ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕುಸುಮಬಾಲೆ ಕಾಲಂ : ’ಕೂಸವ್ವ’ ಎನ್ನುವ ಮಹಾಶ್ವೇತೆಯ ಕಥೆ

ಇವಳ ಬಗ್ಗೆ ನೀವು ಯಾವ ಪೇಪರಿನಲ್ಲೂ ಓದಿರಲಾರಿರಿ. ಯಾಕೆಂದರೆ ಅವಳು ತನ್ನ ನೋವನ್ನು ಕುರಿತು ನಮ್ಮ ಹಾಗೆ ಕವನ ಗಿವನ ಬರೆಯೋ ಟೈಪು ಅಲ್ಲ. ನಿಜ ಅಂದರೆ ಅವಳಿಗೆ ಓದೋಕೂ ಬರೆಯೋಕೂ ಬರಲ್ಲ.
ಆ ಕಡು ಕಪ್ಪಾನೇ ಹುಡುಗಿಗೆ “ಶ್ವೇತ” ಅಂತ ಹೆಸರಿಟ್ಟಿದ್ದರು. ಹೆತ್ತವರಿಗೆ ಹೆಗ್ಗಣ ಮುದ್ದು ಅನ್ನೋ ಹಾಗೆ ಕಪ್ಪಾದರೂ ನಮ್ಮ ಮಗು ನಮಗೆ ಹೆಗ್ಗಣವಲ್ಲ ಮೊಲದ ಮರಿಯೇ ಅನ್ನುವ ಅರ್ಥವೆಲ್ಲ ಖಂಡಿತ ಇದ್ದಿರಲಿಕ್ಕಿಲ್ಲ. ಯಾಕಂದರೆ ಶ್ವೇತ ಎಂಬುದು ಅವರ ಪಾಲಿಗೆ ಒಂದು ನಾಮಪದವಷ್ಟೆ. ಡಿಕ್ಷ್ಟರಿಯ ಮೀನಿಂಗು ಅವರಿಗೆ ಗೊತ್ತಿಲ್ಲ. ಆದರೂ ಸರೋಜಾಗೇ ಈ ಶ್ವೇತಾ ಅನ್ನುವ ಹೆಸರು ಹೊಳೆದದ್ದಾದರೂ ಹೇಗೆ? ಇಲ್ಲ..ಅವಳಿಟ್ಟಿರಲಿಕ್ಕಿಲ್ಲ. ಅದು ಬದಿಗೇ ಇರುವ ದೊಡ್ಡ ಮನೆಯವರ ಸಲಹೆ ಇದ್ದರೂ ಇರಬಹುದು. ಇವಳ ಈ ಹೆಸರಿಗೆ ಸುಧೀರ್ಘ ಅಜ್ಞಾತವಾಸ. ನಿಜ ಅಂದರೆ ತೀರಾ ಇತ್ತೀಚಿನವರೆಗೂ ಅವಳ ಆ ಹೆಸರು ನನಗೂ ಗೊತ್ತಿರಲಿಲ್ಲ. ಎಲ್ಲರೂ ಅವಳನ್ನ ಕರೆಯುತ್ತಿದ್ದದು “ಕೂಸವ್ವ” ಅಂತಲೇ.
ಸಾಲು ಹೆಣ್ಣುಮಕ್ಕಳು, ಒಬ್ಬಳು ಅಂಗವಿಕಲೆ, ಒಬ್ಬ ಅಸಹಾಯಕ ಅಪ್ಪ, ಖಾಯಿಲೆಯ ಅಮ್ಮ, ಹೆಣ್ಣುಮಕ್ಕಳನ್ನೂ ಅವುಗಳನ್ನ ಪಿತಪಿತ ಅಂತ ಹಡೆದ ಸೊಸೆಯನ್ನೂ ಬೈಕೊಂಡು. ಖುದ್ದು ತನ್ನ ದೇಹವೇ ಹಳ್ಳ ಹಿಡಿದಿದ್ದರೂ ತನ್ನ ನಾಲಗೆಯ ತುದಿಯಿಂದಲೇ ಇಡೀ ಮನೆಯನ್ನ ಅಲ್ಲಾಡಿಸೋ ಅಜ್ಜಿ. ಸಾಲು ಸಾಲು ದಾರಾವಾಹಿಗಳಲ್ಲಿ ಬರೋ ಫ್ಯಾಮಿಲಿ ಕ್ಯಾರೆಕ್ಟರುಗಳಲ್ಲ ಇವು. ಇದು ನಿಜದ ಕುಟುಂಬ.
ಮೂರು ಹೆಣ್ಣುಮಕ್ಕಳಲ್ಲಿ ಕಡೆಯವಳೇ ಕೂಸವ್ವ. ಮೊದಲ ಪಚ್ಚೆತಾಯಿ., ಎರಡನೆ ಸುನೀತ. ಸುನೀತ ಒಬ್ಬಳು ಬೆಳ್ಲಗಿದ್ದಳು. ಹಾಗಂತ ಮೊದಲನೆಯಳನ್ನ ಇಟ್ಕೊಂಡು ಎರಡನೆಯವಳಿಗೆ ಮದ್ವೆ ಮಾಡೋದು ಹೇಗೆ? ತುಸು ಹೆಚ್ಚೇ ಕಪ್ಪಾದ ಪಚ್ಚೆಗೆ ಗಂಡು ಹುಡುಕೋಕೆ ಸ್ಯಾನೆ ಕಷ್ಟವಾಗೊಯ್ತು. ಕೊನೆಗೂ ಅವಳಮ್ಮ ಅದೇ ಕೊರಗಲ್ಲೋ ಇನ್ಯಾತರಿಂದಲೋ ಖಾಯಿಲೆ ಬಂದು ಸತ್ತೂ ಹೋದರು. ಹಳ್ಳಿಕೆರೆಉಂಡಿಯ ಒಬ್ಬ ಗಂಡು ಬಂದು ಪಚ್ಚೆಗೆ ಮದುವೆಯೂ ಆಗಿ ಇಬ್ಬರು ಮುದ್ದಾದ ಮಕ್ಕ:ಳು ಆದವು. (ಒಂದು ಗಂಡು ಒಂದು ಹೆಣ್ಣು) . ಗಂಡ ಮನೆಅಳಿಯನಾದ . ಅವಳೇ ಅಮ್ಮನ ಸ್ಥಾನ ತಗೊಂಡಳು. ಅಜ್ಜಿಯ ತಿಥಿಯಾಯಿತು. ಅಪ್ಪನೂ ಹೋದರು. ಸುನೀತಾ ಬೆಳ್ಳಗಿದ್ದದ್ದರಿಂದ ಮದುವೆ ಪ್ರಯಾಸವಾಗಲಿಲ್ಲ. ಆದರೆ ಅವಳಿಗೂ ಅಮ್ಮನ ನೆರಳು ಬಿದ್ದು ಮೂರು ಹೆಣ್ಣು ಹೆತ್ತು. ಗಂಡು ಬೇಕೇಬೇಕೆಂಬ ಹಠಕೆ, ಹರಕೆಗೆ ಕಡೆಗೂ ಗಂಡು ಭೂಮಿಗೆ ಬಿತ್ತು. ಆದರೆ ಆ ನಾಕೂ ಬಾಣಂತನಗಳಲ್ಲಿ , ದೊಡ್ಡಕ್ಕನವೂ ಸೇರಿ ಆರು ಕೂಸುಗಳ ಹೇಲಿನ ಬಟ್ಟೆ ತೊಳೆದೂ ತೊಳೆದೂ ಹಾಕಿದ್ದಳು ಕೂಸವ್ವ. ಎಷ್ಟಾದರೂ ಅಕ್ಕನ ಮಕ್ಕಳು. ಮುದ್ದು ಅವಳಿಗೆ.
ಎಲ್ಲ ಆಯಿತು. ಈಗ ಪೀಕಲಾಟಕ್ಕೆ ಬಂದಿದ್ದು ಕೂಸವ್ವನಿಗೊಂದು ಮದುವೆ ಮಾಡೋದು. ಕೂಸವ್ವ ನೇರಮೂಗಿನ, ಚೂಪುಗಲ್ಲದ, ಒಳ್ಳೆಯ ಎತ್ತರದ, ಅಚ್ಚುಕಟ್ಟಾದ ಮೈಕಟ್ಟಿನ ಹುಡುಗಿ. ಅವಳ ಇದ್ದ ಒಂದು ಕಣ್ಣು ಸಹ ತುಂಬಾ ಶಾರ್ಪ್. ಅವಳು ಆವತ್ತು ಒಂದೆರಡ್ ಸೆಕೆಂಡ್ ಸುಮ್ಮನಿದ್ರೆ ಹೀಗಾಗ್ತಿರಲಿಲ್ಲ. ದೀಪಾವಳೀಲಿ ಪಟಾಕಿ (ಬೇರೆಯವರು ಹಚ್ಚಿದ್ದು. ಇವರ ಮನೇಲಿ ಹೆಣ್ಣುಮಕ್ಕಳು ಪಟಾಕಿ ಯಾಕೆ ತಂದಾರು?) ಹಚ್ಚಿದ್ದು ಢಂ ಅನ್ನಲಿಲ್ಲ. ಇವಳು ಜೋಳದ ಕಡ್ಡಿ ಹಿಡ್ಕಂಡ್ ತಿವಿಯೋಕ್ ಹೋಗಿದಾಳೆ. ಒಳಗೆ ಅವಿತಿದ್ದ ಕಾವು ಇವಳ ಕಣ್ಣು ತಿವಿದಿದೆ. ಒಂದು ಕಣ್ಣು ಹೋಯ್ತು. ಹಿಂದೆಯೇ ಎಲ್ಲರೂ “ಕುಂಡಿ ಕೂಸವ್ವ” ಅಂತ ರೇಗಿಸಿ, ನಾಕಕ್ಕೇ ಸ್ಕೂಲೂ ಹೋಯ್ತು.
“ಒಂದೆಣ್ಣಗ ಒಂದ್ ಗಂಡು ಅಂತ ಆ ಸಿವ ಸೃಷ್ಟಿ ಮಾಡಿರ್ತನ” ಜನ ಬಾಯಿಮಾತಿಗಂತಾರೆ. ಆದ್ರೆ ಯಾರ ಗಂಡು ಎಲ್ಲಿದ್ದಾನು? ಯಾರ ಹೆಣ್ಣು ಎಲ್ಲಿದ್ದಾಳು. ಹುಡುಕಬೇಕಲ್ಲ? ನಿಜ ಅಂದರೆ ಪಚ್ಚೆಗೆ ಅವಳ ಮದುವೆ ಯೋಚನೆ ಇತ್ತೋ ಇಲ್ಲವೋ.. ಸ್ವತಃ ಕೂಸವ್ವನೂ ತನಗೊಂದು ಮದುವೆಯಾಗಬೇಕು ಅಂತ ಅಂದುಕೊಂಡಿರಲಿಲ್ಲ. “ಹುಡುಗ ಎಲ್ಲಿ ಸಿಕ್ತಾನೆ” ಅಂತ ತಂತಾನೇ ಅಂದುಕೊಂಡು ಸುಮ್ಮನಾಗಿದ್ರು. ಜನ ಸುಮ್ಮನಿರಬೇಕಲ್ಲ? “ಅವರಪ್ಪ ಆಸ್ತೀಲಿ ಮೂರ್ ಜನಕೂ ಪಾಲ್ ಕೊಟ್ಟನ. ಕೂಸವ್ವ ಮದ್ಯಾಗಿರ್ನಿಲ್ಲ ಅಂತ ಅವಳಗ ಅರ್ಧ ಅಟ್ಟಿ ,ಒಲ ಎರಡ್ನೂ ಬುಟ್ಟನ., ಈ ಪಚ್ಚ ಅಟ್ಟಿನೂ ಒಲಾನೂ ಒಡ್ಕಳಕ್ ಸಲವಾಗಿ ಆಎಣ್ಗ ಮದ್ವ ಮಾಡದೇ ಕುಂತಳ” ಅಂತ ಆಡ್ಕಳಕ್ ಸುರು ಮಾಡಿದ್ರು. ಅದೇ ಟೇಮಿಗೆ ಮಂಡ್ಯದ “ಪುರ” ಅನ್ನೋ ಊರಿನ ಪುರುಸೋತ್ತಮನ ಎರಡನೇ ಮಡದಿಯಾಗೋಕೆ ನೆಂಟರ್ಯಾರೋ ಕೂಸವ್ವನ್ನ ಸಜೆಸ್ಟು ಮಾಡಿದ್ರು. ಟೇಲರ್ ಕೆಲಸ ಮಾಡ್ತಿದ್ದ ಅವನ ಗಡ್ಡದಲ್ಲಿ ಬಿಳಿ ಕೂದಲು ಬಂದಾಗಿತ್ತು. ಆದರೂ ಮದುವೆಗೆ ಅದು ಅಡ್ಡಿಯಾಗಲಿಲ್ಲ. ಮಲ್ಲನಮೂಲೆ ಮಠದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಕೂಸವ್ವ ಮುತ್ತೈದೆಯಾದಳು.

“ಪುಣ್ಯ ಅಂದ್ರ ಅಂಗಿರ್ಬೇಕು ಬುಡು. ಕೂಸವ್ಯ ಯಾರ್ ಮದ್ಯಾದರು ಅಂತಿದ್ದೋ. ಈಗ ನೋಡು ಅರಸನ ಅಂಕಿಲ್ಲ . ದಯ್ಯದ ಕಾಟವಿಲ್ಲ ಅನ್ನಂಗ. ಗಂಡ ಟೈಲರು. ಊರ್ಲೆ ಮಿಸಿನ್ ಮಡಿಕಂಡು ಬಟ್ಟ ಒಲಿತನ. ಹೆಣ್ಮಕ್ಕಳಿಬ್ರೂ ಮದ್ಯಾಗಿ ಅವರವರ ಗಂಡನ್ ಮನಲ್ ಬಾಳ್ತರ. ಮಾವ ಮುದುಕ ಬೇಯಿಸ್ತದ್ ತಿನ್ಕಂಡು ಕೂತನ. ಮನೆಯೂ ಸಾಕು ಬುಡು ಚಿಕ್ಕದಾಗಿದ್ರುವ ನೀಟಾಗದ. ಎಂಗೋ ಒಟ್ನಲ್ಲಿ ಸಾಕು” ಅವಳ ಮದುವೆಯಾದ ಹೊಸತರಲ್ಲಿ ಆಡ್ತಿದ್ದರು ಎಲ್ಲ. ನಿಧಾನಕ್ಕೆ ಶುರುವಾಯ್ತು..ಸಣ್ಣ ಸಣ್ಣ ಮನಿಸುಗಳು.. ಅತ್ತಿಗೆಯರ ಕಾಟ, ಗಂಡ ಟೇಲರ್ ಕೆಲಸ ಬಿಟ್ಟ ಕುಡಿತ ಹೆಚ್ಚಾಯ್ತು. ಅಂಗವಿಕಲರ ವೇತನ ಬರ್ತಿತ್ತಲ್ಲ ಅವಳಿಗೆ ಒಂದು ಸಾವಿರ. ಅದರ ಮೇಲೆ ಕಣ್ಣವನಿಗೆ. ಅವಳು ಜಾಣೆ. ತುಂಬ ಸೂಕ್ಷ್ಮದ ಹುಡುಗಿ. ಅವಳ ವೇತನಕ್ಕೆ ಊರಿನ ಅಡ್ರಸ್ಸನ್ನ ಎಷ್ಟು ಹೇಳಿದರೂ ಬದಲಿಸಲಿಲ್ಲ. ತಿಂಗಳ ದುಡ್ಡು ತಗೊಂಡು ಹೋಗೋಕೆ ಬಂದಾಗ ಹಾಕೊಂಡು ಬಂದ ಚಿನ್ನದ ಓಲೆಗಳನ್ನ ಬಿಚ್ಚಿಟ್ಟು ನಕಲಿ ಹಾಕೊಂಡು ಹೋದಳು. ಕಾರಣ ಕೇಳಿದರೆ ನೆಪ, ಕಥೆ ಹೇಳುವಷ್ಟು ಜಾಣತನ ಅವಳಿಗಿತ್ತು.ಈ ಕಸರತ್ತುಗಳ ಜೊತೆಗೆ ಫ್ಯಾಮಿಲಿ ಜಗಳಗಳು, ಗಂಡ ಹೆಂಡಿರ ಮನಸ್ತಾಪಗಳೂ ಏರುಗತಿಯನ್ನೇ ಕಾಯ್ದುಕೊಂಡವು. ಥೇಟು ಟೀವಿಲಿ ಬರ್ತದಲ್ಲ, ಬದುಕು ಜಟಕಾಬಂಡಿ. ಅಂತ ಕಿತ್ತಾಟ. ಫುಲ್ ಗೋಜಲು ಗೋಜಲು. ಇದರ ಮಧ್ಯೆ ಕೂಸವ್ವ ಬಸುರಿಯೂ ಆಗಿಬಿಟ್ಟಳು.! “ತಾಯೀ ಒಂದ್ ಕೂಸಾದ್ರ ಎಲ್ಲ ಸರೋಯ್ತ ಕಣ್ ಬುಡು.” ಅಂತ ಊರವರೂ ಈ ಊರವರೂ ಸಮಾದಾನ ಮಾಡಿದರು.
ಆರು ತಿಂಗಳು ತುಂಬಿರಬೇಕೇನೋ ನಮ್ಮಮ್ಮನ ಮೊಬೈಲು ಬಡ್ಕೊಂಡಿತು. “ಪಚ್ಚೆತಾಯಿ ಅವರಿಗ್ ಕೊಡಿ” “ಯಾರು?” “ನಾವು ಪುರದಿಂದ ಅನ್ನಿ. ಕೂಸವ್ವೆಯ ಮಂಡ್ಯದ್ ಆಸ್ಪಿಟಲ್ಗ ಅಡ್ಮಿಟ್ ಮಾಡಿವಿ, ಕೂಸು ಓಬುಡ್ತು ಅಂತ ಯೋಳ್ಬುಡಿ” ಕೊಡಿ ಅಂದವನು ಅಲ್ಲೆ ಹೇಳಿ ಮುಗಿಸಿದ. ಅಮ್ಮ ಓಡಿದರು. “ ಅಯ್ಯೋ ಎಲ್ಯ ಚಿಕ್ಕೀ? ಯಾವ್ ಆಸ್ಪತ್ರಲ್ಯಾ? ಮನಹಾಳ್ ನನ್ನಮಗ ಏನ್ಮಾಡುದ್ನೋ ಕಣ್ ತಕ್ಕಳಿ” “ಅವ್ವ ನಂಗೊತ್ತಿಲ್ಲ ಆಸ್ಪತ್ರ ಎಲ್ಯ ಅಂತ ಕ್ಯೋಳ್ಕಂಡ್ ಓಗಿ. ಇದ್ರಲ್ ಆ ನಂಬರ್ ತಕಂಡು” ಕೊಟ್ರು. ಪಚ್ಚೆಯ ಮಗ ನಂಬರು ಬರಕೊಂಡ
ತಂಗೀನೂ ಕರ್ಕೊಂಡ್ ಊರ್ಗೇ ಬಂದ್ಲು ಪಚ್ಚೆತಾಯಿ.ಸುತ್ಕಂಡ್ರು ಎಂಗಸರು. “ ಅದ್ಯಾಕ ಕೂಸವ್ವ ಹಂಗ್ ಮಾಡ್ಕಂಡೇ?” “ ಹಲ್ಲು ನೋಯ್ತಿತ್ತು. ಅಲ್ಲೆ ಊರ್ಗೇ ಒಬ್ಬ ಡಾಕ್ಟರ್ ಬತ್ತನ ಅಂವ ಕೊಟ್ ಮಾತ್ರ ತಕಂಡಿ ,ಒಟ್ಟನೋವ್ ಸುರುವಾಗೋಯ್ತು. ಕೂಸು ಓಗ್ಬುಟ್ಟದ ಅಂದ್ರು. ಹೆಣ್ಣಂತ. ಅಂತ ಕಣ್ಣೀರಾದ್ಲು. “ ಎಣ್ಣಾ ಓದ್ರೋಗ್ಲಿ ಬುಡು ಅತ್ತಗ, ಇನ್ನೊಂದ್ ಎರೈ. ಮುಂದಕ್ ಗಂಡಾಗ್ಲಿ. ಒಂದ್ ತಿಂಗಳ ಮಟ್ಟಗ ತಣ್ಣೀರು ಮುಟ್ಟದೇ ಕಟ್ಟಾಗಿರು” ಅಂದು ಹೋದರು. ಅವಳ ಗಂಡ ಊರು ಬಿಟ್ಟು ಬೆಂಗಳೂರಿಗೆ ಯಾವುದೋ ಗಾರ್ಮೆಂಟಿಗೆ ಸೇರ್ಕೊಂಡಿದಾನೆ ಅಂತ ಅವಳಿಗೆ ಸುದ್ದಿ ಮುಟ್ಟಿದ್ದಷ್ಟೆ. ಅವನು ಇಲ್ಲಿಗೆ ಕಾಲಿಡದಷ್ಟು ಜಗಳವಾಗಿತ್ತಲ್ಲ. ಅವನು ಬರಲೂ ಇಲ್ಲ. ಫೊನೂ ಮಾಡಲಿಲ್ಲ. ಇವಳೇ ಆಗಾಗ ಅವರಕ್ಕ ಹೊಲಕ್ಕೆ ಹೋದಾಗ ಫೋನು ಮಾಡೋಳು. ಅವನು ಠಕ್ಕ..ಬಿಟ್ರೆ ಸಿಕ್ಕ ಅಂತ ಕಣ್ಣಾಮುಚ್ಚಾಲೆ ಆಡ್ತಿದ್ದ. ಯಾವಾಗಲೂ ನಿಮ್ಮೂರಲ್ಲೆ ಎಕರೆಗೆ ಮೂವತ್ತು ಲಕ್ಷವಂತೆ ಮಾರಿಬಿಡೋಣ ಅಂತಾನೆ ಅಕ್ಕ. ನಾನವನ ಮಾತು ಕೇಳಿ ಕೆಡಲ್ಲ. ಮುಂದಕ್ ನಮ್ಮ ಮಕ್ಕಳಿಗೇನೂ ಬೇಡ್ವ? ಅಂತಿದ್ದಳು.
ದಿನ ಫೋನು ಬಂತು. ಗಂಡನಿಗೆ ವಿಪರೀತ ಹುಷಾರಿಲ್ಲ ಅಡ್ಮಿಟ್ ಆಗಿದಾನೆ ಬಾ ಅಂತ. ಇವಳು ಓಡಿದಳು. “ಲಿವರ್ ಡ್ಯಾಮೇಜ್” ಬದುಕಲಾರ ಇರುವಷ್ಟು ದಿನ ಮನೇಲಿಟ್ಕೊಳಿ ಅಂದರು ಡಾಕ್ಟರು. ಇವಳು ಸೇವೆಗೆ ನಿಂತಳು. ಅವನ ಹೊಟ್ಟೆ ದಿನಾ ದಿನಾ ಊದೋದನ್ನ ನೋಡ್ತಾ ನೋಡ್ತಾ ಒಂದಿಡೀ ವಾರ ಇವತ್ತೋ ನಾಳೆಯೋ ಅನ್ನುತ್ತಾ.. ಒಂದಿನ ಜೀವ ಫಟ್ ಅನ್ನೋದನ್ನೂ ನೋಡಿಯೇ ನೋಡಿದಳು. ಅವಳ ಗಂಡನ ಸಾವಿನ ವಿಚಾರವನ್ನ ನನಗೆ ಅವಳೇ ಫೋನ್ ಮಾಡಿ ಹೇಳಿದಳೆಂದರೆ ನಂಬುತ್ತೀರಾ?
ಮದುವೆ ಅನ್ನೋದು ಆಗಿದ್ಧೇ ಕನಸೇನೋ ಅನ್ನುವಂಗೆ ಅದೇ ತವರು ಸೇರಿದ್ಲು. …ಇದಲ್ಲ.. ಇದಲ್ಲ ಈ ಕಥೆಯ ಕ್ಲೈಮ್ಯಾಕ್ಸು. ಹೇಳ್ತೀನಿ ಕೇಳಿ. ಅಲ್ಲಿ ಅವಳ ಗಂಡನೂರಲ್ಲಿ ಪುಟ್ಟ ಮನೆ. ಕಚ್ಚೆ ಅಗಲದ ಜಮೀನು. ಸಣ್ಣ ಹಿತ್ತಲ ಜಾಗವಿತ್ತಲ್ಲ, ಅದರ ಹಕ್ಕು ಸ್ವಾಮ್ಯದ ಪ್ರಶ್ನೆ ಬಂತು. ಅವರಕ್ಕ, ಊರವರು, ನೆಂಟರು ಯಾರೇ ಬೇಡವೆಂದರೂ ಇವಳು ಅಲ್ಲಿ ಹೋಗಿ ಕೂತಳು. ಸತ್ತ ಗಂಡನ ದಾಯಾದಿಗಳು, ಊರ ಮುಖಂಡರನ್ನ ಸೇರಿಸಿದಳು. ಆ ಊರವರ ಸ್ನೇಹ ಗಳಿಸಿದಳು. ಗಂಡನ ಪಾಲು ನನಗೆ ಸೇರಬೇಕು. ನನಗಿಲ್ಲಿ ಹಕ್ಕಿದೆ ಅಂತ ನ್ಯಾಯ ಕೇಳಿದಳು. ಅಪ್ಪನ ಮನೆಯ ಆ ಚೂರು ಆಸ್ತಿಗೆ ತಾವು ಹಕ್ಕುದಾರರೆಂದು ಹೆಣ್ಣುಮಕ್ಕಳು, ಸಾಯಾಗಂಟ ನನಗ್ ಬ್ಯಾಡವಾ ಜಾಗ? ಅಂತ ಅಪ್ಪ. ಜೊತೆಗೆ ಅವನ ಮೊದಲ ಹೆಂಡತಿಯ ಪುಟ್ಟ ಮಗುವಿನೊಂದಿಗೆ ಅದರ ಕೇರ್ ಟೇಕರ್ಸ್. ಇಷ್ಟೂ ಜನರಿಗೆ ಹಂಚೋದು, ನ್ಯಾಯ ಮಾಡೋದು ಒಬ್ರಿಗೊಬ್ಬರು ಸೇರೋದು ಹೀಗೆ ತಿಂಗಳುಗಟ್ಟಲೆ ಆದರೂ ಕೂಸವ್ವ ಅಲ್ಲೇ ಉಳಿದಳು. ಗಂಡನಿಲ್ಲದ ಗಂಡನ ಮನೆಯಲ್ಲಿ.
“ ಅವೈ ಕೂಸವ್ವ ಇನ್ನು ಬರ್ನಿಲ್ಲ ಅನ್ನಂಗದ? ಅಲ್ಲ ಕಣ್ ತಾಯೀ ಅದ್ಯಾವ್ ಜಾಗೇರಿ ತರಕ್ ಓಗಿದ್ದಳು ಅಲ್ಲಿಗಂಟ?” ಅಂತ ನಗುತ್ತಿದ್ದರು ಊರವರು. ನಾನೂ ಸಾಕಷ್ಟು ಹೇಳಿದೆ. “ಅಲ್ವೇ ..ನಿನಗ್ಯಾಕೇ ಬೇಕು ಆ ಆಸ್ತೀಲಿ ಪಾಲು? ಊರಲ್ಲಿ ಜಮೀನಿದೆ. ಮನೆ ಇದೆ. “ “ನಿಮಗ್ಗೊತ್ತಾಗಲ್ಲ ಸುಮ್ಕಿರಿ ಅಕ್ಕ:ಇವರೆಲ್ಲ ಎಂತೆಂತಾ ಕತ ಮಾಡರ ಗೊತ್ತಕ್ಕ? ಪಾಠ ಕಲಿಸ್ದೇ ಬರಲ್ಲ ನಾನು” ಅಂತ ಬಾಯಿಮುಚ್ಚಿಸ್ತಿದ್ಲು. ದಿನಾ ಫೊನು ಮಾಡಿ ಅಲ್ಲಿನ ನಿತ್ಯ ಜಗಳಗಳನ್ನ ವರದಿ ಮಾಡ್ತಿದ್ಲು. ಒಂದಿನ ಹೇಳಿದ್ಲು. “ಅವರಕ್ಕದೀರ್ ಬಂದಿದ್ರು. ಈ ಮನೆಲ್ಯಾಕಿದೀಯ ಬಾ ಹೊರಕ್ಕೆ ಅಂದ್ರು. ಬಾಗಿಲ ಮುಂದ್ ನಿಂತ್ಕಂಡೆ, ನುಗ್ಗಿ ಒಳಕೆ ನೋಡ್ತೀನಿ ಅಂದೆ. ಎಳದಾಕ್ತೀವಿ ಅಂದ್ರು. ಮುಟ್ನೋಡಿ ಅಂದೆ. ಈ ಮನಲ್ ನಿನಗೇನಮ್ಮಿ ಹಕ್ಕು? ಅಂದ್ರು ನಿಮ್ ತಮ್ಮನಿಗ್ ಬಸಿರಾದವಳು ನಾನು ನೀವಲ್ಲ ಅಂದೆ. ಹೆಚ್ಚಗೆ ಮಾತಾಡಿದ್ರೆ ಪೋಲೀಸ್ ಕರೆಸ್ತೀವಿ ಅಂದ್ರು.ಕರೆಸಿ ನನಗೂ ಕೆಲಸ ಕಮ್ಮಿ ಆಯ್ತದೆ ಅಂದೆ”…………..ಅಬ್ಬಾ ಹೆಣ್ಣೇ..ಸುಮ್ಮನೇ ಯೋಚಿಸಿ.. ಅದು ಅವಳ ಊರಲ್ಲ. ಜನ ಹೊಸಬರು. ಇವಳ ಸಪೋರ್ಟಿಗೆ.. ಸೇಫ್ಟಿಗೆ ಅಂತಲೂ ಯಾರೂ ಇಲ್ಲ. ಆದರೂ ಅವಳಿದ್ದಳು ಅಲ್ಲೇ.. ತಿಂಳುಗಟ್ಟಲೆ.. ಆ ಅದೇ ಗಂಡನ ಮನೇಲಿ. ಕಡೆಗೆ ಊರವರು ಪಂಚಾಯಿತಿ ಸೇರಿಸಿದಾಗಲೂ..ತನ್ನ ವಾದ ತಾನೇ ಮಂಡಿಸಿಕೊಂಡಳು. ಮತ್ತು ಕಡೆಗೂ ಗಿಟ್ಟಿಸಿಸಿಕೊಂಡೇ ಬಂದಳು. ಚಪ್ಪಾಳೆ..ದೊಡ್ಡ ಚಪ್ಪಾಳೆ ತಟ್ಟಿದ್ದೆ ನಾನು ಇಲ್ಲಿಂದಲೇ.
ಅವಳು ಹಾಗೆ ಹಠಕ್ಕೆ ಬಿದ್ದದ್ದು, ಜೀವದ ಹಂಗು ತೊರೆದು ನಿಂತದ್ದು, ಬರೀ ಆ ಸಣ್ಣ ಆಸ್ತಿಗಾ? “ಗಂಡನದು” ಅನ್ನುವ ಭಾವುಕತೆಗಾ? ಇಲ್ಲ.. ಮತ್ತೇನೋ ಇದೆ. ಬೆಂಕಿಯಂತದು. ಅರ್ಥೈಸಲು ಸೋತಿದ್ದೇನೆ. ಕೇಳುವ ಮನಸಿಲ್ಲ.
ಈಗವಳು ಊರಲ್ಲೇ ಇದ್ದಾಳೆ. ಬಸ್ಸಿಳಿದವರೆಲ್ಲ ಹೋಗುವ ಬೀದಿಯಲ್ಲೆ ಅವಳ ಮನೆ. ಗಂಡನ ಮನೆಯಿಂದ ಬರುವ ಹೋಗುವ ಹೆಣ್ಣುಮ್ಕಕಳಿಗೆ ಅವಳೇ ಸ್ವಾಗತಕ್ಕೂ…ಬೀಳ್ಕೊಡಲಿಕ್ಕೂ ನಿಲ್ಲುತ್ತಾಳೆ. ಅವಳೊಳಗೇನಾಗುತ್ತಿದೆ? ಇಣುಕುವ ಧೈರ್ಯವಿಲ್ಲ. ಸಮಾಜದ ಭಾಷೆಯಲ್ಲಿ ಅವಳು ವಿಧವೆ. ಕಾವ್ಯದ ಭಾಷೆಯಲ್ಲಿ ಅವಳದು ನೋವು..ವಿರಹ. ಚರ್ಮದ ಬಣ್ಣ ಮತ್ತು.. ಹೆಸರಿನ ಬಣ್ಣ ಕಡೆಗೂ ಅವಳಿಗೆ ದಕ್ಕಿದ್ದು ಅಷ್ಟು ಮಾತ್ರವೇ.. ಬಣ್ಣಗಳೆಲ್ಲಿ?
 
 

‍ಲೇಖಕರು G

4 June, 2014

ನಿಮಗೆ ಇವೂ ಇಷ್ಟವಾಗಬಹುದು…

2 Comments

  1. amardeep.p.s.

    ಕೂಸವ್ವ ನ ಧೈರ್ಯ ಮೆಚ್ಚಬೇಕಾದ್ದೇ …. ನಿಮ್ ಬರಹ ಶೈಲಿಯನ್ನೂ ….. ಅಭಿನಂದನೆಗಳು.

  2. Maluru Venkataswamy

    ಇದು ಕಾಲಮ್ ಅಲ್ಲ. ಕಥೆ. ಒಂದು ಚಿತ್ರ. ಒಂದು ಕಲಾಕೃತಿ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading