ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕುಳಿತುಕೊಳಲು ಎರಡು ನೆಳಲು..

ನಿಲ್ದಾಣ..

shree-talageriಶ್ರೀ ತಲಗೇರಿ

 

ದಪ್ಪ ದಪ್ಪ ಗೂನು ಮೋಡಗಳು

ಗಾಳಿ ಕೂದಲ ಗಂಟಿಗೆ ಸಿಕ್ಕಿ

ಹೆಣ್ಣು ಗಂಡೆಂಬುದ ನೋಡದೇ

ಉದುರುತ್ತಿವೆ ಗುಂಪುಗಳಲ್ಲಿ

ಗೆರೆಯೆಳೆದಿರಲಿಲ್ಲ

ಒಳಗೊಳಗೇ ಗೀಚುವಾಗ.

ಅಚ್ಚ ಕಪ್ಪಿನ ಉಸಿರು

ಕೊಳವೆ ತುಂಬ ಬಿಡುವಾಗ

ಯಾರೋ ಮೂಗುದಾರ ಎಳೆದಂತೆ…!

ಒರಟು ಚರ್ಮಗಳ ತಿಕ್ಕಾಟಕ್ಕೆ

pairಹುಟ್ಟಿಕೊಂಡ ಶಬ್ದಕ್ಕೆ

ಬೆಂಕಿಯುಗುಳುವ ತಾಕತ್ತಿತ್ತೆಂದು

ತಿಳಿದದ್ದು ಹವೆ ಹೆದರಿಕೊಂಡಾಗಲೇ!

ಹೇಳಿದರು ಯಾರೋ,

ರೈಲು ಬಂತೆಂದು.

ಬೋಗಿಗಳ ಮೆಟ್ಟಿಲಿಗೆ

ಅದೆಷ್ಟು ಕೆಸರು ಮೆತ್ತಿಕೊಂಡಿತ್ತು!

ನೆನಪಾಗುತ್ತಿತ್ತೇನೋ ಒರೆಸುವಾಗ

ಅದೆಷ್ಟೋ ಚಪ್ಪಲಿಗಳ

ಬೆವರಿಗೆ ಬಣ್ಣವಿರಬೇಕಿತ್ತು.

‘ಎರಡು ನಿಮಿಷ ಮಾತ್ರ

ಹೊರಡುತ್ತದೆ ರೈಲು’

ಗಡಿಬಿಡಿಯ ಕುಂಟೆಬಿಲ್ಲೆಯಲ್ಲಿ

ನೂಕು ನುಗ್ಗಲು ಕೈ ಬೀಸಲು.

ಕಿಟಕಿ ಸರಳುಗಳ ಹಿಂದೆ,

ದೂರದಲ್ಲಿ ನಿಂತ ನಾಯಿಮರಿಯ

ಬಿಂಬ ಮೂಡುತ್ತದೆ ಅವಳ ಕಂಗಳಲ್ಲಿ.

ಮೊನ್ನೆಯಷ್ಟೇ ಹುಟ್ಟಿದ್ದ

ಬಿಳಿಹಲ್ಲುಗಳೆರಡು ನಾಚುತ್ತವೆ

ಹೆಸರು ಹೇಳಲು.

ಎಳೆದಾಡಿಕೊಳ್ಳುತ್ತವೆ ಕೀಲುಗಳು

ಇಷ್ಟಗಲದ ಜಾಗದಲ್ಲಿ

ಗಿರಕಿ ಹೊಡೆಯುತ್ತ.

ಅಂಟಿಕೊಂಡ ಹನಿಗಳು

ಜಾರಿಕೊಳ್ಳುತ್ತವೆ ಎಲೆಯ ನರಗಳ

ಮೇಲ್ಮೈಯ ಇಳಿಜಾರಿನಲ್ಲಿ.

ಅಲ್ಲೂ ಬಣ್ಣಬಿಟ್ಟಿಲ್ಲ ಎಲೆಗಳು

ಕುಂತುಹೋದವರಿಗೂ ಅದರ ಹಕ್ಕಿಲ್ಲ.

ಹೊರಟಿದ್ದೇನೆ ಚೀಲ ಹಿಡಿದು.

ಹಳಿಗಳ ಅಕ್ಕಪಕ್ಕದಲ್ಲಿ

ಅಪ್ಪುಗೆಯ ಮೇಣದ ಕಲೆಗಳಲ್ಲಿ

ಬಿದ್ದುಕೊಂಡಿರಬಹುದೇನೋ

ಒಂದೆರಡು ತುಂಡು ಮಾತುಗಳು.

ನಾಳೆ ಸಂಜೆಯ ಬಯಲಲಿ

ಕುಳಿತುಕೊಳಲು ಎರಡು ನೆಳಲು.

‍ಲೇಖಕರು Admin

4 November, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading