
ಐ ನಮ್ ತಾತ ಅಟಿ ಕಟ್ಸಿರದೇ ಸರಿ ಇಲ್ಲ. ಇನ್ನೊಂದ್ ನಾಕಡಿ ಎತ್ತರ ಮಾಡಿದ್ರಾಯ್ತಿರ್ನಿಲ್ವ? ಗ್ವಾಡ ನೋಡಪ್ಪ ಒಂಬತ್ ಇಂಚು. ಬರೀ ಮೊಣ್ಣೇ ತುಂಬದ ಒಳಗ ಜಗಲಿ ಮೇಲ್ ಕೂತು ಮಾತಾಡ್ತಿದ್ದಾಗ ಇಂವ ಬಂದ. ಆ ಪುಣ್ಯಾತ್ಮ ಅಟ್ಟಿನಾರ ಕಟ್ಟುದ ನೀವ್ ಸದ್ಯಕ್ಕ ಹಂಚ್ ಕೈಯಾಡುಸ್ಕಳಿ ಸಾಕು. ಆ ಕಾಲಕ ಇಷ್ಟ್ ಮಾಡರಲ್ಲ ಅನ್ನಿಲ್ಲ, ಬಿಲ್ಡಿಂಗ್ ಕಟ್ಟಬೇಕಾಗಿತ್ತಂತ…ಇಟ್ಟುಂಡ್ಕಂಡ್ ಮನಿಕಳಿ ಓಗಿ ಮೂದೇವ್ಗಳೆ ಅಂತ ನೀವಾಳಿಸಿದ.ಅವನ ಮಾತೇ ಹಾಗೇ ಖಡಕ್ ಅಂದ್ರೆ ಖಡಕ್. ಆದ್ರೆ ಯಾರನ್ನೂ ನೋಯಿಸೋ ಉದ್ದೇಶ ಇರುತ್ತಿರಲಿಲ್ಲ. ಬದಲಾಗಿ ಪ್ರೀತಿ, ಕಾಳಜಿಗಳಿರುತ್ತಿದ್ದವು.
ಹೆಸರು ಬೈರಾಚಾರಿ. ನಿಜ ಹೇಳಬೇಕಂದರೆ ಇದು ಅವನ ಅಫಿಶಿಯಲ್ ನೇಮು. ಊರೆಲ್ಲ ಅವನನ್ನ ಕರೆಯುತ್ತಿದ್ದದ್ದು ಮರಿ ಅಂತ. ಬೈರಾಚಾರಿ ಮರಿ ಹೇಗಾದನೋ ನನಗೂ ಗೊತ್ತಿಲ್ಲ. ಊರಿನ ಬೀದಿ ಲೈಟುಗಳನ್ನ ನೋಡಿಕೊಳ್ಳೋದು, ಟ್ಯಾಂಕ್ ತುಂಬಿಸಿ ಊರ ನಲ್ಲಿಗಳಿಗೆ ನೀರು ಬಿಡೋದು, ಊರ ಪಂಪ್ಸೆಟ್ಗಳ ಮೋಟಾರು ಸ್ಟಾಟರುಗಳ ರಿಪೇರಿ, ಇದೆಲ್ಲ ಕೆಲಸಗಳಿಗೂ ಮರಿ ಎಲ್ಲರಿಗೂ ಬೇಕಾಗಿದ್ದ. ಯಾವ ಎಲೆಕ್ಟ್ರಾನಿಕ್ ಡಿಪ್ಲೋಮೋ, ಎಂಜಿನಿಯರಿಂಗ್ನೂ ಓದಿರಲಿಲ್ಲ. ಮರಿ ತಂತಾನೇ ಅದು ಹೇಗೋ ಕಲಿತು ಈ ಕೆಲಸಗಳನ್ನ ಮಾಡುತ್ತಿದ್ದ. ಬೀದಿ ಲೈಟು, ನೀರು ಕೆಲಸಗಳನ್ನೂ ಮಾಡಲು ಪಂಚಾಯಿತಿಯವರೇನೂ ಅವನನ್ನು ನೇಮಿಸಿರಲಿಲ್ಲ. ಸ್ವ ಇಛ್ಛೆಯಿಂದ ಮಾಡುತ್ತಿದ್ದ .ಅವನ ಹೆಸರಿನ ಹಾಗೆ ಇದು ಕೂಡ ಅವನ ಅನಫಿಶಿಯಲ್ ಕೆಲಸಗಳಾಗಿದ್ದವು.
ಬೋರ್ವೆಲ್ ಒಳಗೆ ಇಳಿಬಿಟ್ಟಿದ್ದ ಮೋಟಾರು ಕೆಟ್ಟುನಿಂತಿತ್ತು. ಅದನ್ನ ಹೊರಕ್ಕೆ ಎತ್ತಿ ರಿಪೇರಿ ಮಾಡಬೇಕಿತ್ತು. ಇದು ಮೇಲಕ್ ಬರಲ್ಲ ಕಲ್ಗಳು ತಡ್ಕಂಡಂವ. ಕಷ್ಟಬಿದ್ದು ಎತ್ತುದ್ರೂವ ಅದು ಓದಂಗೇ ಲೆಕ್ಕ. ಅದರ ಬದ್ಲು ಆ ಮೋಟರ ಒಳಕ್ ತಳ್ಬುಟ್ಟು ಹೊಸ ಮೋಟರ್ ತಂದಾಕಿ ಅಂದಿದ್ದ ಮರಿ. ಅಣ್ಣಾಈ ಮರಿನ ನಂಬ್ಕೊಂಡ್ ಕೂತ್ಕೋಬೇಡಿ. ತಮಿಳುನಾಡಲ್ಲಿ ಯಾರೋ ಎಕ್ಸ್ಪರ್ಟ್ ಗಳಿದಾರಂತೆ. ಏನೆಲ್ಲ ಹೊಸದು ಬಂದಿದೆ ಈಗ. ನಾಕು ಜನರನ್ನ ಕೇಳಿ ನೋಡಿ ನಾನು ಹೇಳಿ ನೋಡಿದೆ. ಯಾವ್ ತಮಳ್ನಾಡನವರ್ಯಾಕ ಬಾಂಬೆದವರ್ ಕರ್ಕಂಡ್ ಬಾ, ಒರದೇಸ್ದವರ್ ಕರ್ಕಂಡ್ ಬಾ. ಯಾರ್ ಬಂದ್ರೂ ಅಷ್ಟೀಯೇ. ಅಪ್ಪ ಶರಾ ಬರೆದರು. ನಾನು ಪಟ್ಟು ಬಿಡಲಿಲ್ಲ. ನಾಕೈದು ಪ್ರಯೋಗಗಳಾದವು. ಕಡೆಗೆ ಮರಿಯ ಮಾತೇ ನಿಜವಾಗಿ, ನಾನು ಸೋತಿದ್ದೆ. ಪುಸ್ತಕದ್ ಬದನಕಾಯಿ ತಟ್ಟಗ್ ಬಂದದವ್ವಾ? …ನಾವೇನ್ ಹೊಟ್ಟಕಿಚ್ಚಗ್ ಯೋಳುದ್ವೇನೋ…. ನಿಮ್ಮಪ್ಪನ ಕೈಲಿ ಒಸ ಮೋಟರ್ ತರುಸ್ಬುಟ್ಟು ನೀರ್ ತಕ್ಕಂಡ್ ನನ್ ತ್ವಾಟಕ್ ಬುಟ್ಕತಿದ್ನ ? ಆ ನೀರ್ಲಿ ಭತ್ತ ಬೆಳ್ಕಂಡ್ ನಾ ಉಣ್ಣಬೇಕಾಗಿತ್ತ? ಬೆಳದದು ನನ್ನಟ್ಟಿಗ್ ಬಂದ್ ತುಂಬ್ಕತಿತ್ತ? ಯೋಳ್ದೋರ್ ಮಾತ್ ಕ್ಯೋಳ್ನಾರ್ದೆ ಊರೂರ್ ಮೇಲೋಗ್ ಕರ್ಕಂಡ್ ಬಂದ್ರಿ. ಅದೇ ದುಡ್ಡಗ ಒಸ ಮೋಟರೇ ಬರಾದಲ್ಲ. ನಾಕಕ್ಸರ ಕಲ್ತ್ಬುಟ್ರ ಆಗೋಯ್ತೇನೋ….. …ಅವನು ತನ್ನ ಎಂದಿನ ಶೈಲಿಯಲ್ಲಿ ನನಗೆ ನಾನ್ಸ್ಟಾಪ್ ಮಂಗಳಾರತಿ ಮಾಡಿದ್ದ. ಸಾಕ್ ನಿಲ್ಸು ಮಾರಾಯ ಅಂತ ಎದ್ದುಹೋಗಿದ್ದೆ.
ಊರ ಬೀದಿ ಲೈಟು ಕೆಟ್ಟು ನಿಂತರೆ ಇವನು ದೇವಲಾಪುರದ ಗ್ರಾಮಪಂಚಾಯಿತಿ ಆಫೀಸಿಗೆ ಹೋಗಿ ಲೈಟು ತರುತ್ತಿದ್ದ. ಟಿ ಸಿ ಸುಟ್ಟುಹೋದರೆ ಕಡಕೊಳದ ಲೈಟಾಫೀಸಿಗೆ ಫೊನ್ ಮಾಡಿ, ಅವರು ಬಂದು ಹೋಗೋವರೆಗೂ ಜೊತೇಲಿದ್ದು ತಾನೂ ಒಬ್ಬ ಕೆಇಬಿ ಆಫಿಸಿನವನೇ ಏನೋ ಎಂಬಂತೆ ಕೆಲಸ ಮಾಡುತ್ತಿದ್ದ. ತುಂಬ ದಿನಗಳವರೆಗೂ ಅವನು ಕೆಇಬಿ ಕೆಲಸಗಾರ ಅಂತಲೇ ನಾನೂ ನಂಬಿಕೊಂಡಿದ್ದೆ ಕೂಡ. ಬಹುಶಃ ಅವನು ಯಾವಾಗಲೂ ಹಾಕುತ್ತಿದ್ದ ಕೊಳಕಾದ ಹಸಿರು ಚಡ್ಡಿ, ಟೀಶರ್ಟ್, ಜೇಬಿನಲ್ಲಿ ಯಾವಾಗಲೂ ಇರುತ್ತಿದ್ದ ಟೆಸ್ಟರ್ ಥರದ ಐಟಂಗಳು, ಜೊತೆಗೆ ತಾನು ಖುದ್ದು ಕೆಇಬಿ ಆಪೀನವನೇ ಅನ್ನುವಂತೆ ಅವನಾಡುತ್ತಿದ್ದ ಮಾತುಗಳು, ನನ್ನನ್ನು ಹಾಗೆ ನಂಬಿಸಿರಬೇಕು.
ಇಷ್ಟೆ ಅಲ್ಲ, ನೀರಿನ ಟ್ಯಾಂಕಿಯ ಬಿರಡೆ ತಿರುಗಿಸಿ ನಲ್ಲಿಗಳೊಳಗೆ ನೀರು ಬರಿಸುತ್ತಿದ್ದ. ತಗ್ಗಿನ ಬೀದಿಯವರು ನೀರು ಸಣ್ಣಗೆ ಬರತ್ತೆ ಅಂತ ನಲ್ಲಿ ಬಿಚ್ಚಿಟ್ಟು ನೀರು ದಪ್ಪಗೆ ಬರುವಂತೆ ಮಾಡಿಕೊಳ್ತಿದ್ದರು. ಈ ಟೈಮಲ್ಲಿ ಮರಿ ಬಂದರೆ ಮುಗೀತು. ಬೀದಿ ಹೆಂಗಸರಿಗೆಲ್ಲ ಬೈಗುಳ ತಪ್ಪಿದ್ದಲ್ಲ. ಹೀಗ್ ಟ್ಯಾಪ್ ಬಿಚ್ಚಾಕಿದ್ರೆ ಮೂರ್ ದಿನ ನೀರ್ ಬುಡಲ್ಲ, ಅಂತ ಹೆದರಿಸ್ತಿದ್ದ. ಇಷ್ಟಾದರೂ. ಪಂಚಾಯಿತಿಯಟ್ವರಾಗಲೀ. ಲೈಟಾಪೀಸಿನವರಾಗಲೀ, ಊರವರಾಗಲೀ ಇದೆಲ್ಲ ಮಾಡೋಕೆ ನೀನ್ಯಾರಪ್ಪ? ಅಂತ ಕೇಳ್ತಿರಲಿಲ್ಲ. ಅದು ಅವನದೇ ಕೆಲಸ ಅನ್ನುವುದು ಎಲ್ಲರ ಮನಸಲ್ಲಿ ಕೂತುಬಿಟ್ಟಿತ್ತು. ಹಾಗೆ ಕೂರುವ ಹಾಗೆ ಅವನು ಕೆಲಸ ಮಾಡುತ್ತಿದ್ದ.
ಹೀಗಿದ್ದ ಮರಿ ಪಂಚಾಯಿತಿ ಎಲೆಕ್ಷನ್ನಿಗೂ ನಿಂತುಕೊಂಡ. ಊರ ಉಪಕಾರಿಯನ್ನು ಊರವರು ಸೋಲಿಸಲು ಕಾರಣಗಳೇ ಇರಲಿಲ್ಲ. ಮರಿ ಗೆದ್ದುಬಿಟ್ಟಿದ್ದ. ಮೆಂಬರಾದ ಮೇಲೂ, ಮುಂಚೆಯೂ ಅವನದು ಅದೇ ಕೆಲಸಗಳು. ಆದರೂ ಮೀಟಿಂಗು, ಗೀಟಿಂಗು ಅಂತ ಹೊಸ ಹುರುಪಿನಲ್ಲಿರುತ್ತಿದ್ದ.ಹೊಸ ನೆಲ್ಲಿ, ಲೈಟುಗಳಿಗೆ ಕೋರಿಕೆ ಸಲ್ಲಿಸೋರಿಗೆ, ಪಂಚಾಯಿತಿಯವರ್ ಬತ್ತರಲ್ಲ ಆವತ್ತಗ್ ಯೋಳ್ ಮಾಡಿಸ್ಕೊಡ್ತೀನಿ ಬುಡಿ ಅಂತಿದ್ದವನು ಈಗ ತಾನೇ ಮೆಂಬರಾಗಿ ಆಯ್ತು ಮಡಿಕೊಡ್ತೀನಿ ಬುಡಿ ಅನ್ನಿತ್ತಿದ್ದ. ಕೆಲಸವಂತು ಆಗುತ್ತಿತ್ತು. ಏನಪ್ಪಾ ಗ್ರಾಮಪಂಚಾಯಿತಿ ಮೆಂಬರು. ಮಾತ್ನೇ ಆಡ್ಸಲ್ವಲ್ಲಪ್ಪ ಈಗ ಅಂತ ನಾವು ರೇಗಿಸಿದರೆ, ಯಾವ್ ಮೆಂಬರಾ ತಕ್ಕಳಿ, ಅವರಿವರ್ ತಲ ಯಾಕ್ ಕೆರಿಬೇಕು, ಊರ್ ಕೆಲ್ಸಗಲಾಗ್ಲಿ ಅಂತ ಮೆಂಬರಾದ್ದು. ಏನ್ ಬಾರೀ ಕೆಲ್ಸವೇನೋ ಇದು? ತೊಂಬತ್ ಸಾವ್ರ ಸಂಬಳ ಎಣಿಸಿರಾ? ತಕ್ಕ ಓಗಪ್ಪ ಮೆಂಬರಾಗಿದ್ದೈ ಅನ್ಬುಟ್ಟು? ಪ್ರಶ್ನೆ ಎಸೆದ. ನೀ ಅದ್ನಾರೂ ಆಗಿದ್ದೈಯಲ್ಲ. ಈಗ್ ಪಂಚಾಯಿತಿ ಮೀಟಿಂಗು ಅಂತ ನಮ್ ಕರ್ದರೋ ನಿನ್ ಕರ್ದರೋ ಯೋಳಪ್ಪ ಮತ್ತೂ ರೇಗಿಸಿದೆವು. ಐ ಕರಿತರ.. ಯಾತಿಕ್ಯ ತಕ್ಕಳಿ. ಆ ಬಡ್ಡೇನ್ ಮೀಟಿಂಗ್ಗಳಿಗೇ ಓಬಾರ್ದು ಅನ್ನುಸ್ತದ ಯಾಕೋ ಬೇಸರಿಸಿಕೊಂಡ. ಏನ ಮರಿ ಇಂಗಂನ್ಬುಟ್ಟೆ? ಮೀಟಿಂಗ್ ಮಾಡ್ಲಿ, ಗ್ರಾಮದ್ ಕೆಲ್ಸ ಮಾಡ್ಲಿ ಅಂತ ನಿಂಗ್ ವೋಟ್ ಆಕುದ್ರ ಮೀಟಿಂಗೇ ಬ್ಯಾಡ ಅಂತಿದ್ದಯಲ್ಲ ಮಾರಾಯ ಅಂದೆವು.

ಯಾವ್ ಮೀಟಿಂಗ? ಮದ್ಲು ಪಂಚಾಯಿತಿ ಆಪೀಸ್ಗ ಎಂಗೋದ್ರು ಕೋಳ್ತಿರ್ನಿಲ್ಲ. ಈಗ ಪಂಚ ಉಟ್ಕಂಡ್ ಬನ್ನಿ. ಪ್ಯಾಂಟ್ ಸಿಕ್ಕಿಸ್ಕಂಡ್ ಬನ್ನಿ ಅಂತರ. ಯಾವ್ ಮೀಟಿಂಗ್ಯ ಹೋಗದು? ಕಾಸಿಲ್ಲ ನಂತವು ಪ್ಯಾಂಟ್ನೂ ಪಂಚನೂ ತಕ್ಕಳಕ ಅಂದಿ. ಆ ಸೆಕೆಟ್ರಿ ಪ್ಯಾಂಟ್ ಪೀಸು ಶರ್ಟು ಎಲ್ಲಾನೂ ತಂದೇ ಕೊಟ್ಬುಟ್ರು ಅಂದ. ಓ.. ತಕ್ಕಳಪ. ಅಂಗಾರ್ ಪ್ಯಾಂಟ್ ಆಕಳದೇ ನೀನು ನಾಳಯಿಂದ ಅಂತ ನಕ್ಕೆವು. ಪ್ಯಾಂಟೂ? ಯಾವ್ ಪ್ಯಾಂಟ? ಆ ಪ್ಯಾಂಟ್ ಬಟ್ಟ ಹರಿಸ್ಬುಟ್ಟು ನಾಕ್ ಚೆಡ್ಡಿ ಆದೋ ವಲಿಸ್ಕಂಡ್ ತಿರಗಾಡ್ತಾವ್ನಿ. ಇದ ಇಲ್ಲೆ ಇಕ್ಕಿ ಇದೀಯೆ ತೋರಿಸಿದ. ನೋಡಿ ನಕ್ಕೂ ನಕ್ಕೆವು.
ಪಂಚಾಯಿತಿ ಸೆಕ್ರೆಟರಿ ಶೇಕ್ರಣ್ಣ ಯಾವಾಗಲೋ ಮನೆಗೆ ಬಂದು. ನೋಡವ್ವ ಪ್ಯಾಂಟ್ ಕೊಟ್ರ ಚೆಡ್ಡಿ ಮಾಡ್ಕಂಡನಲ್ಲ. ನೀವ್ಯಾರು ಒಸಿ ಯೋಳದಲ್ವ ಅಂದ್ರು. ಅಷ್ಟರಲ್ಲಿ ಬಂದ ಮರಿ, ಏನ್ನ ಯೋಳದು? ಯಾರೂ ಯೋಳಂಗೂ ಇಲ್ಲ, ಕ್ಯೋಳಂಗೂ ಇಲ್ಲ. ನಾ ಇರದೇ ಇಂಗ, ಬೇಕಾರ್ ಸೇರುಸ್ಕಳಿ ಬ್ಯಾಡ್ದೇರ್ ಬುಟ್ಟಾಕ್ಬುಟ್ ನೀವ್ ನೀವೇ ಮೀಟಿಂಗ್ ಮಾಡ್ಕಳಿ. ಬ್ಯಾಡ ಅಂದವರ್ಯಾರ? ಅಂತ ಸವಾಲು ಎಸೆದ. ನೋಡವ್ವ, ನಾವ್ ಒಳ್ಳೇದ್ ಯೋಳುದ್ರ ಇಂಗಂತನಲ್ಲ ಅಂದರು. ಇವನನ್ ಬದಲಾಯಿಸಕಾಗಲ್ಲ ಬುಡಿ ಶೇಕ್ರಣ್ಣ ಅಂದಿದ್ದೆ. ಐದು ವರ್ಷಕ್ಕೊಮ್ಮೆ ಪಂಚಾಯಿತಿಯ ಬೇರೆ ಸದಸ್ಯರು ಬದಲಾದರೂ. ಮರಿ ಮಾತ್ರ ಅಲ್ಲಿಯ ಖಾಯಂ ಸದಸ್ಯ.
ಹೀಗೆ ಇವನು ಫಸ್ಟ್ ಟೈಂ ಮೆಂಬರಾದಾಗ ನಾನು ಪಿಯುಸಿ, ನನ್ ತಂಗಿ ಏಳನೇ ಕ್ಲಾಸು. ಇಷ್ಟೊಂದು ಸ್ಪಷ್ಟವಾಗಿ ನೆನಪಿರೋಕೂ ಒಂದು ಕಾರಣವಿದೆ. ಮೆಂಬರಾದ ಮರಿ ಪ್ಯಾಂಟು ಹಾಕಲ್ಲ ಅಂದ ಸರಿ. ಕಡೇ ಪಕ್ಷ ಸೈನಾದ್ರೂ ಮಾಡಬೇಕಲ್ಲ?. ಎಬ್ಬೆಟ್ ಒತ್ತುದ್ರ ಸೈನ್ಗಿಂತ ಸ್ಟ್ರಾಂಗು. ಪೋರ್ಜರಿ ಮಾಡಕಾಗಲ್ಲ ಅಂತೆಲ್ಲ ಮೊದಲಿಗೆ ವಾದ ಮಾಡಿದ್ದ. ಆದರೆ ಸ್ಕೂಲ್ ಮೇಡಮ್ಮು ಈ ಸಲದ ಮಕ್ಕಳ ಸರ್ಟಿಫಿಕೇಟುಗಳಿಗೆ ನೀವು ಸೈನ್ ಮಾಡಬೇಕು. ಕಾರ್ಯಕ್ರಮಕ್ಕೂ ನೀವೇ ಅತಿಥಿ ಅಂದಿದ್ದರಲ್ಲ. ಹಾಗಾಗಿ ಸ್ಕೂಲ್ ಮೇಡಂ ಮುಂದೆ ಹೆಬ್ಬೆಟ್ ಒತ್ತಿ ತೀರಾ ಅವಮಾನ ಮಾಡ್ಕೊಳ್ಳೋದು ಬೇಡ ಅಂತ ನಮ್ಮಟ್ಟಿಗ್ ಬಂದ. ನೀ ಬ್ಯಾಡ, ನೀನ್ ಸರಿ ಬಾ ಅಂತ ನನ್ ಬಿಟ್ಟು ನನ್ ತಂಗಿ ಕೈಲಿ ಸೈನ್ ಹಾಕೋ ಟ್ರೈನಿಂಗ್ ತಗೋಳೋಕ್ ಶುರುಮಾಡಿದ. ಬೈರಾಚಾರಿ ಅಂತ ನಾಕಕ್ಷರ ಕಲಿಸೋವರೆಗೆ ಅವಳಿಗೂ, ಅವನಿಗೂ ಭಾರೀ ಜಗಳಗಳೇ ಆಗಿಹೋಗಿದ್ದವು. ಕಡೆಗೂ ಸೈನು ಮಾಡೋದು ಕಲಿತಾಯ್ತು. ಸ್ಕೂಲ್ ಡೇ ದಿನ. ಮಕ್ಕಳ ಸರ್ಟಿಫಿಕೇಟಿನ ಮೇಲೆ ನಮ್ ಬೈರಾಚಾರಿ ಸೈನ್ ಮಾಡಿದ್ದೂ ಮಾಡಿದ್ದೇ. ನನ್ ತಂಗಿಗೂ ಸರ್ಟಿಫಿಕೇಟು ಸಿಕ್ಕಿತ್ತಲ್ಲ. ಓಡಿಕೊಂಡು ಬಂದು ಇಲ್ನೋಡು ಕುಸುಮಕ್ಕ ಈ ಮರಿ ಏನ್ ಮಾಡಿದಾನೆ ಅಂತ ತೋರಿಸಿದಳು. ಅವನು ಬೈರಾಚಾರಿ ಅನ್ನೋ ಬದಲು ಬೈರಾಬಾರಿ ಅಂತ ಸೈನ್ ಮಾಡಿದ್ದ.! ಎಷ್ಟ್ ಕಷ್ಟ ಪಟ್ ಹೇಳ್ಕೊಟ್ಟೆ ಆದ್ರೂ ಹೀಗ್ ಮಾಡಿದಾನೆ ಅಂತ ಅವಳಿಗೆ ಅಳು. ಟೀಚರ್ ಸರಿ ಇಲ್ಲಾಂದ್ರೆ ಅವನೇನ್ ಮಾಡ್ತಾನೆ ಪಾಪ ಅಂತ ನಾವು ಮತ್ತಷ್ಟು ರೇಗಿಸಿದ್ದೆವು. ಮರಿ ಮನೆಗೆ ಬಂದಾಗ ಅವನ ಮೂತಿಗೆ ಸರ್ಟಿಫಿಕೇಟ್ ಹಿಡಿದು ತರಾಟೆಗೆ ತೆಗೆದುಕೊಂಡಳು. ಸರ್ಯಾಗೇ ಬರ್ದಿನೆಲ್ಲ? ಐ ಬುಡು..ನೀವು ವರ್ಷವೆಲ್ಲ ಬ್ಯಾಗ್ ನ್ಯಾತಾಕಂಡೋಗ್ ಕಲ್ತಿದ್ದರಿ. ನಾನು ನಾಕ್ ದಿನಕ್ ಕಲ್ತಿನಿ. ಯಾರ್ ಮೇಲು ಯೋಳಿ ಮತ್ತ? ಏನೋ ಒಂದಕ್ಸರ ತಪ್ಪಾದ್ರೇನಾಗೋದ್ದು? ಆಕಾಸ ಬಂದ್ ಬಿದ್ದೋದ್ದ? ಸುಮ್ನೋಗಿ, ಅಂತ ಸಮರ್ಥಿಸಿಕೊಂಡ.
ವಿಚಿತ್ರ ಮನುಷ್ಯ. ಈ ಊರಿಗೆ ನನ್ನ ಕೋಳಿಯಿಂದಲೇ ಬೆಳಗಾಗಬೇಕು ಅನ್ನೋ ಅಧಮ್ಯ ಆಸೆ ಅವನಿಗೆ. ಬೀದೀಲಿ ತಿರುಗಾಡೋವಾಗ,ಮರಿ ನೀರ್ ಬುಡಲ್ವ? ಮರಿ ನಮ್ಮಟ್ಲಿ ಒಂದ್ ಲೈಟ್ ಕೆಟ್ಟೋಗದ ನೋಡು, ಮರಿ ಜಮೀನ್ಲಿ ನೀರೇ ಸ್ಟಾರ್ಟ್ ಆಯ್ತಿಲ್ಲ ಬಾ ಒಸಿ ನೋಡ್ಕಂಡ್ ಬರವು. ಮರಿ ಬಾ ಒಸಿ ಮೋಟರ್ ತರಬೇಕು. ಮರಿ ಪೈಪ್ ಒಡ್ದೋಗಿ ನೀರ್ ಸುರಿತಾ ಅದ ನೋಡುಬಾ… ಮರೀ ಮರೀ ಮರೀ ಮರೀ ಎಲ್ಲದಕ್ಕೂ, ಎಲ್ಲರಿಗೂ ಅವನು ಬೇಕಾಗಿದ್ದ. ಈ ಬೇಡಿಕೆಯನ್ನು ಅವನು ಅತ್ಯಂತ ಆನಂದದಿಂದ ಅನುಭವಿಸುತ್ತಿದ್ದ. ಎಷ್ಟೋ ಸಲ ಮಧ್ಯರಾತ್ರೀಲಿ ಎದ್ದು ಬಾ ಅಂದರೂ ಬರುತ್ತಿದ್ದ. ಅದರಲ್ಲೊಂಥರ ವಿಚಿತ್ರ ಆನಂದ ಅವನಿಗೆ. ಐ ನೀ ಇಲ್ದೇರ್ ಕೆಲ್ಸ ಎಲ್ಲಾಯ್ತಿತ್ತು ಬುಡು ಅಂತ್ಯಾರಾದರೂ ಹೇಳಿದರೋ ಮತ್ತೂ ಖುಷಿ. ಕೆಇಬಿ ಇಂಜಿನಿಯರ್ಗೇ ಗೊತ್ತಾಗ್ನಿಲ್ಲ. ನಾ ಸರಿಮಾಡಾಕ್ಬುಟ್ನಲ್ಲ ಅಂತ ಆಗಾಗ ಹೇಳ್ಕೊಂಡು ಬೀಗುತ್ತಿದ್ದ. ನನ್ನ ಮದುವೇಲಿ ಅಪ್ಪ ಅವನಿಗೂ ಬಟ್ಟೆ ತಂದಾಗ ಮಾತ್ರ ಸಿಕ್ಕಾಪಟ್ಟೆ ಎಮೋಷನಲ್ ಆಗಿಹೋಗಿದ್ದ.
ಮೈಸೂರು ಜಿಲ್ಲೇಲಿ ಯಾವ ಹಳ್ಳಿಗೆ ಯಾವ ಇಸವೀಲಿ ಕರೆಂಟ್ ಬಂದು ಅನ್ನೋ ಪಕ್ಕಾ ಮಾಹಿತಿ ಅವನ ಬಳಿ ಇತ್ತು. ಮೊದ ಮೊದಲು ಕರೆಂಟ್ ಕಂಡಾಗಿನ ಹಳ್ಳಿಗರ ರೋಚಕ ಕಥೆಗಳನ್ನೂ ಹೇಳುತ್ತಿದ್ದ. ಊರಿನಲ್ಲೋ.. ಮರಿಗೆ ಮನೆಮನೆ ಇತಿಹಾಸ ಗೊತ್ತಿತ್ತು. ಯಾರಾದ್ರೂ ಹೆಚ್ಚುಕಮ್ಮಿ ಮಾತಾಡಿದ್ರೆ. ಅವರ ವಂಶವೃಕ್ಷ ಹಿಡಿದು ಅಲ್ಲಾಡಿಸುತ್ತಿದ್ದ. ಊರ ಕಡೇ ವ್ಯಕ್ತಿಯಿರಲಿ, ಎಂಎಲ್ಎ ಆಗಿರಲಿ ಅವನ ಖಡಕ್ ನೇರ, ಮೊನಚು ಮಾತಿನ ಶೈಲಿ ಬದಲಾಗ್ತಿರಲಿಲ್ಲ.
ಮೊನ್ನೆ ಉಗಾದಿಗೆ ಹೋದಾಗ ಸಿಕ್ಕಿದ್ದ ಏನ್ ಮರಿ ದರ್ಬಾರು? ಅಂದೆ. ನಮ್ಮದ್ಯಾವ್ ದರ್ಬಾರಾ ಬನ್ನಿ….ಮೊನ್ನ ಸಿದ್ದರಾಮಯ್ಯ ಸಿಕ್ಕಿದ್ನಲ್ಲ.(ಮುಖ್ಯಮಂತ್ರಿ ಸಿಧ್ದರಾಮಯ್ಯನ್ನ ಅವನು ಹಾಗೆ ಕರೆದದ್ದು. ನಮ್ಮ ಕ್ಷೇತ್ರವೇ. ಮರಿಗೆ ಮುಖ ಗುರುತು ಹಚ್ಚವಷ್ಟು ಪರಿಚಯವಿದ್ದರೆ ಆಶ್ಚರ್ಯವಿಲ್ಲ.) ಸುವರ್ಣ ಗ್ರಾಮ ಯೋಜನೆ ಸ್ಯಾಂಕನ್ ಮಾಡಿಸ್ಕಂಡ್ ಬಂದಿವಿ ನಮ್ಮೂರ್ಗ.. ಊರೆಲ್ಲ ಟಾರ್ ರೋಡಾಯ್ತದ. ನೀರ್ಗ ಯಾರೂ ಕಚ್ಚಾಡಬಾರದು ಅಂಗ್ ಮಾಡಾಕ್ತೀನಿ. ಎರಡ್ ಟ್ಯಾಂಕು ಮಡಗಸ್ತೀನಿ. ಕೆಇಬಿ ಪವರ್ ಸ್ಟೇಷನ್ನೂ ನಮ್ಮೂರ್ಗೇ ಬತ್ತಾ ಅದ. ನೀವಿಲ್ಲೆ ಕುಂತ್ಕಂಡ್ ದಾರಾವಾಯಿ ಬರ್ಕಬೋದು. ಇಪ್ಪತ್ನಾಕ್ ಗಂಟ ಕರೆಂಟ್ ಕೊಡ್ತಿವಿ ಅಂತೇನೇನೋ ಹೇಳಿದ.
ಆಮೇಲೆ ನಮ್ಮನೆ ವಿಚಾರಕ್ ಬಂದ. ಎಣ್ಮಕ್ಕ ಇಬ್ರೂ ಸಂಪಾದನ ಮಾಡ್ತಿದ್ದರಿ ಈ ಅಂಚನ್ ಮನನೆಲ್ಲ ಕಿತ್ತಾಕ್ಬುಟ್ಟು ಅಟ್ಟಿ ಕಟ್ಟದಲ್ವ ಅಂದ. ಇದೇ ಸಾಕು ಬುಡು ಮರಿ. ಇಲ್ಯಾತಕ್ ಮನೆ? ಅಂದೆ. ಅಂಗದ್ರೇನ? ಸಿಟಿ ಸೇರ್ಕಂಡು ನೀವು ತಾರಸಿಲಿರದು. ನಿಮ್ಮ ಕಷ್ಟಬಿದ್ದು ಓದ್ಸಿರಾ ಪಾಯ್ಗಳು ಅಂಚಿನ್ ಮನಲಿರದಾ? ಬಿಟ್ಟಿ ಕಟ್ಟುಸ್ಕೊಡ್ತಿದ್ರ್ಯಾ? ಮಾರ್ಕಳದೇ, ಕೇರ್ಕಳದೇ ಆಸ್ತಿ ಮಡಗಿಲ್ವ? ಅಂದ. ಆಯ್ತು ಬಿಡು ಮನೆ ಕಟ್ಸಿ ವೈರಿಂಗ್ ಕೆಲ್ಸ ನಿನಗೇ ಕಾಂಟ್ರ್ಯಾಕ್ಟ್ ಕೊಡಣಂತೆ. ಈಗ್ ನಿಂತ್ಕೋ ಒಂದ್ ಫೋಟೋ ತೆಗೀತೀನಿ ಅಂದೆ. ಯಾತಿಕ್ಯಾ? ನನ್ ಪೋಟ? ಅಂದ. ನಿನ್ ಬಗ್ಗೆ ಒಂದ್ ಲೇಖನ ಬರಿಬೇಕು ನಿಂತ್ಕೋ ನಾವ್ಯಾವ್ ದೊಡ್ ಮನುಸ್ರು ಅಂತ್ಲಪ್ಪ. ಏನೇನಾರ ಬರ್ದು ಜನ ಒದಿಕಂಡ್ ಬಂದರು ಆಮೇಲ. ಯಾವ್ ಪೇಪರಲ್ ಬಂದದು ಕೇಳಿದ. ಅದು ಪ್ರಿಂಟಾಗಲ್ಲ. ಅವಧಿ ಅಂತ ಕಂಪ್ಯೂಟರ್ ಪೇಪರು. ಕಂಪೂಟರ್ಗಾಕಿರ್ಯಾ. ನೋಡ್ತಿವಿ ಬುಡಿ ನಮ್ ಹಾಲಿನ್ ಡೈರಿಲಿಲ್ವ ಕಂಪೂಟರು? ಅಂದ ಅಲ್ಲಿ ಬರಲ್ಲ ಮರಿ. ಡೈರೀಲಿ ಇಂಟರ್ನೆಟ್ ಇಲ್ಲ.. ಹೋಗ್ಲಿ ಬಿಡು. ಬಂದ್ ಮೇಲ್ ನಾನೇ ತೋರಿಸ್ತೀನಿ. ಅಂತ ಫೊಟೋ ಕ್ಲಿಕ್ಕಿಸಿದೆ.
ಇದಾಗಿ ತಿಂಗಳು ತುಂಬಿತ್ತೋ ಇಲ್ಲವೋ.. ಮಧ್ಯರಾತ್ರೀಲಿ ನನ್ನ ಫೋನು ಬಡಕೊತು. ನನ್ನ ಅಣ್ಣನ ಮಗ. ಅಕ್ಕ.. ನಮ್ಮೂರ್ ಮರಿ ಇದ್ನಲ್ಲ ಅವನು ಸತ್ತೋಗ್ಬಿಟ್ಟ ಘಕ್ಕನೆ ಎದ್ದು ಕೂತೆಏನಾಗಿತ್ತೋ ಅಕ್ಕ ಊರಲ್ಲಿ ಯಾರ್ದೋ ಗೃಹಪ್ರವೇಶ ಇತ್ತು. ಲೈಟಿರ್ಲಿಲ್ಲ ಸರಿಮಾಡ್ತೀನಿ ಅಂತ ಹೋದ ಶಾಕ್ ಹೊಡೆದು ಸತ್ತೋದ ಅಂದ. ನನ್ನ ನಿದ್ದೆ ಹಾರಿಹೋಗಿತ್ತು.
ಮರುದಿನ ಅಮ್ಮ ಫೋನು ಮಾಡಿ ಸುತ್ತ ಮುತ್ತಲ ಊರಿಂದೆಲ್ಲ ಜನ ಬಂದಿದ್ರು. ಒಬ್ಬ ಮಿನಿಸ್ಟರಿಗೆ ಸೇರುವಷ್ಟು ಜನ ಸೇರಿದ್ರು. ಹೆಂಗಸು ಗಂಡಸು ಅನ್ನದೇ ನಮ್ಮೂರ ಜನರೆಲ್ಲ ಇನ್ನಿಲ್ಲದ ಹಾಗೆ ಗೋಳಾಡಿಬಿಟ್ರು ಅಂದರು.
ಊರು ಆಪ್ತಬಂಧುವನ್ನ ಕಳೆದುಕೊಂಡಿದೆ. ನಾನು ಮುಂದಿನ ಸಲ ಊರಿಗೆ ಹೋದರೆ ಮರಿ ಇರುವುದಿಲ್ಲ. ಮನೆಯ ಬಲ್ಬುಗಳು, ಊರ ನೆಲ್ಲಿಗಳು, ಲೈಟು ಕಂಬಗಳು, ನಮ್ಮ ತೋಟದಲ್ಲಿನ ಗೇಟು, ಫೆನ್ಸಿಂಗು. ಡ್ರಿಪ್ ವೈರುಗಳು, ಮೋಟರು, ಪಂಪ್ ಹೌಸು. ಎಲ್ಲವೂ ಅವನನ್ನು ನೆನಪಿಸುತ್ತವೆ.
ಅಂಕಣದ ಪದಮಿತಿ ಮೀರಿ ಎಷ್ಟೋ ಹೊತ್ತಾಗಿದೆ. ಆದರೂ ಮರಿಯ ಬಗ್ಗೆ ಈಗಿನ್ನೂ ಬರೆಯಲು ಆರಂಭಿಸಿದ್ದೇನೆ ಅನಿಸುತ್ತಿದೆ.
ಕುಸುಮಬಾಲೆ ಕಾಲಂ : ಬೈರಾಚಾರಿ ಎಂಬ ಗ್ರಾಮಬಂಧು
ನಿಮಗೆ ಇವೂ ಇಷ್ಟವಾಗಬಹುದು…

ishtavaaytu madam….baraha. sarkaaradinda sahaaya sikkada “mari” bagge odi bejaaraytu…..
ಕರೆಂಟು,ನೀರು,ಚರಂಡಿ,ಬೀದಿ ಲೈಟು ಎಲ್ಲದರ ಹೊಣೆಹೊತ್ತು ಸಂಬಳ, ಲಾಭಗಳಿಲ್ಲದೇ ನಿಸ್ವಾರ್ಥ ಊರಸೇವೆ ಮಾಡಿ ದಿವಂಗತರಾದ ಮೈಸೂರು ಪಕ್ಕದ ಆಯರಹಳ್ಳಿಯ ಗ್ರಾಮಪಂಚಾಯತಿ ಸದಸ್ಯ ಬೈರಾಚಾರಿಯವರಿಗೆ ‘ಅವಧಿ’ಯಲ್ಲಿ ನುಡಿನಮನ ಸಲ್ಲಿಸಿದ ಕುಸುಮಬಾಲೆ ಅವರಿಗೆ ವಂದನೆಗಳು.
ಮನ ತಟ್ಟಿದ ನಿರೂಪಣೆ….
ಬೈರಾಚಾರಿ ಬಂದು ಎದುರಿಗೇ ನಿಂತ ಹಾಗೆ..!!
ಆಡು ಭಾಷೆಯಿಂದ ಸಡನ್ ಆಗಿ ಗ್ರಾಂಥಿಕಕ್ಕೆ ಬಂದದ್ದು ಗೊತ್ತಾಗದಷ್ಟು ಚೆನ್ನಾಗಿ ಬರೆದಿದ್ದೀರಿ….
ಅದಕ್ಕಿಂತ ಹೆಚ್ಚು effective ಅಂದರೆ ಮರಿಯ ವ್ಯಕ್ತಿತ್ವ..ಇಂಥ ಕರ್ಮಯೋಗಿಗಳು ಆಗ ಹಳ್ಳಿಗೊಬ್ಬರು ಇದ್ದರು. ಒಳ್ಳೆಯದೆಲ್ಲ ಕಣ್ಮರೆಯಾಗುತ್ತಿರುವ ಈ ದಿನಗಳಲ್ಲಿ ಅವರೂ ಕಾಣದಾಗುತ್ತಿದ್ದಾರೆ…
ಆ ಸರಣಿಯಲ್ಲಿ ‘ಮರಿ’ಯ ಕಣ್ಮರೆಯೂ ಒಂದು.
chennagide… hoda vara ivara photo nodi kotohaladinda idde..
ಕೊನೆಗೆ ಮರಿ ಸತ್ತ ಸುದ್ದಿ ಓದಿ ನನಗೇ ಕರೆಂಟ್ ಶಾಕ್ ಹೊಡೆದಂಗಾಯ್ತು.ಅವನ ಆತ್ಮಕ್ಕೆ ಶಾಂತಿ ಸಿಗಲಿ.
ಮರಿ ದೇವರು… ಉಘೆ ಉಘೆ.
ಅದ್ಭುತ ಲೇಖನ
Jeevanmukhi lekhana…! Kayakave jeeva ansukondavana jeeva adakke samarpisikondubittitu. Intavaru nadedaduva atmakategalu… Namma makkalige helale bekada jeevanmuki saakshigalivaru…