–ಡಾ. ಗೋವಿಂದ ಹೆಗಡೆ
ಇಲ್ಲಿ ಇಂಥದ್ದೆಲ್ಲ ನಡೆಯಬಾರದಿತ್ತು
ಕಡ್ಡಿಯನ್ನು ಗುಡ್ಡ ಮಾಡಬಾರದಿತ್ತು
ಸಹಜ ಸಂವಾದಕ್ಕೆ ಎಡೆಯೇ ಇಲ್ಲವೇ
ಕಾನೂನಿನ ಗುಮ್ಮ ತೋರಿಸಬಾರದಿತ್ತು
ವಾದ ದುರ್ಬಲವಿದ್ದಾಗಲೇ ದನಿ ಜೋರು
ಪ್ರಶ್ನಿಸುವ ಬಾಯಿಗಳ ಮುಚ್ಚಿಸಬಾರದಿತ್ತು
“ಖಾಲಿ”ಕೊಡಗಳಿಗೂ ಉತ್ತರಿಸಬೇಕಾಗುತ್ತದೆ
ನಿರುತ್ತರದ ಈ ದುರವಸ್ಥೆ ಬರಬಾರದಿತ್ತು
ವ್ಯಕ್ತಿತ್ವಕ್ಕೊಂದು ಘನತೆ ಇದೆ ‘ಜಂಗಮ’
ಅದನ್ನು ಮರೆತಂತೆ ವರ್ತಿಸಬಾರದಿತ್ತು
ಗಜ಼ಲ್- 2
ನಿಜ, ಹದ್ದಾಗಿ ಕುಕ್ಕಬಹುದು ಪಾರಿವಾಳ
ಗಿಡುಗನಾಗಿ ಎರಗಬಹುದು ಪಾರಿವಾಳ
ಏನೆಲ್ಲ ರೂಪಾಂತರಕ್ಕೆ ಎಡೆಯಿದೆ ಇಲ್ಲಿ
ಡೇಗೆಯಾಗಿ ಸೊಕ್ಕಬಹುದು ಪಾರಿವಾಳ
ಇಂದಿನ ಈ ಮೃದುತ್ವ ಕಳೆದೇಹೋದೀತು
ಡ್ರ್ಯಾಗನ್ ಆಗಿ ಮುತ್ತಬಹುದು ಪಾರಿವಾಳ
ಕಾಲನೂ ಉರುಳಿಸಬಹುದು ತನ್ನ ದಾಳ
ರಣಹದ್ದಾಗಿ ಬದಲಬಹುದು ಪಾರಿವಾಳ
ಮುಖಬೆಲೆಯನ್ನು ನಂಬದಿರು ‘ಜಂಗಮ’
ಕಟುಕನಾಗಿ ಕುಟುಕಬಹುದು ಪಾರಿವಾಳ






ಚಂದದ ಗಜ಼ಲ್ ಗಳು❤️