“ಆಗಿದ್ದಾಯ್ತು. ಹುಡುಗಿಗಿನ್ನೂ ಚಿಕ್ಕ ವಯಸ್ಸು ಇನ್ನೊಂದು ಮದುವೆ ಮಾಡಿ” ಮೂರೇ ದಿನಕ್ಕೆ ಓಡಿಹೋದ ಗಂಡನ ನೆನದು ಅಳುತ್ತಿದ್ದ ಹುಡುಗಿಗೂ, ಅವಳಪ್ಪ, ಅಮ್ಮನಿಗೂ ಸಮಾಧಾನಿಸುತ್ತಾ ಹೇಳಿದೆ. “ಐ ಅಂಗೂ ಉಂಟಾ? ಸಿಟಿಗಳಲ್ಲಾದ್ರ ಅದೊಂತರ, ಹೆಂಗಾರೂ ನಡೆದೋಯ್ತದ. ಹಳ್ಳಿಲಿ ಹಂಗೆಲ್ಲ ಮಾಡಕಾದ್ದ? ಮಾನಗೆಟ್ ಮೂದೇವ್ಗಳು ಅಂತ ಜನ ಆಡ್ಕಂಡ್ ನಗಬೇಕಲ್ಲ ನಮ್ನ” ಅಂದುಬಿಟ್ರು. “ತಾಳಿ ಕಟ್ಟಿದ ಮೇಲ್ ಮುಗಿದೋಯ್ತು. ಅವನು ಗಂಡ, ಇವಳು ಹೆಂಡತಿ. ಕದ್ದುಕಾಣುವ, ಮಧ್ಯರಾತ್ರಿಯ ಕನಸಲ್ಲೂ ಹುಡುಗಿ ತಾಳಿಕಟ್ಟಿ ಓಡಿಹೋದ ಆ ಅಯೋಗ್ಯನನ್ನೇ ನೆನಯಬೇಕು. ದರ್ಶನೋ ಸುದೀಪೋ.. ಪಕ್ಕದ ಬೀದಿ ಹುಡುಗನೋ. ಇನ್ಯಾವನೋ ಬಂದನೆಂದು ಗೊತ್ತಾಯಿತೋ.. ಮುಗೀತು ಕಥೆ. ಅಲ್ಲಿಗಿವಳು ಹಾದರಗಿತ್ತಿ. ಪುಣ್ಯ ನಮ್ಮ ಕನಸಿಗಿನ್ನೂ ಕನ್ನಡಿ ಬಂದಿಲ್ಲ.
ಒಟ್ಟಿನಲಿ ಅವಳ ಯೌವ್ವನವೆಲ್ಲ ಟಿವಿಯ ಹೀರೋಪಕ್ಕದ ಹೀರೋಯಿನ್ನಿನ ಜಾಗದಲಿ ತನ್ನನ್ನು ಕಲ್ಪಿಸಿಕೊಳ್ಳುತ್ತಲೇ ಕರಗಿಹೋಗಬೇಕು. ಪಾತ್ರೆ ತಿಕ್ಕುತ್ತಾ ತಿಕ್ಕುತ್ತಾ ಅವಳ ಕೈ ಗೆರೆಗಳೂ ಅಳಿಸಿಹೋಗಬೇಕು. ಅದನ್ನು ನೋಡಿ ಅಪ್ಪ, ಅಮ್ಮನೂ ಕೊರಗಬೇಕು . ಅವರಿವರು ಆಗೀಗ ಮನೆಗೆ ಬಂದು “ಅಯ್ಯೋ ಹಂಗಾಯ್ತಾ ಕೂಸೆ ನಿನ್ ಬಾಳು, ಮದ್ವ ಮಾಡ್ಕಂಡ್ ಎಲ್ಗೋಯ್ತು ಆಮುಂಡೆ ಕೂಸು? ಬ್ಯಾಡದೇ ಇದ್ರ ನಂಗ್ ಮದ್ವೇ ಬ್ಯಾಡ ಅನ್ನಬೇಕು. ಅದ್ ಬುಟ್ಬುಟ್ಟು ಇಂತಾ ಕೆಲ್ಸನ ಮಾಡದು?”, ಹೋಗ್ಲಿ ಗಂಡ್ ಹೈದನಾ ಇನ್ನೊಂದ್ ಮದ್ವ ಮಾಡಕ? ಹೆಣ್ಹೆಂಗಸು , ಏನ್ಮಾಡದು ಕೂಸೆ, ನಿನ್ನ ನೋಡುದ್ರ ನಮಗೇ ಕಳ್ಳು ಕಿತ್ಕಂಡ್ ಬತ್ತದ, ಪಾಪ ವಯಸೂಕಾಲ. ಏನೋ ಬುಡವ್ವ, ಮಾನವಾಗ್ ಬಾಳು ಅಷ್ಟೆ. ದೇವರ್ ಮಾಡ್ದಂಗಾಗ್ಲಿ.” ಅಂತೆಲ್ಲ ರಾಗ ಹಾಡಿ, ನಾಕು ಹನಿ ನಾಟಕದ ಕಣ್ಣೀರು ಸುರಿಸಿ ಹೋದ್ರೆ ಮುಗೀತು. ಇವರಿಗೆ ಒಂಥರಾ ಸಮಾಧಾನ . ನಾವು ಮಗಳಿಗೆ ಬೇರೆ ಮದುವೆ ಮಾಡಿಲ್ಲ. ಹಾಗಾಗಿ ಈ ಸಿಂಪತಿಯನ್ನೂ , ಮಾನವನ್ನೂ ಇನ್ನೂ ಉಳಿಸಿಕೊಂಡಿದ್ದೇವೆ ಅಂತ ತಮ್ಮ ಭುಜ ತಾವೇ ತಟ್ಟಿಕೊಳ್ಳುತ್ತಾರೆ. ಮತ್ತೆ ಕೊರಗಿ ಕೊರಗಿ ಸಾಯುತ್ತಾರೆ. ಆದರೆ ಇನ್ನೊಂದು ಮದುವೆ ಮಾತ್ರ ಮಾಡುವುದಿಲ್ಲ ಯಾಕೆಂದರೆ ತಾಳಿ ಒಮ್ಮೆ ಕಟ್ಟಿಯಾಗಿದೆ.
ಅದೆಲ್ಲಿಂದಲೋ ಬರ್ತಾ.. ಜೋರು ಮಳೆಗೆ ಸಿಕ್ಕು, ನಾನು ಅಪ್ಪ ಹೊಸಕೋಟೆ ಮಠದ ಅಂಗಳ ಸೇರಿಕೊಂಡಿದ್ದೆವು. ಸುತ್ತಲೂ ಹಸಿರಸಿರು ಗದ್ದೆ ಮಧ್ಯೆ ಮಠ. ತುಸು ದೂರದಲ್ಲೆ ಸ್ಕೂಲು. “ಎರಡೊಂದ್ಲೆರಡೂ..ಏಡೇಡ್ಲಿ ಮೂರು” ರಾಗವಾಗಿ ಕೇಳುತ್ತಿತ್ತು. ಮಠದ ಟೀ ಮತ್ತು ಅಷ್ಟೇ ಬಿಸಿ ಬಿಸಿ ಚರ್ಚೆ. “ಓಗದೋಯ್ತಲ್ಲ ಮುದೇವಿ ತಾಳಿನ್ಯಾರ ಕಟ್ಟಿಸ್ಕಳ್ದೆ ಓಯ್ತಾ? ಕಟ್ಟಿಸ್ಕಂಡ್ ಮೇಲ್ಯಾಕ್ ಓಡೋಯ್ತು? ಜಾತಸ್ಥರು, ಗೊತ್ತಿದ್ಮೇಲ ಅವನಿಗೇ ಮಾಡಿದ್ರಾಗಿತ್ತು. ಈಗ ಇವನ್ ಕೈಲ್ ತಾಳಿ ಕಟ್ಟಿಸ್ಕಂಡ್ ಮೇಲ ಬ್ಯಾರೆ ಎಲ್ಲಿಗ್ ಓಗಕಾದ್ದು? .. ತಲೆಬುಡ ಅರ್ಥವಾಗದೇ ಅಪ್ಪನನ್ನ ಕೇಳಿದಾಗ ಗೊತ್ತಾಯ್ತು. ಹುಡುಗಿಯೊಬ್ಬಳು.ತನ್ನ ಪಕ್ಕದ ಹಳ್ಳಿ ಹುಡುಗನನ್ನ ಪ್ರೀತಿಸಿದ್ದಳು. ಮನೇಲಿ ಮುಂಚೆಯೇ ಹೇಳಿದ್ಲೋ ಬಿಟ್ಟಿದ್ಲೋ… ಒಟ್ನಲ್ಲಿ ಮದುವೆ ದಿನ ತಾಳಿ ಕಟ್ಟಿದ ನಂತರ ಮದುವೆ ಮನೆಯಿಂದ ಖಾಲಿಯಾದಳು.
ಕರೆಕ್ಟು, ಅವಳು ಹೋಗೋದು ಹೋದಳು, ಧೈರ್ಯ ಮಾಡೋದು ಮಾಡಿದಳು. ಚೂರು ಮುಂಚೆ ಮಾಡಬೇಕಿತ್ತು. ಆದರೆ ಎಷ್ಟು ಮುಂಚೆ? ಅಪ್ಪ ಹೊಲ ಅಡವಿಡುವ ಮುಂಚೆ, ಸಾಲ ಮಾಡುವ ಮುಂಚೆ. ಮದುವೆಗೆಂದು ಲಕ್ಷ ಲಕ್ಷ ಸುರಿವ ಮುಂಚೆ. ಹೌದು, ಇದೆಲ್ಲ ನಷ್ಟೆವೇ . ..ಆದರೂ, ಜನರ ದೃಷ್ಟಿಯಲ್ಲಿ ಎಲ್ಲಕ್ಕಿಂತ ಅತಿ ದೊಡ್ಡ ನಷ್ಟವಾಗಿದ್ದು, ಅಪರಾಧವಾಗಿದ್ದು ಮಾತ್ರ ಅವಳು ತಾಳಿ ಕಟ್ಟಿಸಿಕೊಂಡದ್ದು. ಅವರ ಪ್ರಕಾರ ಅವಳು ಯೋಚಿಸಬೇಕಾಗಿದ್ದು ತಾಳಿ ಕಟ್ಟುವ ಮುಂಚೆ!! ತಾಳಿ ಕಟ್ಟಿದ ಮರುಕ್ಷಣವೇ ಆದರೂ ಪರವಾಗಿಲ್ಲ. ಕಟ್ಟಿದ ಮೇಲೆ ಆಯ್ತು. ಅವನವಳ ಹೆಂಡತಿ, ಸ್ವತ್ತು ಅಷ್ಟೆ. ಅರ್ರೆರ್ರೇ.. ಹೆಂಗಿದು? ತಾಳಿಯೇನು ಸರಕಾರೀ ಠಸ್ಸೆಯಾ? ಬ್ಯಾಂಕಿನ ಬೀಗ ಮುದ್ರೆಯಾ? ಅಥವಾ ಕುರಿ ಕೋಣಕ್ಕೆ ಕಟ್ಟಿ ಒಯ್ಯುವ ಹಗ್ಗವಾ?
ಮದುವೆಗೆ ಮುನ್ನ ಚಿನ್ನ ರನ್ನ ಅನ್ನುವ ಪ್ರೇಮಿ, ಮದುವೆಯಾಧ ಮೇಲೆ ಅಥವಾ ಮದುವೆ ಹಳತಾದ ಮೇಲೆ , ಬೇರೆಯದೇ ಆಟಿಟ್ಯೂಡ್ ತೋರಿಸುತ್ತಾನೆ. ಅವನೇ ಇವನ ಅನಿಸುತ್ತದೆ ಅಂತೆಲ್ಲ ಎಷ್ಟೋ ಹೆಣ್ಣುಮಕ್ಕಳು ಹೇಳುತ್ತಿರುತ್ತಾರೆ. ಇದರ ಮೂಲಕಾರಣವೂ ಅದೇ.. “ತಾಳಿ” ಅರ್ಥಾತ್ ಮದುವೆ. ತಾಳಿ ಕಟ್ಟುವ ಮುನ್ನ “ಹೋಗಲೇ” ಅಂದುಬಿಡಬಹುದು. ಅದೇ ತಾಳಿ ಕಟ್ಟಿ ಹೆಂಡತಿಯನ್ನಾಗಿಸಿಕೊಂಡುಬಿಟ್ಟರೆ ಮುಗಿಯಿತು. ಇನ್ನವಳು ಹೆಂಡತಿ, ಬಿಟ್ಟುಹೋಗಲಾರಳು, ಹಾಗಾಗಿ ಹೆಚ್ಚು ಓಲೈಸಬೇಕಿಲ್ಲ. ಅನ್ನುವಂತ ಸ್ವಂತಿಕೆಯ ಭಾವ.
ಇನ್ನೂ ಈ “ತಾಳಿಭಾಗ್ಯ” ದ ಸುತ್ತ ಇರೋ ಇನ್ನೊಂದಿಷ್ಟ್ಟು ಇಂಟರೆಸ್ಟಿಂಗ್ ಸಂಗತಿಗಳನ್ನು ಹೇಳ್ತೀನಿ ಕೇಳಿ, ಅವತ್ತೊಂದಿನ ಬನಶಂಕರಿಯಿಂದ ವಿಜಯನಗರಕ್ಕೆ ಹೋಗೋ ಬಸ್ಸತ್ತಿದೆ. ಎರಡನೇ ಸೀಟಿನಲ್ಲಿ ಮಗನನ್ನೂ ಕೂರಿಸಿಕೊಂಡು ಕೂತೆ. ಪಕ್ಕದ ಹುಡುಗಿ “ಕೊಡ್ರಿ ಕೂರಿಸ್ಕೋತೀನಿ “ ಅಂದಳು. ಇವನಿಗೋ ಕಿಟಕಿ ಕಡೆ ಓಡಾಡೋ ವೆಹಿಕಲ್ಸ್ ನೋಡಬೇಕಿತ್ತು. ಅವಳ ತೊಡೆ ಮೇಲೆ ಕೂತು, ಕಡೆಗೆ ಅಲ್ಲಿಂದ ಜಾರಿ. ಕಿಟಕಿ ಪಕ್ಕಕ್ಕೇ ಕೂತ. ಅವಳೂ ಸರಿದುಕೊಂಡು ಜಾಗ ಕೊಟ್ಟಳು. ಭಾಷೆ ಉತ್ತರಕರ್ನಾಟಕದ್ದು. ಅದ್ಯಾಕೋ ಅಗತ್ಯಕ್ಕಿಂತ ಹೆಚ್ಚು ಅರಿಶಿನ ಕೆನ್ನೆಗೆ, ಬೈತಲೆಗೆ ಇಷ್ಟಿಷ್ಟು ಕುಂಕುಮ. ಸರಿಯಾಗಿ ಗಮನಿಸಿದೆ. ಅವಳು ಪೂರ್ಣ ಹೆಣ್ಣಲ್ಲ. ಹೆಣ್ಣಾಗಲು ತುಡಿಯುತ್ತಿರುವ ಒಂದು ಜೀವ. ಮತ್ತೂ ಗಮನಿಸಿದೆ. ಕರಿಮಣಿ, ಚಿನ್ನದ ಗುಂಡು ಎರಡನ್ನೂ ನಾಜೂಕಾಗಿ ಪೋಣಿಸಿದ ಸರ ಮತ್ತು ತಾಳಿ. ಅದರ ಮೇಲೂ ಒಂದಷ್ಟು ಅರಿಶಿನ ಕುಂಕುಮ. ಬೇಕೆಂದೇ ಅವಳದನ್ನ ಕಾಣುವಂತೆ ಹಾಕಿಕೊಂಡಿದ್ದಳು. ನಾನು ರೇವತಿ ಅವರ ಆತ್ಮಕಥೆ ಓದಿದ್ದರಿಂದ ಅವಳ ಮನಸ್ಥಿತಿ ನಂಗರ್ಥವಾಗಿತ್ತು. ಅವಳಿಗೆ ಖುಷಿಯಾಗುವ ಪ್ರಶ್ನೆಗಳನ್ನೇ ಕೇಳಿದೆ. ಯಾವೂರು,? ಎಲ್ಲಿಗೆ ಮದುವೆಯಾಗಿದ್ದೀರಿ? ಯಜಮಾನರೆಲ್ಲಿ ಕೆಲಸ ಮಾಡ್ತಾರೆ? ಹೀಗೇ.. ಅಷ್ಟರಲ್ಲಿ ಅವಳ “ಗಂಡ” ಫೋನು ಮಾಡಿದ. ಕೇಳುವ ಅನಿವಾರ್ಯ ಸ್ಥಿತಿ ನನ್ನದಾಗಿತ್ತು. “ಬ್ಯಾರೆ ಮನಿ ಯಾಕ? ತಾಳೀ ಕಟ್ಟೀಯಲ್ಲ ನಿಮ್ಮವ್ವ ಅಪ್ಪನ ಜೋಡಿ ಹೇಳಲ, ತಾಳೀ ಕಟ್ಟೀನಿ ಹೆಂಡ್ತಿ ಅಂತ” ಅನ್ನುತ್ತಿದ್ದಳು. ಯಾವನೋ ಐನಾತಿ ಅಡ್ಡಕಸುಬಿ, ಇವಳನ್ನ ಬೇರೆ ರೀತಿ ಬಳಸಿಕೊಳ್ಳೋ ಸಲುವಾಗಿ “ತಾಳಿ” ಕಟ್ಟಿದ್ದ. ಹೆಂಡತಿ ಮಾಡಿಕೊಂಡಿದ್ದ.
ಅವಳು ತಾಳಿಯನ್ನ ಕುತ್ತಿಗೆಯಿಂದ ತೆಗೆದದ್ದೇ ರಪ್ಪಂತ ಬಿಸಾಕಿಬಿಡುತ್ತಾಳೆ. ಅದೇನನ್ನೋ ನಿವಾರಿಸಿಕೊಂಡ ತೃಪ್ತಭಾವ ಮುಖದಲ್ಲಿ ತೇಲುತ್ತದೆ. ಮರುಕ್ಷಣವೇ ಬಿಕ್ಕಿ ಬಿಕ್ಕಿ ಅಳುತ್ತಾಳೆ. ಈ ದೃಶ್ಯವನ್ನ ಸೀವು ಸಿನೆಮಾ, ದಾರಾವಾಹಿಗಳಲ್ಲಿ ನೋಡಿರುತ್ತೀರಿ. ಅಥವಾ ಪ್ರತ್ಯಕ್ಷವೇ ನೋಡಿರುತ್ತೀರಿ ಅಥವಾ ಅನುಭವಿಸಿರುತ್ತೀರಿ. ಗಂಡನ ವಿರುಧ್ದ ಸಿಟ್ಟಿಗೆದ್ದಾಗಲೆಲ್ಲ. ಹೆಣ್ಣು ತಾಳಿಯನ್ನೇಕೆ ಕಿತ್ತು ಬಿಸಾಕುತ್ತಾಳೆ. ಕಾರಣ, ತಾಳಿ ಗಂಡನನ್ನ ಪ್ರತಿನಿಧಿಸುವ ಸಾಂಕೇತಿಕ ವಸ್ತು. ಪ್ರತಿಭಟನೆಗಳ ವೇಳೆ ರಸ್ತೆಗಳಲ್ಲಿ ಪ್ರತಿಮೆಗಳನ್ನು ಸುಟ್ಟುಹಾಕುತ್ತಾರಲ್ಲ. ಹಾಗೆ ಇದು. ಒಂದು ವಿರೋಧದ ನಡೆ.( Act.)
ಆದರೆ ಆಮೇಲೆ ಬಿಕ್ಕುವುದೇಕೆ? ಇಲ್ಲಿದೆ ಅಸಲು ವಿಷಯ. “ತೊಲಗಿಹೋಗು” ಅಂತ ತಾಳಿ ಬಿಸಾಕಿಬಿಡುವುದು ಸುಲಭ. ಆದರೆ ತಲೆತಲಾಂತರದಿಂದ “ತಾಳಿಯೆಂದರೆ….” ಅಂತ ಮಾಡಿದ ಪಾಠ, ತಲೆಗೆ ತುಂಬಿದ ಕಸ, ಇದನ್ನೆಲ್ಲ ತೊಲಗಿಸಿಕೊಳ್ಳುವುದಿದೆಯಲ್ಲ, ಅದು ಕಷ್ಟ. ಕಿತ್ತೆಸದ ಮೇಲೆ ವಿಶೇಷವಾಗಿ, ಗ್ರಾಮೀಣ, ಸಾಂಪ್ರದಾಯಿಕ ಮತ್ತು ಮಧ್ಯಮವರ್ಗದ ಹೆಣ್ಣುಮ್ಕಕಳಲ್ಲಿ ಒಂದು ಗಿಲ್ಟ್ ಶುರುವಾಗಿಬಿಡುತ್ತದೆ. “ಪಾಪಭೀತಿ” ಹೊಕ್ಕುತ್ತದೆ ಅಂತ ಕಾಣುತ್ತದೆ. ಅದಕ್ಕೇ ಬಿಕ್ಕುತ್ತವೆ.
ಒಮ್ಮೆ ಹೀಗೇ ಅಕ್ಕ ಐದನೇ ಸಲವೋ ಆರನೇ ಸಲವೋ ಗಂಡನಿಂದ ಮೂಳೆ ಮುರಿಸಿಕೊಂಡು ಬಂದಿದ್ದಳು. ಚಿಕ್ಕ ಹುಡುಗಿ ನಾನು, ಎಲ್ಲೋ ಶೂನ್ಯದತ್ತ ದೃಷ್ಟಿ ನೆಟ್ಟು ಕಂಬ ಒರಗಿ ಕೂತಿದ್ದಳು.ಅವಳ ತಟ್ಟೆಯ ಊಟ ಒಣಗುತ್ತಿತ್ತು.ನಾನಂತು ಅವಳು ಯಾವಾಗ ರೆಪ್ಪೆ ಮುಚ್ಚುತ್ತಾಳೋ ಅಂತ ನೋಡುತ್ತಾ ಉಣ್ಣುತ್ತಾ ಕೂತಿದ್ದೆ. ಎದೆಯೊಳಗೆ ಅದ್ಯಾವ ಲಾವಾರಸ ಉಕ್ಕಿತೋ ಪಟಾರನೆ ತಾಳಿ ಕಿತ್ತೆಸೆದಳು. ಕರಿಮಣಿಗಳು ಚಲ್ಲಾಪಿಲ್ಲಿ. ಅದೇನೋ ಆಗಬಾರದ್ದು ಆಗಿಹೋಯ್ತು ಅನ್ನೋ ಹಾಗೆ ಮನೆ ಮಂದಿಯೆಲ್ಲ ಕೂಗುತ್ತಾ ಓಡಿಬಂದರು. “ಎಲ್ಲಾದ್ರೂ ಉಂಟಾ ನನ್ ತಾಯೀ” ಅನ್ನುತ್ತಾ., ಮುತ್ತುರತ್ನ ಹವಳವೇನೋ ಅನ್ನುವಂತೆ ಅದನ್ನೆಲ್ಲ ಆಯ್ದುಕೊಂಡು ಮತ್ತೆ ಪೋಣಿಸಿ ಅವಳ ಗಂಡ ಬಂದು ನೋಡುವುದರಲ್ಲಿ ಕಟ್ಟಿ ಕೂರಿಸಿದ್ದರು. ಅವಳೀಗಲೂ ಬದುಕುತ್ತಿದ್ದಾಳೆ. ನೆಗ್ಗಿದ ತಾಳಿಯೊಂದಿಗೇ!!
ಇಲ್ಲೊಬ್ಬಳು ಹುಡುಗಿ ದಿನಾ ಟಿವಿಯಲ್ಲಿ ಬರುತ್ತಾಳೆ.
“ನನಗೆ ನ್ಯಾಯ ಕೊಡಿ, ಬೇಕಾದರೆ ನಿಮ್ಮ ಮನೆಯ ಚಾಕರಿ ಮಾಡಿಕೊಂಡಿರುತ್ತೇನೆ. ಸೊಸೆ ಮಾಡಿಕೊಳ್ಳಿ. ನನಗೆ ಅವನೊಂದಿಗೆ ಮದುವೆಯಾಗಿದೆ. ಪ್ಲೀಸ್ ನನ್ನನ್ನ ನಂಬಿ ಪ್ಲೀಸ್…”
“ಆಯ್ತು ನ್ಯಾಯ ಕೊಡುವ ಸಾಕ್ಷಿಯೇನು ಮದುವೆಗೆ?
“ಅರಿಶಿನ ಕೊಂಬು ಕಟ್ಟಿದ್ದಾನೆ” ನಾನೇ ಸಾಕ್ಷಿ.
ಸರಿಯಮ್ಮ, ಅವನಿಗೆ ಮನಸಿಲ್ಲ. ಪ್ರೀತಿಯಿಲ್ಲ. ನೀನ್ಯಾಕೆ ಬಲವಂತ ಮಾಡ್ತೀಯ? ಪ್ರೇಮಿಯೋ ಗಂಡನೋ ಆಗಲು ಅವನಿಗೂ ಪ್ರೀತಿ ಇರಬೇಕಲ್ಲ.? ಪರಸ್ಪರ ಪ್ರೀತಿ ಇಲ್ಲದ ಮೇಲೆ ಬದುಕೋದು ಹೇಗೆ?
ನನಗವನು “ತಾಳಿ” ಕಟ್ಟಿಬಿಟ್ಟಿದಾನಲ್ಲ? ಬೇರೆ ಮದುವೆ ಹೇಗೆ ಆಗೋದು ನಾನು? ಅಂತ ಟೆಕ್ನಿಕಲ್ ಪ್ರಾಬ್ಲಂ ಹೇಳುತ್ತಾಳೆ.
ಅದ್ಸರಿ ನಿನ್ನೆ ಇರದ ತಾಳಿ ಇವತ್ತು ಹೇಗೆ ಬಂತು ಕುತ್ತಿಗೆಗೆ?
ಅವನು ಮುಚ್ಚಿಡು ಅಂದಿದ್ದ. ತೆಗಿದಿಟ್ಟಿದ್ದೆ. ಇವತ್ತು ಹಾಕಿಕೊಂಡೆ. ಇದೋ ನೋಡಿ. ಅರಿಶಿನ ಎದ್ದುಕಾಣ್ತಿದೆಯಲ್ಲ? ಕ್ಯಾಮೆರಾ ಕ್ಲಿಕ್ ಕ್ಲಿಕ್ ಕ್ಲಿಕ್..
ಹೆಂಗಸರಿಗೆ ಮಾತ್ರವಲ್ಲ, ಒಮ್ಮೆ ತಾಳಿ ಕಟ್ಟಿದ ಗಂಡಸಿನದೂ ಇದೇ ಕತೆ. ಅವಳೇ ಇಷ್ಟವಿಲ್ಲದೇ ಬಿಟ್ಟು ಹೋದರೂ. ಇವನು ಒಮ್ಮೆ ತಾಳಿಕಟ್ಟಿದ ಮೇಲೆ “ಎರಡನೆ ವರ” ಆಗಿಬಿಡ್ತಾನೆ. ದೇಹದ ಐಬಿನ ಹಾಗೆ ಅದು ಸಾಮಾಜಿಕ ಬದುಕಿನ ಐಬು ಆಗಿಬಿಡುತ್ತದೆ. ತಾಳಿ ಕಟ್ಟಿದ್ದೇ ಅಪರಾಧವಾಗಿ ಅದಕ್ಕೊಂದು ಸರ್ಟಿಫಿಕೇಟೂ ಸಿಕ್ಕಿ, ಆ ಊನದೊಂದಿಗೇ ಅವನು ಮುಂದಿನ ಬದುಕು ಕಟ್ಟಿಕೊಳ್ಳಬೇಕಾಗುತ್ತದೆ.
ನನ್ನ ಪುಟ್ಟ ತಂಗಿ ಕ್ಯಾಮರಾಗೆ ಕಾಣದ ಹಾಗೆ ತಾಳೀಸರವನ್ನ ಬ್ಲೇಸರಿನೊಳಗೆ ನೂಕಿ ನ್ಯೂಸ್ ಓದುತ್ತಾಳೆ. ಯಾವ ಕಾರಣಕ್ಕೂ ತೆಗೆಯುವುದಿಲ್ಲವಂತೆ. ಅದಕ್ಕೂ ದಿನಾ ಮೆಕಪ್ಪು ತಿನ್ನಿಸುತ್ತಾಳೆ. ದುಬೈಯಂತಾ ದೇಶದಲ್ಲಿದ್ದರೂ, ಕಂಪನಿಯೊಂದರ ದೊಡ್ಡ ಹುದ್ದೆಯಲ್ಲಿದ್ದರೂ ನನ್ನ ಓರಗಿತ್ತಿ ಶ್ರಧ್ದೆಯಿಂದ ಮಾಂಗಲ್ಯ ಪೂಜಿಸುತ್ತಾಳೆ. ಕಂಪನಿಯ ಎಂತಾ ಪಾರ್ಟಿಯಾದರೂ ತಾಳಿ ತೆಗೆದಿಡುವುದಿಲ್ಲ. ಅತ್ತೆಯೇ ತೆಗೆದಿಟ್ಟು ಮ್ಯಾಚಿಂಗ್ ಸರ ಹಾಕಿಕೊಳ್ತಾರೆ. ಅವರಿಗೇ ಇಲ್ಲದ ಮಡಿವಂತಿಕೆ ಈ ಚಿಕ್ಕ ಹೈಕಳಿಗೆ ಯಾಕಿದೆ ಅನಿಸಿದರೂ, ಆ ಶ್ರಧ್ದೆಗೆ ಖುಷಿಯಾಗುತ್ತದೆ.
ಇನ್ನು ನಮ್ಮ ಶೂಟಿಂಗ್ನಲ್ಲೂ ಕೆಲ ಕಲಾವಿದೆಯರದು ಇದೇ ಕತೆ. ಪಾತ್ರಕ್ಕೆ ತಕ್ಕ ಒಡವೆ ಹಾಕಿಕೋಬೇಕಲ್ಲ ಪಾಪ, ಹಾಗಾಗಿ ಕೆಲವರು ಪ್ಲೇನ್ ಚೈನ್ ಮಾಡಿಸಿಕೊಳ್ತಾರೆ. ಮತ್ತೆ ಕೆಲವರು ಇತರ ಸರಗಳನ್ನ ಬದಲಿಸಿದಷ್ಟೇ ಸುಲಭವಾಗಿ ಅದನ್ನೂ ಬದಲಿಸುತ್ತಾರೆ. ಅವರ ಹತ್ತಾರು ಸರಗಳೊಂದಿಗೆ ಅದೂ ಬಿದ್ದುಕೊಂಡಿರುತ್ತದೆ. ಮತ್ತು ಪ್ರತಿ ಹೊಸ ತಾಳಿಯ ಹಿಂದೆಯೂ ಒಂದು ಹೊಸ ಕಥೆಯೂ ಇರುತ್ತದೆ. ಬಣ್ಣದ ಬದುಕು!
ಮದುವೆಯ ವಯಸು ದಾಟಿ, ಎಲ್ಲರ ಕುಹಕಗಳನ್ನೂ ಕೇಳಿ, ನೊಂದು ಕಡೆಗೆ ಮದುವೆಯಾಗುವ ಹುಡುಗಿಯರು, ಕಣ್ಣಿಗೆ ರಾಚುವಂತೆ ತಾಳಿಯನ್ನೆ ಮೇಲೆ ಬಿಟ್ಟುಕೊಂಡೇ ಕೆಲಕಾಲ ಓಡಾಡುತ್ತಾರೆ. ಷೋಕಿಗಲ್ಲ, ಮದುವೆಯಾಗಲಿಲ್ಲ ಅಂತ ನನ್ನ ನೋಡಿ ನಕ್ಕಿರಲ್ಲ, ಈಗ ಕಣ್ತುಂಬ ನೋಡ್ ಸಾಯ್ರೀ.. ಅನ್ನುವ ಸಲುವಾಗಿ, ಅವಳ ಸಿಟ್ಟನ್ನ ಹೊರಹಾಕಲು, ಪ್ರತಿಭಟಿಸಲು, ತಾಳಿ ಅವಳ ತಾತ್ಕಾಲಿಕ ಭಾವುಟ. ಅಸ್ತ್ರ.
ಇಷ್ಟೆಲ್ಲದರ ಮದ್ಯೆ ತಾಳಿ ಯಾವಾಗಲೂ ಹಾಕಿಕೊಳ್ಳಲೇಬೇಕೆಂದೇನೂ ಇಲ್ಲ ಅನ್ನುವ ಮನಸ್ಥಿತಿಯ ಹೊಸ ತಲೆಮಾರು ಸದ್ದಿಲ್ಲದೇ ಮಾಲ್ ಗಳಲ್ಲಿ ಓಡಾಡುತ್ತಿದೆ.ಹಿರಿಯರೂ ಇಟ್ಸ್ ಓಕೆ ಅಂದುಬಿಟ್ಟಿದಾರೆ. ಎರಡೆಳೆ ತಾಳಿಸರ ಹಾಕೊಳ್ಳದೇ ಊರಿಗೆ ಹೋದರೆ “ಅದ್ಯಾವ್ ಚೆಂದಗ್ ತಾಳಿಕಳ್ದು ಮಡುಗ್ಬುಟ್ ಬಂದಿದ್ದೈ? ಸಿಟಿ ಸೇರ್ಕಂಡಿವಿ ಅಂತ ಥರವಾಗೂ ಆಡಿರಾ? ಮುತ್ತೈದೆ ಎಂಗಸು ನ್ಯಾಯವಾಗ್ ಬುದ್ದಿ ಕಲಿ, “ ಅಂತ ಪಾರತಕ್ಕ ಮಕ್ ಮಕ್ ಉಗೀತಾಳೆ.
ಗಂಡು ಹೆಣ್ಣಿನ ದಾಂಪತ್ಯದ ಅಧಿಕೃತತೆಗೆ ಸಮಾಜ ಮತ್ತು ಕಾನೂನು ಕೇಳುವುದು ತಾಳಿ ಕಟ್ಟುವುದು ಅನ್ನುವ ಕಟ್ಟಳೆಯನ್ನು ಮಾತ್ರ . ಉಳಿದವೆಲ್ಲ ಇಲ್ಲಿ ಅಮುಖ್ಯ ಅಥವಾ ಖಾಸಗೀ ವಿಚಾರ . ಆದರೆ ಒಂದು ಸಮಾಜ, ಒಂದು ವ್ಯವಸ್ಥೆ, ಒಂದು ಕಾನೂನು ಯಾವುದೂ ಇರದೇ ಹೋದರೆ ಸ್ವೇಚ್ಚೆ ಹಕ್ಕು ಸ್ಥಾಪಿಸುತ್ತದೆ. ಎಲ್ಲವೂ ಅಯೋಮಯವಾಗುತ್ತದೆ. ಹಾಗಾಗಿ, ಸಂಬಂಧಕ್ಕೊಂದು ಸಾಮಾಜಿಕ ಚೌಕಟ್ಟು ಬೇಕು ನಿಜ. ಆದರೆ ಕಾನೂನು ಮತ್ತು ಸಮಾಜವೇ ಕೆಲ ಸಲ ಒಪ್ಪಿದ ವಿಷಯವನ್ನು ಕೂಡ ಯಾವುದೋ ಸಾಮಾಜಿಕ ಈಗೋಗಾಗಿ ತಳ್ಳಿಹಾಕಿ ನರಳುತ್ತೇವೆ. ಅಥವಾ ಮೇಲೆ ಎಳೆದುಕೊಂಡು ಕೊರಗುತ್ತೇವೆ.
ಟಿವಿಯಲ್ಲಿ ಭಾರೀಗಾತ್ರದ ಜ್ಯೋತಿಷಿ ಕೂತು. “ಮಂಗಳ ಸೂತ್ರದ ಮಹಿಮೆ” ಹೇಳುತ್ತಿದ್ದಾರೆ. ಆಯಿತಪ್ಪ, ಇದು ಮಂಗಳ ಸೂತ್ರ ಒಪ್ಪೋಣ. ವಿಶೇಷವಾದ ಶಕ್ತಿ ಇದೆಯಾ? ಇದ್ಕೊಳ್ಳಿ , ನಷ್ಟವಂತೂ ಇಲ್ಲ, ಅದನ್ನೂ ಒಪ್ಪಿಬಿಡೋಣ . ಆದರೆ ತಾಳಿಯೊಂದೇ ಒಂದು ಬದುಕಿನ ನಿರ್ಣಾಯಕವಾಗಿಬಿಟ್ಟರೆ. ಅದು ತಾಳಿಯಲ್ಲ, ಬದುಕಿನ , ಭವಿಷ್ಯದ, ಕನಸುಗಳ ಉಸಿರುಕಟ್ಟಿಸುವ ನೇಣುಕುಣಿಕೆ.!



Fun reading and at the same time thought provoking …..well written….
ತಾಳಿ ತಾಳಿ ಚಿನ್ನದ ತಾಳಿ, ಹೆಣ್ಣಿನ ಬಾಳಿಗೆ ಅದುವೇ ಬೇಲಿ…
the Incident has sparked so many things your article standsout for unique style.
Good article. Interesting reading
ಒಳ್ಳೆಯ ಬರಹ ಅಕ್ಕ… 🙂
“ತಾಳಿ” – “ಭಾಗ್ಯ” …. ಬರಹ ಇಷ್ಟವಾಯ್ತು ಮೇಡಂ …..
ಹ್ಹ ಹ್ಹ… ಲಾಡ್ಜ್-ಗೆಂದೆ, ಕೆಲವು ಪ್ರವಾಸಕ್ಕೆಂದೇ ಕೆಲವು ‘ಫ್ಯಾಮಿಲಿ’ ತಾಳಿಗಳು ಸಿದ್ಧವಾಗುತ್ತವೆ… ಅದೊಂದು ದುರಂತವೂ ಇದೆ… ಒಮ್ಮೆ ವಿದೇಶಿಯೋಬ್ಬನಿಗೆ ತಾಳಿ ಮಹತ್ವ ವಿವರಿಸುವುದರಲ್ಲಿ ಸುಸ್ತಾಗಿದ್ದೆ… ಅಲ್ಲಿ ಉಂಗುರ ಭಾಗ್ಯವಿದೆ… ನಾನಾಗ ಎರಡು ಉಂಗುರ ಹಾಕುತ್ತಿದ್ದೆ… ನನ್ನ ಸಕತ್ತು ಛೇಡಿಸಿದ್ದ!
taali bhagya…yaariguntu yaarigilla!!
ಪುಣ್ಯ ನಮ್ಮ ಕನಸಿಗಿನ್ನೂ ಕನ್ನಡಿ ಬಂದಿಲ್ಲ
Abbba……… Entha mahan ‘Thaali” idu
ಯೋಚನೆಗೆ ಹಚ್ಚುವಂತಿದೆ. ಯಾವ ಸಾಲು, ಓದಿದಾಗಲೂ ಇದೆ”ಸರಿ” ಅಂತ ಮನಸು ಹೇಳುವ ಹಾಗಿದೆ ತುಂಬಾ ಚೆನ್ನಾಗಿದೆ.
ಸದ್ಯ!! ಮತ್ತೆ ಈ ತಂಪಿನ ತಾಣಕ್ಕಾದರೂ ವಾಪಸ್ ಬಂದೆಯಲ್ಲ ತಂಗೀ!
‘ಹೋಗಿ ಬರುತ್ತೇನೆ ನಮಸ್ಕಾರ’ ಅಂದು ಬಿಟ್ಟಿದ್ದೆಯಲ್ಲ ಅಂತ ಮನಸ್ಸು ತುಂಬಾ ವ್ಯಥೆಪಟ್ಟಿತ್ತು.
ಕೂತು ಕ್ಯೋಳೋಕ್ಕೆ ನಮ್ಮಂತೋರಿರೋವರ್ಗೂ ಇಷ್ಟು ಸೆಂದಾಗಿ ಯ್ಯೋಳೋದನ್ ಮಾತ್ರಾ ಎಂದಿಗೂ ನಿಲ್ಲಿಸಬೇಡಮ್ಮಾ…. 😉