ಸುದ್ದಿ 1-
“ ಮತ್ತೊಂದು ಅತ್ಯಾಚಾರ ಪ್ರಕರಣ ಬೆಳಕಿಗೆ. ಗ್ರಾಮಸ್ಥನಿಂದಲೇ ಮಹಿಳೆಯ ಮೇಲೆ ಅತ್ಯಾಚಾರ. ಎಲ್ಲೆಡಿ ವ್ಯಾಪಕ ಖಂಡನೆ” – ಹೆಡ್ಲೈನು. ….ಟಿವಿ ಪರದೆಯ ಮೇಲೆ ವಿಷುವಲ್ಸ್ ಬರುತ್ತದೆ. ಅದರ ಮೇಲೆ ಆಂಕರ್ ಸುದ್ದಿಯ ವಿವರ ಓದುತ್ತಾಳೆ. ಗಂಡನ ಬೈಟ್ ಬರುತ್ತದೆ, ನಂತರ ಗ್ರಾಮಸ್ಥರ ಅಥವಾ ಪಂಚಾಯಿತಿದಾರರ ಫೊನೋ ತೆಗೆದುಕೊಳ್ಳಲಾಗತ್ತೆ. ತದನಂತರ ಯಾವತ್ತೂ ಹಳ್ಳೀನೇ ನೋಡಿರದ ಆಂಕರ್ ಹಳ್ಳಿಗಳಲಿ ಅತ್ಯಾಚಾರದ ಪ್ರಕರಣಗಳು ಹೇಗಾಗುತ್ತವೆ. ಎಲ್ಲಾಗುತ್ತವೆ ಅಂತೆಲ್ಲಾ ಹೇಳುತ್ತಾಳೆ(ನೆ). ಸುದ್ದಿ ಮುಂದುವರೆಯುತ್ತದೆ….ಸುದ್ದಿಯಾಗುತ್ತದೆ.
ನಡೆದದ್ದು:
ಸದರಿ ಅತ್ಯಾಚಾರಕ್ಕೊಳಗಾದಳೆಂದು ಸುದ್ದಿಯಾದ ಮಂಜಿ, ಮತ್ತವಳ ಗಂಡ ಸೀನ ಇಬ್ಬರೂ ಪ್ರೀತಿಸಿ ಮದುವೆಯಾದವರು. ಮುದ್ದಾದ ಗಂಡು ಮಗುವೂ ಆಯ್ತು. ಬಿಪಿಎಲ್ ಸಂಸಾರ. ಎಲ್ಲ ಕಡೆ ಕೂಲಿ ಹೆಚ್ಚಿತು. ಸೀನ ಅಕ್ಷರವೊಂದು ಕಲೀಲಿಲ್ಲ ಅಷ್ಟೆ. ಆದರೆ ಮಹಾ ಬುದ್ದಿವಂತ, ಜನರಲ್ ನಾಲೆಜ್ ಅಂತಾರಲ್ಲ, ಅದಕೇನೂ ಕೊರತೆ ಇಲ್ಲ. ಊರಲ್ಲಿ ಕರೆದವರಿಗೆ ಕೂಲಿಗೆ ಹೋಗ್ತಿದ್ದವನು, ನಿಧಾನಕ್ಕೆ ಮೈಸೂರಿಗೆ ಹೋಗೋಕೆ ಶುರು ಮಾಡಿದ. ಊರ ಜಮೀನುಗಳಲಿ ದಿನಕ್ಕೆ ಮುನ್ನೂರು , ಮೈಸೂರಲ್ಲಿ ಐನೂರು. ನೆಲ್ಲಿ ಕೆಲಸ, ಗಾರೆ ಕೆಲಸ ಮಾಡೋದು ಕಲಿತು ಯಾವುದಕ್ಕೂ ಸೈ ಅನಿಸಿಕೊಂಡುಬಿಟ್ಟ. ಹೆಂಡತಿ ಮಗನಿಗೆ ಕೇಳಿದ್ದು ಕೊಡಿಸುವಷ್ಟು ಶಕ್ತಿ ಇತ್ತು. ಇನ್ನಿವಳು ಮಂಜಿ. 9ನೇ ಕ್ಲಾಸು ಓದಿದವಳು. ಹತ್ತು ಮುಗಿಸಲಿಲ್ಲ. ಓಡಿಹೋಗಿ ಮದುವೆಯಾದಳು. ಹೆತ್ತಳು. ಆಮೇಲೆ ಸ್ತ್ರೀಶಕ್ತಿ ಸಂಘದವರ ಜೊತೆ ಸೇರಿ ಚೀಟಿ ಕಟ್ಟೋಕೆ ಶುರುಮಾಡಿದಳು. ಧರ್ಮಸ್ಥಳದವರ ಸಂಘ, ಕೇರಳದ ಸಂಘ ಎಲ್ಲಾ ಕಡೆಯೂ ಮೆಂಬರ್ ಶಿಪ್ಪು ಅವಳದು. ಈ ನಡುವೆ ಅದ್ಯಾವುದೋ ಸಂಘದ ಪಧಾದಿಕಾರಿ ಬೇರೆ ಆಗಿದ್ದಳು. ಸಂಘದ ಕಡೆಯಿಂದ ಟೇಲರಿಂಗ್ ತರಬೇತಿ ಕೊಟ್ಟಾಗ ಕಲಿತವಳು , ತನ್ನ ನಾಜೂಕು ಬುದ್ದಿ ಬೆರೆಸಿ, ಹೊಸ ಹೊಸ ಡಿಸೈನು ಹೊಲಿಯಲು ಶುರುಮಾಡಿ ಇತ್ತಲ ಕೇರಿ ,ಅತ್ತಲ ಕೇರಿಯ ಹರೆಯದವರ ಬ್ಲೌಸುಗಳು ಡಿಸೈನಿನ ಸಲುವಾಗಿ ಮಂಜಿಯ ಮಷೀನನ್ನೇ ಕೇಳ್ತಿದ್ದವು. ಗಂಡ ಹೆಂಡತಿ ಇಬ್ರೂ ಜಾಣರು.ವಯಸೂ ಚಿಕ್ಕದು, ದುಡಿವ ಕಸುವು, ಚಾತಿ ಎರಡೂ ಇತ್ತು. ಬದುಕು ಕಟ್ಟಿಕೊಳ್ಳುವುದು ಕಷ್ಟವೇನೂ ಆಗಿರಲಿಲ್ಲ. ಆದರೆ ವಿಧಿ?
ಮಂಜಿಯ ಎರಡು ವರ್ಷದ ಹಸುಳೆ ದರ್ಶನ್ , (ಮಂಜಿ ಸಿನೆಮಾ ಹೀರೋ ದರ್ಶನ್ ಫ್ಯಾನು. ಮಗನಿಗೆ ಹಠಮಾಡಿ ಅದೇ ಹೆಸರಿಟ್ಟಿದ್ದಳು. ಸೀನ ಕೂಡ ಒಂದ್ಯಾವುದೋ ಆಂಗಲಿನಿಂದ ದರ್ಶನ್ ಥರ ಕಂಡದ್ದಕ್ಕೇ ಅವಳು ಪ್ರೀತಿಸಿದ್ದಂತೆ) ಆ ಮಗುವಿಗೆ ಹೃದಯರೋಗ ಬಂದುಬಿಡ್ತು. ಜಯದೇವ ಆಸ್ಪತ್ರೆಗೆ ಕರೆದುಕೊಂಡು ಬಂದರು. ತಿಂಗಳುಗಟ್ಟಲೆ ಬೆಂಗಳೂರು ವಾಸ. ಆಸ್ಪತ್ರೆಯೇ ನಿವಾಸ. ದುಡಿಮೆ ಇಲ್ಲ ಬರೀ ಖರ್ಚು. ಜೊತೆಗೆ ಆಪರಷನ್ನಿಗೆ ಮೂರ್ನಾಲ್ಕು ಲಕ್ಷ ತೆರಬೇಕಾದ ಅನಿವಾರ್ಯತೆ. ಯಶಸ್ವಿನಿ ಯೋಜನೆ, ವಾಜಪೇಯಿ ಆರೋಗ್ಯಶ್ರೀ ಅದೂ ಇದೂ ಅಂತ ಅಲೆದರೂ, ಸರಕಾರ ಆಪರೇಷನ್ನ ಪೂರ್ತಿ ಹಣವನ್ನೇನೂ ಕೊಡಲಿಲ್ಲ. ಅಲ್ಲಿದ್ದವರ್ಯಾರೋ ಟಿವಿಲಿ, ಪೇಪರಲಿ ಹಾಕಿಸಿ ಯಾರಾದರೂ ಸಹಾಐ ಮಾಡ್ತಾರೆ ಅಂತ ಸಲಹೆ ಕೊಟ್ಟರೂ ಸೀನ ಅದನ್ನು ನಿರಾಕರಿಸಿಬಿಟ್ಟ.”ಇರಾದೊಂದ್ ಗಂಡಗ ಕಾಯಿಲ ಬಂದ್ರ ಊರ್ನೆಲ್ಲ ಬಿಕ್ಸ ಯಾಕ್ ಬೇಡ್ಲಿ? ಅದೆಷ್ಟಾರ ಆಗ್ಲಿ ನಾವೇ ಮಾಡಂವು ಬುಡು” ಅಂದ ಹೆಂಡತಿಗೆ. ಊರಲ್ಲಿ ಹಾಕಿಕೊಂಡಿದ್ದ ಸಣ್ಣ ಪುಟ್ಟ ಚೀಟಿಗಳು, ಮಂಜಿಯ ಸ್ತ್ರೀಶಕ್ತಿ ಸಂಘದಿಂದ ಪಡೆದ ಸಾಲ , ಇದೆಲ್ಲರ ಮೇಲೆ ಶಿವನಾಗನಿಂದ ಪಡೆದ ಎರಡು ಲಕ್ಷ.
ನಾಕು ರೂಪಾಯಿ ಬಡ್ಡಿಗೆ ಕೇಳಿದ ತಕ್ಷಣ ದುಡ್ಡು ಕೊಟ್ಟಿದ್ದ ಸಿವನಾಗ, ಕೂಸು ಉಸಾರಾದ ಮೇಲೆ ಜಯದೇವಕ್ಕೇ ಬಂದು ನೋಡಿಕೊಂಡೂ ಹೋಗಿದ್ದ. ಊರಿಗೆ ಬಂದದ್ದಾಯ್ತು. ಮತ್ತೆ ಇವರ ದಿನಗೂಲಿ ಆರಂಭವಾಯ್ತು. ಸುಮಾರು ಆರು ತಿಂಗಳು ದೇವರ ತಲೆ ಮೇಲ್ ಹೂ ತಪ್ಪಿದ್ರೂ ಸೀನ ಕರೆಕ್ಟ್ ಡೇಟಿಗೆ ಬಡ್ಡಿ ಕೊಡೋದು ತಪ್ತಿರಲಿಲ್ಲ. ಮಧ್ಯೆ ಮಾತ್ರ 15 ದಿನ ಸೀನ ಜ್ವರ ಅಂತ ಮಲಗಿಬಿಟ್ಟ.ಒಂದು ತಿಂಗಳ ಬಡ್ಡಿ ಉಳ್ಕೋತು. ಮುಂದಿನ ತಿಂಗಳು ರಡೆರಡು ತಿಂಗಳ ಬಡ್ಡಿ ಹೊಂದಿಸಲಾಗಲಿಲ್ಲ. ದ್ಯಾಕೋ ಸರಿ ಹೋಗಲ್ಲ ಅಂತ ಬಡ್ಡಿಹಣಕ್ಕಾಗಿ ಸೀನ ಇನ್ಯಾರ ಹತ್ತಿರವೋ ಐದ್ ರೂಪಾಯಿ ಬಡ್ಡಿಗೆ ಸಾಲ ಮಾಡಿದ. ಆದ್ಹೇಗೇಗೋ ಆಗಿ ಈ ಬಡ್ಡೀಮಗನ ಬಡ್ಡಿ ಅನ್ನೋದು ಸೀನನನ್ನ ಚಕ್ರವ್ಯೂಹದಲ್ಲಿ ಸಿಕ್ಕಿಸಿಕೊಂಡುಬಿಡ್ತು. ಸಿವನಾಗ ಕ್ಯಾತೆ ತೆಗೆಯುತ್ತಲೇ ಇದ್ದ.
“ಮಡಗು ಬಡ್ಡಿಕಾಸ” .
“ಒಂದೂವರೆ ವರ್ಷದಿಂದ ಕೊಟ್ಕಂಡ್ ಬಂದಿಲ್ವ? ಲೆಕ್ಕ ಆಕೋ ಕೊಡ್ತೀನಿ. ಸಿನ್ಕಳಲ್ಲ ಕಣಾ”
“ನಿಮ್ ಟೇಮಿಗ್ ನಾವ್ ಕೊಟ್ಟಿಲ್ವ>?
ಬಿಟ್ಟಿ ಕೊಟ್ಯಾ? ಎನಿಸ್ಕಳಲ್ವ ಬಡ್ಡಿ?
ಬಡ್ಡಿ ಎಲ್ಲ ಎಣಿಸ್ತರ, ಕಾಸ್ ಉಟ್ಬೇಕಲ್ಲ? ಜಮೀನು ಗಿಮೀನು ಯಾವ್ ಆಧಾರೂ ಇಲ್ದೆ, ಏಡ್ ಲಕ್ಷ ಕೊಡ್ನಿಲ್ವ? ಬರೀ ನಾಲಗ್ಗೇ?
ಊರ್ಲಿ ಜಮೀನ್ ಮಾರ್ಕಂಡ್. ಮಾರ್ಕಂಡ್ ಎಲ್ಲ ದುಡ್ ತುಂಬ್ಕಂಡರ. ಒಂದ್ ರೂಪಾಯ್ಗೂ ಕೊಡವರವರ. ನೀನೊಬ್ನೇ ಸೆಟ್ಟಿ ಅಲ್ಲ, ಆಧಾರ ಇಲ್ದಿರೋ ಕೂಲಿಗಳಾಗಿರೋದಕ್ ತಾನೇ ನಿನ್ ತಾಂವ್ ನಾಕ್ ರೂಪಾಯಿಗ್ ಸಾಲ ಮಾಡಿರದು?
ಜಾಸ್ತಿ ಮಾತ್ ಬ್ಯಾಡ ಮಡಗಲಾ ಬಡ್ಡಿಯಾ?
ಕೊಡ್ತೀನಿ ಇರು ಮಾಳಾದ್ದೇ.
……………………….. ಈ ಜಗಳಗಳು ಆಗಾಗ್ಗೆ ನಡೆಯುತ್ತಾ, ಬಡ್ಡಿ ಅಮೌಂಟು ಏರಿದಂತೆಲ್ಲ ಜಗಳದ ಕಾವೂ ಏರ್ತಾ ಹೋಯ್ತು. ಒಂದು ದಿನವಂತೂ ಸೀನ. “ಆದ್ರ ಬಡ್ಡಿ ಕಟ್ಟು ಇಲ್ದೇರ್ ನಿನ್ ಎಡತಿ ಕಳಿಸು ಅಂತ ಕೋಪದ ಭರದಲ್ಲಿ ನಾಕು” ಜನರೆದುರು ಅಂದೂ ಬಿಟ್ಟ. ಸೀನ ಬೇರೆ ಯಾರ ಹತ್ತಿರವೋ ಸಾಲ ಮಾಡಿ ಇವನಗೆ ತೀರಿಸಿಬಿಡೋ ತೀರ್ಮಾನ ಮಾಡಿದ. ಬಡ್ಡಿ ಮತ್ತೂ ಒಂದು ರೂಪಾಯಿ ಹೆಚ್ಚೇ ಆಯಿತು.”ಎರಡ್ ಲಕ್ಷಕ್ಕ. ದೂವರೆ ಲಕ್ಷ ಬಡ್ಡೀನೇ ಕಟ್ಟಿನಿ. ಈಗ ಪೂರ್ತಿ ಸಾಲ ತೀರುಸ್ತೀನಿ. ಕೊನೆ ಮೂರ್ ತಿಂಗಳ ಬಡ್ಡಿ ಬುಟ್ಬುಡು” ಅಂದ ಸೀನ. “ಎಂಟಾಣಿನೂ ಬುಡಲ್ಲ. ಈಸ್ಕಳವತ್ತಲ್ ಗ್ಯಾನ ಇರ್ನಿಲ್ವ, ಅಂತ ಸುರು ಮಾಡಿ ಮತ್ತೆ ಹೆಂಡತಿಯ ಸುದ್ದಿಗೇ ಬಂದ ನಾಗ.
ಅವತ್ತು ರಾತ್ರಿ ಸಂಘ, ಮನೇಲಿರೋ ಸಣ್ಣ ಪುಟ್ಟ ಚಿನ್ನ. ಕೆಲಸದಲಿ ಅಡ್ವಾನ್ಸು. ಇನ್ನೊಂದು ಸ್ತ್ರೀಶಕ್ತಿ ಸಂಘದ ಸಾಲ. ಮೇಲೊಂದು ಲಕ್ಷ ಬಡ್ಡಿಸಾಲ ಲ್ಲ ಸೇರಿದರೆ ನಾಗನ ಋಣ ತೀರಿಸಬಹುದು ಅಂತ ಮಂಜಿ ಸೀನ ಲೆಕ್ಕ ಹಾಕಿ ಮುಗಿಸೋ ವೇಳೆಗೆ ನಾಗ ಬಂದ. ಮನೆ ಒಳಗೇ ಬರದೇ ಹೊರಗೆ ನಿಂತೇ ಸೀನನನ್ನ ಕೂಗಿದ. ಅದೇನು ಹೇಳಿದನೋ, ಸೀನ “ ಮಂಜಿ ಒಸಿ ಬತ್ತೀನಿ ಬಾಗಿಲಾಕೋ” ಅಂದು ಹೊರಟ. ಹಿಂದೆಂದೂ ಇರದ ಕಕ್ಕುಲಾತಿಯಿಂದ ಸೀನನ್ನ ಕರಕೊಂಡು ಹೋದ ನಾಗ ಅವನೊಂದಿಗೆ ಪ್ಯಾಕೆಟ್ಟು ಹರಿದ. ದೈರ್ಯ ಏರಿಸಿಕೊಂಡು, ಮಂಜಿಯ ಮೇಲಿನ ಆಸೆ ವ್ಯಕ್ತಪಡಿಸಿದ. ಸೀನ ಮಾತಾಡಲಿಲ್ಲ.
ಮರುದಿನ ಬಸುನ್ಗುಡಿ ಪಕ್ಕದ ಕಾಕನ ಅಂಗಡಿ ಹತ್ತಿರ ನಾಗ ನಿಂತಿದ್ದ. ಸೀನನನ್ನ ದೂರದಿಂದ ನೋಡಿ ಕೊಂಚ ಭಯದಿಂದ ನೋಡದವನ ಹಾಘೆ ನಿಂತಿದ್ದ. ಸೀನ ಬಂದು ಅವನ ಹೆಗಲಿಗೆ ಕೈ ಹಾಕಿ “ಮಂಜಿ ಒಬ್ಬಳೇ ಅವಳ, ನಾ ಒಸಿ ಆಚೆಬೀದೀಲಿ ನೆಲ್ಲಿ ಕೆಲಸ ಯೋಳರ ಮಾಡ್ಬುಟ್ ಬತ್ತಿನಿ “ ಅಂದವನು ಹೊರಟೇಬಿಟ್ಟ. ನಾಗ ತತ್ತರಬಿತ್ತರನೆ ಎಲ್ಲಿತ್ತೋ ಸೀನನ ಮನೆ ಅನ್ನುವಂತೆ ಮೂರೇ ಹೆಜ್ಜೆಗೆ ಹಾರಿದ.
ಮನೆಯೊಳಗೆ ಹೋಗುತ್ತಿದ್ದಂತೆಯೇ ಯಾರೋ ಹೊರಗಿಂದ ಚಿಲಕ ಹಾಕಿದಂತಾಯಿತು. ಯಾರೋ ಕೂಗತೊಡಗಿದರು ಜನ ಗಿಜಿ ಗಿಜಿ ಮಾತಾಡತೊಡಗಿದರು. ನಾಗನಿಗೆ ಏನೊಂದೂ ಅರ್ಥವಾಗದೇ ಚಡಪಡಿಸಿದ. ಮಂಜಿಯನು ಎಷ್ಟು ಮಾತಾಡಿಸಿದರೂ ಅವಳು ಒಂದಕ್ಕೂ ಉತ್ತರ ಕೊಡಲಿಲ್ಲ. ಕೋಪದಿಂದ ಕಾಲಿನಲಿ ಒದ್ದ. ಅವಳು ಲಭೋ ಲಭೋ ಅಂತ ಅರಚಿದಳು. ಬಾಗಿಲು ತೆರಕೊಂಡಿತು. ಊರಿಗೂರೇ ಸೇರಿತ್ತು. ಮಾತಿನ ಚಕಮಕಿ ಆಗುವುದರೊಳಗೆ ನಾಕಾರು ಚಾನಲುಗಳ ರಿಪೋರ್ಟರುಗಳು ಒಂದೇ ಕಾರಿನಲಿ ಬಂದರು. ಟಿವೀಲಿ ನೋಡುತ್ತಿದ್ದ ಚಾನಲುಗಳ ಲೋಗೋ ನಿಜವಾಗಿ ಕಾಣತೊಡಗಿದ ಕೂಡಲೇ ಜನ ಮತ್ತೂ ಸೇರತೊಡಗಿದರು. ಕ್ಯಾಮರಾ ಮೈಕು ಹಿಡಿದವರೆಲ್ಲ ಮತ್ತೇರಿದವರಂತೆ ಮಾತಾಡತೊಡಗಿದರು. ಮತ್ತು ಎಲ್ಲವೂ ಟಿವಿಯಲಿ ಪ್ರಸಾರವಾಗುತ್ತಿತ್ತು.

ಸುದ್ದಿ 2
– ರಕ್ತಬರುವಂತೆ ಮಕ್ಕಳಿಗೆ ಥಳಿಸಿದ ಶಾಲಾಶಿಕ್ಷಕಿ, ಶಾಲೆಯಲ್ಲೇ ಶುರುವಾಗಿದೆ ಜಾತಿ ಬೇದ.- ಹೆಡ್ ಲೈನ್ .
—–ಗ್ರಾಮದ ಸರಕಾರೀ ಶಾಲೆಯಲ್ಲಿ ನಡೆದಿದೆ ಎನ್ನಲಾದ ಘಟನೆ ಇಡೀ ಸಮಾಜವೇ ಬೆಚ್ಚಿಬೀಳುವಂತೆ ಮಾಡಿದೆ. ಶಾಲೆಯ ಮುಖ್ಯ ಶಿಕ್ಷಕಿ……. ಮಕ್ಕಳಿಗೆ ಮನಬಂದಂತೆ ಥಳಿಸಿದ್ದಾರೆ…ಅಷ್ಟೇ ಅಲ್ಲದೇ ಮಧ್ಯಾಹ್ನದ ಬಿಸಿಸಯೂಟದ ವೇಳೆ…….……………ಸುದ್ದಿ ಮುಂದುವರೆಯುತ್ತದೆ.
ನಡೆದದ್ದು- ಅದೊಂದು ಮಿಡ್ಲ್ ಸ್ಕೂಲು. ಸರಕಾರೀ ಪ್ರಾಥಮಿಕ ಶಾಲೆ. ನಾಕು ಜನ ಶಿಕ್ಷಕರು. ಒಬ್ಬ ಮುಖ್ಯ ಶಿಕ್ಷಕಿ. ಒಬ್ಬ ದೈಹಿಕ ಶಿಕ್ಷಕ. ಮತ್ತಿಬ್ಬರು ಹೊಸದಾಗಿ ಡಿ, ಎಡ್ ಮುಗಿಸಿ ಬಂದವರು. ಸದರಿ ಶಾಲೆಗೆ ಒಂದು ಪ್ರಾಥಮಿಕ ಶಾಲೆಯೂ ಇಲ್ಲದ ಚಿಕ್ಕ ಊರಿಂದ ಮಕ್ಕಳು ಕಲಿಯಲು ಬರುತ್ತಿದ್ದರು. ಒಂದೇ ಬಸ್ ಇದ್ದದ್ದರಿಂದ ಸ್ಕೂಲು ಶುರುವಾಗುವ ಒಂದು ಗಂಟೆ ಮುಂಚೆಯೇ ಆ ಸಣ್ಣ ಊರಿನ ಮಕ್ಕಳು ಬಂದಿರುತ್ತಿದ್ದರು. ಒಂದು ದಿನ ಏಳನೇ ತರಗತಿಯ ಒಬ್ಬ ಹುಡುಗ ಮತ್ತು ಐದನೇ ತರಗತಿಯ ಒಬ್ಬ ಹುಡುಗಿ ಇಬ್ಬರೂ ಸ್ಕೂಲಿಗೆ ಬಂದಿದ್ದಾರೆ. ಬ್ಯಾಗು ಇಟ್ಟಿದ್ದಾರೆ. ಆದರೆ ಪತ್ತೆ ಇಲ್ಲ. ಎಷ್ಟು ಹುಡುಕಿದರೂ ಇಲ್ಲ. ಬ್ಯಾಗುಗಳನ್ನು ಪರಿಶೀಲಿಸಿದರೆ ಇಬ್ಬರೂ ನೋಟ್ ಬುಕ್ ಹಾಳೆಗಳ ತುಂಬ “ಬಾಲಿಶ” ಲವ್ ಲೆಟರುಗಳು. ಗಾಬರಿಯಿಂದ ಮೇಡಂ ಅವರ ಪೋಷಕರನ್ನ ಕರೆಸಿದ್ದಾರೆ. ಒಂದಿಷ್ಟು ಮಕ್ಕಳನೂ ಕರೆದು ವಿಚಾರಿಸಿದ್ದಾರೆ.ಅವರಿಬ್ಬರ “ಲವ್” ಬಗ್ಗೆ ಮಕ್ಕಳೂ “ಬಾಲಿಶ”ವಾಗಿ ಏನೇನೋ ಹೇಳಿವೆ. ಪೋಷಕರು “ಬಡ್ಡೆತ್ತವು ಟೀವಿ ಆಕಂಡ್ ಆಕಂಡೇ ಆಳಾಗೋದೋ. ಸಿಗದಾಕಿಬುಡಬೇಕು” ಅಂತ ಹಾರಾಡಿದ ಪೋಷಕರಿಗೆ ಮೇಡಮ್ ಒಂದಿಷ್ಟು ಎಚ್ಚರಿಕೇನೂ ಕೊಟ್ಟಿದಾರೆ. ಅವರನ್ನ ಹೇಗೆ ಹ್ಯಾಂಡಲ್ ಮಾಡಬೇಕು ಅಂತ ತಿಳಿಹೇಳಿದ್ದಾರೆ. ಪೋಷಕರು ಮಕ್ಕಳನ್ನ ಹುಡುಕಿಕೊಂಡು ಹೋಗಿದಾರೆ.
ಇಷ್ಟೆಲ್ಲ ಆದ ಮೇಲೆ ಹೆಡ್ ಮೇಡಮ್ಮು ಕ್ಲಾಸು ತಗೊಳೋಕೆ ಬಂದಿದಾರೆ. ಅವರು ಬೋರ್ಡಿನ ಮೇಲೆ ಬರೀತಿದ್ದಾಗ ಮಕ್ಳು ಈ ಓಡಿಹೋದ ಬಾಲಪ್ರೇಮಿಗಳ ವಿಚಾರ ಪಿಸುಗುಡ್ತಿವೆ. ಮೇಡಮ್ ಕೋಪ ಬಂದು ಬೈದಿದಾರೆ. ಒಬ್ಬ ಹುಡುಗ “ನಾನಲ್ಲ ಮಿಸ್. ಇಂವನೇ—————- ಅಂದ” ಅಂತೇನೋ ಪೋಲಿ ಮಾತು ಹೇಳಿದ . ಅದಾಗಲೇ ಬಾಲಪ್ರೇಮಿಗಳ ವಿಚಾರದಲಿ ತಲೆಕೆಟ್ಟಿದ್ದ ಮೇಡಮ್, ಕೇಳಬಾರದ ಪೋಲೀ ಮಾತು ಎಳೆನಾಲಗೆಯಲಿ ಕೇಳಿ ತಾಳಲಾರದೇ ಎರಡು ಬಿಟಾಯಿಸಿದಾರೆ.
ಹುಡುಗ ಅದೇ ಊರವನು ಮಧ್ಯಾಹ್ನ ಊಟಕ್ಕೆ ಹೋದಾಗ ಸ್ಕೂಲಿಗೇ ಹೋಗಲ್ಲ. ಕೆಲಸಕ್ ಓಯ್ತೀನಿ ಅಂದಿದೆ. ಕಾರಣ ಕೇಳಲು ಅವರವ್ವ ಅವನ ಸಮೇತ ಸ್ಕೂಲಿಗೆ ಬಂದರೆ ಎದುರಾಧವನು ಪಿಟಿ ಮೇಷ್ಟರು. ಅವ್ವ ಮಗನ ವರದಿ ಕೇಳಿ ಪಿಟಿ ಮೇಷ್ಟರು ಮುಖ ಅರಳುತ್ತದೆ.”ಅದೆಂಗ್ಲಾ ಹೊಡದಳು ಆವಮ್ಮ. ಮಕ್ಕಳನ ಮುಟ್ಟಂಗೇ ಇಲ್ಲ ಅಂತ ಗೌರ್ಮೆಂಟೇ ರೂಲ್ಸ್ ಮಾಡದ. ನಾನೂ ನೋಡತ್ತಲೇ ಅಂವನಿ. ಅಂವ ಒಸಿ ಅಂಗೀಯೇ , ತಮ್ ಜಾತಿ ಐಕಳ ಹೊಡ್ಯಂಗಿಲ್ಲ ಬ್ಯಾರೆ ಜಾತಿ ಐಕಳ ಇಡ್ಕಂಡ್ ಚಚ್ತಳ” ಅಂದ. ಈ ಸುದ್ದಿಯನ್ನ ಸದರಿ ಹುಡುಗನ ಜಾತಿಯ ಮುಖಂಡರು, ಪುಂಡ, ಪೋಕರಿಗಳಿಗೆಲ್ಲ ಖುದ್ದು ಹರಡಿದ. ಜಾತಿ ಅಂದ ಕೂಡಲೆ ಎಲ್ಲರೂ ಒಂದು ಕೈ ಆಗಿಬಿಟ್ಟರು. ಸ್ಕೂಲಿಗೆ ಒಂದು ಗುಂಪೇ ಬಂದುಬಿಟ್ಟಿತು. ಅವ್ವ ಮಗ ಇಬ್ಬರಿಗೂ ಮೇಷ್ಟರು ಅದೇನು ಕಿವಿ ಊದಿದ್ದನೋ.” ಇಲ್ನೋಡಿ ರತ್ತ ಸುರೀತಿತ್ತು. ಎಂಗ್ ಹೊಡದಳ ನೋಡಿ ನನ್ ಸವತೀ. ಸಾಕ್ ಮಡಗಿದ್ಲಾ ನನ್ ಗಂಡ ಒಡಿಯಕಾ ಬೋಸುಡಿ,?” ಅಂತೆಲ್ಲಾ ಕೂಗಾಡಿ ಜನ ಸೇರಿಸಿ. ಅದೇ ಪ್ರಶ್ನೇನ ಮೇಡಮ್ಮನ್ನೂ ಕೇಳಿದರು.
ಮೇಡಮ್ಮು ತಾಳ್ಮೆಯಿಂದ ಉತ್ತರಿಸಿದರು.ಆ ಹುಡುಗನನ್ನೂ ಕರೆದು ಪ್ರೀತಿಯಿಂದಲೇ ಕೆಳಿದರು. ಆ ಹುಡುಗ ಬೆಳಗ್ಗೆ ಹೊಡೆದ ಸೇಡಿಗೋ. ತನ್ನ ಕಾರಣಕ್ಕೆ ಇಷ್ಟು ಜನ ಸೇರಿದಾರೆ ಅನ್ನುವ ಕುಸಿಗೋ, ಒಂದು ಮಾಸ್ ಹಿಸ್ಟೀರಿಯಾಗೋ.. ತಾನೇ ಈ ಪ್ರಕರಣದ ಹೀರೋ..ಈಗ ಮೇಡಮ್ ಹೇಳಿದ್ದಕ್ಕೆ ಹ್ಞೂ ಅಂದುಬಿಟ್ರೆ “ಮರ್ಯಾದೆ” ಹೋಗುವ ಭಯಕೋ. ಇನ್ಯಾತಕ್ಕೋ ಉಲ್ಟಾ ಹೊಡೆದ. ತಲೆಗೊಂದು ಮಾತಾಡ್ತಲೇ ಹೋದರು ಜನ. ಮಾತಿಗೆ ಮಾತು ಮಾತಿಗೆ ಮಾತು ನಡೆಯುತ್ತಲೇ ಹೋಯ್ತು. ಜಾತಿ ಪದ್ದತಿಯ ವಿರುದ್ದ ಹೊಸದಾಗಿ ಧನಿಯಾಡಿಸುತ್ತಿದ್ದ ಯುವಕನ ಕಿವಿಗೆ ಮೇಷ್ಟರು “ಈಯಮ್ಮ ಜಾತಿಭೇದ ಮಾಡತ್ತೆ” ಅಂತ ಹೇಳಿದ್ದರಿಂದ ಅವನೂ ಲಾ ಪಾಯಿಂಟು ಕೇಳತೊಡಗಿದ. ಮೇಡಮ್ ತಾಳ್ಮೆ ಪರೀಕ್ಷೆಯಾಗುತ್ತಲೇ ಹೋಯ್ತು. ಮಾತೂ ಜೋರಾಗುತ್ತಾ. ಹೆಂಗಸರ ಗುಂಪಿಂದ “ಸವತಿ” ಲೌಡಿ” ಬೋಸುಡಿ” ಇತ್ಯಾದಿಗಳು ಪುಂಖಾನುಪುಂಖವಾದವು, ಜನರ ಗುಂಪು ಮೇಡಮ್ ಮೇಲೆ ಎರಗುತ್ತಾ ಹೋಗಿ, “ ಮಾತೇನಾಡಿರಿ ಅಳದಾಕರಮ್ಮಿ ಅವಳ ಸೀರೆಯಾ.. ಕತ್ತಲೌಡಿ ಬುದ್ದಿಕಲಿತಳ” ಅಂತ ಯಾರಂದರೋ ಗುಂಪಿನಿಂದ. ಆ ಕೆಲಸಕ್ಕೂ ಕೈ ಹಾಕಿಯೇ ಬಿಟ್ಟರು. ಅಷ್ಟರಲಿ ಮೇಡಂ ಜಾತಿಗೆ ಸೇರಿದ ಗುಂಪೊಂದು ಬಂದು, ಅದೊಂದು ಸಂಗತಿ ಕ್ಷಣದಲಿ ತಪ್ಪಿತು.
ಹ್ಞಾ.. ಈ ನಮ್ಮ ಪಿಟಿ ಮೇಷ್ಟರಿಗೆ ಮೇಡಮ್ ಕಂಡರ್ಯಾಕೆ ದ್ವೇಷ ಅಂದರೆ. ಇದ್ದವನೊಬ್ಬ ಮೇಷ್ಟರು. ಹಾಗಾಗಿ, ಬಿಸಿಯೂಟದ ಸಾಮಾನು ಅವನೇ ತರುತ್ತಿದ್ದ. ಯಾಕೋ ಅನುಮಾನ ಬಂದು, ಮೇಡಮ್ ಲೆಕ್ಕ ಪರಿಶೀಲಿಸಿದರು. ಕಾಕನ ಅಂಗಡಿಯ ತೂಕದ ಮಷೀನು ತರಿಸಿ, ಬೇಳೆ ತೂಗಿದರು. ತುಂಬ ದಿನಗಳ ಕಾಲ ಪರೀಕ್ಷಿಸಿ, ಒಂದಿನ ಕರೆದು ಉಗಿದರು. ಮೇಲಧಿಕಾರಿಗಳಿಗೂ ಬರೆದರು. ಅವರೂ ಬಂದು ಉಗಿದು ಹೋಗಿ ಸಸ್ಪೆಂಡ್ ಮಾಡುವ ಎಚ್ಚರಿಕೆ ಕೊಟ್ಟು ಹೋಗಿದ್ದರು.
ಈ ಗಲಾಟೆಯಾಗುವಾಗ, ಮೇಷ್ಟರೇ ಕೊಟ್ಟ ಐಡಿಯಾದ ಮೇರೆಗೆ, ಜಾತಿವಿರೋಧಿ ಯುವನಾಯಕ ಪ್ರೆಸ್ ನವರನ್ನ ಕರೆಸಿದ. ವರು ಬೇರೆ ಬೇರೆ ಜಾತಿಗಳಿಗೆ ಬೇರೆ ಬೇರೆ ಪಂಕ್ತಿಗಳಲಿ ಕೂರಿಸಿ ಊಟ ಹಾಕ್ತಾರೆ ಅಂದ. ಅವನು ಚೆಂದ ಮಾತು ಕಲಿತಿದ್ದ ಬೇರೆ.ಎಲ್ಲ ಚಾನಲುಗಳ ಲೇಡಿ ಆಂಕರುಗಳ ಜೊತೆಗೂ ಮಾತಿನ ಭಾಗ್ಯ ಅವನಿಗೆ. ಪ್ಯಾನಲ್ ಡಿಸ್ಕಷನಿಗೂ ಬಂದ. ಒಂದು ಚಾನಲ್ ಅಫೀಸಿನ ಮುಂದೆ ಇನ್ನೊಂದು ಚಾನಲ್ ಗಾಡಿ ಅವನಿಗಾಗಿ ಕಾಯುತ್ತಿತ್ತು.ರಾತ್ರಿ ಕಳೆದು ಬೆಳಗಾಗುವುದರೊಳಗೆ ಧುಡೀರ್ ನಾಯಕ ಆಗಿಬಿಟ್ಟ. ಮೇಷ್ಟರಿಗೂ ಥ್ಯಾಂಕ್ಸ್ ಹೇಳಿದ. ಪ್ರತಿನಿಧಿಗಳು ಮಕ್ಳನೇನೋ ವಿಚಾರಿಸಿದರು. ಉಳಿದ ಶಿಕ್ಷಕಿಯರನೂ. ಆದರೆ ಅವರ ಹೇಳಿಕೆಗಳು ಅಬ್ಬರದಲಿ ಮಬ್ಬಾದವು. ಮಿಶ್ರ ಅಭಿಪ್ರಾಯ ಮಕ್ಕಳಿಂದ ಬರ್ತಿವೆ ಅಂತಾಯಿತು. ಪೋಷಕರು. “ಇದ್ಯಾವ್ ಗಾಚಾರವಾ ಐಕಳೇ ನೀವ್ ಮಾತಾಡಬೇಡಿ” ಅಂತ ಮಕ್ಕಳನು ಹೆದರಿಸಿಯೂ ಇದ್ದರು.ಮದುವೆಯಾಗದ ಹೊಸ ಮೇಡಮ್ ಗಳಿಗೂ ಅವರವರ ಊರಿನಿಂದಲೇ ಪೋಷಕರು ಫೋನು ಮಾಡಿ ಎಚ್ಚರಿಸಿದ್ದರು. “ರಗಳೆ ಮಾಡಿಕೋಬೇಡಿ ಮುಂದೆ ಮದುವೆ ಮಾಡೋದಿದೆ” ಉಳಿದಂತೆ ಪಿಟಿ ಮೇಷ್ಟರು ಊದಿದ್ದೇ ಪುಂಗಿ!
ಶಿಕ್ಷಕರೇ ಹೀಗಾದರೆ ಹೇಗೆ? ಅನ್ನುವ ಬಗ್ಗೆ ಕೆಲವು ಚಾನಲುಗಳು ಪಬ್ಲಿಕ್ ಫೋನ್ ಕರೆಗಳನ್ನು ತೆಗೆದುಕೊಂಡವು. ಕೆಲವರಂತೂ ಬೈದೇ ಬೈದರು ಆ ಶಿಕ್ಷಕಿಗೆ. ಸಸ್ಪೆಂಡ್ ಮಾಡಬೇಕೆಂದು ಶಿಕ್ಷಣ ಮಂತ್ರಿಗಳಿಗೆ ಆಗ್ರಹಿಸಿದರು. ಇಶ್ಯೂ ಈ ಮಟ್ಟಿಗೆ ಹೋದದ್ದರಿಂದ ಸಸ್ಪೆಂಡ್ ಆದರು ಕೂಡ. ಆದರೆ ಆಮೇಲೂ ಅವರು ಕೆಲಸಕ್ಕೆ ಬರಲಿಲ್ಲ. ಬರಲು ಮನಸಾಗಲಿಲ್ಲ.
ಮುಗಿಸುವ ಮುನ್ನ: ನಂಬಿ ಇದು ಖಂಡಿತಾ ಕಲ್ಪಿತ ಕಥೆಗಳಲ್ಲ. ನಡೆದದ್ದು. ಇವೆಲ್ಲ ಕಮ್ಮಿ ಅಂದ್ರೆ ಅರ್ಧ ದಿನ ಚಚ್ಚಲಾದ ನ್ಯೂಸ್ ಐಟಂಗಳು. ವಾರದ ಟಿ ಆರ್ ಪಿ ಯಲಿ ಒಳ್ಳೆರೇಟಿಂಗ್ ತಂದುಕೊಟ್ಟ ಬ್ರೇಕಿಂಗ್ ನ್ಯೂಸುಗಳು. ಅಲ್ಲಿ ವರದಿಗಾರರಿಗೂ ಗೊತ್ತಿರದ ನಿಜಗಳು ಬೇರೆಯೇ ಇದ್ದವು.
ಹಾಗಾಗಿಯೇ…
ಸೀನನಂತ ಕೂಲಿಗಾರರ ಬದುಕಿನ ಬವಣೆಯೂ.. ಒಂದು ಮಿಡಲ್ ಸ್ಕೂಲೂ ಇಲ್ಲದ ಊರಲಿ ಆ ಎಳೆಮನಸುಗಳಲಿ ಲವ್ವು ಅನ್ನುವ ಕಾನ್ಸೆಪ್ಟು ಬಂದು ಕೂತದ್ದರ ಹಿಂದಿನ ಸಾಮಾಜಿಕ ವಾತಾವರಣವೂ , ಪಿಟಿ ಮೇಷ್ಟರ ಮೋಸವೂ.. ಸತ್ಯವೂ…ಯಾವ ಪ್ಯಾನಲ್ ನಲೂ ಡಿಸ್ಕಸ್ ಆಗಲೇ ಇಲ್ಲ.!!!
ಕುಸುಮಬಾಲೆ ಕಾಲಂ : ಟಿವಿ ಲಿ ಬರುವ ಸುದ್ದಿಗಳಲ್ಲಿ ಎಲ್ಲಾ ನಿಜವಲ್ಲ
ನಿಮಗೆ ಇವೂ ಇಷ್ಟವಾಗಬಹುದು…

ಸೀನನಂತ ಕೂಲಿಗಾರರ ಬದುಕಿನ ಬವಣೆಯೂ.. ಒಂದು ಮಿಡಲ್ ಸ್ಕೂಲೂ ಇಲ್ಲದ ಊರಲಿ ಆ ಎಳೆಮನಸುಗಳಲಿ ಲವ್ವು ಅನ್ನುವ ಕಾನ್ಸೆಪ್ಟು ಬಂದು ಕೂತದ್ದರ ಹಿಂದಿನ ಸಾಮಾಜಿಕ ವಾತಾವರಣವೂ , ಪಿಟಿ ಮೇಷ್ಟರ ಮೋಸವೂ.. ಸತ್ಯವೂ…ಯಾವ ಪ್ಯಾನಲ್ ನಲೂ ಡಿಸ್ಕಸ್ ಆಗಲೇ ಇಲ್ಲ.!!! What all these TV channels do to increase their TRP? Some of the incidences do have such backgrounds. You have exposed them. A nice attempt. Thanks for a nice reading material.
ಕುಸುಮಾ, ಎಷ್ಟೊಂದು ನಿರಾಳವಾಗಿ ಬರೆದಿದ್ದೀರಿ… ಈ ಸಂವೇಧನೆ, ಸಹನೆ ಮಾಧ್ಯಮಗಳು ರೂಢಿಸಿಕೊಂಡರೆ ಜಗತ್ತು ಇನ್ನಷ್ಟು ಉತ್ತಮವಾಗಿರುತ್ತಿತ್ತು… ಇತ್ತೀಚಿಗೆ ಯಾರನ್ನು ಟೀಕಿಸುವಂತಿಲ್ಲ ಯಾರಾದರು, ಯಾರಿಗೆ ಬೇಕಾದರೂ ಸುಲಭವಾಗಿ ಕೋಮುವಾದಿ, ಅಲ್ಪಸಂಖ್ಯಾತ ವಿರೋಧಿ, ಅಭಿವೃದ್ಧಿಯ ವಿರೋಧಿ, ಜಾತಿವಾದಿ… ಇತ್ಯಾದಿ ಹಣೆಪಟ್ಟಿ ಕಟ್ಟಬಹುದಾಗಿದೆ… ಇದೊಂದು ಮಹಾನ್ ಅವಸರದ ಎಡವಟ್ಟಿನ ಕಾಲಘಟ್ಟ
Baree suligalu …. 🙁
The devil is in the detail ಅಲ್ಲವೆ? ಒಳ ಹೊಕ್ಕು ವಿಶ್ಲೇಷಿಸುವ ಜರೂರತ್ತೆ ಇಲ್ಲಾ ಅರ್ಧ ದಿನ ಚಚ್ಚಲಾಗುವ ನ್ಯೂಸ್ ಐಟಂಗಳಿಗೆ. ಹೀಗಾಗಿಯೇ ಸತ್ಯದ shelf life ಸುಳ್ಳಿನದಕ್ಕಂತ ಕಮ್ಮಿಯಾಗಿದೆ. ಟ್.ಆರ್.ಪಿ ಕಿ ಜೈ ಹೋ!
-Anil
You are simply awesome 🙂
hinge kategalu agodu 🙂
Hats off to you for giving this fine article..as usual i look forward to your wiriting s and trust me u dont disaapoint me.
Kusum…
we are in the era of “ZOOMING ANYTHING and EVERYTHING OUT OF THE CONTEXT”.
Your article focus on this very well. Timely and apt.
I am eager to know what happened to the Madam? Any support needed? Let us follow it up offline.
ಇವು ಹಳೆಯ ಘಟನೆಗಳು ಸಿಂಧು, ಆ ಮೇಡಂ ಈಗಲೂ ಇದ್ದಾರೆ. ಈ ಕರಾಳ ನೆನಪು ಆದಾಗೆಲ್ಲ ಈಗಲೂ ಕಣ್ಣೀರಿಡುತ್ತಾರೆ.
ಇತ್ತೀಚಿಗೆ North-east ಹುಡುಗರ ಹಲ್ಲೆ ನಡೆಯಿತು ಹಲ್ಲೆ ಖಂಡನೀಯ, ಆದರೆ ಮೂರು ಜನರು ಮಾಡಿದ ತಪ್ಪನ್ನು ಖಂಡಿಸುತ್ತಾ ರಾಷ್ಟೀಯ ಮಾಧ್ಯಮಗಳು ಕನ್ನಡಿಗರನ್ನು ಭಾಷಾಂಧರಂತೆ ಚಿತ್ರಿಸಿದವು ಅವರೆಲ್ಲಾ ಭಾರತೀಯರಲ್ವ? ಅಂತ ಪ್ರಶ್ನಿಸಿದವು.ಇದೇ ಮಾಧ್ಯಮಗಳು ಗೋವಾ ಸರ್ಕಾರ ಸಾವಿರಾರು ಕನ್ನಡಿಗರನ್ನು ಮಳೆಯನ್ನು ಲೆಕ್ಕಿಸದೆ ಬೀದಿಪಾಲು ಮಾಡಿದಾಗ ಯಾರೂ ವರದಿ ಮಾಡಲಿಲ್ಲ. ಅವರ್ಯಾರು ಭಾರತೀಯರಲ್ವ?ಅಂತ ಪ್ರಶ್ನಿಸಲಿಲ್ಲ. ವಾಸ್ತವಾಂಶ ಇಲ್ಲಿನವರ ಸಹಬಾಳ್ವೆಯನ್ನರಿಯದವರು panelಲಲ್ಲಿ ಕೂತ್ಕೊಂಡು ದೊಡ್ಡ ದೊಡ್ಡ ಮಾತಾಡ್ತಿದ್ರು…
ಇದೊಂಥರಾ ಭಾರೀ ಗೊಂದಲದ ಕಾಲ. ಮನಸ್ಸಿನೊಳಗೆ ತಾವು ಸಾಚಾ ಅಂದುಕೊಳ್ಳಲು ತಮಗಿಂತಾ ಹೆಚ್ಚಿನ ದರವೇಶಿಯೊಬ್ಬರನ್ನು ಹುಡುಕುವ ಹವಣಿಕೆ.
ಅದಕ್ಕೆ ಈ ಅವಸರದ judgement ಕೊಡಬಲ್ಲ news ಚಾನೆಲ್ಗಳ ಸಾಥ್! ನೀಚರನ್ನು ಹುಡುಕುವ ವ್ಯವಧಾನ ಯಾರಿಗೂ ಇಲ್ಲ.
ಯಾರನ್ನು ಬೇಕಾದರೂ ಹಳ್ಳಕ್ಕೆ ಕೆಡವಿ, ಅವರನ್ನೇ ತೋಳ ಎಂದು ಬಿಂಬಿಸಿ, ಎಲ್ಲ ಕೈಲೂ ಕಲ್ಲು ಹೊಡೆಸುವ ಆತುರ. ಅದು ತೋಳವೋ, ಹಸುವೋ, ಮನುಷ್ಯನೋ, ಕತ್ತೆಯೂ, ಬೊಂಬೆಯೋ, ಹೆಣವೋ ಯಾವುದು ಬೇಕಾದರೂ ಆಗಿರಬಹುದು. ಒಟ್ಟಿನಲ್ಲಿ, ಎಲ್ಲರಿಗೂ ಒಬ್ಬ ದರವೇಶಿಯ ಅವಶ್ಯಕತೆಯಿದೆ. ಸಿಕ್ಕದಿದ್ದರೆ, ಯಾರನ್ನಾದರೂ ಮಾಡಿದರಾಯ್ತು.
ಆನಂತರ ತನ್ನ ಅಮಾಯಕತ್ವವನ್ನು ಸಾಬೀತು ಪಡಿಸುವುದು ಆ ವ್ಯಕ್ತಿಯ ಹೊಣೆಗಾರಿಕೆ.
ಈ ಸುನಾಮಿ ಯಾರಿಗೆ ಬೇಕಾದರೂ, ಯಾವಾಗ ಬೇಕಾದರೂ ಬಂದು ಬಡಿಯಬಹುದು. ನೀವು ಸಾರ್ವಜನಿಕ ಜೀವನದಲ್ಲಿದ್ದರೆ, ನಿಮ್ಮ statistical ಸಂಭವನೀಯತೆ ಜಾಸ್ತಿ; ಅಷ್ಟೇ!
ಕುಸುಮಾ, ನಿಮ್ಮ ಈ ಕತೆಗಳು ಶೇಕಡಾ ತೊಂಬತ್ತಕ್ಕಿಂತ ಹೆಚ್ಚಿನ ಸಂಧರ್ಭಗಳಲ್ಲಿ ಸತ್ಯ. ಆದರೆ “ತಮಗಿಂತಾ ನೀಚನೊಬ್ಬನಿದ್ದಾನೆ ಎಂಬ ವಿಕೃತಾನಂದವೇ ಸಾಕು” ಎಂಬ ಮನಸ್ಥಿತಿಯವರಿಗೆ ಸತ್ಯ ಬೇಕಾಗುವುದೇ ಇಲ್ಲ.
ಓದಿದ ಪ್ರತಿಯೊಬ್ಬರಿಗೂ ಧನ್ಯವಾದಗಳು.
ಮಾದ್ಯಮಗಳಲ್ಲಿ ಪ್ರದರ್ಶನವಾಗುವ ಎಲ್ಲಾ ಕಾರ್ಯಕ್ರಮಗಳಿಗೂ ಒಂದು ಮೂಗುದಾರ ಬೇಕು,,,,
ಇಲ್ಲಿ ಚಿವುಟುವುದು ಅವರೇ,
ಸಮಾದಾನಿಸುವುದು ಅವರೇ,,
ಕೋತಿಗಳಂತೆ ಕುಣಿಯುತ್ತಿದೆ ಸಾಮಾನ್ಯರ ಮನಸ್ಸು,,,, ಈ ಮಾಧ್ಯಮಗಳಿಂದಾಗಿ