ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಿನಾರೆ ಗಾಳಿಯಲ್ಲಿ ಒಬ್ಬೊಂಟಿಯಾಗಿ..

ಪಾಲಿಗೆ ಬಂದ ಎಲ್ಲವನ್ನೂ ನೋಡಲಾಗುತ್ತಿಲ್ಲ

ರೇಣುಕಾ ರಮಾನಂದ /ಅಂಕೋಲಾ

ಆತ
ಕಿನಾರೆ ಗಾಳಿಯಲ್ಲಿ
ಒಬ್ಬೊಂಟಿಯಾಗಿ
ಮರಳಡಿಗೆ ಕಾಲು ಹುಗಿಸಿಕೊಂಡು
ನಿನ್ನೆಯಂತೆಯೇ ನಿಂತಿದ್ದ

ಹೇಳುವುದನ್ನು ಸರಿಯಾಗಿ ಕೇಳು
ಬಿಟ್ಟುಹೋದ ಅವಳ ಪಾದದ
ಗುರುತುಗಳು ಇಲ್ಲೇ ಇಂಗಿವೆ
ಹುಡುಕು ಆಲಸಿಯಾಗಬೇಡ
footprint-tattooಒತ್ತಾಯಿಸಿತು ದಂಡೆ
ಮಾಮೂಲಿಯಂತೆ

ಎಲ್ಲವೂ ಸುಳ್ಳು..!
ಸುಯ್ಲೆಬ್ಬಿಸಿ ಅಸಮ್ಮತಿ
ಸೂಚಿಸಿತು ಗಾಳಿಮರ
ಈ ದಂಡೆಗೂ ಅದಕ್ಕೂ ಯಾವಾಗಲೂ
ಆಗಿಬರುವುದಿಲ್ಲ

ಉಪ್ಪುಕಡಲಿಗೋ ವಿಪರೀತ ಸುಸ್ತು
ಎತ್ತಿ ಬಿಸುಟ ಶವಗಳದ್ದೋ
ಐನೀರು ಮುಳುಗಿ ಹೋದ ಕನ್ಯೆಯರದ್ದೋ
ಲೆಕ್ಕ ಇಡಬಹುದು
ಕಾಣೆಯಾದವರದ್ದೆಲ್ಲ ಆಗಲಿಕ್ಕಿಲ್ಲ
ಖಾಯಂ ಕೈ ಚಲ್ಲಿಬಿಡುತ್ತದೆ ಅದು
ಕೇಳುವಂತಿಲ್ಲ

ಅವಳು ಹೋದಲಾಗಾಯ್ತು
ಮುದ್ದು ಪದಗಳನ್ನೆಲ್ಲ ಕದ್ದು
ಮಾರಲಾಗಿದೆ ಸಂತೆಬೀದಿಗಳಲ್ಲಿ
ಈಗುಳಿದವು
ಹೂಳು ತುಂಬಿದ ಜವುಗು ಮಣ್ಣಿನೊಳಗೆ
ಬರೀ ಕಠಿಣಪದಗಳು
ನಾನಾಥ೯ಕಗಳು

ಒದ್ದೆ ರೇವೆಯಗುಂಟ ಬಿಳುಚಿಕೊಂಡಿವೆ
ಇಡಿ ಇಡೀ ನೆನಪುಗಳು
ಆತ೯ ಕಣ್ಣುಗಳಗುಂಟ
ಹಬ್ಬಿದ ಹಸಿಹಸಿ ನರನಾಡಿಗಳ ಚಿತ್ರವ
ಒಮ್ಮೆ ಎಡಕ್ಕೂ ಇನ್ನೊಮ್ಮೆ ಬಲಕ್ಕೂ
ಹಿಂದಿನ ಸಂಜೆಯೇ ಗೀರಿಬಿಟ್ಟಿವೆ
ಏಡಿಮರಿಗಳು

ಅವಳಿಲ್ಲದ ಇವನನ್ನ
ಭರಿಸುತ್ತಾರೆಯೇ ಯಾರಾದರೂ…..
ಬೇಗ ಭರತವುಕ್ಕಿ ಎಲ್ಲ ಅಳಿಸಿಹೋಗಲಿ
ಪ್ರಭುವೇ
ಪಾಲಿಗೆಬಂದ ಎಲ್ಲವನ್ನೂ
ನೋಡಲಾಗುತ್ತಿಲ್ಲ..

‍ಲೇಖಕರು Admin

15 December, 2016

12 Comments

  1. Anonymous

    ಚಂದದ ಅರ್ಥ ಗರ್ಭಿಭಿತ ಮಣ್ಣಿನ ವಾಸನಯ ಕವಿತೆ.

    • renu

      ಖುಷಿ

    • renu

      Thank u

  2. ನೂತನ

    ರೇಣುಕ..ಕಡಲ ಕಿನಾರೆಯಲ್ಲಿ ಓಡಾಡಿಸಿ ಬಿಟ್ಟು ಹೋಗಿದೆ ನಿಮ್ಮ ಕವಿತೆ

    • renu

      ನಿತ್ಯನೂತನ ಕಡಲು ಸಾವಿರ ಕಲ್ಪನೆಯ ಒಡಲು

  3. Sarojini Padasalagi

    ತುಂಬಾ ಮನ ಮಿಡಿವ ಕವನ. ” ಇಡೀ ಇಡೀ ನೆನಪುಗಳು ಆರ್ತ ಕಣ್ಣುಗಳಗುಂಟ ” !!ಚಂದದ ಸಾಲುಗಳು. ” ಕಣ್ಣಂಚಿನ ಕಣ್ಣ ಹನಿಯೇ ಜಾರಗೊಡೆ ನಿನ್ನ ಅಲ್ಲಿಹುದು ನೂರು ನೆನಪುಗಳ ಕವನ ” ಎನ್ನಲೇ? ಮನದಿ ನೂರು ಭಾವಗಳ ಉಬ್ಬರಿಸುವ ಕವನ.

    • renu

      ಸರೋಜಿನಿ ಮೇಡಂ ತಮ್ಮ ಅಬಿಮಾನಕ್ಕೆ ಋಣಿ

  4. Sangeeta Kalmane

    ಅವಳಿಲ್ಲದ ಇವನನ್ನು
    ಭರಿಸುತ್ತಾರೆಯೇ ಯಾರಾದರೂ….

    ಒಮ್ಮೆ ಗಕ್ಕನೆ ಮನ ತಡೆದು ನಿಲ್ಲಿಸುವ ಸಾಲುಗಳು. ಕಣ್ಣು ತುಂಬಿ ಬಂತು.

    • renu

      ಸಂಗೀತಾ ಮ್ಯಾಡಂ ತುಂಬ ಖುಷಿ

  5. Prakash Nayak

    ಮನಮುಟ್ಟುವ ಕವನ. ಪ್ರಕೃತಿ ಮತ್ತು ಮನಸ್ಥಿತಿಗಳ ಜುಗಲ್ಬಂದಿ ಚೆನ್ನಾಗಿ ಬಿಂಬಿತವಾಗಿದೆ.

    • renu

      ಒಹ್ ಧನ್ಯವಾದ ಪ್ರಕಾಶಣ್ಣ

  6. renu

    ಸಂಗೀತಾ ಮ್ಯಾಡಂ ತುಂಬ ಖುಷಿ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading