
ಮೂರು ಮುಖಪುಟಗಳಲ್ಲಿ ಕುಂ ವೀ ಆಯ್ದುಕೊಂಡದ್ದು ಇದನ್ನು
‘ಶಿವಲಿಂಗ’ ಕೃತಿಗೆ ಖ್ಯಾತ ವಿಮರ್ಶಕ ಪ್ರೊ ಸಿ ಎನ್ ರಾಮಚಂದ್ರನ್ ಅವರು ಬರೆದ ಬೆನ್ನುಡಿ ಇಲ್ಲಿದೆ
ತಾಯಿಯ ಗರ್ಭದಲ್ಲಿರುವಾಗಲೆ ತಂದೆಯನ್ನು ಕಳೆದುಕೊಂಡು, ಬಾಲ್ಯದಲ್ಲಿಯೇ ತಾಯಿಯಿಂದ ತ್ಯಜಿಸಲ್ಪಟ್ಟು, ಊರವರ ಕೈಗೂಸಾಗಿ ಬೆಳೆದು, ತಾರುಣ್ಯದಲ್ಲಿ ಜೇಬುಗಳ್ಳರ ಪ್ರಪಂಚವನ್ನು ಸೇರಿ ತನ್ನ ಕರಕೌಶಲ್ಯದಿಂದ ಚೋರಚಕ್ರವರ್ತಿಯಾಗಿ, ಕೊನೆಗೆ ಶ್ರೀಮಂತ ತರುಣಿಯೊಬ್ಬಳ ಶಯ್ಯಾಗೃಹವನ್ನು ಅಕಸ್ಮಾತ್ತಾಗಿ ಪ್ರವೇಶಿಸಿ, ಕೊನೆಗೆ ಆ ತರುಣಿಯನ್ನೇ ಮದುವೆಯಾಗುವ ಅ-ನಾಯಕನ ಕಥೆಯನ್ನು ರೋಚಕವಾಗಿ ಕಟ್ಟಿಕೊಡುವ ಕುಂವೀ ಅವರ ಈ ಹೊಸ ಕಾದಂಬರಿಯನ್ನು ಅದ್ಭುತ-ರಮ್ಯ ಕಥಾನಕ (ಖಠಟಚಿಟಿಛಿಜ) ಎಂದೂ ಗುರುತಿಸಬಹುದು- ವಿಡಂಬನಾತ್ಮಕ ರಾಜಕೀಯ ಕಾದಂಬರಿಯೆಂದರೂ ಆದೀತು.
ಈ ಕಾದಂಬರಿಯ ಮೊದಲರ್ಧದಲ್ಲಿ ಸ್ವಾತಂತ್ರ್ಯಪೂರ್ವದ ಭಾರತದಲ್ಲಿ ವಸಾಹತುಶಾಹಿಯನ್ನು ತಮ್ಮದೇ ಆದ ರೀತಿಯಲ್ಲಿ ಅನಕ್ಷರಸ್ಥ ಜನಸಾಮಾನ್ಯರೂ ಎದುರಿಸಿದ ಚಿತ್ರಣವಿದ್ದರೆ, ಎರಡನೆಯ ಭಾಗದಲ್ಲಿ ಕಿಸೆಗಳ್ಳರು, ದರೋಡೆಗಾರರು, ಸುಪಾರಿ ಹಂತಕರು ತುಂಬಿರುವ ಅಧೋಲೋಕ ಮತ್ತು ಧನಿಕರು, ಸ್ವಾರ್ಥಪೂರಿತ ರಾಜಕಾರಣಿಗಳು, ಬೆನ್ನೆಲುಬಿಲ್ಲದ ಅಧಿಕಾರಿಗಳು ಇವರುಗಳು ತುಂಬಿರುವ ಶಿಷ್ಟ ಲೋಕ ಇವೆರಡೂ ಪರಸ್ಪರ ಎದುರಾಗುವ ಚಿತ್ರಣವಿದೆ.
ಈ ಎರಡೂ ಭಾಗಗಳು ಒಟ್ಟಾರೆಯಾಗಿ ಧ್ವನಿಸುವುದೇನೆಂದರೆ ಇವೆರಡು ಲೋಕಗಳಲ್ಲಿಯೂ ಅಷ್ಟೇನೂ ವ್ಯತ್ಯಾಸವಿಲ್ಲ – ಸ್ವಾತಂತ್ರ್ಯಪೂರ್ವ ವಸಾಹತುಶಾಹಿಯ ಕ್ರೌರ್ಯ-ಸ್ವಾರ್ಥ-ಲೋಭ ಇತ್ಯಾದಿಗಳನ್ನು ಸ್ವಾತಂತ್ರ್ಯೋತ್ತರ ರಾಜಕಾರಣ ಪ್ರತಿಫಲಿಸುತ್ತದೆ.
ವ್ಯಕ್ತಿಯೊಬ್ಬನು/ಳು ಅನುಭವಿಸುವ ರೂಪಾಂತರಗಳು (ನಾಯಕನ ತಾಯಿ ಮೊದಲಿಗೆ ಸತ್ಯಭಾಮಾ, ಅನಂತರ ಪೌಲೀನ್, ಮುಂದೆ ಅನಂತರಮ್ಮ), ಸ್ವಾಭಿಮುಖತೆ, ಶ್ರೀಮಂತ ಅಂತರ್ಪಠ್ಯೀಯತೆ (ಆಲಿವರ್ ಟ್ವಿಸ್ಟ್, ‘ಉಷಾ ಪರಿಣಯ), ಇತ್ಯಾದಿ ಅನೇಕ ಆಶಯಗಳನ್ನು ಈ ಕೃತಿಯು ಯಶಸ್ವಿಯಾಗಿ ದುಡಿಸಿಕೊಳ್ಳುತ್ತದೆ.
ಇಡೀ ಸಮುದಾಯಗಳನ್ನೇ ‘ಕ್ರಿಮಿನಲ್ ಟ್ರೈಬ್ಸ್’ ಎಂದು ಗುರುತಿಸಿ ಅವುಗಳನ್ನು ಬೀದಿಗೆ ತಳ್ಳುವ ವಸಾಹತುಶಾಹಿ, ಆ ವಸಾಹತುಶಾಹಿಯನ್ನು ಪ್ರತಿನಿಧಿಸಿದರೂ ವೈಯಕ್ತಿಕವಾಗಿ ಸಜ್ಜನರಾಗಿ ಉಳಿಯುವ ಬ್ರಿಟಿಷ್ ಅಧಿಕಾರಿಗಳು, ಕ್ರಾಂತಿಕಾರಿಗಳಿಗೆ ಆಶ್ರಯ ನೀಡುವ ಬಡ ಗ್ರಾಮೀಣ ಮಹಿಳೆಯರು, ಚೋರಕಲೆಯ ನೀತಿಕೋಶ ಹಾಗೂ ನಂಬಿಕೆಗಳು, ಜನಪ್ರಿಯತೆಗಾಗಿ ಜೇಬುಗಳ್ಳನ ಮನೆಯಲ್ಲಿ ಗ್ರಾಮವಾಸ್ತವ್ಯವನ್ನು ಮಾಡುವ ಮುಖ್ಯಮಂತ್ರಿ- ಇವೇ ಮುಂತಾದವರನ್ನು ಖಚಿತ ವಿವರಗಳ ಮೂಲಕ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿರುವ ಕುಂವೀಯ ಸೃಜನಶೀಲ ಪ್ರತಿಭೆ ಬೆರಗು ಮೂಡಿಸುತ್ತದೆ.
ಸಿ. ಎನ್. ರಾಮಚಂದ್ರನ್





0 Comments