ಜಿ. “ ಊ ಕ ಕುಸೈ. ನಮ್ಮಟ್ಲು ಐಕ ಮಾತಾಡ್ತಿದ್ದೋ, ಸಿದ್ದಪ್ಪಣ್ಣನ್ ಸೊಸ್ಯಂತ ಇದ್ ಬರೆಂವ ಅಂತ್ಯೋಳತಿದ್ದೋ” ಅಂದಾಗ, ತಗಡೂರಿನಲ್ಲಿ ಸಿಕ್ಕಿರೋ ಪಬ್ಲಿಸಿಟಿಗೆ ಒಳಗೇ ಸ್ಕೋಪು ವಿಮಾನ ಟೇಕ್ ಆಫ್ ಆಗ್ತಾ ಇತ್ತು. ನಿಂಗಜ್ಜಿ ಮುಂದುವರಿಸ್ತು..” ನಮ್ಮಟ್ಲಿ ಎಲ್ಲ ಆಕಂಡ್ ನೋಡ್ತರ ಕವ್ವ ಅಲ್ ಕಿರ್ಕಂಡು, ಅದ್ಯಾನ ನಂಗ್ ಮಾತ್ರಿಯೇ ಇಡಿಸಲ್ಲ ಕವ್ವ, ಅದ್ಯಾನ ಕುಸೈ ನೀ ಬರ್ಯಾದು? ಒಂದ್ ರಾಮಾಯನ್ವಲ್ಲ, ಮಾಬಾರತ್ವಲ್ಲ, ಕಷ್ಟಿಲ್ಲ, ಸುಖವಿಲ್ಲ, ಅಂವ್ ಕೊಡಲ್ಲ ಅಂತಳ, ಇಂವ್ ಬುಡಲ್ಲ ಅಂತಳ, ಎಷ್ಟ್ ನೋಡುದ್ರೂ ಅಷ್ಟಿಯೇ.. ಅದ್ನ್ಯಾನ್ನ ಕುಸೈ ನೋಡದು? .ನಾ ನೊಡಲ್ಲ ಕವ್ವ. ದ್ಯಾವನೂರ್ ಮಠದಲ್ಲಿ ಕತ ಗಿತ ಮಡುಗುದ್ ದಿನಕ್ ಓಗ್ ಕ್ಯೋಳ್ತೀನಿ. ಬಂದ್ ಮನಿಕತ್ತಿನಿ. ನೀ ಯಾನ್ಯಾರು ಅನ್ನು ಕುಸೈ, ಈ ಟೀಬಿ ಮಾತ್ರ ನಂಗ್ ಇಡಿಸಲ್ಲ ಕವ್ವ.” ಅಂದವರು ನನ್ ಉತ್ರ ಅನಗತ್ಯ ಅನ್ನೂವಂಗೆ ಎದ್ದು “ ಈ ಕತ ಗಿತ ಬರೆದ್ ಬುಟ್ಬುಟ್ಟು ಒಂದ್ ಕೂಸ್ ಗೀಸ್ ಎರವ್ವ ಬ್ಯಾಗನ” ಅಂತ ಆಜ್ಞಾಪಿಸಿ. “ಬತ್ತೀನಿ ಕಮ್ಮೀ ರತ್ನಿ, ಅಸ್ಗಳ್ ಬರಾ ಒತ್ತಾಯ್ತು ಆಲ್ ಕರಾಬೇಕೂ”. ಅನ್ಕೋತಾ ಒಸಿಲ್ ದಾಟಿದ್ರು.
 
 

‍ಲೇಖಕರು G

1 April, 2014

ನಿಮಗೆ ಇವೂ ಇಷ್ಟವಾಗಬಹುದು…

28 Comments

  1. M.S,Krishna murthy

    ಬೊ ಸೆಂದಾಕದೆ ಕನವ್ವ..ನಿಮ್ಮೂರ್ ಪದ್ಗಳ್ ಮೀಟ್ರೇ ಬೇರೆ ಅದೆ.. ಕೆಲ್ವು ಅರ್ಥಾವಾಗೋವಲ್ದು.. ಮುಂದ್ಕ ಅರ್ತ್ವಾವಾಗ್ಬೈದು.. ನಮ್ದೇಲ್ ತುಮ್ಕೂರ್ ಕಡಿಗಿನ ಕನ್ನಡ.. ಹೆಚ್ಚೂ ಕಮ್ಮಿ ಇಂಗೆಯ. ವೈನಾಗದೆ ಕನವ್ವ

  2. Arun Javagal

    ಚೆನ್ನಾಗಿ ಮೂಡಿ ಬಂದಿದೆ. ಭಾಷೆಯಲ್ಲಿನ ಮಣ್ಣಿನ ಸೊಗಡಿನ ತೀವ್ರತೆ ಓದುವುದಕ್ಕೆ ಕೊಂಚ ಕಷ್ಟವಾದರೂ.. ನಿಧಾನವಾಗಿ ಓದಿಸಿಕೊಂಡು ಹೋಗುತ್ತದೆ… ಸದಭಿರುಚಿಯ ಲೇಖನ…

  3. Santhoshkumar Lm

    ನಮ್ ಚಾಮರಾಜನಗರದ ಭಾಷೆ ಸೂಪರ್!

  4. Ambarish M

    ತಂಕಸೀಮೆ ಭಾಷೆಯ ಸೊಗಡು ಯಾನಳಿ ಚನ್ನಾಗ್ ಬರ್ದಿದ್ದರಿ.

  5. Ramesh Hirejambur

    really Super… Lovely and heart touching writing madam…

  6. ಹನುಮಂತ ಹಾಲಿಗೇರಿ

    ಬಾಳ ಚಂದ ಬರ್ದಿಯವ್ವ….

  7. amardeep.ps

    ಭಾಷೆ ಬಲು ಸೊಗಸಾಗಿದೆ…. ನಿರೂಪಣೆ ಹಾಗೂ ವಿಷಯವೂ ಕೂಡ

  8. chaithra.

    ಬದಲಾದ ಕಾಲ ಘಟ್ಟದಲ್ಲಿ ನೋಡೋದಾದ್ರೆ ನಾವು ಇವತ್ತಿನದು ಕಷ್ಟದ ಜೀವನ ಅನ್ದೊಕೊತಿವಿ, ಅದೆಷ್ಟು ಮಕ್ಕಳು, ಹಿರಿಯರು ಆತ್ಮಹತ್ಯೆ ಮಾಡಿಕೊಳ್ಳೋದು ಗಮನಿಸುತ್ತಿದ್ದೇವೆ. ಆದರೆ ಜೀವಮಾನವೆಲ್ಲ ಅಷ್ಟು ಕಷ್ಟಗಳ ಕಂಡ ಆ ಆಜ್ಜಿ ಮತ್ತೆ ಹೇಳ್ತ್ಹಿರೋದೆನು.”.” ನಮ್ಮಟ್ಲಿ ಎಲ್ಲ ಆಕಂಡ್ ನೋಡ್ತರ ಕವ್ವ ಅಲ್ ಕಿರ್ಕಂಡು, ಅದ್ಯಾನ ನಂಗ್ ಮಾತ್ರಿಯೇ ಇಡಿಸಲ್ಲ ಕವ್ವ, ಅದ್ಯಾನ ಕುಸೈ ನೀ ಬರ್ಯಾದು? ಒಂದ್ ರಾಮಾಯನ್ವಲ್ಲ, ಮಾಬಾರತ್ವಲ್ಲ, ಕಷ್ಟಿಲ್ಲ, ಸುಖವಿಲ್ಲ, ಅಂವ್ ಕೊಡಲ್ಲ ಅಂತಳ, ಇಂವ್ ಬುಡಲ್ಲ ಅಂತಳ, ಎಷ್ಟ್ ನೋಡುದ್ರೂ ಅಷ್ಟಿಯೇ.. ಅದ್ನ್ಯಾನ್ನ ಕುಸೈ ನೋಡದು? .ನಾ ನೊಡಲ್ಲ ಕವ್ವ. ದ್ಯಾವನೂರ್ ಮಠದಲ್ಲಿ ಕತ ಗಿತ ಮಡುಗುದ್ ದಿನಕ್ ಓಗ್ ಕ್ಯೋಳ್ತೀನಿ. ಬಂದ್ ಮನಿಕತ್ತಿನಿ…. ನಾವೆಲ್ಲರೂ ಒಮ್ಮೆ ಯೋಚಿಸಲೇಬೇಕಾದ ವಿಷಯ. ನನಗೆ ಕಾರಂತರ ಮೂಕಜ್ಜಿಯೇ ಎದ್ದು ಬಂದಂತೆ ಅನಿಸಿತ್ತು.ವಾಸ್ತವದಲಿ ನಡೆಯುವುದು ನಡೆದೇ ತೀರಬೇಕು ಎನ್ನುವುದು ಗೊತ್ತಿದ್ದರು ನಿಟ್ಟುಸಿರು ಒಂದೇ ಉತ್ತರವಗುತ್ತಿದೆ ನಮಗೆ.
    ಇನ್ನು ಸೋಮನ ಕಥೆ ಕೇಳಿದ್ರೆ ನನಗೆ ನೆನಪಾಗೋದು ಕೆ ಎಸ ನಿಸಾರ್ ಅಹಮದ್ ರ “ರಾಮನ್ ಸತ್ತ ಸುದ್ದಿ ” ಪದ್ಯ. …
    ಹಳ್ಳಿಯ ಮುಘ್ದ ಅನಕ್ಷರಸ್ತನ ಬಗ್ಗೆ ನಿಸಾರ್ ಅಹಮದ್ ರವರು ಬರಿತಾರೆ …
    “ರಾಮನ್ ಸತ್ತರೋ ಹನುಮ’ ಅನ್ನಬೇಕು. ಅಗಾ ತಡೆದು
    ಸುಮ್ಮನಾದೆ. ರಾಮನ್ ಅರ್ಥೈಸಿಕೊಳ್ಳಬಹುದೇ ಇವನ
    ಅಶಿಕ್ಷಿತ ಅರಿವಿಗೆ?
    ಪತ್ರಿಕೆಯೋದುವುದಿಲ್ಲ;: ನಾನು ಕವಿ ಎಂಬುದು ಗೊತ್ತಿಲ್ಲ;
    ಹೊಟ್ಟೆ ಬಟ್ಟೆಯ ಅಗತ್ಯ ಮೀರಿದ ನನ್ನ ಹಸಿವು, ಅಸ್ವಸ್ತತೆ
    ಅರಿತಿಲ್ಲ; ಲೋಕದ ಪ್ರತಿನಿತ್ಯದ ಆಗು ಹೋಗುಗಳಿಗೆ ಪ್ರತಿಕ್ರಿಯಿಸುವ
    ಸೂಕ್ಷ್ಮತೆ ಕಂಡಿಲ್ಲ; ಅನೇಕ ಮಟ್ಟದಲ್ಲಿ ಬಾಳುವ ಪ್ರಶ್ನೆಯೇ
    ಉದ್ಭವಿಸಿಲ್ಲ – ಆದರು ತೃಪ್ತ…
    ಗದ್ದೆ, ಧಣಿ, ಹ್ಯಾಪ ಮೊಲೆಯ ಹೆಂಡಿರು, ಸಿಂಬಳ ಸುರುಕ ಮಕ್ಕಳು,
    ದೇವರ ಗ್ರಮ್ಯದ ಕಲ್ಪನೆ , ಊರಿನ ಮುಂದಾಳು- ಇಷ್ಟೇ ಜಗತ್ತು –
    ಆದರು ತೃಪ್ತ ……

  9. B.Suresha

    ಬಂಬಾಟಾಗದೆ ಕಣೇಳಿ… ನಮಗ್ ಶಾನೆ ಖುಸ್ಯಾಗದೆ ಕಣೇಳಿ… ಇಂಗೇ ಬರ್ಕಂಡು ಬರ್ಕಂಡ್ ಕಡೀಕೆ ನಿಮ್ಮೂರಿನ್ ಕತೆ ಎಲ್ಲಾ ಯೇಳ್ಬೇಕಳಿ…!

  10. ರುಕ್ಮಿಣಿ ನಾಗಣ್ಣವರ

    Tumba Chennagide kanakka.. odoke swalpa kashta addarinda naanu tumba nidhaanavaagi odi artiasikolta hode… bhasheya bagegiruva nimma hiditha awesome… matte matte odbeku anisutte… ide bhasheli munduvarisi…
    Rukmini N

  11. jogi

    ಚೆನ್ನಾಗಿದೆ. ನಾನು ಸೀರಿಯಲ್ ಬರೀತಾ ಇದ್ದಾಗಿನ ದಿನಗಳು ನೆನಪಾದವು.

  12. Poornachandra

    ಬೋ ಸಂದಾಗೈತೆ ಮೇಡಂ… ನಿಮ್ಮಿಂದ ಭಲೇ ಕಲ್ಯೋದೈತೆ… ನಾನು ಐಕಳ ಕೂಟೆ ಸ್ಯರ್ಕಂಡ್ ಬೀಡಿ ಶೆದ್ಕಂಡ್ ಟೇಮ್ ಹಾಳ್ ಮಾಡೋದ್ ಬುಟ್ಟು ನಿಮ್ಹಂಗ್ ಬರ್ಯದನ್ನ ಕಲೀಬೇಕು…

  13. ಅ೦ಗಡಿ ಇಂದುಶೇಖರ

    ಭಾಳಾ ಮಸ್ತ್ ಬರ್ದೀ ನೋಡವಾ ತಂಗೀsss.ಖರೇ ಹೇಳ್ಬೇಕು ಅಂದ್ರ,ಮೊದಲ್ನೇ ಸಲಾ ಓದಿದಾಗ ಸರಿಯಾಗಿ ಅರ್ಥ ಆಗ್ಲಿಲ್ಲಾ. ಇನ್ನೊಮ್ಮೆ,ಒ೦ದೊಂದ ಪದಾ ಓದ್ಕೋತಾ ಹೋದಾಗ ಅರ್ಥ ಆತು.ಮನಸಿಗೆ ತಾಗೋ ಹ೦ಗ್ ಐತಿ. ಹಿ೦ಗsss ಬರ್ಕೋತಾ ಇರು. ನಿಮ್ಮ ಅಪ್ಪಾರು ಓಣ್ಯಾಗ್ ಎಲ್ಲಾರ್ಗೂ ಖುಷಿಯಿಂದ ಹೇಳ್ತಿದ್ದ ಬಗ್ಗೆ ಓದಿದಾಗ,ಸನಾದಿ ಅಪ್ಪಣ್ಣ ಸಿನಿಮಾದಾಗಿನ ರಾಜ್ಕುಮಾರ ನೆನಪಿಗೆ ಬಂದಾ.( ಮಗಾ ಬೆಂಗಳೂರ್ನ್ಯಾಗ ದೊಡ್ಡ ಸಾಹೇಬ ಆಗ್ಯಾನು ಅನ್ನೋ ವಿಷಯಾನ ಹಿ೦ಗ ಖುಷಿಯಿಂದ ಹೇಳ್ಕೋತ ಅಡ್ಯ್ಯಾಡತಿದ್ದಾ.)

  14. Anil Talikoti

    ಸಾವಕಾಶ ಓದಿ ಚಪ್ಪರಸಬೇಕಾದದ್ದಿದು – ಚೆಂದಾಗೈತೆ

  15. samyuktha

    Tumba chenagide 🙂

  16. ಜಿ.ಎನ್ ನಾಗರಾಜ್

    ಕುಸುಮಬಾಲೆ ಎಂಬ ಆಧುನಿಕ ಜೋತಮ್ಮ ಮನೆಯ ದೀಪ ತುಂಬಿಸುವ ಮೊದಲೇ ತಮ್ಮ ಮನೆಯ ತಂಬೆಳಕನ್ನು ಊರಿಗೆಲ್ಲಾ ಹಂಚಲು ಬಂದಿದ್ದಾಳೆ . ನಾಡಿನೆಲ್ಲಾ ಜೋತಮ್ಮಗಳೂ, ಜೋತಪ್ಪಗಳೂ ಕಾಡು ತುಂಬಿ ತುಳುಕುವಂತೆ ನೆರೆಯಿರಿ. “ಕುಸುಮಬಾಲೆ, ನಿಮ್ಮ ‘ಲಹರಿ ಲಹರಿ ಕಂಪ ಬಳ್ಳಿ’ ದಾಂಗುಡಿಗಳನ್ನು ಬಿಟ್ಟು ಎಲ್ಲ ದಿಕ್ಕಿನಲ್ಲೂ ಹಬ್ಬಿ ಹೊರವಾಗಿ ಬೆಳೆಯಲಿ “

  17. sangeetha

    Tumba sandakaite neev yolid kate… nanna atmiya snehita obba chamarajanagaradavanu. Avana ammana nenapaytu nange ee kathe odidmele. Kusuma alias minchu hula, nammade aada sadhaneya amalige, oushidi kotta hagide nigajji mathu somana drishtikona. Adrallu namma akka pakkada oorina bhaseya laya, mysoorinavalada nanagantu sangeethadashte impagide. Mundina kate yolodu yavaga?

  18. b.rajashekaramurthy

    ತುಂಬಾ ಚೆನ್ನಾಗಿದೆ..

  19. ನಾಗೇಂದ್ರ ಶಾ

    ಕುಸುಮಾದ ಕುಸುಮಬಾಲೆಯೂ… ಕುಸುಮಕ್ಕನ ಮೈಮ್ಯಾಗೆ ಬಂದು… ಅವು ಅಕ್ಸರ ರೂಪವಾ ಪಡಕಂಡು… ಬಸರಬ್ಯಾನೆಯ ಮರತು… ಬರಿಯೋದನ್ನ ದೇನಿಸುತ್ತಾ… ತನ್ನ ಬೇರೆ ಹಸುವುಗಳನ್ನ ಇಂಗಿಸ್ಕಳ್ತಾ ಅದರಾಗೆ ಮೈಮರಿತಿರಬೇಕಾದ್ರೆ… ಒಂದ್ಸಾರ್ತಿ ಕುಸುಮಬಾಲೆಗ ಉಘೇ ಅನ್ರಪ್ಪೋ…. ಮಂಟೇದ ಸ್ವಾಮಿ ಬನ್ನೀ. ಸಂಕಾಟ ನೀಗುವ ಸ್ವಾಮಿ ಬನ್ನೀ… ಉಘೆ… ಉಘೇ…

  20. Anonymous

    nice

  21. Devu R.K

    its good…

  22. ಪರುಶುರಾಮ ಕಲಾಲ್

    ಕುಸಮಾಜೀ ನೀವು ಕತೆ ಬರೆಯಿರಿ. ಕಥೆಯಂತೆ ಲೇಖನ ಬರೆದಿದ್ದೀರಿ. ನಿಮ್ಮ ಭಾಷೆ ನನಗೆ ಹೊಸದು. ಆದರೂ ಅದಕ್ಕೊಂದು ಲಯವಿದೆ.

  23. Mohan.V.Kollegal

    ನಮ್ಮಳ್ಳಿ ಬಾಸ ಕವ್ವಾ ಇದು.ಜಿಟ್ವಾಗ್ಲು ಚಂದಗದ..

  24. sudi

    hangadre munde maralli,deshvalli,belkere, kongalli madappa avruella battre ant heloyi, aytu anni

  25. ಮಂಜುಳಾ ಬಬಲಾದಿ

    ತುಂಬಾ ಚೆನ್ನಾಗಿದೆ.. ಬೆಂಗಳೂರು ಭಾಷೆ ತುಂಬಾ textual ಅನ್ಸಿದ್ರೂ ಅದನ್ನ ಅರಗಿಸಿಕೊಂಡಿರೋ ಹೊತ್ತಲ್ಲಿ.. ಈ ಥರ ಹಳ್ಳಿಯ ಭಾಷೆಯ ಸೊಗಡನ್ನ ತುಂಬಾ ನೈಜವಾಗಿ ಬರೆದಿರೋ ನಿಮ್ಮ ಶೈಲಿ ತುಂಬಾ ಹಿಡಿಸಿತು. ಹೀಗೆ ಬರೆಯೋದು ಅಷ್ಟು ಸುಲಭ ಅಲ್ಲ ಅಂತ ನಂಗೆ ಅನ್ಸತ್ತೆ (ನನ್ನ ವೈಯಕ್ತಿಕ ಅಭಿಪ್ರಾಯ) (Y)

  26. jyothi

    ಚಂದ ಬರೆದಿದ್ದೀರಿ:)

  27. amith

    ಮಣ್ಣಿನ ಸೊಗಡು ಪ್ರತಿ ಪದದಲ್ಲಿಯೂ ಕಾಣುತ್ತಿದೆ. ಭಾಷೆಯನ್ನು ಅರಿತುಕೊಳ್ಳಲು ನಮಗೆ ಸಿಕ್ಕಿರುವ ಪದಕೋಶ ನಿಮ್ಮ ಅಂಕಣ… ಮುಂದಿನ ಲೇಖನಕ್ಕೆ ಕಾಯುತ್ತಿದ್ದೇನೆ 🙂

  28. latha manjunath

    ದ್ಯಾವನೂರರ ಕುಸುಮಬಾಲೆ ನೆನಪಾಯ್ತು…. ಇತ್ತೀಚೆಗಷ್ಟೆ ತುಂಬಾ ಜತನದಿಂದ ಓದಿದ್ದು….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading