ಆದರು ಕುಕ್ಕರು ಬೇಕು ಬದುಕಿಗೆ…
-ಸಂಗೀತ ರವಿರಾಜ್
ಪ್ರತಿಸಲ ಕುಕ್ಕರಿನೊಳಗೇನಿಟ್ಟರು
ಮುಚ್ಚುಗೆ ತೆಗೆಯುವಾಗಿನ
ಚಡಪಡಿಕೆ ಇಂದು-ನಿನ್ನೆಯದಲ್ಲ…
ಪ್ರತಿಸಲ ಸೀಟಿ ಎಷ್ಟಾಯಿತೆಂದು
ಕೇಳುವ ಮರೆವು
ನಲ್ವತ್ತರ ಮೇಲೆ ಬಂದದ್ದಲ್ಲ…
ಪ್ರತಿಸಲ ಗಾಳಿ ಹೊರಗೆಳೆದು
ಪದೇ ಪದೇ ಕೈ
ಎಡತಾಕುವುದೂ ಹೊಸತಲ್ಲ…
ಇಂತಿಪ್ಪ ಪ್ರತಿಸಲದ
ಭಯದ ಹಳಹಳಿಕೆ
ಹಳೆಯ ಕುಕ್ಕರಿನ
ಹೊಸ ಕನವರಿಕೆ
ನಾಳೆಗೂ ಬೇಕು
ಬದುಕ ಚಂದಗಾಣಿಸಲು…
ಒಳಗುದಿ ಹೊರಗಾಗಿ
ಕುದಿ ಬೇಳೆ ಹದವಾಗಿ
ಬಾರದ ರುಚಿ ಬಂದು
ಮತ್ತೆ ಎದೆಯೊಳಗಿಳಿದ ಬಂಧ…
ಈ ಬಂಧದೊಳಗೆ ಬೆಂದ
ಬೆಂದು ಪಕ್ವವಾದ
ಕುಕ್ಕರೊಳಗಿನ ಬೆಸುಗೆ
ಹೊಸ ನೋಟ ಹೊಸೆದಿದೆ…
ಅಕ್ಕಿ ಅನ್ನವಾಗುವ ಅಮೃತ ಘಳಿಗೆ
ಹೊಸ ಪಾಠ ಕಲಿಸಿದೆ…
ಇಷ್ಟೊಂದು ಕರಾರುವಕ್ಕು
ಹದ ತಪ್ಪಿದ್ದಲ್ಲಿ ತಾಳ ತಪ್ಪಲು
ನಿಮಿಷ ಸಾಕು.
ಕುಕ್ಕರು ಸೀದು
ತಳ ಹಿಡಿದು ಕರಕಲಾಗಿ
ತಪ್ಪುತ್ತದೆ ಸ್ವಾದವು…
ಒಂದೊಮ್ಮೆ ಸಿಡಿದಿದೆ ಇದೇ ಕುಕ್ಕರು ಕಾರಣವಿಲ್ಲದೆಯೂ..
ಆದರು ಕುಕ್ಕರು ಬೇಕು ಬದುಕಿಗೆ…!
ಎಲ್ಲ ಒಟ್ಟಿಗೆ ಹಾಕಿ
ಬಂಧಿಸಿದ ಈ ಬಂಧ –
ಮೃದುವಾಗಿ ಬೆಂದು
ಹೊರಬಂದು
ಉದುರುದುರಾದ
ಬಂಧನವಾಗದ
ಸಂಬಂಧದ ಹೊಸರುಚಿ
ಉಣಬಡಿಸುವ
ಕುಕ್ಕರಿನ ಬದುಕೇ ಒಂದು ಸಂದೇಶ!






ಆಹಾ … ಎಷ್ಟು ಚೆನ್ನಾಗಿದೆ ಈ ಕವನ… ತುಂಬಾ ಖುಷಿಯಾಯಿತು… ಈ ತರಹದ ದೈನಂದಿನ ವಿಷಯಗಳ ಮೇಲಿನ ಆಲೋಚನೆಗಳು ಕವನಕ್ಕೆ ಕಾರಣವಾಗುವುದು ನನಗೆ ತುಂಬಾ ಹಿಡಿಸುತ್ತೆ…