ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕುಸುಮಬಾಲೆ ಕಾಲಂ : ಗಡಿಗಳನ್ನು ಮೀರಲಾರದವರ ಕಥೆ


“ಈ ಲೈನ್ನಲಿ ನಾಕೈದು ತೆಂಗಿನಮರಗಳು ಬಗ್ಗೋಗಿವೆ.. ಕಾಯಿ ಬಿದ್ರೆ ಸೀದಾ ಪಕ್ಕದ ತೋಟದೊಳಕ್ ಬೀಳತ್ತೆ. ಈ ಫೆನ್ಸಿಂಗ್ ದಾಟಿ ತಗೋಳೋಕೂ ಆಗಲ್ಲ. ಪ್ರತೀಸಲ ನಮ್ ಕಾಯಿ ಎತ್ಕೊಡಿ ಅಂತ ಅವರನ್ ಕೇಳ್ಬೇಕು ಇಲ್ಲಾ, ನಾವೆ ಅವರ ಜಮೀನೊಳಕ್ ಹೋಗ್ ತಗೋಬೇಕು. ಗಿಡ ತಗೊಂಡೋಗಿ ಅಷ್ಟ್ ತುದೀಗ್ ಯಾಕ್ ನೆಡಬೇಕಿತ್ತು? ಅಥವಾ ಅದು ಆಕಡೆ ವಾಲ್ತಿದೆ ಅಂದಾಗ ಸಸೀಲೇ ಏನಾರೂ ಕೊಮೆ ಕೊಟ್ಟು ಈ ಕಡೆಗ್ ಬೆಳಿಯೋ ಹಾಗ್ ಮಾಡಬೇಕಿತ್ತು. ಕನಿಷ್ಟ ಒಂದ್ ಒಂದ್ ಮರಕ್ ನೂರ್ ಕಾಯಿ ಅಂದ್ರೂ . ಎಷ್ಟ್ ಕಾಯಿ ಹೋಗತ್ತೆ ಲೆಕ್ಕ ಹಾಕಿ”….. ತೋಟದ ಗೇಟಿನ ಬಳಿ ನಿಂತು , ಗೊಣ ಗೊಣ ಗೊಣ ಗೊಣಗುತ್ತಲೇ ಇದ್ದೆ. ಅಪ್ಪ.. “ಏ ಯಾರ್ ತಿನ್ಕಂಡರೂ ಬಾ..ಕ್ಯೋಳ್ಬುಟ್ ಎತ್ಕಂಡ್ರಾಯ್ತು. ಮರ ನಮ್ಮ ಯೋಳ್ಕಂಡ್ ಕೋಳ್ಕಂಡ್ ಬೆಳದದಾ? ನಡಿ ನಡಿ. ಪಂಪ್ ಸಟ್ ಮನ ಬೀಗ ಆಕಂಡ್ ಬತ್ತೀನಿ. ನೀ ಓಯ್ತಾ ಇರು.” ಅಂದು ಎದ್ದು ಹೋದರು. ನಾನು ಗೇಟು ದಾಟಿದೆ.
ಊರಮುಂದಲ ತೋಟ ನಮ್ಮದು. ನೂರು ನೂರೈವತ್ತು ಹೆಜ್ಜೆ ಹಾಕುವುದರಲಿ, ಪುಟ್ಟಸಿದ್ದಿ ಮನೆ ಹಿತ್ತಲು. ಕೆಂಪುಕೆಂಪಾದ ದಾಳಿಂಬೆಯುಳ್ಳ ಮರ. “ಇದ್ಯಾವತ್ ಬಂದ್ರಿ ಅಳಿ?” ಕೇಳಿದಳು. “ನಿನ್ನೇ ಬಂದಿ. ಇಷ್ಟ್ ಚೆನಾಗೆಂಗ್ ಬಂತು ದಾಳಿಂಬೆ? ನಮ್ ತೋಟದಲ್ಲಿ ಬರೀ ರೋಗ. “ ಅಂದೆ. “ಐ ನಮ್ತಾವೇನೂ ಇಲ್ಲ ಅಳಿ.ಒಂದೊಂದ್ ಕಾಳು ಈಪೀಪಾಟಿ ಬುಡ್ತವ. ಒಸಿ ಅಕ್ಕಪಕ್ಕದವರ ಹಿಂಸ ಅಳಿ. “ ಅಂತ ವಾರಗಿತ್ತೀರ ಮನೆಯನ್ನ ಕಣ್ಣು ಮೂಗಲ್ಲೇ ತಿವಿದಳು. ಅವಳೊಳಗೊಬ್ಬ ಕಲಾವಿದೆ ಖಚಿತವಾಗಿ ಇದ್ದಾಳೆ ಅನಿಸಿತ್ತು ನನಗೆ. ಹಾಗೇ ಹೆಜ್ಜೆ ಹಾಕುತ್ತಾ.. ದಾಳಿಂಬೆ ಮರದ ಕುರಿತಾತ ಒಂದು ಹಳೆಯ ನೆನಪು ತೇಲಿಬಂತು.ಅದ ನಿಮಗೂ ಯೋಳ್ತೀನ್ ಕೇಳಿ.
ಚಾಮರಾಜನಗರದ ಹತ್ತಿರದ ದೇಶವಳ್ಳಿ ಅನ್ನೋ ನಾಕು ಮನೆ ಗ್ರಾಮದಲ್ಲಿ ನಮ್ಮಜ್ಜಿ ಮನೆ. ಮನೆಯ ಮುಂದಲ ಬಲಬದಿಗೆ, ದನಕಟ್ಟಲು ಒಂದುದ್ದದ ಗುಳ್ಳು (ಗುಡಿಸಲು). ಆ ಗುಳ್ಳಿನ ಆ ಹಿಂಬಾಗಕ್ಕೆ ಆಚೆ ಬೀದಿಯ ಮನೆಯೊಂದರ ಹಿಂಬಾಗದ ಗೋಡೆ. ಈ ಗುಳ್ಳು ಮತ್ತು ಆ ಮನೆಗೋಡೆ ನಡುವಣ ಗಲ್ಲಿಯಲೇ ಇದ್ದದ್ದು ಈ ದಾಳಿಂಬೆ ಗಿಡ. ಮನೆತುಂಬ ಜನ. ಹಾಗಾಗಿ, ಆ ಗುಳ್ಳೊಳಗೂ ಒಂದು ಟೆಂಪರರಿ ಸ್ನಾನದ ಮನೆಯಿತ್ತು. ಹಸುಗಳ ಗಂಜಲ, ಸ್ನಾನದ ನೀರು.. ಎಲ್ಲ ಆ ಗಲ್ಲಿಗೆ ರವಾನೆಯಾಗುತ್ತಿತ್ತು. “ಈ ಥರವಾಗ್ ನೀರ್ ಬುಟ್ರ ನಮ್ ಗ್ವಾಡ ವಸ್ತಿಯಾಗಿ ಉಂಟ್ಕಳಲ್ವ?” ಅಂತ ಆ ಮನೆಯವರು ತಗಾದೆ ತೆಗೆದರೂ , ನಮ್ಮಟ್ಟಿ ಘಾಟಿ ಮುದುಕಿ ಕ್ಯಾರೆ ಅನ್ನಲಿಲ್ಲ. ಕೊನೆಗೆ ಅವರಿವರ ಹತ್ತಿರ ಮಾತಾಡಲಾಗಿ, ಗಲ್ಲಿ ಅಂದರೆ, ಇಬ್ಬರಿಗೂ ಹಕ್ಕುಂಟು ಅಲ್ಲಿ. ಅಂತ ಯಾರೋ ಹೇಳಲಾಗಿ, ಆ ಮನೆಯವರೂ ತಮ್ಮ ಮನೆ ಬಚ್ಚಲ ನೀರನ್ನ ಗಲ್ಲಿ ಕಡೆಗೆ ತಿರುಗಿಸಿದರು. ಒಟ್ಟಿನಲಿ ಎರಡು ಮನೆ ನೀರುಗಳು, ಮೈ ಕೊಳೆಗಳು. ಪಾತ್ರೆ ತೊಳೆದ ಬೂದಿಗಳು. ಮೈ ಸೋಪು ಬಟ್ಟೆ ಸೋಪು ಕೆಮಿಕಲ್‍ಗಳು ಎಲ್ಲ ಸೇರಿ ಯಾವುದೋ ಅದ್ಭುತ ಗೊಬ್ಬರವಾಗಿ ಮಾರ್ಪಾಟಾಗಿ ದಾಳಿಂಬೆ ಮೆಳೆಯೂ. ಪರಂಗಿಯೂ ಭರ್ಜರಿಯಾಗಿ ಬೆಳೆದವು. ಇಬ್ಬರೂ ಹೊಟ್ಟೆಕಿಚ್ಚಿಗೆಂದೇ ಹೆಚ್ಚೆಚ್ಚಾಗಿ ನೀರು ಸುರಿದು, ಆ ಮನೆಯ ಗೋಡೆ, ಈ ಗುಳ್ಳಿನ ಗರಿಗಳು ನೀರಿನ ಹೊಡೆತಕ್ಕೆ ವಸ್ತಿ ಏರತೊಡಗಿದ್ದವು. ಮಳೆಗಾಲದಲ್ಲಂತೂ ಕೇಳೋದೇ ಬೇಡ. ಕಡೆ ಕಡೆಗೆ ಜಗಳವಾಗಿ,ಬೈಗುಳಗಳಾಗಿ, ಗಲ್ಲಿಯೆಂಬುದು ಎರಡು ಮನೆಗಳ ಪ್ರತಿಷ್ಟೆಯ ವಿಷಯವಾಗಿ, ಕಡೆಗೆ ಕೋರ್ಟಿನವರೆಗೂ ಹೋಗಬೇಕಾಯ್ತು.
ಐದನೇ ಕ್ಲಾಸಲ್ಲಿದ್ದೆ ನಾನು. ಚೆನ್ನಾಗಿ ನೆನಪಿದೆ. ಗುರುಸ್ವಾಮಿ ಅಂತ ಆ ಲಾಯರ್ ಹೆಸರು. ಈ ಕೇಸಿನ ವಿಚಾರವಾಗಿ ಬರುತ್ತಿದ್ದರು. ಕೋರ್ಟಿನಲಿ ಎದುರು ಲಾಯರು, ಮತ್ತು ಜಡ್ಜು ಕೇಳುವ ಯಾವ್ಯಾವ ಪ್ರಶ್ನೆಗಳಿಗೆ ಏನೇನು ಉತ್ತರ ಕೊಡಬೇಕೆಂದು ಒಂದು ಸಣ್ಣ ಟ್ರೇನಿಂಗ್ ಕೊಟ್ಟು ಹೋಗುತ್ತಿದ್ದರು. ಆ ತೊಟ್ಟಿ ಹಟ್ಟಿಯ ಒಂದು ಮೂಲೇಲಿ ಕೊತ್ತಂಬರಿ ಬೀಜದ ರಾಶಿ, ಮತ್ತೊಂದು ಮೂಲೇಲಿ ಫ್ರೆಶ್ ಕೊತ್ತಂಬರಿ ಸೊಪ್ಪಿನ ರಾಶಿ. ಲಾಯರು ಬೇಕಷ್ಟು ತಗೊಂಡು ಹೋಗ್ತಿದ್ದರು. ಆ ಕೊತ್ತಂಬರಿಯ ಘಮಲು ಈಗಲೂ ಮೂಗಿನ ಮುಂದೆ ಅಡರಿ ನಿಲ್ಲುತ್ತದೆ. ಮನೆಗೆ ಪ್ರತೀಸಲ ಕೊತ್ತಂಬರಿ ಬೀಜ ಮತ್ತು ಸೊಪ್ಪು ತಂದಾಗಲೂ ಬೇಕಂತಲೇ ಮೂಸಿ ನೋಡುತ್ತೇನೆ. ಆ ಘಮ ಇದುವರೆಗೂ ಸಿಕ್ಕಿಲ್ಲ. ಸಿಗುವುದೂ ಇಲ್ಲ ಬಿಡಿ.
ಗುರುಸ್ವಾಮ್ಗಳು ಮಾಡೋ ಪ್ರಯತ್ನ ಎಲ್ಲ ಮಾಡಿದರೂ ಕೇಸು ಗುಳ್ಳಿನ ಪರವಾಗಿ ಆಗಲೇ ಇಲ್ಲ. ಎರಡೂ ಕಡೆಯವರು ಮೂರು ಮೂರು ಅಡಿ ಜಾಗ ಬಿಡಬೇಕು . ನಡುಕಲ ಜಾಗ ಯಾರೂ ಉಪಯೋಗಿಸುವಂತಿಲ್ಲ. ನೀರು ಬಿಡುವಂತಿಲ್ಲ ಅಂತ ತೀರ್ಪು ಬರಲಾಗಿ, ದಾಳಿಂಬೆ ಮೆಳೆಯೂ ಮರಣ ಹೊಂದಿತು. ಗಲ್ಲಿ ಜಗಳಕ್ಕೊಂದು ಫುಲ್‍ ಸ್ಟಾಪೂ ಬಿತ್ತು. ಇದನ್ನೆಲ್ಲ ನೆನಸುತ್ತಾ ಊರೊಳಕ್ಕೆ ಹೆಜ್ಜೆ ಹಾಕಿದರೆ ಸಿದ್ದಪ್ಪಣ್ಣನ ಮನೆ ಮುಂದೆ ಜನ ತುಂಬಿದ್ದರು. ಮತ್ತು ಕೂಗಾಟವೋ ಕೂಗಾಟ.

ಅಣ್ಣ ತಮ್ಮದೀರು ಭಾಗವಾಗಿಯಾಗಿತ್ತು. ಅದರಲೊಬ್ಬ , ಮನೆಯ ಹಿಂದಲ ಹಿತ್ತಲ ಜಾಗ ಉಳಿಸಿಕೊಂಡು, ತನ್ನ ಭಾಗದ ಮನೆಯ ಅಣ್ಣನಿಗೇ ಮಾರಿದ್ದ. ಈಗ ಸದರಿ ಮನುಷ್ಯನ ತಗಾದೆಯ ಸಕಾರಣವೇನೆಂದರೆ, “ನಾನು ಮಾರಿರೋದು ಮನೆಯನ್ನ ಅಷ್ಟೆ ಜಗಲೀನಲ್ಲ. ಮತ್ತು ಹಿತ್ತಲಿಗೆ ಹೋಗೋಕೆ ಅಂತ ಮನೆ ಮಧ್ಯದಲಿ ನನಗೂ ಜಾಗ ಬಿಡಬೇಕು.ಹಿತ್ತಲಿದ್ದೋನಿಗೆ ಹೋಗೋ ದಾರಿಯ ಹಕ್ಕೂ ಉಂಟು”” ಎಂಬುದು. “ಹಟ್ಯೇ ಇಲ್ಲ, ಇನ್ನು ಪಡಸಾಲೆ ತಕ್ಕಂಡ್ ಏನಪ್ಪ ಮಾಡೀಯೇ?” ಅಂತ ತಿಳಿದವರು ಕೇಳಿದರೆ, “ನಾನು ಎಡ್ತಿ ಊರ್ ಸೇರ್ಕಂಡೀನಿ ನಿಜ, ಸತ್ಮೇಲ್ ಎಣ ತಕಂಡ್ ನಮ್ಮೂರ್ಗೇ ತಾನೇ ಬರಾದು? ಆಗ ನನ್ ಎಡ್ತಿ ಮಕ್ಕಳು, ನನ್ ಮನುಗ್ಸಕ್ ಪಡಸಾಲ ಬ್ಯಾಡ್ವಾ?” ಅಂದ. ಅವನ ದೂಊಊರದೃಷ್ಟಿಗೆ ಊರಿಗೂರೇ ಬೆರಗಾಯ್ತು. “ಅಂತಾ ಕಾಲಕ್ ಯಾರಾರೂ ಜಾಗ ಕೊಡ್ತಾರಪ್ಪ. ಇದೇನ್ ಊರಲ್ವಾ ಕೇರ್ಯಲ್ವಾ?” ಅಂತೊಬ್ಬರಂದರು. “ಐ, ನಾವೇನ್ ಮನುಸರಲ್ವ? ಮನಸತ್ವ ಇಲ್ವ? ಎಣ ಮನುಗುಸ್ಬೇಡಿ ಅಂತಿದ್ವ?” ಅಂದ ಅಣ್ಣ. “ಬ್ಯಾಡ, ಯಾವನ್ ಜಾಗವೂ ಬ್ಯಾಡ ನನಗ. ನಮ್ಮಪ್ ಕೊಟ್ಟಿರಾ ಹಟ್ಟೀಲಿ ನನ್ ಪಡಸಾಲೆ ಬುಡಿ. ತಿಥಿ ಗಿಥಿ ಮಾಡಕ ಹಿತ್ತಲ ಜಾಗ ಬುಟ್ಕಂಡಿನಿ, ಅಲ್ಗೋಗಕ್ ಜಾಗ ಬುಡಬೇಕು ಅಷ್ಟಿಯೇ” ಅಂದ. ಇವನು ಮಾರಿದ ಮೇಲೆ , ಕೊಂಡ ಅಣ್ಣ, ತೊಟ್ಟಿ ಹಟ್ಟಿ ಮುಚ್ಚಿಸಿ, ಹೊಸ ಪ್ಯಾಸನ್ ಮಾಡಿಕೊಂಡಿದ್ದ. ಈಗಲೀಗ ಪೀಕಲಾಟಕ್ಕೆ ಬಂದು ಕೂತಿತ್ತು. ರಾತ್ರಿ ಬೆಳಗಾನ ವಾದ-ವಿವಾದ ಜಗಳ. ಒಟ್ಟಿನಲಿ ಇವರದು ಮುಗಿಯದ “ಹಿತ್ತಲು ಮತ್ತು ಜಗಲಿ” ಪ್ರಕರಣ.
ಅಲ್ಲಿಂದ ಚಿಕ್ಕಮ್ಮನ ಊರಿಗೆ ಹೋದರೆ, ಅಲ್ಲೂ ಆಗ ತಾನೇ ಬೆಂಕಿ ಆರಿದ, ಬಿಸಿಹೊಗೆಯಾಡುತ್ತಿರುವಂತ ವಾತಾವರಣ. ನೀವು ಈಚೆಗೆ ಕನ್ನಡದ ಮಾಣಿಕ್ಯ ಸಿನೆಮಾ ನೋಡಿದ್ದರೆ ಅದರಲ್ಲಿ ನಡೆಯುತ್ತದಲ್ಲ. ಅಂತಾ ಮಚ್ಚು ಲಾಂಗಿನ ಲೆವಲ್ಲಿನ ಮಾತುಕತೆ. ಎರಡು ಪ್ರತಿಷ್ಟಿತ ಕುಟುಂಬಗಳು ರಣಕಹಳೆ ಊದಿಕುಂತಿದ್ದವು. ಇದರ ಸಕಾರಣ ಒಂದು ಕಕ್ಕಸುಗುಂಡಿ. ದಾಯಾದಿ ಗುಂಪಿಗೆ ಸೇರಿದ ಅವರಿಗೆಲ್ಲ ಸಹಜವಾಗಿ ಅಕ್ಕಪಕ್ಕದ ಜಾಗದಲೇ ಸೈಟುಗಳಿದ್ದವು. ಒಬ್ಬರು ಅದಾಗಲೇ ಮನೆ ಕಟ್ಟಿ ಸಾಕಷ್ಟು ವರ್ಷವಾಗಿತ್ತು. ಮತ್ತೊಬ್ಬರು ಈಗ ಕಟ್ಟಿಕೊಂಡು ಬಂದಿದ್ದರು. ಹಿಂದೆ ಮನೆ ಕಟ್ಟಿದ್ದವರು ತಮ್ಮ ಕಕ್ಕಸಿನ ಗುಂಡಿಯನ್ನು ಎರಡೂ ಮನೆಗಳ ನಡುವಣ ಗಲ್ಲಿಯಲಿ ತೋಡಿದ್ದರು. ಮೇಲುನೋಟಕ್ಕೆ ಗೊತ್ತೂ ಆಗದ, ಭೂಮಿಯೊಳಗಣ ಆ ಹೇಲುಗುಂಡಿಯ, ಯಾರು ಹೇಗೆ ಕಂಡುಹಿಡಿದರೋ ಕಾಣೆ. ಒಟ್ಟಿನಲಿ ಜಗಳ ಶುರುವಾಗಿತ್ತು. ನಿನ್ನ ಕಕ್ಕದ ಗುಂಡಿ ನಿನ್ನ ಟೆರಿಟರಿಯಲ್ಲೇ ಇರಬೇಕು. ಈ ಗಲ್ಲಿಯಲಿರಬಾರದು ಅನ್ನುವುದು ಆರೋಪ. ನಿಮಗೆ ತೊಂದರೆಯೇನು? ಅದು ಭೂಮಿಯೊಳಗಿರೋದು ತಾನೆ? ಅಂದರೆ, “ಆ ಗಲ್ಲಿ ಪಕ್ಕದ ಗೋಡೆಗೇ ಸೇರಿದಂಗೆ ನಮ್ಮನೆ ದೇವರ ಕೋಣೆಯಿದೆ” ಅಂತಿವರ ಪ್ರತಿವಾದ.. ಒಟ್ಟಿನಲಿ ನಾನು ಅಲ್ಲಿಂದ ಹೊರಡುವವರೆಗೂ ಗುಂಡಿಗಾಗಿ ಗಂಡಾಗುಂಡಿ ನಡೆಯುತ್ತಲೇ ಇತ್ತು.
ಬೆಂಗಳೂರಿನ ಬನಶಂಕರಿ ಎರಡನೇ ಹಂತ.. ಈ ಕಡೆ ಮನೆಯವರು ಮಗಳೂರು ಕಡೆಯವರು. ನ್ಯಾಷನಲೈಸ್ ಬ್ಯಾಂಕೊಂದರ ದಕ್ಷಿಣ ಭಾರತದ ಮುಖ್ಯಸ್ಥ. ಗುಜರಾತು, ಡೆಲ್ಲಿ ಅಂತೆ್ಲಲ ಸುತ್ತಿಕೊಂಡು. ಲೆಕ್ಕವಿರದಷ್ಟು ಕೆರೆ ನೀರು ಕುಡಿದು ಬಂದವರು. ಈಗ ಹಿಂದೆ ಕಟ್ಟಿಸಿ ಬಾಡಿಗೆಗೆ ಕೊಟ್ಟಿದ್ದ ತಮ್ಮ ಮನೆಯಲಿ ಅವರ ವಾಸ. ಪಕ್ಕದ ಕಾಪೌಂಡಿನಾಕೆ ವಿಜಯನಗರದ ಕಾಲೇಜೊಂದರಲಿ ಸಂಸ್ಕೃತ ಉಪನ್ಯಾಸಕಿ, ಮೊನ್ನೆ ಸಂಜೆ ಇದ್ದಕ್ಕಿದ್ದಂತೆ ಜೋರುಕೂಗಾಟ. ಸದಾ ಜನರಿದ್ದಾರೋಇಲ್ವೋ ಅನ್ನಿಸುವಷ್ಟು ನಿಶ್ಯಬ್ದದ ಬೀದಿಯಲಿ ನಮ್ಮೂರ ಸ್ಟೈಲಿನ ವಾಯ್ಸ್ ರೈಸಿಂಗು. ಇಣುಕಿ ನೋಡದಿರುವುದು ಥರವೇ? ಬ್ಯಾಂಕಪ್ಪನಿಗೂ .. ಲೆಕ್ಚರಮ್ಮನಿಗೂ ಅಂಟಿಕೊಂಡಿತ್ತು ಜಗಳ. ಕಾರಣ ಕಾಂಪೌಂಡು. ಹೈಕ್ಲಾಸು ನಾಯಿಮರಿಗಳ ಸಾಕುತಿದ್ದ ಬ್ಯಾಂಕಪ್ಪನ ಮಗ ಕಾಂಪೌಂಡು ಸೇರಿಸಿಕೊಂಡು ಕಬ್ಬಿಣದ ಗ್ರಿಲ್ ಹಾಕಿಸಲು ಹೊರಟಿದ್ದ. ಆಗ ತುಸುವೇ ಆಚೀಚೆಯಾದ್ದರಿಂದ “ಆಲ್ಲಿಂದೀಚೆಗೆ ನಿಮಗೆ ಹಕ್ಕಿಲ್ಲ. ಕಾರ್ಪೊರೇಷನ್ ರೂಲ್ಸೇ ಹಾಗಿದೆ.ಕರೆಸ್ರೀ ಕಾರ್ಪೊರೇಟರ್‍ನ.. ಅನ್ನುವಲ್ಲಿಂದ ಇಂಗ್ಲೆಂಡ್ ಇಂಗ್ಲೀಷಿನಲಿ ಶುರುವಾದ ಜಗಳ ಕಡೆಗೆ ಇಟ್ಟಮಡು ಮೋರಿ ಪಕ್ಕದ ಕನ್ನಡಕ್ಕೆ ಬಂದು ನಿಂತಿತ್ತು.ಯಾವ ಲೆವಲ್ಲಿಗೆ ಅಂದ್ರೆ.. ಹೇಳಬಾರದು ಬಿಡಿ.. ಆವತ್ತು ನಮ್ಮಮ್ಮ ಬೇರೆ ಇದ್ರು.. “ಅಯ್ಯೋ ಸಿವನೇ, ಸಿಟ್ಯವ್ರು ಅಂತೀವಿ, ಇಂತಿಂತಾ ಮಾತ್ನೆಲ್ಲ ಅದೆಲ್ ಕಲ್ತ್ ಮಡಗಿದ್ದರು ಕುಸ್ಮಾ?” ಅಂದರು. ನಂಗೂ ಅದೇ ಪ್ರಶ್ನೆ ಎದ್ದಿತ್ತು. ಕಡೆಗೆ ,ಎಲ್ಲ ಮನುಷ್ಯರ ಒಳಗೂ ಇಂತದೊಂದು ಮೂಲ ಪ್ರವೃತ್ತಿ ಇರಬಹುದಾ? ಅಂತೊಂದು ಭಾರೀ ದುಬಾರೀ ಅನುಮಾನ ಬಂದುಹೋಯ್ತು.
ಸಾಕಪ್ಪಾ ಸಾವಾಸಾ ಅಂತ. ಮಹದೇಶ್ವರನ ದರ್ಶನ ಮಾಡಿ, ಬೆಟ್ಟದ ಹತ್ತಿರ ಇರೋ ಹೊಗೈನಿಕಲ್ ಫಾಲ್ಸ್ಗೆ ಹೋದರೆ ತೆಪ್ಪದವನು ಅಷ್ಟು ದೂರ ಕರಕೊಂಡು ಹೋಗಿ.. ಮೇಲೆ ನಿಲ್ಲಿಸಿ ತೋರಿಸಿದ ಹಾಲಿನ ನೊರೆಯೇ ಉಕ್ಕುವಂತ ಧಾರೆ. ನದಿ.. ಅದೆಷ್ಟೋ ವರ್ಷಗಳಿಂದ ಹರಿದು.. ಹರಿದು.. ಹರಿದು ತಾನೇ ಮಾಡಿಕೊಂಡ ಹರಿವು ಅದು.. “ಆಕಡೆ ಹೋಗೋದು ಹೇಗೆ? ಯಾರೋ ಕೇಳಿದರು. “ ಅಂಗೆ ಹೋಗಲಿಕ್ಕಾಗಲ್ಲಮ್ಮ ಇದು ಕರ್ನಾಡಗ.. ಅದದಾನ್ ತಮಿಳ್ನಾಡ್.. ಅಂಗೆ ಪೋಲಾಮ ಧರ್ಮಪುರಿ ಸಿಗ್ತದೆ” ಅಂದ. ನದಿ ಹರಿವ ಆಧಾರದಲಿ ರಾಜ್ಯಗಳ ಹರಿದು ಹಂಚಿಕೊಂಡಿದ್ದೇವೆ ನಾವು.
ಇವರು ನೆಟ್ಟ ಬಾವುಟ ಕಿತ್ತು ಬೆಳಗಾಗುವುದರಲಿ ಅವರು ಬಾವುಟ ನೆಡುತ್ತಾರೆ. ಬೆಳಗಾವಿಯ ಗಡಿಸಮಾಚಾರ. . ಒಂದಿಂಚು ಆಚೀಚೆಯಾದರೂ ಎರಡೂ ರಾಜ್ಯಗಳ ನ್ಯೂಸ್ ಚಾನೆಲುಗಳಲಿ ಸುದ್ದಿ ಗುಂಡಿನ ಸುರಿಮಳೆ. ಭಾಷೆಯ ಕಟ್ಟಾಳುಗಳೇ ಗಡಿಕಮಾಂಡೋಗಳು.
ಗೆಳೆಯ ಫೋನು ಮಾಡಿದ. ನಾನೀಗ ಭಾರತದ ಕಟ್ಟ ಕಡೇ ಹಳ್ಳಿ ಮಾಣದಲ್ಲಿದ್ದೇನೆ. ಇಲ್ಲಿಂದ ಆಚೆಗೆ ನಮಗೆ ಪ್ರವೇಶವಿಲ್ಲ. ಅಲ್ಲಿ ಮಿಲಿಟರಿಯವರಿದ್ದಾರೆ. ಅದರಾಚೆಗೆ ಪಾಕಿಸ್ತಾನ” ಎಕ್ಸೈಟ್ ಆಗಿದ್ದ. ಇದರಾಚೆಗೆ ಎಲ್ಲವೂ ಬೇರೆ ಅಂತ ಹೇಳುವ ಗಡಿಯ ಕಡೆಯ ಗೆರೆ ಕೂಡ ವಿಚಿತ್ರ ಆಕರ್ಷಣೆ.. .
ವಾಘಾ ಬಾರ್ಡರು,.. ಅತ್ತ ಅವರು ಇತ್ತ ನಾವು. ಎದುರು ಬದುರೇ ಕಾಣುವಷ್ಟು, ಮಾತಾಡಿದರೆ ಕೇಳುವಷ್ಟು, ಕೈ ಚಾಚಿದರೆ ತಾಕುವಷ್ಟು, ಅಂತರದಲಿ ಎರಡು ದೇಶದ ಸೈನ್ಯ. ಕಾಲೆಂಬೋ ಕಾಲನ್ನು ಎದೆಮಟ್ಟ ಎತ್ತಿ ಎತ್ತಿ ಹಾಕಿ ಹಾಕುತ್ತಾ ನೆಕ್ಕಪ್ಪಳಿಸುತ್ತಾ, ಶತ್ರು ಸೈನ್ಯವನ್ನು ಕಣ್ಣಲ್ಲೇ ಇರಿಯುತ್ತಾ, ಕೂಗಿ ಸಾಮರ್ಥ್ಯ ತೋರುತ್ತಾ, ಶಕ್ತಿಪ್ರದರ್ಶನ ಮಾಡುತ್ತಾ, ನಿತ್ಯ ಪೆರೇಡ್ ನಡೆಸುತ್ತಾರೆ ನಮ್ಮ ಸೈನಿಕರು. ಈ ರೋಮಾಂಚಕಾರೀ ದೃಶ್ಯ ನೋಡಲೆಂದೇ ನಿತ್ಯ ಸಾವಿರಾರು ಜನ ಸೇರುತ್ತಾರೆ. ಹಬ್ಬಗಳಲ್ಲಿ ಸಿಹಿ ಹಂಚಿಕೆಯೂ ನಡೆಯುತ್ತದೆ. ಈ ಬಾರಿ ಅವರು ಸಿಹಿ ನಿರಾಕರಿಸಿದ್ದಾರಂತೆ.
ಹುರುಳಿಕಾಳು ಸೋಸುತ್ತಾ, ಅಮ್ಮ ಕೇಳಿದರು . “ನಾ ಯೋಳಿದ್ನಲ್ಲ. ತೆಂಗಿನ ಮರ ಅತ್ಲಾಗ್ ಬಿದ್ಕಂಡಿರದ್ ನೋಡು ಅಂತ, ನೋಡಿದ್ಯಾ?”. ನಾನು ಉತ್ತರಿಸಲಿಲ್ಲ. !
 

‍ಲೇಖಕರು G

16 December, 2014

ನಿಮಗೆ ಇವೂ ಇಷ್ಟವಾಗಬಹುದು…

5 Comments

  1. ಡಾ.ಶಿವಾನಂದ ಕುಬಸದ

    ‘…ಎಲ್ಲ ಮನುಷ್ಯರ ಒಳಗೂ ಇಂತದೊಂದು ಮೂಲ ಪ್ರವೃತ್ತಿ ಇರಬಹುದಾ? ಅಂತೊಂದು ಭಾರೀ ದುಬಾರೀ ಅನುಮಾನ ಬಂದುಹೋಯ್ತು…’
    “ಗಡಿತಂಟೆ”ಗಳ ಸುಂದರ ಅನಾವರಣ.

  2. ಲಕ್ಷ್ಮೀಕಾಂತ ಇಟ್ನಾಳ

    ಎಲ್ಲೆಲ್ಲಿ ತಿರುಗಾಡಿಸಿ ಬಿಟ್ರಿ ಕುಸುಮಾ ಅವರೆ, ಅಪ್ಪಟ ದೇಶೀ ತಿರುಗಾಟ, ಎಲ್ಲದಕ್ಕೂ ಸರಳ, ಸುಂದರ ಎಕ್ಸರೇ ಹಿಡಿಯುವ ಜನಪದ ನಾಡಿಯ ಡಾಕ್ಟರು ನೀವು. ತುಂಬ ಚನ್ನಾಗಿದೆ, ಒಳ್ಳೆ ಒಂದು ಕಾದಂಬರಿಯ ವಸ್ತುವಿನ ಪರಿಧಿಯಷ್ಟು ಅಗಾಧ.

  3. shammi

    ಎಲ್ಲ ಮನುಷ್ಯರ ಒಳಗೂ ಇಂತದೊಂದು ಮೂಲ ಪ್ರವೃತ್ತಿ ಇರಬಹುದಾ? ಅಂತೊಂದು ಭಾರೀ ದುಬಾರೀ ಅನುಮಾನ ..nangu kaadtaa iratte..yaavattin haage..sooper!!

  4. ಅಮರದೀಪ್.ಪಿ.ಎಸ್.

    ಜಗಳಕ್ಕೆ ನಿಂತರೆ ಅಷ್ಟೂ ಜನ್ಮದ ಮರೆತು ಹೋದ ಬೈಗಳಗಳೆಲ್ಲವೂ ನಾಲಗೆ ಮೇಲೆ ಪ್ರತ್ಯಕ್ಷವಾಗಿಬಿಡುತ್ತವೆ…. ಹಿಡಿತ ಎನ್ನುವ ಪದ ಮಾತ್ರ ಪದರಗುಟ್ಟುತ್ತಿರುತ್ತದೆ……

  5. vidyashankar

    ಗಡಿ, ಗುಡಿ, ಮಡಿ ಎಲ್ಲಾ ಮನುಷ್ರನ್ನ ಬೇರೆ ಬೇರೆ ಮಾಡದೆಯಾ… ಅದಕ್ಕೆ ಅಲ್ವ್ರಾ ಮನುಷ್ಯ ಛಿಧ್ರ ಛಿಧ್ರ ಆಗ್ತಿರದು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading