ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಿ.ರಂ. ಮಾತು ನಿಲ್ಲಿಸಿದ್ದಾರೆ…ರೂಪಕಗಳು ಅಳುತ್ತಿವೆ

ಕಿ ರಂ ರನ್ನು ನೆನೆಯುತ್ತಾ…

ಜಯಶಂಕರ್ ಹಲಗೂರ್

 

ನಾಡಿನ ಹೆಸರಾಂತ, ಶ್ರೇಷ್ಠ ಮೇಸ್ಟ್ರು ನಮ್ಮ ಪ್ರೀತಿಯ ಕಿ.ರಂ. ನಾಗರಾಜ ಅವರು ನಮ್ಮಿಂದ ದೂರವಾಗಿ ನಾಳೆಗೆ ಮೂರು ವರ್ಷ. ಉಸಿರರು ನಿಲ್ಲುವುದಕ್ಕೆ 40 ನಿಮಿಷಗಳ ಹಿಂದೆ ಬೇಂದ್ರೆ ಬಗೆಗೆ ಮಾತಾಡಿದ ಕಿ.ರಂ. ಆದಿಪುರಾಣದ ನೀಲಾಂಜನೆಯಂತೆ ಕಣ್ಮರೆಯಾದುದನ್ನು ಆ ದಿನ ಯಾರಿಗೂ ತಾಳಿಕೊಳ್ಳಲಾಗಲಿಲ್ಲ. ಗೆಳೆಯ ರಂಗನಾಥ್ ಕಂಟನಕುಂಟೆ ಸೌತ್ ಎಂಡ್ ಬಳಿಯ ಬೆಂಗಳೂರು ಆಸ್ಪತ್ರೆಯ ಹೊರಗೆ ಅನಾಥವಾಗಿ ಕೂತು ಮೇಸ್ಟ್ರು ಇಲ್ಲ ಎನ್ನುವುದನ್ನು ಗಂಟಲೊಳಗೇ ಉಸುರಿದಾಗಿನ ಆ ಕ್ಷಣ…….. ಅಯ್ಯೋ ಸಾವೆ…..
ಆ ರಾತ್ರಿಯಿಂದ ಕಿ.ರಂ. ಬೆಂಕಿಯೊಡನೆ ಸಂಗಮಾಡುವ ವರೆಗೆ ಅವರ ಸಾವು ನನ್ನೊಳಗೆ ಹೀಗೆ ಇಳಿದಿತ್ತು. ಅಪಾರವಾದ ವಿಷಾದದೊಡನೆ ಅವರ ಬಗೆಗೆ ಅಂದು ನಾ ಬರೆದ ಹಾಯ್ಕುಗಳು. ಅಂಥದೇ ಗಾಢ ವಿಷಾದ ಈಗ ನನ್ನನ್ನು ಆವರಿಸಿದೆ.

ಗೂನುಕಾವ್ಯಗಳು
ಎದ್ದು ನಿಲ್ಲಬಹುದು
ಕಿ.ರಂ. ಮಲಗಿದ್ದಾರೆ
 
ಕಾವ್ಯಕಮ್ಮಠಗಳಿಗೆ
ಬಲಬಂತು
ಗರಡಿ ಮಲ್ಲ ಕುಸಿದಿದ್ದಾನೆ.
 
ಯಾರಿಗೂ ಪಳಗದ ಕಿತ್ತಾನೆ
ಮಲಗಿತು
ದಾರಿ ಮುಗಿದು ಕಾಡು ಎದುರಾಗಿದೆ.
 
ಈಗ ಕಿ.ರಂ. ಮೈಮೇಲೆ ಹಾವು ಹರಿದಂತಾಡುವುದಿಲ್ಲ
ಕ್ಯಾಮರಾಗಳು
ಎಷ್ಟು ಬೇಕಾದರೂ ಕ್ಲಿಕ್ಕಿಸಬಹುದು
 
ಹತ್ತಿಸಿ ಕೆಡಿಸಿ ಹತ್ತಿಸಿ ಕೆಡಿಸಿ
ಅರ್ಧ ಸೇದಿದ ಸಿಗರೇಟು ಕಾಯುತ್ತಿದೆ
ಕಿ.ರಂ. ಉರಿದು ಬೂದಿಯಾಗಿದ್ದಾರೆ
 
ನಿರ್ಜೀವ ಸಾಲುಗಳು ಈಗ ಕುಹೂ ಎನ್ನಬಹುದು
ಕಿ.ರಂ. ಬ್ಯಾಸರಿಲ್ಲದೆ ಕೂಗುವ ಜೋಡುಗೂಗೆಯ
ಕರೆಗೆ ಓಗೊಟ್ಟಿದ್ದಾರೆ
 
ಗದ್ಯವನು ತುಂಡರಿಸಿ
ಉದ್ದಕೆ ಬರೆದು ಪದ್ಯಮಾಡು
ಕಿ.ರಂ. ಕನ್ನಡಕ ತೆಗೆದಿದ್ದಾರೆ
 
ಎಂದೂ ಸುಡದ ಜ್ವಾಲೆಯೊಂದು
ಅಪರಿಮಿತ ಕತ್ತಲೆಯನು ಬೆಳಗಿ ಬೆಳಗಿ
ಕೊನೆಗೆ ಬೆಂಕಿಯ ಸಂಗವ ಮಾಡಿತು
 
ಕಿ.ರಂ. ಮಾತು ನಿಲ್ಲಿಸಿದ್ದಾರೆ
ತಮ್ಮನ್ನು ನಿಘಂಟಿಗೆ ಗಂಟುಹಾಕುತ್ತಾರೆಂದು
ರೂಪಕಗಳು ಅಳುತ್ತಿವೆ
 

‍ಲೇಖಕರು avadhi

6 August, 2013

8 Comments

  1. D.Ravivarma

    ಎಂದೂ ಸುಡದ ಜ್ವಾಲೆಯೊಂದು
    ಅಪರಿಮಿತ ಕತ್ತಲೆಯನು ಬೆಳಗಿ ಬೆಳಗಿ
    ಕೊನೆಗೆ ಬೆಂಕಿಯ ಸಂಗವ ಮಾಡಿತು
    ಕಿ.ರಂ. ಮಾತು ನಿಲ್ಲಿಸಿದ್ದಾರೆ
    ತಮ್ಮನ್ನು ನಿಘಂಟಿಗೆ ಗಂಟುಹಾಕುತ್ತಾರೆಂದು
    ರೂಪಕಗಳು ಅಳುತ್ತಿವೆ
    ii kannada naadina samajamukhi chintakrigondu manadalaada namana…

  2. bharathi

    Usiru bigi hididu odide

  3. Chidambar Narendra

    Excellent

  4. Ramesh

    ಅದ್ಭುತವಾಗಿ ಬರೆದಿದ್ಯ ಜಯಶಂಕರ್‌. ಬಿಡಿ ಬಿಡಿ ಹಾಯ್ಕುಗಳು ಸ್ವತಂತ್ರವಾಗಿಯೇ ಪೂರ್ಣವಾಗಿದ್ದರೂ, ಇಡಿಯಾಗಿ ಕೀ.ರಂ ವ್ಯಕ್ತಿತ್ವವನ್ನು ಅದ್ಭುತವಾಗಿ ಕಟ್ಟಿಕೊಡುತ್ತಿವೆ. ಮತ್ತೆ ಮತ್ತೆ ಓದಿಸಿಕೊಳ್ಳುತ್ತವೆ…

  5. ನಾಗರಾಜ್ ಹೆತ್ತೂರು

    ರಿಯಲಿ ಸೂಪರ್ಬ್

  6. ಸುಹಾಸ ಭಜಂತ್ರಿ

    ಕಿರಂ ಅವರ ಅಗಾಧ ಪ್ರತಿಭೆಯ ಬಗ್ಗೆ ನನಗೂ ಹೆಮ್ಮೆ ಇದೆ. ಆದರೆ ಕಿರಂ ಅವರ ವೈಭವೀಕರಣ ಮಾಡುವ ಒಂದು ಅಪಾಯಕಾರಿ ಸಂಸ್ಕೃತಿ ಅವರ ನಿಧನದ ನಂತರ ಬೆಳೆದುಕೊಂಡು ಬಂದಿದೆ. ಕಿರಂ ಅವರ ಸಂವೇದನಾಶೀಲ ವ್ಯಕ್ತಿತ್ವ ಈ ವೈಭವೀಕರಣ ಪ್ರಕ್ರಿಯೆಯಲ್ಲಿ ಪಾತಾಳ ಸೇರುವ ಅಪಾಯ ಇದೆ.

  7. narayan raichur

    haudu 11 – yaakoo KEE RUM vaibhaveekarana hechchuttide yemba gumani yeduraaguttide ;
    sankochave KEE RUM kavachavagittu ; KEE RUM nenapu sahaja/sookshama hagoo sankochabaritavaagidare chandaveno !!

  8. Swarna

    Adbhutavaada saalugaLu

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading